ಜಾಕಾಯಿ ಇದನ್ನು ನಾವುಗಳು ದಿನ ನಿತ್ಯ ಉಪಯೋಗಿಸುತ್ತೇವೆ. ಆದರೆ ಇದರ ಹೆಸರು ಬಹಳಷ್ಟು ಜನಕ್ಕೆ ಗೊತ್ತಿಲ್ಲಾ.ಸಾಂಬಾರ ಪದಾರ್ಥಗಳಲ್ಲಿ ಮುಖ್ಯವಾಗಿ ಕಾಣ ಸಿಗುವುದೇ ಜಾಕಾಯಿ ಬೀಜ (Nutmeg) ಗಮನಿಸಬಹುದು.
ಇದು ಮಲೆನಾಡಿನಲ್ಲಿ ಅಡಿಕೆ, ತೆಂಗು, ಬಾಳೆಯೊಂದಿಗೆ ಬೆಳೆಯುವ ಮಿಶ್ರ ಬೇಸಾಯ. ಇವುಗಳು ಸದಾ ಹಸಿರಾಗಿರುವ ಮರಗಳಲ್ಲೊಂದು. ಇದು ಬರಿ ಸಾಂಬಾರು ಪದಾರ್ಥವಾಗಿ ಅಷ್ಟೆ ಅಲ್ಲ. ಸುಗಂಧ ದ್ರವ್ಯಗಳಲ್ಲಿ, ಆಹಾರಕ್ಕೆ ರುಚಿ, ಸುವಾಸನೆ, ವಿಶೇಷವಾದ ಪರಿಮಳ ಹಾಗೂ ಔಷಧಿಗಳಲ್ಲಿಯೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕ ಔಷಧಿ ಗುಣಗಳನ್ನು ಜಾಕಾಯಿ ಹೊಂದಿದೆ. ಆಯುರ್ವೇದ ಶಾಸ್ತ್ರದಲ್ಲಿ ಇಧಕ್ಕೆ ಮಹತ್ವದ ಸ್ಥಾನವಿದೆ. ಪ್ರಪಂಚದಲ್ಲಿ ಎಲ್ಲಾ ಕಡೆ ಬಳಸಲಾಗುವ ಮಸಾಲೆ ಪದಾರ್ಥಗಳಲ್ಲೊಂದಾಗಿದೆ. ಇದು ತುಂಬಾ ಎತ್ತರವಾಗಿ ಬೆಳೆಯುವಂತಹ ಮರಗಳಲ್ಲ ಮಧ್ಯಮ ಪ್ರಮಾಣದ ಮರಗಳು ಹಾಗೂ ವಿಶಿಷ್ಟ ಶೈಲಿಯ ಮರಗಳು. ಒಂದೆ ಮರದಲ್ಲಿ ಜಾಪತ್ರೆ ಹಾಗೂ ಜಾಯಿಕಾಯಿ ಎಂಬ ಎರಡು ಪದಾರ್ಥಗಳನ್ನು ಬೆಳೆಯುತ್ತದೆ. ಎರಡನ್ನೂ ಸಹ ಉಪಯೋಗಿಸುತ್ತಾರೆ.
ಈ ಗಿಡಗಳನ್ನು ಸುಲಭವಾಗಿ ಬೆಳೆಸಲಾಗುತ್ತದೆ.ಬೇರೆ ಗಿಡಗಳಂತೆ ತುಂಬಾ ಕಾಳಜಿ ವಹಿಸುವ ಅಗತ್ಯವಿಲ್ಲ. ಮಳೆಗಾಲದ ನೀರಿದ್ದರೆ ಸಾಕು, ಶೇಕಡಾ 20-30% ರಷ್ಟು ನೆರಳಿದ್ದರೆ ಸಾಕು. ಕಾಡು ಜಾತಿಯ ಸಸ್ಯವಾಗಿದ್ದರಿಂದ ತನ್ನಿಂದ ತಾನೆ ಬೆಳೆಯುತ್ತ ಹೋಗುತ್ತದೆ. ಇದಕ್ಕೆ ಯಾವುದೇ ಕಾಡು ಪ್ರಾಣಿಗಳ ಉಪಟಳವಿಲ್ಲಾ. ಅಡಿಕೆಯೊಂದಿಗೆ ಇದನ್ನು ಮಿಶ್ರ ಬೇಸಾಯವಾಗಿ ಮಾಡುವುದರಿಂದ ಅಡಿಕೆ ಮರಗಳಿಂದ ಬೀಳುವ ಹಾಳೆಗಳನ್ನು ಗಿಡಗಳ ಬುಡದಲ್ಲಿ ಹಾಕಿದರೆ ಗಿಡಗಳು ಮತ್ತಷ್ಟು ಚೆನ್ನಾಗಿ ಬೆಳೆಯುತ್ತದೆ. ಗಿಡಗಳು ನೆಟ್ಟ ಐದಾರು ವರ್ಷಗಳಲ್ಲಿ ಹಣ್ಣುಗಳನ್ನು ಬಿಡಲು ಪ್ರಾರಂಭಿಸುತ್ತವೆ.
ಇದರ ಮತ್ತೊಂದು ವಿಶೇಷತೆಯೆಂದರೆ, ಇದರಲ್ಲಿ ಗಂಡು- ಹೆಣ್ಣು ಮರವೆಂಬ ಎರಡು ವಿಧಗಳಿವೆ. ನರ್ಸರಿಗಳಲ್ಲಿ ಸಿಗುವ ಸಸ್ಯಗಳು ಹೆಚ್ಚಿನವೂ ಕಸಿ ಸಸ್ಯಗಳಾಗಿದ್ದರಿಂದ ಎಲ್ಲವು ಫಸಲು ಕೊಡುತ್ತದೆ. ಜಾಕಾಯಿ ನೋಡಲು ಹಳದಿ ಮಿಶ್ರಿತ ಹೊಂಬಣ್ಣದಲ್ಲಿರುತ್ತದೆ. ಹಣ್ಣಾದ ಮೇಲೆ ತಾವಾಗಿಯೇ ಕೆಳಗೆ ಬಿಳುತ್ತದೆ. ನಂತರ ಕಾಯಿ ಹಾಗೂ ಪತ್ರೆಯನ್ನು ಬೇರ್ಪಡಿಸಿ ಒಣಗಿಸಲಾಗುತ್ತದೆ. ಜಾಪತ್ರೆಯನ್ನು ಸಂಸ್ಕರಿಸುವಾಗ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದು, ಜಾಪತ್ರೆಯನ್ನು ಬೇರ್ಪಡಿಸಿ ಬೀಜವನ್ನು ಒಣಗಿಸಬೇಕು. ಬೀಜಗಳನ್ನು ಒಣಗಿಸುವಾಗ ಅದಕ್ಕೆ ಸುಣ್ಣವನ್ನು ಹಚ್ಚಿದರೆ ಒಳ್ಳೇಯದು ಕೀಟಗಳ ಭಾದೆಯಿರುವುದಿಲ್ಲ. ಹಾಗೂ ತುಂಬಾ ದಿನಗಳವರೆಗೂ ಸಂಗ್ರಹಿಸಿಡಬಹುದು. ಬೀಜಗಳು ಪೂರ್ತಿ ಒಣಗಿದಾಗ ಅದನ್ನು ಅಲ್ಲಾಡಿಸಿದರೆ ಅದರೊಳಗಿರುವ ತಿರುಳು ಶಬ್ದ ಮಾಡುತ್ತದೆ. ಅನಂತರ ಅದನ್ನು ಒಡೆದು ತಿರುಳನ್ನು ಶೇಖರಿಸಿಡಲಾಗುತ್ತದೆ. ಆಮೇಲೆ ಔಷಧಿಗಳಲ್ಲಿ ಸಾಂಬಾರ ಪದಾರ್ಥಗಳಲ್ಲಿ ಬಳಸುತ್ತಾರೆ. ಜಾಪತ್ರೆಯನ್ನು ಸಹ ಹೀಗೆ ಒಣಗಿಸಲಾಗುತ್ತದೆ.
ಉಪಯೋಗಗಳು :
1. ಜಾಕಾಯಿ ಸಿಪ್ಪೆಯನ್ನು ಮಲೆನಾಡಿನ ಕಡೆ ಊಟಕ್ಕೆ ಚಟ್ನಿ ಹಾಗೂ ಉಪ್ಪಿನಕಾಯಿಗೆ ಬಳಸುತ್ತಾರೆ.
2. ಕೆಲವು ಸಿಹಿತಿಂಡಿ,ಪಾನೀಯಗಳಲ್ಲಿ ಸುವಾಸನೆಗಾಗಿ ಬಳಸುತ್ತಾರೆ.ಉದಾ:ಬೇಕರಿ,ಸ್ವೀಟ್ಸ್ ಸ್ಟಾಲ್ ಗಳಲ್ಲಿ ಕೆಲವು ಸ್ವೀಟ್ಸ್ ಗಳಲ್ಲಿ ಹಾಗೂ ಪಾನೀಯಗಳಲ್ಲಿ ಅಪರೂಪದ ಸುಗಂಧದ್ರವ್ಯದ ಸುವಾಸನೆ ಗಮನಿಸಬಹುದು.
3. ಕೀಟನಾಶಕಗಳ ತಯಾರಿಕೆಯಲ್ಲೂ ಕೂಡ ಬಳಸುತ್ತಾರೆ.
4. ತಿರುಳಿನಿಂದ ಎಣ್ಣೆ,ತೈಲವನ್ನು ಮಾಡಲಾಗುತ್ತದೆ.ಇದನ್ನು ಜಾಯಿಬೆಣ್ಣೆ ಎನ್ನುತ್ತಾರೆ.
5. ಜಾಯಿಬೆಣ್ಣೆಯನ್ನು ಚಾಕೋಲೆಟ್ ತಯಾರಿಕೆಯಲ್ಲಿ ಬಳಸುತ್ತಾರೆ.
6. ತೈಲವನ್ನು ಸಂಧಿವಾತ,ಪಾರ್ಶ್ವವಾಯು,ಉಳುಕು ಮುಂತಾದವುಗಳ ನಿವಾರಣೆಗೆ ಬಳಸುತ್ತಾರೆ.
7. ಕೂದಲ ಪೋಷಣೆಗೂ ಇದು ಉಪಯುಕ್ತವಾದ್ದರಿಂದ ಕೇಶತೈಲಗಳಲ್ಲೂ ಉಪಯೋಗಿಸುತ್ತಾರೆ.
8. ಮೂತ್ರ ಕೋಶದ ಉರಿಯೂತ ನಿವಾರಣೆಗೂ ಇದರ ತೈಲವನ್ನು ಬಳಸುತ್ತಾರೆ.
9. ಜಾಕಾಯಿ ಚೂರ್ಣವನ್ನು ನೀರಿನಲ್ಲಿ ಬೇಯಿಸಿ,ನಂತರ ಉಗುರು ಬೆಚ್ಚಗಿನ ಹಸುವಿನ ಹಾಲಿನಲ್ಲಿ ಕುಡಿಯುತ್ತಿದ್ದರೆ,ಪುರುಷರಲ್ಲಿ ವೀರ್ಯಾಣು ವೃದ್ಧಿಯಾಗುತ್ತದೆ.ದೇಹದಲ್ಲಿನ ಬಲಹೀನತೆಯನ್ನು ದೂರ ಮಾಡುತ್ತದೆ.
10. ತಾಂಬೂಲಗಳಲ್ಲಿ,ಸ್ವೀಟ್ ಪಾನ್ ಗಳಲ್ಲಿ ಬಳಸುತ್ತಾರೆ.ಇದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.ಹಲ್ಲುಗಳ ಮೇಲಿನ ಕಲೆಗಳು ಮಾಯವಾಗುತ್ತದೆ. ಕ್ರೀಮಿಗಳು ಸಾಯುತ್ತವೆ.
11.)ಚೂರ್ಣವನ್ನು ಶುದ್ಧ ಜೇನುತುಪ್ಪ,ಹಸುವಿನ ಹಾಲಿನೊಂದಿಗೆ ಒಂದು ಚಮಚ ಬೇರೆಸಿ,ಕಲಸಿ ಕುಡಿದರೆ ಕೆಮ್ಮು,ಕಫ ದೂರವಾಗುತ್ತದೆ.
12.)ಮೂತ್ರಪಿಂಡಗಳಲ್ಲಿನ ಕಲ್ಲು ಕರಗಿಸುವುಧಕ್ಕೂ ಕೂಡ ಜಾಕಾಯಿಯನ್ನು ಉಪಯೋಗಿಸುತ್ತಾರೆ.
13.)ಜಾಕಾಯಿ ಎಣ್ಣೆಯಲ್ಲಿ ಮಸಾಜ್ ಮಾಡಿಕೊಂಡು ನಂತರ ಸ್ನಾನ ಮಾಡಿದರೆ,ಚರ್ಮ ರೋಗಗಳು ದೂರವಾಗಿ ಚರ್ಮ ಕಾಂತಿಯುತವಾಗುತ್ತದೆ.
14.)ಕಿವಿನೋವಿಗೂ ಸಹ ಜಾಕಾಯಿಯನ್ನು ತೇದು ಗಂಧವನ್ನು ಕಿವಿಯಲ್ಲಿ ಹಾಕಿದರೆ ನೋವು ಶಮನವಾಗುತ್ತದೆ.
ಇಷ್ಟೆ ಅಲ್ಲದೆ ನಿದ್ರಾಹೀನತೆಗೆ, ಕೆಲವು ಹೃದಯ ಸಂಬಂಧಿ ಕಾಯಿಲೆಗಳಿಗೂ ಜಾಕಾಯಿಂದ ಉಪಶಮನವಿದೆ ಎಂದು ಆಯುರ್ವೇದ ಪಂಡಿತರು ಹೇಳುತ್ತಾರೆ. ಹಾಗೆಯೆ ಇದರ ಬಗ್ಗೆ ಇನ್ನೊಂದು ಮುಖ್ಯವಾದ ಸೂಚನೆಯೇನೆಂದರೆ ಗರ್ಭಿಣಿಯರು ಇದನ್ನು ಉಪಯೋಗಿಸಬಾರದು. ಹಾಗೂ ಇದರಲ್ಲಿ “ಮಿರಿಸ್ಟಿಸಿನ್” ಎಂಬ ವಿಷವಸ್ತುವಿರುವುದರಿಂದ ತೈಲವನ್ನು ಬಳಸುವಾಗ ಎಚ್ಚರಿಕೆ ಅಗತ್ಯ ಎಂದು ಆಯುರ್ವೇದ ಶಾಸ್ತ್ರದಲ್ಲಿದೆ. ಆದರಿಂದ ಯಾವುದೇ ಉಪಶಮನಕ್ಕಾಗಲಿ ಜಾಕಾಯಿ ಉತ್ಪನ್ನಗಳನ್ನು ಬಳಸುವ ಮುನ್ನ ಒಮ್ಮೆ ಆಯುರ್ವೇದ ತಜ್ಞರ ಸಲಹೆ,ಸೂಚನೆ ಪಡೆದು ಉಪಯೋಗಿಸದರೆ ಒಳ್ಳೇಯದು.
ಲೇಖನ : ನಾಗರಾಜ್ ಲೇಖನ್ (ಹರಡಸೆ, ಹೊನ್ನಾವರ)
ನಾಗರಾಜ್ ಲೇಖನ್ ಅವರ ಹಿಂದಿನ ಬರಹ :