ಕಾಳೀ ಕಣಿವೆಯ ಕತೆಗಳು – ಭಾಗ 3

ಹಿಂದಿನ ಸಂಚಿಕೆಯಲ್ಲಿ –

ಜಗಲಬೇಟ್‌ದಿಂದ ಹೊರಟ ಕಾಳೀ ನದಿ ಆಣೆಕಟ್ಟಿನಲ್ಲಿ ನಿಲ್ಲುವ ನೀರಿನ ಎತ್ತರವನ್ನು [ಎಫ್‌.ಆರ್‌.ಎಲ್‌.] ಗುರುತಿಸುವ ಸರ್ವೇ ತಂಡ ಈಗ ಕ್ಯಾಸ್ಟಲ್‌ರಾಕ್‌ ಅರಣ್ಯದಲ್ಲಿ ಬೀಡುಬಿಟ್ಟಿದೆ. ತಂಡದಲ್ಲಿ ಈಗ ಮೂರು ಜನ ಇಂಜನಿಯರು, ಅಡಿಗೆಯವ, ಮತ್ತು ನಾಲ್ಕು ಜನ ಸಹಾಯಕರು ಸೇರಿ ಒಟ್ಟು ಎಂಟು ಜನರಿದ್ದಾರೆ. ಈ ತಂಡಕ್ಕೆ ಚಾಂದೇವಾಡಿ, ಶಿಂಗರಗಾಂವ್‌ ನದೀ ಪ್ರದೇಶದಲ್ಲಿ ಉಸುಕಿನ ಪ್ರಮಾಣ ಗುರುತಿಸುವ ಅನ್ವೇಷಣಾ ಕೆಲಸವನ್ನೂ ವಹಿಸಲಾಗಿದೆ. ಕಾಡಿನಲ್ಲಿ ತಾವು ವಾಸಿಸಲು ಟೆಂಟನ್ನು ತಂಡವೇ ಕಟ್ಟಿಕೊಂಡಿದೆ. ಕಾಡಿಪ್ರಾಣಿಗಳ ದರ್ಶನ ನಿತ್ಯವೂ ಈ ತಂಡಕ್ಕಾಗುತ್ತಿದೆ.

ಈಗ ಮುಂದೆ ಓದಿ….
——————————————————————————————
amma

ಬೆಳಗಾಗುತ್ತಿದ್ದಂತೆ ತಂಡಕ್ಕೆ ಅಡುಗೆ ಮಾಡುತ್ತಿದ್ದ ಅಪ್ಪು ಕುಟ್ಟಿ ಎಲ್ಲರಿಗೂ ಹಾಲು ಹಾಕದೇ ಮತ್ತು ಬೆಲ್ಲ ಹಾಕಿ ಮಾಡಿದ ಕರಿಯ [ಕಟ್ಟಾ] ಚಹ ಸರಬರಾಜು ಮಾಡಿದ. ಇಲ್ಲಿ ಹಾಲು ಸಿಗುವುದಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಅದರಿಂದ ಯಾರೂ ಕರಿಯ ಚಹದ ಬಗ್ಗೆ ತಕರಾರು ಎತ್ತುತ್ತಿರಲಿಲ್ಲ. ಇಂಜನಿಯರ ಶಿರೋಡ್ಕರ ಮಾತ್ರ ಗೊಣಗಿದರು. ‘’ಶೇಖರ್‌… ಏನಾದ್ರೂ ಮಾಡ್ರಿ ಮಾರಾಯ. ಈ ಬೆಲ್ಲದ ಬ್ಲಾಕ್‌ ಟೀ ಕುಡ್ದೂ ಕುಡ್ದೂ… ತಲೆ ಕೆಟ್ಟೋಗಿದೆ. ಹಾಲಿನ ವ್ಯವಸ್ಥೆ ಆಗುತ್ತಾ ನೋಡಿ’’ ಎಂದರು. ಅದು ನಗೆ ತರಿಸುವ ಮಾತಾಗಿತ್ತು. ‘ಇಂಥ ಕಾಡಿನಲ್ಲಿ ಹಾಲು ತರುವುದೆಲ್ಲಿಂದ ? ಹತ್ತಿರ ಯಾವ ಊರಿದೆ ಎಂಬುದೇ ನಮಗೆ ಗೊತ್ತಿಲ್ಲ’. ’ನೋಡ್ರಿ, ಇಲ್ಲಿ ಕಾಡಿನಲ್ಲಿ ಗೌಳೀವಾಡಾ ಅಂತಿರ್ತವೆ. ಅಲ್ಲಿ ಕಾಡು ಗೌಳಿಗಳು. ಎಮ್ಮೆ ಹಿಂಡು ಕಟ್ಟಿಕೊಂಡು ಹಾಲು ಮಾರೋದಕ್ಕೆ ಅಂತ ಸುತ್ತಮುತ್ತ ಊರ ಕಡೆ ಹೋಗ್ತಿರ್ತಾರೆ. ಅಂಥ ಗೊಳೀವಾಡಾ ಏನಾದ್ರೂ ಇಲ್ಲಿ ಸಿಗ್ತದೋ ನೋಡಿ’’ ಅಂದರು. ‘’ಈ ಕಾಡ್ನಲ್ಲಿ ಗೌಳೀವಾಡಾ ಹುಡುಕೋದು ಹ್ಯಾಗೆ ಸಾರ್‌. ನಾವು ಸರ್ವೇಗೆ ಅಂತ ಕಾಡಿನಲ್ಲಿ ಹೋದಾಗ ಎಲ್ಲಿಯಾದ್ರೂ ಅಂಥ ಗೌಳೀವಾಡಾ ಸಿಗ್ತವೋ ಹ್ಯಾಗೆ ಅಂತ ನೋಡಬೇಕು’’ ಅಂದೆ ನಾನು. ಅದರ ಬಗ್ಗೆಯೇ ಒಂದಷ್ಟು ಚರ್ಚೆಯಾಯಿತು. ಕೂಡಲೇ ಅಪ್ಪೂ ಕುಟ್ಟಿ ಬೀಡೀ ತುಂಡನ್ನು ಕಿವಿಯ ಮೇಲಿಟ್ಟುಕೊಳ್ಳುತ್ತ- ‘ ಎಂದ ಚಾಮೀ…ಚಹಾ ಮಾಡೋದಕ್ಕೇ ಸಕ್ರೆ ಇಲ್ಲ. ಬೆಲ್ಲ ಹಾಕಿ ಮಾಡ್ತಿದೀನಿ. ಇನ್ನು ಪಾಲು ಎಂದಮಾರಿ ಪುಡುಚೋದು ಚಾಮೀ…’ ಎಂದು ಗೊಣಗಿದ. ಅದು ಸತ್ಯವೂ ಆಗಿತ್ತು. ‘’ಹೇ…! ಈ ಕಾಡ್ನಲ್ಲಿ ಅದೆಲ್ಲ ಸಿಗೂದಿಲ್ಲ ಸಾಹೇಬ್ರಾ… ಇರೂದನ ನಮಗ ಸೊರ್ಗ ಸಮಾನ ಅಷ್ಟ. ರೇಶನ್‌ ಜೋಡಿ ಯಾಡ್‌ ಕೇಜಿ ಬೆಲ್ಲ ಬರತೈತಿ. ಅದನ್ನಽ ಚಹಾಕ್ಕ ಹಾಕ್ತಾನು ಅಪ್ಪೂ…. ಸಕ್ರಿ ದೇಹಕ್ಕ ಛುಲೋ ಅಲ್ಲ ತಗೀರಿ’’.

ಹನಮಂತ್ಯಾ ಬಾಯಿ ತಗೆದು ತನ್ನ ಅನುಭವ ಹೇಳುವವನಿದ್ದ. ಆತ ಒಮ್ಮೆ ಬಾಯಿ ತಗೆದರೆ ಸಾಕು ಬೇಗ
ಮುಚ್ಚುತ್ತಿರಲಿಲ್ಲ. ನಾನೇ ಅವನ ಬಾಯಿ ಬಂದು ಮಾಡಿದೆ. ಎಲ್ಲರಿಗೂ ಎಲ್ಲವೂ ಗೊತ್ತಿದ್ದುದರಿಂದ ಯಾರೂ ಮತ್ತೆ ತುಟಿ ಬಿಚ್ಚಲಿಲ್ಲ. ತಂಡದ ಎಲ್ಲಾ ಆಗು ಹೋಗುಗಳ ದೇಖರೀಕೆ ನೋಡುತ್ತಿದ್ದ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಬಿತ್ತೇನೋ ಅನ್ನಿಸಿತು.

amma.jpg1

ಫೋಟೋ : India Climate Dialogue

ನಿರ್ಜನ ಕಾಡಿನ ಪೊದೆಯ ಮರೆಯಲ್ಲಿ ಬಂದು ನಿಂತವನು ಯಾರು?

ಅಷ್ಟರಲ್ಲಿ ನಮ್ಮ ಟೆಂಟಿನಿಂದಾಚೆ ಅನತಿ ದೂರದಲ್ಲಿ ಕುಮರಿಯ ಮರೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿ ಬಂದು ನಿಂತದ್ದು ಕಂಡಿತು. ಅಚ್ಚರಿಗೊಂಡ ಶಿರೋಡ್ಕರ ಎದ್ದು ಹೋದವರೇ ಯಾರು? ಎಂದು ಕೂಗಿ ಕೇಳಿದರು. ಹೊರಗೆ ಸರ್ವೇ ಲೆವೆಲ್‌ ಬಾಕ್ಸನ್ನು ಒರೆಸುತ್ತ ನಿಂತಿದ್ದ ಶ್ರೀನಿವಾಸ ಶೆಟ್ಟಿ ಹೆದರಿ ಹೋದ. ಕಾಡು ಪ್ರಾಣಿಯೇನಾದರೂ ಬಂತೇನೋ ಎಂದು ಸರ್ವೇ ಬಾಕ್ಸನ್ನು ಅಲ್ಲಿಯೇ ಬಿಟ್ಟು ಟೆಂಟಿನೊಳಗೆ ನುಸುಳಿಕೊಂಡು ಬಿಟ್ಟ. ಎಲ್ಲ ದಿಟ್ಟಿಸಿ ನೋಡಿದರು. ನಾನೂ ಶಿರೋಡ್ಕರರನ್ನು ಹಿಂಬಾಲಿಸಿ ಟೆಂಟಿನ ಹೊರಗೆ ಬಂದೆ.

ಅಷ್ಟು ದೂರದಲ್ಲಿ ಕುಮುರಿಯ ಹಿಂದೆ ಕಡುಗೆಂಪು ಬಣ್ಣದ ಉದ್ದ ಅಂಗಿ ತೊಟ್ಟಿದ್ದ ವ್ಯಕ್ತಿಯೊಬ್ಬ ನಿಂತಿದ್ದ. ಅವನ ಆಕಾರವೇ ವಿಚಿತ್ರವಾಗಿತ್ತು. ಕೊಕ್ಕರು ಮೀಸೆ, ಕೊರಳಲ್ಲಿ ಬಣ್ಣ ಬಣ್ಣದ ನಕಲೀ ಹವಳಗಳ ಸರದ ಮಾಲೆ. ಅಂಗಿಯ ಕೆಳಗೆ ಏನೂ ಇರಲಿಲ್ಲ. ಬಹುಶಃ ಲಂಗೋಟಿ ಕಟ್ಟಿಕೊಂಡಿರಬೇಕು. ಸೊಂಟದಲ್ಲಿ ಒಂದು ಕೊಯ್ತವನ್ನು ಸಿಕ್ಕಿಸಿಕೊಂಡಿದ್ದ. ಹೆಗಲಲ್ಲಿ ಒಂದು ಕಮಟು ಹಿಡಿದ ಕೈಚೀಲ. ಅದರಲ್ಲಿ ಏನೋ ಬಿಟ್ಟುಕೊಂಡಿದ್ದ. ಅವನ ಆಕಾರ ನೋಡಿದ ಕೂಡಲೇ ಆತ ಯಾರೆಂದು ಗುರುತು ಹಿಡಿದೆ. ಅವನೊಬ್ಬ ಕಾಡು ಗೌಳಿ. ಕಾಡಿನಲ್ಲಿ ಇದ್ದ ಹಸು, ಎಮ್ಮೆಗಳನ್ನು ಸಾಕಿಕೊಂಡು ಹತ್ತಿರದ ಊರುಗಳಿಗೆ ಹೋಗಿ ಹಾಲು ಮಾರಿ ಬಂದು ಜೀವನ ಮಾಡುವ ಕಾಡುಗೌಳಿಯೇ ಅವನು.

‘’ಮೀ…! ಮೀ…! ಗೌಳೀ…ಧೋಂಡ್ಯಾ…. ಆಮಚೀ ವಾಡೀ ಇಕಡೇ ಅಸಾ… ದೂಧ ಪಾಯಿಝ?’’

ಗೌಳೀ ಎಂಬ ಶಬ್ದ ಕೇಳಿದ್ದೇ ತಡ. ಟೆಂಟಿನಲ್ಲಿದ್ದ ಎಲ್ಲರೂ ಹೊರಗೋಡಿ ಬಂದರು. ಸಹಾಯಕರಾದ ಹನಮಂತ್ಯಾ ಮತ್ತು ಸುಬ್ರಮಣಿ, ಅಡುಗೆಯ ಅಪ್ಪೂ ಎಲ್ಲರೂ. ‘ಕಟ್ಟಾಚಾಯ’ ದಿಂದ ಮುಕ್ತಿ ದೊರೆಯುತ್ತದೇನೋ ಎಂದು ಕಣ್ಣು ಬಿಟ್ಟು ನೋಡಿದರು.

ಕೂಡಲೇ ಶಿರೋಡ್ಕರ ಮತ್ತು ಹನುಮಂತ್ಯಾ ಮಾರಾಠಿಯಲ್ಲಿ ಮಾತನಾಡಲು ಶುರು ಮಾಡಿದರು. ನಾವೆಲ್ಲ ಕುತೂಹಲದಿಂದ ನೋಡ ತೊಡಗಿದೆವು. ಅವನ ಹೆಸರು ಧೋಂಡೂ ಅಂತಲೂ ಅವನಿರುವ ಗೊಳೀವಾಡೆ ಇಲ್ಲಿಯೇ ಹತ್ತರದಲ್ಲಿ ಕಾಡಿನಲ್ಲಿದೆಯೆಂತಲೂ, ನಿಮಗೆ ಹಾಲು ಬೇಕೇನು ಎಂದೂ ಆತ ಕೇಳುತ್ತಿದ್ದ. ಕೂಡಲೇ ಲಿಂಗಪ್ಪ ದೊಡ್ಡ ದನಿಯಿಂದ ಹೇಳಿಯೇಬಿಟ್ಟರು.

‘’ಹಾಲೂ…? ಬೇಕ್ರೆಪಾ ಬೇಕು. ಹುಡುಕೂ ಬಳ್ಳಿ ಕಾಲಿಗೇ ತೊಡರಿದಂಗಾಯ್ತು. ‘ಕಟ್ಟಾಚಾಯ್‌’ ಕುಡ್ದು ತಲೆ ಕೆಟ್ಟೋಗಿದೆ.

ಹಾಲು ಬೇಕು ಅಂತ ಹೇಳಿ ಶೇಖರ್‌ ಅಂದರು’’

ಕೂಡಲೇ ಅದಕ್ಕೆ ಎಲ್ಲರ ಒಮ್ಮತದ ದನಿಯೂ ಹೊರಟಿತು.

ammaಫೋಟೋ : Down To Earth

ಕ್ವಾರ್ಟರ್‌ ಬಾಟಲಿಯಲ್ಲಿ ಎಮ್ಮೆ ಹಾಲು

‘’ಹಾಲು ಯಾತರದು? ಹಸುವಿನದೋ… ಎಮ್ಮೆಯದೋ… ಇಲ್ಲಾ ಮೇಕೆಯದೋ….?’’

ನನ್ನ ಮಾತು ಅವನಿಗೆ ಅರ್ಥವಾದಂತೆ ಕಂಡಿತು. ಮರಾಠಿಯಲ್ಲಿ ಮತ್ತೆ ಏನೋ ಬಡಬಡಿಸಿದ. ಶಿರೋಡ್ಕರರು ಅದನ್ನು ಅನುವಾದಿಸಿ ಹೇಳಿದರು.

‘’ಅವರು ಕುರೀ-ಮೇಕೆ ಸಾಕೋದಿಲ್ವಂತೆ. ಎಮ್ಮೇ ಹಾಲು ಅದು. ಎಲ್ರೂ ಅದನ್ನೇ ತಗೋತಾರಂತೆ’’
ಎಲ್ಲರ ಮುಖದಲ್ಲಿ ದೊಡ್ಡ ಸಂತೋಷ.

‘’ಎಮ್ಮೇ ಹಾಲಿನ ಕಾಫೀ. ಕುಡಿಯೋಕೆ ಮಜವಾಗಿರುತ್ತೆ’’

ಬೆಂಗಳೂರಿನ ಶ್ರೀನಿವಾಸ ಸೆಟ್ಟಿ ಖುಶಿಯಿಂದ ಹೇಳಿದರು.

‘’ರೇಟು ಎಷ್ಟಂತೆ?’’

ತಂಡದ ಹಣಕಾಸಿನ ವ್ಯವಹಾರ ನಾನೇ ನೋಡಿಕೊಳ್ಳುತ್ತಿದ್ದರಿಂದ ನನಗೆ ಅದೂ ಮುಖ್ಯವಾಗಿತ್ತು. ಕೇಳಿದೆ. ಗೌಳಿಗಳು ಲೀಟರ್‌ ಲೆಕ್ಕದಲ್ಲಿ ಕೊಡುವುದಿಲ್ಲ. ಕ್ವಾರ್ಟರ್‌ ಲೆಕ್ಕದಲ್ಲಿ ಕೊಡುತ್ತಾರೆ.

‘’ದಿನಾಲೂ ಒಂದು ಕ್ವಾರ್ಟರ್‌ ಹಾಲು ತಗೊಂಡ್ರೆ ವಾರಕ್ಕೆ ಮೂರು ರೂಪಾಯಿಯಂತೆ. ಶನಿವಾರಕ್ಕೊಮ್ಮೆ ಚುಕ್ತಾ ಮಾಡೋದಂತೆ. ಹೆಚ್ಚಾಯಿತೇನೋ. ಸೂಪಾದಲ್ಲಿ ವಾರಕ್ಕೆ ಎರಡೂವರೆ ರೂಪಾಯಿಗೆ ಒಂದ್‌ ಕ್ವಾರ್ಟರ್‌ ತಂದು ಹಾಕ್ತಾರೆ. ಆದ್ರೂ ಈ ಕಾಡ್ನಲ್ಲಿ ತಂದು ಕೊಡೋದು ಹೇಳಿ’’

ಶಿರೋಡ್ಕರ ಅವನ ಪರವಾಗಿ ಮಾತಾಡಿದರು. ನನಗೆ ಆ ಗೌಳಿಯ ಬಗ್ಗೆ ಕುತೂಹಲವಾಯಿತು. ಹಾಲನ್ನು ಲೀಟರ್‌ ಲೆಕ್ಕದಲ್ಲಿ ಕೊಡ್ತಿಲ್ಲ. ಕ್ವಾರ್ಟರ್‌ ಲೆಕ್ಕದಲ್ಲಿ ಕೊಡ್ತಾನೆ. ಯಾಕಂದರೆ ಇವರಿಗೆ ಕಾಡಿನಲ್ಲಿ ಇದೇ ಅಳತೆ ಮಾಪಕ. ಅದೂ ಗೋವಾದಿಂದ ತಂದ ಬಾಟಲು. ತಕ್ಷಣ ಎಲ್ಲ ಒಪ್ಪಿದರು. ಶಿರೋಡ್ಕರರು ಚೌಕಾಶಿಗೆ ಹಾಗೆ ಹೇಳಿದ್ದು ತಪ್ಪಲ್ಲ. ಅದಕ್ಕೆ ಕಾರಣವೂ ಇದೆ.

ಆಗ ಬಿ.ಇ. ಇಂಜನಿಯರ್‌ ಗೆ ದಿನಗೂಲಿ ಸಂಬಳ ಆರು ರೂಪಾಯಿಗಳು.
ಡಿಪ್ಪೋಮಾ ಇಂಜನಿಯರ್ ಗೆ ನಾಲ್ಕೂವರೆ ರೂಪಾಯಿ ದಿನಗೂಲಿ.
ನಾನು ಯಾವ ಇಂಜನಿಯರೂ ಆಗಿರಲಿಲ್ಲ. ನನಗೆ ದಿನಗೂಲಿ ಎರಡೂವರೆ ರೂಪಾಯಿಗಳು.

ಮಳೆ ಬರುತಿದೆ. ಮತ್ತೆ ನೆನಪಾಗುತ್ತದೆ ಎಂಬ ಕೆ. ಸದಾಶಿವರ ಕತೆಯ ಟೈಟಲ್ಲು ನನಗೆ ಇಂದಿಗೂ ನೆನಪಾಗುತ್ತದೆ.

ಯಾಕಂದರೆ ನನ್ನ ದಿಗೂಲಿ ಸಂಬಳದ ಸಂಖ್ಯೆ. ನಾನು ಹೇಳುತ್ತಿರುವುದು ಉಪೇಕ್ಷೆಯಲ್ಲ. ನಮಗೆಲ್ಲ ಆಗ ದಿನದ ಪಗಾರ ಎಷ್ಟಿತ್ತು ಅಂತೀರ. ಬಿ.ಇ. ಮಾಡಿದ ಇಂಜನಿಯರಿಗೆ ದಿನಕ್ಕೆ ಆರು ರೂಪಾಯಿ. ಡಿಪ್ಲೋಮಾ ಮಾಡಿದ್ರೆ ನಾಲ್ಕೂವರೆ ರೂಪಾಯಿ. ಸಾದಾ ಡಿಗ್ರಿ ಮಾಡಿದ್ರೆ ಎರಡೂವರೆ ರೂಪಾಯಿ. ಸಹಾಯಕರಿಗೆ ಒಂದೂವರೆ ರೂಪಾಯಿ. ಇವತ್ತು ಹೇಳಿದ್ರೆ ನಗು ಬರುತ್ತದಲ್ಲವೆ? ಇಂದು ಕಾಳೀ ಯೋಜನೆಯ ನಿರ್ಮಾತೃ ಸಂಸ್ಥೆ ಕರ್ನಾಟಕ ವಿದ್ಯುತ್‌ ನಿಗಮದಲ್ಲಿ ಕೆಲಸ ಸಿಕ್ಕವರಿಗೆ ಮೊದಲ ಸಂಬಳವೇ ಐವತ್ತು ಸಾವಿರಕ್ಕೂ ಹೆಚ್ಚು. ಜೊತೆಗೆ ಉಚಿತ ವಸತಿ ಸೌಲಭ್ಯ, ಸಾರಿಗೆ, ಆರೋಗ್ಯ ಸವಲತ್ತು ಇತ್ಯಾದಿಗಳಿವೆ. ಆದರೆ ಈ ಯೋಜನೆಯಲ್ಲಿ ಆಂರಂಭಿಕವಾಗಿ ದುಡಿದವರಿಗೆ ದಕ್ಕಿದ್ದು ಇಷ್ಟೇ.

amma.jpg1ಫೋಟೋ : The News Minute

ಕೇಜಿಗೆ ಐವತ್ತು ಪೈಸೆ ದರದ ಅಕ್ಕಿಯನ್ನೇ ನಮ್ಮ ಮೆಸ್ಸಿಗೆ ತರುತ್ತಿದ್ದೆವು.
ಮೇಲೆ ಹೇಳಿದಂತೆ ನನಗೆ ಆಗ ದಿನಕ್ಕೆ ಎರಡೂವರೆ ರೂಪಾಯಿ ದಿನಗೂಲಿ. ಅಂದರೆ ನನ್ನ ತಿಂಗಳ ಪಗಾರ ಆಗ ಬರೋಬ್ಬರಿ ಎಪ್ಪತೈದು ರೂಪಾಯಿ. ದಿನಕ್ಕೆ ಎರಡು ಹೊತ್ತು ಊಟ, ಬೆಳಿಗ್ಗೆ ತಿಂಡಿ, ಸಂಜೆ ಲಘು ಉಪಹಾರ, ಒಟ್ಟು ಮೂರು ಹೊತ್ತು ಚಹ ಇಷ್ಟು ನಾವೇ ವ್ಯವಸ್ಥೆ ಮಾಡಿಕೊಂಡಿದ್ದ ಮೆಸ್ಸಿನಲ್ಲಿ ಸಿಕ್ಕುತ್ತಿತ್ತು. ಅದೆಲ್ಲವನ್ನೂ ಅಡುಗೆಯ ಅಪ್ಪೂ ಕುಟ್ಟೀನೇ ತಯಾರಿಸುತ್ತಿದ್ದ. ಅವನದು ಕೇರಳ ಮಾದರಿ ಚಹ.

ಬೆಳಿಗ್ಗೆ ಐದೂವರೆಗೆ ಎಲ್ಲರೂ ಏಳುತ್ತಿದ್ದೆವು. ಐದು ಗಂಟೆಗೇ ಎದ್ದಿರುತ್ತಿದ್ದ ಅಪ್ಪೂ ಎಲ್ಲರಿಗೂ ಮೀಟರ್‌ ಚಹ ತಯಾರಿಸಿ ಕೊಡುತ್ತಿದ್ದ. ನಂತರ ಅಲ್ಲಿಯೇ ಜುಳು ಜುಳು ಹರಿಯುತ್ತಿದ್ದ ಕನ್ನಡಿಯಂಥ ನೀರಿನ ಝರಿಯ ಬಳಿ ಹೋಗಿ ಸ್ನಾನ ಇತ್ಯಾದಿಗಳನ್ನು ಪೂರೈಸುತ್ತಿದ್ದೆವು. ಬೆಳಗಿನ ಹೊತ್ತು ಕಲ್ಲು ಪೊಟರೆಯಿಂದ ಹರಿಯುತ್ತಿದ್ದ ನೀರು ತುಸು ಬೆಚ್ಚಗೆ ಇರುತ್ತಿತ್ತು. ನೀರಿನಲ್ಲಿ ಹರಿದಾಡುತ್ತಿದ್ದ ಮೀನುಗಳ ಹಿಂಡು ನಮ್ಮನ್ನು ಕಂಡು ದೂರ ಓಡುತ್ತಿದ್ದವು. ಅರ್ಧ ಇಂಚಿನಿಂದ ಮೂವತ್ತು ಅಡಿ ಉದ್ದದ ಮೀನುಗಳು ಅಲ್ಲಿದ್ದವು. ಅರ್ಧ ಇಂಚು ಉದ್ದದ ಕಪ್ಪು ಬಣ್ಣದ ಮೀನುಗಳು ನಾವು ನೀರಲ್ಲಿ ಕಾಲು ಇಟ್ಟರೆ ಸಾಕು ಕಚಗುಳಿ ಇಡುವ ಹಾಗೆ ಪಾದಗಳಿಗೆ ಅಮರಿಕೊಳ್ಳುತ್ತಿದ್ದವು. ದಟ್ಟಡವಿಯಲ್ಲಿ ಹರಿವ ಹಿಮದ ತಿಳಿ
ನೀರಲ್ಲಿ ಸ್ನಾನ ಮಾಡುವ ಆನಂದವೇ ಬೇರೆ.

ಕಾಡಿನಲ್ಲಿ ನಿಮಗೆಂದೂ ಗೊತ್ತಿರದ ಶೌಚ ಪುರಾಣ ನಿತ್ಯ ಬಯಲು ಕಡೆ ಹೋಗುವುದಿದ್ದರೆ ಎಲ್ಲರೂ ಗುಂಪಾಗಿ ಹೋಗುವುದು ಅನಿವಾರ್ಯವಾಗಿತ್ತು. ಯಾಕಂದರೆ ಮೊದಲೇ ದಟ್ಟ ಅರಣ್ಯ. ಅಲ್ಲಿ ಕಾಡು ಪ್ರಾಣಿಗಳು ಹೇರಳವಾಗಿದ್ದವು. ಅದರಲ್ಲೂ ಹೆಬ್ಬಾವುಗಳು, ಕಡ್ಡಿಯಂಥ ಹಸಿರು ಹಾವುಗಳು, ಮರದಿಂದ ಮರಕ್ಕೆ ಹಾರುವ ಹಾವುಗಳು, ಗಿಡದ ಬೊಡ್ಡೆಯಂತೆ ಕಾಣುವ ಹಾವುಗಳು ಇಲ್ಲಿ ಹೆಚ್ಚು.

ammaಫೋಟೋ : Shutterstock

ಹಾಗಾಗಿ ಯಾರಿಗಾದರೂ ಶೌಚಕ್ಕೆ ಹೋಗಬೇಕು ಅನ್ನಿಸಿದರೆ ಅದಕ್ಕೊಂದು ನಿಯಮ ಪಾಲನೆ ಮಾಡುತ್ತಿದ್ದೆವು. ಶೌಚಕ್ಕೆ ಬದಿಯ ಕಾಡಿಗೇ ಹೋಗಬೇಕು. ಪರಸ್ಪರ ರಕ್ಷಣೆಯ ಕಾರಣಕ್ಕೆ ನಿಯಮ ಹಾಕಿಕೊಂಡಿದ್ದೆವು. ಏನಂದರೆ ಒಬ್ಬರೇ ಹೋಗುವಂತಿಲ್ಲ. ಕನಿಷ್ಠ ಮೂರು ಜನ ಒಟ್ಟಾಗಿ ಹೋಗಬೇಕು. ಹೋಗುವಾಗ ಎಲ್ಲರ ಕೈಯಲ್ಲೂ ಹರಿತವಾದ ಕೊಯ್ತ ಇರಬೇಕು. ಮತ್ತು ಕನಿಷ್ಠ ಒಬ್ಬರ ಬಳಿಯಾದರೂ ಸದ್ದು ಮಾಡಲು ಒಂದು ಚಿಕ್ಕ ಗಂಟೆಯಾದರೂ ಇರಬೇಕು. ಬೆಳಗಿನ ಹೊತ್ತು ಮಾತ್ರ ಅಪ್ಪೂನನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಹೋಗುತ್ತಿದ್ದೆವು. ಬೆಳಿಗ್ಗೆ ಚಹ ಕುಡಿದದ್ದೇ ತಡ ಎಲ್ಲರ ಹೊಟ್ಟೆ ಶೌಚಕ್ಕೆ ಅವಸರ ಮಾಡುತ್ತಿತ್ತು. ಹನಮಂತ್ಯಾ ಕೈಯಲ್ಲಿ ಒಂದು ಗಂಟೆ ಬಾರಿಸುತ್ತ ಕಾಡಿನಲ್ಲಿ ಮುಂದೆ ಮುಂದೆ
ಹೋಗುತ್ತಿದ್ದ. ಅವನ ನಂತರ ಇಂಜನಿಯರುಗಳಾದ ಶಿರೋಡ್ಕರ, ಲಿಂಗಪ್ಪ, ಹಾಗೂ ಶೆಟ್ಟಿಯವರು ಹೋಗುತ್ತಿದ್ದರೆ. ಅವರ ಹಿಂದೆ ನಾನು, ನನ್ನ ಹಿಂದೆ ಸುಬ್ರಮಣಿ ಬರುತ್ತಿದ್ದ. ನಮ್ಮದು ಕಾಡಿನ ಬಯಲು ಶೌಚಾಲಯವಾದದ್ದರಿಂದ ಎಲ್ಲರ ಕೈಯಲ್ಲೂ ಒಂದು ಹರಿತ ಕೊಯ್ತ, ಒಂದು ಮುಂಗೈ ತೂಕದ ನೀರಿನ ಡಬ್ಬ ಇರುವುದು ಅನಿವಾರ್ಯವಾಗಿತ್ತು. ಒಬ್ಬೊಬ್ಬರು ಒಂದೋಂದು ಗಿಡದ ಮರೆ ನೋಡಿಕೊಂಡು ಕೂಡುತ್ತಿದ್ದೆವು. ಎಷ್ಟೋ ಸಲ ಹಾಗೆ ಕೂತಾಗ ಎಲೆಯ ಮರೆಯಲ್ಲಿದ್ದ ಮೊಲಗಳು, ಜಿಂಕೆಯ ಮರಿಗಳು ನನ್ನನ್ನು ತಳ್ಳಿಕೊಂಡು ಜಿಗಿದು ಹೋದದ್ದೂ ಇದೆ.

ಮೆಸ್ಸಿನಲ್ಲಿ ಪಾಳೆಯ ಪ್ರಕಾರ ಕೆಲಸವನ್ನು ಹಂಚಿಕೊಂಡಿದ್ದೆವು. ಟೆಂಟು ಝಾಡಿಸಿ ಧೂಳು ತಗೆಯುವುದು, ಕಂದೀಲು ಗಳಿಗೆ ಎಣ್ಣೆ ಹಾಕಿ ದೀಪ ಹಚ್ಚುವುದು, ಅಪ್ಪೂ ಕುಟ್ಟಿಯ ಅಡುಗೇ ಕೆಲಸದಲ್ಲಿ ಸಹಾಯ ಮಾಡುವುದು, ಝರಿಯ ಹತ್ತಿರ ಹೋಗಿ ನೀರು ತುಂಬಿ ತರುವುದು, ಅಡುಗೇ ಪಾತ್ರೆಗಳನ್ನು ತಿಕ್ಕಿ ತೊಳೆಯುವುದು, ಇತ್ಯಾದಿ ಕೆಲಸಗಳಿದ್ದವು. ತಮ್ಮ ಪಾಳಿ ಬಂದಾಗ ಇಂಜನಿಯರೂ ಆ ಕೆಲಸ ಮಾಡುತ್ತಿದ್ದರು. ನಾವೂ ಮಾಡುತ್ತಿದ್ದೆವು. ವಾರಕ್ಕೊಮ್ಮೆ ಎಲ್ಲರೂ ಕೂತು ಮೆಸ್ಸಿನ ಬಜೆಟ್ಟು ತಯಾರಿಸುತ್ತಿದ್ದೆವು. ಅದರ ಒಟ್ಟು ಖರ್ಚನ್ನು ತಂಡದಲ್ಲಿದ್ದ ಎಂಟೂ ಜನ ಹಂಚಿಕೊಳ್ಳುತ್ತಿದ್ದೆವು. ವಾರಕ್ಕೆ ಒಬ್ಬೊಬ್ಬರಿಗೆ ಆರೂವರೆ ರೂಪಾಯಿ ಖರ್ಚು ಹಂಚಿಕೆಯಾಗುತ್ತಿತ್ತು. ಅಂದರೆ ವಾರಕ್ಕೆ ಎಂಟೂ ಜನಕ್ಕೆ ದಿನಸಿಯ ಖರ್ಚು ನಲವತೈದು ರೂಪಾಯಿಗಳು. ಅಕ್ಕಿ ನಲವತ್ತು ಪೈಸೆ, ಐವತ್ತು ಪೈಸೆ,
ಹಾಗೂ ಅರವತ್ತು ಪೈಸೆಗೆ ಕಿಲೋದಂತೆ ಸಿಗುತ್ತಿತ್ತು. ನಲವತ್ತು ಪೈಸೆಯ ಅಕ್ಕಿಯನ್ನು ದೋಸೆ-ಇಡ್ಲಿಗೆ ಬಳಸುತ್ತಿದ್ದೆವು. ಕೆ.ಜಿ.ಗೆ ಎಂಭತ್ತು ಪೈಸೆಗೆ ಒಂದು ಕೆ.ಜಿ.ಯಂತೆ ಬಂಗಾರ ಕಡ್ಡಿ ಎಂಬ ಹೆಸರಿನ ಶ್ರೇಷ್ಠ ದರ್ಜೆಯ ಅಕ್ಕಿ ಸೂಪಾದ ವಸಂತ ಸುಂಠಣಕರರ ಅಂಗಡಿಯಲ್ಲಿ ಸಿಗುತ್ತಿತ್ತು. ಆದರೆ ಅದನ್ನು ಉಳ್ಳವರು ಮಾತ್ರ ತಿನ್ನುತ್ತಿದ್ದರು. ಈಗ ಆ ಅಕ್ಕಿಯೇ ಸಿಗುವುದಿಲ್ಲ. ನಮ್ಮ ಮೆಸ್ಸಿಗೆ ನಾವು ಐವತ್ತು ಪೈಸೆಗೆ ಕೆ.ಜಿ. ಸಿಗುವ ಅಕ್ಕಿಯನ್ನೇ ತಂದು ಹಣ ಉಳಿಸುತ್ತಿದ್ದೆವು. ಅದು ಹಳಿಯಾಳ ಕಡೆ ಬೆಳೆಯುವ ಅಕ್ಕಿ. ಚನ್ನಾಗಿಯೂ ಇತ್ತು.

ani4ಫೋಟೋ : DW

ಅದು ಬಿಟ್ಟರೆ ಕಾಡಿನಲ್ಲಿ ನಮಗೆ ಬೇರೆ ಏನೂ ಖರ್ಚಿರಲಿಲ್ಲ. ಸೋಪು, ತಲೆಗೆ ಎಣ್ಣೆ, ಅನ್ನುವುದು ಬಿಟ್ಟರೆ ಬೇರೇನೂ ಇರಲಿಲ್ಲ. ಹಾಗಾಗಿ ತಿಂಗಳಿಗೆ ನಾನು ಏನಿಲ್ಲೆಂದರೂ ನಲವತ್ತು ರೂಪಾಯಿ ಉಳಿಸುತ್ತಿದ್ದೆ. ಅದು ಸಂಬಳದ ಶೇಕಡಾ ಐವತೈದು ಪ್ರಮಾಣದ ಸಂಬಳ. ಈಗಿನ ಕಾಲದಲ್ಲಿ ಎಷ್ಟೇ ಸಂಬಳ ಬಂದರೂ ಅಷ್ಟು ಪ್ರಮಾಣದಲ್ಲಿ ಉಳಿಕೆ ಮಾಡಲಾಗುವುದಿಲ್ಲ ಬಿಡಿ.

ತಂಡದಲ್ಲಿ ಮದುವೆಯಾದವರು ಮೂರೇ ಜನ. ಅದು ಮೂವತೈದು ವರ್ಷದ ಇಂಜನಿಯರಾದ ನಾಗೇಶ ಶಿರೋಡ್ಕರ ಮತ್ತು ನಲವತ್ತು ವರ್ಷದ ಲಿಂಗರಾಜ ಅವರು. ಮತ್ತು ಅಡುಗೇ ಕೆಲಸದ ಅಪ್ಪೂ ಕುಟ್ಟಿ. ನಾನೂ ಸೇರಿ ಉಳಿದವರಾರೂ ಮದುವೆಯಾಗಿರಲಿಲ್ಲ. ಅವರಿಗೆಲ್ಲ ಊರಲ್ಲಿ ಅಪ್ಪ ಅಮ್ಮ ಇರುವದಷ್ಟೇ ಗೊತ್ತಿತ್ತು. ಅವರ ಸಂಸಾರದ ವಿವರಗಳ ಬಗ್ಗೆನಾವು ಯಾರೂ ಮಾತಾಡುತ್ತಿರಲಿಲ್ಲ. ಅವರಾಗಲಿ ಹೇಳಿದರೆ ಕೇಳುತ್ತಿದ್ದೆವು.ಇಂಜನಿಯರ್‌ ಶಿರೋಡ್ಕರರ ಹೆಂಡತಿ ಕಾರವಾರದಲ್ಲಿಯೂ, ಲಿಂಗರಾಜರ ಹೆಂಡತಿ ಚಿತ್ರದುರ್ಗದಲ್ಲಿಯೂ ಇದ್ದರೆಂಬುದು ತಿಳಿದಿತ್ತು. ಹೊಸ ಇಂಜನಿಯರ ಶ್ರೀನಿವಾಸ ಸೆಟ್ಟಿಗೆ ಇನ್ನೂ ಮದುವೆ ಆಗಿರಲಿಲ್ಲ. ಬಿ.ಇ,.ಯೇನೋ ಆಗಿತ್ತು. ಇದು ಅತಂತ್ರ ಕೆಲಸ ಮತ್ತು ಕಾಡಿನಲ್ಲಿ ವಾಸ. ಆದ್ದರಿಂದ ಹೆಣ್ಣು ಕೊಡಲು ಯಾರೂ ಮುಂದೆ ಬಂದಿರಲಿಲ್ಲ.

ಅಡುಗೆ ಕೆಲಸದ ಅಪ್ಪೂ ಕುಟ್ಟಿಗೆ ಐವತ್ತರ ಹತ್ತಿರದ ವಯಸ್ಸು. ಕುರುಚಲು ಗಡ್ಡದಲ್ಲಿ ಬಿಳೀ ಎಳೆಗಳು ಕಾಣುತ್ತಿದ್ದವು. ಕೇರಳದ ಕಣ್ಣಾನೂರಲ್ಲಿ ಹೆಂಡತಿ ಇರುವಳೆಂದೂ ಅಲ್ಲಿ ತನ್ನ ಅಣ್ಣಂದಿರು ಆಕೆಯನ್ನು ಮತ್ತು ಮೂರು ಜನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆಂದೂ ತಾನು ಆಗಾಗ ದುಡ್ಡು ಮನಿಯಾರ್ಡರು ಕಳಿಸುತ್ತೇನೆ ಎಂದೂ ನನ್ನ ಬಳಿ ಹೇಳುತ್ತಿದ್ದ. ಹೆಂಡತಿ ಮಕ್ಕಳು ದೂರದೂರಲ್ಲಿ. ಇವನು ಇಲ್ಲಿ. ಎಂಥ ಸಂಸಾರ ಅನಿಸಿದರೂ ಬದುಕಿನ ಅನಿವಾರ್ಯತೆ ಯಾರು ಯಾರನ್ನೋ ಹೇಗೇಗೋ ಇಟ್ಟಿರುತ್ತದಲ್ಲ ಎಂದು ಯೋಚಿಸುತ್ತಿದ್ದೆ. ತಂಡದಲ್ಲಿ ಇದ್ದವರದೆಲ್ಲ ಹೀಗೇ ಒಂದೊಂದು ಕತೆ.

( ಗೌಳಿ ಜನಾಂಗದ ಜೊತೆ ಹೂಲಿಶೇಖರ್ )amma

( ಗೌಳಿ ಜನಾಂಗದ ಜೊತೆ ಹೂಲಿಶೇಖರ್ )

ಪಾಪ! ಹನುಮಂತ್ಯಾನ ಕತೆ
ಹನುಮಂತ್ಯಾ ಮರಾಠೀ ಹುಡುಗ. ಸೂಪಾ-ಜೋಯಡಾ, ಕುಂಬಾರವಾಡಾ ಬಿಟ್ಟು ಬೇರೆ ಊರು ನೋಡಿದವನಲ್ಲ. ವಯಸ್ಸಿನಲ್ಲಿ ನನಗಿಂತ ಸಣ್ಣವ. ತನ್ನ ಅಪ್ಪ ಯಾರು ಅಂತ ಅವನಿಗೂ ಗೊತ್ತಿಲ್ಲ. ಆರು ವರ್ಷ ಆಗುವ ತನಕ ಆಯಿ [ಅವ್ವ] ಜೊತೆಗಿದ್ದಳಂತೆ. ಆಮೇಲೆ ಒಂದು ದಿನ ಇವನನ್ನು ಜೋಯಡಾದಲ್ಲಿ ಕಾಮತಿಯವರ ಚಹದಂಗಡಿಯಲ್ಲಿ ಲೋಟ ತೊಳೆಯವ ಕೆಲಸಕ್ಕೆ ಹಚ್ಚಿದಳು. ಊಟ-ತಿಂಡಿ ಅಲ್ಲಿಯೇ. ವಾರಕ್ಕೆ ಒಂದು ರೂಪಾಯಿ ಸಂಬಳ. ಹನುಮಂತ್ಯಾ ಕಾಮತಿಯ ಪಾಲಾದ.

ಮುಂದೆ ಎಂಟು ದಿನ ಕಳೆದಿರಲಿಲ್ಲ. ಹನುಮಂತ್ಯಾನ ಆಯಿ ಗೋವೆಯ ಕಡೆಗೆ ಹೋಗಿ ಬರುತ್ತೇನೆ ಎಂದು ಹೇಳಿ, ಯಾರದೋ ಜೊತೆಗೆ ಹೋದವಳು ಮರಳಿ ಬರಲೇ ಇಲ್ಲ. ಇವತ್ತಿಗೂ ಸಹ. ಹುಡುಗನಿಗೆ ಖಿನ್ನತೆ ಹೆಚ್ಚಾಯಿತು. ಒಂದು ವರ್ಷ ಕಳೆದ ಮೇಲೆ ಹನುಮಂತ್ಯಾ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಕಾಮತಿ ಹೊಟೆಲ್‌ ಕೆಲಸದಿಂದ ತಗೆದು ಹಾಕಿದ. ಸಂಬಳವನ್ನೂ ಕೊಡಲಿಲ್ಲ ಆತ. ಅನ್ನ ಬಟ್ಟೆ ಕೊಟ್ಟದ್ದೇ ಹೆಚ್ಚು ಎಂದು ಜಬರಿಸಿ ಸಾಗಹಾಕಿದ.

ಮುಂದೆ ಹುಡುಗನನ್ನು ತಮ್ಮ ಮನೆಗೆ ಕರೆದೊಯ್ದು ‘ಜೇವನ್‌-ನಾಷ್ಟಾ’ [ಊಟ-ತಿಂಡಿ] ಹಾಕುವ ಆಧಾರದಲ್ಲಿ ತಮ್ಮ ಒಣ ಮೀನು ಅಂಗಡಿಯಲ್ಲಿ ಇಟ್ಟುಕೊಂಡದ್ದು ಸೂಪಾದ ‘ಶ್ರೀಧರ ಕಾಣಕೋಣಕರ’ ಎಂಬ ಯುವಕ.

ಹರಿದ ಸೀರೆಯ ಬಟ್ಟೆಯನ್ನೇ ಲಂಗೋಟಿ ಮಾಡಿಕೊಂಡ ಹನುಮಂತ್ಯಾ
ಮೊದಲು ಬರೀ ಮೀನು ಒಣಗಿಸುತ್ತ ಕೂಡು ಅಂದವರು ನಂತರ ಕಾಡಿಗೆ ಹೋಗಿ ಒಲೆಗೆ ಕಟ್ಟಿಗೆ ತರಲು ಹಚ್ಚಿದರು. ಹೊಳೆಗೆ ಹೋಗಿ ಹೆಂಗಸರ ಬಟ್ಟೆ ಹಿಂಡಿಕೊಂಡು ಬಾ ಅಂದರು. ಅಂಗಳದ ಕಸ ಹೊಡೆಯಲು ಹಚ್ಚಿದರು. ಮನೆಯಲ್ಲಿ ಶ್ರೀಧರಿಗೆ ಇನ್ನೂ ಇಬ್ಬರು ತಮ್ಮಂದಿರಿದ್ದರು. ವಯಸ್ಸಾದ ಮುದುಕಿಯೂ ಇತ್ತು. ದಿನವೆಲ್ಲ ಈ ಮುದುಕಿಯೇ ಮೀನು ಅಂಗಡಿಯಲ್ಲಿ ಕೂತು ಗಲ್ಲೆ ನೋಡಿಕೊಳ್ಳುತ್ತಿತ್ತು. ರಾತ್ರಿ ಹೊತ್ತು ಗೋವೆಯ ಕಾಜೂ ಸೆರೆ ಕುಡಿಯದಿದ್ದರೆ ಅದಕ್ಕೆ ನಿದ್ದೆಯೇ ಬರುತ್ತಿರಲಿಲ್ಲ. ಒಂದು ದಿನ ಗಲ್ಲೆಯಲ್ಲಿದ್ದ ನಾಲ್ಕಾಣೆ ಕಾಣಲಿಲ್ಲ ಎಂದು ಮುದುಕಿ ರಂಪಾಟ ಮಾಡಿತು. ಏಳು ವರ್ಷದ ಹನುಮಂತ್ಯಾನನ್ನು ಮನೆಯ ಹೆಂಗಸರ ಮುಂದೆ ದಿಗಂಬರನನ್ನಾಗಿ ಮಾಡಿ ನಿಲ್ಲಿಸಿ ಕೇಳಿದರು. ಕದ್ದೀಯೇನೋ ಬದ್ಮಾಶ್‌ ಎಂದು ರೋಪು ಹಾಕಿದರು. ನಾಲ್ಕು ಪೆಟ್ಟೂ ಬಡಿದರು. ಹನುಮಂತ್ಯಾನಿಗೆ ಆಯೀ ನೆನಪಾದಳು. ಅತ್ತ. ತನ್ನ ಹರಿದ ಚೊಣ್ಣ, ಅಂಗಿಗಾಗಿ ಗೋಗರೆದ. ಇವತ್ತು ರಾತ್ರಿಯೆಲ್ಲ ಬರೀಮೈಲೇ ಇರು. ಇರುವೆ ಕಡೀಲಿ ಅದಕ್ಕೆ. ಮುದುಕಿ ಅವನ ಬಟ್ಟೆಯನ್ನು ತನ್ನ ಸೀರೆಯಲ್ಲಿ ಬಚ್ಚಿಟ್ಟುಕೊಂಡಿತು. ಹನುಮಂತ್ಯಾ ಎಲ್ಲಿಂದಲೋ ಒಂದು ಹರಕು ಸೀರೆ ಸಂಪಾದಿಸಿ ಅದರಲ್ಲಿಯೇ ಲಂಗೋಟಿ ಮಾಡಿಕೊಂಡು ಹಾಕಿಕೊಂಡ ಮತ್ತು ಆ ಮನೆಗೆ ದೊಡ್ಡ ನಮಸ್ಕಾರ ಹೇಳಿ ರಾತ್ರೋ-ರಾತ್ರಿ ಹೊರಬಿದ್ದ.

ಲೇಖನ : ಹೂಲಿಶೇಖರ್ (ಖ್ಯಾತ ನಾಟಕಕಾರ ಮತ್ತು ಚಿತ್ರಸಂಭಾಷಣಕಾರ)

bf2fb3_58479f997cba4852bd3d7a65d4c785a4~mv2.png

ಕಾಳೀ ಕಣಿವೆ ಕತೆಗಳ ಹಿಂದಿನ ಭಾಗಗಳನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :

0 0 votes
Article Rating

Leave a Reply

1 Comment
Inline Feedbacks
View all comments
NIDASALE M.PUTTASWAMAIAH

ಮಾಹಿತಿಪೂರ್ಣ ಲೇಖನ, ಓದಿದರೆ ಖುಷಿಕೊಡುತ್ತದೆ, ನಿಮಗೆ ಧನ್ಯವಾದಗಳು…ನಿಡಸಾಲೆ ಪುಟ್ಟಸ್ವಾಮಯ್ಯ.

Mohan Kumar K N

‘ಕಾಳಿ ಕಣಿವೆಯ ಕತೆಗಳು’ ತುಂಬಾ ಚೆನ್ನಾಗಿ ಮೂಡಿಬಂದಿದೆ. ಆದರೂ ಇನ್ನೂ ಸ್ವಾರಸ್ಯವಾಗಿ ಬರೆಯಬಹುದಾಗಿತ್ತು.

Home
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW