ಕ್ರಿ.ಶ ೧೫೦೩ ರಲ್ಲಿ ಫ್ರಾನ್ಸಿನ ಯಹೂದಿ ಮನೆತನದಲ್ಲಿ ಹುಟ್ಟಿದ ಸಾರ್ವಕಾಲಿಕ ಜಗತ್ತು ಕಂಡ ಮಹಾ ಕಾಲಜ್ಞಾನಿ ಮೈಕೆಲ್ ದಿ ನಾಸ್ಟ್ರಾಡಾಮಸ್ ತನ್ನ ಭವಿಷ್ಯವಾಣಿಗಳಿಂದ ಜಗತ್ತಿನಾದ್ಯಂತ ಸಂಚಲನ ಮೂಡಿಸಿದವನು. ನಾಳೆಯ ಸೂರ್ಯಾಸ್ತ ತನ್ನ ಪಾಲಿಗೆ ಇರದು ಎಂದು ತನ್ನ ಸಾವಿನ ಭವಿಷ್ಯವಾಣಿಯನ್ನೇ ನಿಖರವಾಗಿ ತಿಳಿಸಿದವನೀತ. ಮುಂದೆ ಓದಿ…
ಕೇವಲ ೬೦ ಚಿಲ್ಲರೆ ವರ್ಷ ಬದುಕಿದನಾದರೂ, ಇವನು ಬರೆದ “ಪ್ರೊಫೆಸಿಸ್ ಆಫ್ ನಾಸ್ಟ್ರಾಡಾಮಸ್” ಎಂಬ ಪುಸ್ತಕ ಇಂದಿಗೂ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ. ಈತನ ಭವಿಷ್ಯವಾಣಿಗಳ ಆಳ ಮತ್ತು ಮೂಲ ಕೆದಕುತ್ತಾ ಹೋದರೆ, ಕಾಲಕಾಲಗಳಲ್ಲಿ ಅವತರಿಸಿದ ಧರ್ಮಗ್ರಂಥಗಳಿಂದಲೇ ಪಡೆದ ವಿಚಾರಗಳೇ ಹೆಚ್ಚು ಎದ್ದು ಕಾಣುತ್ತವೆ. ಆದರೂ ತನ್ನ ೬೩೩೮ ಭವಿಷ್ಯವಾಣಿಗಳಲ್ಲಿ ಫ್ರಾನ್ಸ್ ನ ಕ್ರಾಂತಿ, ನೆಪೋಲಿಯನ್ ನ ಆಡಳಿತ, ಹಿಟ್ಲರ್ ನ ವ್ಯಕ್ತಿತ್ವ ಚಿತ್ರಣ, ಎರಡು ಮಹಾಯುದ್ಧಗಳು, ಹಿರೋಷಿಮಾ ನಾಗಾಸಾಕಿ ಅಣುಬಾಂಬ್ ದಾಳಿ, ೯ /೧೧ ವಿಮಾನ ದಾಳಿ, ಪ್ರಸ್ತುತ ಧಾರ್ಮಿಕ ಧ್ರುವೀಕರಣ, ೩ ನೇ ಮಹಾಯುದ್ಧ, ಹೀಗೆ ಬಹಳಷ್ಟು ಈ ಹಿಂದೆ ನಡೆದ ಮತ್ತು ಸಾಕಷ್ಟು ಭವಿಷ್ಯದ ಜಟಿಲ ಸಂಭಾವ್ಯತೆಯನ್ನು ನಾಸ್ಟ್ರಾಡಾಮಸ್ ಸುಮಾರು ೪೫೦ ವರ್ಷಗಳ ಹಿಂದೆಯೇ ಬರೆದಿಟ್ಟಿದ್ದಾನೆ. ಅದರಲ್ಲೂ ೨೧ ನೇ ಶತಮಾನದಲ್ಲಿ ಬೃಹತ್ ಗಾತ್ರದ ಆಕಾಶಕಾಯವೊಂದು ಭೂಮಿಗೆ ಅಪ್ಪಳಿಸಲಿದೆ ಎಂಬ ಈತನ ಭವಿಷ್ಯವಾಣಿಯನ್ನು ವೈಜ್ಞಾನಿಕ ಶೋಧನೆಯ ಮೂಲಕ ಅಮೇರಿಕಾದ ಪ್ರಖ್ಯಾತ ಬಾಹ್ಯಕಾಶ ಸಂಸ್ಥೆ “ನಾಸಾ” ಖಚಿತಪಡಿಸಿರುವುದು ಮತ್ತು ಅದಕ್ಕೆ ಪೂರಕವಾಗಿ ಧಾರ್ಮಿಕ ಭವಿಷ್ಯವಾಣಿಯ ಉಲ್ಲೇಖಗಳಿರುವುದು ಆತಂಕಕ್ಕೆ ಕಾರಣವಾಗಿದೆ. ಈತನ ಭವಿಷ್ಯವಾಣಿಗಳ ಪ್ರಕಾರ ಇನ್ನು ಬೆರಳೆಣಿಕೆಯ ವರ್ಷಗಳಲ್ಲಿ ೩ನೇ ಮಹಾಯುದ್ಧ ಆರಂಭವಾಗಿ, ಅದು ಸರಿಸುಮಾರು ೩೦ ಸುದೀರ್ಘ ವರ್ಷ ನಡೆಯಲಿದೆ.
ಜಗತ್ತಿನಾದ್ಯಂತ ನಡೆದ ಬಹಳಷ್ಟು ಅತಿವೃಷ್ಟಿ, ಅನಾವೃಷ್ಟಿ, ಯುದ್ಧ, ವ್ಯಕ್ತಿತ್ವ, ದೇಶ, ಧರ್ಮ, ಆತಂಕ, ಅವಾಂತರಗಳ ಬಗ್ಗೆ ಈ ಕಾಲಜ್ಞಾನಿಯ ಮಾತುಗಳು ಕಾಲಕಾಲಕ್ಕೆ ಸತ್ಯವಾಗುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ದೈವೀಮೂಲವಾದ ಗ್ರಾಂಥಿಕ ಮತ್ತು ವ್ಯಕ್ತಿಮೂಲವಾದ ಮೌಖಿಕ ಭವಿಷ್ಯವಾಣಿಗಳು ಗೂಢಾರ್ಥ ಅಥವ ಪರೋಕ್ಷಾರ್ಥಗಳಿಂದ ಕೂಡಿರುತ್ತವೆ. ಇಂತಹ ಭವಿಷ್ಯವಾಣಿಗಳಲ್ಲಿ ಕಾಲಗಳ ನಿಖರ ಉಲ್ಲೇಖಗಳಿರುವುದಿಲ್ಲ. ಹೆಚ್ಚಿನವು ಆಯಾಯಾ ದಶಕಗಳು ಮತ್ತು ಶತಮಾನಗಳಲ್ಲಿ ಸಂಭವಿಸಿದ್ದಿದೆ. ಕೆಲವೊಮ್ಮೆ ಘಟಿಸಿದ ಘಟನೆಗಳನ್ನು ತಾಳೆ ಹಾಕಿ ಅದಕ್ಕೆ ಭವಿಷ್ಯವಾಣಿಯಿತ್ತು ಎಂದು ಸಾಧಿಸಿದ್ದಿದೆ.

ಫೋಟೋ ಕೃಪೆ : history
ಆದರೆ ನಾಸ್ಟ್ರಾಡಾಮಸ್ ನ ಭವಿಷ್ಯವಾಣಿಗಳು ತನ್ನ ನಿಖರತೆ ಮತ್ತು ಸ್ಪಷ್ಟತೆಗೆ ಹೆಸರುವಾಸಿಯಾಗಿದೆ. ಬದುಕಿನ ಆರಂಭದ ದಿನಗಳಲ್ಲಿ ಈತನ ಭವಿಷ್ಯವಾಣಿಗಳನ್ನು ಮೂರ್ಖನ ಆಲಾಪನ ಎಂದು ಜರೆಯುತ್ತಿದ್ದವರೂ ಕೂಡ, ಫ್ರಾನ್ಸ್ ದೊರೆಯ ಸಾವಿನ ಭವಿಷ್ಯವಾಣಿ ನಿಖರವಾಗಿ ಹೇಳಿದಂತೆ ಸಂಭವಿಸಿದಾಗ ಆಶ್ಚರ್ಯಚಕಿತರಾದರು. ಅದರ ನಂತರ ಹೀಗೆ ಹೇಳಿದ ಸಾವಿರಾರು ಭವಿಷ್ಯವಾಣಿಗಳು ಕಳೆದ ೫ ಶತಮಾನದಿಂದ ಬಹುತೇಕ ಅಲ್ಲಲ್ಲಿ ಸಂಭವಿಸಿದ್ದು, ಈತನ ಬಗ್ಗೆ ಜಗತ್ತು ನಿಬ್ಬೆರಗಾಗುವಂತೆ ಮಾಡಿದೆ. ಅತ್ಯಂತ ವಿಶೇಷವಾದ ಭವಿಷ್ಯವಾಣಿಯೊಂದರಲ್ಲಿ,ವೈದ್ಯಕೀಯ ಸಂಶೋಧನೆಯ ಫಲವಾಗಿ ೨೧ ನೇ ಶತಮಾನದಲ್ಲಿ ಮಾನವ, ೨೦೦ ವರ್ಷ ಬದುಕುವ ಸಾಮರ್ಥ್ಯದ ಔಷಧಿಯೊಂದನ್ನು ಕಂಡುಹಿಡಿಯಲಿದ್ದಾನೆ ಎಂದು ನಾಸ್ಟ್ರಾಡಾಮಸ್ ಹೇಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ..
ಸದ್ಯೋಭವಿಷ್ಯದ ಬಹಳಷ್ಟು ವಿಚಾರಗಳು ನಮ್ಮ ಊಹೆಯ ವ್ಯಾಪ್ತಿಗೆ ಒಳಪಡಲು ಅಂತಹ ವಿಶೇಷ ಶಕ್ತಿಯೇನೂ ಬೇಕಾಗಿಲ್ಲ. ಜಾಗತಿಕವಾದ ರಾಜಕೀಯ, ಧಾರ್ಮಿಕ, ಸಾಮಾಜಿಕ ಚಲನವಲನಗಳ ಪ್ರಭಾವ-ಪರಿಣಾಮಗಳ ಪೂರ್ವ ಮತ್ತು ಪಶ್ಚಾತ್ ಫಲಿತಾಂಶನ್ನು ಅವಲೋಕಿಸಿದರಾಯಿತು. ಹಾಗಾದಾಗ ವಿಚಾರಗಳು ಸಾಮಾನ್ಯ ಸಾಮರ್ಥ್ಯದ ಜ್ಞಾನಕ್ಕೂ ನಿಲುಕುತ್ತದೆ. ಈಗಿನ ಮಾಲಿನ್ಯದಿಂದ ಕೂಡಿದ ಪರಿಸರವನ್ನು ನೋಡಿ ಮುಂಬರುವ ಪೀಳಿಗೆಗೆ ಬದುಕುವುದು ಕಷ್ಟವಿದೆ ಎನ್ನುವುದನ್ನು ಸುಲಭವಾಗಿ ಊಹಿಸಬಹುದು. ಕಳೆದ ೩-೪ ದಶಕಗಳಿಂದಾದ ಸಾರಿಗೆ ಕ್ರಾಂತಿಯ ವೇಗ ಮತ್ತು ತಾಂತ್ರಿಕತೆಯನ್ನು ಗಮನಿಸಿದರೆ ಮುಂದಿನ ೪-೫ ದಶಕಗಳಲ್ಲಿ ಜಗತ್ತಿನ ಅತಿಹೆಚ್ಚು ಜನರು ವಾಯುಸಾರಿಗೆಯನ್ನೇ ಹೆಚ್ಚು ಉಪಯೋಗಿಸುವುದು ನಿಶ್ಚಿತ. ಆರಂಭದಲ್ಲಿ ಬಸ್ಸು, ಕಾರು, ಲಾರಿ ಸೇರಿದಂತೆ ಇತರ ವಾಹನಗಳು ಸರ್ಕಾರದ ಸ್ವತ್ತುಗಳಾಗಿದ್ದವು ಅಥವಾ ಅತೀ ಶ್ರೀಮಂತರ ಸ್ವತ್ತಾಗಿದ್ದವು. ಈಗ ಅದು ಸಾಮಾನ್ಯರೂ ಹೊಂದುವಂತಾಗಿದೆ. ಹೀಗೆಯೇ ಈಗಿರುವ ವಿಮಾನ- ಹೆಲಿಕಾಪ್ಟರ್ ಗಳೂ ಮುಂದೊಂದು ದಿನ ಸರ್ವ ಸಾಮಾನ್ಯರ ಕೈಗೆಟುಕುವಂತಾಗಿ, ಅದು ವ್ಯಾಪಕ ಸಾರಿಗೆಯ ಸಾಧನಗಳಾಗಿ ಪರಿವರ್ತಿತವಾಗುವ ಸಂಭಾವ್ಯತೆಗಳು ನಿಚ್ಚಳವಾಗಿದೆ. ತಂತ್ರಜ್ಞಾನದ ಮಿಂಚಿನ ವೇಗವು ಮುಂದಿನ ೫೦ ವರ್ಷಗಳಲ್ಲಿ ಈ ಜಗತ್ತಿನ ಸಂಪೂರ್ಣ ಚಿತ್ರಣವನ್ನೇ ಬದಲಿಸಲಿದೆ. ನಾವು ಇಂದು ತಿರುಗಾಡುವ ವಾಹನ, ಮನೆ, ಸಂಬಂಧ ಸ್ವರೂಪ, ಉಡುಗೆ, ತೊಡುಗೆ, ಸಂಪ್ರದಾಯ, ಹುಟ್ಟು, ಮದುವೆ ,ಮಸಣದವರೆಗಿನ ಪಯಣವು ಸೇರಿದಂತೆ ಸಾಕಷ್ಟು ಸಾಮಾಜಿಕ-ಕೌಟುಂಬಿಕ ಜೀವನದ ವಸ್ತು-ವಿಚಾರಗಳು ಅಣಕ, ಕುಹಕ, ವ್ಯಂಗ್ಯಗಳಿಗೆ ಕಾರಣವಾಗಲಿದೆ. ಗತಿಸಿದ ಮಾನವ ಪೀಳಿಗೆಗಳಲ್ಲಿ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಯವರಿಗೆ ಅಷ್ಟು ಜೀವನಶೈಲಿಯ ವ್ಯತ್ಯಾಸ ಬರುತ್ತಿರಲಿಲ್ಲ. ಸ್ವಲ್ಪ ಬದಲಾವಣೆಯೇ ಇರುತ್ತಿದ್ದರಿಂದ ಅದು ಕಾಲದ ಸಹಜತೆಯಲ್ಲಿ ಸರಿದೂಗಿಸಲ್ಪಡುತ್ತಿತ್ತು. ಜೀವನಶೈಲಿ ಮತ್ತು ನಾಗರಿಕತೆಯ ಸ್ವರೂಪ ಹಿಂದೆಂದೂ ಕಂಡುಕೇಳರಿಯದಷ್ಟು ವೇಗದಲ್ಲಿ ಈಗ ಬದಲಾವಣೆಯಾಗುತ್ತಿರುವುದರಿಂದ ಈಗಿನ ಪೀಳಿಗೆಗೂ ಮುಂದಿನ ೪೦-೫೦ ವರ್ಷಗಳ ನಂತರದ ಪೀಳಿಗೆಗೂ ಬಹುದೊಡ್ಡ ಜನಜೀವನ ಶೈಲಿಯ ಅಂತರವೇರ್ಪಡುವುದು ಖಚಿತ.
ಅತಿಯಾದ ಐಷಾರಾಮಿತನ ಬಯಕೆ ಮತ್ತು ಪ್ರಕೃತಿಯೊಂದಿಗಿನ ಸಮತೋಲನ ತಪ್ಪಿಹೋಗಿ ಮುಂದಿನ ಪೀಳಿಗೆ ಪಡಬಾರದ ಪಾಡು ಪಡುವ ಸಾಧ್ಯತೆಗಳು ಹೆಚ್ಚು. ವಿಜ್ಞಾನದ ಅಮಲಿನಿಂದಾಗಿ ಶತಮಾನಗಳಿಂದ ಜಾರಿಯಲ್ಲಿದ್ದ ಬಹುತೇಕ ಜೀವಸ್ನೇಹಿ ಮತ್ತು ಪ್ರಕೃತಿದತ್ತ ಸಂಪ್ರದಾಯಗಳು ನೇಪಥ್ಯಕ್ಕೆ ಸರಿಯಲಿವೆ. ಪ್ರಾಣಿ ಪಕ್ಷಿಗಳು ಸೇರಿದಂತೆ ಪ್ರಕೃತಿಯ ಪ್ರತಿಯೊಂದು ಜೀವ-ಜಡ ಸೃಷ್ಟಿಯು, ಮಾನವ ಬದುಕಿಗೆ ಪೂರಕವಾದದು ಎಂಬ ಜ್ಞಾನದ ಮೇಲೆ ಮೆಲ್ಲಮೆಲ್ಲನೆ ಕಗ್ಗತ್ತಲೆಯ ಕಾರ್ಮೋಡ ಕವಿಯಲಿದೆ. ಪ್ರಾಣಿ ಪಕ್ಷಿಗಳನ್ನು ಕೇವಲ ಪ್ರಾಣಿಸಂಗ್ರಹಾಲಯ-ಪಕ್ಷಿಧಗಳಲ್ಲಿ ಮಾತ್ರವೇ ಕಾಣುವಂತಾಗಬಹುದು. ಈ ಹಿಂದಿನ ಬಹುತೇಕ ಕಾಲಮಾನ ಮತ್ತು ಪ್ರಸ್ತುತ ಕಾಲಮಾನದಲ್ಲಿ ಪ್ರಜೆಗಳು ಸರ್ಕಾರವನ್ನು ಎಷ್ಟು ಬೇಕೋ ಅಷ್ಟೇ ಅವಲಂಬಿಸಿರುವವರು. ಆದರೆ ಈಗ ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ಕಾರಣದಿಂದ ಎಲ್ಲರಿಗೂ ಸರ್ಕಾರದ ಸೇವೆ ಮತ್ತು ಕಾರ್ಯಗಳ ಬಗ್ಗೆ ಜ್ಞಾನ ಮೂಡಿರುವುದರಿಂದ ಬರಲಿರುವ ಕಾಲದಲ್ಲಿ ಪ್ರತಿಯೊಬ್ಬರು ಸರ್ಕಾರದ ಸವಲತ್ತು ಮತ್ತು ಸಹಾಯವನ್ನೇ ಹೆಚ್ಚು ಆಶಿಸಿ ಬದುವಂತಾಗಬಹುದು. ಗಂಡು ಹೆಣ್ಣಿನ ಅನುಪಾತ ವ್ಯತ್ಯಯದಿಂದಾಗಿ ಸ್ವಯಂವರ ಪದ್ಧತಿಯ ತತ್ಸಮಾನ ರೂಪ ಕಂಡುಬರಬಹುದು. ಹೀಗಾದರೆ ವಧುದಕ್ಷಿಣೆಯು ವರದಕ್ಷಿಣೆಯ ಸ್ಥಾನದಲ್ಲಿರಲಿದೆ. ಧಾರ್ಮಿಕ ನಾಯಕರು ಕಾಮಿಡಿ ಪೀಸ್ ಗಳಾಗುವರು. ಈಗಿನ ಸುದೀರ್ಘ ಕ್ರಮಬದ್ಧ ಶಿಕ್ಷಣ ಮರೆಯಾಗಿ ಬದುಕಿನ ಆರಂಭದ ೧೫-೨೦ ವರ್ಷಗಳಲ್ಲಿ ಎಲ್ಲ ಮಾದರಿಯ ಶಿಕ್ಷಣ ಮುಗಿಯುವಂತಾಗಬಹುದು. ವೈವಾಹಿಕ ಬಂಧನಗಳ ಅವಧಿ ಕಿರಿದಾಗಲಿದೆ. ವ್ಯಾಪಕ ಅಂತರ್ಜಾತೀಯ ವಿವಾಹಗಳಾಗಬಹುದು. ಪ್ರಜೆಗಳೆಲ್ಲರೂ ಸರ್ಕಾರದೊಂದಿಗೆ ನೇರ ಸಂಪರ್ಕದಲ್ಲಿರುವುದರಿಂದ ಆಡಳಿತದವರಿಗೆ ಕಷ್ಟವಾಗುವುದು. ಕೌಟುಂಬಿಕ ಸಂಬಂಧಗಳು ವ್ಯಾವಹಾರಿಕ ಸ್ವರೂಪದಲ್ಲಿರಲಿದೆ. ದೇಶ ದೇಶಗಳ ನಡುವೆ ಈಗಿರುವ ಅಂತರ ಕಡಿಮೆಯಾಗಿ ಹೆಚ್ಚುಕಡಿಮೆ ಮುಕ್ತ ಮತ್ತು ಸುಲಭ ಸಂಚಾರ ನಿಯಮಗಳು ಜಾರಿಗೆ ಬರುವುದು. ಸಾಂಪ್ರದಾಯಬದ್ದ ಧರ್ಮಾಧಾರಿತ ದೇಶಗಳೆಲ್ಲವೂ ಈಗಿನ ಪಾಶ್ಚಾತ್ಯ ರಾಷ್ಟ್ರಗಳಿಂತಿರುವವು. ವೈದ್ಯಕೀಯ ಅತಿಯಾಗಿ ಮುಂದುವರಿದರೂ ವಿಪರೀತ ಹೊಸ ರೋಗಗಳು ಇರುವವು. ಒಂದೆರಡು ಮಕ್ಕಳ ಕುಟುಂಬ ನಿಯಂತ್ರಣಾ ವಿಧಾನದಿಂದಾಗಿ ಸೇನೆಗೆ ಸೇರುವ ಉತ್ಸಾಹ ಕಡಿಮೆಯಿರಬಹುದು. ೫೫ -೬೦ ವರ್ಷಗಳ ನಂತರ ಹೆಚ್ಚಿನವರ ತಂದೆ ತಾಯಿಗಳು ವೃದ್ಧಾಶ್ರಮದಲ್ಲಿರುವರು.

ವಿಪರೀತ ಸೌಂದರ್ಯವರ್ಧಕಗಳಿಂದಾಗಿ ಮತ್ತು ಸುಖದ ಬದುಕಿನಿಂದಾಗಿ ಕಪ್ಪು ಮೈಬಣ್ಣ ಬಹುತೇಕ ಮರೆಯಾಗಲಿದೆ. ದಿನಗೂಲಿಯಂತಹ ಸಾಮಾನ್ಯ ಕೆಲಸಗಳಿಗೆ ಜನರು ಸಿಗಲಾರರು. ಈಗಿನ ಬಿ ಎಮ್ ಡಬ್ಲ್ಯೂ ,ಜಾಗ್ವಾರ್ ನಂತಹ ಐಷಾರಾಮಿ ಕಾರುಗಳ ಅವಶೇಷಗಳು ಅಲ್ಲಲ್ಲಿ ಮಣ್ಣಿನಡಿಯಲ್ಲಿ ಕಾಣಬಹುದು. ಹೊಸ ಕಾರುಗಳ ವಿನ್ಯಾಸ ವ್ಯತ್ಯಾಸವನ್ನು ಹಳೇ ಬಿ ಎಮ್ ಡಬ್ಲ್ಯೂ ನಂತಿದೆ ಎಂದು ಲೇವಡಿ ಮಾಡಬಹುದು. ಎಲ್ಲರೂ ವಿದ್ಯಾವಂತರಾಗುವರು. ಪರಸ್ಪರ ವಿರುದ್ಧ ಲಿಂಗಿಗಳ ಸ್ನೇಹ ಬಿಟ್ಟರೆ ಉಳಿದ ಸಂಬಂಧಗಳು ಅಷ್ಟು ಗಾಢವಾಗಿ ಇರಲಾರವು. ಹೆಚ್ಚಿನವರಿಗೆ ತಮ್ಮ ಅಜ್ಜನ ಹೆಸರು ನೆನಪಿನಲ್ಲಿರದು. ಅಪಘಾತಗಳು ರಸ್ತೆಗಳಿಗಿಂತ ಹೆಚ್ಚಾಗಿ ವಾಯುಮಾರ್ಗದಲ್ಲಿ ಕಂಡುಬರಬಹುದು. ಮಾಲ್ ಗಳು ಮತ್ತು ಆನ್ ಲೈನ್ ವ್ಯಾಪಾರ ಬಿಟ್ಟರೆ ಪ್ರತ್ಯೇಕ ಮಾರಾಟ ವ್ಯವಸ್ಥೆ ಇರಲಾರದು. ಕೃಷಿಯು ಸರ್ಕಾರದ ಸುಪರ್ದಿಗೆ ಬರುವುದು. ಈಗಿನ ಬಹುತೇಕ ಕೃಷಿ ಭೂಮಿ ಕೈಗಾರಿಕೆಗಳ ಪಾಲಾಗುವುದು. ಸಾಮಾನ್ಯ ರೋಗಗಳಿಗೆ ಆನ್‌ಲೈನ್ ವೈದ್ಯಕೀಯ ವ್ಯವಸ್ಥೆ ಬರಬಹುದು. ಮದುವೆ ಸಂಪ್ರದಾಯ ಮರೆಯಾಗಿ “ಲಿವಿಂಗ್ ಟುಗೆದರ್ “ಪದ್ಧತಿ ವ್ಯಾಪಕವಾಗಬಹುದು. ಸಂಪ್ರದಾಯಬದ್ಧವಾಗಿ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಮದುವೆಯಾಗಿದ್ದು ವಿಶೇಷ ಸುದ್ದಿಯಾಗಬಹುದು. ಪತ್ರಿಕೆ-ಟಿವಿಗಳು ಹಳೇ ಕಾಲದ ಎಸ್ಟಿಡಿ ಬೂತ್ ಗಳು ಮರೆಯಾದಂತೆ ಮರೆಯಾಗಲಿವೆ. ವಿಪರೀತ ಸ್ಪರ್ಧಾತ್ಮಕ ಜೀವನಶೈಲಿಯಿಂದಾಗಿ ಬಹುತೇಕರು ಮಾನಸಿಕ ರೋಗಗಳಿಗೆ ತುತ್ತಾಗುವರು. ದೇಶ ಮತ್ತು ಧರ್ಮ ಪ್ರೇಮದ ಗಾಢತೆ ಗಣನೀಯವಾಗಿ ಕಡಿಮೆಯಾಗಬಹುದು. ರಾಜಕಾರಣ ವಿಪರೀತ ನಾಟಕೀಯವಾಗಲಿದೆ.೩-೪ ಸೂಪರ್ ಪವರ್ ರಾಷ್ಟ್ರಗಳು ಉದ್ಭವಿಸಬಹುದು. ಪ್ರಪಂಚದ ಹೆಚ್ಚುಕಡಿಮೆ ಎಲ್ಲ ರಾಷ್ಟ್ರಗಳು ಅಣ್ವಸ್ತ್ರ ರಾಷ್ಟ್ರಗಳಾಗುವವು. ಪ್ರಾದೇಶಿಕ ಮತ್ತು ರಾಷ್ಟೀಯ ಭಾಷೆಗಳು ನಶಿಸಿ ಆಂಗ್ಲ ಭಾಷೆ ಸಾರ್ವತ್ರಿಕವಾಗುವುದು. ಭಿಕ್ಷುಕರು ಇರಲಾರರು. ಸರ್ವರೂ ಶ್ರೀಮಂತರಾಗುವರು. ಜಗತ್ತಿನ ಸರ್ವ ಕೌಟುಂಬಿಕ ವ್ಯವಸ್ಥೆಯು ಕಣ್ಮರೆಯಾಗುವುದು. ಆಡಳಿತದ ಆಯಕಟ್ಟಿನ ಜಾಗದಲ್ಲಿ ಅಪ್ರಬುದ್ಧರು ಕುಳಿತುಕೊಳ್ಳುವರು.
ಇದಿಷ್ಟನ್ನು ಆಲೋಚಿಸಬೇಕಿದ್ದರೆ ವಿಶೇಷ ಪಾಂಡಿತ್ಯವಾಗಲಿ ಅಥವ ಪರಕಾಯ ಶಕ್ತಿಯ ಪ್ರವೇಶವಾಗಲಿ ಬೇಕಾಗಿಲ್ಲ. ಸಾಮಾನ್ಯನಿಗೆ ನಿಲುಕುವ ವಿಚಾರಗಳಿವು. ಜಗತ್ತಿನ ಸಮಸ್ತ ಚಲನವಲನಗಳ ಪ್ರಾಥಮಿಕ ಅಧ್ಯಯನದಿಂದ ನಿಕಟ ಭವಿಷ್ಯವನ್ನು ಸುಲಭವಾಗಿ ಅಂದಾಜಿಸಬಹುದು. ಜಗತ್ತು ನಿಬ್ಬೆರಾಗಾಗುವಂತೆ ಭವಿಷ್ಯ ಬರೆದ ನಾಸ್ಟ್ರಾಡಾಮಸ್ ಕೂಡ ತನ್ನ ಮನೆಯ ಕೋಣೆಯ ಮೂಲೆಯೊಂದರಲ್ಲಿ ರಾತ್ರಿಯಿಡೀ ಏಕಾಂತದಲ್ಲಿ ಕೂತು ಅದೇನೋ ಆಲೋಚಿಸುತ್ತಾ ಭವಿಷ್ಯವಾಣಿ ಬರೆಯುತ್ತಿದ್ದ. ಅದೊಂದು ಅತಿಮಾನುಷಿಕ ಶಕ್ತಿ ಎನ್ನುವುದಕ್ಕಿಂತ ಹೆಚ್ಚಾಗಿ ಅದೊಂದು ಅಧ್ಯಯನಶೀಲ ಆಲೋಚನಾಶಕ್ತಿಯಾಗಿರುವುದೇ ಹೆಚ್ಚು. ಆದರೂ ಜಾಗತಿಕವಾದ ನೈಜವೆನ್ನಬಹುದಾದ ಭವಿಷ್ಯವಾಣಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಅಲೌಕಿಕತೆ ಮತ್ತು ಅತೀಂದ್ರಿಯಗಳ ಗಣನೀಯ ಪ್ರಭಾವವನ್ನು ಕಾಣಬಹುದು. ಅದೇನೇ ಆದರೂ, ಪ್ರಾರ್ಥನೆ ಮತ್ತು ಇಚ್ಛಾಶಕ್ತಿ ಭವಿಷ್ಯ ಬದಲಿಸಬಲ್ಲದೆಂಬ ಮಾತೂ ಈ ಸಂದರ್ಭದಲ್ಲಿ ಗಮನಾರ್ಹ…
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ ) ಶಿವಮೊಗ್ಗ .
