ಪ್ರಥಮ ಮುದ್ರಣ : 1988
ಕರ್ನಾಟಕದ ರಾಜಮನೆತನಗಳ ರಾಣಿಯರನ್ನು ನೆನೆದರೆ ಅವರಲ್ಲಿ ಬಹಳ ಮುಖ್ಯವಾದ ಒಂದು ಹೆಸರು ಅಂದರೆ ಶಾಂತಲೆಯದು. ಈಕೆ ರಾಣಿ ಮಾತ್ರವಲ್ಲ, ನಾಟ್ಯರಾಣಿ ಕೂಡ. ತನ್ನ ಅದ್ಭುತ ಭರತನಾಟ್ಯ ಪ್ರತಿಭೆಯಿಂದ ಜಗತ್ಪ್ರಸಿದ್ಧಳಾಗಿ ಬೇಲೂರಿನ ದೇವಸ್ಥಾನದ ಅತಿ ಸುಂದರ, ಚಾರುತರ ಶಿಲಾಬಾಲಿಕೆಗಳ ಸೃಷ್ಟಿಗೆ ಸ್ಫೂರ್ತಿಯೂ, ಕಾರಣಕರ್ತೆಯೂ ಆದ ಅಜರಾಮರ ಸೌಂದರ್ಯರಾಣಿ ಇವಳು! ಕರ್ನಾಟಕದ ಇತಿಹಾಸ, ಕಲೆ ಮತ್ತು ಸಂಸ್ಕøತಿಗಳ ಯಾವ ಚರ್ಚೆಯೂ ಈ ರಾಣಿಯನ್ನು ಪ್ರಸ್ತಾಪಿಸದೆ ಪೂರ್ಣಗೊಳ್ಳುವುದಿಲ್ಲ. ಗಂಭೀರವಾದ ವಿದ್ವತ್ ಗ್ರಂಥಗಳು, ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳು, ಹೆಣ್ಣುಮಕ್ಕಳಿಗೆ-ನಾಟ್ಯಸಂಸ್ಥೆಗಳಿಗೆ ಇಡುವ ಹೆಸರುಗಳಿಂದ ಹಿಡಿದು ಕರ್ನಾಟಕದ ರಾಜಧಾನಿಯ ರೈಲ್ವೇ ನಿಲ್ದಾಣದ ಬಳಿ ಒಂದು ಸ್ಥಳ ಗುರುತಾಗಿಬಿಟ್ಟಿರುವ `ಶಾಂತಲಾ ಸಿಲ್ಕ್ ಹೌಸ್’ ತನಕ ರಾಜ್ಯದೆಲ್ಲೆಡೆ ಜನಜನಿತವಾಗಿರುವ ಹೆಸರೆಂದರೆ ಅದು ಹೊಯ್ಸಳರ ವಿಷ್ಣುವರ್ಧನನ ಪಟ್ಟಮಹಿಷಿಯದೇ ಅಲ್ಲವೇ!? ಈ ರಾಣಿಯ ಬಗ್ಗೆ ಇರುವ ಶಾಸನಗಳು ಇವಳ ಕೊಡುಗೆಯ ಮಹತ್ವಕ್ಕೆ, ಮತ್ತು ಈಕೆ ಪಡೆದಿದ್ದ ಜನಮನ್ನಣೆಗೆ ಸಾಕ್ಷಿಯಾಗಿವೆ. ಹಾಗೆಯೇ ತುಮಕೂರಿನ ಬಳಿಯ ಶಿವಗಂಗೆ ಬೆಟ್ಟದಲ್ಲಿನ ‘ಶಾಂತಲಾ ಡ್ರಾಪ್’ ಎಂಬ ಆತ್ಮಹತ್ಯೆಯ ಜಾಗವು ಈ ರಾಣಿಯ ಸಾವಿನ ಬಗ್ಗೆ ಹಬ್ಬಿರುವ ದುರಂತಕಥೆಗೆ ಸಾಕ್ಷಿಯಾಗಿದೆ.
ಶಾಂತಲೆಯ ಜೀವನ, ಪ್ರತಿಭೆ, ಕಲಾವೈಭವಗಳು ನಮ್ಮ ಸಾಹಿತಿಗಳ ಕಲ್ಪನಾಶಕ್ತಿಯನ್ನು ಎಷ್ಟು ಉದ್ದೀಪನಗೊಳಿಸಿವೆ ಅನ್ನುವುದಕ್ಕೆ ಆಕೆಯ ಬಗ್ಗೆ ರಚಿತವಾಗಿರುವ ಅನೇಕ ಸಾಹಿತ್ಯ ಕೃತಿಗಳು ಸಾಕ್ಷಿ. ಕೆ.ವಿ.ಅಯ್ಯರ್, ತ.ರಾ.ಸು., ಮ.ನ.ಮೂರ್ತಿ ಮೊದಲಾದವರು ಶಾಂತಲೆಯ ಜೀವನಕಥೆಯನ್ನು ತಮ್ಮ ಕಾದಂಬರಿಗಳಲ್ಲಿ ಹಿಡಿದಿಟ್ಟಿದ್ದಾರೆ. ಈ ಸಾಲಿಗೊಂದು ಸ್ತ್ರೀದೃಷ್ಟಿಕೋನದ ಕೃತಿ ಸೇರ್ಪಡೆ ಎಂದರೆ ಅದು ಶ್ರೀಮತಿ ವೈ.ಕೆ.ಸಂಧ್ಯಾಶರ್ಮ ಅವರ `ನೃತ್ಯ ಸರಸ್ವತಿ’ ಕಾದಂಬರಿ.

***
‘ನೃತ್ಯ ಸರಸ್ವತಿ’ ಕಾದಂಬರಿಯನ್ನು ಓದಿದ ಕೂಡಲೇ ಬರುವ ಮೊದಲ ಭಾವನೆಯೆಂದರೆ, ಈ ಕಾದಂಬರಿಯು ಶಾಂತಲೆಯನ್ನು ಕೇವಲ ಪಟ್ಟಮಹಿಷಿಯನ್ನಾಗಿ ನೋಡದೆ ಒಬ್ಬ ಅಪ್ಪಟ ಮಾನುಷಿಯನ್ನಾಗಿ ನೋಡಲು ಪ್ರಯತ್ನ ಮಾಡಿದೆ ಎಂಬುದು.
ಶಾಂತಲೆಯ ಜೀವನವನ್ನು ಗಮನಿಸಿದರೆ, ಅವಳ ಜೀವನರೇಖೆಯು ಬಲು ತೀಕ್ಷ್ಣವಾಗಿ, ರೊಂಯ್ಯನೆ ಏರಿ ಶೀಘ್ರವಾಗಿ ಒಂದು ಶಿಖರಬಿಂದುವನ್ನು ತಲುಪಿ ಕ್ರಮೇಣ ಇಳಿಯುತ್ತಾ ಇಳಿಯುತ್ತಾ ಘನಘೋರ ಪಾತಾಳವನ್ನು ತಲುಪುವ ವಿಸ್ಮಯ ವಿಷಾದನೀಯ ಪಥವನ್ನು ಹೊಂದಿದೆ. ಒಬ್ಬ ಸಾಮಾನ್ಯ ಹೆಗ್ಗಡೆಯ ಮಗಳಾಗಿದ್ದ ಶಾಂತಲೆಯು ಬಲಾಢ್ಯ ಹೊಯ್ಸಳ ಸಾಮ್ರಾಜ್ಯದ ಯುವರಾಜನ ಮನದನ್ನೆಯಾಗಿ, ಪಟ್ಟಮಹಿಷಿಯಾಗುವುದು ಎದ್ದು ಕಾಣುವ ಹಾಗೂ ಮೇಲ್ನೋಟಕ್ಕೆ ಅದೃಷ್ಟಫಲ ಎಂದು ಭಾಸವಾಗುವ, ಅವಳ ಯೌವನೋದಿತ ಜೀವನದಲ್ಲಿ ಘಟಿಸುವ ಒಂದು ಮುಖ್ಯ ಘಟನೆ. ಆದರೆ ಇಂತಹ `ವಿಧಿದಾತ ಕಾಣಿಕೆ’ಗೆ ಭಾಜನಳಾಗುವ ಯೋಗ್ಯತೆ, ಸಾಮರ್ಥ್ಯ ಹಾಗೂ ಪ್ರತಿಭೆಗಳು ಅವಳಿಗಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ.
ಶಾಂತಲೆಯ ಅದ್ಭುತ ನಾಟ್ಯಪ್ರತಿಭೆ, ತನಗೆ ದತ್ತವಾದ ಎಲ್ಲ ಪಾತ್ರಗಳನ್ನೂ (ರಾಜಮನೆತನದ ಸೊಸೆ, ರಾಜಪತ್ನಿ, ರಾಜನ ಹಿರಿಯ ರಾಣಿ, ಹಲವು ಸವತಿಯರಿದ್ದ ಪಟ್ಟಮಹಿಷಿ, ಆಡಳಿತಸ್ಥೆ ಇಂತಹ ವಿವಿಧ ಪಾತ್ರಗಳನ್ನು) ತುಂಬ ಜವಾಬ್ದಾರಿಯಿಂದ ನಿರ್ವಹಿಸಿದ ರೀತಿ, ರಾಜ್ಯದ ಆಡಳಿತದಲ್ಲಿ ಸಕ್ರಿಯವಾಗಿ, ಪ್ರಜಾವತ್ಸಲೆಯಾಗಿ ಆಕೆ ಭಾಗವಹಿಸಿದ ಸೊಗಸು, ಜನರಿಗೆ ತೆರಿಗೆಯ ಭಾರ ಹೊರಿಸಬಾರದೆಂದು ಹಿಂದು ಮುಂದು ನೋಡದೆ ತನ್ನ ಆಭರಣಗಳನ್ನು ಬಿಚ್ಚಿ ಕೊಟ್ಟ ಅವಳ ತ್ಯಾಗಮಯ ಸ್ವಭಾವ, ಚೆನ್ನಕೇಶವ ದೇವಸ್ಥಾನ, ಹಾಗೂ ಹೊಯ್ಸಳೇಶ್ವರ-ಶಾಂತಲೇಶ್ವರ ದೇವಸ್ಥಾನಗಳನ್ನು ಕಲಾತ್ಮಕವಾಗಿ ಕಟ್ಟಿಸಲು ಅವಳು ತೆಗೆದುಕೊಂಡ ಶ್ರಮ ಮತ್ತು ಅವಳ ವಾಸ್ತುಶಿಲ್ಪ ಜ್ಞಾನ, ರಾಜಕಾರ್ಯಗಳನ್ನು ಒಂದಿಷ್ಟೂ ಆಲಸ್ಯವಿಲ್ಲದೆ ನಿಭಾಯಿಸಿದ ರೀತಿ, ವೈಷ್ಣವ-ಜೈನ ಮತಗಳ ತಾತ್ವಿಕತೆಯನ್ನು ಕುರಿತ ಚರ್ಚೆಯಲ್ಲಿ ಅವಳು ತರ್ಕಬದ್ಧವಾಗಿ ವಾದ ಮಂಡಿಸುತ್ತಿದ್ದ ಜ್ಞಾನಸಿರಿ. ಹೀಗೆ ಏರುತ್ತಾ ಹೋಯಿತು ಅವಳ ಜೀವನ ರೇಖೆ. ಶಾಂತಲೆಗಿಂತ ಸುಖಿ ಇನ್ನು ಯಾರೂ ಇಲ್ಲವೇನೋ ಎಂಬ ಭಾವ ತರುವಂತಿತ್ತು ಅವಳ ವೈವಾಹಿಕ ಜೀವನದ ಪ್ರಾರಂಭಿಕ ವರ್ಷಗಳು!
ಮನುಷ್ಯರ ಜೀವನರೇಖೆ ಯಾವಾಗ ಏರುತ್ತದೋ, ಯಾವಾಗ ಇಳಿಯುತ್ತದೋ ಹೇಳಬಲ್ಲವರಾರು? ಅದು ಗೊತ್ತಿದ್ದರೆ ಬಹುಶಃ ವಿಧಿರಾಯನೊಬ್ಬನಿಗೆ ಗೊತ್ತಿರಬಹುದು.
ಶಾಂತಲೆಯ ಜೀವನರೇಖೆಯು ಎಷ್ಟು ಏರಿತೋ ಅಷ್ಟೇ ಪ್ರಮಾಣದಲ್ಲಿ ಕ್ರಮೇಣ ಇಳಿದದ್ದು ಆಕೆಯ ಬದುಕಿನ ದುರಂತ ವಾಸ್ತವ. ಹೀಗೆ ಇಳಿಯುವುದಕ್ಕೆ ಅವಳ ಕೆಲವು ನಿರ್ಧಾರಗಳು, ಅವಳು ನಂಬಿದ್ದ ತ್ಯಾಗಪ್ರಧಾನ ಜೀವನಮೌಲ್ಯಗಳು ಕಾರಣವಾದಂತೆ, ಪಿತೃಪ್ರಧಾನ ವ್ಯವಸ್ಥೆಯ ಬಹುಪತ್ನಿತ್ವ ಪದ್ಥತಿಯೂ ಕಾರಣವಾಗುತ್ತದೆ. ಪಟ್ಟಮಹಿಷಿಯಾದರೇನು, ಮನೆಮಟ್ಟಿಗಿನ ಗರತಿಯಾದರೇನು ಪುಟ್ಟವಿಧವೆಯಾದರೇನು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಎಂದಾದರೂ ನಿಜಗೆಲುವನ್ನು ಸಾಧಿಸಿದ್ದಾಳೇನು? ತನ್ನ ಹೃದಯ ಇಚ್ಛೆಪಟ್ಟಂತೆ ಬದುಕಿದ್ದಾಳೇನು? ತನಗೆ ಮಕ್ಕಳಾಗುತ್ತಿಲ್ಲ ಎಂಬ ಕೊರಗು ಪ್ರಾರಂಭವಾದಾಗ ಶಾಂತಲೆಯು, ತನ್ನ ಪತಿಯ ರಾಜವಂಶಕ್ಕೆ ವಾರಸು ಬೇಕು ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪಲ್ಲವರ ಗೋವಿಂದರಾಜನ ಮಗಳಾದ ರಾಜಕುಮಾರಿಯಾದ ಬಮ್ಮಲೆಯನ್ನು ತಾನೇ ಮುಂದೆ ನಿಂತು ಗಂಡನಿಗೆ ಮದುವೆ ಮಾಡಿಸುತ್ತಾಳೆ! ಬಹುಶಃ ಇಲ್ಲಿಂದಲೇ ಶಾಂತಲೆಯ ಜೀವನರೇಖೆಯ ಇಳಿಜಾರು ಪಯಣ ಪ್ರಾರಂಭವಾಯಿತು ಅನ್ನಿಸುತ್ತದೆ. ತಾನೇ ಪಟ್ಟಮಹಿಷಿಯಾಗಬೇಕೆಂಬ ಮಹದಾಸೆ ಹೊಂದಿದ್ದ ಬಮ್ಮಲೆ, ಶಾಂತಲೆಯಿರುವವರೆಗೂ ಅದು ಅಸಾಧ್ಯ ಎಂದು ಗೊತ್ತಾದಾಗ, ಶಾಂತಲೆಯ ಜೀವನವನ್ನು ನರಕ ಮಾಡಲು ತನ್ನ ಕೈಲಾದಷ್ಟು ಮಟ್ಟಿಗೆ ಪ್ರಯತ್ನಿಸುತ್ತಾಳೆ. ಬಮ್ಮಲೆಗಿದ್ದ ಭೈರಬ್ಬೆ ಎಂಬ ಮಂಥರೆಯಂತಹ ದಾಸಿ ಈ ದುಷ್ಟಕಾರ್ಯವನ್ನು ಇನ್ನಷ್ಟು ಪ್ರಬಲಗೊಳಿಸುತ್ತಾಳೆ.

ಸವತಿಯರನ್ನು ತಂಗಿಯರಂತೆ ಕಾಣಬೇಕೆಂಬ ಶಾಂತಲೆಯ `ಸದ್ಗುಣ’ವು’ (ಬಮ್ಮಲೆಯ ಕಾರಣದಿಂದಾಗಿ) ಅವಳಿಗೇ ಮುಳುವಾಗುತ್ತದೆ. ಇದರೊಂದಿಗೆ ಆ ಕಾಲದ ಜೈನ-ವೈಷ್ಣವ ಮತಗಳ ನಡುವಿನ ತಾಕಲಾಟಗಳು, ರಾಜಕಾರ್ಯ-ಆಡಳಿತಗಳಲ್ಲಿ ಮುಳುಗಿ ದಾಂಪತ್ಯ ಜೀವನವನ್ನು ಶಾಂತಲೆಯು ತುಸು ನಿರ್ಲಕ್ಷಿಸಿದ್ದು, ಗಾಯದ ಮೇಲೆ ಬರೆಯೆಂಬಂತೆ ವಿಷ್ಣುವರ್ಧನನು ರಾಜ್ಯವಿಸ್ತರಣೆಯ ಮಹಾತ್ವಾಕಾಂಕ್ಷೆಯಿಂದ, ಶಾಂತಲೆಯ ಬಳಿ ಮುಕ್ತವಾಗಿ ಚರ್ಚಿಸದೆ ದೇವಕಿ, ರಾಜಲೆ, ಬಿಜ್ಜಲೆಯರನ್ನು ವಿವಾಹವಾದದ್ದು, ಶಾಂತಲೆಯು ತನ್ನ ಮಗ ಬಿಟ್ಟಿಯಣ್ಣನನ್ನು ಒಂದು ಭಾವುಕ ಕ್ಷಣದಲ್ಲಿ ಗರುಡನನ್ನಾಗಿಸಿದ್ದು (ತನ್ನ ಒಡೆಯನ ರಕ್ಷಣೆಗಾಗಿ ಪ್ರಾಣ ಕೊಡುವ ವೀರಭಟ), ತನ್ನ ಗಂಡನು ಬೇರೆಡೆ ಯುದ್ಧ ಮಾಡಲು ಹೋಗಿದ್ದಾಗ ಇನ್ನೂ ಪ್ರೌಢವಯಸ್ಕನಾಗದಿದ್ದ ಮಗನನ್ನು ರಾಜ್ಯದ ಮೇಲೆ ಆಕ್ರಮಣ ಮಾಡಿದವರ ವಿರುದ್ಧ ಯುದ್ಧ ಮಾಡಲು ಕಳಿಸಿ ಅವನು ಸಾಯಲು ಪರೋಕ್ಷವಾಗಿ ಕಾರಣಳಾದದ್ದು, ಇವೆಲ್ಲದರಿಂಗಾಗಿ ಶಾಂತಲೆಯ ಮತ್ತು ವಿಷ್ಣುವರ್ಧನನ ನಡುವೆ ತೀವ್ರ ಮನಸ್ತಾಪ ಉಂಟಾದದ್ದು … ಈ ಎಲ್ಲ ಬೆಳವಣಿಗೆಗಳು ಶಾಂತಲೆಯ ಜೀವನಾಸಕ್ತಿಯನ್ನೇ ಕಡಿಮೆ ಮಾಡಿಬಿಡುತ್ತವೆ. ಸವತಿ ಬಮ್ಮಲೆಯು ಪ್ರತಿಯೊಂದು ವಿಷಯದಲ್ಲೂ ಶಾಂತಲೆಗಿದ್ದ ಸ್ಥಾನಮಾನಗಳಿಗಾಗಿ ಕರುಬಿ ಅವುಗಳನ್ನು ಕಿತ್ತುಕೊಳ್ಳಲು ಚಾತಕಪಕ್ಷಿಯಂತೆ ಕಾಯುತ್ತಾ ಒಂದೊಂದೇ ಪದವಿ, ಜವಾಬ್ದಾರಿಗಳನ್ನು ಕಿತ್ತುಕೊಳ್ಳುತ್ತಾ ಹೋದಂತೆ, ತನ್ನ ತವರಾದ ಶಿವಗಂಗೆಗೆ ಹೋಗಿ ಸಲ್ಲೇಖನ ವ್ರತವನ್ನು ಕೈಗೊಂಡು ದೇಹತ್ಯಾಗ ಮಾಡುವ ನಿರ್ಧಾರ ಮಾಡುತ್ತಾಳೆ ಶಾಂತಲೆ (ಶಿವಗಂಗೆಯಲ್ಲಿನ ಆತ್ಮಹತ್ಯೆಯ ಪ್ರಸ್ತಾಪವನ್ನು ಲೇಖಕಿಯು ಈ ಕಾದಂಬರಿಯಲ್ಲಿ ಮಾಡಿಲ್ಲ). ಮೆಚ್ಚಿನ ವಧುವಾಗಿ ಅರಮನೆಗೆ ಕಾಲಿಟ್ಟಿದ್ದವಳು ಈಗ `ನಾನು ಯಾರಿಗೂ ಬೇಡದವಳು’ ಎಂಬ ಭಾರವಾದ ಮನಸ್ಸಿನೊಂದಿಗೆ, ಕಾದಂಬರಿಯ ಕೊನೆಯ ಸನ್ನಿವೇಶವಾಗಿ ಅರಮನೆಯನ್ನು ತೊರೆಯುತ್ತಾಳೆ ; ತನ್ನ ಓದುಗರಲ್ಲಿ ಒಂದು ವಿಷಣ್ಣಭಾವವನ್ನು ಮೂಡಿಸುತ್ತಾಳೆ ಈ `ನೃತ್ಯ ಸರಸ್ವತಿ’.
ಈ ಕಾದಂಬರಿಯನ್ನು ಓದುವಾಗ ಗಮನಿಸಬೇಕಾದ ಒಂದು ಮುಖ್ಯಸಂಗತಿ ಅಂದರೆ ಶಾಸನಗಳಿಗೆ ಮತ್ತು ಆ ಶಾಸನಗಳನ್ನು ಬರೆದ ಬೋಕಿಮಯ್ಯನಿಗೆ ಇದರಲ್ಲಿ ಪ್ರಾಮುಖ್ಯ ನೀಡಿರುವ ರೀತಿ. ತನ್ನ ಅದ್ಭುತ ವ್ಯಕ್ತಿತ್ವದಿಂದ ಶಾಂತಲೆ ಗಳಿಸಿದ ಬಿರುದುಗಳೆಷ್ಟು!! ಅಬ್ಬ ಅನ್ನಿಸುವಂತೆ ಅವುಗಳ ಸರಮಾಲೆಯನ್ನು ಓದುಗರಿಗೆ ಈ ಕಾದಂಬರಿಯು ಪರಿಚಯಿಸುತ್ತದೆ. ದಯಾರಸಾಮೃತ ಪೂರ್ಣೆ, ಮನೋರಾಗ ಸಾಗರಾಭಿವರ್ಧನ ಚಂದ್ರಲೇಖೆ, ಅಭಿನವ ರುಕ್ಮಿಣೀದೇವಿ, ಪತಿಹಿತ ಸತ್ಯಭಾಮೆ, ಬಿಣ್ಪಿಂದಂ ಭೂಮಿದೇವತೆ, ವಿವೇಕೈಕ ಬೃಹಸ್ಪತಿ – ಪ್ರತ್ಯುತ್ಪನ್ನ ವಾಚಸ್ಪತಿ, ಸಕಳ ಸಮಯ ರಕ್ಷಾಮಣಿ, ಸಮ್ಯಕ್ತ್ವ ಚೂಡಾಮಣಿ, ರಣವ್ಯಾಪಾರದೊಳ್ ಖಡ್ಗದೇವತೆ, ಜಿನಗಂಧೋದಕ ಪವಿತ್ರೀಕೃತೋತ್ತಮಾಂಗೆ, ಜಿನ ಸಮಯ ಸಮುದಿತ ಪ್ರಾಕಾರೆ, ಭಲೇ ಉದ್ವ್ರುತ್ತ ಸವತಿ ಗಂಧವಾರಣೆ – ನೋಡಿ ಈ ಬಿರುದುಗಳನ್ನು! ನಿಜ, ಅವುಗಳಲ್ಲಿ ಕೆಲವು ಬಿರುದುಗಳು ಗಂಡಾಳಿಕೆಯ ವ್ಯವಸ್ಥೆಯ ಘಾಟುವಾಸನೆ ಹೊಂದಿವೆ, ಆದರೆ ಎಷ್ಟೊಂದು ಶಾಸನಗಳಲ್ಲಿ ಎಷ್ಟೊಂದು ಬಿರುದುಗಳು ಶಾಂತಲೆಗಿದ್ದವು ಎಂಬುದು ತನ್ನ ನಾಡಿನಲ್ಲಿ ಅವಳಿಗಿದ್ದ ಗೌರವ, ಸ್ಥಾನಮಾನಗಳಿಗೆ ಸಾಕ್ಷಿ ಅಲ್ಲವೇ?
ಶಾಂತಲೆಯ ಗುಣವಿಶೇಷಗಳಿಂದ ಪ್ರಭಾವಿತನಾಗಿ ಇಷ್ಟೆಲ್ಲ ಬಿರುದುಗಳನ್ನು ಶಾಸನಗಳಲ್ಲಿ ಬರೆದು, ಅವಳ ಜೊತೆ ಜೀವನವಿಡೀ ಸಾಕ್ಷಿಪ್ರಜ್ಞೆಯಂತೆ ಇದ್ದ ಬೋಕಿಮಯ್ಯ, ಅವಳು ಕೊನೆಯಲ್ಲಿ ತೀರಾ ಮನನೊಂದು ರಾಜ್ಯವನ್ನು ಬಿಟ್ಟು ಹೋಗುವಾಗಲೂ ಅವಳ ಜೊತೆಯೇ ಹೊರಟುಬಿಡುತ್ತಾನೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಡಾ.ಹಂಪನಾ ಅವರು ಬೋಕಿಮಯ್ಯನ ಪಾತ್ರಸೃಷ್ಟಿಯ ವಿಶಿಷ್ಟತೆಯನ್ನು ಪ್ರಸ್ತಾಪಿಸಿದ್ದಾರೆ.
ನಾವು ಈ ಕಾದಂಬರಿಯನ್ನು ಕರ್ನಾಟಕ ಚರಿತ್ರೆಯ ಒಂದು ಸಾಹಿತ್ಯರೂಪೀ ಪುಟ ಎಂದು ಮಾತ್ರವಲ್ಲದೆ, ಸುಮಾರು ಎಂಟು ನೂರು ವರ್ಷಗಳ ಹಿಂದಿನ ಗಂಡಾಳಿಕೆಯ ಸಮಾಜದಲ್ಲಿ ಹೆಣ್ಣು ಎಷ್ಟೇ ಪ್ರತಿಭಾವಂತೆಯಾಗಿದ್ದರೂ, ಸಕಲ ಗುಣ ಸಂಪನ್ನೆಯಾಗಿದ್ದರೂ ಅವಳ ಬಾಳು ಹೇಗೆ ಅಧಃಪತನಕ್ಕಿಳಿಯುವ ಸಾಧ್ಯತೆ ಹೊಂದಿತ್ತು ಎಂಬುದರ ಚಿತ್ರಣವಾಗಿಯೂ ಓದಬಹುದು.
ಕವಯಿತ್ರಿ, ಕಥೆಗಾರ್ತಿ, ರಂಗಕರ್ಮಿ, ಕಲಾವಿಮರ್ಶಕಿಯಾಗಿರುವ, ಭರತನಾಟ್ಯ ಕಾರ್ಯಕ್ರಮಗಳನ್ನು ಕುರಿತು ಸಾವಿರಕ್ಕೂ ಹೆಚ್ಚು ವಿಮರ್ಶೆ ಬರೆದಿರುವ ಶ್ರೀಮತಿ ವೈ.ಕೆ.ಸಂಧ್ಯಾಶರ್ಮ ಅವರು ಸೃಷ್ಟಿಶೀಲ ಪ್ರತಿಭೆಯುಳ್ಳವರು. `ನೃತ್ಯ ಸರಸ್ವತಿ’ ಕಾದಂಬರಿಯಲ್ಲಿ ಚರಿತ್ರೆಯ ಚೌಕಟ್ಟನ್ನು ಇಟ್ಟುಕೊಂಡೇ ಸನ್ನಿವೇಶ ನಿರ್ಮಾಣದಲ್ಲಿ ಹಾಗೂ ನಾಟಕೀಯತೆಯನ್ನು ತರುವುದರಲ್ಲಿ ಕಲ್ಪನೆಯನ್ನು ಗರಿಗೆದರಿಸಿ, ಶಾಂತಲೆಯ ಪಾತ್ರವನ್ನು ಸ್ಫುಟಗೊಳಿಸಿದ್ದಾರೆ. ಶಾಸನಗಳಲ್ಲಿ ಬರುವ ಶಾಂತಲೆಯ ಬಿರುದುಗಳನ್ನು ಬೋಕಿಮಯ್ಯನ ಪಾತ್ರಸೃಷ್ಟಿಯ ಮೂಲಕ ಸೃಜನಶೀಲವಾಗಿ ಬಳಸಿಕೊಂಡಿದ್ದಾರೆ. ಹದವರಿತ ಭಾಷಾಬಳಕೆ ಇವರದು. ಬಮ್ಮಲೆಯ ಮಗಳು ಪದ್ಮಲೆಯ ಸಾವು, ಶಾಂತಲೆಯ ಮಗ ಬಿಟ್ಟಿಯಣ್ಣನ ಸಾವು, ಶಾಂತಲೆಯು ನಾಟ್ಯಶಾಲೆಯನ್ನು ಸ್ಥಾಪಿಸುವ ಸಂದರ್ಭ, ಶಿಲ್ಪಿಗಳು ನಾಟ್ಯ ಕಾರ್ಯಕ್ರಮವನ್ನು ನೋಡಿ ವಿಗ್ರಹಗಳಲ್ಲಿ ಮೂಡಬೇಕಾದ ಅಂಗಭಂಗಿಗಳನ್ನು ಗುರುತು ಹಾಕಿಕೊಳ್ಳುವುದು … ಇಂತಹ ಹಲವು ಸಂದರ್ಭಗಳನ್ನು ಸೃಜನಶೀಲವಾಗಿ ಸೃಷ್ಟಿಸಿಕೊಂಡು ಈ ಕಾದಂಬರಿಯ ನಾಟಕೀಯ ಹಾಗೂ ಭಾವನಾತ್ಮಕ ಸಾಧ್ಯತೆಗಳನ್ನು ಹೆಚ್ಚಿಸಿದ್ದಾರೆ. ಇದು ಸಿನಿಮಾವೊಂದರ ಚಿತ್ರಕಥೆಯಾಗಿ ಮೈತಳೆದು ಕಾದಂಬರಿಯ ರೂಪ ತಳೆದ ಸಾಹಿತ್ಯಕೃತಿ ಎಂಬುದನ್ನು ಮನಸ್ಸಿಗೆ ತೆಗೆದುಕೊಂಡಾಗ ಲೇಖಕಿಯ ರಚನಾಕ್ರಮದ ತರ್ಕವು ನಮಗೆ ಅರ್ಥವಾಗುತ್ತದೆ. ಇವರು ಚಿತ್ರಿಸಿದ ಶಾಂತಲೆಯ ಪಾತ್ರವು ಓದುಗರ ಮನಸ್ಸನ್ನು ಮುಟ್ಟುವುದರಲ್ಲಿ ಸಫಲವಾಗುತ್ತದೆ.
ಲೇಖಕಿ ವೈ.ಕೆ.ಸಂಧ್ಯಾ ಶರ್ಮ ಅವರಿಗೆ ಅಭಿನಂದನೆಗಳು.
- ಡಾ.ಎಲ್.ಜಿ.ಮೀರಾ – ಬೆಂಗಳೂರು.
