ಮಹಾ ಮಾನವತಾವಾದಿ ಬಾಪೂಜಿ

“ನಾನು ಪ್ರಥಮ ದರ್ಜೆ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸಲು ಅರ್ಹನಾಗಿದ್ದೇನೆ. ಟಿ ಸಿ ಅವರಿಗೆ ಪ್ರಯಾಣಿಸಲು ಅವಕಾಶ ನೀಡಲಿಲ್ಲ ಮತ್ತು ಈ ಕಂಪಾರ್ಟ್ಮೆಂಟ್ ಬಿಳಿಯರಿಗೆ ಮಾತ್ರ ಎಂದು ಹೇಳಿದನು. ಇತರೆ ಮತ್ತು ಕಪ್ಪು ಜನರು ಮೂರನೇ ದರ್ಜೆಯ ಕಂಪಾರ್ಟ್‌ಮೆಂಟ್‌ನಲ್ಲಿ ಮಾತ್ರ ಪ್ರಯಾಣಿಸಬೇಕು ಗಾಂಧೀಜಿ ಪ್ರತಿಭಟಿಸಿದರು. ಅರವಿಂದ ಕುಲಕರ್ಣಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

“Genaration to come will scare beleive that such a one as this ever in flesh and blood walked upan this earth ”

“ಇಂತಹ ಮಹಾನ್ ವ್ಯಕ್ತಿ ಮತ್ತು ಅಸಾಧಾರಣ ವ್ಯಕ್ತಿ ಭವಿಷ್ಯದ ಪೀಳಿಗೆಯವರು ಅಂತಹ ವ್ಯಕ್ತಿ ನಿಜವಾಗಿಯೂ ಬದುಕಿದ್ದನು ಮತ್ತು ರಕ್ತ ಮಾಂಸಗಳಿಂದ ಕೂಡಿದ್ದ ಮನುಷ್ಯ ಈ ಭೂಮಿಯ ಮೇಲೆ ಓಡಾಡಿದ್ದ ಎಂದು ಎಂಬುದನ್ನು ನಂಬಲು ಸಾಧ್ಯವಾಗುವುದಿಲ್ಲ”.

ಈ ಮಾತು ಮಹಾತ್ಮ ಗಾಂಧಿಯವರ ಬಗ್ಗೆ  ಜಗತ್ ಪ್ರಸಿದ್ಧ  ವಿಜ್ಞಾನಿ “ಆಲ್ಬರ್ಟ್ ಐನ್ಸ್ಟೀನ್ ” ಉದ್ಗಾರ ಮಾಡಿದ್ದಾನೆ. ಗಾಂಧೀಜಿಯವರ ಜೀವನ ಮತ್ತು ತತ್ವದಿಂದ ಪ್ರೇರೇಪಣೆ ಹೊಂದಿದಂತವರು ಅನೇಕರು ಅವರಲ್ಲಿ ಮಾರ್ಟಿನ್ ಲೂಥರ್ ಕಿಂಗ್( ಜೂನಿಯರ್) ನೆಲ್ಸನ್ ಮಂಡೇಲಾ, ಬರಾಕ್ ಒಬಾಮಾ, ದಲೈಲಾಮ ಪರ್ಲ್ ಬಕ್,  ರವೀಂದ್ರನಾಥ್ ಟಾಗೋರ್ ಮತ್ತು  ಇನ್ನೂ ಅನೇಕರು.

ಗಾಂಧೀಜಿಯವರು ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ವ್ಯಾಸಂಗ ಮಾಡಿ ಭಾರತಕ್ಕೆ ಬಂದ ಮೇಲೆ ಪ್ರಪ್ರಥಮವಾಗಿ ಬೊಂಬಾಯಿಯಲ್ಲಿ ವಕೀಲ ವೃತ್ತಿ ಪ್ರಾರಂಭ ಮಾಡಿದರು. ತಮ್ಮ ಮೊದಲನೇ  ಮೊಕದ್ದಮೆ ಕುರಿತು ಅವರೇ ಅತ್ಯಂತ ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.  ಶ್ರೀಮತಿ ಮಾಮಿಬಾಯಿ ಎಂಬುವರ  ಮೊಕದ್ದಮೆಯನ್ನು ವಹಿಸಿಕೊಳ್ಳುತ್ತಾರೆ .ಅದೊಂದು ಸ್ಮಾಲ್ ಕಾಸ್ ದಾವೆ ಆಗಿತ್ತು. ಅದಕ್ಕೆ 30  ರೂಪಾಯಿ ಶುಲ್ಕವನ್ನು ತೆಗೆದುಕೊಂಡಿದ್ದರು . ಪ್ರತಿವಾದಿಯ ಪರವಾಗಿ ಪಾಟಿ ಸವಾಲು ಮಾಡಬೇಕಾಗಿತ್ತು. ಅದೊಂದು ಸುಲಭವಾದ ಮೊಕದ್ದಮೆ. ಆದರೆ ಗಾಂಧೀಜಿ ಅವರು ನ್ಯಾಯಾಲಯದಲ್ಲಿ ಎದ್ದು ನಿಂತರು. ಧೈರ್ಯ ಪೂರ್ತಿ ಮಾಯವಾಯಿತು. ತಲೆ ತಿರುಗಿದಂತೆ ಆಯಿತು ಮಾತುಗಳು ತೊದಲಿದವು .ಬೇರೆ ವಕೀಲರಿಗೆ ವಿನೋದ ಹುಟ್ಟಿಸಿರಬೇಕು. ಆಗ ಗಾಂಧೀಜಿಯವರು “ನಾನು ಈ ಮೊಕದ್ದಮೆಯನ್ನು ನಡೆಸಲು ಸಾಧ್ಯವಿಲ್ಲ.

ತೆಗೆದುಕೊಂಡು ಶುಲ್ಕ ವಾಪಸ್ಸು ಕೊಡುತ್ತೇನೆ ಅಂತ ಹೇಳಿ ಕುಳಿತುಬಿಟ್ಟರು. ಇದು ಅವರ ಮೊದಲನೇ ಮೊಕದ್ದಮೆ. ಯಾರೂ ಕೂಡ ತಮ್ಮ ಸೋಲನ್ನು ಪ್ರಾಂಜಲವಾಗಿ ಒಪ್ಪಿಕೊಳ್ಳುವುದಿಲ್ಲ. ಇದು ಗಾಂಧೀಜಿ ಅವರ ಪ್ರಾಮಾಣಿಕತೆ. ನಂತರ ಅವರ ಸಹೋದರ ಇವರಿಗೆ ಬೊಂಬಾಯಿಯಲ್ಲಿ ವಕೀಲಿ ವೃತ್ತಿ ಹೊಂದುವುದಿಲ್ಲ. ಬೇರೆ ವಕೀಲರಿಗೆ ಸಹಾಯಕರಾಗಿ ಹೋಗಲು ದಕ್ಷಿಣ ಆಫ್ರಿಕಗೆ ಕಳಿಸಿಕೊಡುವ ವ್ಯವಸ್ಥೆ ಮಾಡುತ್ತಾರೆ.

ಹೀಗಾಗಿ ಉದ್ಯೋಗ ಅರಸಿ ಇವರು ಹಡಗಿನಲ್ಲಿ ಆಫ್ರಿಕೆಗೆ ಪ್ರಯಾಣ ಬೆಳೆಸಿದರು. ಅಲ್ಲಿಂದ ಅವರು ಚಾರ್ಲ್ಸ್ ಟೌನ್  ಪಟ್ಟಣಕ್ಕೆ ಹೋಗುವಾಗ ಮೆರಿಟ್ಸ್‌ಬರ್ಗ್ ಸ್ಟೇಷನ್ ನಲ್ಲಿ  ರೈಲು ಪ್ರಯಾಣ ಮಾಡಲು ಮೊದಲನೆಯ ದರ್ಜೆ ಟಿಕೆಟ್ ತೆಗೆದುಕೊಂಡು ರೈಲು ಹತ್ತಿದರು.

ಅವರು ಮೊದಲ ದರ್ಜೆಯ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತರು. ಟಿಕೆಟ್ ಕಲೆಕ್ಟರ್ ಬಂದು ಗಾಂಧಿಜಿಯನ್ನು ನೋಡಿ ಒಬ್ಬ ಬಿಳಿಯನಲ್ಲದ ವ್ಯಕ್ತಿ ಮೊದಲ ದರ್ಜೆಯ ಕಂಪಾರ್ಟ್‌ಮೆಂಟ್‌ನಲ್ಲಿ  ಕುಳಿತಿದ್ದನ್ನು ಕಂಡು ಕುಪಿತನಾಗಿ ಮೂರನೇ ಕ್ಲಾಸ್ ಕಂಪಾರ್ಟ್‌ಮೆಂಟ್‌ಗೆ ನಡಿ, ನಡಿ ಎಂದು  ತಿರಸ್ಕಾರದಿಂದ ಹೋಗಲು ಹೇಳಿದನು. ಗಾಂಧೀಜಿ “ನಾನು ಪ್ರಥಮ ದರ್ಜೆ ಟಿಕೆಟ್ ಖರೀದಿಸಿದ್ದೇನೆ. ನಾನು ಒಬ್ಬ ಗೌರವಾನ್ವಿತ ಬ್ಯಾರಿಸ್ಟರ್ ಆಗಿದ್ದೇನೆ ” ಅಂತ ಹೇಳಿದರು.

“ನಾನು ಪ್ರಥಮ ದರ್ಜೆ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸಲು ಅರ್ಹನಾಗಿದ್ದೇನೆ. ಟಿ ಸಿ ಅವರಿಗೆ ಪ್ರಯಾಣಿಸಲು ಅವಕಾಶ ನೀಡಲಿಲ್ಲ ಮತ್ತು ಈ ಕಂಪಾರ್ಟ್ಮೆಂಟ್ ಬಿಳಿಯರಿಗೆ ಮಾತ್ರ ಎಂದು ಹೇಳಿದನು. ಇತರೆ ಮತ್ತು ಕಪ್ಪು ಜನರು ಮೂರನೇ ದರ್ಜೆಯ ಕಂಪಾರ್ಟ್‌ಮೆಂಟ್‌ನಲ್ಲಿ ಮಾತ್ರ ಪ್ರಯಾಣಿಸಬೇಕು ಗಾಂಧೀಜಿ ಪ್ರತಿಭಟಿಸಿದರು. ಟಿ ಸಿ “ನೀನು ಹೋಗದಿದ್ದರೆ ಪೊಲೀಸ್ ಕಾನ್ಸಟೇಬಲ್ ಕರೆಸುತ್ತೇನೆ” ಅಂತಾ ಹೇಳಿ ಪೊಲೀಸರಿಂದ ಟಿಸಿ ಬಲವಂತವಾಗಿ ಗಾಂಧೀಜಿಯನ್ನು ಅವರ ಲಗೇಜ್ ಸಮೇತ ಹೊರಗೆ ತಳ್ಳಿದ.

ಇಡೀ ರಾತ್ರಿ ಗಾಂಧೀಜಿ ಅವರು ಅವಮಾನದಿಂದ  ಪ್ಲಾಟ್‌ಫಾರ್ಮ್‌ನಲ್ಲಿ ಕಳೆದರು, ದಕ್ಷಿಣ ಆಫ್ರಿಕಾದ ಶೀತವನ್ನು ಅನುಭವಿಸಿದರು. ಅವರು ರೈಲ್ವೇ ಜನರಲ್ ಮ್ಯಾನೇಜರ್‌ಗೆ ಪತ್ರ ಬರೆದರು ಮತ್ತು  ಕಿರುಕುಳಕ್ಕೊಳಗಾದ ಕಾರಣ ಅವರು  ತಮ್ಮ ಅಹವಾಲು ಸಲ್ಲಿಸಿದರು. ಮತ್ತು ಈ ಬಗ್ಗೆ ಪತ್ರಿಕೆಯಲ್ಲಿ ಬರೆದರು.

ಕೆಲವು ಉದಾರವಾದಿ ಮತ್ತು ನಿಷ್ಪಕ್ಷಪಾತ ಪತ್ರಿಕಾ ವರದಿಗಾರರು  ಸ್ಥಳೀಯ ಸುದ್ದಿ ಪತ್ರಿಕೆಗಳಲ್ಲಿ ” ಒಬ್ಬ ಭಾರತೀಯ ಪ್ರಜೆ, ಗೌರವಾನ್ವಿತ ಬ್ಯಾರಿಸ್ಟರ್, ಆಗಿದ್ದರೂ  ಪ್ರಥಮ ದರ್ಜೆ ಟಿಕೇಟ್ ಹೊಂದಿದ್ದರೂ ಪ್ರಥಮ ದರ್ಜೆಯ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸಲು ಅವಕಾಶ ಕೊಡಲಿಲ್ಲ “ಎಂದು ಪ್ರಕಟಿಸಿದರು. ಇದು ಅನ್ಯಾಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಆ ಸಮಯದಲ್ಲಿ ಗಾಂಧಿಯವರು  ಬಿಳಿಯರು ಮತ್ತು ಕಪ್ಪು ಜನರು ಮತ್ತು ಭಾರತೀಯರ ನಡುವಿನ ಅಸಮಾನತೆಗೆ ಸಾಕ್ಷಿಯಾದರು. ಅವರು ಎಲ್ಲರಿಗೂ ಸಮಾನತೆಗಾಗಿ ಹೋರಾಡಲು ನಿರ್ಧರಿಸಿದರು.

ಅವರು ದಕ್ಷಿಣ ಆಫ್ರಿಕಾದಲ್ಲಿ ಅನೇಕ ಆಂದೋಲನ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರ ಕಠಿಣ ಪರಿಶ್ರಮದಿಂದಾಗಿ ಅನೇಕ ಸುಧಾರಣೆಗಳು ಸಂಭವಿಸಿದವು. ಗಾಂಧೀಜಿಯನ್ನು ರೈಲಿನಿಂದ ಹೊರಕ್ಕೆ ತಳ್ಳಿದ ಮೆರಿಟ್ಸ್‌ಬರ್ಗ್ ಸ್ಟೇಷನ್ ,ಈಗ ಅದೇ ನಿಲ್ದಾಣ 150 ವರ್ಷಗಳ ನಂತರ “ಮಹಾತ್ಮಾ ಗಾಂಧಿ ರೈಲು ನಿಲ್ದಾಣ “ಎಂದು ಮರುನಾಮಕರಣ ಮಾಡಲಾಗಿದೆ.

ಯಾವುದೇ ಒಳ್ಳೆಯ ಕೆಲಸ ಅಥವಾ ಒಳ್ಳೆಯ ಉದ್ದೇಶಕ್ಕಾಗಿ ಯಾವುದೇ ಆಂದೋಲನವು ಖಂಡಿತವಾಗಿಯೂ ಫಲಿತಾಂಶವನ್ನು ನೀಡುತ್ತದೆ. ಒಂದು ಕಾಲದಲ್ಲಿ ಸೌತ್ ಆಫ್ರಿಕಾ
ದೇಶದಲ್ಲಿ ಬಿಳಿಯರು ಮಾತ್ರ ಆಡಳಿತ ನಡೆಸುತ್ತಿದ್ದರೆ, ಅದೇ ದೇಶದಲ್ಲಿ ಮುಂದೆ “ನೆಲ್ಸನ್ ಮಂಡೇಲಾ ” ರಾಷ್ಟ್ರದ ಅಧ್ಯಕ್ಷರಾದರು.

ಮುಂದೆ ದಕ್ಷಿಣ ಆಫ್ರಿಕದಲ್ಲಿ ವಕೀಲಿವೃತ್ತಿ ಮಾಡುವಾಗ ಅವರ ಆತ್ಮವಿಶ್ವಾಸ ವೃದ್ಧಿಯಾಯಿತು ಬೊಂಬಾಯಿಯಲ್ಲಿ ನಡೆದ ವಕೀಲ ವೃತ್ತಿಯ ಕಹಿ ಅನುಭವ ಅವರಿಗೆ ಆಗಲಿಲ್ಲ. ನ್ಯಾಯಾಧೀಶರು ಅವರಿಗೆ ಅತ್ಯಂತ ಗೌರವ ಕೊಡುತ್ತಿದ್ದರು ಯಾಕೆಂದರೆ ಯಾವುದೇ ಸುಳ್ಳು ಮೊಕದ್ದಮೆಯನ್ನು ಗಾಂಧೀಜಿಯವರು ಸ್ವೀಕರಿಸುತಿದ್ದಿಲ್ಲ  ಹೀಗಾಗಿ ಅವರು ವಹಿಸಿದ ಎಲ್ಲ ದಾವೇಗಳು ಇವರ ಪರವಾಗಿಯೇ ತೀರ್ಮಾನ ಆಗುತ್ತಿದ್ದವು.

ಅಲ್ಲಿ  ಕರಾರು ಕೂಲಿಗಳು  ಜೀವನ ಅತ್ಯಂತ ಕಷ್ಟಮಯವಾಗಿತ್ತು. ದಕ್ಷಿಣ ಭಾರತದ ಅನೇಕ ಕೂಲಿಗಳು ಐದು ವರ್ಷದ ಕರಾರದ ಮೇಲೆ ದಕ್ಷಿಣ ಆಫ್ರಿಕಕ್ಕೆ ಬಂದಿದ್ದರು. ಒಮ್ಮೆ ಗಾಂಧೀಜಿಯವರು ತಮ್ಮ ವಕೀಲ ಆಫೀಸಿನಲ್ಲಿ ಕುಳಿತಾಗ ಒಬ್ಬ ಮನುಷ್ಯನು ಬಂದನು. ಅವನು ಮುಂದಿನ ಎರಡು ಹಲ್ಲುಗಳು ಮುರಿದಿದ್ದವು, ರಕ್ತ ಸುರಿಯುತ್ತಿತ್ತು ತನ್ನ ರುಮಾಲುವನ್ನು ಕೈಯಲ್ಲಿ ಹಿಡಿದುಕೊಂಡು ಆಫೀಸಿಗೆ ಬಂದ. ಅವನು ತಮಿಳು ಭಾಷಿಕ ಆಗಿದ್ದನು . ಅವನ ಹೆಸರು ಬಾಲಸುಂದರಂ.ಗಾಂಧೀಜಿಯವರು  ತಮ್ಮ ತಮಿಳು ಗುಮಾಸ್ತನ ಮುಖಾಂತರ ಅವನ ಸಮಸ್ಯೆ ಕೇಳಿದರು. ಅವನ ದಕ್ಷಿಣ  ಆಫ್ರಿಕೆಯ  ಬಿಳಿಯ ಮಾಲೀಕನು  ಅವನನ್ನು ಚೆನ್ನಾಗಿ ಹೊಡೆದಿದ್ದನು.

ಗಾಂಧೀಜಿಯವರು ಅವನನ್ನು ಕೂಡಲೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ. ಉಪಚಾರ ಮಾಡಿಸಿ ವೈದ್ಯರಿಗೆ ಒಂದು ಸರ್ಟಿಫಿಕೇಟ್ ಕೊಡಲು ವಿನಂತಿಸಿದರು. ಆ ಪ್ರಕಾರ ಸರ್ಟಿಫಿಕೇಟ್ ಪಡೆದು ನ್ಯಾಯಾಲಯಕ್ಕೆ ಮಾಲೀಕನ ವಿರುದ್ಧ ಮೊಕದ್ದಮೆ ಹೂಡಿದರು. ಆದರೆ ಕರಾರು ಕೂಲಿ ಕಾನೂನುಗಳು ಅತ್ಯಂತ ಅಮಾನುಷವಾಗಿದ್ದವು. ಅವು ಮಾಲೀಕರ ಪರವಾಗಿಯೇ ಇದ್ದವು. ಅಲ್ಲಿ ಮಾಲೀಕನನ್ನು ಬದಲಿಸಲು ಅವಕಾಶ ಇತ್ತು.  ಆ ಪ್ರಕಾರ ಗಾಂಧೀಜಿಯವರು ಆ ದುಷ್ಟ ಮಾಲೀಕರನ್ನು ಬಿಡಿಸಿ ಬೇರೆ ಮಾಲೀಕರಿಗೆ ಹಸ್ತಾಂತರ ಮಾಡುವಲ್ಲಿ ಯಶಸ್ವಿಯಾದರು. ಇಷ್ಟು ಮಾತ್ರ ಮಾಡಲು ಅವರಿಗೆ ಅವಕಾಶ ಇತ್ತು. ಈ ಪ್ರಸಂಗ ಆದಮೇಲೆ ಅನೇಕ ತಮಿಳು ಮತ್ತು ತೆಲುಗು ಕೂಲಿಕಾರರು ತಮ್ಮ ಅನೇಕ ಸಮಸ್ಯೆಗಳನ್ನು ತೆಗೆದುಕೊಂಡು ಗಾಂಧೀಜಿಯವರ ಹತ್ತಿರ ಬರತೊಡಗಿದರು. ಅವರಿಗೆ ಇಲ್ಲಿ ತಮಗೆ ಒಬ್ಬರು ಸಹಾಯ ಮಾಡುವವರು ಇದ್ದಾರೆ ಎನ್ನುವ ಭರವಸೆ ಆಯಿತು.
ದಕ್ಷಿಣ ಆಫ್ರಿಕಾದಲ್ಲಿ  ಇನ್ನೂ ಅನೇಕ ಸತ್ಯಾಗ್ರಹ ಮಾಡಿ ಅಲ್ಲಿಯ ಭಾರತೀಯರ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನ ಮಾಡಿದರು.
ಅವುಗಳಲ್ಲಿ

  • ಭಾರತೀಯರಿಗೆ ಮತಾಧಿಕಾರ
  • ಪೌಂಡ್ ತಲೆಗಂದಾಯ

ಇತ್ಯಾದಿ..

ಗೋಪಾಲ್ ಕೃಷ್ಣ ಗೋಖಲೆ ಅವರನ್ನು ಗಾಂಧೀಜಿಯವರು ಗುರು ಎಂದು ಗೌರವ ಕೊಡುತ್ತಿದ್ದರು. ಭಾರತಕ್ಕೆ ಬಂದಮೇಲೆ ಅವರ ಸಲಹೆಯಂತೆ ಇಡೀ ಭಾರತ ದೇಶವನ್ನು ಸಂಚರಿಸಬೇಕೆಂದು ತೀರ್ಮಾನ ಮಾಡಿದರು. ಅದರಂತೆ ರವೀಂದ್ರನಾಥ್ ಟ್ಯಾಗೋರ್ ಅವರು ಸ್ಥಾಪಿಸಿದ ಶಾಂತಿನಿಕೇತನಕ್ಕೆ ಭೇಟಿ ಕೊಟ್ಟರು. ಗಾಂಧೀಜಿಯವರಿಗೆ “ಮಹಾತ್ಮ” ಎಂದು ಬಿರುದು ಕೊಟ್ಟವರೇ ರವೀಂದ್ರನಾಥ್ ಟ್ಯಾಗೋರ್ ಅವರು.

ನಂತರ ಕಲಕತ್ತೆಯಲ್ಲಿ  ಬೇಲೂರು ಮಠ ನೋಡಿ ಅವರಿಗೆ ತುಂಬಾ ಸಂತೋಷವಾಯಿತು .ಆ ಮಠದ ಬಹು ಭಾಗವನ್ನು ನಡೆದುಕೊಂಡೆ ಹೋದರು. ಶಾಂತವಾದ ಆ ಸ್ಥಳ ಅವರಿಗೆ ಬಹಳ ಆನಂದ ಕೊಟ್ಟಿತು.

ಇಲ್ಲಿಯವರೆಗೆ ಬಂದು  ಶ್ರೀ ವಿವೇಕಾನಂದರನ್ನು ಭೇಟಿಯಾಗದೆ ಹೋಗುವುದು ಹೇಗೆ  ? ಎಂದು ವಿಚಾರ ಮಾಡಿ ಅವರ ಶಿಷ್ಯರಲ್ಲಿ ವಿಚಾರಿಸಿದರು ಅವರ ಶಿಷ್ಯರು “ಶ್ರೀ ವಿವೇಕಾನಂದರು ಈಗ ತೀವ್ರ ಕಾಯಿಲೆಯಿಂದ ಮಲಗಿದ್ದಾರೆ ಈಗ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ ” ಎಂದು ತಿಳಿಸಿದರು ಆ ವಿಷಯ ತಿಳಿದು ಗಾಂಧೀಜಿಯವರಿಗೆ ತುಂಬಾ ದುಃಖವಾಯಿತು.
ಜಗತ್ತಿನ ಇಬ್ಬರು ಮಹಾನ್ ವ್ಯಕ್ತಿಗಳು ಪರಸ್ಪರ ಭೇಟಿಯಾಗುವ ಸುವರ್ಣ ಅವಕಾಶ ತಪ್ಪಿ ಹೋಯಿತು. ನಂತರ ಸೋದರಿ ನಿವೇದಿತ ಅವರನ್ನು ಕಂಡು ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದರು .ನಿವೇದಿತಾ ಅವರಿಗೆ ಹಿಂದೂ ಧರ್ಮದ ಬಗ್ಗೆ ಇರುವ ಅಪಾರ ಗೌರವ ಕಂಡು ಮೆಚ್ಚಿಕೊಂಡರು.

ಬಾಪೂಜಿಯವರು ಉರುಳಿಕಾಂಚನ ಆಶ್ರಮದಲ್ಲಿ ಇದ್ದಾಗ ಒಬ್ಬ ಕುಷ್ಟರೋಗಿಯನ್ನು ಕಂಡರು. ಆಗ ಭಾರತದಲ್ಲಿ ಕುಷ್ಠ ರೋಗ ಅತಿ ಪ್ರಬಲವಾಗಿತ್ತು. ಆದರೆ ಆಗ ಕುಷ್ಟರೋಗಕ್ಕೆ ಯಾವುದೇ ಮದ್ದು ಇದ್ದಿದ್ದಿಲ್ಲ. ಕುಷ್ಟ ರೋಗಿಗಳನ್ನು ಊರ ಹೊರಗೆ  ಬಿಡುತ್ತಿದ್ದರು. ಅವರಿಗೆ ಊರಿನ ಒಳಗೆ ಬರಲು ಅನುಮತಿ ಇರಲಿಲ್ಲ. ಆಶ್ರಮಕ್ಕೆ ಬಂದ ಆ ಕುಷ್ಟ ರೋಗಿಯ ಮೈಯಿಂದ ಅನೇಕ ಹುಣ್ಣುಗಳು ಆಗಿದ್ದವು ರಕ್ತ ಸೋರುತಿತ್ತು. ಮತ್ತು ಕ್ರಿಮಿಗಳು ಅಂಟಿಕೊಂಡಿದ್ದು ತುಂಬಾ ತೊಂದರೆ  ಅನುಭವಿಸುತ್ತಿದ್ದ. ಆಗ ಬಾಪೂಜಿಯವರೇ ಸ್ವತಃ ಅವನ ದೇಹದ ಹುಣ್ಣುಗಳನ್ನು  ನೀರು ಹಾಕಿ ಸೋಪಿನಿಂದ ತೊಳೆದು ಅವುಗಳಿಗೆ ಮುಲಾಮು ಹಚ್ಚಿ ಉಪಚಾರ ಮಾಡಿದರು.

ಗಾಂಧೀಜಿಯವರು ಮುಂದುವರೆದು ಹೇಳುತ್ತಾರೆ .ಈ ಕುಷ್ಠ ರೋಗಿಯ ಈ ಸೇವೆಯು ಈಶ್ವರನ ಅಭಿಷೇಕಕ್ಕೆ ಸಮನಾದದ್ದು  ಮತ್ತು ಅಷ್ಟೇ ಪುಣ್ಯಕ್ಕೆ ನಾನು ಭಾಜನನಾಗಿದ್ದೇನೆ ಎಂದು ತಿಳಿಯುತ್ತೇನೆ ಎಂದು ಗಾಂಧೀಜಿಯವರು ಭಾರತದಲ್ಲಿ ಅನೇಕ ಚಳುವಳಿಗಳನ್ನು ಸಂಘಟಿಸಿದರು ಅದರಲ್ಲಿ ಪ್ರಮುಖವಾದಗಳು.

ಚಂಪಾರಣ್ಯ ಸತ್ಯಾಗ್ರಹ (1917), ಅಹಮದಾಬಾದ್ ನೂಲಿನ ಗಿರಣಿ  ಸತ್ಯಾಗ್ರಹ (1918), ಖೇಡಾ ಸತ್ಯಾಗ್ರಹ (1918), ಅಸಹಕಾರ ಚಳುವಳಿ (1920-22), ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಯಾತ್ರೆ (1930), ಮತ್ತು ‘ಕ್ವಿಟ್ ಇಂಡಿಯಾ’ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) ಚಳುವಳಿ (1942) ಸೇರಿವೆ.

ಗಾಂಧೀಜಿಯವರು ” ಸವಿನಯ ಕಾಯ್ದೆ ಭಂಗ ಚಳುವಳಿ “ಮತ್ತು “ಕ್ವಿಟ್ ಇಂಡಿಯಾ ಮೊಮೆಂಟ್” ಮತ್ತು ಇನ್ನು ಅನೇಕ ಚಳುವಳಿಗಳಲ್ಲಿ ಭಾಗವಹಿಸಿದಾಗ ಅನೇಕ ಬಾರಿ ಅವರು ಜೈಲುವಾಸ   ಅನುಭವಿಸಬೇಕಾಯಿತು. ಅವರು ತಮ್ಮ ಆನಾರೋಗ್ಯದ ಮಧ್ಯೆಯೂ ಸತ್ಯಾಗ್ರಹೀಗಳಿಗೆ  ಪತ್ರದ ಮೂಲಕ ನಿರ್ದೇಶನ ಕೊಡುತ್ತಿದ್ದರು. ಜೊತೆಗೆ ಅವರ ಪತ್ನಿ ಶ್ರೀಮತಿ ಕಸ್ತೂರಬಾ ಗಾಂಧಿಯವರು ಕೂಡ ಅನೇಕ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಬೇಕಾಯಿತು. ದುರ್ದೈವವೆಂದರೆ ಶ್ರೀಮತಿ ಕಸ್ತೂರಬಾ ಅವರು ಜೈಲಿನಲ್ಲಿಯೇ ಕೊನೆ ಉಸಿರೆಳೆದರು . ಅವರು ತೀರಿ ಹೋದಾಗ ಗಾಂಧೀಜಿಯವರು ಬೇರೆ ಜೈಲಿನಲ್ಲಿ ಕೈದಿಯಾಗಿದ್ದರು. ಶ್ರೀಮತಿ ಕಸ್ತೂರಬಾ ಅವರ ಅಂತ್ಯಸಂಸ್ಕಾರ ನಡೆಸಲು ಗಾಂಧೀಜಿಯವರನ್ನು ಮೂರು ದಿವಸ ಪೆರೋಲ್ ಮೇಲೆ ಬಿಡುಗಡೆ ಮಾಡಿದ್ದರು. ಎಂತಹ ಪ್ರಸಂಗದಲ್ಲಿಯೂ ಅವರು ದೃತಿಗೆಡಲಿಲ್ಲ.

ಈ ಚಳುವಳಿಗಳು ಅಹಿಂಸಾತ್ಮಕ ರೀತಿಯಲ್ಲಿ ನಡೆದು ಪ್ರತಿಭಟನೆ ಮತ್ತು ನಾಗರಿಕರ  ಸಹಕಾರವನ್ನು ಸಂಘಟಿಸಲು ಯಶಸ್ವಿಯಾಗಿವೆ .ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಈ ಹೋರಾಟಗಳು  ಬ್ರಿಟಿಷ್ ಆಡಳಿತವನ್ನು ಅಲುಗಾಡಿಸಿದವು ಮತ್ತು ಅನೇಕ ಸತ್ಯಾಗ್ರಹಗಳು ಭಾರತದ ಸಾಮಾನ್ಯ ಜನರನ್ನು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಿದವು.

ಇಂಗ್ಲೆಂಡ್ ದೇಶದ ಮ್ಯಾಂಚೆಸ್ಟರ್ ಪಟ್ಟಣ ಜಗತ್ತಿನ ನೂಲಿನ ಗಿರಣಿಗಳ ತಾಯಿ ಎಂದು ಕರೆಯಲ್ಪಡುತ್ತಿತ್ತು. ಅಲ್ಲಿ ಅನೇಕ ನೂಲಿನ ಗಿರಣಿಗಳು ಇದ್ದವು. ಗಾಂಧೀಜಿಯವರು ಭಾರತದಲ್ಲಿ” ಸ್ವದೇಶಿ” ಅಂದೋಲನ ಶುರು ಮಾಡಿದಾಗ ಅವರು ಮೊದಲು ಹೇಳಿದ್ದೆ “ಚರಕದಿಂದ ನೂಲು ತೆಗೆಯುವುದು,” ಯಾಕೆಂದರೆ ಇಲ್ಲಿಯೇ ಕಚ್ಚಾಮಾಲು ಅಂದರೆ ಹತ್ತಿ ಇಂಗ್ಲೆಂಡ್ ದೇಶಕ್ಕೆ ಹೋಗಿ ಬಟ್ಟೆಯಾಗಿ ತಯಾರಾಗಿ ಬರುತ್ತಿತ್ತು. ಇಲ್ಲಿಯೇ ಚರಕದಿಂದ ನೂರು ತೆಗೆಯುತ್ತಿದ್ದರಿಂದ ಅಲ್ಲಿಗೆ ಹತ್ತಿ ರಪ್ತ ಆಗುವುದು ನಿಂತಿತು .ಹೀಗಾಗಿ ಮ್ಯಾಂಚೆಸ್ಟರ್ ನಲ್ಲಿರುವ ಅನೇಕ ನೂಲಿನ ಗಿರಣಿಗಳು ಬಾಗಿಲು ಮುಚ್ಚಿದವು .ಅಲ್ಲಿಯ ನೂಲಿನ ಗಿರಣಿಯ ನೌಕರರು ಬೀದಿಗೆ ಬಂದರು. ಇದರಿಂದ ಇಂಗ್ಲೆಂಡ್ ದೇಶಕ್ಕೆ ಬಹುದೊಡ್ಡ ಆರ್ಥಿಕ ಹೊಡೆತ ಬಿತ್ತು.
ಚರಕದಿಂದ ನೂರು ತೆಗೆಯುವದರಿಂದ ನಮಗೆ ಸ್ವಾತಂತ್ರ್ಯ ಸಿಗುತ್ತದೆಯೇ ? ಎಂದು ಎಷ್ಟೋ ಜನರು ಲೇವಡಿ ಮಾಡಿದರು.ಆದರೆ ಗಾಂಧೀಜಿಯವರು ಮಹಾ ಮುತ್ಸದ್ದಿಯಾಗಿದ್ದರು. ಅದರ ಪರಿಣಾಮ ಅವರಿಗೆ ಗೊತ್ತಿತ್ತು.

ಮುಂದೆ ಅವರು ದುಂಡು ಮೇಜಿನ ಪರಿಷತ್ತಿಗೆ ಇಂಗ್ಲೆಂಡಿಗೆ ಹೋದಾಗ ಅನೇಕ ಜನ ಕಾರ್ಮಿಕ ಮುಖಂಡರು ಅವರನ್ನು ಕುತೂಹಲದಿಂದ ನೋಡಿದರು ಈ ಒಬ್ಬ ಮನುಷ್ಯ ನಮ್ಮ ಎಲ್ಲ ಗಿರಣಿಗಳನ್ನು ಹೇಗೆ ಬಂದು ಮಾಡಿರಬಹುದು ?ಎಂದು ಆಶ್ಚರ್ಯ ವ್ಯಕ್ತಪಡಿಸಿ ಅವರನ್ನು ಭೇಟಿಯಾಗಲು ಸಮಯ ಕೇಳಿದರು. ಗಾಂಧೀಜಿಯವರಿಗೆ ವಿನಂತಿ ಮಾಡಿ “ನಾವು ಕಾರ್ಮಿಕರು ನಾವು ಕೂಡ ಬಡವರು ನೀವು ಬಡವರ ಪರವಾಗಿ ಇದ್ದಿರಿ “ಎಂದು ನಾವು ಕೇಳಿದ್ದೇವೆ ಈ ಸಮಸ್ಯೆಯನ್ನು ಪರಿಹರಿಸಿ ಎಂದು ಕೇಳಿದರು. ಅದಕ್ಕೆ ಗಾಂಧೀಜಿಯವರು ನೀವು ಬಡವರು ಹೌದು, ಒಪ್ಪುತ್ತೇನೆ. ಆದರೆ ನಿಮ್ಮಲ್ಲಿಂದ ಬಟ್ಟೆ ತರಿಸಿ ಧರಿಸುವಷ್ಟು ನಮ್ಮ ದೇಶದ ಬಡವರು ಶ್ರೀಮಂತರಾಗಿಲ್ಲ. ಹೀಗಾಗಿ ಆ ಅಂದೋಲನ ಮಾಡಬೇಕಾಗಿ ಬಂತು ಎಂದು ಹೇಳಿದರು.

ಗಾಂಧೀಜಿಯವರು ಪ್ರತಿನಿತ್ಯ ತಮ್ಮ ಆಶ್ರಮದಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದರು. ರಾಮ ನಾಮ ಅವರಿಗೆ  ಪ್ರಿಯವಾಗಿತ್ತು. ಗಾಂಧೀಜಿಯವರು ಭಗವದ್ಗೀತೆಯನ್ನು ಮಾತೆ ಎಂದು ಕರೆದರು ಮತ್ತು ಗೀತೆಗೆ ಗುಜರಾತಿ ಭಾಷೆಯಲ್ಲಿ ಅನುವಾದದೊಂದಿಗೆ ತಮ್ಮ ವಿವರಣೆಯನ್ನು ಬರೆದಿದ್ದಾರೆ. ಆ ಪುಸ್ತಕ “ಗೀತಾ ಮಾತೆ” ಎಂದು ಪ್ರಸಿದ್ಧವಾಗಿದೆ.

ಗಾಂಧೀಜಿಯವರು ನವಜೀವನ, ಹರಿಜನ ಮತ್ತು ಯಂಗ್ ಇಂಡಿಯಾ ಎಂಬ ಹೆಸರಿನಲ್ಲಿ  ಪತ್ರಿಕೆಗಳನ್ನು ನಡೆಸುತ್ತಿದ್ದರು. ಅದರಲ್ಲಿ ಸತ್ಯಾಗ್ರಹದ ಬಗ್ಗೆ ಮತ್ತು ಸಾಮಾಜಿಕ ಅನಿಷ್ಟಗಳಾದ ಬಾಲ್ಯ ವಿವಾಹ , ವರದಕ್ಷಿಣೆ ,ಅಸ್ಪೃಶ್ಯತೆ  ಇವುಗಳ ಬಗ್ಗೆ ಬರೆಯುತ್ತಿದ್ದರು. ಸ್ತ್ರೀ ಶಿಕ್ಷಣದ ಬಗ್ಗೆ ಅವರಿಗೆ ಅಪಾರವಾದ ಕಾಳಜಿ ಇತ್ತು. ಗಾಂಧೀಜಿ ಮತ್ತು ಅನೇಕ ಮುಂದಾಳುವಳಾದ ವಲ್ಲಭಭಾಯಿ ಪಟೇಲ ,ಸುಭಾಷ್ ಚಂದ್ರ ಬೋಸ್, ಜವಾಹರ್‌ಲಾಲ್ ನೆಹರು, ಬಾಲಗಂಗಾಧರ ತಿಲಕ್, ಬಿಪಿನ ಚಂದ್ರ ಪಾಲ್ , ಅರುಣಾ ಅಸಫ್ ಅಲಿ, ಅನ್ನಿಬೆಸೆಂಟ್, ದಾದಾಬಾಯಿ ನವರೋಜಿ ಲಾಲಾ ಲಜಪತ್ ರಾಯ್, ಮದನ್ ಮೋಹನ್ ಮಾಲವೀಯ, ಶ್ರೀಮತಿ ಸರೋಜಿನಿ ನಾಯ್ಡು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಮುಂತಾದವರ ಸಹಭಾಗಿತ್ವ ಮತ್ತು ಅನೇಕ ಸಾರ್ವಜನಿಕರ, ಸ್ವಾತಂತ್ರ್ಯ ಯೋಧರ ,ತ್ಯಾಗ ಬಲಿದಾನಗಳ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು.

ಮಹಾತ್ಮ ಗಾಂಧೀಜಿಯವರ ಹತ್ಯೆಯಾದ ಬಳಿಕ ಅವರ ಅಂತ್ಯಯಾತ್ರೆಯಲ್ಲಿ ದೇಶದ ಕೋಟ್ಯಾಂತರ ಜನರು ಭಾಗವಹಿಸಿದ್ದರು ಮತ್ತು ಸಂಯುಕ್ತ ರಾಷ್ಟ್ರಸಂಘ ಮತ್ತು ಜಗತ್ತಿನ ಅನೇಕ ದೇಶಗಳು ತಮ್ಮ ಶೋಕ ಸಂದೇಶವನ್ನು ಕಳುಹಿಸಿ ಅಗಲಿದ ಆಗಲಿ ನಾಯಕನಿಗೆ ತಮ್ಮ ಗೌರವವನ್ನು ಸೂಚಿಸಿದವು.

ಸಂಯುಕ್ತ ರಾಷ್ಟ್ರದ ಸಂಘದ ಭದ್ರತಾ ಮಂಡಳಿಯ ಎಲ್ಲ ಸದಸ್ಯರು ಎದ್ದುನಿಂತು ಅಗಲಿದ ನಾಯಕನಿಗೆ ಮೌನ ಸೂಚಿಸಿ ಸಂತಾಪ ವ್ಯಕ್ತಪಡಿಸಿದರು. ಜಗತ್ತಿನ ಅನೇಕ ದೇಶಗಳು ಗಾಂಧೀಜಿಯವರ ಮರಣದ ಬಗ್ಗೆ ದುಃಖವಕ್ತಪಡಿಸಿ ಸಂತಾಪ ಸೂಚಕ ಸಭೆಗಳನ್ನು ನಡೆಸಿದವು. ಈಗ  ಅಮೇರಿಕಾ ದೇಶ ಆದಿಯಾಗಿ 150 ಕ್ಕಿಂತ ಹೆಚ್ಚಿನ ದೇಶಗಳು ಗಾಂಧೀಜಿಯವರ ಹೆಸರಿನ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿವೆ.

ಬ್ರಿಟನದಲ್ಲಿ ಗಾಂಧೀಜಿ ಅವರ 150 ನೆಯ ಜಯಂತಿ ಅಂಗವಾಗಿ ಗಾಂಧೀಜಿ ಮೋಹರಿನ  ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ಜಗತ್ತಿನ ಅನೇಕ ದೇಶಗಳಲ್ಲಿ ಅವರ ಮೂರ್ತಿಗಳು ಅನಾವರಣ ಆಗಿವೆ. ಮಹಾತ್ಮರ ದಿವ್ಯ ಸಂದೇಶವಾದ  ಸತ್ಯ, ಆಹಿಂಸೆ, ಶಾಂತಿ ನಮ್ಮ ಉಸಿರಾಗಲಿ.


  • ಅರವಿಂದ ಕುಲಕರ್ಣಿ – ಹುಬ್ಬಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW