‘ಸಂಬಂಧ’ ಕವನ – ಶಿವದೇವಿ ಅವನೀಶಚಂದ್ರ

ಅದೇ ಸೂರ್ಯ, ಅದೇ ಚಂದ್ರ, ಅವೇ ಗ್ರಹ ತಾರೆಗಳು ದಡವಾದ ತನಗೆ ಕಡಲಿನ ಗರ್ಭವ ಹೊಗುವ ಅದೃಷ್ಟವಿಲ್ಲ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಮತ್ತೆ ಮತ್ತೆ ಅಪ್ಪಳಿಸುತ್ತದೆ ಅಲೆ
ತಾನೋ ಅದೆಷ್ಟು ಬಾರಿ ಎದೆಯೊಡ್ಡುತ್ತೇನೆ
ತನ್ನದೇನನ್ನೋ ಸೆಳೆಯುವಾಗಲೂ
ಅದೇ ಸ್ಥಿತಪ್ರಜ್ಞತೆ
ಅನಂತಕಾಲದ ಒಡನಾಟವೋ
ಒಪ್ಪಂದವೋ ಅದರ ನಿರಂತರತೆ ತನ್ನ ಬರಸೆಳೆಯುವಿಕೆ
ಸಾಕ್ಷಿಗಳಾಗುತ್ತವೆ ನಿತ್ಯ
ಅದೇ ಸೂರ್ಯ ಅದೇ ಚಂದ್ರ
ಅವೇ ಗ್ರಹ ತಾರೆಗಳು
ದಡವಾದ ತನಗೆ ಕಡಲಿನ ಗರ್ಭವ ಹೊಗುವ
ಅದೃಷ್ಟವಿಲ್ಲ
ಬರೀ ಕಾಯುವಿಕೆಯ ಕಾತರ
ಆಲಿಂಗನ ಚುಂಬನ
ಒಮ್ಮೊಮ್ಮೆ ದಕ್ಕಿಬಿಡುತ್ತವೆ
ಚಿಪ್ಪುಗಳು ಅದರೊಳಗಿನ
ಮುತ್ತುಗಳು ಅವನ ಕೃಪೆಯಿಂದ
ಆದರೆ ಅವನು ನುಂಗಿದವುಗಳ
ಮೃತ ಶರೀರ ತನ್ನನ್ನು ದುರ್ಗಂಧಿಯಾಗಿಸಿರುವುದೂ ಸುಳ್ಳೇ
ಆದರೂ ತಾನು ಮಾತ್ರ
ತೀರವೇ ಅನಂತದಾಹಿ
ಅವನು ಕಡಲು ಅದಕೇ ತನಗೆ ಸದಾ ಬೆರಗು
ಹೊತ್ತಿದ್ದಾನೆ ಅಖಂಡ ಬುವಿಯನ್ನೇ
ಬೃಹತ್ ಹಡಗು ತಿಮಿಂಗಿಲಗಳನ್ನು ಹೊತ್ತು
ಅಸಂಖ್ಯ ಜೀವಿಗಳಿಗೆ ಒಡಲು ಈತ
ತ್ಯಾಜ್ಯಗಳನ್ನೂ ನುಂಗಿಯೂ
ಕಕ್ಕಿಬಿಡುತ್ತಾನೆ ಜಾಣ
ಆದರೂ ಅವನ ದಾರ್ಷ್ಟ್ಯಕ್ಕೆ ಬೆರಗಾಗುತ್ತೇನೆ ತಾನು
ರತ್ನಾಕರನವನು
ಮುಗಿಲು ಮಳೆಗಳೊಡೆಯ
ಆದರೂ ತಪ್ಪದೆ ಬಂದು
ಹೋಗುತ್ತಲೇ ಇರುತ್ತಾನೆ
ಆ ನೀರಾಕಾರ
ತನ್ನ ಒಡಲಿನಿಂದ ಏನೇನನ್ನೋ
ಬಳುವಳಿಯಿತ್ತು
ಒಲವ ಪಿಸುಮಾತನಾಡಿ
ಪುಳಕಿಸಿ ಮತ್ತೆ ಮತ್ತೆ
ಅವನಿಗಾಗಿ
ಅವನೇ ಆಗಿ ತಾನು ಕಾಯುತ್ತಲೇ ಇರುತ್ತೇನೆ
ಏಕೆಂದರೆ ಅವನು ಎಂದೂ ಮರೆಯುವುದಿಲ್ಲ ತನ್ನ ಕರ್ತವ್ಯವ
ಅವನಿಲ್ಲದೆ ಇಲ್ಲಿ ತನಗೇನಿದೆ
ಬೇರೆ ಕಾರ್ಯ
ಆ ವಿಹಾರಿಗಳು ಆಹಾರಿಗಳು
ಎಲ್ಲಾ ತನ್ನೊಂದಿಗಿರುವುದು
ಅವನಿಗಾಗಿಯೇ ತಾನೆ


  • ಶಿವದೇವಿ ಅವನೀಶಚಂದ್ರ – ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading