ಚಳ್ಳಕೆರೆಯ ಹಿರಿಯ ಸಾಹಿತಿಗಳಾದ ಮನುಶ್ರೀ ಸಿದ್ದಾಪುರ (ರಂಗಸ್ವಾಮಿ) ಅವರು ಕವಯಿತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅವರ ‘ಎತ್ತ ಸಾಗುತಿದ್ದೇವೆ ನಾವು’ ಕವಿತೆಯ ಕುರಿತು ಬರೆದ ವಿಮರ್ಶೆವಿದು. ತಪ್ಪದೆ ಮುಂದೆ ಓದಿ…
(ಶಬ್ರಿನ ಅವರ) ಕವಿತೆಯ ಕುರಿತಾಗಿ , ಲಂಚ, ಅಸ್ಪೃಶ್ಯತೆ, ಪ್ರಚೋದನಕಾರಿ ಹೇಳಿಕೆಗಳು ಮುಂತಾದ ಶಾಂತಿ ಕದಡುವ ವಿಚಾರಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಮೂಲಕ ಕೆಲವೊಂದು ಅಪ್ರಚೋದಿತ ಸಂಘಟನೆಗಳ ಬಗ್ಗೆ ಲೇಖನಿಗಳು ತಮ್ಮ ವೈಚಾರಿಕ ಬರಹದ ಮೊನಚನ್ನು ಮೊಂಡಾಗಿಸಿವೆ ಎನಿಸುತ್ತದೆ. ಯಾವದೋ ಒಂದು ಸಮುದಾಯದ ಹಿತಾಸಕ್ತಿಯ ಓಲೈಕೆಗೆ, ಇನ್ನಾರೊ ಪ್ರಭಾವಿ ಧನಿಕರು/ರಾಜಕಾರಣಿಗಳ ಹಿತಾಸಕ್ತಿಗೆ ಮೋಹಗೊಂಡು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸದಿಂದ ತಮ್ಮ ನೈಜತೆಯ ಪಾತ್ರದ ಮಹತ್ವವನ್ನು ಪಕ್ಕಕ್ಕೆ ಸರಿಸಿ ಸ್ವಾರ್ಥದೆಡೆಗೆ ಸಾಗುತ್ತಿರುವ ಬಗ್ಗೆ ವಾಸ್ತವದ ಚಿತ್ರಣದ ಮುಖೇನ ಲೇಖನಿಗಳು ಮೊಂಡಾಗಿ ಕೈ ಬೆರಳುಗಳ ಹಿಡಿಕೆಯ ರೂಪದಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳೆಡೆಗೆ ವಾಲಿಕೊಳ್ಳುತ್ತಿರುವ ಬಗ್ಗೆ ಕಟ್ಟಿಕೊಡುವಲ್ಲಿ ಪ್ರಸ್ತುತ ವ್ಯವಸ್ಥೆಯಲ್ಲಿನ ವಿದ್ಯಮಾನದ ಚಿತ್ರಣವು ಅನಾವರಣಗೊಂಡಿದೆ.
ಆಡಳಿತದ ನಾಲ್ಕು ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗಗಳು. ಮೂರು ಅಂಗಗಳಿಂದ ತೆರೆಮರೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಬಿಸಿ ಮುಟ್ಟಿಸ ಬೇಕಾದ ಪತ್ರಕರ್ತರ ಆಯುಧವೇ ಸಾಣೆಗೂ ಜುಮ್ಮೆನ್ನದೇ ಮೊಂಡಾಗಿರುವ ಅಸಹಾಯಕತೆ ಸ್ಥಿತಿಯು ಕೌತುಕತೆಯನ್ನು ಉಂಟುಮಾಡುವಂತೆ ಭಾಸವಾಗುತ್ತಿದೆ.ಹೋರಾಟದ ದನಿಗಳಲ್ಲಿ ಕಿಚ್ಚಿಲ್ಲದೆ ಕಿರಲು ಸ್ಥಿತಿಗೆ ಬಂದು ಮೌನವ್ರತಕ್ಕೆ ಜಾರುತ್ತಿರುವಲ್ಲಿ ಲೇಖನಿಗಳ ಪ್ರಖರತೆಗೆ ಆದಾವೊದೋ ತುಕ್ಕಿನ ಲವಣಾಂಶ ಅಂಟಿರಬಹುದೆಂಬ ಸೋಜಿಗವೂ ಉಂಟಾಗುತ್ತಿದೆ.

ಪ್ರಾಚೀನ ಕಾಲದ ನಿರಂಕುಶ ಪ್ರಭುತ್ವದಲ್ಲಿ “ಯಾಥಾ ರಾಜಾ ತಥಾ ಪ್ರಜಾ” ಎಂಬ ನಾಣ್ನುಡಿ ಇತ್ತು.ಇಂದಿನ ವೇಗದಿ ಪರಿವರ್ತನೆಯತ್ತ ಸಾಗುವ ಕಾಲದಲ್ಲಿ ವೈಚಾರಿಕ ಚಿಂತನೆಗಳಲ್ಲಿ ಊಸರವಳ್ಳಿಯಂತೆ ಬದಲಾಗುತ್ತ , ವೈರುಧ್ಯ ರೀತಿಯ ” ಯಾಥಾ ಪ್ರಜಾ ತಥಾ ರಾಜ” ಎಂಬಂತೆ ತಿರುಗು-ಮುರುಗಾಗಿ,ಮೇಲೋಗರವಾಗಿ ಲೇಖನಿಗಳು ಕೂಡ ನೈಸಾಗಿ ತಮ್ಮ ಪ್ರಖರತೆಗಿಂತ ಮೊಂಡಾಗಿರುವುದೇ ಲೇಸು ಎಂಬ ಜೀವನಾನುಭವದಂತೆ “ಹೊತ್ತು ಬಂದ ಕಡೆಗೆ ಛತ್ರಿ ಹಿಡಿ” ಗೆದ್ದೆತ್ತಿನ ಬಾಲ ಹಿಡಿಯುವ ಕಾಯಕವೇ ಇವತ್ತಿನ ವಾಸ್ತವಿಕತೆಗೆ ಸೂಕ್ತ ಎನ್ನುವ ಸೂಕ್ಷ್ಮತೆಗೆ ಲೇಖನಿ ಮೊಂಡಾಗಿದೆ ಎಂಬ ಸತ್ಯಾಂಶ ಕಣ್ಣಿಗೆ ರಾಚುತ್ತಿದೆ ಅಲ್ಲವೇ?.
ಹೊಲದಲ್ಲಿ ಬಿತ್ತಿದ ಬೀಜಗಳು ಬೆಳೆದು ಫಸಲು ಉತ್ತಮವಾಗಿ ಬೆಳೆಯುವ ದೃಷ್ಟಿಯಿಂದ ಸುತ್ತಮುತ್ತಲಿಗೆ ಬೇಲಿ ಹಾಕಿದರೆ, ಆ ಬೇಲಿಯೇ ಎದ್ದು ಬಂದು ಪೈರನ್ನು ನಾಶಗೊಳಿಸಿದರೆ ಸಮಯ ಮತ್ತು ಶ್ರಮವು ವ್ಯರ್ಥಗೊಂಡು ನಂಬಿಕೆ ವಿಶ್ವಾಸಕ್ಕೆ ದ್ರೋಹ ಎಸಗಿದಂತೆ ಆಗುತ್ತದೆಯಲ್ಲವೇ ?.ಆಕ್ರಮಗಳನ್ನು ಎಸಗಿದವರಿಗೆ ಶಿಕ್ಷೆ ವಿಧಿಸುವ ನ್ಯಾಯಾಲಯದ ನ್ಯಾಯಾಧೀಶರಿಗೆ ಲಂಚ ಕೊಡವಷ್ಟರ ಮಟ್ಟಿಗೆ ಪುಂಡ- ಪಟಾಲಂಗಳ ಬಹುಪರಾಕ್ ಹೊಗಳುಭಟ್ಟರ ದಂಡು ಕಾವಲುಪಡೆಯಾಗಿ ಸಜ್ಜಾಗುತ್ತಿರುವಿಕೆಗೆ ಲೇಖನಿಗಳು ಮೊಂಡಾಗುವಿಕೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದೆ.
ಅದೆಷ್ಟೊ ಅಮಾಯಕ ಹೆಣ್ಣುಮಕ್ಕಳ ಶೋಷಣೆ,ಲೈಂಗಿಕ ದೌರ್ಜನ್ಯಗಳು, ಸೈಬರ್ ಅಪರಾಧಗಳು, ಧರ್ಮಾಂಧತೆಯ ಸಂಘರ್ಷಗಳಿಗೆ ರಾಜಕೀಯ, ಆರ್ಥಿಕ ಮತ್ತು ಜಾತಿಯ ಪ್ರಬಲತೆಗಳು ಕುರುಡು ಕಾಂಚಾಣದ ದೊಂಬರಾಟಕ್ಕೆ ದಾಳಗಳಾಗುತ್ತಿವೆ.ಈ ಸೂಕ್ಷ್ಮತೆಗಳು ನ್ಯಾಯಾಲಯದೊಳಗಿನ ನ್ಯಾಯದೇವತೆಗೆ ಕಟ್ಟಿರುವ ಕಪ್ಪು ಬಟ್ಟೆಯು ಸಡಿಲಗೊಂಡು ಪ್ರತ್ಯಕ್ಷ ದೃಶ್ಯ ಕಾಣುವ ಹಂಬಲಿಕೆಗೆ ಬದಲಾಗಿ, ಮತ್ತಷ್ಟು ಬಿಗಿಗೊಳ್ಳುವಿಕೆಯಿಂದಾಗಿ ಬಾಯಿದ್ದು ಮೂಕರಂತೆ,ಕಣ್ಣಿದ್ದು ಕುರುಡರಂತೆ ಕಾಣುವ ಸ್ಥಿತಿಯನ್ನು ಸೂಚ್ಯವಾಗಿ ಈ ಕವಿತೆಯಲ್ಲಿರುವ ವಸ್ತುವಿನ ಮುಖೇನ ಸಮಾಜದಲ್ಲಿನ ಸಾಮಾಜಿಕ, ರಾಜಕೀಯ ಹಾಗೂ ಕುರುಡು ಕಾಂಚಾಣದ ಪ್ರಭಾವದ ಪರಿಣಾಮದಿಂದ ಲೇಖನಿಗಳು ತಮ್ಮ ನೈಜತೆಯ ಬರಹದತ್ತ ಸಾಗಲು ತುಂಬಾನೆ ಅಡ್ಡಿಯಾಗುತ್ತಿರುವ ಧರ್ಮ ಸಂಕಟದ ಸ್ಥಿತಿಯ ಕುರಿತಾದ ವಿಮರ್ಶಾತ್ಮಕ ಚಿಂತನೆಗೆ ಹಚ್ಚುವಂತೆ ಈ ಕವಿತೆ ಕಾಡುತ್ತಿದೆ .ಇಂತಹ ಅಂಶಗಳು ವಾಸ್ತವಿಕತೆಗೆ ಪ್ರತಿಬಿಂಬವಾಗಿರುವುದರಿಂದಲೇ ಬೇರೊಂದು ಭಾಷೆಗೆ ಅನುವಾದವಾಗಿಸಲು ಸಾಧ್ಯತೆಯಾಗಿದೆ ಎಂಬುದನ್ನು ಗಮನಿಸಬಹುದಾಗಿದೆ.
ಎತ್ತ ಸಾಗುತಿದ್ದೇವೆ….?
‘ಮಗು’ವಿನಂತೆ
ಎಡವಿದ ಸಮಾಜವನು
‘ತಾಯಿ’ಯಂತೆ ಕೈಹಿಡಿ
ದೆತ್ತಬೇಕಾದ ಲೇಖನಿಗಳು
ಪ್ರಶಸ್ತಿ,ಅಧ್ಯಕ್ಷಗಿರಿಗಳ ಬೆನ್ನತ್ತಿ
ತಮ್ಮಯ ಕಾಯಕಕೆ ವಿರಾಮ
ಘೋಷಿಸಿಹವು!
ಅಸತ್ಯ, ಅನ್ಯಾಯಗಳ
ಆರ್ಭಟದ ಹುಟ್ಟಡಗಿಸುವ
ಮಂತ್ರ ‘ಬೇಕೆ ಬೇಕು ನ್ಯಾಯ
ಬೇಕೆಂದು’ ಬೀದಿಗಿಳಿಯಬೇಕಿದ್ದ
ಹೋರಾಟದ ಕೆಚ್ಚಿನ ದನಿಗಳು
‘ನಾನು’ ನನ್ನದೆಂಬ ಸ್ವಾರ್ಥದಲಿ
ಮೌನವ್ರತ ಪಾಲಿಸಿಹವು!
ಇನ್ನು,ಪ್ರಜೆಗಳ ಹಿತ ಕಾಯ್ವ ಕೈಗಳೋ
ಅದ್ಭುತ,ಅಮೋಘ,ಅವರ್ಣನೀಯ!
ಕಾಗೆಯನು ಕೋಗಿಲೆಯೆಂದು
ಕೋಗಿಲೆಯನು ಕಾಗೆಯೆಂದು ತೋರುವವು
ಅದೇ ಸತ್ಯ ಎಂದು ಸಾರುವುದಕೆ
ಅಜ್ಞಾನಿಗಳ ದಂಡೊಂದು
ತುದಿಗಾಲಲಿ ನಿಂತು ಕಾದಿಹದು,
ಸಾಕಲ್ಲವೇ ಇಷ್ಟು,
ಸತ್ಯ ಅಸತ್ಯವಾಗುವುದಕೆ,
ನ್ಯಾಯ ಅನ್ಯಾಯವಾಗುವುದಕೆ,
ನಿರಪರಾಧಿ ಅಪರಾಧಿಯಾಗುವುದಕೆ!
ಇನ್ನು ನ್ಯಾಯದೇವತೆಯ ಪಾಡು ಕೇಳಿ,
ಇವರೆಲ್ಲರ ತಾಳಕೆ ಹೆಜ್ಜೆಯೆ ಹಾಕಿ
ನಿಸ್ಸಹಾಯಕಳಾಗಿ ನಿಲ್ಲುವಳೊಂದು ದಿನ
ಕಣ್ಣಿದ್ದು ಕುರುಡಾದ ಗಾಂಧಾರಿಯಂತೆ!
- ಮನುಶ್ರೀ ಸಿದ್ದಾಪುರ
