ಕುಡು ಕುಟುಂಬದಲ್ಲಿ ನನಗೆ ಬೇಕಾಗಿದ್ದನ್ನು ನಾನು ಮಾಡಿಯೋ, ಹೋಟೇಲ್ ನಿಂದ ತರಿಸಿಕೊಂಡೋ ತಿನ್ನುವಂತಿರಲಿಲ್ಲ ಅಥವಾ ನನಗೆ ಬೇಕಾದ ಡ್ರೆಸ್ ತೊಟ್ಟು ಖುಷಿ ಪಡುವ ಹಾಗಿರಲಿಲ್ಲ. ಹಾಗಾಗಿ ಗಂಡನಿಗೆ ನಾವು ಬೇರೆ ಹೋಗೋಣ ಎಂದು ಅವರನ್ನು ಪೀಡಿಸುತ್ತಲೇ ಇರುತ್ತಿದ್ದೆ. ಅದಕ್ಕೆ ಅವರು ಒಪ್ಪಲೇ ಇಲ್ಲ. ಕೊನೆಗೆ ಅವಳು ತವರು ಮನೆಯಲ್ಲಿ ಹೋಗಿ ಕೂತಳು. ಮುಂದೇನಾಯಿತು ಶೋಭಾ ನಾರಾಯಣ ಹೆಗಡೆ ಅವರ ಈ ಕತೆಯನ್ನು ತಪ್ಪದೆ ಮುಂದೆ ಓದಿ…
ಬೆಳಿಗ್ಗೆ ಎದ್ದ ಕೂಡಲೇ ನನ್ನ ಮುಖವನ್ನು,ಕನ್ನಡಿಯಲ್ಲಿ ನೋಡಿಕೊಳ್ಳುವ ರೂಢಿ ನನ್ನದು. ಹಾಗೇ ದಿನದ ರೂಢಿಯಂತೆ ಇವತ್ತೂ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡಿದೆ. ನನ್ನದೇ ಮುಖ ಎರಡು ಮುಖವಾಗಿ ಕಂಡಿತು. ಅಚ್ಚರಿ… ಮತ್ತೊಮ್ಮೆ ನೋಡಿಕೊಂಡೆ. ಕನ್ನಡಿ, ಸರೀಯಾಗಿ ಅರ್ಧ ಸೀಳಿ ಒಡೆದಿತ್ತು. ಹಾಗಾಗಿ ನನ್ನ ಮುಖ ಕೂಡ ಎರಡೆರಡು ಕಂಡಿತ್ತು. ಬಹುಶಃ ಬೆಕ್ಕು ಕಿಡಕಿಯಿಂದ ಹಾರುವಾಗ ಒಡೆದಿರಬೇಕು. ರಾತ್ರಿ ರೂಮಿಗೆ ಬಂದಿತ್ತು ಬೆಕ್ಕು. ಯಾಕೋ ಮತ್ತೆ ಮತ್ತೆ ನನ್ನ ಬಿಂಬ ನೋಡಿಕೊಂಡೆ. ನೀನೆಷ್ಟರ ಮಟ್ಟಿಗೆ ಒಳ್ಳೆಯವಳು?. ನಿನ್ನ ಒಳಗೊಂದು ಕ್ರೂರ ಮುಖ ಇದೆ ನೋಡು ಅಂತ ಕನ್ನಡಿ ಅಣಕಿಸಿದಂತಾಯಿತು. ಒಮ್ಮೆ ಬೆಚ್ಚಿದೆ. ಆದರೂ ಕನ್ನಡಿ ಏನೋ ನನಗೆ ಸೂಕ್ಷ್ಮ ಹೇಳುತ್ತಿದೆ ಎಂದೆನಿಸಿತು. ನನ್ನೊಳಗೆ ಎರಡು ಮುಖ ದರ್ಶನ ಮಾಡಿದ ಒಡೆದ ಕನ್ನಡಿಯೊಳಗೊಮ್ಮೆ ನನ್ನ ಬಿಂಬವನ್ನು ಮತ್ತೆ ಮತ್ತೆ ನೋಡುತ್ತಾ, ಸೂಕ್ಷ್ಮ ಅವಲೋಕನ ಮಾಡಿಕೊಳ್ಳತೊಡಗಿದೆ. ಯಾಕೋ ನನ್ನ ಬದುಕನ್ನು ನಾನೇ ಕೈಯ್ಯಾರೆ ಹಾಳು ಮಾಡುತ್ತಿರುವೆನೆಂಬ ಚಿಕ್ಕ ಗುಮಾನಿ ನನ್ನ ಕಾಡಿ ,ತಪ್ಪಿತಸ್ಥ ಭಾವ ಮೂಡತೊಡಗಿ, ಕಂಗಳಲ್ಲಿ ನೀರು ತುಂಬಿ ತುಳುಕಿತು. ಒಬ್ಬಂಟಿ ಜೀವನ ಹಣ್ಣುಗಾಯಿ ಮಾಡಿತ್ತು.
ಹ್ಮ… ಮದುವೆಯಾಗಿ ವರುಷ ಕಳೆದಿಲ್ಲ. ಕೂಡು ಕುಟುಂಬವನ್ನು ಒಡೆಯಲು ಹೊರಟಿರುವ ನನ್ನ ಬಗ್ಗೆ ನನಗೇ ಈಗ ಅಸಹ್ಯ ಭಾವ ಉಂಟಾಗ್ತಿದೆ. ಅತ್ತೆ, ಮಾವ, ಮೈದುನ, ನಾದಿನಿ, ಓರಗಿತ್ತಿ, ಮಕ್ಕಳು ಮರಿ ಅಂತ ಚಂದದ ನಂದನವನಕ್ಕೆ ನಾನೇ ಕಿರಿಯ ಸೊಸೆಯಾಗಿ ಹೋದವಳು. ತವರಲ್ಲಿ ಒಬ್ಬಂಟಿಯಾಗಿ ಬೆಳೆದ ನನಗೆ ಕೂಡು ಕುಟುಂಬ ತುಂಬಾ ಖುಷಿ ಎನಿಸಿತ್ತು. ನನ್ನ ಒಪ್ಪಿಗೆ ಮೇರೆಗೇ ಅಪ್ಪ ಅಮ್ಮ ದೊಡ್ಡ ಮನೆಗೆ ಧಾರೆ ಎರೆದು ಕೊಟ್ಟಿದ್ದರು. ಆದರೆ ಮದುವೆಯಾಗಿ ಕಾಲಿಟ್ಟ ಮೇಲೆ ಅರಿವಾಗಿದ್ದು. ನನಗೆ ಬೇಕಾದ ಹಾಗೇ ಇಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲರೂ ಹೇಗಿರುತ್ತಾರೋ ಹಾಗೇ ಬದುಕಬೇಕು. ಇದೇ ನನಗೆ ಉಸಿರು ಕಟ್ಟುವಂತೆ ಮಾಡಿತ್ತು. ನನಗೆ ಬೇಕಾಗಿದ್ದನ್ನು ನಾನು ಮಾಡಿಯೋ, ಹೋಟೇಲ್ ನಿಂದ ತರಿಸಿಕೊಂಡೋ ತಿನ್ನುವಂತಿರಲಿಲ್ಲ ಅಥವಾ ನನಗೆ ಬೇಕಾದ ಡ್ರೆಸ್ ತೊಟ್ಟು ಖುಷಿ ಪಡುವ ಹಾಗಿರಲಿಲ್ಲ.. ಆದರೂ ಅಲ್ಲಿ ಖುಷಿಗೇನೂ ಬರವಿರಲ್ಲ. ಪ್ರೀತಿಗೇನೂ ಕೊರತೆ ಎನಿಸುತ್ತಲಿರಲಿಲ್ಲ. ತವರಲ್ಲಿ ಇದ್ದಂತೆ ಬೇಕಾ ಬಿಟ್ಟಿಯಾಗಿ ಇರುವ ಆಸ್ಪದ ಮಾತ್ರ ಇರಲಿಲ್ಲ. ಅದಕ್ಕೆ ಶ್ರೀಕಾಂತ್ ನನ್ನು ಪೀಡಿಸುತ್ತಲೇ ಇದ್ದೆ. ನಾವು ಬೇರೆ ಹೋಗೋಣ ಅಂತ. ಆದರೆ ಇವರು ಒಪ್ಪಲೇ ಇಲ್ಲ. ಮನೆಯಿಂದ ಬೇರೆ ಹೋಗೋ ಮಾತೇ ಇಲ್ಲ. ನೀನೇ ತಿದ್ದಿ ನಡೆ. ಬದುಕಲ್ಲಿ ನಮಗೆ ಹೇಗೆ ಬೇಕೋ ಹಾಗೇ ಬದುಕುವೆ ಅಂದರೆ ಸಾಧ್ಯ ಆಗದು. ಎಲ್ಲರೊಂದಿಗೆ ಬೆರೆತು ಬಾಳುವ ಸಾಮರಸ್ಯ ನಾವು ಕಲಿತುಕೊಳ್ಳಬೇಕು. ಬುದ್ಧಿ ಹೇಳಿದರೇ ಹೊರತು. ನನ್ನ ಪರವಾಗಿ ನಿಲ್ಲಲೇ ಇಲ್ಲ. ಇವರು ಬದಲಾಗರು ಎಂಬ ಮನವರಿಕೆ ಆಯಿತು. ಸರಿ, ನಾನೇ ಹೋಗ್ತೀನಿ ನನ್ನ ತವರಿಗೆ. ನನಗೆ ಇಲ್ಲಿ ಹೊಂದಿಕೊಂಡು ಬಾಳಲಾಗದು ಅಂತ ಇವರ ಬಳಿ ಮುನಿಸಿಕೊಂಡು ತವರಿಗೆ ಬಂದು ಬಿಟ್ಟೆ.
ಹ್ಮ…ತವರು ಎಷ್ಟು ದಿನ ಅಂತ ಬೆನ್ನಿಗೆ ನಿಂತೀತು. ಎಷ್ಟೇ ಕಾಲ ಬದಲಾಗಲಿ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಗಾದೆ ಎಂದಿಗೂ ಸುಳ್ಳಾಗದು. ಸ್ವಲ್ಪ ದಿನ ಎಲ್ಲವೂ ಚೆನ್ನಾಗಿ ಇತ್ತು. ಆದರೆ ಅತ್ತಿಗೆಯ ಸುಪರ್ದಿಗೆ ಎಲ್ಲಾ ಜವಾಬ್ದಾರಿಗಳು ಬಂದ ಮೇಲೆ ನಾನೇಕೋ ಇಲ್ಲಿ ಕಾಲ ಕಸದಂತೆ ಭಾಸವಾಗತೊಡಗಿತು. ಅಣ್ಣ ಕೂಡ ಬದಲಾಗಿದ್ದ. ಅವನ ಸಂಸಾರ, ಅವನದೇ ಪ್ರಪಂಚ. ಇನ್ನು ಅಪ್ಪ, ಅಮ್ಮ ವಯಸ್ಸಾದವರು ನನಗೆ ಸಪೋರ್ಟ್ ಮಾಡಿದರೆ, ಮಗ ಎಲ್ಲಿ ಕೋಪಿಸಿಕೊಂಡಾನೋ ಎಂಬ ಉಭಯ ಸಂಕಟ. ಶ್ರೀ ಕೂಡ ಪೋನ್ ಮಾಡ್ತಿರಲಿಲ್ಲ. ನಿನ್ನ ತಪ್ಪು ನಿನಗೆ ಅರಿವಾದಾಗ ಯಾವಾಗ ಬೇಕಾದರೂ ನೀನು ಹಿಂದಿರುಗಬಹುದು ಎಂದಿದ್ದರು. ಬಂದು ಐದಾರು ತಿಂಗಳಿಗೆ ನರಕ ದರ್ಶನದಂತಾಯಿತು ಬದುಕು. ನೆರೆಹೊರೆಯ ಚುಚ್ಚು ನುಡಿ ಮತ್ತೂ ಹಿಂಸೆ ಪಡುವಂತಾಯಿತು. ಎಷ್ಟು ಕಲಿತರೇನು ಬಂತು. ನೆಟ್ಟಗೆ ಸಂಸಾರ ಮಾಡಲು ಬಾರದು ನೋಡಿ ಎಂಬ ಕುಹಕ ಇನ್ನೂ ಕುಗ್ಗುವಂತೆ ಮಾಡಿತ್ತು. ಆದರೂ ನನ್ನ ಹಠ ಮಾತ್ರ ತಗ್ಗಿರಲಿಲ್ಲ. ಆದರೆ ಇವತ್ತು ಬೆಳಿಗ್ಗೆ ಒಡೆದ ಕನ್ನಡಿಯ ಬಿಂಬ ನನಗೆ ಸತ್ಯ ದರ್ಶನ ಮಾಡಿಸಿತ್ತು. ಮನಸ್ಸು ಬದಲಾಯಿಸಿಕೊಂಡೆ. ಎಲ್ಲರೊಂದಿಗೆ ಬೆರೆತು ಬಾಳುವ ಕನಸನ್ನು ನನ್ನೊಳಗೆ ತುಂಬಿಕೊಂಡೆ. ಅವರೆಲ್ಲರೂ ನನ್ನವರು ಎಂಬ ಭಾವ ನನ್ನೊಳಗೆ ಸ್ಫುರಿಸಿದಾಗ ಏನೋ ಒಂದು ತರಹ ಚೈತನ್ಯ, ಉತ್ಸಾಹ ಮೈಮನಕೆ. ಎದ್ದು ಪ್ರೆಶಪ್ ಆಗಿ ಶ್ರೀಗೆ ಪೋನ್ ಮಾಡಿದೆ. ‘ಶ್ರೀ ಬನ್ನಿ ಮನೆಗೆ, ನಾನು ಮನೆಗೆ ಬರ್ತಿದೀನಿ’ ಅಂದೆ. ನಿಜಕ್ಕೂ ಕೇಳಿದರು ‘ಶ್ರೀ ಪ್ರಾಮಿಸ್ ಶ್ರೀ… ಈಗ ನನಗೆ ನನ್ನ ತಪ್ಪಿನ ಅರಿವಾಗಿದೆ. ದಯವಿಟ್ಟು ನನ್ನ ಕ್ಷಮಿಸಿ ಬಿಡಿ. ನಿಮಗೆ ಮುಖ ತೋರಿಸಲೂ ನನ್ನಿಂದ ಆಗ್ತಿಲ್ಲ. ಅಷ್ಟು ನೋವು ನೀಡಿರುವೆ, ನಿಮ್ಮ ಭಾವನೆಗಳಿಗೆ’… ಎಂದೆ ಅಳುತ್ತಾ. ‘ಬೆಳಿಗ್ಗೆ ಬೆಳಿಗ್ಗೆ ನನ್ನ ಗೃಹಲಕ್ಷ್ಮಿ ಅಳಬಾರದು. ನಿನ್ನ ತಪ್ಪು ನಿನಗೆ ಅರಿವಾಯ್ತಲ್ಲ, ಅಷ್ಟು ಸಾಕು. ಅಳಬೇಡ… ಈ ನಂದಗೋಕುಲ ನಿನ್ನ ಬರವಿನ ದಾರಿಯನ್ನೇ ಎದುರು ನೋಡುತ್ತಿದೆ. ರೆಡೀಯಾಗಿರು, ಬರ್ತೀನಿ’… ಅಂತ ಪೋನ್ ಇಟ್ಟರು.
ಇತ್ತ ಖುಷಿಯಿಂದ ರೆಡಿಯಾಗಿ ನನ್ನ ಬಟ್ಟೆ ಬರೆ ತುಂಬಿಕೊಂಡು ಹೊರ ಬಂದೆ. ಅಪ್ಪ ಈಸಿ ಚೇರ್ ಮೇಲೆ ಕೂತು ಪೇಪರ್ ಓದ್ತಾ ಇದ್ದರು. ಅಪ್ಪ ಎಂದೆ. ಏನಮ್ಮಾ ,ಪೇಪರ್ ಓದುತ್ತಲೇ ಕೇಳಿದರು. ಅಪ್ಪ, ನಾನು ನನ್ನ ಮನೆಗೆ ಹೋಗ್ತಿದೀನಿ ಅಂದೆ. ಒಂದು ಕ್ಷಣ ಅಚ್ಚರಿಯಿಂದ ನನ್ನನ್ನೇ ದಿಟ್ಟಿಸಿ ನೋಡಿದರು. ಸುಮಾ ಎಂದರು ಮೆಲುವಾಗಿ. ನಿಜವೇನಮ್ಮ ಅಂದರು. ‘ಹೂ ಅಪ್ಪ… ನನ್ನ ತಪ್ಪು ನನಗೆ ಅರಿವಾಗಿದೆ. ಇವರಿಗೆ ಫೋನ್ ಮಾಡಿದ್ದೆ. ಬರ್ತಿದಾರೆ ಕರೆದುಕೊಂಡು ಹೋಗೋಕೆ’ ಎಂದೆ. ಶಾರದಾ ಬಾ ಇಲ್ಲಿ , ಖುಷಿಯಿಂದ ಅಮ್ಮನನ್ನು ಕೂಗಿದರು. ಅಮ್ಮ ಏನ್ರೀ ಅದು ಅಂತ ಕೂಗುತ್ತಾ ಒಳಗಿಂದ ಬರುವಾಗ, ನನ್ನ ನೋಡಿ ಎಲ್ಲಿ ಹೊರಟೆ ಎಂದರು. ಅಮ್ಮ, ನನ್ನ ಮನೆಗೆ ಅಂದೆ. ಆ… ಎಂದು ಅಮ್ಮ ಕೂಡ ಅಚ್ಚರಿಯಿಂದ ನೋಡ ತೊಡಗಿದರು. ಮಗಳ ಬದಲಾವಣೆ ಅವರಿಗೆ ಅಚ್ಚರಿ ತಂದಿತ್ತು. ‘ಮೈಥಿಲಿ, ಸುಮಾಗೆ ತಿಂಡಿ ಕೊಡು ಬೇಗ’ ಅಂದರು ಅಮ್ಮ. ಬಂದೆ ಅತ್ತೆ ಅಂತ ಒಳಗಿಂದಲೇ ಕೂಗಿದ ಅತ್ತಿಗೆ, ತಿಂಡಿ ಪ್ಲೇಟ್ ಹಿಡಿದು ಬಂದವಳಿಗೆ ನನ್ನ ನೋಡಿ ಅಚ್ಚರಿ ಆಗಿತ್ತು. ಸುಮಾ ಎಂದಳು ನನ್ನ ಬಳಿ ಬಂದು. ‘ಅತ್ತಿಗೆ, ನನ್ನ ಮನೆಗೆ ಹೊರಟಿದೀನಿ.ಇನ್ನು ನನ್ನಿಂದ ನಿಮಗೆ ತೊಂದರೆ ಏನೂ ಆಗದು’ ಎಂದೆ ತುಸು ಬಿಗು ಮಾನದಲ್ಲೇ. ಅತ್ತಿಗೆ ಕಂಗಳು ತುಂಬಿತು. ‘ಹುಚ್ಚಿ,ಯಾಕೆ ಹಾಗೆಲ್ಲ ಅನ್ನೋತೀಯಾ.ನಿನ್ನ ಮೇಲೆ ನನಗೆ ಯಾಕೆ ಕೋಪ. ನೀನು ಈ ಮನೆ ನಂದಾದೀಪ. ಮನೆ ಮಗಳು. ನಾನು ಈ ಮನೆಗೆ ಬಂದಾಕ್ಷಣ, ನಿನದೇನೂ ಇಲ್ಲಿ ಇಲ್ಲ ಅಂತಲ್ಲ ಅರ್ಥ. ಆದರೆ ನಿನ್ನ ಮೊಂಡು ಹಠದಿಂದ ನಿನ್ನ ಸಂಸಾರ ನೀನೇ ಹಾಳು ಮಾಡಿಕೊಳ್ತಾ ಇದ್ದೆಯಲ್ಲ, ಅದು ನೋಡಿ ಬೇಜಾರು ಆಯಿತು. ಅದಕ್ಕೆ, ನಾನೇ ನಿನ್ನ ಅಣ್ಣನನ್ನು, ಅತ್ತೆ, ಮಾವನನ್ನು ಒಪ್ಪಿಸಿ , ಎಲ್ಲಾ ನಂದೇ ಕಾರುಬಾರು ಅನ್ನುವಂತೆ ನಾಟಕ ಆಡಿದೆ ಅಷ್ಟೇ. ಅದು ನಿನಗೆ ನಿನ್ನ ತಪ್ಪು ಅರಿವು ಆಗಲಿ’… ಅಂತ ಹೇಳುತ್ತಾ ನನ್ನನ್ನು ತಬ್ಬಿ ಅಳ ತೊಡಗಿದಳು. ಅತ್ತಿಗೆ ಎಂದೆ ಒಲವಿನಿಂದ. ಅಷ್ಟರಲ್ಲಿ ಹೊರಗೆ ಹೋಗಿದ್ದ ಅಣ್ಣಾ, ನಮ್ಮ ಮಾತು ಕೇಳಿಸಿಕೊಂಡು ‘ನಿಜ ಕಣೋ, ಸುಮಾ.. ಅತ್ತಿಗೆ ರಚಿಸಿದ ನಾಟಕದಲ್ಲಿ ನಾವೆಲ್ಲರೂ ಪಾತ್ರಧಾರಿಗಳು ಅಷ್ಟೇ ಅಂದ ನಗುತ್ತಾ. ನನಗೆ ತಡೆಯಲಾರದಷ್ಟು ಅಳುವೇ ಬಂತು. ಹಾಗೇ ಈ ನಾಟಕದಲ್ಲಿ ನಿನ್ನ ಮನೆಯವರೂ ಇದಾರಮ್ಮ ಅಂತ ನಕ್ಕರು ಅಪ್ಪ. ‘ಹೌದು ಸುಮಾ, ನಿನ್ನ ಗಂಡ, ಅತ್ತೆ, ಮಾವ ಎಲ್ಲರೂ ನಿನ್ನನ್ನು ಪ್ರತೀದಿನ ಪೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಅವರಿಗೂ ನಿನ್ನ ಈ ಬದಲಾವಣೆ ತುಂಬಾ ಖುಷಿ ಕೊಡುತ್ತೆ’ ಅಂದ ಅಣ್ಣಾ. ಅಷ್ಟರಲ್ಲಿ ಶ್ರೀ ಬಂದಿದ್ದರು. ಅವರ ಮುಖವೇ ಹೇಳುತ್ತಿತ್ತು ಅವರಿಗೆ ನನ್ನ ಬದಲಾವಣೆಯಿಂದ ಆದ ಖುಷಿಯನ್ನು.
ಅತ್ತಿಗೆ ಖುಷಿಯಿಂದ ಎಲ್ಲರಿಗೂ ತಿಂಡಿ ಬಡಿಸಿದಳು. ಎಲ್ಲರ ಮುಖದ ಮೇಲಿನ ಈ ಸಂತೋಷ ಕಾಣದೇ ಎಷ್ಟೋ ದಿನಗಳಾಗಿ ಬಿಟ್ಟಿತ್ತು. ತಿಂಡಿ ತಿಂದ ಬಳಿಕ, ಹೊರಡೋಣ್ವಾ ,ಮನೆಯಲ್ಲಿ ನೀನು ಬರೋದನ್ನೇ ಎಲ್ಲರೂ ಕಾಯ್ತಾ ಇದ್ದಾರೆ. ಸುಮಾ ಎಂದರು ಶ್ರೀ. ಸರೀ ಹೊರಡೋಣ ಎಂದು ಹೇಳಿ, ಅಪ್ಪ ಅಮ್ಮ, ಅಣ್ಣಾ ಅತ್ತಿಗೆಗೆ ನಮಸ್ಕಾರ ಮಾಡಿದೆ. ಅತ್ತಿಗೆ ಅರಿಶಿನ ಕುಂಕುಮ ಹಚ್ಚಿ ನೂರ್ಕಾಲ ಸುಖವಾಗಿ ಇರು ಮುದ್ದು ಬಂಗಾರಿ ಎಂದು ಹರಸಿದರು. ಮನೆಗೆ ಹೊರಡಲು ಸಜ್ಜಾಗಿ, ನನ್ನ ಲಗೇಜ್ ಕಾರು ತುಂಬಿ, ಇನ್ನೇನು ಕಾರು ಹತ್ತಬೇಕು ಅನ್ನುವಷ್ಟರಲ್ಲಿ ಬಂದೆ ಒಂದು ನಿಮಿಷ ಶ್ರೀ ಎಂದು. ನನ್ನ ರೂಮಿಗೆ ಓಡಿದೆ. ಏನಾಯ್ತು ಇವಳಿಗೆ ಅಂತ ಎಲ್ಲರೂ ನೋಡ್ತಿರುವಾಗ ಆ ಒಡೆದ ಕನ್ನಡಿಯನ್ನು ಕೈಯಲ್ಲಿ ಹಿಡಿದು ಬಂದಿದ್ದೆ. ಅಮ್ಮ ನಾನಿದನ್ನು ಮನೆಗೆ ಒಯ್ಯುವೆ ಎಂದೆ. ‘ಸುಮಾ, ನಿನಗೆಲ್ಲೋ ಹುಚ್ಚಾ, ಒಡೆದ ಕನ್ನಡಿ, ಮನೆಯಲ್ಲಿ ಇರಬಾರದು ಕಣೋ. ಒಳ್ಳೆಯದಲ್ಲ’ ಅಂದ್ರು. ಅಮ್ಮ, ಆದರೆ ‘ಇವತ್ತು ನನ್ನ ಬದುಕನ್ನು ನನಗೆ ಮರಳಿಸಿದ್ದು ಇದೇ ಒಡೆದ ಕನ್ನಡಿ. ಅದರ ಮೇಲೆ ಯಾಕಮ್ಮಾ ಅಪಶಕುನದ ಆರೋಪ. ಒಡೆದ ಕನ್ನಡಿಯಲ್ಲಿ ಬಿಂಬ ಕಾಣ ಸಿಕ್ಕಿ ನನ್ನ ಬದುಕನ್ನು ಹಸಿರಾಗಿಸಿದೆ. ನನಗೆ ಜ್ಞಾನೋದಯ ಆಗುವಷ್ಟು ಅರ್ಥ ಕಲಿಸಿತು ಇದು. ಅದಕ್ಕೆ ಇದು ನನ್ನ ಜೊತೆಗೇ ಇರಲಿ ಎಂದೆ. ಅತ್ತೆ, ಅವಳಿಗೆ ಸಮಾಧಾನ ಆಗುವುದಾದರೆ ಇರಲಿ, ಬಿಡಿ. ನಿಮ್ಮ ಮಗಳ ಕೈ ನನ್ನ ಕೈಯೊಳಗೆ ಬಧ್ರವಾಗಿದೆ. ಅವಳಿಗೆ ಏನೂ ಆಗದು ಎಂದಾಗ.. ನನ್ನ ಜೀವನ ಸಾರ್ಥಕ ಎನಿಸಿತು… ಶ್ರೀ ಹೆಗಲಿಗೆ ತಲೆ ಆನಿಸಿದೆ.ಅವರ ಪ್ರೀತಿಯ ಸ್ಪರ್ಶ ಮತ್ತೆ ನನ್ನ ನವ ವಧುವಿನಂತೆ ನಾಚಿ ನೀರಾಗಿಸಿತು….
- ಶೋಭಾ ನಾರಾಯಣ ಹೆಗಡೆ – ಶಿರಸಿ.
