ನಾಡುಕಂಡ ಹಾಸ್ಯ ಚಕ್ರವರ್ತಿ ನರಸಿಂಹರಾಜು

ಶತಮಾನಕೊಬ್ಬ ಹಾಸ್ಯ ಚಕ್ರವರ್ತಿ ಕನ್ನಡ ಚಿತ್ರರಂಗದಲ್ಲಿ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ನಟ ದಿ ಟಿ ಆ‌ರ್ ನರಸಿಂಹರಾಜು. ಅವರ ಕುರಿತು ಮಾಹಿತಿಯೊಂದು ಸಂಗ್ರಹಿಸಿ ಓದುಗರೊಂದಿಗೆ ಸಂತೋಷ್ ಧರ್ಮಾರಾಜ್ ಅವರು ಹಂಚಿಕೊಂಡಿದ್ದಾರೆ, ಈ ಲೇಖನದ ಮೂಲ ಲೇಖಕರ ಪರಿಚಯ ಇದ್ದರೇ ಹಂಚಿಕೊಳ್ಳಿ…

ಹಾಸ್ಯಚಕ್ರವರ್ತಿ ನರಸಿಂಹರಾಜು ನಮ್ಮ ನಾಡು ಕಂಡ ಶ್ರೇಷ್ಠರಲ್ಲಿ ಶ್ರೇಷ್ಠ ಕಲಾವಿದರಲ್ಲೊಬ್ಬರು. ಇಂದು ಅವರ ಜಯಂತಿ, ಜನ್ಮದಿನ. ನರಸಿಂಹರಾಜು 1923ರ ಜುಲೈ 24ರಂದು ಜನಿಸಿದರು. ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಸಿ.ಬಿ. ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಂಡ ನರಸಿಂಹರಾಜು ಅವರಿಗೆ ಅಲ್ಲಿಯೇ ಬದುಕಿನ ಶಿಕ್ಷಣವೂ ಆರಂಭಗೊಂಡಿತು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಸಹಜವಾಗಿ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ಸಹಜವಾಗಿತ್ತು. ಇವರು ರಂಗಮಂಚದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರ ನಗೆಹೊನಲು ಹರಿಯುತ್ತಿತ್ತು.

ನರಸಿಂಹರಾಜು ವಿಶ್ವಾಮಿತ್ರ, ರಾಮ, ಕೆಲವೊಮ್ಮೆ ರಾವಣ, ಭರತ, ಇನ್ನು ಕೆಲವು ಸಲ ಲಕ್ಷ್ಮಿಯ ಪಾತ್ರವನ್ನೂ ನಿರ್ವಹಿಸುತ್ತಿದ್ದರು. ಆಗಲೇ ಜನಪ್ರಿಯತೆ ಪಡೆದಿದ್ದ ‘ಬೇಡರ ಕಣ್ಣಪ್ಪ` ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ನರಸಿಂಹರಾಜು ತುಂಬಾ ಜನಪ್ರಿಯತೆ ಪಡೆದಿದ್ದರು.

ನರಸಿಂಹರಾಜು ಅವರ ಪತ್ನಿ (ಫೋಟೋ ಕೃಪೆ : The Hindu)

ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪೆನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪೆನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪೆನಿ ಮುಂತಾದವುಗಳ ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ 27 ವರ್ಷಗಳನ್ನು ನರಸಿಂಹರಾಜು ಕಳೆದಿದ್ದರು.

ನಾವು ಮೆಚ್ಚಿರುವ ಯಾವುದೇ ಶ್ರೇಷ್ಠ ನಟ ನಟಿಯರಿರಲಿ, ಅವರು ನಟಿಸಿರುವ ನೂರಿನ್ನೂರು ಚಿತ್ರಗಳು ಇರುತ್ತವೆಂದರೆ ಅವರ ಬೆರಳೆಣಿಕೆಯಷ್ಟು ಪಾತ್ರಗಳು ನಮ್ಮನ್ನು ಸೆಳೆದಿರುತ್ತವೆ. ಇಲ್ಲವೇ ನಾವು ಅವರ ಅಪಾರ ಅಭಿಮಾನಿಗಳಾಗಿರುತ್ತೇವೆ ಎಂದುಕೊಂಡರೂ ಆ ಸಂಖ್ಯೆ ಇನ್ನೊಂದಷ್ಟು ಎಂಬಂತಿರಬಹುದು ಅಷ್ಟೇ. ಆದರೆ ನರಸಿಂಹರಾಜು ಅವರ ಬಗ್ಗೆ ಆ ಮಾತು ಅನ್ವಯಿಸುವುದಿಲ್ಲ. ಅವರ ಪ್ರತೀ ಪಾತ್ರವೂ ಜನತೆಗೆ ಪ್ರಿಯವೇ.

ಫೋಟೋ ಕೃಪೆ :google

ನರಸಿಂಹರಾಜು ಅವರ ಬಗ್ಗೆ ಅವರ ಪುತ್ರಿ ಸುಧಾನರಸಿಂಹರಾಜು ಅವರು ದೂರದರ್ಶನದಲ್ಲಿ ಕಾರ್ಯಕ್ರಮ ಮಾಡಿದಾಗ ಸಂದರ್ಶನದಲ್ಲಿ ಭಾಗವಹಿಸಿದ್ದ ವರನಟ ರಾಜ್‍ಕುಮಾರ್ ಅವರು ಹೇಳಿದ್ದ ಮಾತು ನೆನಪಾಗುತ್ತಿದೆ, “ಅಂದಿನ ದಿನದಲ್ಲಿ ನಿರ್ಮಾಪಕ ನಿರ್ದೇಶಕರು, ಚಲನಚಿತ್ರಗಳಿಗೆ ಮೊದಲು ನರಸಿಂಹರಾಜು ಅವರ ದಿನಗಳನ್ನು ಗುರುತುಪಡಿಸಿಕೊಂಡು ನಂತರ ನಮ್ಮಂತಹ ಕಲಾವಿದರನ್ನು ಸಂಪರ್ಕಿಸುತ್ತಿದ್ದರು“.

ರಾಜ್ ಅವರು ಹೇಳಿದ ಮಾತು ನರಸಿಂಹರಾಜು ಅವರು ಗಳಿಸಿದ ಶ್ರೇಷ್ಠತೆಗೆ ಮತ್ತು ಅಂತಹ ಮಾತನ್ನು ಹೇಳುವ ರಾಜ್ ಅವರ ಸಜ್ಜನಿಕೆಯ ಶ್ರೇಷ್ಠತೆಗೆ ಕನ್ನಡಿ ಹಿಡಿದಂತಿದೆ. ರಾಜ್‍ಕುಮಾರ್ ಮತ್ತು ನರಸಿಂಹರಾಜು ಅವರ ಜೋಡಿ ಕನ್ನಡ ಚಿತ್ರರಂಗದಲ್ಲಿ ಸಂಭವಿಸಿದ ಅದ್ಭುತಗಳಲ್ಲೊಂದು. ಈ ಜೋಡಿಗೆ ಬಾಲಣ್ಣ ಅವರೂ ಸೇರುತ್ತಾರೆ.

ಅಂದಿನ ದಿನದಲ್ಲಿ ಬಾಲಕೃಷ್ಣ ಮತ್ತು ನರಸಿಂಹರಾಜು ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಪೂರಕವಾಗಿ ಅಭಿನಯಿಸುತ್ತಿದ್ದುದು ನೆನಪಾಗುತ್ತದೆ. ಬಾಲಣ್ಣ ಅವರದು ರೇಗುವ ಅಸಹನತೆಯ ಪಾತ್ರವೋ, ಕೆಲವೊಂದು ಬಾರಿ ಕೆಡುಕು ಮಾಡುವ ಪಾತ್ರವೋ ಆಗಿರಬಹುದಾದರೂ ನರಸಿಂಹರಾಜು ಅವರ ಪಾತ್ರ ಮಾತ್ರ ಸರಳ ಸಜ್ಜನಿಕೆಯ ನೆರಳಲ್ಲೇ ಮೂಡುವ ಪೆದ್ದನದೋ, ಪೆಚ್ಚನದೋ, ತುಂಟನದೋ, ಮೂರ್ಖನದೋ ಆಗಿರುತ್ತಿತ್ತು. ಅಂತಹ ಪಾತ್ರ ನಾವಾಗಲು ಇಷ್ಟಪಡದಿದ್ದರೂ ಇಂಥಹ ಪಾತ್ರ ಯಾವಾಗಲೂ ನಮ್ಮ ಮುಂದೆ ಇರಬೇಕು ಎನಿಸುವಂತೆ ಆಪ್ತವಾಗಿರುತ್ತಿದ್ದ ಹೃದ್ಭಾವದ ಸೃಜನಸೃಷ್ಠಿಗಳವು.

ನರಸಿಂಹರಾಜು ಅವರ ಹಿಂದೆ ಹಾಗೂ ಅವರ ನಂತರ ಅನೇಕ ಕಲಾವಿದರು ಚಿತ್ರರಂಗದಲ್ಲಿ ಮೂಡಿದ್ದಾರೆ. ಹೀಗೆ ಮೂಡಿದ ಹಲವಾರು ಕಲಾವಿದರು ನಮಗೆ ಇಷ್ಟವೂ ಆಗಿದ್ದಾರೆ ನಿಜ. ಆದರೆ ನರಸಿಂಹರಾಜು ಅಂತಹ ಆಳವಾದ ಆಪ್ತತೆ ಮೂಡಿಸಿದ ನಟ ಮಾತ್ರ, ಚಾರ್ಲಿ ಚಾಪ್ಲಿನ್ ಹೊರತಾಗಿ ಅವರೊಬ್ಬರೇ.

ಕನ್ನಡದಲ್ಲಿ ಹೊಸಬಗೆಯ ಪ್ರಯೋಗ, ವೈವಿಧ್ಯಪೂರ್ಣ ಕಥೆಗಳು, ಯಶಸ್ವೀ ಚಿತ್ರಗಳು ಹೊರಬಂದದ್ದು ಕಳೆದ ಶತಮಾನದ ಐದು, ಆರು ಮತ್ತು ಏಳನೆಯ ದಶಕಗಳಲ್ಲಿ. ಈ ಅವಧಿ ಕನ್ನಡ ಚಿತ್ರರಂಗದ ಸುವರ್ಣ ಯುಗ. ಈ ಯುಗದಲ್ಲಿ ರಾರಾಜಿಸಿದವರು ನರಸಿಂಹರಾಜು. 1954ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ದಿಂದ ಆರಂಭವಾಗಿ 1979ರವರೆಗಿನ 25 ವರ್ಷಗಳಲ್ಲಿ ಅವರು 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯನಟರಾಗಿ ಬೆಳಗಿದವರು.

ರಾಜ್‌ಕುಮಾರ್ ಅವರೊಂದಿಗೆ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದ ನಂತರವೂ ನರಸಿಂಹರಾಜು ಅವರು ರಂಗಭೂಮಿಯನ್ನು ಕಡೆಗಣಿಸಲಿಲ್ಲ. ಬಾಲ ನಟನಾಗಿ ರಂಗ ಪ್ರವೇಶಿಸಿದ ನರಸಿಂಹರಾಜು ಬೆಳೆಯುತ್ತಿದ್ದಂತೆ ದೊಡ್ಡವರ ಪಾತ್ರಗಳಿಗೆ ಬಡ್ತಿ ಪಡೆದರು. ತಮ್ಮ ವಿಶಿಷ್ಟ ಅಭಿನಯದಿಂದ ಹಾಸ್ಯನಟರಾಗಿ ರೂಪುಗೊಂಡರು. ರಂಗಭೂಮಿಯಲ್ಲಿ ಪಡೆದ ಎಲ್ಲ ಬಗೆಯ ಅನುಭವ, ಅವರಿಗೆ ಸಿನಿಮಾ ಜಗತ್ತಿನಲ್ಲಿ ಉಪಯೋಗಕ್ಕೆ ಬಂತು. ಚಿತ್ರರಂಗದ ಪ್ರವೇಶಕ್ಕೆ ನಿಮಿತ್ತವಾದ ‘ಬೇಡರ ಕಣ್ಣಪ್ಪ’ದಲ್ಲಿನ ಕಾಶಿಯ ಪಾತ್ರ ಅವರಿಗೆ ಲೀಲಾಜಾಲವಾಗಿತ್ತು. ‘ಬೇಡರ ಕಣ್ಣಪ್ಪ’ ನಾಟಕದಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನಗಳಲ್ಲಿ ಅವರು ಕಾಶಿಯ ಪಾತ್ರವಹಿಸಿದ್ದರು. ಪ್ರತಿ ಪ್ರದರ್ಶನದಲ್ಲಿಯೂ ಅವರು ತೋರಿಸುತ್ತಿದ್ದ ತನ್ಮಯತೆ, ಬೆರಗು ಮೂಡಿಸುವಂತಿತ್ತು ಎಂದು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಾಸ್ಟರ್ ಹಿರಣ್ಣಯ್ಯ ಹೇಳುತ್ತಿದ್ದರು.

ಶ್ರೇಷ್ಠ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ನರಸಿಂಹರಾಜು ಅವರ ಪೀಚು ಶರೀರ, ವಿಶಿಷ್ಟ ಬಗೆಯ ಹಾವಭಾವಗಳ ಮ್ಯಾನರಿಸಂಗಳು ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು. ಅವರ ಚಿತ್ರಗಳನ್ನು ಟೆಂಟ್‌ಗಳಲ್ಲಿ ನೋಡುತ್ತಿದ್ದ ಗ್ರಾಮೀಣರು, ಉಬ್ಬು ಹಲ್ಲಿನ ತಮ್ಮ ಮಿತ್ರರನ್ನು ‘ನರಸಿಂಹರಾಜು’ ಎಂದೇ ಕರೆಯುವಷ್ಟು ದಟ್ಟ ಪ್ರಭಾವವನ್ನು ನರಸಿಂಹರಾಜು ಮೂಡಿಸಿದ್ದರು. ಇದು ಜನಪದ ನಾಯಕನೊಬ್ಬ ಬೀರಿದ ಪ್ರಭಾವದಂತೆ ತೋರುತ್ತದೆ.

ನರಸಿಂಹರಾಜು ಅವರ ಪ್ರತೀ ಪಾತ್ರವೂ ನಮಗೆ ಪ್ರಿಯವೇ. ಅದರಲ್ಲಿ ಯಾವ ಯಾವ ಪಾತ್ರ ಇಷ್ಟ ಎಂಬುದು ಹೇಳಲಾಗದ ಮಾತು. ನಾವು ಅವರ ಎಷ್ಟು ಪಾತ್ರಗಳನ್ನು ನೋಡಿದ್ದೇವೆ ಎಂಬುದಷ್ಟೇ ನಮಗೆ ಹೇಳಲು ಸಾಧ್ಯವಿರುವಂತದ್ದು. ಏಕೆಂದರೆ, ಅವರ ಪ್ರತೀ ಪಾತ್ರ ನಿರ್ವಹಣೆಯೂ ನಮಗೆ ಇಷ್ಟವಾಗಿರುವಂತದ್ದೆ. ‘ಬೇಡರ ಕಣ್ಣಪ್ಪ’ದಿಂದ ಪ್ರಾರಂಭಗೊಂಡು ಅವರು ನಟಿಸಿರುವ ಪಾತ್ರಗಳ ವೈವಿಧ್ಯ ಅದರಲ್ಲಿ ಅವರು ಹರಿಸಿರುವ ಹಾಸ್ಯವೆಂಬ ಚೈತನ್ಯದ ವೈವಿಧ್ಯ ನಿತ್ಯ ಸ್ಮರಣೀಯವಾದುದು. ಬಹುಶಃ ನರಸಿಂಹರಾಜು ಅವರೊಬ್ಬರಿಲ್ಲದಿದ್ದರೆ ನಾವು ನೋಡಿದ ಚಿತ್ರಗಳು ಹೇಗಿದ್ದಿರಬಹುದಿತ್ತು ಎಂದು ಊಹಿಸುವುದು ಕೂಡಾ ಕಷ್ಟ ಸಾಧ್ಯ.

‘ಸ್ಕೂಲ್ ಮಾಸ್ಟರ್’ ಚಿತ್ರದ ಭಾಮೆಯ ನೋಡಲು ತಾ ಬಂದ ಹಾಡಿನಲ್ಲಿ ‘ಕಣ್ ಸನ್ನೆಯಲೇ ಕನ್ಯೆಯ ಮನ ಸೆಳೆದ’ ಎಂದು ತಾನು ನೋಡಲು ಬಂದ ಹುಡುಗಿ ಹಾಡಿದರೆ ‘ಆ ಚಿನ್ಮಯ ಮೂರುತಿ ಶ್ರೀಗೋವಿಂದ’ನ ಸ್ಥಾನದಲ್ಲಿ ಕುಳಿತ ಈ ಪೆಚ್ಚು ನರಸಿಂಹರಾಜು ಪಿಳಿ ಪಿಳಿ ಕಣ್ಸನ್ನೆ ಮಾಡಿದ್ದು ಕೂಡಾ ಅಷ್ಟೇ ಮನಮೋಹಕವಾದದ್ದು. ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ನರಸಿಂಹರಾಜು ಅವರಂತೆ ತೆನಾಲಿ ರಾಮಕೃಷ್ಣನಾಗಿ ಮತ್ತ್ಯಾರೂ ಅಭಿನಯಿಸಿರಲಾರರು. ‘ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ಉದಯ್ ಕುಮಾರ್ ಅವರ ಶ್ರೇಷ್ಠ ಸಿಡುಕು ಮತ್ತು ರಾಜ್ ಕುಮಾರ್ ಅವರ ಸರ್ವೋತ್ಕೃಷ್ಟ ಸೌಮ್ಯತೆಯ ನಡುವೆ ಕಪಿ ಚೇಷ್ಟೆಯ, ಆದರೆ ಕಡೆಯಲ್ಲಿ ಅಷ್ಟೇ ಗೌರವಯುತವಾಗಿ ಪರಿವರ್ತಿತವಾಗುವ ನಕ್ಷತ್ರಿಕನಾದ ನರಸಿಂಹರಾಜು ಅಭಿನಯ ಮತ್ತೊಂದು ಶ್ರೇಷ್ಠ ಮಜಲಿನದು. ಜೊತೆಗೆ ಆ ಪಾತ್ರ, ಚಿತ್ರದಲ್ಲಿನ ಸಶಕ್ತ ಕೊಂಡಿಯಾಗಿ ಇಡೀ ಚಿತ್ರವನ್ನೇ ತನ್ನ ಹಿಡಿತದಲ್ಲಿ ನಡೆಸುವಷ್ಟು ಸಮರ್ಥವಾದದ್ದು ಕೂಡಾ. ‘ಅಂಡ ಪಿಂಡ ಬ್ರಹ್ಮಾಂಡ’ ಎಂದು ಮೂರ್ಖನಾಗಿ ಮಾತನಾಡಿ ‘ನಿನ್ನ ಪಿಂಡ’ ಎಂದು ವಿಶ್ವಾಮಿತ್ರರಿಂದ ಬೈಸಿಕೊಳ್ಳುವುದಾಗಲಿ, ‘ಏನಿದೀ ಗ್ರಹಚಾರವೋ’ ಎಂದು ಹರಿಶ್ಚಂದ್ರನ ಪ್ರಾಣ ತಿನ್ನುವುದಾಗಲೀ, ‘ಅಪ್ಪಾ ನನ್ನನ್ನು ಕ್ಷಮಿಸಿ ಬಿಡಪ್ಪ’ ಎಂದು ಹರಿಶ್ಚಂದ್ರನ ಕ್ಷಮಾಪಣೆ ಯಾಚಿಸುವ ದೈನ್ಯತೆಯಾಗಲೀ, ಕಡೆಗೆ ಗುರು ವಿಶ್ವಾಮಿತ್ರರಿಗೆ “ಗುರುಗಳೇ, ಒಂದು ಮಾತು ಮಾತ್ರ ನನ್ನ ಅನುಭಾವಕ್ಕೆ ಬಂತು, ಈ ಅಂಡ ಪಿಂಡ ಬ್ರಹ್ಮಾಂಡದಲ್ಲಿ ಅವರರವರ ಕರ್ಮ ಅವರವರದು!” ಎಂದು ಹೇಳುವ ವೇದಾಂತ’ವಾಗಲಿ ಚಿತ್ರರಂಗದ ನಾನು ಕಂಡ ಪಾತ್ರಗಳಲ್ಲಿ ನನ್ನನ್ನು ಅತೀವವಾಗಿ ಹಿಡಿದಿಟ್ಟ ಒಂದು ಅದಮ್ಯತೆ. ಸಂಧ್ಯಾರಾಗ, ವೀರ ಕೇಸರಿ, ರತ್ನ ಮಂಜರಿ, ಕಣ್ತೆರೆದು ನೋಡು, ರಾಯರ ಸೊಸೆ, ಪ್ರೊಫೆಸರ್ ಹುಚ್ಚೂರಾಯ ಹೀಗೆ ನೀವು ಅವರ ಇನ್ನೂರೈವತ್ತು ಚಿತ್ರಗಳಲ್ಲಿ ನೋಡಿರುವಷ್ಟನ್ನೂ ಒಂದಕ್ಕೊಂದು ಪೋಣಿಸಿಕೊಂಡು ಹೋಗಬಹುದು.

ಬಹುಶಃ ಅಂದಿನ ದಿನದಲ್ಲಿ ನರಸಿಂಹರಾಜು ಅವರನ್ನೇ ಕೇಂದ್ರವಾಗಿಸಿ ಚಾರ್ಲಿ ಚಾಪ್ಲಿನ್ ಸಿನಿಮಾದಂತೆ ಒಂದು ಸಿನಿಮಾ ಯಾಕೆ ಸೃಷ್ಟಿಯಾಗಲಿಲ್ಲ ಎಂದು ನನಗೆ ಆಗಾಗ ಅನ್ನಿಸಿದೆ. ಆದರೆ ಕನ್ನಡದ ಕೆಲವೊಂದು ಹಾಸ್ಯ ಕಲಾವಿದರು ಹೀರೋ ಆಗಲು ಹೋಗಿ ಚಿತ್ರ ಪ್ರೇಕ್ಷಕರಿಗೆ ತಲೆ ನೋವು ತಂದಿರುವುದನ್ನು ನೆನೆಸಿಕೊಂಡರೆ ನಮಗೆ ನರಸಿಂಹರಾಜು ಅವರು ಇಷ್ಟವಾಗಿದ್ದು ಅವರು ಹಾಸ್ಯಪಾತ್ರವಾಗಿಯೇ ಉಳಿದದ್ದರಿಂದ ಎಂದು ಕೂಡಾ ಅನಿಸುತ್ತದೆ.

ನರಸಿಂಹ ರಾಜು ಅವರು ತಾವೇ ನಿರ್ಮಿಸಿದ ‘ಪ್ರೊಫೆಸರ್ ಹುಚ್ಚೂರಾಯ’ ಚಿತ್ರದಲ್ಲಿ ಕೂಡಾ ತಮ್ಮನ್ನೇ ತಾವು ವಿಜ್ರಂಭಿಸಿಕೊಳ್ಳದೆ ಹಲವಾರು ಸಾಮಾಜಿಕ ನಿಲುವುಗಳ ಒಂದು ಸುಂದರ ಕಥೆ ಹೆಣೆದು ಅದರಲ್ಲಿ ತಾವೊಂದು ಉತ್ತಮ ಹೃದಯವಂತ ವ್ಯಕ್ತಿಯಾಗಿ, ಮತ್ತು ತಮ್ಮ ಸಾಮರ್ಥ್ಯದ ಕುರುಹಾದ ಹಾಸ್ಯ ಲೇಪನದ ಪಾತ್ರವಾಗಿ ಮಾತ್ರ ಮೂಡಿದ್ದು, ನರಸಿಂಹರಾಜು ತಮ್ಮನ್ನು ಎಂದೂ ಅಗತ್ಯಕ್ಕಿಂತ ತೋರಿಕೊಳ್ಳದೆ ತಮ್ಮ ಕಲಾವಿದನನ್ನು ಮಾತ್ರ ಹೊರತಂದ ಶ್ರೇಷ್ಠತೆಯನ್ನು ಸಾರಿ ಹೇಳುತ್ತದೆ.

“ನಗಬೇಕು ನಗಿಸಬೇಕು, ಇದೇ ನನ್ನ ಧರ್ಮ ನಗಲಾರೆ ಅಳುವೇ ಎಂದರೆ ಅದೇ ನಿನ್ನ ಕರ್ಮ” ಎಂಬುದು ನರಸಿಂಹ ರಾಜು ಅವರ ಮೇಲೆ ಚಿತ್ರಿತವಾದ ‘ನಕ್ಕರೆ ಅದೇ ಸ್ವರ್ಗ’ ಚಿತ್ರದ ಗೀತೆ. ಇದನ್ನು ಚಾಚೂ ತಪ್ಪದೆ ತಮ್ಮ ಬಾಳಿನ ತಿರುಳನ್ನಾಗಿ ಮಾಡಿಕೊಂಡವರು ನರಸಿಂಹರಾಜು. ಅವರು ಯಾರ ಬಗ್ಗೆ ಕೆಟ್ಟ ಮಾತನ್ನು ಆಡಿದ್ದಾಗಲೀ, ಅವರ ಬಗ್ಗೆ ಯಾರೂ ಹಗುರವಾಗಿ ಮಾತನಾಡಿದ್ದಾಗಲೀ ನಾವೆಂದು ಮಾಧ್ಯಮದಲ್ಲಿ ಓದಲಿಲ್ಲ.

ಕೆಲವು ವರ್ಷ ಮದ್ರಾಸಿನಲ್ಲಿ ನೆಲೆಸಿದ್ದ ನರಸಿಂಹರಾಜು ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆಗಳು ಬೆಂಗಳೂರಿನಲ್ಲಿ ಆರಂಭವಾದಾಗ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿದರು. ಮಕ್ಕಳು ಮೊಮ್ಮಕ್ಕಳೊಂದಿಗೆ ನೆಲೆಸಿದ್ದ ಕುಟುಂಬ ಸಮೇತ ನರಸಿಂಹರಾಜು, ತಮ್ಮ 56ನೇ ವಯಸ್ಸಿನಲ್ಲಿ 1979ರ ಜುಲೈ 20 ರಂದು ಎಂದಿನಂತೆ ರಾತ್ರಿ ಉಪಹಾರ ಸೇವಿಸಿ ಮಲಗಿದ್ದರು. ಮುಂಜಾನೆ 4.30ರ ವೇಳೆಗೆ ತೀವ್ರ ಹೃದಯಾಘಾತದಿಂದ ನಿಧನರಾದರು.

ನರಸಿಂಹರಾಜು ಅವರು ಕನ್ನಡ ಚಿತ್ರರಂಗದ ಸುವರ್ಣ ಕಾಲ ಎನ್ನಬಹುದಾದ ಅರವತ್ತು ಎಪ್ಪತ್ತರ ದಶಕದಲ್ಲಿ ಹಾಸ್ಯಚಕ್ರವರ್ತಿಯಾಗಿ ಕನ್ನಡಿಗರನ್ನು ರಂಜಿಸಿದ್ದರು. ಇಂತಹ ನಟನಾ ಚಕ್ರವರ್ತಿಗೆ ಒಮ್ಮೆಯೂ ರಾಜ್ಯ ಸರ್ಕಾರದ ಪ್ರಶಸ್ತಿ ಕೂಡಾ ಬರಲಿಲ್ಲ. ಅವರ ಹೆಸರಿನಲ್ಲಿ ಯಾವೊಂದು ಸ್ಮಾರಕ, ರಸ್ತೆ, ಕಟ್ಟಡಗಳು ಮೂಡಲಿಲ್ಲ. ಆದರೆ ಅವರು ಚಿತ್ರರಸಿಕರ ಹೃದಯದಲ್ಲಿ ಮೂಡಿರುವಷ್ಟು ಉಳಿದವರು ನಿಲ್ಲಬಲ್ಲರು ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಇದನ್ನೇ ಇರಬೇಕು ವಚನಕಾರರು ಹೇಳಿರುವುದು “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂದು. ನರಸಿಂಹ ರಾಜು ಅಂತಹ ತಾನೂ ನಕ್ಕು, ಇತರರನ್ನೂ ನಗೆಗಡಲಿನಲ್ಲಿ ತೇಲಿಸಿದ ಆತ್ಮಉಂಟೆ? ಈ ಮಹಾನ್ ಚೇತನಕ್ಕೆ ನಮ್ಮ ಗೌರವದ ಪ್ರೀತಿಯ ಆತ್ಮೀಯ ನಮನ.

ವಿನಂತಿ:
ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಬಗ್ಗೆ ತುಂಬಾ ವಿವರವಾದ ಅತ್ಯುತ್ತಮ ಲೇಖನ, ಈ ಲೇಖನ ಬರೆದವರ ಹೆಸರು ಗೊತ್ತಿದ್ದರೆ ದಯವಿಟ್ಟು ಹಂಚಿಕೊಳ್ಳಿ,

ಕೃಪೆ :
ವಾಟ್ಸಪ್ ಜ್ಞಾನ ಬಂಡಾರದಿಂದ.


  • ಸಂಗ್ರಹ: ಸಂತೋಷ್ ಧರ್ಮಾರಾಜ್ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW