ಬಯಲಿನಂತೆ ಸ್ವಚ್ಛಂದವಾಗಿರುವ ನಿನ್ನೊಲವಿಗೆ ದೋಷವೆಲ್ಲಿಹದು ಹೇಳು?…ಕವಿಯತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಮುಂದೆ ಓದಿ…
ಹಗಲು ರಾತ್ರಿ ಬೆಳಗುವ
ಸೂರ್ಯ ಚಂದ್ರರಲೂ
ಕಪ್ಪುಕಲೆಗಳಿರಬಹುದು!
ಮೈಮನವೆಲ್ಲಾ…
ಒಲವಿನರಾಶಿ ಹೊತ್ತ
ನಿನ್ನ ನಿಷ್ಕಲ್ಮಶ ಭಾವದಲಿ
ಅದ್ಯಾವ ದೋಷ ನಾ
ಹುಡುಕಲಿ ಹೇಳು?
ದೃಷ್ಟಿಯಿರುವ ಕಂಗಳು
ಬುದ್ಧಿಯಿರುವ ಮೆದುಳು
ಯಾಮಾರಬಹುದು!
ಆದರೆ…
ತುಂಬೊಲವಿನ ಹೃದಯ
ಮೋಸಕೆ ಕಂಪಿಸುವುದೇ ಹೇಳು?
ಕೊನೆಯ ಮಾತು…
ಮನಸಿಟ್ಟು ಕೇಳು…..
ದೋಷದ ಮನಕೆ ಒಲವು ಕಾಣದು
ಒಲವಿನ ಮನಕೆ ದೋಷ ಕಾಣದು!
ಬಯಲಿನಂತೆ ಸ್ವಚ್ಛಂದವಾಗಿರುವ
ನಿನ್ನೊಲವಿಗೆ ದೋಷವೆಲ್ಲಿಹದು ಹೇಳು?
- ಡಿ.ಶಬ್ರಿನಾ ಮಹಮದ್ ಅಲಿ – ಚಳ್ಳಕೆರೆ
