ಮುಪ್ಪಿನಲ್ಲಿ ದೇಹ ಹುರುಪಿನಲ್ಲಿಡಬೇಕೆಂದರೆ ಏನು ಮಾಡಬೇಕು ಎನ್ನುವುದನ್ನು ಲೇಖಕರಾದ ಶಿವಕುಮಾರ್ ಬಾಣಾವರ ಅವರು ಲೇಖನದ ಮೂಲಕ ಓದುಗರಿಗೆ ಉತ್ತಮ ಸಲಹೆ ನೀಡಿದ್ದಾರೆ, ಮುಂದೆ ಓದಿ…
ಮುಪ್ಪು ಎಂದರೆ ತಟ್ಟನೆ ಮನಸಿನಲ್ಲಿ ಒಂದು ಚಿತ್ರಣ ಮೂಡುತ್ತದೆ. ಸುಕ್ಕುಗಟ್ಟಿದ ಚರ್ಮ… ಪುರುಷರಾದರೆ ಬೊಕ್ಕು ತಲೆ.. ಮಹಿಳೆಯರಾದರೆ ಕೊತಂಬರಿ ಸೂಡಿನಂತಹ ತುರುಬು…ಕಣ್ಣಿಗೊಂದು ಚಾಳಿಸ್…ಕೈಲೊಂದು ಕೋಲು….ಬತ್ತಿದ ದೇಹ…ಬಾಗಿದ ಬೆನ್ನು. ಇವುಗಳೆಲ್ಲವೂ ಕಣ್ಣಿಗೆ ಕಾಣುವ ವೃದ್ಧ್ಯಾಪ್ಯದ ಲಕ್ಷಣಗಳು.

ಫೋಟೋ ಕೃಪೆ : google
ಮುಪ್ಪಿನಲ್ಲಿ ಕಣ್ಣಿಗೆ ಕಾಣದ, ಆದರೂ ಹೆಚ್ಚಿನ ವೃದ್ಧರು ಅನುಭವಿಸುವ ಯಾತನೆಗಳೆಂದರೆ, ಆತಂಕ… ಹತಾಸೆ… ದುಃಖ…ಅಭದ್ರತೆ…ಆರ್ಥಿಕ ಅವಲಂಬನೆ…ಮಕ್ಕಳ ನಿರ್ಲಕ್ಷ್ಯ… ಸಾವಿನ ಭಯ ಹೀಗೆ ಹತ್ತಾರು ಸಮಸ್ಯೆಗಳಲ್ಲಿ ಕೆಲವೊಂದಷ್ಟನ್ನಾದರು ಅನುಭವಿಸುತ್ತಿರುತ್ತಾರೆ.
ಮುಪ್ಪು ಪ್ರಕೃತಿಯ ಧರ್ಮ. ಬದುಕಿನಲ್ಲಿ ಎಲ್ಲರೂ ಮುಪ್ಪನ್ನು ಅನುಭವಿಸಲೇಬೇಕು. ಅದು ಕರೆಯದೇ ಬರುವ ಅತಿಥಿ ಇದ್ದ ಹಾಗೆ. ಬೇಡವೆಂದರೂ ಬಂದು ಒಕ್ಕರಿಸುತ್ತದೆ. ಕೆಲವೊಬ್ಬರಿಗೆ ಬೇಗ ಬರಬಹುದು, ಮತ್ತೊಬ್ಬರಿಗೆ ತಡವಾಗಿ ಬರಬಹುದು. ಮುಪ್ಪನ್ನು ಮುಂದೂಡಬಹುದೇ ವಿನಃ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಮುಪ್ಪನ್ನು ಸ್ವಲ್ಪಮಟ್ಟಿಗೆ ಮುಂದೆ ಹಾಕಲು ಸುಮಾರು ನಾಲ್ವತ್ತನೆಯ ವರ್ಷದಿಂದಲೇ ಯೋಜನೆ ಹಾಕಿಕೊಂಡರೆ ಒಳ್ಳೆಯದು. ವಯಸ್ಸಿದೆ ಎಂದು ಬೇಕಾಬಿಟ್ಟಿ ತಿನ್ನದೆ ಹಿತಮಿತವಾದ ಆಹಾರ ಸೇವನೆ. ಕೆಟ್ಟ ಕೊಬ್ಬಿನಾಂಶಗಳನ್ನು ದೂರವಿಡುವುದು. ಸಿಹಿ ಮತ್ತು ಕರಿದ ಪದಾರ್ಥಗಳ ಕಡಿಮೆ ಸೇವನೆ ದೈಹಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ವಯಸ್ಸಾದ ನಂತರವೂ ಆರೋಗ್ಯ ಚೆನ್ನಾಗಿ ಉಳಿಯುತ್ತದೆ.
ನಮಗೆ ಈಗಾಗಲೇ ಮುಪ್ಪು ಬಂದೆ ಬಿಟ್ಟಿದೆ!! ಅದನ್ನು ಹಾಗೇಯೆ ಒಪ್ಪಿಕೊಂಡು ಬಿಟ್ಟರಾಯಿತು!! ನಾವು ಮುಪ್ಪು ಬಂದಾಗ ತೋರುವ ಪ್ರತಿಕ್ರಿಯೆ ಮೇಲೆ ನಮ್ಮ ಆರೋಗ್ಯ ನಿಂತಿದೆ. ನಾವು ಹೆಚ್ಚಿಗೆ ಪ್ರತಿಕ್ರಿಯೆ ತೋರದೇ ಇದೊಂದು ಸಾಮಾನ್ಯ ಕ್ರಿಯೆಯೆಂದು ದಿನನಿತ್ಯ ಜೀವನಕ್ಕೆ ಅಂಟಿಕೊಂಡರೆ ಮಾನಸಿಕವಾಗಿ ನೆಮ್ಮದಿ ಇರಬಹುದು.

ವಯಸ್ಸಿನಲ್ಲಿ ಹೊಟ್ಟೆಗೆ ಬಟ್ಟೆ ಕಟ್ಟಿ ವಿಶ್ರಾಂತಿಯಿಲ್ಲದೆ ದುಡಿದು, ಒಂದೊಂದೇ ರೂಪಾಯಿ ಗಳಿಸಿಟ್ಟು ಆರೋಗ್ಯದ ಕಡೆ ಗಮನ ಕೊಡದೇ ಹತ್ತಾರು ರೋಗಗಳನ್ನು ಅಂಟಿಸಿಕೊಂಡಿರುತ್ತೇವೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಅವರಿಗೆ ಮದುವೆ ಮಾಡಿ, ಜವಾಬ್ದಾರಿ ಕಳೆದುಕೊಂಡು… ಇನ್ನು ಮುಂದೆ ಕಷ್ಟದ ಕಾಲಗಳು ಮುಗಿದು… ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕೆನ್ನುವಷ್ಟರಲ್ಲಿ ಮುಪ್ಪು ಆವರಿಸಿ ಬದುಕಿನ ಚೈತನ್ಯವನ್ನೆ ಕಸಿದುಕೊಂಡಿರುತ್ತದೆ.
ಮಕ್ಕಳಿಗೆ ಮದುವೆಯಾಗಿ ಇನ್ನು ಮುಂದೆ ನೆಮ್ಮದಿ ಹುಡುಕಾಟದಲ್ಲಿರುವಾಗ ಕೆಲವೊಂದು ಹೊಸ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಮುಪ್ಪಿನಲ್ಲಿ ನಮ್ಮನ್ನು ಸಾಕಲೆಂದು ಮುದ್ದು ಮಾಡಿ ಬೆಳೆಸಿದ ಮಗ ಹೆಂಡತಿ ಬಂದ ನಂತರ ಬದಲಾಗುತ್ತಾನೆ. ಅಥವಾ ಪರಿಸ್ಥಿತಿಯೇ ಅವನನ್ನು ಬದಲಾಯಿಸುತ್ತದೆ. ಪ್ರತಿದಿನ ಮನೆಯಲ್ಲಿ ಕಿರಿಕಿರಿ ಪ್ರಾರಂಭವಾಗುತ್ತದೆ. “ಅಪ್ಪಾ ಅಮ್ಮಾ ನೀವು ನಾವು ಹೇಳಿದಂತೆ ಕೇಳುವುದಾದರೆ ಮಾತ್ರ ನಮ್ಮ ಜೊತೆ ಇರಬಹುದು ಇಲ್ಲದಿದ್ದರೆ….” ಎಂಬ ರಾಗ ತೆಗೆಯುತ್ತಾನೆ.
ಮಗನಿಗೆ ಒಳ್ಳೆಯ ಕೆಲಸ ಸಿಗಲೆಂದು ನಾವು ಕಷ್ಟಕ್ಕೆ ಬಿದ್ದು ಒಳ್ಳೆಯ ಶಾಲೆಗೆ ಸೇರಿಸಿ, ವಿದೇಶದಲ್ಲಿ ಮಕ್ಕಳಿಗೆ ಕೆಲಸ ದೊರೆತಾಗ ಸಂಬಂಧಿಕರ ಮುಂದೆ ಎದೆ ಉಬ್ಬಿಸಿ ಮಕ್ಕಳನ್ನು ಹೊಗಳಿರುತ್ತೇವೆ. ಅದು ಸಹಜ ತಾನೆ ಮಕ್ಕಳ ಸಾಧನೆಗೆ ಖುಷಿ ಪಡುವರು ಪಾಲಕರೇ. ಆದರೆ ಕೆಲವೆ ವರ್ಷಗಳಲ್ಲಿ ಮಗ ಅಲ್ಲಿಯ ಹೆಣ್ಣನ್ನೇ ಮದುವೆ ಮಾಡಿಕೊಂಡು ಅಲ್ಲಿಯೇ ಉಳಿದು ಬಿಟ್ಟರೇ ಪಾಲಕರಿಗೆ ವೃದ್ಧಾಶ್ರಮವೇ ಗತಿಯಾಗುತ್ತದೆ.
ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ. ಅವರಿಗೆ ಮದುವೆ ಮಾಡುವುದು ನಮ್ಮ ಜವಾಬ್ದಾರಿ. ಅದನ್ನು ಮುಗಿಸಿ ಬಿಡೋಣ. ಆದರೆ ಅವರಿಂದ ನಾವು ಬಹಳಷ್ಟು ನಿರೀಕ್ಷೆ ಮಾಡದೇ ಇರುವುದು ಒಳ್ಳೆಯದು. ಅವರಿಂದ ಅತಿಯಾದ ನಿರೀಕ್ಷೆ ನಿರಾಸೆಗೆ ಕಾರಣವಾಗಬಹುದು.

ಫೋಟೋ ಕೃಪೆ : google
ಮುಪ್ಪಿನಲ್ಲಿ ಎಲ್ಲ ಮಕ್ಕಳು ಹೆತ್ತವರನ್ನು ಸಾಕುವುದಿಲ್ಲಂತಲ್ಲಾ, ಹೆಚ್ಷಿನ ಮಕ್ಕಳು ಸಾಕುವುದಿಲ್ಲವೆಂಬುದು ಸತ್ಯ. ಮುಖ್ಯವಾಗಿ ವೃದ್ಧಾಪ್ಯದಲ್ಲಿ ಒಂಟಿತನ ಕಾಡುತ್ತದೆ. ಸಂಗಾತಿಯ ಅವಶ್ಯಕತೆ ಹರೆಯದಕ್ಕಿಂತಲೂ ಮುಪ್ಪಿನಲ್ಲಿಯೇ ಹೆಚ್ಚು. ಹೆಂಡತಿಯನ್ನು ಕಳೆದುಕೊಂಡ ವಿಧುರ, ಗಂಡನನ್ನು ಕಳೆದುಕೊಂಡ ತಾಯಿಂದಿರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.
ಮುಪ್ಪಿನಲ್ಲಿ ಸಂಗಾತಿ ಇದ್ದರೆ ಒಬ್ಬರಿಗೊಬ್ಬರು ಆಸರೆಯಾಗಿ ಜೀವನ ನೂಕುತ್ತಾರೆ. ಮಾತಿಗೊಬ್ಬರು ಮನೆಯಲ್ಲಿದ್ದರೆ ಎಷ್ಟೋ ನೋವುಗಳನ್ನು ಮರೆಯಬಹುದು. ಒಬ್ಬರಿಗೊಬ್ಬರು ಮನಸ್ಸುಗಳನ್ನು ಅನೇಕ ವರ್ಷಗಳಿಂದ ಅರ್ಥೈಸಿಕೊಂಡಿರುವುದರಿಂದ ಇಬ್ಬರ ಮನಸ್ಸಿಗೂ ಸಮಾಧಾನವಾಗುತ್ತದೆ. ಬಿಡುವೇ ಇಲ್ಲದ ಇಂದಿನ ಯುವ ಜನಾಂದೊಂದಿಗೆ ಒಂಟಿ ಬದುಕಿನಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತದೆ.
ಮುಪ್ಪು ಬಂತೆಂದರೆ ಸಾವಿನ ಸಮೀಪದಲ್ಲಿ ಇದ್ದೇವೆ ಎಂಬ ನಿರಾಶಾವಾದಿ ಆಗದೆ, ಬೇಂದ್ರೆಯವರ “ನಾನು ಇರುವವರೆಗೂ ಸಾವು ಬರುವುದಿಲ್ಲ, ಸಾವು ಬಂದಾಗ ನಾನು ಇರುವುದಿಲ್ಲ” ಎಂಬ ವಾಕ್ಯ ನೆನಪಿಸಿಕೊಂಡರೆ ಸಾಕು. ಎಲ್ಲರಿಗೂ ಗೊತ್ತಿರುವಂತೆ ಹುಟ್ಟು ಆಕಸ್ಮಿಕವಾದರೂ ಸಾವು ಅನಿವಾರ್ಯ. ಸಾವಿನ ಭಯದಲ್ಲಿ ಜೀವನ ನರಕ ಮಾಡಿಕೊಳ್ಳುವುದಕ್ಕಿಂತ ಹೊಸ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಚೈತನ್ಯದ ಚಿಲುಮೆಯಾದರೆ ಮುಪ್ಪಿನ ಜೀವನ ನೆಮ್ಮದಿಯ ಜೀವನವಾಗಬಹುದು.

ಫೋಟೋ ಕೃಪೆ : google
ನಮ್ಮ ನಿವೃತ್ತಿ ಜೀವನವೇ ಮುಪ್ಪು. ಆಗ ನಿರುದ್ಯೋಗದಿಂದ ಮನೆಯಲ್ಲಿರುತ್ತೇವೆ. ಮುಂಜಾನೆಯಿಂದ ಸಂಜೆಯವರೆಗೆ ದುಡಿದವರಿಗೆ ಮನೆಯಲ್ಲಿ ಖಾಲಿತನ ಮೈ ಮನಗಳಿಗೆ ಜಡ್ಡು ಹಿಡಿದಂತಾಗುತ್ತದೆ. ಮನೆಯವರ ಮೇಲೆ ಸಿಟ್ಟು ಬೇಡವೆಂದರೂ ಬರುತ್ತದೆ. ಅದಕ್ಕೆ ಕಾರಣವೇ ಅಭದ್ರತೆ. ರಿಟೈರ್ಡ್ ಆಗಿ ರೀಜನರೇಟ್ ಆಗಬೇಕು. ಹೊಸ ಹೊಸ ಹವ್ಯಾಸವನ್ನು ಬೆಳಸಿಕೊಂಡು ಮುಪ್ಪಿನ ದೇಹದಲ್ಲಿ ಯುವ ಹುರುಪು ಪುಟದೇಳಬೇಕು. ಕೆಳಕಂಡ ಕೆಲವೊಂದು ಹವ್ಯಾಸಗಳನ್ನು ಬೆಳಸಿಕೊಳ್ಳಬಹುದು.
- ಮನಸ್ಸು ಬಿಚ್ವಿ ಮಾತನಾಡುವುದು, ಆತ್ಮೀಯರ ಜೊತೆ ಸ್ನೇಹಿತರೊಡನೆ ಒಳ್ಳೆಯ ಒಡನಾಟವನ್ನು ಇಟ್ಟುಕೊಳ್ಳುವುದು.
- ಸಂಯಮದ ಜೀವನವನ್ನು ಮೈಗೂಡಿಸಿಕೊಳ್ಳುವುದು.
- ನಮ್ಮಲ್ಲಿರುವ ಜ್ಞಾನವನ್ನು ಅವಶ್ಯಕತೆ ಇದ್ದಲ್ಲಿ ಹಂಚುವುದು.
- ಸ್ವಯಂ ಸೇವಕರಾಗಿ ಸಾರ್ವಜನಿಕ ವಾಗಿ ನಡೆಯುವ ಒಳ್ಳೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.
- ಕೀರ್ತನೆ, ನಗೆಕೂಟಗಳಲ್ಲಿ ಭಾಗವಹಿಸುವುದು.
- ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮುಂತಾದವುಗಳನ್ನು ಸಾಕಿ ಅವುಗಳ ಜೊತೆ ನೆಮ್ಮದಿಯಿಂದ ವೇಳೆ ಕಳೆಯಬಹುದು.
- ಪ್ರತಿದಿನ ಡೈರಿಯನ್ನು ಬರೆಯುವುದು.
- ಮುಖ್ಯವಾಗಿ ತಂತ್ರಜ್ಞಾನವನ್ನು ಕಲಿಯುವುದು, ಕಂಪ್ಯೂಟರ್, ಸ್ಮಾರ್ಟ ಫೋನ್ ಗಳ ಬಳಕೆಯಿಂದ ಸಾಕಷ್ಟು ಜ್ಞಾನವನ್ನು ಪಡೆಯಬಹುದು.
- ಸಾಮಾಜಿಕ ಜಾಲತಾಣಗಳ ಬಗ್ಗೆ ತಿಳಿದುಕೊಂಡರೆ ಮುಪ್ಪಿನ ಸಂತೃಪ್ತ ಜೇವನಕ್ಕೆ ಬೇಕಾದ ಸಲಹೆಗಳು ದೊರೆಯಬಹುದು.
- ಮನಸ್ಸಿಗೆ ನೆಮ್ಮದಿ ನೀಡುವ ಪುಸ್ತಕಗಳನ್ನು ಓದುವ ಹವ್ಯಾಸ ಉತ್ತಮ.
ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ, ಸಂಗೀತ ಹೀಗೆ ತಮಗೆ ಆಸಕ್ತಿ ಇದ್ದ ಕ್ಷೇತ್ರದ ಗುಂಪುಗಳಲ್ಲಿ ಸೇರಿಕೊಂಡು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಸಮಾನ ಮನಸ್ಕರೊಂದಿಗೆ ಸಂತೋಷದಿಂದ ವೇಳೆಯನ್ನು ಕಳೆಯಬಹುದು.
ಮುಪ್ಪಿನಲ್ಲಿ ತಾಳ್ಮೆ ಕೆಡದಂತೆ ನೋಡಿಕೊಳ್ಳಬೇಕು… ಜೊತೆಗೆ ಒಂದಿಷ್ಟು ಅಹಂಕಾರವು ಬಂದಿರುತ್ತದೆ… ನನಗೆ ವಯಸ್ಸಾಗಿದೆ ಅಂದರೆ ಅನುಭವ ಹೆಚ್ಚಾಗಿದೆ.. ನಾನು ಹೇಳಿದ್ದೇ ಸರಿ ಎನ್ನುವ ಮನೋಭಾವನೆಗಳು ಬದಲಾದರೆ, ಸಂತೋಷ ತಾನೆ ಒಡಮೂಡುತ್ತದೆ.
ಕೆಲವೊಂದು ಕಡೆ ಕಿರಿಯ ವಯಸ್ಸಿನವರಿಗೆ ವಯಸ್ಸಾದವರು “ನಿನ್ನ ವಯಸ್ಸಿನಗಿಂತ ನನ್ನ ಅನುಭವ ಹೆಚ್ಚಿದೆ” ಎನ್ನುವ ಅತೀ ಆತ್ಮವಿಶ್ವಾಸ ಸರಿಯಲ್ಲ. ಅವರು ಹೇಳುವುದು ಸರಿಯಿದ್ದರೆ ಒಪ್ಪಿಕೊಂಡರಾಯಿತು. ಮನೆಯಲ್ಲಿಯೂ ಕೆಲವೊಂದು ಹಿರಿಯರು ನನ್ನ ಮಾತೇ ನಡೆಯಬೇಕೆನ್ನುವ ಹಟದಿಂದ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ವಯಸ್ಸಿನ ಬಲದಿಂದ ನಾವು ಹೇಳಿದ್ದೆ ಪರಿಪೂರ್ಣ ಎನ್ನುವ ಬದಲು ಯಾರೆ ಹೇಳಲಿ ಯೋಗ್ಯವಾಗಿದ್ದರೆ ಬೆಂಬಲಿಸೋಣ.
ಒಟ್ಟಿನಲ್ಲಿ ಮುಪ್ಪೆಂದರೆ ದಿಗಿಲು ಬಿಳದೇ ಹೊಸ ಹವ್ಯಾಸಗಳನ್ನು ಬೆಳಸಿಕೊಂಡು ಉಸಿರಿರುವರೆಗೂ ನೆಮ್ಮದಿಯಾದ ಬಾಳನ್ನು ಬಾಳೋಣ.
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು)ಶಿವಮೊಗ್ಗ
