ಆಧ್ಯಾತ್ಮಿಕ ಸ್ವರ್ಗದಲ್ಲಿ ನಾನು ಮತ್ತು ಜೋಸ್ಟೆಲ್

ಋಷಿ ಮನುವಿನ ಹೆಸರಿನಿಂದ ಈ ತಾಣವು ‘ಮನಾಲಿ’ ಎಂದು ಕರೆಯಲ್ಪಡುತ್ತದೆ ಹಾಗೂ ಮನಾಲಿಯು ಸುಮಾರು 2000 ವರುಷದ ಇತಿಹಾಸವನ್ನು ಹೊಂದಿದ್ದು, ಲೇಖಕಿ ಹೆಚ್ ವಿ ಮೀನಾ ಅವರು ಹಳೆ ಮನಾಲಿಯ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ….

ಸುಮಾರು 7 ವರುಷಗಳ ಹಿಂದೆ ನಾನು ಹಿಮಾಚಲ ಪ್ರದೇಶದ ಹಳೇ ಮನಾಲಿಯ ಹಳ್ಳಿಗಳನ್ನು ನೋಡಬೇಕೆಂದೆನಿಸಿ ಹಳೇ ಮನಾಲಿಯ ‘ಜೋಸ್ಟೆಲ್’ ಎಂಬ ಬ್ಯಾಕ್ ಪ್ಯಾಕರ್ಸ್ ಹಾಸ್ಟೆಲ್ ನಲ್ಲಿ (ಮನು ಟೆಂಪಲ್ ರಸ್ತೆ ) ನಾಲ್ಕು ದಿನಗಳ ಮಟ್ಟಿಗೆ ಇದ್ದು ಹಳೇ ಮನಾಲಿಯ ಹಳ್ಳಿಗಳನ್ನು ನೋಡಲು ಹೊರಟೆ.

ಋಷಿ ಮನುವಿನ ಹೆಸರಿನಿಂದ ಈ ತಾಣವು ‘ಮನಾಲಿ’ ಎಂದು ಕರೆಯಲ್ಪಡುತ್ತದೆ ಹಾಗೂ ಮನಾಲಿಯು ಸುಮಾರು 2000 ವರುಷದ ಇತಿಹಾಸವನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಇದು ಸಾಂಸ್ಕೃತಿಕ ನಗರವಾಗಿದ್ದು ವ್ಯಾಪಾರಿಕೃತವಾಗಿಲ್ಲ. ಹಿಪ್ಪಿ ಸಂಸ್ಕೃತಿಯನ್ನು ಹೊಂದಿರುವ ಮನಾಲಿಯ ಜನರು ಶಾಂತ ಪ್ರಿಯರು. ಜನ ಜೀವನ ನಿಧಾನ ಗತಿಯದ್ದು ಹಾಗೂ ಶ್ರೀಮಂತ ಸಾಂಸ್ಕೃತಿಕ ಆಚರಣೆಯನ್ನು ಕಾಣಬಹುದು.

ಅಂದು ನಾವು ದೆಹಲಿಯಿಂದ ರಾತ್ರಿ ಏಳು ಗಂಟೆಯ ಬಸ್ಸಿನಲ್ಲಿ ಪ್ರಯಾಣಿಸಿ ಮರುದಿನ ಬೆಳಿಗ್ಗೆ ಸುಮಾರು 5 ಗಂಟೆಗೆ ಮನಾಲಿ ಬಸ್ ಸ್ಟೇಷನ್ ಗೆ ಬಂದು ತಲುಪಿದೆವು. ಮನಾಲಿ ಬಸ್ ನಿಲ್ದಾಣದಿಂದ ಜೋಸ್ಟೆಲ್ ಓಲ್ಡ್ ಮನಾಲಿ ಸೇರಲು ಸುಮಾರು 15-20 ನಿಮಿಷಗಳು ಬೇಕಾಗುತ್ತದೆ. ಮನಾಲಿಯ ಬಸ್ ನಿಲ್ದಾಣದಿಂದ ಆಟೋ ಹಿಡಿದು ಓಲ್ಡ್ ಮನಾಲಿಯ ಡ್ರಿಫ್ಟರ್ಸ್ ಕೆಫೆ ಬಳಿ ಇಳಿದು ಅಲ್ಲಿಂದ ಸುಮಾರು ಆರೇಳು ನಿಮಿಷಗಳು ಕಿರಿದಾದ ಸುಸಜ್ಜಿತಗೊಳಿಸದ ಹಳ್ಳಿಯ ರಸ್ತೆಯಲ್ಲಿ ನಡೆದು ಜೋಸ್ಟೆಲ್ ಹಾಸ್ಟೆಲ್ ತಲುಪಿದೆವು.

“ಹೊಸದಾಗಿ ಪ್ರಚಾರದಲ್ಲಿರುವ ಪ್ರವಾಸ ಸಂಸ್ಕೃತಿಗೆ ಪೂರಕವಾಗಿ ‘ಜೋಸ್ಟೆಲ್’ ಸೋಲೋ ಟ್ರಾವೆಲರ್ಸ್ ಹಾಗೂ ಪ್ರಪಂಚದ ಬೃಹತ್ ಬ್ಯಾಕ್ ಪ್ಯಾಕರ್ಸ್ ಚೈನ್ ಆಫ್ ಹೋಟೆಲ್ಸ್ ನ ಕೇಂದ್ರವಾಗಿದೆ.”

ಈ ಹಾಸ್ಟೆಲ್ ಅಥವಾ ಹೋಟೆಲಿನ ಸುತ್ತಲೂ ಹಿಮಾಲಯ ಪರ್ವತ ಶ್ರೇಣಿಗಳಿದ್ದು ಅಲ್ಲಿಯ ದೃಶ್ಯಗಳು ನನ್ನ ಕಲ್ಪನೆಗಳಿಗೂ ಮೀರಿ ಮನವನ್ನು ಸೂರೆಗೊಳಿಸಿತು. ಆ ಹಳ್ಳಿಯನ್ನು ನೋಡಲು ಪುಳಕಿತಳಾಗಿದ್ದ ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆದು ನಂತರ ಜೋಸ್ಟೆಲ್ ನಲ್ಲಿ ಉಪಹಾರ ಮುಗಿಸಿ ಕೊರೆಯುವ ಚಳಿಯ ನಡುವೆ ಬೆಚ್ಚನೆಯ ಜಾಕೆಟ್ ತೊಟ್ಟು ಹಿತವಾದ ಸೂರ್ಯನ ಕಿರಣಗಳ ಬಿಸಿಲಲ್ಲಿ ಮಗನ ಕೈ ಹಿಡಿದು ಅಂಕು ಡೊಂಕಾದ ಹಳ್ಳಿಗಳ ರಸ್ತೆಗಳಲ್ಲಿ ನಡೆಯುತ್ತಾ, ಸುತ್ತ ಮುತ್ತಲಿನ ಮರ ಗಿಡಗಳ ಹಸಿರಿಗೆ ಮನಸೋತು, ಸ್ಥಳೀಯರ ತೋಟಕ್ಕೆ ಹೋದೆನು. ಸೇಬಿನ ಮರಗಳ ನಡುವೆ ಚೆರ್ರಿಗಳ ಮರಗಳು ಹಾಗೂ ಲಿಲ್ಲಿ ಹೂಗಳ ಸೊಬಗನ್ನು ಹಾಗೂ ಹತ್ತಿರವಿದ್ದ ಚಿಕ್ಕ ಗುಡ್ಡಗಳನ್ನು ಹತ್ತಿ ನಿಶಬ್ಧವಾಗಿ ಹರಿಯುತ್ತಿದ್ದ ಮನಾಲ್ಸು ನದಿಯನ್ನು ನೋಡಿ ಕುಣಿದು ಕುಪ್ಪಳಿಸಿದೆನು. ನದಿಯ ಪಕ್ಕದಲ್ಲಿ ಪುಟ್ಟದಾದ ರೆಸ್ಟೋರೆಂಟ್ ಗಳು ಇದ್ದವು.

ಮನುಷ್ಯನಿಗೆ ಹಸಿರ ಮಡಿಲಿನ ಅವಶ್ಯಕತೆಯು ಗಂಭೀರವಾದದ್ದು ಎಂಬ ಸತ್ಯವನ್ನು ಅಲ್ಲಿಯ ಪ್ರತಿಯೊಂದು ದೃಶ್ಯಗಳನ್ನು ಕಂಡವರು ಅನುಭವಿಸುತ್ತಾರೆ. ಸೂರ್ಯನ ಕಿರಣಗಳ ಚಿನ್ನದ ಲೇಪನದಿಂದ ಹೊಳೆಯುತ್ತಿದ್ದ ಹಿಮಾಲಯ ಪರ್ವತ ಶ್ರೇಣಿಗಳು ಇಲ್ಲೇ ಎಲ್ಲೋ ಹತ್ತಿರವಿದೆ, ಒಂದೆರಡು ಹೆಜ್ಜೆಗಳನಿಟ್ಟರೆ ಪರ್ವತಗಳು ಸಿಕ್ಕಿಬಿಡುತ್ತವೆ ಎಂಬ ಅನುಭವ ನಮಗೆ ಮೂಡುವುದುಂಟು…ಆತ್ಮ-ಪರಮಾತ್ಮನ ಅಸ್ಥಿತ್ವದ ಚಿಂತನೆಗಳು ನಮ್ಮಲ್ಲಿ ಉದ್ಭವಿಸುತ್ತವೆ. ಅಷ್ಟು ಶುದ್ಧವಾದ ಪರಿಸರವು ನಮ್ಮ ಮನೋಚಿಂತನೆಗಳಿಗೆ ಆಹ್ಲಾದಕರ ಅನುಭವವನ್ನು ನೀಡುತ್ತದೆ.

ನಾವು ಮರುದಿನ ಜೋಸ್ಟೆಲ್ ನಿಂದ ಮನು ದೇವಸ್ಥಾನ, 16 ನೇ ಶತಮಾನದ ಹಿಡಿಂಬಾ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಮನಾಲಿ ಜಾಗವು ಓಲ್ಡ್ ಮನಾಲಿ ಹಾಗೂ ನ್ಯೂ ಮನಾಲಿ ಎಂದು ಮನಸ್ಲು ನದಿಯಿಂದ ಎರಡು ಭಾಗವಾಗಿ ವಿಭಜಿಸಲ್ಪಟ್ಟಿದೆ. ಇವೆರಡು ಸ್ಥಳದ ಮಧ್ಯದಲ್ಲಿರುವ ಮನಸ್ಲು ನದಿಯ ಬ್ರಿಡ್ಜ್ ಮೇಲೆ ತಂಪಾದ ಗಾಳಿಯನ್ನು ಸವಿಸುತ್ತಾ ನಡೆದು ಬಂದು ಸುತ್ತ ಮುತ್ತಲಿನ ಜಾಗಗಳನ್ನು ವೀಕ್ಷಿಸಿದೆವು. ಹಾಸ್ಟೆಲ್ ನಿಂದ ಈ ಸ್ಥಳಗಳು ಸುಮಾರು ಎರಡು ಕಿಲೋಮೀಟರ್ ದೂರದಲ್ಲಿವೆ. ಇದರ ಹತ್ತಿರವೇ ಮನಾಲಿ ವನ್ಯಜೀವಿ ಅಭಯಾರಣ್ಯವೂ ಇದೆ. ಸಾಯಂಕಾಲ ಮಾಲ್ ರೋಡ್ ಮಾರ್ಕೆಟ್ ಗೆ ಹೋಗಿ ಶಾಪಿಂಗ್ ಮಾಡಿ ನಂತರ ಜಿಲೇಬಿ, ವೆಜ್ ಬಿರಿಯಾನಿ, ತುಕ್ಪಾ ನೂಡಲ್ಸ್ ಸೂಪ್ ನ ವಿಶೇಷ ರುಚಿಯನ್ನು ಆನಂದಿಸಿದೆನು. ನಂತರ ರಾತ್ರಿ ಸುಮಾರು ಎಂಟು ಗಂಟೆಗೆ ತಿರುಗಿ ಜೋಸ್ಟೆಲ್ ಗೆ ಹೋಗುತ್ತಿದ್ದಾಗ ಕತ್ತಲು ಆವರಿಸಿತ್ತು. ಹಳ್ಳಿಯ ಮಂದ ದೀಪದ ಬೆಳಕಿನಲ್ಲಿ ರಸ್ತೆಯಲ್ಲಿ ಕಂಡ ಹಳ್ಳಿಯ ಜನರನ್ನು ಮಾತನಾಡಿಸಿ ಮುಂದೆ ಹೆಜ್ಜೆ ಇಡುತ್ತಿದ್ದಾಗ ತಕ್ಷಣ ನನ್ನ ಮಗ ನನ್ನ ಕೈಗಳನ್ನು ಹಿಡಿದು….’ಅಮ್ಮಾ….ಅಲ್ಲಿ ನೋಡು’ ಎಂದು ಆಕಾಶದ ಕಡೆ ಕೈ ತೋರಿಸಿದನು…ಅಬ್ಬಾ! ಆಶ್ಚರ್ಯ!!…ಮಿಣ ಮಿಣ ಮಿಂಚುತ್ತಿದ್ದ “ನಕ್ಷತ್ರಕೂಟ” ಅಥವಾ “ಗ್ಯಾಲಕ್ಸಿ” ಯನ್ನು ನೋಡಿ ನಿಬ್ಬೆರಗಾದೆ.

ಈನಡುವೆ ಐಟಿ ಕಂಪನಿಗಳಲ್ಲಿ ಕೆಲಸಮಾಡುವವರು ಕೆಲಸದ ಒತ್ತಡಕ್ಕೆ ಸಿಲುಕಿ, ವಿರಾಮವನ್ನು ಪಡೆಯಲೆಂದು ತಮ್ಮ ಬಿಡುವಿನ ಸಮಯದಲ್ಲಿ ಜೋಸ್ಟೆಲ್ ಬ್ಯಾಕ್ ಪ್ಯಾಕರ್ಸ್ ಹಾಸ್ಟೆಲ್ ಗೆ ಬಂದು ಸುತ್ತಮುತ್ತಲಿನ ಸೋಲಾಂಗ್ ಕಣಿವೆಯ ಟ್ರಕಿಂಗ್ ಮಾಡಲು ಹಾಗೂ ಇಂತಹ ಹೋಟೆಲ್ ಗಳಲ್ಲಿ ವಿಶ್ರಮಿಸಲು ಇಚ್ಚಿಸುತ್ತಾರೆ. ಎತ್ತರದ ಬೆಟ್ಟಗಳು, ಸಾಹಸ ಕ್ರೀಡೆಗಳು, ಕಿರಿದಾದ ರಸ್ತೆಗಳು, ಕೊರೆಯುವ ಚಳಿಯ ಹಿಮ ಕಣಿವೆಯಲ್ಲಿ ಹೆಜ್ಜೆ ಹಾಕುವುದು ಒಂದು ರೋಮಾಂಚನ ಅನುಭವ. ಮನಾಲಿಗೆ ಬಹಳ ಹತ್ತಿರವಿರುವ ಜೋಗ್ನಿ ಫಾಲ್ಸ್, ಬೌದ್ಧರ ಪುಣ್ಯ ಸ್ಥಳವಾದ ಸೇತನ್ ಹಾಗೂ ಚಿಚೋಗ ಎಂಬ ಹಳ್ಳಿಯ ರಮಣೀಯ ದೃಶ್ಯಗಳು ಪ್ರಶಾಂತವಾಗಿದ್ದು ನೆಮ್ಮದಿಯನ್ನು ನೀಡುತ್ತದೆ. ಏಕಾಂತವನ್ನು ಹುಡುಕುವವರಿಗೆ ಚಿಚೋಗ ಹಳ್ಳಿಯು ಗಮನವನ್ನು ಸೆಳೆಯುತ್ತದೆ.

ಇನ್ನು ಜೋಸ್ಟೆಲ್ ಹಾಸ್ಟೆಲ್ ಬಗ್ಗೆ ಹೇಳಬೇಕಾದರೆ ಇದು ಒಂದು ಸುಸಜ್ಜಿತವಾದ 3 ಸ್ಟಾರ್ ಹೋಟೆಲ್ ಆಗಿದೆ. ಇಲ್ಲಿ ಲಾಕರ್ ಫೆಸಿಲಿಟಿ ಕೂಡ ಇದೆ. ಉತ್ತಮ ಸೌಕರ್ಯ ಹೊಂದಿರುವ ಈ ಹೋಟೆಲ್ ನ ಸಿಬ್ಬಂದಿಗಳ ಹಾಸ್ಪಿಟಾಲಿಟಿ ಹಾಗೂ ಅಲ್ಲಿಯ ತಿನಿಸುಗಳು ರುಚಿಕರವಾಗಿದ್ದವು. ಸುತ್ತ ಮುತ್ತಲಿನ ಮನಮೋಹಕ ದೃಶ್ಯಗಳು ಅತಿವಾಸ್ತವಿಕವಾಗಿವೆ.

ನಾನು ಜೋಸ್ಟೆಲ್ ನ ರುಚಿಕರವಾದ ಉಪಹಾರ ಹಾಗೂ ಭೋಜನವನ್ನು ಆನಂದಿಸಿದೆ. ಇಲ್ಲಿಯ ರೂಮುಗಳಲ್ಲಿ ಆಲ್ಕೋಹಾಲ್ ಸೇವನೆಗೆ ಅನುಮತಿ ಇಲ್ಲ. ಇಲ್ಲಿಗೆ ಬಂದವರು ಇಂತಹ ಮತ್ತಷ್ಟು ನಿಯಮಗಳನ್ನು ಪಾಲಿಸಬೇಕು. ಹೋಟೆಲಿನಲ್ಲಿ ಒಂದು ದೊಡ್ಡದಾದ ಅಂಗಳ ಅಥವಾ ಕಾಮನ್ ರೂಮ್ ಇದೆ. ಈ ರೂಮಿನಲ್ಲಿ ಮಾತ್ರ ಆಲ್ಕೋಹಾಲ್ ಹಾಗೂ ಸ್ಮೋಕಿಂಗ್ ಗೆ ಅನುಮತಿ ಇರುತ್ತದೆ.

ಈ ಹೋಟೆಲಿನ ವಿಶೇಷ : ದೇಶ ವಿದೇಶದಿಂದ ಬಂದಂತಹ ಪ್ರವಾಸಿಗರು ಜೋಸ್ಟೆಲ್ ನ ಕಾಮನ್ ರೂಮಿನಲ್ಲಿ ವಿಶ್ರಮಿಸುತ್ತಾ ಇಂಪಾದ ಪಾಶ್ಚಾತ್ಯ ಸಂಗೀತವನ್ನು ಕೇಳುತ್ತಾ ಒಬ್ಬರಿಗೊಬ್ಬರು ತಮ್ಮ ತಮ್ಮ ಪರಿಚಯವನ್ನು ಮಾಡಿಕೊಳ್ಳುತ್ತಾರೆ. ಅವರ ಹೆಸರು, ಸ್ಥಳ, ದೇಶ, ಭಾಷೆ ಹವ್ಯಾಸ ಇತ್ಯಾದಿ ವಿಷಯಗಳನ್ನು ಹಂಚಿಕೊಳ್ಳುವುದಲ್ಲದೆ ತಾವು ಅನುಭವಿಸುತ್ತಿರುವ (ಕೆಲವರಿಗೆ ಕೆಲಸ ಸಿಕ್ಕಿರುವುದಿಲ್ಲ, ಸಂಸಾರದಲ್ಲಿನ ತೊಂದರೆಗಳು, ಕೆಲವರು ಒಂಟಿತನದಿಂದ ಮಾನಸಿಕವಾಗಿ ಕುಗ್ಗಿರುತ್ತಾರೆ) ನೋವನ್ನು ಹಂಚಿಕೊಂಡು ಮನಸನ್ನು ಹಗುರಮಾಡಿಕೊಳ್ಳುತ್ತಾರೆ. ಪರಸ್ಪರ ಪರಿಚಯವಾಗಿ ಜೀವನ ಪರ್ಯಂತ ಸ್ನೇಹಿತರಾಗುವುದು ಉಂಟು. ವಿಶ್ರಾಂತಿಯನ್ನು ಪಡೆಯಲು ಒಂದು ಅದ್ಭುತ ತಾಣ ಇದಾಗಿದೆ.

ಜೋಸ್ಟೆಲ್ ಹೋಟೆಲ್ ನ ಎಲ್ಲಾ ಮಾಹಿತಿಗಳು ಅವರ ವೆಬ್ ಸೈಟ್ ನಲ್ಲಿ ಲಭ್ಯ. ಹಳೇ ಮನಾಲಿಯ ಜನರು ಕೃಷಿ, ತೋಟಗಾರಿಕೆ, ಜೇನು ಸಾಕಾಣಿಕೆ, ಉಣ್ಣೆಯ ಬಟ್ಟೆಗಳ ತಯಾರಿಕೆ, ಪ್ರವಾಸೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಆಹಾರ ಪದ್ಧತಿ : ಅನ್ನ, ರಾಜಮ, ದಾಲ್, ರೋಟಿ, ಪಲ್ಯ. ‘ತುಕ್ಪಾ ನೂಡಲ್ಸ್ ಸೂಪ್’ ಬಹಳ ಹೆಸರುವಾಸಿಯಾಗಿದೆ. ಇಲ್ಲಿಯ ಸುಂದರವಾದ ‘ಪಶ್ಮಿನಾ’ ಶಾಲುಗಳು ಮೇಕೆಗಳ ಅಪ್ಪಟ ಉಣ್ಣೆಯಿಂದ ತಯಾರಾಗಿದ್ದು ಪ್ರಸಿದ್ಧವಾಗಿವೆ

ಕೊನೆಯಲ್ಲಿ…. ನಾನು ಜೋಸ್ಟೆಲ್ ಹೋಟೆಲ್ ನ ಮುಂದೆ ಇದ್ದ ಸೇಬಿನ ತೋಟದಲ್ಲಿ ಕುಳಿತು ಹಿಮಾಲಯ ಪರ್ವತಗಳನ್ನು ನೋಡಿ ಆನಂದಿಸುತ್ತಾ ‘ಅಬ್ಬಾ ಎಷ್ಟು ಸುಂದವಾಗಿದೆ’ ಎಂದು ಹೇಳಿದಾಗ ಅಲ್ಲೇ ಇದ್ದ ಆ ಹೋಟೆಲಿನ ಮ್ಯಾನೇಜರ್ ನನ್ನನ್ನು ನೋಡಿ ನಕ್ಕುಬಿಟ್ಟರು. ನಾನು ಕಾರಣ ಕೇಳಿದಾಗ….. ‘ಮೇಡಂ, ನೀವು ಐದಾರು ವರುಷಗಳ ಹಿಂದೆ ಇಲ್ಲಿಗೆ ಬರಬೇಕಾಗಿತ್ತು. ಆಗ ಈ ಸ್ಥಳ ಮತ್ತಷ್ಟು ಸುಂದರವಾಗಿತ್ತು. ಈಗ ಪ್ರವಾಸೋದ್ಯಮ ಬೆಳೆಯುತ್ತಿರುವುದರಿಂದ ನಮಗೆ ಕೆಲಸವೇನೋ ದೊರಕುತ್ತದೆ ಆದರೇ…..ಹೋಟೆಲ್ ಗಳು, ರೆಸಾರ್ಟ್ ಗಳು ತಲೆ ಎತ್ತಿ ನಿಂತಿವೆ…. ಅನೇಕ ಅಮೂಲ್ಯವಾದ ಮರ ಗಿಡಗಳು ನಾಶವಾಗಿವೆ. ಹಿಮಾಲಯ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ ” ಎಂದು ತನ್ನ ವಿಷಾದವನ್ನು ವ್ಯಕ್ತಪಡಿಸಿದರು.

ಈಗ ಈ ಸ್ಥಳ ಹೇಗಿರಬಹುದು! ಹಿಮಾಲಯ ಬೆಟ್ಟಗಳ ಮೇಲೆ ಸೂರ್ಯನ ಚಿನ್ನದ ಲೇಪನ ಕಾಣಿಸುತ್ತದೆಯೇ! ಎಂಬ ಕುತೂಹಲ ನನ್ನನ್ನು ಅಲ್ಲಿಗೆ ಸೆಳೆಯುತ್ತಿದೆ. ನೀವು ಒಮ್ಮೆ ಜೋಸ್ಟೆಲ್ ಓಲ್ಡ್ ಮನಾಲಿಗೆ ಹೋಗಿ ಆಧ್ಯಾತ್ಮಿಕ ಸ್ವರ್ಗದಲ್ಲಿ ವಿಶ್ರಾಂತಿಯನ್ನು ಪಡೆದು ಬನ್ನಿ.


  • ಹೆಚ್ ವಿ ಮೀನ – ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading