ಎಲ್ಲ ಹೂವುಗಳೂ, ಎಲ್ಲ ದೇವರಿಗೆ ಸಲ್ಲಬಹುದು. ಆದರೆ ನಿರ್ದಿಷ್ಟ ಹೂವುಗಳು, ನಿರ್ದಿಷ್ಟ ದೇವರಿಗೆ ಶ್ರೇಷ್ಠವೆನ್ನಿಸಿವೆ. ಉದಾಹರಣೆಗೆ ಶಿರಡಿ ಸಾಯಿಬಾಬಾಗೆ ಗುಲಾಬಿ ಹೂವುಗಳು, ಗಣಪತಿಗೆ ಕೆಂಪು ಕನಗಿಲೆ, ಕೆಂಪು ದಾಸವಾಳ, ಶಿವನಿಗೆ ಅದರಲ್ಲಿಯೂ ಶಿವರಾತ್ರಿಯಲ್ಲಿ ಬೆಟ್ಟದಾ ತಾವರೆ ಹೂವುಗಳು ಶ್ರೇಷ್ಠವೆನ್ನಿಸಿಕೊಂಡಿವೆ.
ಶಿರಡಿಯ ಸಾಯಿಬಾಬಾ ಮಂದಿರದಲ್ಲಿ ರೈಲಿಗಿಂತ ಉದ್ದಾದ ಸಾಲುಗಳಲ್ಲಿ ದರುಶನಕ್ಕಾಗಿ ನಿಂತ ಭಕ್ತರು ಕೈಗಳಲ್ಲಿ ಕೆಂಪು, ಕೇಸರಿ, ಗುಲಾಬಿ, ಹಳದಿ, ಬಿಳಿ ಬಣ್ಣಗಳ ಗುಲಾಬಿ ಹೂವುಗಳ ಗುಚ್ಚವನ್ನು ಹಿಡಿದುಕೊಂಡು “ಬಾಬಾ ಸಾಯಿ ಬಾಬಾ” ಎಂದೆಲ್ಲ ಸಾಯಿ ಬಾಬಾನ ನಾಮಸ್ಮರಣೆ ಮಾಡುತ್ತ, ಸಾಗುವ ಭಕ್ತ ಸಮೂಹ ಕಂಡು ಎಂತಹ ಜನರಲ್ಲಿಯೂ ಭಕ್ತಿಭಾವ ಹುಟ್ಟಿಕೊಳ್ಳುವುದು. ಪ್ರತಿ ದಿನ ಸಾವಿರಾರು ಭಕ್ತರು ಸಲ್ಲಿಸಿದ ಪುಷ್ಪಗಳನ್ನು ಅಗರಬತ್ತಿಗಳನ್ನಾಗಿ ಪರಿವರ್ತಿಸುತ್ತಾರೆ. ಹೀಗೆ ಬಾಬಾನ ಪೂಜೆಗೆ ಸಲ್ಲುವ ಈ ಹೂವುಗಳು, ಹೂವು ಇರುವಾಗಲೂ ಸುಗಂಧ ಬೀರಿ ಅಗರಬತ್ತಿಗಳಾದ ನಂತರವೂ ಸುವಾಸನೆ ಬೀರುತ್ತವೆ.
ಫೋಟೋ ಕೃಪೆ : piterest
ಶಿವರಾತ್ರಿಯಂದು ಶಿವನಿಗೆ ಅತ್ಯಂತ ಶ್ರೇಷ್ಠವೆನ್ನಿಸಿದ ಹೂವು ಬೆಟ್ಟಾವರೆ ಹೂವು. ಕಾಡಿನಲ್ಲಿ ಬೆಳೆವ ಈ ಹೂವು, ವರ್ಷಕ್ಕೆ ಒಂದು ಬಾರಿಯಷ್ಟೇ ಅದೂ ಶಿವರಾತ್ರಿ ಸಮಯದಲ್ಲಿ ಮಾತ್ರ ಅರಳುವುದು. ಶ್ರಾವಣ ಮಾಸದಲ್ಲಿ ಬರುವ ಕೇದಿಗೆ ಹೂವು ಸುವಾಸನೆಭರಿತವಾದದ್ದು. ಹಳದಿ ಬಣ್ಣದ ಘಮ ಘಮಿಸುವ ಈ ಹೂವಿನ ಪರಿಮಳವನ್ನು ಅನುಭವಿಸಿಯೇ ಹೇಳಬೇಕು. ನಮ್ಮ ಓಣಿಯಲ್ಲಿ ಕೇದಿಗೆ ಹೂಉಗಳನ್ನು ಮಾರಲು ಬಂದರೆ ಜನ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದರು. ಕಾರಣ ಬೇಕು ಬೇಕಾದಾಗೆಲ್ಲ ಆ ಹೂವು ಸಿಗುವುದಿಲ್ಲ. ಕೇದಿಗೆ ಬಣಗಳಿಂದ ಕೇದಿಗೆಯನ್ನು ಅಷ್ಟು ಸುಲಭವಾಗಿ ಕಿತ್ತುಕೊಂಡು ಬರಲೂ ಸಾಧ್ಯವಿರಲಿಲ್ಲ. ಸಂಪೂರ್ಣ ಮುಳ್ಳಿನಿಂದ ಆವೃತ್ತವಾಗಿ ಕೊಂಪೆ ಕೊಂಪೆಯಾಗಿ ಬೆಳೆಯುವ ಈ ಬಣದಿಂದ ಹೂವುಗಳನ್ನು ಹುಡುಕಿ ಕಿತ್ತುಕೊಳ್ಳುವುದು ಸಾಮಾನ್ಯ ಕೆಲಸವಲ್ಲ ಅಷ್ಟೇ ಅಲ್ಲ ಇದು
ಸುವಾಸನೆಭರಿತವಾಗಿದ್ದರಿಂದ ಈ ಬಣದಲ್ಲಿ ಹಾವುಗಳ ಉಪಟಳವಂತೆ. ಹಾಗಾಗಿ ಅಪರೂಪಕ್ಕೆ ಮಾರಲು ಬರುವ ಈ ಹೂವು ನೋಡು ನೋಡುವುದರಲ್ಲಿ ಖಾಲಿಯಾಗಿಬಿಡುತ್ತಿದ್ದವು. ಅವ್ವ ಅಂತೂ ಕೇದಿಗೆ ಕಂಡರೆ ಬಿಡುತ್ತಲೇ ಇರಲಿಲ್ಲ. ಹೊರಗಿನ ಗರಿಗಳು ಮುಳ್ಳಿನಿಂದ ಕೂಡಿರುತ್ತವೆ. ಆದರೂ ನಾನು ಅದನ್ನು ಕೈಯಲ್ಲಿ ಹಿಡಿದು ಮೂಸಿಸಿ ಅದರ ಸುವಾಸನೆಗೆ ಮರುಳಾಗುತ್ತಿದ್ದೆ. ಅವ್ವ ಜತನವಾಗಿ ದಿನಾಲೂ ಒಂದೊಂದೇ ಗರಿಯನ್ನು ಕಿತ್ತು ಮುಡಿಗೆ ಹಾಕಿಕೊಳ್ಳಲು ಕೊಡುತ್ತಿದ್ದಳು.
ಕೇದಿಗೆ ದಟ್ಟವಾದ ಹೂವಾದರೆ ೨೦ -೩೦ ಗರಿಗಳು ಇಲ್ಲವಾದಲ್ಲಿ ೧೦ – ೧೫ ಗರಿಗಳು ಇರುತ್ತಿದ್ದುದರಿಂದ ನಾನು ಹದಿನೈದು ದಿನಗಳವರೆಗೆ ಕೇದಿಗೆ ಮುಡಿಯುವಂತಾಗುತ್ತಿತ್ತು. ಒಂದೇ ಗರಿಯಾದರೆ ಪಿನ್ನಿನಲ್ಲಿ ಅಧಿಕ ಆಕಾರದಲ್ಲಿ ಹೂವು ಮಾಡಿ ಹಾಕಿಕೊಳ್ಳುತ್ತಿದ್ದೆ. ಆದರೆ ಕೇದಿಗೆ ಜಡೆಯಾಗಲಿ ಕೇದಿಗೆ ಹೂವು ತಯಾರಿಸಬೇಕಾದಲ್ಲಿ ಇಡೀ ಒಂದು ಕೇದಿಗೆ ಹೂವೇ ಬೇಕಾಗುತ್ತಿತ್ತು.ತಿಳುವಾದ ರಟ್ಟನ್ನು ವೃತ್ತಾಕಾರದಲ್ಲಿ ಕತ್ತರಿಸಿ ಅದಕ್ಕೆ ಸುತ್ತಲೂ ಗರಿಯನ್ನು ಹೆಣೆದಾಗ ವೃತ್ತಾಕಾರದ ಹೂವು ತಯಾರಾಗುತ್ತಿತ್ತು. ಇನ್ನು ಕೇದಿಗೆ ಜಡೆಗೆ ಜಡೆಯ ಉದ್ದಕ್ಕೂ ಕೇದಿಗೆ ಗರಿಗಳನ್ನು ಹೆಣೆಯಲಾಗುತ್ತಿತ್ತು. ಅಂದಿನ ದಿನಗಳಲ್ಲಿ ಹತ್ತು ಹನ್ನೆರಡು ವರ್ಷದ ಪೋರಿಯರು ಲಂಗಾ ಹಾಕಿಕೊಂಡು ಕೇದಿಗೆ ಜಡೆ ಹೆಣಿಸಿಕೊಂಡು ಆ ಜಡೆಯನ್ನು ಹೊತ್ತು ನೀಳಗನ್ನಡಿಯ ಮುಂದೆ ನಿಂತು, ಕೇದಿಗೆಯಿಂದ ಅಲಂಕೃತಗೊಂಡ ಸುಂದರ ಜಡೆಯ ಫೋಟೊ
ತೆಗೆಸಿಕೊಳ್ಳುತ್ತಿದ್ದರು.
ಫೋಟೋ ಕೃಪೆ : Google.com
ಹೆಣ್ಣಿಗೆ ಹೂವು ಚೆಂದ, ಹೂವಿಗೆ ದುಂಬಿ ಚೆಂದ ಎಂಬಂತೆ ಹೂವು, ಹೂಮಾಲೆಯಾಗಲಿ ಹೆಣ್ಣು ಮಕ್ಕಳ ಮುಡಿಗೆ ಶೋಭೆ ತರುತ್ತವೆ. ಆದರೆ ಇಂದಿನ ಯುವತಿಯರಾರೂ ಹೂ ಮುಡಿಯುವುದಿಲ್ಲ. ಹೂ ಮುಡಿಯುವ ಪ್ಯಾಶನ್ ಹೋಗಿಯೇ ಇಪ್ಪತ್ತು ಇಪ್ಪತೈದು ವರ್ಷಗಳಾದವು. ನಾವು ಕಾಲೇಜು ದಿನಗಳಲ್ಲಿಯೇ ಕೂಡ ಹೂ ಮುಡಿಯುವುದು ಔಟ ಆಫ್ ಪ್ಯಾಶನ್ ಆಗಿತ್ತು. ಆದರೆ ಆಗ ಕೃತಕ ಹೂವುಗಳನ್ನು ಮುಡಿಯುವುದು ಚಾಲ್ತಿಯಲ್ಲಿತ್ತು. ನಮ್ಮ ಅಣ್ಣ ಮುಂಬಯಿಯಿಂದ ಸುಂದರವಾದ
ಬಿಳಿ ಹೂವಿನಿಂದ ಕೂಡಿದ ರಬ್ಬರ್ ಬ್ರ್ಯಾಂಡ್ ತಂದುಕೊಟ್ಟಿದ್ದ. ಮಧ್ಯಕ್ಕೆ ಬಂಗಾರ ಬಣ್ಣದ ಹರಳು ಹೊತ್ತ ಆ ಹೂವನ್ನು ಹಾಕಿಕೊಂಡು ಕಾಲೇಜಿಗೆ ಹೋದಾಗ, ಯಾವುದೋ ಕಾರಣಕ್ಕೆ ಹೂವಿನ ವಿಷಯ ಚರ್ಚೆಯಾಗಿ ನಮ್ಮ ಉಪನ್ಯಾಸಕರು “ಇಂದಿನ ಹುಡುಗ್ಯಾರು ಹೂವಾನ ಹಾಕ್ಕೊಳ್ಳುದಿಲ್ಲಾ ಎಂದಾಗ, ಎಲ್ಲ ಹುಡುಗರ ಗಮನ ಹುಡುಗಿಯರತ್ತ ಹೊರಳಿ ಅವರ ಕಣ್ಣುಗಳು ನಮ್ಮ ಜಡೆಗಳನ್ನು ಪರೀಕ್ಷಿಸುವಂತಾಗಿ ಒಂದು ಹುಡುಗ “ಹೂವಾ ಹಾಕ್ಕೊಂತಾರರಿ ಆದರ ಪ್ಲಾಸ್ಟಿಕ್ ಹೂವಾ ಹಾಕ್ಕೊಂತರರಿ” ಎಂದು ನನ್ನ ಕಡೆಗೆ ಕೈ ಮಾಡಿ ತೋರಿಸಿದಾಗ, ಕ್ಲಾಸಿನಲ್ಲೊಂದು ದೊಡ್ಡ ನಗೆಯ ಅಲೆಯೇ ಹುಟ್ಟಿಕೊಂಡಿತ್ತು.
ಫೋಟೋ ಕೃಪೆ : pinterest
ನಮ್ಮ ಅಕ್ಕನ ಮಗಳ ಮದುವೆಯಲ್ಲಿ ಹೆಣೆಸಿದ ಹೂವಿನ ಜಡೆಯನ್ನು ಹಾಕಲು ಆಕೆಯನ್ನು ಮೇಕಪ್ ಮಾಡಲು ಬಂದ ಬ್ಯೂಟಿ ಪಾರ್ಲರ್ ಹೆಣ್ಣುಮಗಳು ಹೆಣೆಸಿದ ಜಡೆಯನ್ನು ಬೇಡವೆಂದಳು. ಆಗ ನಮ್ಮ ಶೈಲಕ್ಕ “ಪಾರ್ವತಿ ಆಕಿಗೆ ಹಾಕೂದು ಬ್ಯಾಡಂತ. ಇನ್ನೇನ ಮಾಡೂದು ರೊಕ್ಕಾ ಕೊಟ್ಟ ಈ ಜಡಿ ಹೆಣಿಸೇತಿ ನೀನ ಹಾಕ್ಕೊಂಡ ಬಿಡ” ಎನ್ನಬೇಕೆ? “ಹುಂ ನಾ ಹಾಕ್ಕೋಳ್ಳಾಕ ಏನ ಮದುಗಳನ? ನೋಡಿದಾರು ಏನ ಅಂತಾರಾ? ನಾ ಅಂತೂ ವಲ್ಲೆವಾ ಮತ್ತ ಯಾರರ ಹಾಕ್ಕೊಂತಿದ್ರ ಕೊಡ ಬೇಕಾರ” ಎಂದು ಜಾರಿಕೊಂಡಿದ್ದೆ. ನಮ್ಮ ಮದುವೆಯಲ್ಲಿ ನನಗೆ ದೊಡ್ಡ ದೊಡ್ಡ ಗುಲಾಬಿ ಹೂವುಗಳನ್ನು ಗಡಿಯಾರದಂತೇ ಜೋಡಿಸಿ ವೃತ್ತಾಕಾರದಲ್ಲಿ ಹಾಕಿ ಕನಕಾಂಬರ ಮತ್ತು ಮಲ್ಲಿಗೆ ಮಾಲೆಗಳನ್ನು ಜಡೆಯ ತುಂಬಾ ಸುತ್ತಿ ಒಟ್ಟಿನಲ್ಲಿ ತಲೆಯಲ್ಲಿ ಮತ್ತು ಜಡೆಯಲ್ಲಿ ಕೂದಲುಗಳೇ ಕಾಣಿಸದಂತೆ ಹೂವಿನಿಂದ ಅಲಂಕಾರ ಮಾಡಿದ್ದರು. ನಮ್ಮ ಮದುವೆಯ ವಿಡಿಯೋ ನೋಡಿದ ನಮ್ಮ ಮನೆಯ ಮಕ್ಕಳೆಲ್ಲಾ “ಲೈಟಿನ ಸರಾ ಹಾಕಿದಂಗ ನಿನಗ ಹೂವಾ ಹಾಕ್ಯಾರಲ್ಲ” ಎಂದೆಲ್ಲ ನಕ್ಕಿದ್ದರು.
ಬಾಲ್ಯದ ದಿನಗಳಲ್ಲಿ ಹೂವು, ಹೂವಿನ ಮಾಲೆ ಎಂದರೆ ನನ್ನಲ್ಲಿ ಎಲ್ಲಿಲ್ಲದ ಪ್ರೀತಿ ಹುಟ್ಟಿಕೊಳ್ಳುತ್ತಿತ್ತು. ಸೇವಂತಿಗೆ, ಹೈಬ್ರೀಡ್ ತಳಿಯ ದೊಡ್ಡ ಎಸಳಿನ ಸೇವಂತಿಗೆ ಮತ್ತು ಅಕ್ಕಿಕಾಳಿನ ಗಾತ್ರದ ಸಣ್ಣನೆಯ ಹಾಗೂ ದಟ್ಟ ಎಸಳಿನ ಸೇವಂತಿಗೆ ಅದರಲ್ಲಿಯೂ ಬಿಳಿ ಮತ್ತು ಹಳದಿ ಬಣ್ಣದ ಸೇವಂತಿಗೆ ಹೂವುಗಳ ಮಾಲೆಯ ಮಧ್ಯದಲ್ಲಿ ಮಿಂಚಿನ ಜರಿ, ಮಿಂಚಿನ ಪೇಪರ್ ಮೊದಲಾದವುಗಳಿಂದ ಸಿಂಗರಿಸಿ ಕಟ್ಟಿದ ಮಾಲೆ ಬಲು ಅಂದ. ಹಾಗೆಯೆ ಸಂಪಿಗೆ ಹೂವಿನ ಮಾಲೆಯನ್ನು ಒಂದು ಸಂಪಿಗೆ ಹೂ ಮಧ್ಯಕ್ಕೊಂದು ಸಂಪಿಗೆ ಎಲೆ ಹಾಕಿದ ಮಾಲೆ, ನೋಡುತ್ತಲೇ ಪ್ರೀತಿ ಉಕ್ಕಿಸುವ ನಾಗಸಂಪಿಗೆ ಮಾಲೆಗಳನ್ನು ಬಿದಿರು ಬುಟ್ಟಿಯಲ್ಲಿ ಹೊತ್ತು ಮಾರಲು ಬರುತ್ತಿದ್ದರು. ಬುಟ್ಟಿಯಲ್ಲಿ ಸಾಕಷ್ಟು ಮಾಲೆಗಳು ಜತನದಿಂದ ಒಂದರ ಮೇಲೊಂದರಂತೆ ಅಡಗಿ ಕುಳಿತ ಸೊಬಗನ್ನು ನೋಡುವುದೇ ಒಂದು ಸೊಗಸು. ಮಾರಾಟಗಾರರು “ಮಾಲಿ ತುಗೋಲಿಕ ಕೈ ಹಾಕಿ ಕಿತ್ತಾಡಬ್ಯಾಡ್ರಿ” ಎಂದು ಹೇಳಿದರೂ ಕೂಡ ಸಂಪಿಗೆ ಮಾಲೆಯನ್ನು ಕೈಯಲ್ಲಿ ಎತ್ತಿಕೊಂಡು ಮೂಗಿಗೆ ಹಿಡಿದು ವಾಸನೆ ನೋಡಿ ಖುಷಿಪಡುತ್ತಿದ್ದೆವು.
ನಮ್ಮ ಮನೆಯಲ್ಲಿ ನಾಲ್ಕೈದು ಮಾಲೆಗಳನ್ನು ತೆಗೆದುಕೊಂಡಿದ್ದರೆ, ಅವ್ವ ನನ್ನ ಉದ್ದನೆಯ ಎರಡೂ ಜಡೆಗಳಿಗೆ ಒಂದೊಂದರಂತೆ ಉದ್ದುದ್ದವಾಗಿ ಕಟ್ಟುತ್ತಿದ್ದಳು. ಹೀಗೆ ಮಾಲೆ ಹಾಕಿಕೊಂಡ ದಿನ ಎಂದಿಗಿಂತ ಸ್ವಲ್ಪ ಬೇಗನೇ ಮಾಲೆಯನ್ನು ತೋರಿಸಲು ಸೋಗು ಹಾಗೂ ಧಿಮಾಕಿನಿಂದ ಗೆಳತಿಯರ ಮನೆಗೆ ಓಡೋಡಿ ಹೋಗುತ್ತಿದ್ದೆ. ನನ್ನ ಮಾಲೆಯನ್ನು ನೋಡುತ್ತಲೇ ಗೆಳತಿಯರು “ನನಗೂ ಮಾಲಿ ಬೇಕಯವ್ವಾ” ಎಂದು ಅವರ ಅವ್ವಂದಿರನ್ನು ಕಾಡಿದಾಗ, ಆ ತಾಯಂದಿರು “ಎಲ್ಲಿ ಬಂದಿತ್ತ? ಮಾಲಿ?” ಎಂದು ಕೇಳುತ್ತಿದ್ದರು. ಆಗ ನಾನು ನನ್ನ ಮಾಲೆಯನ್ನು ಮುಟ್ಟಿಕೊಂಡು ವೈಯ್ಯಾರದಿಂದ ಉಲಿಯುತ್ತಾ “ಮಾಲಿರಿ ನಮ್ಮ ಮನಿ ಮುಂದ ಬಂದಿದ್ದುರಿ ಅತ್ಯಾ” ಎಂದುತ್ತರಿಸುತ್ತಿದ್ದೆ, “ಇಲ್ಲಿಗಟ ಕಳಸಬೇಕಿತ್ತಿಲ್ಲ? ನಾವೂ ತುಗೊಂತಿದ್ದಿವೆಲ್ಲಾ. ಇರಲಿ ನಾಳೆ ಬಂದ್ರ ಹೇಳಾ ಮತ್ತ ನಾವೂ ತುಗೊಂತೀವಿ” ಎನ್ನುವುದರೊಂದಿಗೆ ಮಕ್ಕಳನ್ನು ಸಮಾಧಾನಪಡಿಸುತ್ತಿದ್ದರು.
ಮುಂದೊರೆಯುತ್ತದೆ…
- ಪಾರ್ವತಿ ಪಿಟಗಿ ( ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು)