‘ಇದೇನು ಒಂಟಿ ಭಾವ…. ಚಡಪಡಿಕೆಯೋ ಒಲವ ಹಂಬಲಿಕೆಯೋ…ನಾ ಕಾಣೆ’…ಎನ್ನುವ ಕವಿಯತ್ರಿ ಸುನೀತಾ ಹೆಗ್ಡೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ‘ಒಂಟಿ ಭಾವ’ ವನ್ನು ತಪ್ಪದೆ ಓದಿ…
ಒಮ್ಮೊಮ್ಮೆ ಮೈಇಡಿಯಾಗಿ ಕಾಡುವ ಒಂಟಿ ಭಾವ?
ಎದುರಿದ್ದ ಗೋಡೆಯನ್ನೇ ತಬ್ಬಿಕೊಳ್ಳುತ್ತಾ ಅಲ್ಲೇ ತಲೆ ಇಟ್ಟುಯಾಕೆ ಹೀಗೆ ಎಂದು ತನ್ನನ್ನೇ ಪ್ರಶ್ನಿಸಿಕೊಳುವ ಮನಸು…
ಮತ್ತೆ ತಿರುಗಿ ಹಾಗೇ ಅದಕೊರಗಿ ಕಣ್ಣುಮುಚ್ಚಿ
ತನ್ನೊಳಗೇ ಏನನ್ನೋ ಹುಡುಕುತ್ತಾ ತಡಕುತ್ತಾ
ಯಾವುದೀ ಅಪರಿಚಿತ ಕಾಡುವಿಕೆ ಕಳವಳಿಕೆ
ಎನುತಾ ನಿಟ್ಟುಸಿರ ಚೆಲ್ಲುವ ಎದೆಯಂಗಳ.
ಖಾಲಿ ಮನಸಿನೊಳಗೆ ಯಾವುದೋ ಅಲೆಯ ಅಬ್ಬರ ಉಬ್ಬರ
ಹೃದಯಾಳದಲೆಲ್ಲೋ ಕಾಣದ ಆತ್ಮಸಂಗಾತಕ್ಕೆ ಹಂಬಲಿಕೆ ಅಲವರಿಕೆ
ಸುಮ್ಮ ಸುಮ್ಮನೇ ಅದೆನೋ ಕಾಡುವ ಕನವರಿಕೆ
ಇದ್ದಲ್ಲಿ ಇರಲಾರದೇ ಒದ್ದಾಡುವ ಜೀವ ಭಾವ.
ಇದೇನು ಚಡಪಡಿಕೆಯೋ ಒಲವ ಹಂಬಲಿಕೆಯೋ
ಆಗಾಗ ಬಂದುಹೋಗುವ ನೆಂಟರಂತಾಗಿದೆ
ಭ್ರಮೆಯೊಳಗೆ ಸಿಲುಕುವ ಮುನ್ನ ಎಚ್ಚರಿಸಬೇಕಿದೆ ಮನವ..
ನನ್ನ ನಾ ಕಳೆದುಕೊಳ್ಳುವ ಮುನ್ನ.
- ಸುನೀತಾ ಹೆಗ್ಡೆ