ಇಂದು ಬೇಂದ್ರೆ ಯವರ ಜನುಮದಿನ. ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು ಬೇಂದ್ರೆ ಕುರಿತಾಗಿ ಬರೆದ ಸುಂದರ ಕವನ ಓದುಗರ ಮುಂದಿದೆ ಮತ್ತು ಬೇಂದ್ರೆಯವರ ಆಪ್ತ ಗೆಳೆಯರಾಗಿದ್ದ ಬಿ.ಎಚ್.ಶ್ರೀಧರ ರ ಮನೆಯ ಗೋಡೆಗೆ ತೂಗುಹಾಕಿರುವ, ಬೇಂದ್ರೆಯವರ ಅಪರೂಪದ ಚಿತ್ರವನ್ನು ರಂಗಕರ್ಮಿ, ನಿರ್ದೇಶಕ ಕಿರಣ್ ಭಟ್ ಹೊನ್ನಾವರ ಅವರು ಹಂಚಿಕೊಂಡಿದ್ದಾರೆ.
ಗಿಡಗಂಟಿಗಳ ಕೊರಳೀಗ
ಹಾಡುತ್ತಿಲ್ಲ
ಹಾರಿದ ಹಕ್ಕಿಯ ಜಾಡು
ತಿಳಿಯುತ್ತಿಲ್ಲ
ಬೆರಳಾಡಿಸುತ್ತಿದ್ದೇವೆ ಬರಿದೇ
ನಾದ ಹೊಮ್ಮದ
ಕಡಿದ ತಂತಿಯ ಮೇಲೆ
ಯಾರದೋ ಲೀಲೆಯಲಿ
ಕಳೆದುಕೊಂಡಿದ್ದೇವೆ
ನಮ್ಮ ನಾವೆ.
ಕಾಣಿಸದ ಅತ್ತಿಕೊಳ್ಳದಲಿ ಈಗಲೂ
ಕೇಳಿಯೂ ಕೇಳಿಸದಂತೆ
ಜೋಗಿ ಹೇಳಿದ ಮಂತ್ರ
ಕೋಗಿಲೆಯ ಅಸರಂತ ಕೂಗು.
ನಾವೋ,ಈಗ
ಆಟ ಕಟ್ಟಿದ್ದೇವೆ
ಸೊನ್ನೆ ಒಂದರಲಿ
ಹುಡುಕುತ್ತಿದ್ದೇವೆ ಅಲ್ಲೇ
ನಿಮ್ಮ ಹಾಡಿನ ಜಾಡು
ಹೂತ ಹುಣಸಿಯ ಘಮಲು
ಕಳೆದ ಸುಗ್ಗಿಯ ಹುರುಡು.
- ಸುಬ್ರಾಯ ಚೊಕ್ಕಾಡಿ -ಹಿರಿಯ ಸಾಹಿತಿಗಳು, ಕವಿಗಳು