ಅಪ್ಪ ಕೃಷ್ಣರಾಯರು ತಿರಿ ಹೋದ ಮೇಲೆ ಮನೆಯ ಜವಾಬ್ದಾರಿಯನ್ನೆಲ್ಲ ಹಿರಿಯ ಮಗ ಶ್ರೀಧರ ತಗೆದುಕೊಂಡ. ನಾಲ್ಕು ಜನ ತಮ್ಮ ಮತ್ತು ಐದು ಜನ ತಂಗಿಯರ ಮದುವೆ ಮಾಡಿ ತನ್ನ ಜವಾಬ್ದಾರಿಯನ್ನು ಮುಗಿಸುವಷ್ಟರಲ್ಲಿ ಶ್ರೀಧರನ ಮದುವೆ ವಯಸ್ಸು ಮುಗಿದು ಹೋಗಿ ತಲೆಯ ಕೂದಲೆಲ್ಲಾ ಬಿಳಿ ಆಗಿತ್ತು. ಮುಂದೇನಾಯಿತು ರಶ್ಮಿ ಉಳಿಯಾರು ಅವರ ಈ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಬಸ್ ದಿಢೀರನೆ ಬ್ರೇಕ್ ಹಾಕಿದಾಗ ಸೆಕೆಗೆಂದು ಬೆವರೊರೆಸಿಕೊಳ್ಳಲು ಕೈ ಸಡಿಲಾಗಿಸಿದ್ದ ಶ್ರೀಧರರು ಮುಗ್ಗರಿಸಿ ಎದುರಿನ ಹೆಂಗಸಿನ ಮೇಲೆ ಬೀಳುವಂತಾಯಿತು. ಸಾವರಿಸಿಕೊಂಡು ಸರಿಯಾಗಿ ನಿಂತಾಗ ಆಕೆ ತಿರುಗಿ ಅವರತ್ತ ನೋಡಿ ಮುಖ ಸಿಂಡರಿಸಿ “ಬೇಕಂತಾನೇ ಮೈ ಮೇಲೆ ಬೀಳ್ತಾರೆ. ವಯಸ್ಸಾದರೂ ಚಪಲಕ್ಕೇನೂ ಕಡಿಮೆ ಇಲ್ಲ. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ… ನಾಚಿಕೆ ಇಲ್ಲದವರು!” ಎಂದು ದೊಡ್ಡ ಬಾಯಿಯಿಂದ ಸಹಸ್ರನಾಮಾರ್ಚನೆ ಮಾಡತೊಡಗಿದಳು. ಸೀಟ್ ಸಿಗದ ಕರ್ಮಕ್ಕೆ ರಶ್ ಇದ್ದ ಬಸ್ಸಿನಲ್ಲಿ ಒತ್ತಾಗಿ ಭರಣಿಯೊಳಗೆ ಹಾಕಿಟ್ಟ ಉಪ್ಪಿನಕಾಯಿಯಂತೆ ನಿಲ್ಲಬೇಕಾಗಿ ಬಂದು ಮೊದಲೇ ಬೇಸರಪಟ್ಟಿದ್ದ ಶ್ರೀಧರರು ಅವಳ ಮಾತಿನಿಂದ ಕುಸಿದೇ ಹೋದರು. ಅವಮಾನದಿಂದ ಅವರ ಮುಖ ಕೆಂಪಾಯಿತು. ಅವರು ಇಳಿಯುವ ನಿಲ್ದಾಣ ಇನ್ನೂ ದೂರವಿದ್ದರೂ ಮುಂದೆ ಬಸ್ ನಿಂತ ಜಾಗದಲ್ಲೇ ಇಳಿದು ಬಿಟ್ಟರು. ಒಂದು ರೀತಿಯ ವಿಹಲ್ವತೆಯಿಂದ ಕಾಲೆಳೆಯುತ್ತಾ ನಡೆದು ಮನೆ ಸೇರಿದರು.
ಮನೆ ಬೀಗ ತೆರೆದು ಉಸ್ಸಪ್ಪಾ ಅಂತ ಕುಳಿತರೂ ಅವರ ಮನವಿನ್ನೂ ಅಶಾಂತವಾಗಿಯೇ ತೊಳಲಾಡುತ್ತಿತ್ತು. ಎದುರಿನ ಗೋಡೆಯ ಮೇಲೆ ಗಂಧದ ಮಾಲೆಯೊಳಗೆ ನಗುತ್ತಿದ್ದ ಅಮ್ಮನ ಫೋಟೋ ನೋಡಿ ಮನ ಬಿಕ್ಕಳಿಸಿತು. ಗತಜೀವನದ ನೆನಪುಗಳು ಚಲನಚಿತ್ರದ ರೀಲ್’ನಂತೆ ಮುಂದೋಡತೊಡಗಿದಾಗ ಹಾಗೆಯೇ ಹಿಂದೊರಗಿ ಕಣ್ಮುಚ್ಚಿದರು.
******
ಶ್ರೀಧರರು, ಕೃಷ್ಣರಾಯರು ಮತ್ತು ಸುಂದರಮ್ಮನವರ ಮೊದಲ ಸಂತಾನ. ಅವರ ಹಿಂದೆ ಇನ್ನೊಂದು ಮತ್ತೊಂದು ಎಂಬಂತೆ ಸಾಲಾಗಿ ಐದು ಗಂಡು ಮಕ್ಕಳು ಮತ್ತು ಐದು ಹೆಣ್ಣುಮಕ್ಕಳು. ಒಟ್ಟಿಗೆ ಹದಿಮೂರು ಜನರ ತುಂಬು ಸಂಸಾರ. ಸಾಲದ್ದಕ್ಕೆ ಅವರ ಅಜ್ಜಿ ಮತ್ತು ವಿಧವೆ ಸೋದರತ್ತೆ ಒಬ್ಬರು ಅವರ ಜೊತೆಗಿದ್ದರು. ಸಾಧಾರಣ ಮಧ್ಯಮ ವರ್ಗದ ಮನೆತನ. ತಂದೆ ಕೃಷ್ಣರಾಯರು ಮೊದಲ ಮಗ ಶ್ರೀಧರ ಹತ್ತನೆ ತರಗತಿಗೆ ಬರುತ್ತಿದ್ದಂತೆ ಅನಾರೋಗ್ಯದಿಂದ ಕೈಲಾಸವಾಸಿಯಾಗಿದ್ದರು. ತುಂಬು ಸಂಸಾರ ನೊಗವೀಗ ಎಳೆಯ ಶ್ರೀಧರನ ಹೆಗಲಿಗೆ ಬಿತ್ತು. ಖರ್ಚು ಒಂದೇ ಎರಡೇ. ಮನೆಯ ಹಿರಿಯ ಹೆಂಗಸರು ಹಪ್ಪಳ, ಸಂಡಿಗೆ, ಪುಡಿಗಳನ್ನು ಮಾಡಿ ಸಂಸಾರ ತೂಗಿಸಲು ಪ್ರಯತ್ನ ಮಾಡಿದರೂ ತಲೆಗೆಳೆದರೆ ಕಾಲಿಗಿಲ್ಲ ಕಾಲಿಗೆಳೆದರೆ ತಲೆಗಿಲ್ಲದ ಪರಿಸ್ಥಿತಿ. ಅಂತೂ ಇಂತೂ ಮೆಟ್ರಿಕ್ ಮುಗಿಸಿದ ಶ್ರೀಧರ ಟಿ.ಸಿ.ಎಚ್ ಮಾಡಿದ.
ಮುಂದೆ ಐದು ವರ್ಷ ಯಾವುದೇ ಕೆಲಸವಿರದೇ ಖಾಲಿ ಕುಳಿತಿರಬೇಕಾಯಿತು. ಬೆಳೆಯುತ್ತಿರುವ ತಂಗಿಯರು, ಮಹತ್ವಾಕಾಂಕ್ಷೆಯ ತಮ್ಮಂದಿರು. ಮನೆಯ ಕಷ್ಟದ ಅರಿವಿದ್ದದ್ದು ಶ್ರೀಧರನಿಗೆ ಮಾತ್ರ. ಕೊನೆಗೆ ಯಾರದೋ ಕೈ ಕಾಲು ಕಟ್ಟಿ ಒಂದು ಶಾಲೆಯಲ್ಲಿ ಶಿಕ್ಷಕನಾಗಿ ನೇಮಕವಾಯಿತು. ಬರುತ್ತಿದ್ದದೂ ಅಲ್ಪ ಸಂಬಳ. ಅದರಲ್ಲೇ ಸುಂದರಮ್ಮ ಹೇಗೋ ಮನೆದೂಗಿಸಿಕೊಂಡು ಹೋಗುತ್ತಿದ್ದರು. ಕಾಸಿಗೆ ಕಾಸು ಕೂಡಿಸಿ ಅಮ್ಮನ ಬಳಿ ನೀಡುತ್ತಿದ್ದ ಶ್ರೀಧರ. ಸಂಜೆ ಮನೆಯಲ್ಲಿ ಮಕ್ಕಳಿಗೆ ಸಂಗೀತ ತರಗತಿಯನ್ನು ಕೂಡ ತೆಗೆದುಕೊಳ್ಳುತ್ತಿದ್ದ. ತಮ್ಮಂದಿರು ಹೆಚ್ಚಿನ ಓದು ಓದಬೇಕೆಂದಾಗ ತನಗೆ ಹೆಚ್ಚು ಓದಲಾಗಲಿಲ್ಲ ಅವರ ಕನಸಾದರೂ ನನಸಾಗಲಿ ಎಂದು ಭಾವಿಸಿ ದೂರದ ಪಟ್ಟಣಗಳಿಗೆ ಕಳುಹಿಸಿಕೊಟ್ಟ. ಅವರೆಲ್ಲಾ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹಿಡಿದಾಗ ಎಲ್ಲರಿಗಿಂತ ಸಂತಸಪಟ್ಟಿದ್ದು ಶ್ರೀಧರನೇ.
ಮುಂದೆ ತಂಗಿಯರನ್ನೂ ಅವರ ಇಚ್ಛೆಯಂತೆ ಓದಿಸಿ ಒಳ್ಳೆಯ ಮನೆಗಳಿಗೆ ಮದುವೆ ಮಾಡಿಕೊಟ್ಟು ಜವಾಬ್ದಾರಿ ತೀರಿಸಿದ. ಇದನ್ನೆಲ್ಲಾ ಮಾಡಲು ಅವನು ಪಟ್ಟ ಪರಿಪಾಟಲು ಅವನ ತಾಯಿಗಷ್ಟೇ ಗೊತ್ತಿತ್ತು. ತಮ್ಮ ತಂಗಿಯರು ಅಣ್ಣ ಹೇಗೆ ಇಷ್ಟೆಲ್ಲಾ ನಿಭಾಯಿಸುತ್ತಿದ್ದೀಯಾ ಅಂತ ಸೊಲ್ಲೆತ್ತಲಿಲ್ಲ. ಅಣ್ಣನಿಂದ ಚಿಕ್ಕಂದಿನಿಂದಲೇ ಮಾಡಿಸಿಕೊಂಡು ಅಭ್ಯಾಸವಾದವರಿಗೆ ಬೇರೇನು ತೋಚೀತು..! ಕಷ್ಟ ಒಂದಿನಿತೂ ಸೋಕದಂತೆ ನೆರಳಂತೆ ಅವರನ್ನು ಕಾಪಾಡಿದ್ದ ಶ್ರೀಧರ. ತಂದೆಯ ಕಾಲಾನಂತರ ಮನೆಯ ಆಧಾರ ಸ್ತಂಭವಾಗಿದ್ದ.
ಅಷ್ಟರಲ್ಲಾಗಲೇ ಅವನಿಗೆ ಪ್ರಾಯ ಕಳೆದು ನಲವತ್ತು ವರ್ಷ ದಾಟಿತ್ತು. ತಮ್ಮಂದಿರು ಒಬ್ಬೊಬ್ಬರೇ ಮದುವೆಯ ಮಾತು ತೆಗೆದು ಮೂವರು ಸಹೋದ್ಯೋಗಿಗಳನ್ನು ಮದುವೆಯಾದರು. ಉಳಿದ ಇಬ್ಬರಿಗೆ ಊರಿನ ಹೆಣ್ಣು ಹೆತ್ತವರು ತಾವಾಗಿಯೇ ಮುಂದೆ ಬಂದಾಗ ಸುಂದರಮ್ಮ ಹೂಂಗುಡಲೇ ಬೇಕಾಯಿತು. ಮೊದಲ ಮಗನ ವಿವಾಹವಾಗದೇ ಉಳಿದ ಮಕ್ಕಳೆಲ್ಲಾ ತಮ್ಮ ಸ್ವಾರ್ಥವನ್ನು ನೋಡಿಕೊಂಡದ್ದು ಅವರಿಗೆ ಬೇಸರ ತರಿಸಿದರೂ ಹೇಳುವುದು ಯಾರಲ್ಲಿ. ಮನೆಗೊಬ್ಬಳು ಸೊಸೆ ಬಂದ ಮೇಲೆ ಶ್ರೀಧರ ಬದಲಾಯಿಸಿದರೆ, ತನ್ನ ಜವಾಬ್ದಾರಿಗಳಿಂದ ವಿಮುಖನಾದರೆ ಎಂಬ ಭಯವೂ ಸಣ್ಣಗೆ ಒಳಗೆಲ್ಲೋ ತಿದಿಯೊತ್ತುತ್ತಿತ್ತು. ತನ್ನ ಕುಟುಂಬದ ಶ್ರೇಯಸ್ಸಿಗಾಗಿ ತನ್ನನ್ನು ಗಂಧದಂತೆ ತೇದ ಶ್ರೀಧರನ ಬಗ್ಗೆ ಅವರಿಗ್ಯಾರಿಗೂ ಯೋಚನೆ ಇರಲಿಲ್ಲ. ಎಲ್ಲರಿಗೂ ಮಕ್ಕಳು ಮರಿಯೂ ಆಯಿತು.
ಯೌವನ ಕಾಲದಲ್ಲಿ ಬಯಕೆಗಳು ಕೊನರುವಾಗ ಮನೆಯ ಜವಾಬ್ದಾರಿಯನ್ನು ಅರಿತು ಮನಸ್ಸು ದೃಢವಾಗಿರಿಸಿಕೊಂಡ ಶ್ರೀಧರನಿಗೆ ತಲೆಯಲ್ಲಿ ಬೆಳ್ಳಿಗೂದಲು ಇಣುಕತೊಡಗಿದಾಗಲೇ ಪ್ರಾಯ ಕಳೆದದ್ದು ಗಮನಕ್ಕೆ ಬಂದಿತ್ತು. ಸಂಸಾರವೆಂಬ ಸಾಗರದಲ್ಲಿ ಮುಳುಗದಂತೆ ತೇಲಲು ಪ್ರತೀ ಕ್ಷಣ ಸಾಹಸ ಮಾಡುತ್ತಾ ತನ್ನ ಕುಟುಂಬವೆಂಬ ನೌಕೆಯನ್ನು ದಡ ಮುಟ್ಟಿಸುವಲ್ಲಿ ಸಫಲನಾಗಿದ್ದ. ಮನೆಯ ಉಳಿದೆಲ್ಲ ಹಿರಿಜೀವಗಳೂ ಕಾಲವಾಗಿ ಅವನ ಪಾಲಿಗೆ ಉಳಿದದ್ದು ನರೆಗೂದಲಿನ ಹಣ್ಣು ಹಣ್ಣು ಮುದುಕಿಯಾದ ಅಮ್ಮನೆಂಬ ಜೀವವೊಂದೇ. ಪ್ರಾಯ ಸಂದ ಮಗನನ್ನು ಕಂಡು ಅವನ ಒಂಟಿತನಕ್ಕೆ ಪರೋಕ್ಷವಾಗಿ ತಾನೂ ಕಾರಣವಾದೆನೆಂಬ ಪರಿತಾಪ ಅವರನ್ನು ಒಳಗೊಳಗೆ ಸುಡುತ್ತಿತ್ತು.
ಒಂದೊಮ್ಮೆ ಎಲ್ಲರೂ ಹಬ್ಬವೊಂದಕ್ಕೆ ಮನೆಯಲ್ಲಿ ಸೇರಿದ್ದಾಗ ಸುಂದರಮ್ಮ ಶ್ರೀಧರನ ಮದುವೆಯ ವಿಚಾರವೆತ್ತಿದಾಗ “ಅಯ್ಯೋ ಹೋಗಮ್ಮಾ! ಮುದುಕನಿಗೆ ಯಾರು ಹೆಣ್ಣು ಕೊಟ್ತಾರೆ ಬಿಡು, ಈ ವಯಸ್ಸಿನಲ್ಲಿ ಮದುವೆ ಅಂದರೆ ನೋಡಿದವರು ನಕ್ಕಾರು” ಕೊನೆಯ ತಮ್ಮ ವ್ಯಂಗ್ಯವಾಗಿ ಅಂದದಕ್ಕೆ ಉಳಿದವರು ದನಿಗೂಡಿಸಿದ್ದನ್ನು ಮರೆಯಲ್ಲಿ ನಿಂತು ಕೇಳಿಸಿಕೊಂಡ ಮೇಲೆ ಶ್ರೀಧರರಿಗೆ ಪಿಚ್ಚೆನಿಸಿತು. ತಾನು ಇಷ್ಟು ವರ್ಷಗಳಲ್ಲಿ ಪಟ್ಟ ಕಷ್ಟ, ಇವರೆಲ್ಲರ ಜೀವನವನ್ನು ಚೆನ್ನಾಗಿಡಲು ಮಾಡಿದ ಕೆಲಸಗಳು, ಅದರ ಹಿಂದಿನ ಮಮತೆ, ವಾತ್ಸಲ್ಯ, ಅಣ್ಣನೆಂಬ ಆದರ ಎಲ್ಲವೂ ಮರೆತುಹೋಯಿತೇ… ಅಣ್ಣನಿಗೂ ಒಂದು ಮನಸ್ಸಿದೆ. ಅವನಿಗೂ ಆಸೆಗಳಿರುತ್ತವೆ ಎಂಬ ಚಿಕ್ಕ ವಿಷಯವನ್ನು ಅರಿತುಕೊಳ್ಳದೇ ಹೋದರಲ್ಲಾ… ತಾನು ಮಾಡಿದ ತ್ಯಾಗ ಯಾರಿಗೂ ಕಾಣದಾಯಿತಲ್ಲಾ ಎಂದು ಕಡುವಿಷಾದವಾಯಿತು. ಅಲ್ಲಿಗೆ ಮದುವೆಯ ವಿಚಾರಕ್ಕೆ ಇತಿಶ್ರೀಯಾಯಿತು.
ಕಾಲ ಯಾರಿಗೂ ಕಾಯುವುದಿಲ್ಲ ಅಲ್ಲವೇ… ಸುಂದರಮ್ಮ ಹಾಸಿಗೆ ಹಿಡಿದರು. ಪ್ರಾಣ ಹೋಗುವ ಕೆಲ ದಿನ ಮುನ್ನ ಶ್ರೀಧರರನ್ನು ಬಳಿ ಕರೆದು ಕೈ ಹಿಡಿದುಕೊಂಡರು. “ಶ್ರೀಧರಾ… ನನ್ನ ಕ್ಷಮಿಸಿ ಬಿಡೋ. ಚಿಕ್ಕ ವಯಸ್ಸಿನಲ್ಲಿಯೇ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿ ನಿನ್ನ ಇಡೀ ಬದುಕನ್ನು ಕುಟುಂಬಕ್ಕೋಸ್ಕರ ಬಳಸಿಕೊಂಡೆವು. ನಿನಗೂ ಒಂದು ಜೀವನವಿದೆ ಎಂಬ ನೆನಪೇ ಯಾರಿಗೂ ಆಗಲಿಲ್ಲ. ಈಗ ನನ್ನ ದಿನಗಳೂ ಮುಗಿಯುತ್ತಾ ಬಂದಿವೆ. ನಿನ್ನನ್ನು ಹೀಗೆ ಒಂಟಿಯಾಗಿ ಬಿಟ್ಟು ಹೋಗಲು ಮನಸ್ಸೇ ಬಾರದು. ಆದರೇನು ಮಾಡಲಿ ಹೇಳು? ಬೇರೆ ದಾರಿ ಇಲ್ಲ. ಮೇಲಿನವನು ಕರೆದಾಗ ಭೂಮಿಯ ಋಣ ಮುಗಿಸಲೇ ಬೇಕು. ನಿನಗೊಂದು ಮದುವೆಯಾಗಿ ಸಂಸಾರ ಎಂದಿದ್ದರೆ ನಾನು ನೆಮ್ಮದಿಯಾಗಿ ಸಾಯುತ್ತಿದ್ದೆ ಮಾರಾಯ. ಅದಕ್ಕೆ ಕಲ್ಲು ಹಾಕಲು ನಾನೂ ಕಾರಣವಾದೆ. ಕ್ಷಮಿಸುತ್ತೀಯಾ ಅಲ್ವಾ ಈ ಅಮ್ಮನನ್ನು…” ಎಂದು ಕಣ್ಣೀರಿಟ್ಟಾಗ ಶ್ರೀಧರರು ಯಾವತ್ತೂ ಇಲ್ಲದ್ದು ಆ ದಿನ ಅಮ್ಮನನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತಿದ್ದರು.
ಅಮ್ಮ ತೀರಿ ಹೋಗಿ ಕಾರ್ಯಗಳೆಲ್ಲಾ ಮುಗಿದ ಅನಂತರ ಒಟ್ಟು ಸೇರಿದ ತಮ್ಮ, ತಂಗಿಯರು, ಅತ್ತಿಗೆಯರು ಮತ್ತು ಭಾವಂದಿರ ಬಳಗ ಗುಸುಪಿಸು ಮೀಟಿಂಗ್ ನಡೆಸಿತ್ತು. ಅವರ ಪ್ರತಿನಿಧಿಯಾಗಿ ಕೊನೆಯ ತಮ್ಮ ಬಂದವನೇ “ಅಣ್ಣಾ ಈ ವಯಸ್ಸಿನಲ್ಲಿ ಮದುವೆ ಎಂದು ಹೊರಟು ನಮ್ಮೆಲ್ಲರ ಮರ್ಯಾದೆ ಕಳೆಯಬೇಡ. ಮನೆ ಇದೆ. ಕೆಲಸ ಇದೆ ನಿಂಗೆ. ಇನ್ನೇನು ಬೇಕು. ವರ್ಷಕ್ಕೊಂದು ಸಲ ಬರ್ತೇವೆ. ಆರಾಮಾಗಿರು” ಎಂದಾಗ ಮಾತು ಮೂಕವಾಗಿತ್ತು. ಬಯಕೆಗಳು ಯಾವಾಗಲೋ ಸತ್ತು ಕೊರಡಾಗಿದ್ದ ಅವರ ಹೃದಯಕ್ಕೆ ಕೊಡಲಿಯೇಟು ಬಿದ್ದಿತ್ತು.
****************
ಅಮ್ಮನ ಫೋಟೋ ನೋಡುತ್ತಾ ಕುಳಿತಿದ್ದ ಶ್ರೀಧರರ ಕಣ್ಣಂಚಿನಿಂದ ಕಂಬನಿಯೊಂದು ಜಾರಿ ನೆಲಕ್ಕೆ ಬಿದ್ದಿತ್ತು. ಎದ್ದು ಕಣ್ಣೊರೆಸಿಕೊಂಡು ಕನ್ನಡಕ ಏರಿಸಿದವರೇ ರೇಡಿಯೋ ಹಾಕಿದಾಗ “ಆ ಕರ್ಣನಂತೆ ನೀ ದಾನಿಯಾದೆ, ಇನ್ನೊಂದು ಜೀವಕೆ ಆಧಾರವಾದೆ….” ಹಾಡು ಅಲೆ ಅಲೆಯಾಗಿ ಕೇಳಿಸತೊಡಗಿತು.
- ರಶ್ಮಿ ಉಳಿಯಾರು – ಬೆಂಗಳೂರು.
