ದೇಶಕ್ಕೆ ರಕ್ಷಾ ಕವಚ ಸಂವಿಧಾನ

1950ರ ಜನವರಿ 26ರಂದು ಭಾರತವು ತನ್ನದೇ ಆದ ಸಂವಿಧಾನದ ಮೂಲಕ ಗಣರಾಜ್ಯವಾಗಿ ರೂಪುಗೊಂಡಿತು. ಗಣರಾಜ್ಯೋತ್ಸವ ನಮಗೆ ನಮ್ಮ ಹಕ್ಕುಗಳನ್ನು ಕಾಪಾಡುವುದು, ಕರ್ತವ್ಯಗಳನ್ನು ನಿಭಾಯಿಸುವುದು ಮತ್ತು ದೇಶದ ಶ್ರೇಷ್ಠತೆಗೆ ತೊಡಗಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂಬ ಸಂದೇಶವನ್ನು ಕೊಡುತ್ತದೆ. ನಮ್ಮ ಸಂವಿಧಾನದ ಮಹತ್ವದ ಕುರಿತು ಗೀತಾಂಜಲಿ ಎನ್ ಎಮ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

  •  ಒಂದು ದೇಶದ ಶಕ್ತಿ ಅದರ ಸೇನೆ ಅಥವಾ ಸಂಪತ್ತಿನಲ್ಲಿ ಮಾತ್ರ ಅಲ್ಲ, ಆ ದೇಶದ ಸಂವಿಧಾನ ಮತ್ತು ಪ್ರಜ್ಞಾವಂತ ನಾಗರಿಕರಲ್ಲಿ ಅಡಗಿದೆ ಎಂಬುದು ಅಕ್ಷರಶಃ ಸತ್ಯ ಹಾಗಾಗಿ
    ಆ ಶಕ್ತಿಗೆ ರೂಪ ನೀಡುವ ದಿನವೇ ಗಣರಾಜ್ಯೋತ್ಸವ. 1950ರ ಜನವರಿ 26ರಂದು ಭಾರತವು ತನ್ನದೇ ಆದ ಸಂವಿಧಾನದ ಮೂಲಕ ಗಣರಾಜ್ಯವಾಗಿ ರೂಪುಗೊಂಡು ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ ಎಂಬ ಮೌಲ್ಯಗಳನ್ನು ತನ್ನ ಅಸ್ತಿತ್ವದ ಅಡಿಪಾಯವನ್ನಾಗಿ ಮಾಡಿಕೊಂಡು ಪ್ರಪಂಚದಲ್ಲೇ ದೊಡ್ಡ ಹಾಗೂ ಉತ್ತಮ ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿತು.
  • ಈ ದಿನವು ಕೇವಲ ಧ್ವಜಾರೋಹಣ ಮತ್ತು ಸೈನಿಕ ಪ್ಯಾರೆಡ್‍ಗೆ ಮಾತ್ರ ಸೀಮಿತವಲ್ಲ, ಬದಲಿಗೆ ನಮ್ಮ ಸಂವಿಧಾನವು ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ನಮ್ಮೆಲ್ಲರ ಜೀವನದಲ್ಲಿ ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ನಮಗೆ ನೆನಪಿಸುವ ಸಲುವಾಗಿ ಮತ್ತು ದೇಶದ ಪ್ರಜಾಸತ್ತಾತ್ಮಕ ಶಕ್ತಿ ಮತ್ತು ಐಕ್ಯತೆಯ ಪ್ರತೀಕವಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ.
  •  ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರ. ಈ ಮಹತ್ವದ ಹೆಗ್ಗಳಿಕೆಗೆ ಮೂಲ ಕಾರಣವೇ ನಮ್ಮ ಸಂವಿಧಾನ. ಹಾಗಾಗಿ ಗಣರಾಜ್ಯೋತ್ಸವವು ಕೇವಲ ಒಂದು ರಾಷ್ಟ್ರೀಯ ಹಬ್ಬವಲ್ಲ ಇದು ಭಾರತದ ಸಂವಿಧಾನಾತ್ಮಕ ಮೌಲ್ಯಗಳು, ಪ್ರಜಾಶಕ್ತಿ ಹಾಗೂ ಸ್ವಾತಂತ್ರ್ಯದ ಅರ್ಥವನ್ನು ನೆನಪಿಸುವ ಪವಿತ್ರ ದಿನವಾಗಿದೆ.
  • ಹಾಗಾದರೆ ಸಂವಿಧಾನ ಎಂದರೇನು? ನಮಗೆ ಸಂವಿಧಾನ ಏಕೆ ಬೇಕು?ಸಂವಿಧಾನ ದೇಶಕ್ಕೆ ಎಷ್ಟು ಮುಖ್ಯ? ಎಂಬುದನ್ನು ನೋದುವುದಾದರೆ ಸಂವಿಧಾನ ಎನ್ನುವುದು ಕೇವಲ ನಿಯಮಗಳ ಪುಸ್ತಕವಲ್ಲ ಹಾಗೂ ಕೇವಲ ಕಾಗದದ ಮೇಲೆ ಬರೆದ ನಿಯಮಗಳ ಸಂಕಲನವೂ ಅಲ್ಲ. ಇದು ಜನರ ಹಿತ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಶ್ರೇಷ್ಠತೆಯನ್ನು ಗುರಿಯಾಗಿಟ್ಟುಕೊಂಡ ನಿಯಮಗಳ ಸಂಕಲನ. ಒಂದು ದೇಶವು ಯಶಸ್ವಿಯಾಗಿ ಕಾರ್ಯನಿರ್ವಹಿಸಲು, ಹಕ್ಕುಗಳು ಹಾಗೂ ಕರ್ತವ್ಯಗಳ ನಡುವಿನ ಸಮತೋಲನವನ್ನು ತಡೆಗಟ್ಟಲು ಸಂವಿಧಾನ ಅತ್ಯಂತ ಅಗತ್ಯ ಮತ್ತು ಇದು ದೇಶದ ಆಡಳಿತ ವ್ಯವಸ್ಥೆ ಜನರ ಹಕ್ಕುಗಳ ಭದ್ರತೆ,ಸರ್ಕಾರದ ಅಧಿಕಾರದ ಇತಿಮಿತಿಗಳನ್ನು ತಿಳಿಸುತ್ತಾ ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆ ಇವೆಲ್ಲವನ್ನು ನಿರ್ಧರಿಸುವ ಮೂಲಾಧಾರ ಗ್ರಂಥವಾಗಿದೆ.
  • ದೇಶಕ್ಕೆ ಸಂವಿಧಾನ ಏಕೆ ಬೇಕು? ಒಂದು ದೇಶವು ಸಂವಿಧಾನವಿಲ್ಲದೆ ಇದ್ದರೆ ಏನಾಗುತ್ತದೆ ಎಂದು ನೋಡುವುದಾದರೆ, ಬಲಿಷ್ಠರು ದುರ್ಬಲರನ್ನು ಶೋಷಿಸುವ ಸಾಧ್ಯತೆ, ಅನ್ಯಾಯ ಮತ್ತು ಅವ್ಯವಸ್ಥೆ ಅಸಮಾನತೆ ಅಧಿಕಾರದ ದುರುಪಯೋಗ, ಹೀಗೆ ಹಲವು ಸಾಧ್ಯತೆಗಳು ಇರುವುದರಿಂದ ಇದಕ್ಕೊಂದು ಲಗಾಮು ಹಾಕಿ ತಡೆಯಲು ಸಂವಿಧಾನ ಅತ್ಯಂತ ಅಗತ್ಯ.
  • ಸಂವಿಧಾನದ ಪ್ರಮುಖ ಉದ್ದೇಶಗಳನ್ನು ನೋಡುವುದಾದರೆ ಭಾರತೀಯ ಸಂವಿಧಾನವು ಕೇವಲ ಆಡಳಿತದ ನಿಯಮಗಳ ಸಂಕಲನವಾಗದೇ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಯುತ ಮತ್ತು ಗೌರವಯುತ ಜೀವನವನ್ನು ಒದಗಿಸುವ ಮಹತ್ತರ ಉದ್ದೇಶವನ್ನು ಹೊಂದಿದೆ. ಹಾಗಾಗಿ ನ್ಯಾಯ ಸ್ಥಾಪನೆಯ ಮೂಲಕ ಸಮಾಜದ ಎಲ್ಲಾ ವರ್ಗಗಳಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸುವುದು ಸಂವಿಧಾನದ ಮೂಲ ಉದ್ದೇಶವಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಮಾತಿನ, ಅಭಿವ್ಯಕ್ತಿಯ, ಧರ್ಮದ, ವಾಸಸ್ಥಳದ ಹಾಗೂ ಜೀವನದ ಸ್ವಾತಂತ್ರ್ಯವನ್ನು ಖಚಿತಪಡಿಸುವುದು. ಸಮಾನತೆ ಸಾಧನೆ,ಜಾತಿ, ಧರ್ಮ,ಭಾಷೆ, ಲಿಂಗ ಅಥವಾ ಆರ್ಥಿಕ ಸ್ಥಿತಿಗತಿಯ ಭೇದವಿಲ್ಲದೆ ಎಲ್ಲರಿಗೂ ಕಾನೂನಿನ ಮುಂದೆ ಸಮಾನತೆ ನೀಡುವುದು. ಹಾಗೂ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಜನರೇ ಆಡಳಿತದ ಕೇಂದ್ರಬಿಂದು ಎಂಬ ತತ್ವದ ಆಧಾರದಲ್ಲಿ ಸರ್ಕಾರದ ರಚನೆ ಮತ್ತು ಕಾರ್ಯನಿರ್ವಹಣೆಯನ್ನು ನಿರ್ಧರಿಸುವುದು.ಇವು ನಮ್ಮ ಸಂವಿಧಾನದ ಪ್ರಮುಖ ಉದ್ದೇಶಗಳು.
  • ಅನೇಕ ತ್ಯಾಗ, ಹೋರಾಟ ಮತ್ತು ಬಲಿದಾನದ ಫಲವಾಗಿ ಭಾರತವು ಸ್ವಾತಂತ್ರ್ಯವನ್ನು ಪಡೆದಿತು. ಆದರೆ ಆ ಸ್ವಾತಂತ್ರ್ಯಕ್ಕೆ ಅರ್ಥ, ಮೌಲ್ಯ ಮತ್ತು ದಿಕ್ಕು ನೀಡಿದ್ದು ಸಂವಿಧಾನ. ಜನವರಿ 26ರಂದು ಆಚರಿಸುವ ಗಣರಾಜ್ಯೋತ್ಸವವು ಭಾರತವು ಕೇವಲ ಸ್ವತಂತ್ರ ರಾಷ್ಟ್ರವಲ್ಲ, ಬದಲಾಗಿ ಸಂವಿಧಾನದ ಆಧಾರದಲ್ಲಿ ನಡೆಯುವ ಪ್ರಜಾಸತ್ತಾತ್ಮಕ ರಾಷ್ಟ್ರ ಎಂಬುದನ್ನು ಜಗತ್ತಿಗೆ ಸಾರುವ ಮಹತ್ವದ ದಿನವಾಗಿದೆ. ಮತ್ತು ಸ್ವಾತಂತ್ರ್ಯವನ್ನು ನ್ಯಾಯ, ಸಮಾನತೆ ಮತ್ತು ಶಿಸ್ತುಗಳ ಮೂಲಕ ಉಳಿಸಿಕೊಳ್ಳುವ ವ್ಯವಸ್ಥೆ ಹಾಗಾಗಿ ಗಣರಾಜ್ಯೋತ್ಸವವು ನಮ್ಮ ದೇಶದ ಪ್ರಜಾಸತ್ತಾತ್ಮಕದ ಆತ್ಮ ಮತ್ತು ಜನಶಕ್ತಿಯ ಪ್ರತೀಕವಾಗಿ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದಿದೆ.
  • ಸಂವಿಧಾನದ ಪ್ರಮುಖ ಕಾರ್ಯಗಳನ್ನು ನೋಡುವುದಾದರೆ,  ನ್ಯಾಯದ ಮಾನದಂಡವಾಗಿ ಎಲ್ಲಾ ನಾಗರಿಕರು ನ್ಯಾಯಪಾಲನೆಯ ಅಧೀನರಾಗಬೇಕು ಎಂಬುದನ್ನು ಖಚಿತಪಡಿಸುತ್ತದೆ. ಹಕ್ಕುಗಳ ರಕ್ಷಣಾ ಭರವಸೆಗಾಗಿ ಪ್ರತಿಯೊಬ್ಬ ನಾಗರಿಕನು ತಮ್ಮ ಹಕ್ಕುಗಳನ್ನು ನಿಭಾಯಿಸಲು ಮತ್ತು ಬದುಕನ್ನು ಗೌರವದಿಂದ ನಡೆಸಲು ಸಹಾಯ ಮಾಡುತ್ತದೆ. ಸರ್ಕಾರದ ಅಧಿಕಾರ ದುರುಪಯೋಗ ತಡೆಯಲು ಕಾನೂನು ರೂಪದಲ್ಲಿ ನಿಯಮಗಳನ್ನು ನೀಡುತ್ತದೆ ಸರ್ವಸಮಾನತೆಯ ಮೂಲಕ ಎಲ್ಲಾ ವರ್ಗ, ಎಲ್ಲಾ ಸಮುದಾಯ ಮತ್ತು ಲಿಂಗಗಳಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುತ್ತದೆ. ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯಿಂದ ಸರ್ಕಾರದ ನೀತಿಗಳನ್ನು ಜನರ ಅಭಿಪ್ರಾಯದ ಮೂಲಕ ನಿರ್ಧರಿಸಲು ಅವಕಾಶ ಕೊಡುತ್ತದೆ.
  • ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಸಂವಿಧಾನವು ರಾಷ್ಟ್ರದ ಪ್ರಗತಿ, ಶಾಂತಿ ಮತ್ತು ಸೌಹಾರ್ದತೆಗೆ ಮಾರ್ಗದರ್ಶನ ನೀಡುತ್ತದೆ. ಒಂದು ಸಮರ್ಥ ಸಂವಿಧಾನವು ದೇಶದಲ್ಲಿ ಉನ್ನತ ನ್ಯಾಯ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಮತ್ತು ಸಾಮಾಜಿಕ ಸಮತೋಲನಗಳನ್ನು ಉತ್ತೇಜಿಸುತ್ತದೆ. ಇದರಿಂದ ದೇಶದ ಪ್ರತಿಯೊಬ್ಬ ನಾಗರಿಕನು ತಮ್ಮ ಸ್ವಾಭಿಮಾನ ಮತ್ತು ಹಕ್ಕುಗಳನ್ನು ಅರಿತು ಬದುಕಲು ಸಾಧ್ಯವಾಗುತ್ತದೆ.
  • ಜನರಿಗೆ ಸಂವಿಧಾನ ಏಕೆ ಬೇಕು ಅದರ ಮಹತ್ವವೇನು ಎಂಬುದನ್ನು ನೋಡುವುದಾದರೆ ಪ್ರತಿಯೊಬ್ಬ ಭಾರತೀಯರೂ ಸಂವಿಧಾನದ ಪ್ರಭಾವದಿಂದಲೇ ನಮ್ಮ ದಿನನಿತ್ಯದ ಬದುಕು ಮತ್ತು ಸಾಮಾಜಿಕ ನ್ಯಾಯವನ್ನು ಅನುಭವಿಸುತ್ತೇವೆ. ನಮ್ಮ ಶಾಲೆ, ಉದ್ಯೋಗ, ಮತದಾನ ಹಕ್ಕು, ಎಲ್ಲವೂ ಸಂವಿಧಾನದ ಗೈಡ್‌ಲೈನ್ಸ್ ಮೂಲಕ ನಿರ್ವಹಿಸಲಾಗುತ್ತದೆ. ಅದರಿಂದ, ಸಂವಿಧಾನವು ಕೇವಲ ಕಾಗದದ ನಿಯಮವಲ್ಲ,”ಇದು ನಮ್ಮ ರಕ್ಷಣಾ ಕವಚ” ಸಹಾನುಭೂತಿ ಮತ್ತು ಜಾಗೃತಿಯ ಸಂಕೇತ.!

ಗಣರಾಜ್ಯೋತ್ಸವದ ಸಂದೇಶ :

ಗಣರಾಜ್ಯೋತ್ಸವ ನಮಗೆ ನಮ್ಮ ಹಕ್ಕುಗಳನ್ನು ಕಾಪಾಡುವುದು ಕರ್ತವ್ಯಗಳನ್ನು ನಿಭಾಯಿಸುವುದು ಮತ್ತು ದೇಶದ ಶ್ರೇಷ್ಠತೆಗೆ ತೊಡಗಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂಬ ಸಂದೇಶವನ್ನು ಕೊಡುತ್ತದೆ. ಪ್ರತಿಯೊಬ್ಬ ನಾಗರಿಕನು ತಮ್ಮ ಹಕ್ಕುಗಳೊಂದಿಗೆ ಜವಾಬ್ದಾರಿಯುತವಾಗಿರಬೇಕು. ಸಂವಿಧಾನದ ಸತ್ವವನ್ನು ಅರಿತಿರಬೇಕು ಮತ್ತು ದೇಶವನ್ನು ಶಾಂತಿ, ಏಕತೆ ಮತ್ತು ಪ್ರಗತಿಪರ ರಾಷ್ಟ್ರವಾಗಿ ಬೆಳೆಸಲು ಸಹಕರಿಸಬೇಕು.

  • ಗಣರಾಜ್ಯೋತ್ಸವವು ಕೇವಲ ಉತ್ಸವವಲ್ಲ. ಇದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಗೌರವ, ಸಂವಿಧಾನದ ಮೌಲ್ಯಗಳು ಮತ್ತು ಪ್ರಜಾಶಕ್ತಿಯ ಮಹತ್ವವನ್ನು ಪ್ರತಿಬಿಂಬಿಸುವ ದಿನ. ಪ್ರತಿಯೊಬ್ಬ ಭಾರತೀಯನು ಈ ದಿನವನ್ನು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳ ಜಾಗೃತಿಗಾಗಿ, ಮತ್ತು ದೇಶದ ಆಧುನಿಕತೆ, ಶ್ರೇಷ್ಠತೆ ಮತ್ತು ಏಕತೆಯ ಹಾದಿಗಾಗಿ ಆಚರಿಸಬೇಕು. ಸಂವಿಧಾನ ನಮ್ಮ ರಕ್ಷಾಕವಚ. ಪ್ರತಿಯೊಬ್ಬ ಭಾರತೀಯನು ಸಂವಿಧಾನದ ಮೌಲ್ಯಗಳನ್ನು ಅರಿತು, ಗೌರವಿಸಿ, ಅನುಸರಿಸಿದಾಗಲೇ ಭಾರತವು ನಿಜವಾದ ಅರ್ಥದಲ್ಲಿ ಶಕ್ತಿಶಾಲಿ ಗಣರಾಜ್ಯವಾಗುತ್ತದೆ.ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ
    ದೇಶ ಉಳಿದರೆ ನಾವು ಉಳಿಯುತ್ತೇವೆ

  • ಗೀತಾಂಜಲಿ ಎನ್ ಎಮ್, ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW