ಪಿಬಿಎಸ್ ಅವರ ಕೊನೆಯ ಭೇಟಿ –  ವೈ ಜಿ ಅಶೋಕ್ ಕುಮಾರ್

ಇವತ್ತು ಬೆಳಿಗ್ಗೆ ಮದ್ರಾಸ್ ನಲ್ಲಿರುವ ಪಿಬಿಎಸ್ ಮಗ ನಂದ ಕಿಶೋರ್ ಗೆ ಫೋನ್ ಮಾಡಿ ಮಾತನಾಡಿದಾಗ ಇಷ್ಟೆಲ್ಲ ನೆನಪಾಯಿತು.ಆ ನೆನಪುಗಳೇನು ಎನ್ನುವುದನ್ನು ಲೇಖಕ ವೈ ಜಿ ಅಶೋಕ್ ಕುಮಾರ್  ಅವರು ಬರೆದಿದ್ದಾರೆ, ಮುಂದೆ ಓದಿ …
*********
ಪ್ರತಿ ಭಯಂಕರ ಶ್ರೀನಿವಾಸ್ ಅಂದ್ರೆ ಪಿಬಿಎಸ್, ಪ್ಲೇ ಬ್ಯಾಕ್ ಸಿಂಗರ್ ಅವರಾಗಲೇ ವ್ಹೀಲ್ ಚೇರ್ ಗೆ ಹೊಂದಿಕೊಂಡಿದ್ದರು. ನಾನವರನ್ನು air port ನಿಂದ‌ ಕರೆ ತರಬೇಕಿತ್ತು. ಮದ್ರಾಸ್‌ನಿಂದ ಬೆಂಗಳೂರಿಗೆ ಎರಡು ಟಿಕೇಟ್ ಬುಕ್ ಆಗಿತ್ತು. ಪಿಬಿಎಸ್‌ ಜತೆ ಮಗ ನಂದ ಕಿಶೋರ್ ಇದ್ದರು.

Air Port ನಿಂದ ನೇರವಾಗಿ ಅವರ ಫೇವರಿಟ್ ಮೌರ್ಯ ಹೊಟೇಲ್ ರೂಂ 23 ಗೆ ಬರುವ ಹೊತ್ತಿಗೆ ಕನ್ನಡ ಚಳವಳಿಯ ಟಿ ಪಿ ಪ್ರಸನ್ನಕುಮಾರ್, ಹಿರಿಯ ಗಾಯಕ ಮಾನೇ,
ಕಪ್ಪು ಬಿಳುಪು ಚಿತ್ರ ಖ್ಯಾತಿಯ ಸಂಗೀತ ನಿರ್ದೇಶಕ ಸತ್ಯಂ ಅವರನ್ನು ಸಲಹಿದ್ದ‌ ವೆಂಕಟರಾಮಯ್ಯ, ಹಿರಿಯ ಛಾಯಾಗ್ರಾಹಕ ಶಾಂತಾರಾಂ ಕಾಯುತ್ತಿದ್ದರು. ಸಂಜೆ ಪ್ರೆಸ್ ಕ್ಲಬ್ ಗೆ ಪಿಬಿಎಸ್ ಅವರನ್ನು ಮಲ್ಲಿಗೆ ಕನಕಾಂಬರ ಬಿಡಿ ಹೂ ಮಳೆಯೊಂದಿಗೆ ಸ್ವಾಗತಿಸಿ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ವೇದಿಕೆಯ‌ ಮುಂಭಾಗದಲ್ಲಿ ಆಸೀನರಾಗಿದ್ದ ಪಿಬಿಎಸ್ ಕಾಲದ ಕಲಾವಿದರು ಸಂಗೀತ ಕ್ಷೇತ್ರದ ಮಾಂತ್ರಿಕರನ್ನು ಕಂಡು ಪುಳಕಿತರಾಗಿ ಎಲ್ಲೆಡೆಗೂ ಕೈ ಬೀಸಿದರು.
ಆ ಚಿತ್ರತಾರೆಗಳೆಲ್ಲ ಎದ್ದು ನಿಂತು ನಮಸ್ಕರಿಸುತ್ತ ಗೌರವದ ನಗು ಚೆಲ್ಲಿದರು. ಪಿಬಿಎಸ್ ಅಭಿಮಾನಿಗಳು ಅವರಿಗಾಗಿಯೆ ನೀಡಿದ ಚೆಕ್ ಗಳನ್ನೆಲ್ಲ ಒಟ್ಟುಗೂಡಿಸಿ ಅರ್ಪಿಸಲಾಯಿತು.
ರಾಜು ಸಿದ್ದರಾಮಯ್ಯ, ರಾಜೇಂದ್ರ ಕಟ್ಟಿ, ಮಂಡಿ ಮಂಜಣ್ಣ ಮುಂತಾದವರು ತಮ್ಮ ಇಷ್ಟಾರ್ಥದ ಗೀತ ಗಾಯನಕ್ಕಾಗಿ ಸ್ಪಾನ್ಸರ್ ನೀಡಿದ ಹಣ ಸುಮಾರು ಒಂದೂವರೆ ಲಕ್ಷ ರೂಪಾಯಿಯನ್ನು ಪಿಬಿಎಸ್ ಜೇಬಿಗಿಟ್ಟು ಸಂಪನ್ನಗೊಂಡೆವು.

ಅವರು ತಮ್ಮ ಜೇಬಿನಲ್ಲಿ ಸಾಲಾಗಿ ಜೋಡಿಸಿಟ್ಟ ಪೆನ್ನೊಂದಂನ್ನು ತೆಗೆದು ಕರ್ನಾಟಕ ಕನ್ನಡ ಕಲಾವಿದರು ರಾಜ್ ಕುಮಾರ್ ಕುರಿತು ಆಶು‌ ಕವಿತೆ ರಚಿಸಿ ಹಾಡಿಯೇ ಬಿಟ್ಟರು. ಪಿಬಿಎಸ್ ಜೇನದನಿ ಕೇಳಿ ನಾವೆಲ್ಲ ಪುಳಕಿತಗೊಂಡೆವು. ನಂತರ ಕಾರ್ಟೂನಿಸ್ಟ್ , ಗೀತೆ ರಚನೆಕಾರ, ಸಂಗೀತ ನಿರ್ದೇಶಕ ಮನೋಹರ್ ತಂಡ ಪ್ರೆಸ್ ಕ್ಲಬ್ ಸದಸ್ಯರೇ ಬಯಸಿದ
ಗೀತೆಗಳನ್ನು ಒಂದೊಂದಾಗಿ ಸಂಗೀತ‌ಸಾಮ್ರಾಟರಾಗಿ ವಿರಾಜಮಾನರಾಗಿದ್ದ ಪಿಬಿಎಸ್ ಮುಂದೆ ಅವರೇ ಹಾಡಿದ ಹಳೆಯ ಆಲ್ ಟೈಮ್ ಸಾಂಗ್ ಗಳನ್ನು ‘ಪ್ರಸ್ತುತ’ ಪಡಿಸಿದರು.ತಾಳ ಹಾಕುತ್ತಿದ್ದ ಪಿಬಿಎಸ್ ಪ್ರತಿ ಗೀತೆಯ ನಂತರ ಆ ಹಾಡಿನ ಸಂದರ್ಭವನ್ನು ವಿವರಿಸುತ್ತಿದ್ದರು.

ಫೋಟೋ ಕೃಪೆ : chaibisket

ಲಹರಿ ವೇಲು ಮೂಲಕ ಪಿಬಿಎಸ್ ಪ್ರೆಸ್ ಕ್ಲಬ್ ಗೆ‌ ಬಂದು ನಮ್ಮ ಸಂಗೀತಾತಿಥ್ಯ ಸ್ವೀಕರಿಸಿ ಕೊನೆಯಲ್ಲಿ ಅವರು ನುಡಿ ಮುತ್ತುಗಳನ್ನು ಕೇಳುವ ಸದವಕಾಶ ನಮ್ಮದಾಗಿತ್ತು.
” ಕನ್ನಡವನ್ನು ಕನ್ನಡ ಹಾಡುಗಳನ್ನು ಕನ್ನಡ ಕಂಠೀರವ ರಾಜ್ ಕುಮಾರ್ ಅವರನ್ನು ಕಣ್ಮನ ತುಂಬಿಸಿಕೊಂಡು ಬದುಕಿದ್ದೇನೆ.ಅತೀ ಹೆಚ್ಚು ನನ್ನ ಅಭಿಮಾನಿಗಳನ್ನು ಹೊಂದಿರುವ ಕನ್ನಡ ನೆಲಕ್ಕೆ ನಮಸ್ಕರಿಸುತ್ತೇನೆ ” ಎಂದು ಭಾವುಕರಾಗಿ “ನಾವಾಡುವ ನುಡಿಯೇ ಕನ್ನಡ ನುಡಿ” ಹಾಡುವ ಮೂಲಕ ಸಂಪನ್ನಗೊಳಿಸಿದರು.

ಮಾರನೇ ಬೆಳಿಗ್ಗೆ ಕೋಟೆ ಲಕ್ಷ್ಮೀನಾರಾಯಣ ಸನ್ನಿಧಿಯಲ್ಲಿ ಅವರೇ ರಚಿಸಿದ ಹಾಡಿದ ಭಕ್ತಿಗೀತೆಯನ್ನು ರೆಕಾರ್ಡಿಂಗ್ ಮಾಡಲಾಯಿತು.

ಲೇಖಕ ವೈ ಜಿ ಅಶೋಕ್ ಕುಮಾರ್ ಅವರೊಂದಿಗೆ ಪಿಬಿಎಸ್

ಅವರು ಮರಳುವಾಗ ಈ ಕಾರ್ಯಕ್ರಮ ರೂಪಿಸಿ ಅವರ ಅನಾರೋಗ್ಯ ಸ್ಥಿತಿಯಲ್ಲಿ ಪಟ್ಟುಬಿಡದೆ ಕರೆತಂದು ಕನ್ನಡ ನೆಲವನ್ನು ಸ್ಪರ್ಶೀಸಿದ್ದಕ್ಕಾಗಿ ನನ್ನ ತಲೆಯ ಮೇಲೆ ಕೈಯಿಟ್ಟು ಮಂತ್ರ ಪಠಿಸಿ ಮನಃಪೂರ್ವಕವಾಗಿ ಆಶೀರ್ವದಿಸಿದರು. ಈ ಜನ್ಮಕ್ಕೆ ಇಷ್ಟು ಸಾಕೆನ್ನಿಸಿತು. ಮದ್ರಾಸ್ ತೆರಳಿದ ನಂತರ ಮೇಸೆಜ್ ಓದಿ ಫೋನ್ ಮಾಡಿ ಮಾತಾಡುತ್ತಿದ್ದರು.
ಪಿಬಿಎಸ್ ಅಗಲುವ ಮುನ್ನ ಹೇಳಿದ ಮಾತು ನನ್ನ ಅಲುಗಾಡಿಸಿ ಕಣ್ತುಂಬಿಸಿತು.

” ಇಷ್ಟು ದಿನ ನಾನು ಕನ್ನಡ ತಾಯಿ ನೀಡಿದ ಹಣದಲ್ಲಿ ಬದುಕಿದ್ದೆ.ಕೊನೆಗೂ ಆ ತಾಯಿ ಮತ್ತೆ ಕರೆದು ಅನ್ನ‌ಕೊಟ್ಟಳು” . ಅದೇ ಅವರ ಕೊನೆಯ ಭೇಟಿ ಆಯಿತು.


  •  ವೈ ಜಿ ಅಶೋಕ್ ಕುಮಾರ್  (ಪತ್ರಕರ್ತರು, ಕವಿಗಳು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW