‘ಕೋಟಿ ರೂಪಾಯಿಯ ವಾರಸುದಾರ’ ಕತೆ

ಇಸಾಮ್- ಅಲ್- ಬಖೀ ತಾಯಿಗೆ ಬರುತ್ತಿದ್ದ ವೃದ್ಧಾಪ್ಯದ ಪಿಂಚಣಿಯ ಸಣ್ಣ ಮೊತ್ತ ಮತ್ತು ತಲೆಯ ಮೇಲೊಂದು ಶಿಥಿಲ ಸೂರು.ಇಸಾಮ್, ಬದುಕಿನ ಯಾವ ರಂಗದಲ್ಲೂ ಯಶಸ್ಸು ಸಾಧಿಸಿದವನಲ್ಲ, ಓದು- ಬರಹ ತಲೆಗಂಟಲಿಲ್ಲ. ತನ್ನ ಅರೆಬರೆ ಚಾಣಾಕ್ಷತನದಿಂದ ಬಾಲ್ಯಕಾಲದ ಗೆಳೆಯರಿಗೆ, ಯೌವ್ವನದ ಸಹಪಾಠಿಗಳಿಗೆ, ಅಕ್ಕಪಕ್ಕದ ಪರಿಚಿತರಿಗೆ ಟೋಪಿ ಹಾಕಿಯೊ, ಕೈ ಹೊಸೆದೊ ಒಂದೆರಡು ದುಡ್ಡು ಆತ ಸಂಪಾದಿಸಿಕೊಳ್ಳುತ್ತಿದ್ದುದುಂಟು. ಮುಂದೆಯಿತು ತಪ್ಪದೆ ಓದಿ ನಜೀಬ್ ಮೆಹಫೂಸ್ ಅವರ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೇಶವ ಮಳಗಿ ಅವರು…

ನಜೀಬ್ ಮೆಹಫೂಸ್ (Naguib Mahfouz)

(ಕೊಂಚಮಾತ್ರ ದೊಡ್ಡ ಕಥೆ. ಆದರೆ, ಆಸಕ್ತರಿಗೆ ಕಡ್ಡಾಯ ಓದು)

ನಿನ್ನೆಯವರೆಗೂ ಹಿಡಿಕೂಳಿಗೂ ಕಂಗೆಟ್ಟ ದರಿದ್ರತೆ.

ಇಂದಿನ ಸ್ಥಿತಿ: ಕಂಠ ಬಿರಿವ ಸಿರಿವಂತಿಕೆ!

ಹಾಳು ಹೊಡೆಯುತ್ತಿದ್ದ ಆ ಹಳೆಯ ಮನೆಗೆ ಸಿಕ್ಕ ಬೆಲೆ: ಹತ್ತು ಕೋಟಿ! ತನ್ನ ಎಪ್ಪತ್ತರ ಹರೆಯದಲ್ಲಿ ಇಸಾಮ್- ಅಲ್ – ಬಖಿ ಅಕ್ಷರಶಃ ಮರುಹುಟ್ಟು ಪಡೆದಿದ್ದ.

ಮಸುಕು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡುತ್ತ ಇಸಾಮ್ ಸುಖಿಸಿದ: ಬಡತನ, ಬಡಾಯಿ, ಪ್ರೀತಿ-ದ್ವೇಷ ಎಲ್ಲ ಅನುಭವಿಸುತ್ತ ಕಾಲನ ಕ್ರೂರದಾಳಿಗೆ ತುತ್ತಾದ ಎಲುಬು ತುಂಬಿದ, ಸೊರಗಿದ ಕೆನ್ನೆ, ಉಂಡ ಕಹಿಗೆ ಸುಟ್ಟು ಕರಕಾದ ಪುಟ್ಟ ಹಣೆ, ಹೊಳಪು ಹೋದರೂ ಬೆಳಕಿರುವ ಕಣ್ಣು, ಒಸಡು ಸೇರಿಸಿಕೊಂಡು ಪೂರ ಕಪ್ಪಾದ ಹಲ್ಲು, ಸುಕ್ಕು ತುಂಬಿ ಜೋಲಾದ ಕತ್ತು.
ಎಪ್ಪತ್ತು ಮುಗಿದಮೇಲೆ ಬದುಕಲ್ಲಿ ಏನಾದರೂ ಇರುವುದುಂಟೆ?

ಉಂಟು! ನಿಜ! ಬದುಕಿನೆಲ್ಲ ನಿಷ್ಠುರ ದಾಳಿಗೆ ತುತ್ತಾಗಿಯೂ ಇದೀಗ ಬಂದಿರುವ ಉನ್ಮತ್ತತೆ, ಉತ್ಕಂಠತೆ ತಂದಿರುವ ಅನುಭವ ಸರಳವಾಗಿ ಆವಿಯಾಗಿ ಹೋಗಿಬಿಡುವಂಥದಲ್ಲ. ಇದೀಗ ಕೈಗೆಟುಕದ ಗುರಿಯನ್ನು ಮುಟ್ಟಿ, ಸಾಧಿಸಿ ಹೆಮ್ಮೆಯಿಂದ ಬೀಗಬಹುದು. ಹುಚ್ಚ ಅಲೆಮಾರಿ, ತಿರುಪೆಯ ತಿರುಕನಂತಿದ್ದ ಇಸಾಮ್- ಅಲ್- ಬಖೀ ಇದೀಗ ಕೋಟ್ಯಧೀಶ!

ವಿಪರ್ಯಾಸವೆಂದರೆ ಈ ವಿಷಯ ಎಲ್ಲರಿಗೂ ಉಸಿರು ಕಟ್ಟಿಸಿದ್ದು. ಬದುಕಿ ಉಳಿದಿದ್ದ ಆತನ ಎಲ್ಲ ಗೆಳೆಯರು ಉದ್ಧರಿಸಿದರು:

“ಕೇಳಿರೇನ್ರಲೇ! ಈ ಇಸಾಮಿಯ ಅದೃಷ್ಟ?”

“ಅಂಥದ್ದೇನಾಯ್ತಪ? ಆ ತಿರಬೋಕಿಗೆ? ಲಾಟರಿ ಹೊಡೆಯಿತ, ಹೇಗೆ?

“ಆತನ ಹಾಳು ಕೊಂಪೆಯನ್ನು ಅದಾವುದೊ ಪರದೇಶಿ ಕಂಪೆನಿ ಹತ್ತು ಕೋಟಿಗೆ ಖರೀದಿಸಿತಂತೆ, ಅದು ಸುದ್ದಿ. ದೇವರಾಣೆಪ!”

ಸರಿ, ಸುದ್ದಿ ಸ್ವಲ್ಪವೂ ತಡಮಾಡದೆ ಬಿರುಗಾಳಿಯಂತೆ ಊರೆಲ್ಲ ವ್ಯಾಪಿಸಿತು, ಊರ ಬೀದಿಗೆ ಮುಖಮಾಡಿ ನಿಂತ, ದೊಡ್ಡ ಅಂಗಳ ಇದ್ದ ಮನೆ. ಈ ಮನೆ ಹತ್ತು ವರುಷದ ಹಿಂದೆ ವಯಸ್ಸಿನ ಭಾರದಿಂದ ಕಂತೆ ಒಗೆದಿದ್ದ ಆತನ ತಾಯಿಯಿಂದ ಬಂದಿದ್ದ ತಲೆಮಾರಿನ ಆಸ್ತಿ.‌

ಆ ಮುದುಕಿಯಾದರೂ ಬದುಕನ್ನು ವಜ್ರಮುಷ್ಠಿಯಲ್ಲಿ ಹಿಡಿದ ಹೆಂಗಸು. ಕಾಲಾಂತರದಲ್ಲಿ ವಯಸ್ಸಾಗಿ, ಶಕ್ತಿಯುಡುಗಿ, ಮುಷ್ಠಿ ಸಡಿಲಾಗಿ ಒಣಗಿದೆಲೆಯಂತೆ ಉದುರಿ ಬಿದ್ದಿದ್ದಳು. ತನ್ನ ಅವ್ವ ಸತ್ತಾಗ ಆತ ಅಳಲಿಲ್ಲ. ಏಕೆಂದರೆ ಬದುಕು ಯಾವುದಕ್ಕೂ ರೋಧಿಸಬಾರದೆಂದು ಆತನಿಗೆ ಕಲಿಸಿತ್ತು.

ಆ ಕುಟುಂಬಕ್ಕೆ ಇದ್ದ ಒಂದೇ ಆಧಾರವೆಂದರೆ: ಆತನ ತಾಯಿಗೆ ಬರುತ್ತಿದ್ದ ವೃದ್ಧಾಪ್ಯದ ಪಿಂಚಣಿಯ ಸಣ್ಣ ಮೊತ್ತ ಮತ್ತು ತಲೆಯ ಮೇಲೊಂದು ಶಿಥಿಲ ಸೂರು. ಇಸಾಮ್, ಬದುಕಿನ ಯಾವ ರಂಗದಲ್ಲೂ ಯಶಸ್ಸು ಸಾಧಿಸಿದವನಲ್ಲ, ಓದು- ಬರಹ ತಲೆಗಂಟಲಿಲ್ಲ. ತನ್ನ ಅರೆಬರೆ ಚಾಣಾಕ್ಷತನದಿಂದ ಬಾಲ್ಯಕಾಲದ ಗೆಳೆಯರಿಗೆ, ಯೌವ್ವನದ ಸಹಪಾಠಿಗಳಿಗೆ, ಅಕ್ಕಪಕ್ಕದ ಪರಿಚಿತರಿಗೆ ಟೋಪಿ ಹಾಕಿಯೊ, ಕೈ ಹೊಸೆದೊ ಒಂದೆರಡು ದುಡ್ಡು ಆತ ಸಂಪಾದಿಸಿಕೊಳ್ಳುತ್ತಿದ್ದುದುಂಟು. ತನ್ನ ತೂತಿಗೊಂದು ಚಟಕ್ಕೆ ಹೇಗೋ ಹಣ ಹೊಂದಿಸಿಕೊಳ್ಳುವ ಚಾಕಚಕ್ಯತೆ ಆತನಿಗಿತ್ತು. ಆತನ ಬಡತನ, ದಾರಿದ್ರ್ಯವನ್ನೇ ಬೇಡಿ, ಪಡೆದು ಬಂದಂತಿದ್ದ ದೀನಾವಸ್ಥೆ, ದಯನೀಯತೆ ಸುತ್ತಲಿನ ಜನ ಅವನ ತಪ್ಪುಗಳನ್ನು ಮನ್ನಿಸಿ ಮತ್ತೆ ಸಹಾಯದ ಕೈಯನ್ನು ಚಾಚುವಂತೆ ಮಾಡುತ್ತಿದ್ದವು. ಇಸಾಮನ ತಂದೆ ಬಹಳ ಹಿಂದೆ ಟಪಾಲು ಆಫೀಸಿನಲ್ಲಿ ಕೆಲಸಕ್ಕಿದ್ದನಂತೆ. ಅವನ ತಾಯಿಗೆ ವಂಶದ ಆಸ್ತಿಯೆಂದು ಈ ಮನೆ, ಅದಕ್ಕಂಟಿದ ಅಂಗಳ, ವಿಶಾಲ ಹಿತ್ತಲು ದಕ್ಕಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡು ಆತ ಗೊಣಗುತ್ತಿದ್ದ:

“ಒಳ್ಳೇ ಮನೆತನದಲ್ಲಿ ಹುಟ್ಟಿದವನ್ರೋ ನಾನು. ಆದರೇನು?”

ಮಾಡೋದು? ಇವನೌನ, ಹಣೆಯ ಬರೆಹ ಅನ್ನೋದು ಒಂದು ಇದೆಯಲ್ಲ? ಏನು ಮಾಡೊಕ್ಕೆ ಆಗುತ್ತೆ? ನನ್ನ ನಸೀಬು ಕೈ ಕೊಟ್ಟಿರೋದ್ರಿಂದ ಅಲ್ಲೇನು ನಾನು ಹೀಗಿರೋದು?”
ನಿಜವೇನೆಂದರೆ ಆತ ಹುಟ್ಟಾ ಸೋಮಾರಿಯಾಗಿದ್ದ. ಮಾಡುವ ಯಾವ ಕಾಯಕದಲ್ಲೂ ನಿಷ್ಠೆಯಿಲ್ಲದೆ, ಚಿಲ್ಲರೆ- ಪಲ್ಲರೆ ವ್ಯವಹಾರದಲ್ಲಿ ತೊಡಗಿ ಉಂಡಾಡಿಗುಂಡನಾಗಿದ್ದ. ಶಾಲೆಯಿಂದಲೂ ಆತನಿಗೆ ಅರ್ಧಚಂದ್ರ ದೊರಕಿತ್ತು. ಆತನ ಬದುಕು, ಅಕ್ಷರಶಃ ಚಹಾ ದುಕಾನಿನಲ್ಲಿ ಚಿಲ್ಲರೆ ಹರಟೆಯಲ್ಲಿ ಕಳೆಯುತ್ತಿತ್ತು. ಆತ ಅಸರಂತ ಒಂದೋ ಹೊಸ ಸಾಲ ಮಾಡುವುದರಲ್ಲಿಯೋ ಅಥವ ಹಳೆಯ ಸಾಲ ತೀರಿಸುವುದರಲ್ಲಿಯೊ ಇಲ್ಲವೆ ಸ್ನೇಹಿತರ ಬಳಿ ಸಾಲ ತೀರಿಸಲು ಅಂಗಲಾಚುತ್ತಲೋ ದೂಡಿದ್ದ. ಇಸಾಮ್ – ಅಲ್ – ಬಖಿಯ ಗೆಳೆಯನಾಗಿದ್ದ ವಕೀಲನೊಬ್ಬ ಹಿಂದೆ ಆತನಿಗೊಂದು ನವುಕರಿ ದೂರಕಿಸಿಕೊಡುವುದರಲ್ಲಿ ಬಹಳ ಪ್ರಯತ್ನಿಸಿ ವಿಫಲನಾಗಿ ಸುಮ್ಮನಾಗಿದ್ದ.

ಆತನ ಗೆಳೆಯರೆಲ್ಲ ಓದುಮುಗಿಸಿ ತಮ್ಮ ತಮ್ಮ ಬದುಕಿನ ದಾರಿ ಹುಡುಕಿಕೊಂಡು ಹೋದಮೇಲೆ ಏಕಾಂಗಿಯಾದ ಇಸಾಮ್ ಇಡೀ ದಿನ ಹಗಲುಗನಸು ನೇಯುವುದರಲ್ಲಿ ಕಾಲ ಕಳೆಯತೊಡಗಿದ. ಚುನಾವಣೆ ಬಂದಾಗ, ಮದುವೆ-ಮುಂಜಿಗಳಿದ್ದಾಗ, ತಿಥಿ- ಶ್ರಾದ್ಧಗಳಲ್ಲಿ ಒಂದಿಷ್ಟು ಸಂಪಾದನೆಯೂ ಆಗುತ್ತಿದ್ದುದುಂಟು. ಒಟ್ಟಿನಲ್ಲಿ ಅವನ ಇಡಿ ಬದುಕು ಅವನ ಗೆಳೆಯರ ಸಹಾನುಭೂತಿಯಿಂದ ಸಾಗುತ್ತಿತ್ತು. ಅವರಿವರನ್ನು ಅನುಕರಿಸುವುದು, ಹಾಡು-ಕುಣಿತ, ಹರಟೆ ಹಾಸ್ಯದಿಂದ ನಾಕು ಜನರನ್ನು ರಂಜಿಸಿ ಹೊಟ್ಟೆಯನ್ನು ಹೇಗೋ ಸಾಗಹಾಕುತ್ತಿದ್ದ. ಆಗೀಗ ತುಸು ಸಿಹಿ, ಅಪರೂಪಕ್ಕೆ ಗಳಾಸು ಶರಾಬು ದೊರಕುತ್ತಿದ್ದುದು ಇತ್ತು.

ಆತನ ಸಹಜ ಬಯಕೆ- ಕಾಮನೆಗಳೆಲ್ಲ ಬತ್ತಿ ಬರಡಾಗಿದ್ದವು. ಅವರ ಮನೆಯಲ್ಲಿ ಅನ್ನ ಬೇಯಿಸಿದ್ದೇ ಕಡಿಮೆ. ಥರಥರದ ಗೆಣಸಿನ ತಿನಿಸಿಗೆ ಆ ಮನೆ ಊರಲ್ಲೇ ಪ್ರಸಿದ್ಧವಾಗಿತ್ತು! ಅಂಗಳದ ಬಸಳೆ, ರಾಜಗಿರಿ, ಹೊನಗನೆ ಸೊಪ್ಪಿನ ಸಮಾರಾಧನೆಯೋ ಸಮಾರಾಧನೆ!

ಆದರೆ ವಸ್ತುಸ್ಥಿತಿಗೆ ವ್ಯತಿರಿಕ್ತವಾಗಿ ಇಸಾಮನ ಹಗಲುಗನಸುಗಳಲ್ಲಿ ಭಾರೀ ರಸದೌತಣಕೂಟಗಳು; ಮನದಣಿಯೇ ಅನುಭವಿಸಿದ ರತಿಸುಖ ಸುಳಿದಾಡುತ್ತಿದ್ದವು! ವಿಧವೆಯರೊಂದಿಗೆ, ಘನಸ್ಪೋಟಗೊಂಡ ಹೆಂಗಳೆಯೊಂದಿಗೆ ಆತನ ಕಾಮಲೀಲೆ ಥಳುಕು ಹಾಕಲಾಗುತ್ತಿದ್ದರೂ ಯಾರೂ ಅದನ್ನು ನಿಜವೆಂದು ಒಪ್ಪುತ್ತಿರಲಿಲ್ಲ. ಹಾಗೆಂದು ತಳ್ಳಿಹಾಕುತ್ತಲೂ ಇರಲಿಲ್ಲ. ಆದರೆ ಒಂದು ಸಂಬಂಧವನ್ನು ಮಾತ್ರ ಎಲ್ಲರೂ ಸಮ್ಮತಿಸಿದಂತಿತ್ತು. ಈತನಿಗಿಂತ ಹತ್ತು ವರುಷ ಹಿರಿಯಳಾದ ವಿಧವೆಯೊಬ್ಬಳೊಡನೆ ಈತ ನಡೆಸಿದ ಆ ‘ಕೇಳಿ’ ಯದೇ ಒಂದು ಕಥೆ. ಅವರಿಬ್ಬರ ಸಂಬಂಧ ಬರುಬರುತ್ತ ಹಳಸಿ ಮುಂದುಬಿದ್ದುದಕ್ಕೆ ಕಾರಣ: ಆ ಹೆಣ್ಣು ತನ್ನನ್ನು ಮದುವೆಯಾಗಲೇಬೇಕೆಂದು ರೊಳ್ಳಿ ಹಿಡಿದು ಇವನನ್ನು ಒತ್ತಾಯಿಸಿದ್ದು, ‘ಸೋಮಾರಿಯ ಕೈ ಸುಮಾರು’ ಎಂದು ನಂಬಿದ್ದ ಆ ವಿಧವೆ ಈತನಿಗೆ ಒಂದು ನೌಕರಿ ಕೊಡಿಸಲು ಯತ್ನಿಸಿದ್ದೂ ಉಂಟು. ಆದರೆ ವಿಧಿಯ ಆಟ ಬೇರೆಯಿತ್ತು!

ಒಂದು ಜಂಗಿ ಮಾರಾಮಾರಿಯ ನಂತರ ಈ ಜೋಡಿಯ ಸಂಬಂಧ ಮುರುಗಡೆಯಾಯಿತು. ಇದೊಂದೇ ಇಸಾಮನ ನಿಜವಾದ ಸಂಬಂಧವೆನ್ನುವುದಕ್ಕೆ ಸಾಕ್ಷಿಯೆಂದರೆ ಅವರ ಜಗಳವನ್ನು ಕಣ್ಣಾರೆ ನೋಡಿದ್ದ ಹತ್ತಾರು ಜನ. ಪಕ್ಕದ ಮನೆಯವ ಕಥೆ ಕಟ್ಟಿ ಹೇಳಿದ:

“ಕೇಳ್ರಪ್ಪ ಇಲ್ಲಿ! ನೀವೆಲ್ಲ ಎಂಥ ಜಗಳವನ್ನು ಕಣ್ಣಾರೆ ನೋಡೋದು ತಪ್ಪಿಸಿಕೊಂಡ್ರಿ ಅಂತ ನಿಮಗೆ ಅಂದಾಜು ಇಲ್ಲ! ಒಳ್ಳೆ ಸರ್ಕಸ್ಸಿನ ಹಾಗಿತ್ತು. ಹತ್ತೀನ ಗೋಣಿಚೀಲದಲ್ಲಿ ತುರುಕಿದ ಹಾಗಿದ್ದಳ್ರಪ್ಪ ಆ ಡಾಕಿಣಿ. ನಮ್ಮ ದೋಸ್ತs ಇಸಾಮನ್ನ ಹಿಡಿದು ಅಳ್ಳಾಡಿಸಿಬಿಟ್ಟಳು! ಜಗಳ ನೋಡೋಕ್ಕೆ ಏನು ಜನಾ ಸೇರಿದ್ರು ಅಂತೀರಿ. ಯಾರೂ ತುಟಿಪಿಟಕ್ಕೆನ್ನದೆ ನೋಡ್ತಿದ್ರು. ಇದೆಲ್ಲ ನಡೆದದ್ದು ರೋಗದಿಂದ ಹಾಸಿಗೇಲಿ ಬಿದ್ದಿದ್ದ ಅವನ ತಾಯಿ ಎದುರಿಗೇ ಮತ್ತೆ! ಅವರಿಬ್ಬರ ಹೊಡೆದಾಟಾನ್ನ ಒಂದಿಷ್ಟು ಜನ ಹೇಗೊ ನಿಲ್ಲಿಸಿದ್ರು.

ಅದು ಮುಗೀತು ಅನ್ನೋವಷ್ಟು ಹೊತ್ತಿಗೆ ಮತ್ತೆ ಇನ್ನೊಂದು ಜಗಳ ಶುರುವಾಗೇ ಹೋಯ್ತು! ಈ ಸಲ ತಾಯಿ-ಮಗನ ನಡುವೆ!”

ಆ ಭಯಾನಕ ಘಟನೆಯ ನಂತರ ಇಸಾಮ ಬೀದಿಯಲ್ಲಿ ಓಡಾಡುವ ಹೆಂಗಸರತ್ತ ದಿಗಿಲುತುಂಬಿದ ಕಣ್ಣುಗಳಿಂದ ನೋಡತೊಡಗಿದ, ಆಗೆಲ್ಲ ಆತನ ಹೃದಯ ಭಾವಾತಿರೇಕದಿಂದ ನೋಯುತ್ತಿತ್ತು, ಸಂಕಟಪಡುತ್ತಿತ್ತು. ಹಾಗೆಯೇ, ಹೊಟ್ಟೆ ಹಸಿವೆಯಿಂದ. ಈ ಎಲ್ಲ ಅವಮಾನ ಅಸಹನೆಯ ಬೆಂಕಿಯನು ಆತ ತನ್ನ ತಾಯಿಯ ಮೇಲೆ ಕಾರಿಕೊಳ್ಳತೊಡಗಿದ. ಆ ಮುದಿತಾಯಿಗೆ ತನ್ನ ಮೇಲಿದ್ದ ಪ್ರೀತಿಯನ್ನೂ ಆತ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

ಮಗನ ಒಳತಿಗಾಗಿ ಕೊರಗುವ ಮುದಿ ಕರುಳು, ಮಗ ಹಾದಿಗೆ ಹತ್ತಿ, ಕೆಲಸವೊಂದನ್ನು ಹುಡುಕಿ ನೆಮ್ಮದಿಯಾಗಿರಲಿ, ಎಂದು ಬಯಸುತ್ತಿತ್ತು, ಹಾಗವಳು ಉಪದೇಶ ನೀಡಿದಾಗ ಇಸಾಮ್ ಅವಳ ಮೇಲೆ ಹರಿಹಾಯುತ್ತಿದ್ದ:

“ನೀನು ಯಾವಾಗ ಸತ್ತು ಮಣ್ಣು ಸೇರತೀ ಅದನ್ನ ಬೊಗಳು!”

ವಿಷಾದದಿಂದ ತಾಯಿ ಅನ್ನುತ್ತಿದ್ದಳು: “ದೇವರು ನಿನ್ನನ್ನು ಚಲೋ ಇಡಲಿ ಮಗೂ, ನಾನು ಸತ್ತಮೇಲೆ ಬರೋ ಅಲ್ಪಸ್ವಲ್ಪ ಪಿಂಚಣಿನೂ ನಿಂತು ಹೋಗ್ತದಲ್ಲೋ, ಹೊಟ್ಟೆಗೇನು ಮಾಡ್ತೀಯೋ?”

”ಈ ಮನೇನ ಮಾರಿ ಬಿಸಾಕತೀನಿ!”

“ಈ ಹಾಳು ಮನೆ ಯಾರು ಖರೀದಿ ಮಾಡತಾರೋ? ಐದು ನೂರು ರೂಪಾಯಿನೂ ಸಿಗಂಗಿಲ್ಲ ನಿನಗೆ. ಎರಡು ತಿಂಗಳಲ್ಲಿ ಆ ದುಡ್ಡು ತಿಂದು ತೇಗಿ ಮುಗಿಸಿದ ಮೇಲೆ ಭಿಕ್ಷೆ ಬೇಡಬೇಕಾಗುತ್ತೆ ನೀನು.”

ಆದರೇನು, ಆತನ ವರ್ತನೆ ಬದಲಾಗಿ ಮುದುಕಿಯೊಂದಿಗೆ ಯಾವತ್ತೂ ಅಂತಃಕರಣ ತುಂಬಿದ ಮಾತಾಡುತ್ತಿರಲಿಲ್ಲ. ಗೆಳೆಯರೆಲ್ಲ ಕಿವಿಮಾತು ಹೇಳುತ್ತಿದ್ದರು:
“ಲೇ, ಇಸ್ಯಾ, ನಿನ್ನನ್ನು ತಿದ್ದಿಕೊ, ನಿನ್ನ ಚುಚ್ಚುಮಾತಿಂದ ಚಿಂತೇಲಿ ಬೆಂದುಹೋಗೋ ಹಾಂಗ ಮಾಡಿ ಆ ಮುದಿ ಜೀವಾನ್ನ ಹಿಂಡಬೇಡ. ಆಮ್ಯಾಲ ದಿಕ್ಕಿಲ್ಲದೆ ಭಿಕ್ಷಾ ಬೇಡಬೇಕಾಗತೈತಿ, ನೆನಪಿಟಗೋ”.

ಜತೆಗೆ ದೇವರ ಭಯ ಹಾಕಿದರು. ಹೀಗಾದರೆ ನರಕದಲ್ಲಿ ಬಿದ್ದು ಸಾಯ್ತಿಯ ಅಂದರು. ಆದರೆ ಯಾವ ಆಶಾವಾದ, ಆರ್ದ್ರ ಭಾವನೆಗಳಿಲ್ಲದ ಆತನ ಮನಸ್ಸಿಗೆ ಈ ಮಾತು ಎಲ್ಲಿ ನಾಟೀತು? ಬೇರು ಕಿತ್ತು ಬರಡಾಗಿದ್ದ ಮನಸ್ಸಿನಲ್ಲಿ ಉಳಿದ ಎರಡೇ ಭಾವನೆಗಳೆಂದರೆ: ಕಾಮ, ಹಸಿವು, ಅಷ್ಟೇ. ಒಳ್ಳೆಯ ಮಾತುಗಳನ್ನೆಲ್ಲ ಹೀಯಾಳಿಸಿ ಒಗೆದು, ಕಹಿಯಾಗುತ್ತಲೇ ನಡೆದ. ಯುದ್ಧ, ರಾಜಕೀಯ ಅರಾಜಕತೆ, ಅಣಕ, ಇನ್ನಷ್ಟು ವಿನಾಶ, ಹತಾಶೆ. ತಾಯಿ ಇವನ ಆಶೆಯನ್ನೇ ಬಿಟ್ಟು ಹೆಚ್ಚು ಹೆಚ್ಚು ದೇವರ ಧ್ಯಾನದಲ್ಲಿ ತನ್ಮಯಳಾದಳು. ತೀರ ಹತಾಶಳಾಗಿ ಸೋತಾಗ ಕ್ಷೀಣವಾಗಿ ಕೇಳುತ್ತಿದ್ದಳು:

“ನನ್ನ ಪ್ರೀತಿ- ಅಂತಃಕರಣವನ್ನು ಯಾಕೆ ಈ ಥರದ ಕ್ರೌರ್ಯದ ಮೂಲಕ ವಾಪಸ್ಸು ಕೊಡ್ತೀಯ?”

ಆತ ಮತ್ತೆ ಲೇವಡಿಯಾಡುತ್ತಿದ್ದ:

“ಈ ಜಗತ್ತಿನ ಎಲ್ಲ ಅನಿಷ್ಟಕ್ಕೆ ಮೂಲ ಕಾರಣ ಎಷ್ಟೋ ಜನ ಮುದಿಗೂಬೆಗಳಾದ್ರೂ, ಜಗತ್ತಿಗೆ ಅವರ ಅಗತ್ಯ ಇಲ್ಲದಿದ್ರೂಸಾಯದೇ ಇರೋದು!”

ಬದುಕುಳಿವ ದಿನಗಳೇ ಕಠಿಣವಾದವು. ಇದಕ್ಕಿಂತ ದುರ್ದಿನಗಳು ಬರುವುದುಂಟೆ? ಒಂದುದಿನ ಆತ ತಾಯಿಗೆ ಹೇಳಿದ:

“ಮನೆಯ ಒಂದು ಕೋಣೆಯನ್ನು ಬಾಡಿಗೆ ಕೊಡೋಣ. ಇನ್ನು ಮೇಲೆ

ನಾನು ನಿನ್ನ ಕೋಣೆಯಲ್ಲೇ ಮಲಗ್ತೀನಿ”.

“ಮನೆಯಲ್ಲಿ ಅಪರಿಚಿತರನ್ನು ತಂದು ಸೇರಸತಿಯೇನೊ?” ಎಂದು ತಾಯಿ ಅಳತೊಡಗಿದಳು.

“ಹಸಿವೆಯಿಂದ ಸಾಯೋದಕ್ಕಿಂತ ಇದು ವಾಸಿ ಅಂತ ತಿಳ್ಕೋ.”

ಮನೆಯ ವಿಶಾಲ ಅಂಗಳ ನೋಡುತ್ತ ಹೇಳಿದ:

“ಆಟದ ಮೈದಾನದ ಹಾಗಿರೋ ಈ ನೆಲಾ ಇದ್ರೂ ಒಂದೇ, ಇಲ್ಲದಿದ್ರೂ ಒಂದೇ, ಬರೀ ಮಣ್ಣು!’

ಇದಾದಮೇಲೆ ದಲ್ಲಾಳಿಯೊಬ್ಬ ಹಳ್ಳಿಯ ವಿದ್ಯಾರ್ಥಿಯನ್ನು ಕರೆತಂದ. ಕೋಣೆಗೆ ನೂರು ರೂಪಾಯಿ ಬಾಡಿಗೆ ಗೊತ್ತಾಯಿತು. ಗೆಳೆಯರೆಲ್ಲ –

“ಲೇ, ಇಸಾಮ, ನಿನ್ನ ಮನೆ ಒಂದು ಛತ್ರ ಆತ್ಯಲೋ. ಆ ಮನೆಗೆ ನಿನ್ನ ಅಮ್ಮನೇ ಬಾಡಿಗೆ ದೊರೆಸಾನಿ ಆಗ್ಯಾಳ?”, ಗೇಲಿ ಮಾಡಿದರೂ ಆತ ಜಗ್ಗುವವನಲ್ಲ.

“ನಮ್ಮ ಮನೆ ಐತಿ. ಉಳಿದ ವಿಚಾರ ನಿನಗ್ಯಾಕ ಹರಕೊಳ್ಳಲಿಕ್ಕೆ?” ಅಂದ.

ಈಗ ಗಾಳಿಯಲ್ಲಿ ಸವಾರಿಮಾಡುತ್ತ ಸುಖಿಸುವುದೇ ಅವನ ವೃತ್ತಿಯಾಯಿತು. ಚಹಾ ಅಂಗಡಿಯಲ್ಲಿ ಹೊತ್ತಿನ ಪರಿವೆಯಿಲ್ಲದೆ ಕುಕ್ಕರಿಸಿದರೆ ಮನೆಯ ಚಿಂತೆಯೂ ಸುಳಿಯುತ್ತಿರಲಿಲ್ಲ. ಅವನ ಚಿಂತೆಯೆಂದರೆ: ವಯಸ್ಸು ನಲ್ವತ್ತಾಗುತ್ತಿದೆ, ಈವರೆಗೂ ಪ್ರಸ್ತದೂಟ ಉಣಲಿಲ್ಲ. ಒಂದು ಚೆಂದದ ಹೆಣ್ಣಿನ ಜತೆ ಸುಖಿಸಲಿಲ್ಲ, ಎಂಬುದು.

ಸ್ವಾತಂತ್ರ್ಯ ಚಳವಳಿಯ ಬಿಸಿ ಕೂಡ ಅವನನ್ನು ತಟ್ಟಲಿಲ್ಲ. ಚಳವಳಿಯ ಬಗ್ಗೆ ಅವನ ಖಾರವಾದ ಪ್ರತಿಕ್ರಿಯೆ:

“ಈ ದಂಗೆ ಬಹುಶಃ ನಮ್ಮಂಥ ಶ್ರೀಮಂತ ಜಮೀನ್ದಾರರ ವಿರುದ್ಧ ಇರಬೇಕು!”

ಬದುಕಲ್ಲಿ ಒಂದುದಿನವೂ ವೃತ್ತಪತ್ರಿಕೆ ತಿರುವಿ ಹಾಕಿದವನಲ್ಲ. ಅವನ ಸಂಗ್ರಹದ ಮೂಲವೆಂದರೆ ಗುಂಪು ಹರಟೆಗಳು. ಹೀಗೇ ಇರುತ್ತ ವಯಸ್ಸಾಗಿ ಆತ ಐವತ್ತನ್ನೂ ದಾಟಿದ. ಅವನ ತಾಯಿ ಅವನಿಗಿಂತ ಮುದಿಯಾಗಿ, ಕೃಶಳಾಗಿ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡಳು. ಹಾಸಿಗೆ ಹಿಡಿದಳು. ಪರಿಚಿತ ವೈದ್ಯ ತಪಾಸಣೆ ನಡೆಸಿ ಆಕೆಗಿರುವ ಹೃದಯದ ಕಾಯಿಲೆಯನ್ನು ವಿವರಿಸಿದ. ಔಷಧ- ವಿಶ್ರಾಂತಿಯನ್ನು ಸಲಹೆ ಮಾಡಿದ. ಈ ಬದುಕಿನಲ್ಲಿ ಆ ಮುದಿಜೀವಕ್ಕೆ ವಿಶ್ರಾಂತಿ ಅನ್ನುವುದು ಸಾಧ್ಯವಿರಲಿಲ್ಲ. ಔಷಧಿ ಕೈಗೆಟುಕುವ ಹಾಗಿರಲಿಲ್ಲ. ಈ ನಡುವೆ ತಾಯಿ ಸತ್ತಮೇಲೆ ನಿವೃತ್ತಿ ವೇತನ ಗಳಿಸುವುದು ಹೇಗೆಂದು ಇಸಾಮ ಯೋಜನೆ ಹಾಕತೊಡಗಿದ. ಗಳಿಗೆ ಗಳಿಗೆಗೂ ಮುದುಕಿ ಸಾವಿನತ್ತ ತೆವಳತೊಡಗಿದಳು. ಒಂದು ಮುಂಜಾನೆ ಎದ್ದು ನೋಡಿದಾಗ ಆಕೆ ಸೆಟೆದು ತಣ್ಣಗಾಗಿದ್ದಳು. ಇಸಾಮ್, ತಾಯಿಯ ಮುಖವನ್ನು ಬಟ್ಟೆಯಿಂದ ಮುಚ್ಚುವ ಮೊದಲು ಅವಳ ಮುಖವನ್ನೇ ಬಹಳ ಹೊತ್ತು ದಿಟ್ಟಿಸಿದ. ಕಳೆದುಹೋದ ಮಸುಕು ನೆನಪುಗಳನ್ನು ಮೆಲುಕು ಹಾಕುವಂತಿದ್ದನವ. ಎಂದಿನ ಕಹಿ ಬಿಟ್ಟ ಅವನಲ್ಲಿ ಆ ಬೆಳಗು ಮನೆಮಾಡಿದ್ದು ಒಂದುರೀತಿಯ ವಿಷಾದ, ಒಂಟಿತನ.

ತಕ್ಷಣವೇ ಕಾರಪ್ರವೃತ್ತನಾದ ಇಸಾಮ್ ಆಸ್ತಿ ವಿಲೇವಾರಿಯ ದಳ್ಳಾಳಿ, ಶ್ರೀಮಂತ ಗೆಳೆಯನ ಬಳಿ ಹೋದ. ಗೆಳೆಯ ಮೃತಳ ಅಂತ್ಯಕ್ರಿಯೆಯ ಏರ್ಪಾಟು ಮಾಡಿ ಇಸಾಮನಿಗೆ ಹಿತನುಡಿದ:

“ಮನೆಯನ್ನು ಹೇಳದೆ ಕೇಳದೆ ಮಾರಿ ಬಿಡಬ್ಯಾಡಪ ಮಾರಾಯ! ಆಮೇಲೆ ಬೀದಿಯಲ್ಲಿ ಬೀಳತೀ ನೋಡು.”

ಇಸಾಮ್- ಅಲ್ – ಬಖಿಗೆ ಚಿಂತೆಗಿಟ್ಟಿತು. ಎಷ್ಟು ದಿನ ಅವರಿವರಿಗೆ ಟೋಪಿ ಹಾಕುವುದು, ಕೋಣೆ ಬಾಡಿಗೆ ಕೊಟ್ಟು ಹೊಟ್ಟೆ ಹೊರೆಯುವುದು? ಗೆಳೆಯರ ಔದಾರ್ಯಕ್ಕೂ ಮಿತಿ ಇದೆಯಲ್ಲವೇ? ಈಗೊಂದು ಹೊಸ ಉಪಾಯವನ್ನಾತ ಹುಡುಕಿದ. ನಗರದ ಹೊರವಲಯದಲ್ಲಿ ಭಿಕ್ಷೆ ಬೇಡಲು ಶುರುಮಾಡಿದ. ಈ ದಂಧೆ ಅಷ್ಟೇನೂ ನಿರಾಶಾದಾಯಕವಾಗಿರಲಿಲ್ಲ. ದಿನಗಳು ಉರುಳುತ್ತಿದ್ದವು. ಒಬ್ಬ ರಾಜಕೀಯ ನಾಯಕ ಸತ್ತು ಇನ್ನೊಬ್ಬ ಅಧಿಕಾರದ ಗದ್ದುಗೆ ಏರುತ್ತಿದ್ದ. ಹೀಗಿರುವಾಗಲೇ, ‘ಆರ್ಥಿಕ ಉದಾರೀಕರಣ’, ‘ವಿದೇಶಿ ಹೂಡಿಕೆಗೆ ಕೆಂಪು ಹಾಸಿನ ಸುಸ್ವಾಗತ’ ಎನ್ನುವ ಸರ್ಕಾರಿ ನೀತಿ ಹುಟ್ಟಿಕೊಂಡವು.

ಆಗ ಇಸಾಮನಿಗೆ ಎಪ್ಪತ್ತು ವರ್ಷ, ಹತಾಶೆ, ರೇಜಿಗೆಯಿಂದಾಗಿ ಬದುಕಿ ಅರ್ಥಹೀನ ಎನ್ನುವ ನಿರ್ಧಾರಕ್ಕೆ ಬಂದಿದ್ದ ವಯೋವೃದ್ಧ. ದಿನಬಳಕೆಯ ವಸ್ತುಗಳು ಆಕಾಶಕ್ಕೇರಿ ಬದುಕು ಕಠಿಣವಾಗಿತ್ತು. ಇದೀಗ ಭಿಕ್ಷೆಯ ದುಡ್ಡೂ ಸಾಲದಾಗುತ್ತಿತ್ತು. ಗೆಳೆಯರ ಸಹಾಯಕ್ಕೆ ತೆರೆಬಿತ್ತು. ಅವನ ಸಮವಯಸ್ಕರು ಈ ಜಗತ್ತಿಗೆ ವಿದಾಯ ಹೇಳಿದ್ದರು ಅಥವ ನಿವೃತ್ತರಾಗಿ ವೃದ್ಧಾಪ್ಯ ಜೀವನ ಸವೆಸುತ್ತಿದ್ದರು. ಇಸಾಮ್ ನಿರ್ಗತಿಕತನದ ಪಾತಾಳಮುಟ್ಟಿದ್ದ ಅಸಹಾಯಕ ಕ್ಷುದ್ರ ಮುದುಕನಾಗಿದ್ದ!

ಇಂಥ ಒಂದು ದಿನ, ದಳ್ಳಾಳಿಯೊಬ್ಬ ದೇವತೆಯ ಹಾಗೆ ರೆಕ್ಕೆಪುಕ್ಕ ಹಚ್ಚಿಕೊಂಡು ಸ್ವರ್ಗದಿಂದೆಂಬಂತೆ ಇವನ ಮುಂದೆ ಇಳಿದಾಗ ಈ ಮುದುಕನ ಬದುಕನ್ನು ತುಂಬಿದ್ದ ಕತ್ತಲು ತಂತಾನೆ ಮಾಯವಾಯಿತು! ಆಸ್ತಿ ವಿಲೇವಾರಿಯ ಗೆಳೆಯ ಹಾಗು ಪರಿಚಿತ ವಕೀಲರೆದುರು ವ್ಯವಹಾರ ಕುದುರಿ ಭಾರೀ ಮೊತ್ತವನ್ನು ಇಸಾಮಿಯ ಹೆಸರಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಡಲಾಯಿತು.
ಆನಂತರ ಮೂವರೂ ಒಂದು ಸೂರು ಹಾರಿದ ಚಹಾ ದುಕಾನಿನಲ್ಲಿ ಚಹಾ ಹೀರಲು ಕೂತರು. ಕೋಟ್ಯಧೀಶನೊಬ್ಬ ಕೂರಲು ಸ್ವಲ್ಪವೂ ಯೋಗ್ಯತೆಯಿಲ್ಲದೆ ಚಹದಂಗಡಿ ನಾಚಿಕೆಯಿಂದ ತಲೆತಗ್ಗಿಸಿದಂತಿತ್ತು. ಇಸಾಮ್- ಅಲ್- ಬಖಿ ಸುದೀರ್ಘವಾದ ತೃಪ್ತಿಯ ನಿಟ್ಟುಸಿರುಬಿಟ್ಟ. ಆ ಉಸಿರಿಗೆ ಯಾವ ಶಬ್ದವೂ ಇರಲಿಲ್ಲ. ಜೀವನದಲ್ಲಿ ಮೊದಲಬಾರಿಗೆ ಅವನು ಸಂತೃಪ್ತನಾಗಿದ್ದ. ಆದರೂ ಏನೋ ಕಳೆದುಕೊಂಡವನಂತೆ ಗೆಳೆಯರಿಗೆ ಹೇಳಿದ: ”ನೀವಿಬ್ಬರೂ ನನ್ನನ್ನು ಬಿಟ್ಟು ಹೋಗಬೇಡಿ!”

ವಕೀಲ ಗೆಳೆಯ ನಕ್ಕು ಹೇಳಿದ: ”ಇಂದಿನಿಂದ ನಿನಗೆ ಯಾರ ಅಗತ್ಯವೂ ಇಲ್ಲ. ಇನ್ನೊಬ್ಬ ಅಂದ: “ಮೊದಲೇ ಎಬಡ. ಹೆಜ್ಜೆ ಹೆಜ್ಜೆಗೆ ಸಲಹೆ ನೀಡಲು ಯಾರಾದರೂ ಬೇಕೆ ಬೇಕು!
ಇಸಾಮ್ ಅತ್ಯಂತ ವಿನಯದಿಂದ ನುಡಿದ-

“ನನ್ನ ಬದುಕಲ್ಲಿ ನಿಮ್ಮಿಬ್ಬರಿಗಿಂತ ಪರಿಚಿತರು ಯಾರಿದ್ದಾರೆ?”

ಗೆಳೆಯ ಹೇಳಿದ, “ಎಲ್ಲಕ್ಕಿಂತ ಮಹತ್ವದೆಂದರೆ ಸುಗಂಧದ್ರವ್ಯದ ಸ್ಥಾನ. ನಿನ್ನ ಮೈ ಮೇಲೆ ವರ್ಷಗಳಿಂದ ಕುಳಿತಿರೊ ಕಸ- ಗಲೀಜು ಹೋಗಿ, ನೀನು ನೀನಾಗಬೇಕು.”
“ಆಮೇಲೆ ಬ್ಯಾಂಕಿನವರು ನನ್ನನ್ನು ಗುರುತೇ ಹಿಡಿಯದಿದ್ದರೆ ಅನ್ನೋ ಭಯ ನನಗೆ!”, ಇಸಾಮನ ಆತಂಕದ ನುಡಿಗಳು.

“ಕೂದಲು ನೀಟಾಗಿ ಹೆರೆದುಕೊಂಡು, ಒಂದಿಷ್ಟು ಹೊಸಬಟ್ಟೆ ತೊಟ್ಟು ಯಾವುದಾದರೂ ದೊಡ್ಡ ಹೊಟೇಲಿನಲ್ಲಿ ಕೋಣೆ ಹಿಡಿದರೆ ಛಲೋ ಆದೀತು. ಆಗ ಯಾರಿಗೂ ಅನುಮಾನ ಬರಲಾರದು.”

”ನೀನು ಇಷ್ಟಪಟ್ಟರೆ”, ವಕೀಲ ಹೇಳಿದ- “ನಿನಗಲ್ಲಿ ಕೈಗೆ ಕಾಲಿಗೆ ಆಳು- ಕಾಳು ಸಿಗುತ್ತಾರೆ”.

“ಒಂದು ಮನೆಯನ್ನೇ ಖರೀದಿಸಿದರೆ ಹೇಂಗೆ?”, ಇನ್ನೊಬ್ಬ ಗೆಳೆಯನ ಸಲಹೆ.

ಇಸಾಮ್- ಅಲ್ – ಬಖಿ ತಕ್ಷಣ ಬಾಯಿಹಾಕಿ- “ಒಂದು ಹೆಣ್ಣಿಲ್ಲದೆ ಮನೆ, ಮನೆ ಅಂತ ಅನ್ನಿಸಿಕೊಳ್ಳೋದಿಲ್ವಲ್ಲ?” ತನ್ನ ಆಸೆಯನ್ನು ತೋಡಿಕೊಂಡ. ”ಹೆಣ್ಣು?” “ಯಾಕಾಗಬಾರದು? ಎಪ್ಪತ್ತರಲ್ಲಿ ಮದುವೆಯಾಗೋರಲ್ಲಿ ನಾನೇ ಮೊದಲನೆಯವನೂ ಅಲ್ಲ, ಕೊನೆಯವನೂ ಆಗಿರೋಲ್ಲ!” “ಒಳ್ಳೇ ಕಥೆಯಾಯ್ತಲ್ಲ ಮಾರಾಯ ಇವಂದು!” ಇಸಾಮ್, “ಮದುಮಗ ಕೋಟ್ಯಧೀಶ ಅನ್ನೋದನ್ನು ಮರೀಬೇಡ ನೀನು!” “ಇದೇನೊ ಬಲವಾದ ಕಾರಣವೇ ಆದ್ರೂ… ವಿವೇಚನೆ ಇಲ್ಲದವರಷ್ಟೇ…” ವಕೀಲ ನಗುತ್ತ ನುಡಿದ. “ವಿವೇಚನೆ ಇದೆಲ್ಲಾ ನನಗ್ಯಾಕೆ? ಕೊನೆಗೆ ಉಳಿಯೋದು ದುಡ್ಡು ಮಾತ್ರ.” ತಿರಸ್ಕಾರದಿಂದ ಹೇಳಿದ ಇಸಾಮ್.

”ತಪ್ಪು ಮಾರಾಯ. ಹಾಗಾದ್ರೆ ಮತ್ತೆ ನೀನು ಭಿಕ್ಷೆ ಬೇಡೋ ದಿನ ದೂರವಿಲ್ಲ ಅನ್ನಿಸುತ್ತೆ”, ಗೆಳೆಯರು ಹಿತನುಡಿದರು. “ಆ ವಿಷಯಾನ ಸದ್ಯಕ್ಕೆ ಕೈ ಬಿಡೋಣ.” ವಕೀಲ ಹೇಳಿದ.

“ಹೆಣ್ಣಿನ ವಿಷಯಾನ ಹಾಗೆ ಕೈ ಬಿಡೋಕೆ ಆಗೋಲ್ಲ. ಹೊಸಬಟ್ಟೆಗಿಂತ ಹೆಣ್ಣಿನ ಪ್ರಶ್ನೆ ಮುಖ್ಯ”, ಇಸಾಮ್‌ನದು ನೇರನುಡಿ. ” ಅದಕ್ಕೆ ಬೇರೆ ಮಾರ್ಗಗಳಿವೆ, ಸಂಗೀತ, ನೃತ್ಯ, ಪಾನಗೋಷ್ಠಿ…’ “ನಿಮ್ಮಿಬ್ಬರ ಅಗತ್ಯ ಇರೋದು ಇಂಥಲ್ಲಿ ಈ ವಿಷಯದಲ್ಲಿ ನೀವೇ ಮುನ್ನಡೆಸಬೇಕು.”ನಾವು ಆ ಥರದ ಜೀವನಕ್ಕೆ ವಿದಾಯ ಹೇಳಿ ಬಹಳ ವರ್ಷವಾದವು”, ಇಬ್ಬರೂ ಗೆಳೆಯರು ಹೇಳಿದರು.

“ಅಂಥ ಜಾಗಕ್ಕೆ ನಾನೊಬ್ಬನೆ ಹೋಗೋದು ಹೇಗೆ ಸಾಧ್ಯ?”

”ಹಣ ಜತೆಗಿರುವವನಿಗೆ ಯಾರ ಸಹಕಾರವೂ ಬೇಕಿಲ್ಲ”

“ನಾವು ಇನ್ನೊಮ್ಮೆ ಕೂತು ನಿಧಾನಕ್ಕೆ ಮಾತಾಡುವ, ಭವಿಷ್ಯಕ್ಕೆ ಏನು ಮಾಡಬೇಕು ಎತ್ತ, ಅಂತೆಲ್ಲ, ಬುದ್ಧಿವಂತಿಕೆ ಅಂದರೆ ಬರೋ ಬಡ್ಡಿಯಲ್ಲಿ ಜೀವನ ಸಾಗಿಸಬೇಕು. ಅಸಲಿಗೆ ಮೋಸವಾಗಬಾರದು”

ಇಸಾಮ್, ಆ ಮಾತನ್ನು ವಿರೋಧಿಸುವಂತೆ ಹೇಳಿದ-

“ಆದ್ರೆ ನೆನಪಿಟ್ಟುಕೊ. ನನಗೀಗ ಎಪ್ಪತ್ತು ವರ್ಷ. ಉಳಿದ ಹಣ ಅನುಭವಿಸೋದಕ್ಕೆ ನನಗೆ ಯಾವ ವಾರಸುದಾರರೂ ಇಲ್ಲ”,

“ಆದರೂ ಕೂಡ…” “ಅದೆಲ್ಲ ಬಿಡಿ. ಸದ್ಯಕ್ಕೆ ನಾವು ಮಾಡಬೇಕೆಂದಿರುವುದು ಪ್ರಾರಂಭ’,” ವಕೀಲ ಹೇಳಿದ.

ಸಂಜೆ, ಹೊಸಬಟ್ಟೆ ತೊಟ್ಟು ಇಸಾಮ್ ತಯಾರಾದ, ಸುಗಂಧ ದ್ರವ್ಯದ ಸ್ನಾನ ಮೈಮೇಲಿನ ಕೊಳೆ ಮಾತ್ರ ತೊಳೆದಿತ್ತು: ವಯಸ್ಸಿನ ಅಸಹ್ಯ ಸುಕ್ಕುಗಳನ್ನಲ್ಲ.
ದೇವರು ಸ್ವರ್‍ಗದಿಂದಲೇ ಪ್ರೇಮಪತ್ರ ಕಳಿಸಬಹುದು ನೋಡು,” ವಕೀಲ ಗೇಲಿಮಾಡಿದ.

ಪರಿಚಿತರ ಮೂಲಕ ನಗರದ ಪ್ರತಿಷ್ಠಿತ ಹೋಟೆಲ್ಲಿನಲ್ಲಿ ಕೋಣೆ ದೊರಕಿತು. ಗೆಳೆಯರೊಂದಿಗೆ ಇಸಾಮ್‌ಗೆ ವಿಶೇಷ ಔತಣಕೂಟಕ್ಕೆ ಹೊಟೇಲ್ಲಿನವರು ಆಹ್ವಾನಿಸಿದರು. ಊಟಕ್ಕೆ ಮೊದಲು ಎರಡು ಗುಟುಕು ಮದಿರೆ, ಆಮೇಲೆ ಇರುಳ ಔತಣ. ಗೆಳೆಯರು ಊಟ ಮುಗಿಸಿ ಇಸಾಮನಿಗೆ ‘ಖುದಾಹಾಫಿಸ್’ ಹೇಳಿದರು. ಇಸಾಮ್ ಇಬ್ಬರನ್ನೂ ಕಳುಹಿಸಿ ಹೊಟೇಲ್ಲಿಗೆ ಮರಳಲಿಲ್ಲ. ಬದಲಿಗೆ ಟ್ಯಾಕ್ಸಿಯೊಂದನ್ನು ಹಿಡಿದು ‘ಇದೀಗ ಊಟಮಾಡಿದ್ದೇನೆ’, ಎಂಬುದನ್ನೇ ಮರೆತು ಕೋಳಿಮಾಂಸಕ್ಕೆ ಪ್ರಸಿದ್ಧವಾದ ಜಾಗಕ್ಕೆ ಟ್ಯಾಕ್ಸಿ ಓಡಿಸುವಂತೆ ಡೈವರ್‌ನಿಗೆ ಹೇಳಿದ. ಒಟ್ಟಿನಲ್ಲಿ ಹೊಟ್ಟೆಗೇನಾದರೂ ಹೆಟ್ಟಬೇಕೆಂಬುದೇ ಉದ್ದೇಶ. ಹೊಟ್ಟೆ ಬಿರಿಯುವವರೆಗೆ ತಿಂದ, ಕಂಠಪೂರ್ತಿ ಕುಡಿದ. ಅವನಿಗೆ ತಿನ್ನುವ- ಕುಡಿಯುವ ಭೂತ ಹೊಕ್ಕಂತಿತ್ತು.
ನಡುರಾತ್ರಿ ಹೊಟೇಲ್ಲಿಗೆ ಬಂದಾಗ ಗಾಳಿಯಲ್ಲಿ ತೇಲುತ್ತ – ಸ್ಥಿಮಿತವನ್ನೇ ಕಳೆದುಕೊಂಡಿದ್ದ. ಕೋಣೆ ಹೊಕ್ಕಾಗ ಅಸಹ್ಯ ಮೈತುಂಬಿ ತೆವಳುವಂತಾಯಿತು. ಬಟ್ಟೆ- ಬೂಟುಗಳ ಪರಿವೆಯಿಲ್ಲದೆ ದೀಪವನ್ನೂ ಆರಿಸದೆ ಹಾಸಿಗೆಯಲ್ಲಿ ಬಿದ್ದುಕೊಂಡ.

ಇಸಾಮನ ಹೊಟ್ಟೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿರುವುದೇನು? ಉಸಿರು ನಿಲ್ಲುವಂತೆ ಕತ್ತು ಮುರಿಯುತ್ತಿರುವವರು ಯಾರು? ಎದ್ದೇಳದಂತೆ ಎದೆ ಗುದ್ದುತ್ತಿರುವವರು ಯಾರು? ಸಹಾಯಕ್ಕೆ ಕೂಗಬೇಕೆಂದುಕೊಂಡ. ಕರೆಗಂಟೆ ಒತ್ತಬೇಕೆಂದುಕೊಂಡ. ಫೋನಿಗೆ ಕೈ ಹಚ್ಚಬೇಕೆಂದುಕೊಂಡ. ಆದರೆ ಸ್ವಾಧೀನವನ್ನು ಕಳೆದುಕೊಂಡಿದ್ದ. ದೇಹ ಮರಗಟ್ಟಿ ದನಿ ಹೂತುಹೋಗಿತ್ತು. ಅಲ್ಲಿ, ಅಲ್ಲಿ ಸಹಾಯವಿದೆ, ತಲುಪುವುದು ಹೇಗೆ? ಎಲ್ಲ ಶಕ್ತಿ, ಸೈರ್ಯ, ಸಾಮರ್ಥ್ಯಗಳನ್ನು ಹತ್ತಿಕ್ಕಿ ಒಬ್ಬ ಮನುಷ್ಯನನ್ನು ಇಂಥ ಶೂನ್ಯ ಸ್ಥಿತಿಯಲ್ಲಿ ಬಂಧಿಸಿಡುವ ಬಗೆಗೆ ಏನೆನ್ನಬೇಕು? ಹೌದು, ಸಾವು. ಇದು ಸಾವೇ. ಯಾರು ತಡೆದರೂ, ಎಷ್ಟೇ ವಿರೋಧಿಸಿದರೂ ನಿಲ್ಲಿಸಲು ಸಾಧ್ಯವಿಲ್ಲ.

ಇಸಾಮ್ ಎಚ್ಚರತಪ್ಪಿದ ಸ್ಥಿತಿಯಲ್ಲಿಯೇ ಮ್ಯಾನೇಜರ್ ನನ್ನು, ತನ್ನಿಬ್ಬರು ಗೆಳೆಯರನ್ನು, ಅದೃಷ್ಟ, ಕನಸಿನ ಕನ್ನೆಯರು, ಕಾಮನೆ, ಕನಸುಗಳು ಎಲ್ಲವನ್ನೂ ಕೂಗಿ ಕರೆದ. ಮಾರುತ್ತರ ಬರಲಿಲ್ಲ. ಹಾಗಿದ್ದರೆ, ಈ ಅದ್ಭುತಮಾಯೆ ಜರುಗಿದ್ದಾದರೂ ಯಾಕೆ? ಯಾವ ರೀತಿಯ ಅರ್ಥ, ತಾತ್ಪರ್ಯವೂ ಇಲ್ಲವಲ್ಲ!

ಓಹ್‌! ದೇವರೇ!


  • ಕೇಶವ ಮಳಗಿ  (ಖ್ಯಾತ ಕತೆಗಾರರು,ಅನುವಾದಕರು ,ಲೇಖಕರು, ಕವಿಗಳು), ಬೆಂಗಳೂರು

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW