ಜನವಾದಿ ಮಹಿಳಾ ಸಂಘಟನೆಯ ‘ಗೀತಕ್ಕ’ ಎಂದೇ ಹೆಸರಾದ ಮತ್ತು ಎಂ. ಎಲ್. ಎ. ಶ್ರೀರಾಮರೆಡ್ಡಿ ಮಾನಸ ಪುತ್ರಿ ಎಂತಲೂ ಕರೆಯಲಾಗುವ ವಿ. ಗೀತಾ ಅಂದಿನ ಸಮಾರಂಭದಲ್ಲಿ ಮಾತಾಡಿದ ಭಾಷಣದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿ ಸೊಗಸಾದ ಸುದ್ದಿ ಮಾಡುತ್ತಲಿವೆ. ಗೀತಕ್ಕನ ಕುರಿತು ಖ್ಯಾತ ವಿಮರ್ಶಕ ಮಲ್ಲಿಕಾರ್ಜುನ ಕಡಕೋಳ ಅವರು ಬರೆದ ಲೇಖನವಿದು, ತಪ್ಪದೆ ಓದಿ…
ಅದು ಬೆಂಗಳೂರಿನ ಗಾಂಧಿಭವನದ ಎರಡನೇ ಮಹಡಿಯ ಮೈಲಾರ ಮಹಾದೇವ ಸಭಾಂಗಣ. ಸಭಾಂಗಣದ ತುಂಬೆಲ್ಲಾ ಕಿಕ್ಕಿರಿದ ಜನಸಂದಣಿ. ತಾಸೊಪ್ಪತ್ತು ತಡವಾಗಿಯೇ ಪುಸ್ತಕ ಬಿಡುಗಡೆ ಸಮಾರಂಭದ ಕಾರ್ಯಕ್ರಮ ಆರಂಭವಾಯಿತು. ಬೇರೊಂದು ಕಾರ್ಯಕ್ರಮ ಮುಗಿಸಿ ಪುಸ್ತಕ ಬಿಡುಗಡೆಗೆ ಬರಲು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರಿಗೆ ತಾಸು ಹೊತ್ತು ತಡವಾಯಿತು. ಅದಕ್ಕಾಗಿ ಅವರು ಕ್ಷಮೆಯಾಚಿಸಿದ್ದು ಅವರ ಸೌಜನ್ಯದ ಪ್ರತೀಕವಾಗಿತ್ತು. ಜನವಾದಿ ಮಹಿಳಾ ಸಂಘಟನೆಯ ‘ಗೀತಕ್ಕ’ ಎಂದೇ ಹೆಸರಾದ ಮತ್ತು ಎಂ. ಎಲ್. ಎ. ಶ್ರೀರಾಮರೆಡ್ಡಿ ಮಾನಸ ಪುತ್ರಿ ಎಂತಲೂ ಕರೆಯಲಾಗುವ ವಿ. ಗೀತಾ ಅಂದಿನ ಸಮಾರಂಭದಲ್ಲಿ ಮಾತಾಡಿದ ಭಾಷಣದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿ ಸೊಗಸಾದ ಸುದ್ದಿ ಮಾಡುತ್ತಲಿವೆ.
ಬಿ- ಟಿ.ವಿ. ಸುದ್ದಿ ಛಾನಲ್ಲಿನ ಪತ್ರಕರ್ತ ನವೀನ್ ಸೂರಿಂಜೆ ಸಂಪಾದಿಸಿದ “ಸದನದಲ್ಲಿ ಶ್ರೀರಾಮರೆಡ್ಡಿ” ಪುಸ್ತಕ ಬಿಡುಗಡೆ ಸಮಾರಂಭವದು. ಕೋಲಾರ ಜಿಲ್ಲೆಯ ಬಾಗೇಪಲ್ಲಿಯಿಂದ ಜಿ. ವಿ. ಶ್ರೀರಾಮರೆಡ್ಡಿ ಎರಡು ಅವಧಿಗೆ ಕಮ್ಯುನಿಸ್ಟ್ ಪಕ್ಷದ ಶಾಸಕರಾಗಿ ಜನಾನುರಾಗಿ ಆಗಿದ್ದವರು. ಅವರು ಸಾಯುವ ಮುನ್ನ ಕಮ್ಯುನಿಷ್ಟ್ ಪಕ್ಷ ತೊರೆದು ‘ಪ್ರಜಾ ಸಂಘರ್ಷ ಸಮಿತಿ’ ಎಂಬ ಜನಪರ ಸಂಘಟನೆ ಕಟ್ಟಿ ಕೊಂಡಿದ್ದರು. ಎರಡು ವರುಷಗಳ ಹಿಂದೆ ಕೊವಿಡ್ ದುರಿತಕಾಲದಲ್ಲಿ ಕೊರೊನಾ ಪೀಡಿತರಾಗಿ ಹೋರಾಟದಿಂದ ಬದುಕುಳಿದು, ಕೆಲಕಾಲದ ನಂತರ ಅವರು ತೀರಿಹೋದರು.
ಅವರ ಬದುಕು ಮತ್ತು ಸಾಧನೆ ಕುರಿತು ‘ಸದನದಲ್ಲಿ ಶ್ರೀರಾಮರೆಡ್ಡಿ’ ಪುಸ್ತಕ ಬಿಡುಗಡೆ ಸಮಾರಂಭ. ಅಂತೆಯೇ ಅವರ ಕಾಯಕ ಭೂಮಿಯ ಬಾಗೇಪಲ್ಲಿ, ಕೋಲಾರ, ಚಿಕ್ಕ ಬಳ್ಳಾಪುರದ ಹಲವಾರು ಹಳ್ಳಿಗಳಿಂದಲೂ ನೂರಾರು ಮಂದಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದರು. ಮಹಿಳೆಯರು ಸಹಿತ ಆಗಮಿಸಿದ್ದರು. ಅವರಲ್ಲಿ ಬಹುಪಾಲು ತೆಲುಗು ಮನೆಮಾತುಗಳ ಕನ್ನಡಿಗರು. ನಮ್ಮ ಗೀತಕ್ಕಳ ಮಾತು ಸಹಿತ ತೆಲುಗುಮಿಶ್ರ ಸ್ವರದ ಕೋಲಾರ ಕನ್ನಡ. ಅದು ಅಕ್ಷರಶಃ ಹಳ್ಳಿಗಾಡಿನ ಬಯಲು ಸೀಮೆಯ ಜವಾರಿ ಮಾಧುರ್ಯದ ಕನ್ನಡವೇ.
ಅಂದು ಗೀತಕ್ಕ ಬರೋಬ್ಬರಿ ಇಪ್ಪತ್ತೊಂದು ನಿಮಿಷಗಳಷ್ಟು ಕಾಲ ಮಾತಾಡಿದಳು. ಅದೆಷ್ಟು ಚೆಂದ ಮಾತಾಡಿದಳೆಂದರೆ ಅವಳಿಗೆ ಕೊಟ್ಟಿದ್ದು ಕೇವಲ ಆರೇಳು ನಿಮಿಷಗಳ ಅವಧಿ. ಆದರೆ ನಿಗದಿತ “ಸಮಯ ಮೀರಿದ ಚೀಟಿ” ಕೊಡಲು ಮುಂದಾಗಬೇಕಿದ್ದ ಕಾರ್ಯಕ್ರಮ ನಿರೂಪಕರೇ ಮೈ ಮರೆತು ಗೀತಕ್ಕಳ ದೇಶಿಯ ಮಾತು ಕೇಳುವಲ್ಲಿ ನಿರತರಾಗಿದ್ದರು. ಅಷ್ಟೇ ಯಾಕೆ ಖುದ್ದು ಸಿದ್ಧರಾಮಯ್ಯನವರೇ ಗೀತಕ್ಕ ಮಾತಾಡುವುದನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದರು. ಖರೇವಂದ್ರ ಗೀತಾಳ ಮಾತುಗಳಿಗೆ ಸಿದ್ಧರಾಮಯ್ಯ ಫಿದಾ ಆಗಿ ಹೋಗಿದ್ದರು. ಕಾರ್ಯಕ್ರಮ ಮುಗಿದು ಮನೆಗೆ ಹೋದ ಮೇಲೆಯೂ ಅವರಿಗೆ ಗೀತಕ್ಕಳ ಮಾತುಗಳ ಗುಂಗಿನಿಂದ ಹೊರಬರಲು ಸಾಧ್ಯವಾಗಲಿಲ್ಲವೇನೋ.
ಅಂತೆಯೇ ಸಿದ್ಧರಾಮಯ್ಯನವರು ವಕೀಲ ಅನಂತನಾಯಕ ಮೂಲಕ ಗೀತಕ್ಕಳ ಹೋರಾಟ, ಬದುಕು ಇತ್ಯಾದಿ ಕುರಿತು ಕೇಳಿ ತಿಳಿದು ಕೊಳ್ಳುತ್ತಾರೆಂದರೆ ಸುಮ್ಮನಲ್ಲ. ಹೌದು ಗೀತಕ್ಕಳ ಅವತ್ತಿನ ಮಾತುಗಳು ಅಷ್ಟೊಂದು ಪರಿಣಾಮಕಾರಿ ಆಗಿದ್ದವು. ಮಾತುಗಳಲ್ಲಿ ಯಾವುದೇ ನಂಜು ಇರಲಿಲ್ಲ. ಸ್ವಾರ್ಥ ರಾಜಕೀಯದ ಲವಲೇಶ ಹಂಬಲವೂ ಇರಲಿಲ್ಲ. ವೃತ್ತಿಪರ ರಾಜಕೀಯದ ಸೋಂಕು ಮೊದಲೇ ಇರಲಿಲ್ಲ. ಆದರೆ ಆಳದ ವಿಷಯಗಳ ದಿಕ್ಸೂಚಿಯ ಸರಳ ಸಂವೇದನೆಗಳಿಂದಾಗಿ ಅವು ಸಿದ್ಧರಾಮಯ್ಯನ ವಯಕ್ತಿಕ ಹೊಗಳಿಕೆ ಅನಿಸಲಿಲ್ಲ. ಅಷ್ಟಲ್ಲದೇ ಗೀತಾ ಅಪ್ಪಟ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತೆ. ಅಷ್ಟಕ್ಕೂ ಕಾಂಗ್ರೆಸ್ ಸಿದ್ಧರಾಮಯ್ಯನ ಹೊಗಳುವ ಹರಕತ್ತು ಕಮ್ಯುನಿಷ್ಟರಿಗಿರದು. ಅದಕ್ಕೆ ಮುನ್ನವೇ ಮಾತಾಡಿದ ಮೇಧಾವಿ ಕಾಂ. ಎ.ಜೆ.ಕೆ. ನಾಯರ್ ಅದನ್ನೆಲ್ಲ ತುಂಬಾ ಸ್ಪಷ್ಟವಾಗಿ ಹೇಳಿದ್ದರು.
ಅಷ್ಟಕ್ಕೂ ಗೀತಕ್ಕ ಮಾತು ಆರಂಭಿಸಿದ್ದು ತನ್ನ ವಿದ್ಯಾರ್ಥಿ ಜೀವನದ ದಿನಮಾನಗಳಿಂದ. ಸ್ಥಳೀಯ ಕಾಲೇಜುಗಳಲ್ಲಿ ಪಾಠ ಮಾಡಲು ಅಧ್ಯಾಪಕರ ನೇಮಕಾತಿ ಮಾಡಬೇಕೆಂದು ಆಗ್ರಹ. ಆ ಕಾಲದ ತನ್ನ ಹಿರಿಯ ಸಂಗಾತಿ ಗೌರಕ್ಕ ಮತ್ತಿತರೆ ಸಂಗಾತಿಗಳ ಜತೆ ಸೇರಿಕೊಂಡು ತೊಂಬತ್ತರ ದಶಕದ ಅಂದಿನ ವಿಧಾನ ಸಭೆ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ ಅವರನ್ನು ಶ್ರೀನಿವಾಸಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೂಡಿಹಾಕಿ ಬೀಗ ಹಾಕಿದ ಪ್ರಸಂಗದಿಂದ. ತದನಂತರ ಕೋಲಾರ ಜಿಲ್ಲೆಯ ನೀರಾವರಿಗೆ ಮಾತು ತಿರುಗಿದವು.
ಕರ್ನಾಟಕಕ್ಕೆ ಮೊಟ್ಟಮೊದಲ ಮುಖ್ಯಮಂತ್ರಿಯನ್ನು ಕೊಟ್ಟ ಕೋಲಾರದ ಕ್ಯಾಸಂಬಳ್ಳಿ ಸೇರಿದಂತೆ ಚಿತ್ರಾವತಿ, ವರ್ತಮಾನದ ಎತ್ತಿನಹೊಳೆ ನೀರಾವರಿವರೆಗೂ ಮಾತುಗಳು ರುಚಿ ರುಚಿಯಾಗಿ ಹರಿದು ಹೋದವು. ಹಾಗೆ ಹೋದಂತೆ ಪ್ರೇಕ್ಷಕರ ಚಪ್ಪಾಳೆಗಳ ಸುರಿಮಳೆ. ೨೦೦೮ ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದ ಘಟನೆಯೊಂದರ ಮೆಲಕು. ಕಾರವಾರದ ಸೋಂದ ಮಠದಿಂದ ವೈದಿಕ ಸ್ವಾಮಿ ಕೋಲಾರದ ಶಾಲೆಗಳಿಂದಲೇ ಭಗವದ್ಗೀತೆ ಮಂತ್ರಪಠಣಗಳನ್ನು ಶುರುವಿಟ್ಟುಕೊಂಡಿದ್ದರು. ತಾನು ಆಗ ಒಂದು ತಿಂಗಳ ಬಾಣಂತಿಯಾಗಿದ್ದುಕೊಂಡೇ ಗೀತಕ್ಕ ಆ ಪ್ರಸಂಗ ತಡೆಗಟ್ಟಿದ ವಿವರಗಳ ಪ್ರಸ್ತಾಪ ಪರಿಣಾಮಕಾರಿ. ಅಂದಹಾಗೆ ಗೀತಾ ಚಳವಳಿಯ ಸಂಗಾತಿಯಾಗಿದ್ದ ದಲಿತ ಯುವಕ ಮುರಳಿಕೃಷ್ಣನನ್ನು ಬಾಳಸಂಗಾತಿಯನ್ನಾಗಿ ಸ್ವೀಕರಿಸಿದ್ದು ಇವರಿಗೆ ಅನಿಕೇತನ ಎಂಬ ಪುಟ್ಟಮಗ ಇದ್ದಾನೆ.
ಅಂದು ಗೀತಕ್ಕ ಒಂದೊಂದೇ ಅನುಭವದ ಪ್ರಸಂಗಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಳು. ಒಂದೊಂದು ಎಳೆಯೂ ಬದುಕು ಮತ್ತು ಹೋರಾಟವೆಂಬ ಗಟ್ಟಿತನದ ಜಗಜಟ್ಟಿ ಎಳೆಗಳೇ. ಮನೆಗೆ ಬೀಗರು ಬಂದಾಗ ಇಲ್ಲವೇ ಯುಗಾದಿ ಮತ್ತಿತರೆ ಊರಹಬ್ಬಗಳಲ್ಲಿ ಮಾತ್ರ ಅನ್ನ ಉಣ್ಣುತ್ತಿದ್ದ ಸಂಭ್ರಮ. ಬಾಕಿ ದಿನಗಳಲ್ಲಿ ರಾಗಿ ಮುದ್ದೆಯದೇ ನಿರಂತರ ಅವತಾರ. ಅಂತಹ ಬಡತನದ ಒಡಲುಗಳಿಗೆ ಸಿದ್ರಾಮಣ್ಣನ ‘ಅನ್ನಭಾಗ್ಯದ’ ಕುರಿತಾದ ಮಾತುಗಳು ಸಹಜವಾಗಿಯೇ ಪ್ರಖರ ಪರಿಣಾಮ ಬೀರಿದವು. ಅಷ್ಟಕ್ಕೇ ಮುಗೀಲಿಲ್ಲ. ಕೋಮುವಾದ, ಗೋವುಗಳ ಸಾಕಣೆ, ಬ್ರಾಹ್ಮಣ್ಯ ಇತ್ಯಾದಿಗಳ ಕುರಿತು ಕರಾರುವಾಕ್ಕಾದ ಪ್ರಸ್ತಾಪಗಳು. ಗೀತಕ್ಕಳ ಎಲ್ಲಾ ಮಾತುಗಳು ಅನುಭವಜನ್ಯ ಹೋರಾಟದ ಕಿಡಿನುಡಿಗಳು. ಒಡಲಾಳದ ಅಂತಃಕರಣ ಉಕ್ಕಿಸುವ ಮಾತುಗಳು. ಅವಕ್ಕೆ ಜನಶಕ್ತಿಭರಿತ ಚಳವಳಿಯ ಕಸುವು. ಅದೆಲ್ಲ ಕಲಿಸಿದ್ದು. ಜಿ. ವಿ. ಎಸ್. ಎಂಬ ಸಿ .ಪಿ. ಎಂ. ಪಾಠಶಾಲೆ.
ಇವತ್ತಿಗೂ ವಿ. ಗೀತಾ ಜನವಾದಿ ಮಹಿಳಾ ಸಂಘಟನೆಯ ಪ್ರಮುಖರಲ್ಲಿ ಒಬ್ಬಳು. ತಾಲ್ಲೂಕು, ಜಿಲ್ಲೆಯಿಂದ ಹಂತ ಹಂತವಾಗಿ ಪ್ರಗತಿಪರ ಆಶಯಗಳ ಪ್ರಗತಿಯ ಮೆಟ್ಟಿಲುಗಳನ್ನು ಏರಿ ರಾಜ್ಯಮಟ್ಟದವರೆಗೆ ಬೆಳೆಯುತ್ತಲೇ ನಡೆದವಳು. ಹೋರಾಟದ ಬದುಕಿನ ಅನಂತ ಕವಲುಗಳಲ್ಲಿ ಸಿಲುಕಿ ನಲುಗಿದವಳು. ಆದರೆ ಚಳವಳಿಯ ಕಿಚ್ಚು ಮತ್ತೆ ಮತ್ತೆ ಆಕೆಯನ್ನು ಧೀರೊದ್ಧಾತ್ತವಾಗಿ ಎದ್ದು ನಿಲ್ಲಿಸಿದೆ. ಅಂತೆಯೇ ಅವಳು ಅಸಲೀ ಕಮ್ಯುನಿಸ್ಟ್. ಅದಕ್ಕಾಗಿ ಎರಡು ಅವಧಿಗೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮಟ್ಟದ ಅಧ್ಯಕ್ಷೆ ಪಟ್ಟ ಗೀತಕ್ಕಗೆ ದಕ್ಕಿತ್ತು.
ಗೀತಕ್ಕಳ ಜವಾರಿ ಭಾಷೆಯ ಬನಿಯೇ ಅತ್ಯದ್ಭುತ. ಸಿದ್ಧರಾಮಯ್ಯನವರನ್ನು ಸಿದ್ರಾಮಣ್ಣ ಎಂತಲೂ ಶ್ರೀರಾಮರೆಡ್ಡಿಯನ್ನು ಶೀರಾಮ್ರಡ್ಡಿ ಅಂತಲೂ ಅಭಿವೃದ್ಧಿಯನ್ನು ಅಭ್ರುದ್ಧೀ ಅಂತಲೂ ವಿಶೇಷವಾದ ಪ್ರಸಂಗಗಳಿಗೆ ಯಿಂಕ, ಗಿನ್ನ ಅಂತ ಆಕೆ ವಿಶೇಷಣಗಳನ್ನು ಲಗತ್ತಿಸಿ ಮಾತಾಡುವುದನ್ನು ಕೇಳಿಯೇ ಆನಂದಿಸಬೇಕು. ಅದು ಪರಿಶುದ್ಧತೆಯ ಗ್ರಾಮ್ಯಜನ್ಯ ಸ್ವರದ ಕೋಲಾರ ಮಣ್ಣಿನ ಕಂಪಿನೊಂದಿಗೆ ಬೆರೆತ ಭಾಷಾಬಂಧುತ್ವ. ಅತ್ಯಂತ ಸೊಗಸಾಗಿ ನಿಸರ್ಗ ಸುಬಗ ಸಿರಿಕಂಠದಲಿ ಮಾತಾಡುವ ಗೀತಕ್ಕಗೆ ಗೀತಳೇ ಸರಿಸಮ ಮತ್ತು ಸರಿಸಾಟಿ.
ಊರಿಗೆ ಬೆಂಕಿ ಬಿದ್ದದೇ… ಉಪ್ನೀರೋ, ಸಿಹಿ ನೀರೋ ಗೊತ್ತಿಲ್ಲ… ಬೆಂಕಿ ಆರಿಸ್ಬೇಕಷ್ಟೇ. ಸಧ್ಯಕ್ಕೆ ಬೆಂಕಿ ಆರಿಸೋ ಕೆಲಸ ನಮ್ಕೇ…
ಇದು ೨೦೨೩ ರ ಕರ್ನಾಟಕದ ಚುನಾವಣೆಗಳನ್ನು ಆದ್ಯ ಗಮನದಲ್ಲಿಟ್ಕೊಂಡು ಆಕೆ ಹೇಳಿದ ಮಾತಿನ ಧ್ವನಿ ಅದಾಗಿತ್ತು. ಸಿದ್ರಾಮಣ್ಣನಿಗೆ ತಮ್ಮ ಬೆಂಬಲ ಎಂಬುದು ಗೀತಕ್ಕಳ ಮಾತಿನ ಉವಾಚ. ಸದ್ಯದ ಪರಿಸ್ಥಿತಿಯಲ್ಲಿ ಅದು ಅನಿವಾರ್ಯದ ಮತ್ತು ಅತ್ಯಗತ್ಯದ ನಿರ್ಧಾರ. ಆಕೆ ಹಾಗೆ ಹೇಳುವುದು ಕೆಲವರ ಪಾಲಿಗೆ ಅದು ಕಮ್ಯುನಿಸ್ಟ್ ಹೋರಾಟದ ಸೋಲೆಂತಲೂ, ಸಿದ್ಧರಾಮಯ್ಯನ ಹೊಗಳಿಕೆ ಎಂತಲೂ ಎನಿಸದಿರಲಾರದು. ಇರಬಹುದು, ಇರದೆಯೂ ಇರಬಹುದು.
ಆದರೆ ಊರಿಗೆ ಹತ್ತಿದ ಬೆಂಕಿ ಆರಿಸಲು ಸಿದ್ರಾಮಣ್ಣಗೆ ನಾವೆಲ್ಲ ಬೆಂಬಲಿಸುವುದು ಬಿಟ್ಟರೆ ಬೇರೆ ದಾರಿಇಲ್ಲ ಎಂಬುದನ್ನು ಅರಿಯದೇ ಹೋದರೆ ಬೆಂಕಿ ನಮ್ಮನ್ನೆಲ್ಲ ಸುಡದೇ ಬಿಡಲಾರದು ಎಂಬುದನ್ನು ಮಾತ್ರ ಖಾತರಿ ಪಡಿಸಿಕೊಳ್ಳಬೇಕಿದೆ. ಯಾಕೆಂದರೆ ಮಾತುಗಳು ಸತ್ತುಹೋದ ಮತ್ತು ಸೋತುಹೋದ ಭಾರತದಲ್ಲಿ ನಾವೆಲ್ಲ ಬದುಕಿದ್ದೇವೆ. ಅದಕ್ಕಾಗಿಯೇ ಗೀತಕ್ಕಳ ಈ ಮಾತುಗಳು ವೈರಲ್ಲಾಗಿ ಅವು ಚುರುಕಿನಿಂದ ಎಲ್ಲರ ಹೃದಯ ಮತ್ತು ಮನಸುಗಳನ್ನು ಮುಟ್ಟ ತೊಡಗಿವೆ. ಅಂತೆಯೇ ಅವಕ್ಕೆ ಸಹಜವಾದ ಮಹತ್ವ ಬರುತ್ತಿರುವುದು. ನಾನಾದರೂ ಅಂತಹ ಮಹತ್ವಕ್ಕಾಗಿಯೇ ಇಷ್ಟು ಮಾತುಗಳನ್ನು ಬರೆಯ ಬೇಕಾಯಿತು.
- ಮಲ್ಲಿಕಾರ್ಜುನ ಕಡಕೋಳ (ಖ್ಯಾತ ಬರಹಗಾರರು, ವಿಮರ್ಶಕರು, ಅಂಕಣಕಾರರು, ನಾಟಕಕಾರರು)