‘ಕಂಬನಿಯ ಕುಯಿಲು’ ಪುಸ್ತಕ ಪರಿಚಯ – ಅಮೃತ ಎಂ ಡಿ.

ತ.ರಾ.ಸು ಅವರ ಕಂಬನಿಯ ಪುಸ್ತಕದ ಕುರಿತು ಶಿಕ್ಷಕಿ, ಯುವ ಬರಹಗಾರ್ತಿ ಅಮೃತ ಎಂ ಡಿ.ಅವರು ಬರೆದಿರುವ ಒಂದು ವಿಶ್ಲೇಷಣೆಯನ್ನು ಓದುಗರ ಮುಂದಿಟ್ಟಿದ್ದಾರೆ, ತಪ್ಪದೆ ಓದಿ…

ಪುಸ್ತಕ : ಕಂಬನಿಯ ಕುಯಿಲು
ಲೇಖಕರು: ತ.ರಾ.ಸು

ಅದೆಷ್ಟೋ ಪುಸ್ತಕಗಳ ಓದಿರುವೆ, ಆದ್ರೆ ಅಲ್ಲಲ್ಲಿ ಮರೆತು ಹೋಗುವ, ಕೆಲವೊಮ್ಮೆ ಪುಸ್ತಕದ ಹೆಸರು ನೆನಪಾದರೆ ಲೇಖಕರ ಹೆಸರು ಕೈ ಕೊಡುವುದು, ಲೇಖಕರ ಹೆಸರು ನೆನಪಾದರೆ ಪುಸ್ತಕದ ಹೆಸರು ಕೈ ಕೊಡುವುದು ಹೀಗೆ ಬಹಳ ಸಲ ಆಗಿದ್ದುವುಂಟು..

ಬರಹ ಕಣ್ಣು ಕಟ್ಟಬೇಕು ಇಲ್ಲ , ಕಣ್ಣೀರು ಹಾಕಿಸಬೇಕು ಎಂದು ನಾನೆ ಹೇಳುವ ಅಂತಹ ಸಾಲಿಗೆ ಸೇರಿದ ಕೆಲವು ಪುಸ್ತಕಗಳ ಪೈಕಿ ಇಂದು ಈ ಕಂಬನಿ ಕುಯಿಲು ಸಹ ಸೇರಿತು..

ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್.. ಕಂಬನಿಯ ಕುಯಿಲುನಲ್ಲಿ ದುರ್ಗದ ಕಥೆಯನ್ನು ಎಣೆದ ರೀತಿ ಮನವ ಮುಟ್ಟಿತು, ದಶಕಗಳಷ್ಟು ಹಿಂದೆ ಸರಿದೇನೊ ಎನ್ನುವ ಉನ್ಮತ್ತ ಭಾವವನ್ನು ಸೃಜಿಸಿತು..216 ಪುಟಗಳ ಉಳ್ಳ ಪುಸ್ತಕ ಎರಡು ದಿನದ ಬಿಡುವಿನಲ್ಲಿ ಓದಿಸಿಕೊಂಡು ಹೋಗಿದೆ.. ಅಲ್ಲಲ್ಲಿ ನಗು, ಅಳು, ಅಯ್ಯೋ ಹೀಗಾಗ ಬಾರದಿತ್ತು ಎಂಬ ಎಲ್ಲ ಭಾವಗಳ ಹುಟ್ಟಿಸಿದೆ..

ಚಿತ್ರ ದುರ್ಗ ಎಂದರೆ ಮನಕ್ಕೆ ಸುಳಿಯುತ್ತಲಿದ್ದಿದ್ದು ಒಂದೆ ಒನಕೆ ಓಬವ್ವನ ಕಥೆ… ಅದರಾಚೆಗೆ ಬಹಳಷ್ಟು ಕಥೆ ಇದೆ.. ಒಂದು ರಾಜ್ಯದ ಅಳಿವು ಉಳಿವು, ಓಡೆದಾಟ-ಬಡಿದಾಟ ಎಲ್ಲವನ್ನು ಮೀರಿ, ಮೆಟ್ಟಿ ರಾಜ್ಯ ರಾಜ್ಯವಾಗಲು ನೂರಾರು ಜನರ ರಕ್ತದ ಕಾಣಿಕೆ ಇದೆ, ಸಾವಿರಾರು ಕುಟುಂಬದ ತ್ಯಾಗದ ಕುಣಿಕೆ ಇದೆ.

ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ ( ತರಾಸು)

ಲಕ್ಷಾಂತರ ಮಂದಿಯ ಪ್ರಾರ್ಥನೆ ಇದೆ, ವಿಧಿಯ ಅಂಕಿತ ಮೀರಿ ನಡೆದಾಗ ಅಲ್ಲಲ್ಲಿ ಕ್ರೋಧ,ಭಯ ನಿರ್ಲಪ್ತತೆಯ ಕಡಲಿನ ಸಂಗಮ ಇದೆ. ಸಾಲು ಪದಗಳು ಐತಿಹಾಸಿಕ ಕಾದಂಬರಿ ಆಗಲು, ಸಾವಿರಾರು ಜನರ ಮನದ ಪಲ್ಲಟವ ಸರಿಸಲು ಆಳವಾದ ಅಧ್ಯಯನ, ಕಥೆಯನ್ನು ಕಥೆಯಂತೆ ಮನವ ಮುಟ್ಟಿಸಲು ಬರಹದ ಕಾರುಬಾರು ಇವೆಲ್ಲವೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಸುಳ್ಳಲ್ಲ.

ಮದಕರಿ ನಾಯಕನ ಸಾವಿನಿಂದ ಶುರುವಾಗುವ ಕಥೆ ಆತನ ಅಂತ್ಯದ ಬಳಿಕ ಪಟ್ಟಕ್ಕಾಗಿ ನಡೆಯುವ ಹಗ್ಗ – ಜಗ್ಗಾಟ, ವಿಷಮ ಪರಿಸ್ಥಿತಿಗಳು, ವೈಷಮ್ಯ ಹುಟ್ಟು ಹಾಕುವ ಘಟನೆಗಳು ಹೃದಯವನ್ನು ಒಮ್ಮೆ ಜಗ್ಗಿಸಿ ಬಿಡುತ್ತದೆ. ಅಯ್ಯೋ! ದುರ್ವಿಧಿಯೆ ಎಂದು ಮರುಕ ಹುಟ್ಟಿಸುತ್ತದೆ. ಇತಿಹಾಸದ ಪುಟಗಳಲ್ಲಿ ಚರಿತೆ ಸೃಷ್ಟಿ ಆಗುವುದು ನಮ್ಮವರೆ ನಮಗೆ ಮುಳುವಾಗಿ ನಿಂತಾಗ ಎಂಬುದು ಪದೆ-ಪದೆ ಸಾಬೀತಾಗಿದೆ. ಧರೆ ಹೊತ್ತಿ ಉರಿದರೆ ನಿಲ್ಲಬಹುದು ಮನೆ ಹೊತ್ತಿ ಉರಿದರೆ ನಿಲ್ಲಬಹುದೆ? ಬೇಲಿಯೆ ಎದ್ದು ಹೊಲವ ಮೇಯ್ದರೆ ಹೊಣೆ ಯಾರು ?
ಎಂಬ ಪರಿಸ್ಥಿತಿ ರಾಜ್ಯದ ಒಳಗೊಳಗೆ ಸಂಭವಿಸುತ್ತದೆ.

ಮದಕರಿ ನಾಯಕನ ಅಂತ್ಯದ ನಂತರ ಪಟ್ಟಕ್ಕೆ ದತ್ತು ಸ್ವೀಕಾರಗೊಳ್ಳದ ಓಬಣ್ಣ ನಾಯಕನ, ಇಲ್ಲ ಅಧಿಕೃತವಾಗಿ ಮದಕರಿ ನಾಯಕನ ಅಣ್ಣ ಸರ್ಜೆನಾಯಕರ ಲಿಂಗಣ್ಣ, ಚಿಕ್ಕಣ್ಣನವರ ಎಂದು ಗೊಂದಲದಲ್ಲಿ ಸಾಗುವ ಕಾದಂಬರಿಯಲ್ಲಿ ಪ್ರತಿ ಪುಟದ ಅಂತ್ಯದಲ್ಲಿ ಒಂದು ತಿರುವುಗಳ ಪಡೆದು ಓದುಗ ದೊರೆಯನ್ನು ಸರಾಗವಾಗಿ ಓದಿಸಿಕೊಂಡು ಸಾಗುತ್ತದೆ.

ಗೌರವ್ವ ನಾಗತಿಯ ರಾಜಕೀಯ ಚತುರತೆ, ಮುಂದಾಲೋಚನೆಯು ಮದಕರಿ ನಾಯಕನ ಅಂತ್ಯದ ಬಳಿಕ ಸತಿ ಸಹಗಮನ ಪದ್ಧತಿಯಲ್ಲಿ ಅಂತ್ಯ ಕಂಡರೆ ಜೊತೆಗೆ ಉಳಿದ ನಾಗತಿಯರು ಸಹ ಸ್ವರ್ಗಸ್ಥರು ಆಗುತ್ತಾರೆ. ಪಟ್ಟದರಸಿಯಾದ ಓಬವ್ವ ನಾಗತಿಯ ಮೃದುತ್ವ ಕಾದಂಬರಿಯುದ್ದಕ್ಕೂ ಮಾತಾಡುತ್ತಾ, ಮಾತಾಡಿಸುತ್ತ ಸಾಗುತ್ತದೆ.

ರಾಜರ ಆಸೆಯಂತೆ ಓಬಣ್ಣ ನಾಯಕನು ರಾಜ ಕುಮಾರನಾಗಿಸಲು ಪ್ರಧಾನ ಮಂತ್ರಿಯಾದ ಭುವನಪ್ಪ ನಾಯಕ ಆಪ್ತ ಸಲಹೆಗಳು, ಅವರ ಕಾರ್ಯ ವೈಖರಿಗೆ ಎಲ್ಲರ ಮನವೊಲಿಸಿ ಸಮ್ಮತ ಸಿಕ್ಕರೂ, ದಳವಾಯಿಗಳ ಪ್ರಕ್ಷುಬ್ದ ನಡೆತೆಗೆ, ನುಡಿಗೆ ರಾಜ್ಯದಲ್ಲಿ ಅಲ್ಲೋಲ – ಕಲ್ಲೋಲ ಎದ್ದು ರಾಜ್ಯ ರಕ್ತದ ಹೋಕುಳಿಯಲ್ಲಿ ನಲುಗಿ ಹೋಗುತ್ತದೆ.

ಎಲ್ಲಾ ಸುಸೂತ್ರವಾಗಿ ಒಂದು ಹಂತ ತಲುಪಿತು ಓಬಣ್ಣ ನಾಯಕ ಸಿಂಹಾಸನವೇರಿದ, ಭುನಪ್ಪನವರು ವಂಶಪಾರಂಪರ್ಯದಿಂದ ಬಂದಂತಹ ಪ್ರಧಾನಿ ಪಟ್ಟವನ್ನು ಲಿಂಗಣ್ಣನಿಗೆ ಕೊಟ್ಟರು ದುರ್ಗಕ್ಕೆ ರಾಜ ಬಂದು ಪ್ರಧಾನಿ ಕೂಡ ಬಂದು ಯಾರಿಗೂ ಮೋಸವಾಗಲಿಲ್ಲ ಜನರ ಸಮ್ಮುಖದಲ್ಲಿ ಪಟ್ಟಾಭಿಷೇಕ ನೆರವೇರಿತು ಎಂಬ ತಿಳಿಯಾದ ಭಾವನೆ ಅಷ್ಟೇ ಮೂಡುತ್ತದೆ.

ಮದಕರಿ ನಾಯಕರ ಮರಣದಿಂದ ಮತ್ತು ಪಟ್ಟಾಭಿಷೇಕ ಕಾರ್ಯ – ಕೈಂಕರ್ಯಗಳಿಂದ ರಾಜ್ಯದ ಬೊಕ್ಕಸ ಮುಗಿಯುತ್ತ ಬಂದಿದ್ದು ಜೊತೆಗೆ ಪಟ್ಟಾಭಿಷೇಕ ಸಮಯದಲ್ಲಿ ಪರಂಪರೆಯಿಂದ ಕೊಟ್ಟು ಬಂದಂತೆ ಕಾಣಿಕೆ ಕೊಡಲಿಲ್ಲವೆಂದು ಸೈನಿಕರಿಂದ, ದಳವಾಯಿಗಳಿಂದ ಉಂಟಾದ ಭಿನ್ನಾಭಿಪ್ರಾಯ ರಾಜ್ಯದ ಅವನತಿಗೆ ಅಶಾಂತಿಗೆ ಕಾರಣವಾಯಿತು.

ದಳವಾಯಿಯಾದ ದೇಸಣ್ಣ ಹಚ್ಚಿದ ಕಿಡಿ ಇಡೀ ದುರ್ಗದ ನೆಮ್ಮದಿಯ ಜೊತೆ ಆಟವಾಡುತ್ತದೆ. ದೇಸಣ್ಣನ ಮನಸ್ಥಿತಿ ಬದಲಾಗಲು, ಮನ ಪರಿವರ್ತನೆ ಉಂಟಾದರೂ ಉಳಿದ ದಳವಾಯಿಯಾದ ಮುದ್ದಣ್ಣ, ರಾಯಣ್ಣ, ವೀರಣ್ಣ, ಚಿಕ್ಕಣ್ಣ ಇವರ ಮುಂದಾಳತ್ವದಲ್ಲಿ / ಕುತಂತ್ರದಲ್ಲಿ ನೆಮ್ಮದಿಯ ತಂಗಾಳಿಯಲ್ಲಿ ತೇಲುತ್ತಿದ್ದ, ದುರ್ಗಾ ಕಿಚ್ಚಿನ ಕಿಡಿಯ ಮಡಿಲಲ್ಲಿ, ಅಶಾಂತಿಯ ಬಿರುಗಾಳಿಯಲ್ಲಿ ತತ್ತರಿಸಿ ಹೋಗುತ್ತದೆ.

ರಾಜಕುಮಾರನಿಗೆ ಭದ್ರತೆಯನ್ನೊದುಗಿಸುತ್ತಾ ಲಿಂಗಣ್ಣನಾಯಕ ಮುಂದಾಳತ್ವ ವಹಿಸಿ ನಡೆಸಿದ ಅಷ್ಟು ಮುತುವರ್ಜಿ ಕಾರ್ಯಗಳು ಹೊಳೆಯಲ್ಲಿ ಹುಣಸೆಹಣ್ಣು ತೀಡಿದ ಹಾಗೆ ತೇಲಿ ಹೋಯಿತು.

ಅಂಗರಕ್ಷಕ ಪಡೆಯ ಭಟನಾದ ಕಸ್ತೂರಿರಂಗನ ಸ್ವಾಮಿ ನಿಷ್ಠೆ ಕಸ್ತೂರಿರಂಗನ ತಮ್ಮನಾದ ವೀರಣ್ಣನ ದಳವಾಯಿ ಪಟ್ಟಕ್ಕೆ ಏರಬೇಕೆಂಬ ದುರಾಸೆ ಅವರ ಮನೆಯಲ್ಲಿ ಹುಟ್ಟು ಹಾಕಿದಂತಹ ವಿಷಮ ಸ್ಥಿತಿ, ಇದೆಲ್ಲದರ ಪರಿಣಾಮವಾಗಿ ಸೈನಿಕರ ಮನೆಯಲ್ಲಿ, ದಳವಾಯಿ ಅವರ ಮನೆಯಲ್ಲಿ ಕೂಡ ಅಶಾಂತಿ ನೆಲಸಿತು.

ಓಬವ್ವ ನಾಗತಿಯ ಆಪ್ತ ಸಖಿಯಾದ ಗಿರಿಜೆಯ ಸ್ವಾಮಿ ನಿಷ್ಠೆ , ನಾಗತಿಯವರ ಮೇಲಿಟ್ಟ ಆಕೆಯ ಪ್ರೀತಿ, ಅಭಿಮಾನ ಎಲ್ಲವೂ ಸಹ ಅರೆಗಳಿಗೆ ಮೈ ಜುಮ್ಮ್ ಎನಿಸುವ ಆಹ್ಲಾದಕರತೆಯನ್ನು ಕೊಡುತ್ತದೆ.

ಲಿಂಗಣ್ಣ ನಾಯಕನ ತಮ್ಮನಾದ ಚಿಕ್ಕಣ್ಣ ಪಟ್ಟಕ್ಕಾಗಿ ಆಸೆಪಟ್ಟು,ಸಂಕುಚಿತ ಬುದ್ಧಿವುಳ್ಳ ದಳವಾಯಿಗಳೊಟ್ಟಿಗೆ ಬೆರೆತು ದುರ್ಗಕ್ಕೆ ಅಪಶಕುನ ದ ಕಳಸದಂತೆ ಗೋಚರಿಸುತ್ತಾನೆ. ಮುದ್ದಣ್ಣನ ವಿಕೃತ ಮನಸ್ಸು ತನಗಾಗಿ ಸಹಕರಿಸದ ಬೇಸಣ್ಣನ ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತದೆ.

ಶಾಂತಿಯ ಹೋದೋಟದಂತಿದ್ದ ದುರ್ಗದಲ್ಲಿ ರಕ್ತದ ಹೋಕುಳಿ ಹರಿಯುತ್ತದೆ. ದಳವಾಯಿಗಳ ಹುಡುಕಾಟ ಅವರಿಗೆ ಶಿಕ್ಷಿಸಲು, ಹುಡುಕಿಕೊಟ್ಟವರಿಗೆ ಇನಾಮುಗಳು ಎಂದು ಸಾರಿದ ಮರುಕ್ಷಣವೇ ಕೋಟೆಯ ಸುತ್ತಣ ಬಿಗಿಬಸ್ತು ಬಲವಾಗುತ್ತದೆ.

ಇದರೆಲ್ಲದರ ಆಚೆಗೆ ಚಿಕ್ಕಣ್ಣ ಮನಪರಿವರ್ತನೆ ಆದಂತೆ ನಟಿಸಿ ಮತ್ತೆ ಕ್ರೂರ ಕೃತ್ಯ ಎಸಗಿದ ಎಂದು ತೋರುವಂತೆ ಕಾದಂಬರಿ ಮುಗಿಯುತ್ತದೆ. ಕಸ್ತೂರಿ ರಂಗನ ದುಡುಕಿನ ನಿರ್ಧಾರ ಶೋಚನೀಯ ಎನಿಸುತ್ತದೆ. ಹೀಗೆ ಕಾದಂಬರಿ ದೃಷ್ಟಾಂತದಲ್ಲಿ ಅಂತ್ಯಗೊಳ್ಳುತ್ತದೆ.

ಮುಂದಿನ ವಿಶ್ಲೇಷಣೆ ಮುಂದಿನ ಕಾದಂಬರಿಯಾದ ರಕ್ತರಾತ್ರಿ ಓದಿ ಎಂದಿನಂತೆ ಹಾಜರಾಗುವೆ.


  • ಅಮೃತ ಎಂ ಡಿ.( ಕವಿಯತ್ರಿ, ಯುವ ಲೇಖಕಿ, ಶಿಕ್ಷಕಿ)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW