ಒರೆಗಾನ್ ನಲ್ಲಿ ‘ಓಶೋ’ – ಗಿರಿಜಾ ಶಾಸ್ತ್ರೀ

‘ಓಶೋ’ ಎಂದರೆ ಜ್ಞಾನಸಾಗರ. ಒಮ್ಮೆ ಪತ್ರಕರ್ತರ ಪ್ರಶ್ನೆಗೆ ಅವರು 1,65,000 ಪುಸ್ತಕಗಳನ್ಮು ಓದಿರುವೆನೆಂದು ಉತ್ತರಿಸುತ್ತಾರೆ. ಅವರನ್ನು ದಾರ್ಶನಿಕನಾಗಿ ಕಂಡುಕೊಂಡವರಿಗೆ ಅವರ ಹೋರಾಟದ ಇನ್ನೊಂದು ಮುಖ ಕಾಣಬೇಕೆಂದರೆ ‘wild wild ..’ ನೋಡಬೇಕು. ಮುಂದೆ ಓದಿ ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು ಲೇಖಕಿ ಗಿರಿಜಾ ಶಾಸ್ತ್ರೀ ಅವರ ಲೇಖನದಲ್ಲಿ….

Wild Wild Country…..

ಒರೆಗಾನ್‌ ರಾಜ್ಯದ ‘ಕ್ರೇಟರ್ ಲೇಕ್’ ತಾಣದಲ್ಲಿ ನಮ್ಮ ಅಮೇರಿಕಾ ಸಣ್ಣ ಪ್ರವಾಸ ಮುಕ್ತಾಯವಾಗಿತ್ತು. ಅಲ್ಲಿಂದ ಮೂರು ನಾಲ್ಕು ತಾಸುಗಳ ದಾರಿ- ನಮ್ಮ ನಿಲ್ದಾಣ ಸಿಯಾಟಲ್ ಕಡೆಗೆ ಹೊರಟಿದ್ದೆವು. ಒರೆಗಾನ್ ಪಕ್ಕದ್ದೇ ವಾಷಿಂಗ್ಟನ್ ನಾವು ಸೇರಬೇಕಾದ ಊರಿರುವ ರಾಜ್ಯ. ನಡುವೆ ಪೋರ್ಟ್ ಲ್ಯಾಂಡ್ ಎಂಬ ಬಹಳ ದೊಡ್ಡ ಮಾರುಕಟ್ಟೆಗಳ ಸಂಕೀರ್ಣ. ನಾನಾ ತರಹದ ಸಾವಿರ ಮಳಿಗೆಗಳು. ಅಲ್ಲಿ ಸೇಲ್ಸ್ ಟ್ಯಾಕ್ಸ್ ಇಲ್ಲವಂತೆ. ಹೀಗಾಗಿ ಅಕಪಕ್ಕದ ರಾಜ್ಯಗಳ ಜನ ಲಗ್ಗೆ ಹಾಕುತ್ತಾರೆ.

ಅಲ್ಲಿ ಇಣುಕಿ ಮುಂದೆ ಹೊರಟಾಗ ಗಕ್ಕನೆ ಓಶೋ ರಜನೀಶ್ ಮುತ್ತಿಕೊಂಡರು. ಒರೆಗಾನ್ ರಾಜ್ಯಕ್ಕೂ ಭಾರತಕ್ಕೂಒಂದು ರೀತಿಯ ಹಳೆಯ ನಂಟಿದೆ.

“ಅಮ್ಮಾ “wild wild country” ನೋಡಿದ್ದೀಯ? ಅಂತಹ prefect documentary ಯನ್ನು ನಾನು ನೋಡೇ ಇಲ್ಲ ” ಎಂದು ಮಗ ಹುಚ್ಚು ಹತ್ತಿಸಿದ.ಆ ಕ್ಷಣದಿಂದ ಓಶೋ ಕಾಡತೊಡಗಿದರು.

“Wild wild country ” ಎಂಬ ಸಾಕ್ಷ್ಯ ಚಿತ್ರ ಓಶೋ ರಜನೀಶ್ ಅವರು ಅಮೇರಿಕಾದ ಒರೆಗಾನ್ ರಾಜ್ಯದ ಆ‌್ಯಂಟಿಲೋಪ್ ಪ್ರದೇಶದಲ್ಲಿ ತಮ್ಮ ಸಾಮ್ರಾಜ್ಯವನ್ನು ಕಟ್ಟಿ ಪತನಗೊಂಡ ಕಥೆ. ಅಮೇರಿಕನ್ನರು ಷಡ್ಯಂತ್ರಹೂಡಿ ಅವರ ಸಾಮ್ರಾಜ್ಯವನ್ನು ನಾಶಗೊಳಿಸಿದರು. ಈ ಕಥೆ, ನಾವು ಹಾದು ಬಂದ ಒರೆಗಾನ್ ಪ್ರದೇಶದ ಆ‌್ಯಂಟಿಲೋಪ್ ಮತ್ತು ಪೋರ್ಟ್ ಲ್ಯಾಂಡ್ ಗಳಲ್ಲೇ ಓಡಾಡುತ್ತದೆ. ಸಂಪರ್ಕ ಸಾಧನೆಗೆ ಒಂದು ಸಣ್ಣ ಕೊಕ್ಕೆ ಸಿಕ್ಕಿದರೂ ಸಾಕು ಮನಸ್ಸು ಹೇಗೆ ಅದಕ್ಕೆ ಲಬಕ್ಕ್ ಎಂದು ನೇತುಹಾಕಿಕೊಂಡು ಬಿಡುತ್ತದೆ? ಮರ್ಕಟ! ಓಶೋ ಮತ್ತು ಅವರ ಅನುಯಾಯಿಗಳನ್ನು ಪೋರ್ಟ್ ಲ್ಯಾಂಡಿನ ಬೀದಿಗಳಲ್ಲಿ ಹುಡುಕತೊಡಗಿದೆ. ಅವರ ಗ್ರಾಮವನ್ನು ನೋಡುವ ಆಸೆಯಾಯಿತು. ಮಗನನ್ನು ಕೇಳಿದೆ ಅದಕ್ಕೆ ಅವನು “ಅಲ್ಲೇನಿದೆ ಈಗ ಮಣ್ಣು. ಎಲ್ಲಾ ನೆಲಸಮ ಮಾಡಿ ಬೇರೆ ಕಟ್ಟಿದ್ದಾರೆ. ರೇಸಿಸ್ಟ್ ….ಮಕ್ಕಳು” ಎಂದು ಕೋಪಾವಿಷ್ಟನಾದ.

ಒಂದು ಕಾಲದಲ್ಲಿ ನನಗೂ ಓಶೋ ಅಮಲಿತ್ತು. ಅವರ ವಿಚಾರಧಾರೆಗಳು ಈಗಲೂ ಪ್ರಿಯವೇ . ನನಗೆ ಓಶೋ ಹುಚ್ಚು ಹಿಡಿಸಿದವರು ಸ್ನೇಹಿತರಾದ ಮಾಯ ಮತ್ತು ಅಶೋಕ್ ದಂಪತಿ. ಶಿವರಾತ್ರಿಯಂದು ನಾವು ಓಶೋ ಅವರ ‘Meeting the Ultimate’ ಓದುತ್ತಾ ಜಾಗರಣೆ ಮಾಡಿದ ನೆನಪು ಇನ್ನೂ ಹಸಿರಾಗಿದೆ. ಅದೇ ಟ್ರಾನ್ಸ್ ನಲ್ಲಿ ನಾನು ಅವರ “ಮಾನವ ಧರ್ಮ” ಎನ್ನುವ ಹಿಂದಿ ಕೃತಿಯನ್ನು ಕಷ್ಟ ಪಟ್ಟು ಓದಿ ಅರಗಿಸಿಕೊಂಡು ಕೆಲವು ಪುಟಗಳನ್ನು ಕನ್ನಡಕ್ಕೆ ಅನುವಾದಿಸಿದ್ದೆ. ಆನಂತರ ‘ಯಾರು ಪ್ರಕಟಿಸುತ್ತಾರೆ?’ ಎಂಬ ನಿರಾಶೆಯಲ್ಲಿ ಅದನ್ನು ಹರಿದು ಹಾಕಿದ್ದೆ. ಅದು ಫೇಸ್ ಬುಕ್ ಕಾಲವಲ್ಲ!

ಸಿಯಾಟಲ್ ಗೆ ಬಂದ ಮಾರನೆಯ ದಿನವೇ wild wild country ನೋಡಲು ಪ್ರಾರಂಭಿಸಿದೆ. ಆರು ಸಂಚಿಕೆಗಳ ದೀರ್ಘ ಸಾಕ್ಷ್ಯಚಿತ್ರ. ಓಶೋ, ಮದುವೆ ಸಂಸ್ಥೆ ಯನ್ನು worthless ಎಂದು ಧೂಳೀಪಟ ಮಾಡಿದವರು, ಮನುಷ್ಯ ಸಂಬಂಧ ಮತ್ತು ಮಾನವ ಪ್ರೇಮವನ್ನು ಸಾರಿದವರು. ಇದನ್ನು ಮಾತ್ರ ಓಶೋ ಎಂದು ಕೊಂಡವರು ಅವರ ವಿಚಾರಗಳನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಿದರು. ಅವರನ್ನು ಪೂರ್ಣವಾಗಿ ಗ್ರಹಿಸದೇ ಹೋದರು. ವಿರೋಧಿಸಿದರು. ಉಳಿಗಾಲವಿಲ್ಲದಂತೆ ಮಾಡಿದರು.

ಅಸಾಧಾರಣ ಮೇಧಾವಿ. ತತ್ವಜ್ಞಾನಿಯಾದ ಓಶೋ ಈ ಕಾರಣದಿಂದ ಹಿಂದೂ ಸಂಪ್ರದಾಯವಾದಿ, ನೈತಿಕವಾದಿಗಳಿಂದ ತಪ್ಪಿಸಿಕೊಂಡು ಅಮೇರಿಕಾಕ್ಕೆ ಓಡಿಹೋಗಬೇಕಾಯಿತು. ಅಲ್ಲಿ ಒರೆಗಾನ್ ಎಂಬ ಉತ್ತರ ಪಶ್ಚಿಮ ರಾಜ್ಯದ, ಆ‌್ಯಂಟಿಲೋಪ್ (ವಾಸ್ಕೋ ಕೌಂಟಿ) ಪ್ರದೇಶದಲ್ಲಿ ಬಿಡಾರ ಹೂಡಿದರು (೧೯೮೦) ಆನಂತರ ಅದು ಪಕ್ಕದ ಕೌಂಟಿಗೂ ವಿಸ್ತರಿಸಿತು. (ಡೇಲ್ಸ್)

ಅವರ ಆಪ್ತ ಕಾರ್ಯದರ್ಶಿ ಮಾ ಆನಂದ ಶೀಲಾ ತಮ್ಮ ಗಂಡನ ಸು.೬೪ ಸಾವಿರ ಎಕೆರೆ ಬರಡು ಭೂಮಿಯಲ್ಲಿ ಓಶೋ ಅವರ ಸಾವಿರಾರು ಅನುಯಾಯಿಗಳ ಸಹಾಯದಿಂದ ರಜನೀಶ್ ಅವರ ಕನಸಿನ ಸಾಮ್ರಾಜ್ಯ ಕಟ್ಟಿದರು. ಹಿಂದೂ ಸಂಪ್ರದಾಯವಾದಿಗಳಿಂದ ತಪ್ಪಿಸಿಕೊಳ್ಳಲೋಸುಗ ಕ್ರಿಶ್ಚಿಯನ್ ನೆಲದ ಮೇಲೆ ಕಾಲಿಟ್ಟರು ಓಶೋ. ದುರಂತವೆಂದರೆ ಕ್ರಿಶ್ಚಿಯನ್ ಮೂಲಭೂತವಾದಿಗಳ, ನೈತಿಕವಾದಿಗಳ, ಜನಾಂಗ ದ್ವೇಷಿಗಳ ಹುನ್ನಾರಗಳಿಗೆ ಬಲಿಯಾದರು.

ಫೋಟೋ ಕೃಪೆ: google

ಆ‌್ಯಂಟಿಲೋಪ್, ‘ರಜನೀಶಪುರಮ್ ‘ ಆಯಿತು. ರಸ್ತೆಗಳು, ಹೊಟೇಲ್ ಗಳು ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯ ಘಮಲು ಪಸರಿಸಿತು ( ಉದಾ : ಕೃಷ್ಣಮೂರ್ತಿ ಲೇಕ್) ಅಂಗಡಿ ಮುಂಗಟ್ಟುಗಳು,‌ ದೊಡ್ಡ ಮಾಲ್ ಗಳು, ಮನೆಗಳು, ಅತಿಥಿ ಗೃಹಗಳು, ಪ್ರಯೋಗಾಲಯಗಳು, ಕೆರೆಕಟ್ಟೆ, ವಿದ್ಯುತ್, ಪೋಸ್ಟ್ ಆಫೀಸು, ಒಳ ಚರಂಡಿ ವ್ಯವಸ್ಥೆ, ಅಗ್ನಿ ಶಾಮಕದಳ,ಪೋಲೀಸ್ ವ್ಯವಸ್ಥೆ, ತಮ್ಮದೇ ಆದ ಚಿಕ್ಕ ಖಾಸಗಿ ವಿಮಾನ ನಿಲ್ದಾಣ ( Air strip) ಶಾಂತಿಪಾಲನೆಗಾಗಿ ಶಸ್ತ್ರಾಸ್ತ್ರ ಸಂಗ್ರಹ, ಚಿನ್ನಾಭರಣ ವಜ್ರವೈಢೂರ್ಯಗಳು…. ಹೀಗೆ ಬರಡು ಭೂಮಿಯಾಗಿದ್ದ ಆ‌್ಯಂಟಿಲೋಪ್ ಕೆಲವೇ ವರುಷಗಳಲ್ಲಿ ರಜನೀಶೀಸ್ ಸನ್ಯಾಸಿಗಳ ( ರಜನೀಶ್ ಅನುಯಾಯಿಗಳು) ಸಹಕಾರದಿಂದ ಸುಸಜ್ಜಿತ ಆಧುನಿಕ ರಜನೀಶಪುರಮ್ ಆಯಿತು. ಅದು ಎಷ್ಟು ಬೆಳೆಯಿತೆಂದರೆ ಅಲ್ಲಿನ ಚುನಾವಣೆಗೆ ರಜನೀಶ್ ಅವರನ್ನು ನಿಲ್ಲಿಸಲೂ ತಯಾರಾದರು ಅವರ ಅನುಯಾಯಿಗಳು.

ಆ ಊರಿನ ಮೂಲನಿವಾಸಿಗಳಿಗೆ ಇದು ಅವರ ಖಾಸಗಿ ಬದುಕಿಗೆ ಅಡ್ಡಿ ಎನಿಸಿತು. ಎಲ್ಲಿಂದಲೋ ಬಂದ ಕೆಂಪು ಕೋತಿಗಳು ಗದ್ದಲವೆಬ್ಬಿಸುತ್ತ ಶಾಂತಿಭಂಗ ಮಾಡುತ್ತಿವೆ ಎನಿಸಿತು. ಅವರ ಸ್ವಚ್ಛಂದ ಲೈಂಗಿಕತೆ ಕ್ರಿಶ್ಚಿಯನ್ ಧರ್ಮಕ್ಕೆ ಮಾರಕವಾಗಿ ಕಂಡಿತು. ಕ್ರಮೇಣ ಆ ಊರಿನವರಿಗೂ ರಜನೀಶ್ ಅನುಯಾಯಿಗಳಿಗೂ ಸಂಘರ್ಷ ಪ್ರಾರಂಭವಾಯಿತು.
ಕೆರೆಕಟ್ಟೆಗೆ ವಿಷ ಹಾಕಿದ, ತಿನ್ನುವ ಪದಾರ್ಥಗಳಲ್ಲಿ ವಿಷದ ಬ್ಯಾಕ್ಟೀರಿಯ ಬೆರೆಸಿದ, ಅಲ್ಲಿನ ಅಟಾರ್ನಿ ಜನರಲ್ ಟರ್ನರ್ ಎನ್ನುವವನ ಕೊಲೆ ಪ್ರಯತ್ನ ನಡೆಸಿದ ಆರೋಪದ ಮೇಲೆ ಓಶೋ ಅನುಯಾಯಿಯಗಳನ್ನು ಬಂಧಿಸಲಾಯಿತು. ಓಶೋ ಅವರನ್ನೂ ಕೂಡ ಬಿಡಲಿಲ್ಲ. ಅವರು ಕೊಲೆಯಾಗುವುದರಿಂದ ಸ್ವಲ್ಪದರಲ್ಲೇ ಬಚಾವಾದರು.

“One thing about this wild, wild country

It takes a strong, strong, it breaks a strong, strong mind” ಇದು ಅಮೇರಿಕಾದ ಒಬ್ಬ ದನಗಾಹಿಯ ಹಾಡು. ಇದನ್ನು ಹಾಡಿದವನು ಬಿಲ್ ಕ್ಯಲಹ್ಯಾನ್ ಎನ್ನುವ ಪ್ರಸಿದ್ಧ ಅಮೆರಿಕನ್ ಗಾಯಕ. ಅವನ ಹಾಡಿನ ಸಾಲನ್ನು ಶೀರ್ಷಿಕೆಯಾಗಿ ಈ ಸಾಕ್ಷ್ಯ ಚಿತ್ರಕ್ಕೆ ಇರಿಸಲಾಗಿದೆ.

ಫೋಟೋ ಕೃಪೆ: google

ಅಮೇರಿಕಾದ ಯಾವ ಪ್ರವಾಸಿ ತಾಣಗಳಿಗೇ ಹೋಗಲಿ ಅಲ್ಲಿ ಅದರ ಮೂಲನಿವಾಸಿಗಳ ಹಾಡುಗಳು, ಚಿತ್ರಕಲೆಗಳು, ಅವರ ವೇಷ ಭೂಷಣದ ಭಾವಚಿತ್ರಗಳು, ಅವರ ಗ್ರಾಮ ಜೀವನದ ಪ್ರತಿಕೃತಿಗಳು, ಬೇಟೆಯ ಸ್ವರೂಪ, ಆಹಾರ ಪದ್ಧತಿ, ಅವರ ಸ್ಥಳನಾಮಗಳು ಕಂಡು ಬರುತ್ತವೆ.

ಮೇಲಿನ ಹಾಡು ಕೂಡ ಒಬ್ಬ ದನಗಾಹಿಯ ಹಾಡು. ಇದು , ಮೂಲನಿವಾಸಿಗಳ ಸಂಸ್ಕೃತಿಯ ಮೇಲೆ ಆಧುನಿಕ ಸಮಾಜದ ದಬ್ಬಾಳಿಕೆಯನ್ನು ಬಯಲಾಗಿಸುತ್ತದೆ.
ರಜನೀಶ್ ಅವರ ‘wild country ‘ ಕೂಡ ತನ್ನ ಸಂಸ್ಕೃತಿಯನ್ನು ಹೊಸಕಿ ಹಾಕಲು ಬಂದ ಅಮೇರಿಕಾ ಆಡಳಿತ ವ್ಯವಸ್ಥೆಯನ್ನು , ಮಿಲಿಟರಿ ಮತ್ತು ಪೋಲಿಸ್ ಶಕ್ತಿಯನ್ನು, ನ್ಯಾಯಾಂಗವನ್ನು ಎದುರು ಹಾಕಿಕೊಂಡಿತು.

ನಾಲ್ಕುವರುಷಗಳ ಮೌನ ಮುರಿದ ಭಗವಾನ್ ರಜನೀಶ್ ಅಮೇರಿಕಾಕ್ಕೆ ಪಾಠಕಲಿಸುತ್ತೇನೆ ಎಂದು ತರ್ಜನಿ ಬೆರಳಲ್ಲಿ ಎಚ್ಚರಿಸಿದರು. ಆದರೆ ಪ್ರವಾಸಿಗರಾಗಿ ಹೋದ ಅವರು ವಿದೇಶೀ ವಲಸೆಯ ನಿಯಮಕ್ಕೆ ವಿರುದ್ಧವಾಗಿ ಆಶ್ರಮ ಕಟ್ಟಿ ಸಾವಿರಾರು ಅನುಯಾಯಿಗಳ ಬಲದಿಂದ ಅಲ್ಲಿಯೇ ಝಾಂಡಾ ಹೂಡಿದರು . ಅದೇ ಅವರಿಗೆ ಮುಳುವಾಯಿತು. ವಿಮಾನದಲ್ಲಿ ತಪ್ಪಿಸಿಕೊಂಡು ಹೋಗುತ್ತಿದ್ದ ಅವರನ್ನು ಅಮೇರಿಕಾದ ದಕ್ಷಿಣ ಸರಹದ್ದಿನಲ್ಲಿ (ಸೌತ್ ಕರೊಲಿನಾ) ಹಿಡಿಯಲಾಯಿತು. ವಿಮಾನ ನಿಲ್ದಾಣದಲ್ಲಿಯೇ ಕೋಳತೊಡಿಸಿ ಕರೆದೊಯ್ದರು. ಅವರ ಅಪಾರ ಹಣ, ವಜ್ರ ವೈಢೂರ್ಯ, ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಂಡರು.

ದಂಡ ತೆತ್ತು ಬಿಡುಗಡೆಯಾಗಿ ಓಶೋ ‘ಇನ್ನು ಇಲ್ಲಿಗೆ ಕಾಲಿಡಲಾರೆ’ ಎಂದು ಮತ್ತೆ ಪುಣೆಗೆ ಹಾರಿದರು.( ೧೯೮೮) ಅವರ ಕಾರ್ಯದರ್ಶಿ ಶೀಲಾ ಮೊದಲೇ ಅವರನ್ನು ಬಿಟ್ಟು ಜರ್ಮನಿಗೆ ಹಾರಿದ್ದರು. ರಜನೀಶರ ಕ್ರೋಧಕ್ಕೆ ಕಾರಣರಾದರು. ಅಮೇರಿಕಾದ ಸರ್ಕಾರ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಿತು.

ಫೋಟೋ ಕೃಪೆ: google

ವಿಕಿಪೀಡಿಯ ಮಾಹಿತಿಯ ಪ್ರಕಾರ ರಜನೀಶ್ ಮತ್ತು ಅವರ ಅನುಯಾಯಿಗಳನ್ನು ದಂಗೆಕೋರರು, ಭಯೋತ್ಪಾದಕರು ಎಂದೇ ನೇತ್ಯಾತ್ಮಕವಾಗಿ ಚಿತ್ರಿಸಲಾಗಿದೆ.
ಆದರೆ wild wild ನ ಚಿತ್ರದ ವಿಶೇಷತೆ ಇರುವುದು ಇಲ್ಲಿಯೇ! ತೀರ್ಮಾನಗಳನ್ನು ಅದು ಪ್ರೇಕ್ಷಕರಿಗೇ ಬಿಡುತ್ತದೆ. ಬಹಳ ವಸ್ತುನಿಷ್ಠವಾಗಿ ಅಮೇರಿಕನ್ ಆಡಳಿತ ವ್ಯವಸ್ಥೆ , ಗ್ರಾಮವಾಸಿಗಳು ಮತ್ತು ಅವುಗಳ ವಿರುದ್ಧ ನಿಂತ ಓಶೋ ಅನುಯಾಯಿಗಳ ಎಲ್ಲರ ಅಭಿಪ್ರಾಯಗಳನ್ನೂ ಇಲ್ಲಿ ದಾಖಲಿಸಲಾಗಿದೆ. ಪರವಿರೋಧಗಳ ಸಮತೋಲನ ವೀಕ್ಷಣೆ ಇಲ್ಲಿದೆ.
ಎಲ್ಲವನ್ನೂ ಮಾರಿಕೊಂಡು ಆಶ್ರಮದಲ್ಲಿ ನೆಲಸಲು ಬಂದವರು ‘ಭಗವಾನ’ರಿಂದ ವಿದಾಯ ಹೊಂದಿ ನೆಲೆಯಿಲ್ಲದ ಜಾಗಕ್ಕೆ ಮರಳುವಾಗ ಅನೇಕ ಅಮೇರಿಕನ್ನರು ದುಃಖಿಸಿರುವಂತೆಯೇ, ಗ್ರಾಮವಾಸಿಗಳು ಕೆಲವರು ನಿರಾಳದ ನಿಟ್ಟುಸಿರು ಬಿಟ್ಟಿದ್ದಾರೆ. ಒರೆಗಾನ್ ನಲ್ಲಿನ ಅವರ ವಾಸ್ತವ್ಯ ಅಕ್ರಮವಾದುದಲ್ಲ ಎಂದು‌ ಆನಂತರ ಅಮೇರಿಕನ್ ವ್ಯವಸ್ಥೆಗೆ ತಿಳಿದು ಬಂದಿತು. ಆವೇಳೆಗೆ ಪುಣೆ ಸೇರಿದ ಓಶೋ ಮತ್ತೆ ಆಶ್ರಮದ ಚಟುವಟಿಕೆಗಳನ್ನು ಪ್ರಾರಂಭಿಸಿದ್ದರು. ೧೯೯೦ ರಲ್ಲಿ ಒಂದು ದಿನ ಮಲಗಿದವರು ಏಳವುದಿಲ್ಲ. ಅವರಿಗೆ ಅಗತ್ಯಕ್ಕಿಂತ ಹೆಚ್ಚಿನ
ಪರಿಮಾಣದ ಔಷಧಿಯನ್ನು ಚುಚ್ಚಲಾಗಿತ್ತು ಎಂದು ಆನಂತರ ತಿಳಿದು ಬರುತ್ತದೆ. ಓಶೋ ಅವರದ್ದು ಸಹಜ ಮರಣವಲ್ಲ, ಕೊಲೆ ಎಂದು ಸಾಬೀತಾಗುತ್ತದೆ.

ಓಶೋ ಎಂದರೆ ಜ್ಞಾನಸಾಗರ. ಒಮ್ಮೆ ಪತ್ರಕರ್ತರ ಪ್ರಶ್ನೆಗೆ ಅವರು 1,65,000 ಪುಸ್ತಕಗಳನ್ಮು ಓದಿರುವೆನೆಂದು ಉತ್ತರಿಸುತ್ತಾರೆ. ಅವರನ್ನು ದಾರ್ಶನಿಕನಾಗಿ ಕಂಡುಕೊಂಡವರಿಗೆ ಅವರ ಹೋರಾಟದ ಇನ್ನೊಂದು ಮುಖ ಕಾಣಬೇಕೆಂದರೆ ‘wild wild ..’ ನೋಡಬೇಕು. ಒಂದು ಅದ್ಭುತ ಸಾಕ್ಷ್ಯ ಚಿತ್ರವಾಗಿ ಕಾಣಿಸುತ್ತದೆ. ಯಾವ ವಿಷಯದಲ್ಲೂ ಈ ಚಿತ್ರ ನಿರ್ಣಾಯಕವಾಗಿ ಒಂದು ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಅಲ್ಲಿ ಬರುವ ಪಾತ್ರಗಳೇ ಆ ಕೆಲಸವನ್ನು ಮಾಡುತ್ತವೆ.

ಫೋಟೋ ಕೃಪೆ: google

ಓಶೋ ಅವರು ಬರೆದದ್ದು ಎರಡೇ ಪುಸ್ತಕ, ಅದೂ ಖಾಸಗಿ ದಿನಚರಿಗಳದ್ದು. “Cup of Tea” ಮತ್ತು “Seeds of Wisdom.” ಉಳಿದ ೬೫೦ ಕ್ಕೂ ಹೆಚ್ಚಿನ ಪುಸ್ತಕಗಳು ಅವರ ಬೆಳಗಿನ ಮತ್ತು ಸಂಜೆಯ ಪ್ರವಚನಗಳಿಂದ ಆಯ್ದ ಸಂಗ್ರಹಗಳು, ಎಂದು ವಿಕಿಪೀಡಿಯ ಹೇಳುತ್ತದೆ. ಬೋಧಿ ಧರ್ಮ ಮತ್ತು ಝೆನ್ ಕುರಿತಾದ ಅವರ ವಿಚಾರ ಧಾರೆಗಳು, ಸಂಭೋಗ್ ಸೆ ಸಮಾಧಿ ತಕ್ ಮತ್ತು, ಧ್ಯಾನ, ಕ್ರಿಶ್ಚಿಯಾನಿಟಿ, ಧಮ್ಮಪಾದ ಕುರಿತಾದ ಕೃತಿಗಳು, ಮುಲ್ಲಾ ನಸರುದ್ದೀನನ ಹಾಸ್ಯಗಳು, ಮಾನಸ ಚಿಕಿತ್ಸೆ( psycho therapy), ಸಮಾಜವಾದ ಹೀಗೆ ಅವರ ಪುಸ್ತಕಗಳು ಅವರ ಆಸಕ್ತಿಯ ವೈವಿಧ್ಯವನ್ನು‌ ಬಯಲಾಗಿಸುತ್ತವೆ.

ಈ ಚಿತ್ರದ ಮಿತಿಯೆಂದರೆ ನಾವು ಭಾರತದಲ್ಲಿ ಕಂಡ, ಮೇಲಿನ‌ ಅವರ ಗ್ರಂಥಗಳ ಮೂಲಕ ಗ್ರಹಿಸಿದ ‘ಮೇರು ಓಶೋ’ ಇಲ್ಲಿ ಸಿಕ್ಕುವುದಿಲ್ಲ. ಅವರ ದಾರ್ಶನಿಕ ಮುಖ ಮರೆಯಾಗಿದೆ. ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವುದೇ ಕಡಿಮೆ. ಆದರೂ ಅಮೇರಿಕಾದ ವಿರುದ್ಧ ಸೆಡ್ಡು ಹೊಡೆದು ಸೋತರೂ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಪ್ರಪಂಚದ ಅನೇಕ ದೇಶಗಳಲ್ಲಿ ಓಶೋ ಸಂಸ್ಥೆಗಳಿವೆ. ಲಕ್ಷಾಂತರ ಅನುಯಾಯಿಗಳಿದ್ದಾರೆ. ಜಗತ್ತಿನ ಹಲವಾರು ಭಾಷೆಗಳಿಗೆ ಅವರ ಪುಸ್ತಕಗಳು ಅನುವಾದಗೊಂಡಿವೆ. ‘ಬುದ್ಧ ದೇವ’ ಎಂದು ಅವರನ್ನು ಕರೆದವರಿದ್ದಾರೆ. ಓಶೋ ಒಂದು ಶಕ್ತಿ ಎಂಬ ಗ್ರಹಿಕೆ ಪೂರ್ಣವಾಗಬೇಕಾದರೆ wild wild ನೋಡ ಬೇಕು. ಎಲ್ಲಾ ಉಪಾಧಿಗಳನ್ನು ಹರಿದುಕೊಂಡು ಉಕ್ಕುವ ಸಾಗರ ‘ಓಶೋ’ ಎಂಬ ಅರಿವಾಗುತ್ತದೆ.

Maclain Way, Chapman Way ನಿರ್ದೇಶಕರು.
ನೋಡಿ ನೆಟ್ ಫ್ಲಿಕ್ಸ್ ನಲ್ಲಿದೆ.


  • ಗಿರಿಜಾ ಶಾಸ್ತ್ರೀ (ಇಂಗ್ಲಿಷ್ ಉಪನ್ಯಾಸಕರು,ಲೇಖಕರು), ಮುಂಬೈ 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW