ಲೇಖಕಿ ಗೀತಾ ಕುಂದಾಪುರ ಅವರು ತಮ್ಮ ಕಥೆಗಳ ಮೂಲಕ ಈಗಾಗಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿದ್ದಾರೆ. ‘ ಪಾಂಚಾಲಿಯಾಗಲಾರೆ ‘ ಇದು ಅವರ ಏಳನೆಯ ಕೃತಿಯಾಗಿದ್ದು, ಈ ಕಥಾ ಸಂಕಲನದಲ್ಲಿ ಒಟ್ಟೂ ೧೮ ಕಥೆಗಳಿವೆ. ವಿಮರ್ಶಕಿ ಮಾಲತಿ ರಾಮಕೃಷ್ಣ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಪಾಂಚಾಲಿಯಾಗಲಾರೆ.
ಲೇಖಕರು: ಗೀತಾ ಕುಂದಾಪುರ.
ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಶನ್ಸ್ ಬೆಂಗಳೂರು.
ಮುದ್ರಣದ ವರ್ಷ: ೨೦೨೪.
ಪುಟಗಳು: ೧೨೦.
ಬೆಲೆ: ರೂ. ೧೬೦.
ಗೀತಾ ಕುಂದಾಪುರ ಅವರ ‘ಪಾಂಚಾಲಿಯಾಗಲಾರೆ’ ಕೃತಿಗೆ ಇದಕ್ಕೆ ಮತ್ತೊಬ್ಬ ಖ್ಯಾತ ಲೇಖಕಿ ವಸುಮತಿ ಉಡುಪ ಅವರು ಸೊಗಸಾಗಿ ಮುನ್ನುಡಿಯನ್ನು ಬರೆದಿದ್ದಾರೆ. ಅಪರೂಪದ ಮುಖ ಪುಟ ಚಿತ್ರವೂ ಕೂಡ ಪುಸ್ತಕದ ಅಂದ ಹೆಚ್ಚಿಸಿದೆ.

ನಿನ್ನೆ ತಾನೇ ನನಗೆ ತಲುಪಿದ ಈ ಪುಸ್ತಕ ಬಿಡದೇ ನನ್ನಿಂದ ಓದಿಸಿ ಕೊಂಡಿತು. ಇದು ‘ ಪಾಂಚಾಲಿಯಾಗಲಾರೆ’. ಎನ್ನುವ ತನ್ನ ವಿಶೇಷ ಶೀರ್ಷಿಕೆಯಿಂದ, ಸಂಕಲನಕ್ಕೆ ಸೂಕ್ತ ಹೆಸರಿನ ಹಾಗೂ ಕಥಾವಸ್ತುವಿನಿಂದ ಗಮನ ಸೆಳೆದ ಕಥೆಯೆನಿಸಿತು. ಹಾಗಾಗಿ ಮೊದಲ ಪರಿಚಯ ಇಲ್ಲಿಂದಲೇ ಆಗಲಿ ಅಲ್ಲವೇ?…
- ವಿಧಿ ಕೆಲವರ ಪಾಲಿಗೆ ಅದೆಷ್ಟು ಕ್ರೂರಿ. !
ಜಾನಕಿ ಎಂಬ ಬಡ ಹೆಣ್ಣು ಮದುವೆಯಾಗಿ ಆರು ತಿಂಗಳಿಗೆ ಗಂಡನನ್ನು ಕಳೆದು ಕೊಂಡಿದ್ದಳು. ಆತ ‘ಹೃದ್ರೋಗಿ’ ಎಂಬ ವಿಷಯ ಮುಚ್ಚಿಟ್ಟ ಗಂಡನ ಮನೆಯವರು ಈಗ ಅವಳನ್ನು ತವರಿಗಟ್ಟಿದ್ದರು. ವಿಧವೆಯಾದ ಅವಳಿಗೆ ಇಲ್ಲಿ ಪಾಲಿತ್ತು. ಈ ಬಾರಿಯೂ ಸ್ವಾರ್ಥದಿಂದ ಅವಳಿಗೆ ಮೋಸ ಮಾಡಿ, ‘ಪೋಲಿಯೋ ಪೀಡಿತ’ ಮತ್ತೊಬ್ಬ ಮಗನಿಗೆ ಎರಡನೇ ಮದುವೆ ಮಾಡಿಸಿಕೊಂಡಿದ್ದರು. ಆದರೆ ನಾಲ್ಕು ವರ್ಷಗಳಾದರೂ ಮಕ್ಕಳಾಗದಾಗ ವಿಚ್ಛೇದನ ನೀಡಿದ್ದರು.!
ನಂತರ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದವಳನ್ನು ವಿಧುರ ವೃದ್ಧ ರಘುರಾಮ ರಾಯರು ವರಿಸಿದ್ದರು. ಜಾನಕಿಯ ಬಡತನದ ಬದುಕು ಮುಗಿದು ಶ್ರೀಮಂತರ ಮನೆ ಸೇರಿ,ಹೊರದೇ , ಹೇರದೇ ಅವರ ಮಕ್ಕಳ ಮದುವೆಯಲ್ಲಿ ಜೊತೆಯಾಗಿ ಗಂಡನೊಡನೆ ನಿಂತು ತನ್ನ ಕರ್ತವ್ಯ ಪಾಲಿಸಿದಳು. ಆದರೆ ಇಲ್ಲೂ ಅವಳ ಅದೃಷ್ಟ ಕೈ ಹಿಡಿಯಲಿಲ್ಲ. ಕೊರೋನದಿಂದ ರಾಯರು ಆಸ್ಪತ್ರೆಗೆ ಸೇರಿ ಬದುಕುವುದು ಸಂದೇಹವಾಗಿತ್ತು.ಅವಳ ೪೩ ನೆಯ ವಯಸ್ಸಲ್ಲಿ ಮಕ್ಕಳು ಮತ್ತೆ ಮದುವೆ ಮಾಡಲು ಯೋಚಿಸಿದರ ಹಿಂದಿನ ಉದ್ದೇಶವೇನು?..
ಆಗ ಅವಳು ಬಾಲ್ಯದಲ್ಲಿ ಗೋಪಿಯೊಡನೆ ನಡೆದ ಆಟದ ಮದುವೆಯ ‘ನಾಲ್ಕನೇ’ ನೆನಪನ್ನು ಲೆಕ್ಕ ಹಾಕಿ , ದುಃಖದಿಂದ ತನ್ನನ್ನು’ ಪಾಂಚಾಲಿಯಾಗಿಸ ಬೇಡ’ ಎಂದು ಮೊರೆಯಿಟ್ಟಳು. ಜಾನಕಿಯ ಕರೆ ದೇವರಿಗೆ ಕೇಳಿಸಿತೆ?…. ಎಂಬುದನ್ನು ಮುಂದೆ ಓದಿಯೇ ತಿಳಿಯಬೇಕು. ವಿಭಿನ್ನ ಕಥಾವಸ್ತುವಿನ ಸೊಗಸಾದ ನಿರೂಪಣೆ ಲೇಖಕಿಯ ಜಾಣ್ಮೆಯನ್ನು ತೋರುತ್ತದೆ.
* ಸಿಂಗಾರಿಗೆ ತಾನು ಆರು ತಿಂಗಳ ಹಿಂದೆ ಬಿಟ್ಟು ಹೋದ ತನ್ನೂರಾದ ಬನ್ನೂರು ಅಪರಿಚಿತವಾಗಿ ಕಾಣಲು ಕಾರಣವೇನು?.. ಇಂದಿನ ವ್ಯಾವಹಾರಿಕ ಜಗತ್ತಿನ ಸಂಬಂಧಗಳ ಬಗ್ಗೆ ಹೇಳುವ “ಹೆದ್ದಾರಿಯಲ್ಲಿ ನಿಂತ ಬದುಕು” ಎನ್ನುವ ಹೃದಯಸ್ಪರ್ಶಿಯಾದ ಕಥೆ.
- ಆಟಿ ಕಾಲದ ಸ್ವಾಮಿ
ಆಟಿ (ಆಷಾಡ) ಯಲ್ಲಿ ದುಡಿ ಬಾರಿಸುವ ಸುಬ್ರಾಯ ನೊಂದಿಗೆ ‘ಬಣ್ಣ ಹಚ್ಚಿಯೂ ಅಳಿಸದ ಮುಖದ ಗೆರೆ’ಯನ್ನು ಸೇರಿಯೇ ಅಲಂಕಾರ ಮಾಡಿ ಕೊಂಡ ದಾಮು ಕೋಪಾಳ ತನ್ನ ಕಾಯಕಕ್ಕೆ ಹೊರಟಿದ್ದ. ಎನ್ನುವ ಬಣ್ಣನೆಯೇ ಬಲು ಸೊಗಸಾಗಿದೆ.
ಅದೇ ಊರಿನ ‘ಶ್ರೀಹರಿ ನಿಲಯ’ದ ಆಸ್ತಿ ಪಾಲಿನ ಕುರಿತು ಸ್ವಾಮಿಯಾಗಿ ನ್ಯಾಯದ ತೀರ್ಪು ಕೊಡುವ ದಾಮುವಿಗೆ ತನ್ನ ಮನೆಯ ಮಾರಾಟದ ವಿಷಯವನ್ನೇ ತಿಳಿಸದ ಎರಡನೇ ಹೆಂಡತಿಯ ಮೋಸ ಗೊತ್ತಾಗದೇ ಇದ್ದದ್ದು ವಿಪರ್ಯಾಸ! .
ಸಿನಿಮಾ ನಟ ಪುನೀತ ರಾಜ್ ಕುಮಾರ್ ಅವರ ಮರಣದ ಸುದ್ದಿಯ ಕಿರು ಎಳೆಯೊಂದು ಕಥೆಯಲ್ಲಿ ಸಂಗತಿಯಾಗಿ ಮೂಡಿದೆ. ಇದನ್ನು ಸಮಾಜದ ಅಭಿಮಾನಿ ಜನರ ಮನ ಅರಿತಂತೆ ಲೇಖಕಿ ಸೂಕ್ಷ್ಮವಾಗಿ ಬಳಸಿದ ರೀತಿ ಹಿಡಿಸಿತು.
- ಮಾಟ ಮಂತ್ರದ ವಿಷಯದ ಶಾಸ್ತ್ರ ಹೇಳಿ ಮುಗ್ಧ ಜನರನ್ನು ವಂಚಿಸುವ ‘ಕವಡೆಯಾಟವಯ್ಯಾ’ ಕಥೆ ಕೂಡ ಚೆನ್ನಾಗಿದೆ.
- ಸಂಪಾದನೆ ಇಲ್ಲದ ಕವಿ ಮನಸ್ಸಿನ ಯುವ ವಕೀಲನನ್ನು ಮೆಚ್ಚಿ ಮದುವೆಯಾದ ಇಂಜಿನಿಯರ್ ಹುಡುಗಿ ಕಾವ್ಯಾ ಅವನನ್ನು ಹಣ ಹಾಗೂ ಯಶಸ್ಸಿನ ಹಿಂದೆ ಬೀಳಿಸಿದ್ದಳು. ಆದರೆ ಅವನ ಗೆಲುವಿಗೆ ಬಲಿಯಾಗಿದ್ದೇನು?…
‘ಏಳನೆಯ ತಿರುವಿ’ನ ಈ ಕಥೆಯಲ್ಲಿ ದಂಪತಿಗಳು ತೆಗೆದು ಕೊಂಡ ನಿರ್ಧಾರವೇನು?… ಚಾರ್ಮಾಡಿ ಘಾಟಿನ ಪ್ರತಿ ಹತ್ತು ತಿರುವಿನಲ್ಲಿ ಅವರಿಬ್ಬರ ಏಳು -ಬೀಳುಗಳ ಪ್ರಸಂಗವನ್ನು ಚುರುಕು ಸಂಭಾಷಣೆಗಳ ಮೂಲಕ ಮೆಲುಕು ಹಾಕಿದ್ದು ಮೆಚ್ಚುಗೆಯಾಗುತ್ತದೆ.
- ಬೆಕ್ಕಿನ ಕಣ್ಣು
ವಿದ್ಯಾ ಗಂಡನ ಕಷ್ಟದ ದಿನದಲ್ಲಿ ಜೊತೆಯಾಗಿ ನಿಂತು ಮುಚ್ಚುವಂತಿದ್ದ ಸ್ಥಿತಿಯ ಫ್ಯಾಕ್ಟರಿಯ ಆಡಳಿತ ವಹಿಸಿ ಒಂದು ಹದಕ್ಕೆ ತಂದಿದ್ದಳು. ಜ್ಯೋತಿಷಿಯ ಮಾತು ಕೇಳಿ ಗಂಡ ಪ್ರಭು ಹಸಿರು ಬಣ್ಣ ತನಗೆ ಆಗಿ ಬರುವುದಿಲ್ಲವೆಂದು ಬೆಕ್ಕಿನ ಕಣ್ಣಿನ ಹೆಂಡತಿಯನ್ನೇ ದೂರಮಾಡಿದ್ದ.!!
ವರ್ಷ ಕಳೆದ ನಂತರ ನೀನೇ ನನ್ನ ಅದೃಷ್ಟ ಲಕ್ಷ್ಮಿ ಮನೆಗೆ ಬಾ… ಎಂದು ಕರೆದವನ ಗ್ರಹಣದ ಮನಸ್ಥಿತಿ ಸರಿ ಪಡಿಸಲು ವಿದ್ಯಾ ಹೂಡಿದ ಉಪಾಯವೇನು? … ವಿದ್ಯಾವಂತ ಜನರ ಅವಿದ್ಯಾವಂತಿಕೆಯನ್ನು ತೋರುವ ಕಥೆ.
- ರಂಗ ಸ್ಥಳ.
ಕಲಾವಿದ ಪೆತ್ರಾಣಿಯವರು ತಮ್ಮ ಮಗ ವೇಣುವಿಗೆ ಯಕ್ಷಗಾನ ಕಲೆಯನ್ನು ಧಾರೆಯೆರೆಯಲು ಎಷ್ಟೇ ಪ್ರಯತ್ನಿಸಿದರೂ ಅದು ಫಲಿಸದೇ ನಿರಾಶರಾಗಿದ್ದರು. ಕೆಲಸದವನ ಮಗ ಗೋಪುವಿಗೆ ಒಲಿದ ಕಲೆಯ ಬಗ್ಗೆ ಅಸೂಯೆ ಪಟ್ಟ ಪೆತ್ರಾಣಿ ಯವರು ಗುರು ದಕ್ಷಿಣೆಯಾಗಿ ಅವನಿಂದ ಕೇಳಿದ್ದೇನು?.. ಅವರು ರಂಗಸ್ಥಳಕ್ಕೆ ನ್ಯಾಯ ಒದಗಿಸಿದರೆ? …
ಒಂದೇ ಪುಟದ ಅರ್ಥವತ್ತಾದ ಚಿಕ್ಕ ಕಥೆಗಳು ಸಹಾ ಇಲ್ಲಿವೆ.
- ನಾಟಕ ಕಂಪನಿಯಲ್ಲಿ ನಟಿಸುತ್ತಿದ್ದ” ಕುಂಟು ಹುಡುಗಿ” ಯೊಬ್ಬಳು ತನ್ನ ಪ್ರೀತಿಸುವ ಜವಾಬ್ದಾರಿ ಹೊರಲು ಸಿದ್ದನಾದ ಆಟೋ ಚಾಲಕ ದಿನೇಶನನ್ನು ನಿರಾಕರಿಸಿ ಶ್ರೀಮಂತ ವೃದ್ಧನನ್ನು ವರಿಸಿದ್ದೇಕೆ?… ‘ಗುಣಕ್ಕಿಂತ ಹಣವೇ ಪ್ರಧಾನ’ ಎನ್ನುವುದೇ ಇಲ್ಲಿ ಕುಸುಮಾಳ ಮನಸ್ಥಿತಿಯಾಗಿತ್ತೇ? …ನೀವೂ ಓದಿ…
- ‘ಜಾಹೀರಾತು’ ಪ್ರಪಂಚದಲ್ಲಿ ನಟಿಸುವ ಮುಗ್ಧ ಹುಡುಗಿಗೆ ದುಬಾರಿ ಚಾಕಲೇಟು ತಿನ್ನುವುದು ಕೇವಲ ನಟನೆಯಲ್ಲಿ ಮಾತ್ರ ಎಂಬ ಸತ್ಯ ಓದಿ ಕರುಳು ಚುರ್ ಎಂದಿತು.
- ಹೂವು ಮಾರುವ ಹುಡುಗಿಯ ಕಪ್ಪು ಸುಂದರ ಮುಖ ನೋಡುತ್ತಾ ‘ತಾಜಾ ಹೂವು’ ಕೊಂಡ ಅನ್ವೇಶ ಮೇಕಪ್ ಮಾಡಿಕೊಂಡ ಹೆಂಡತಿಯೊಂದಿಗೆ ಮದುವೆ ಮನೆಗೆ ಹೊರಟಿದ್ದ. ಆ ಕ್ಷಣ ಕೃತಕ ಮಲ್ಲಿಗೆ ದಂಡೆ ಅರಳಿದಾಗ ಹೆಂಡತಿ ‘ಹೂವಿಗೂ ಮೇಕಪ್, ಯಾರೂ ಮುಗ್ಧರಲ್ಲ’ ಎನ್ನುವುದು ಮಾರ್ಮಿಕವಾಗಿದೆ.
- ಅಭಿವೃದ್ಧಿಯ ಹೆಸರಲ್ಲಿ ಸರ್ಕಾರ ಮರ ಕಡಿದು ಕಾಡು ನಾಡಾಗಿ ಪರಿವರ್ತನೆ ಹೊಂದುತ್ತಿದ್ದಂತೆ ಕೋತಿಗಳು ಕೂಡ ಹೇಗೆಲ್ಲಾ ಬದಲಾಗಿ ಬಿಟ್ಟವು!!
ಪೇಟೆಯ ಮಂದಿ ನೀಡುವ ತಿಂಡಿ ತಿಂದು ‘ಮನುಷ್ಯ’ ರಂತೆ ವರ್ತಿಸತೊಡಗಿದ ಕೋತಿಗಳ ಕಾಟ ತಡೆಯದೇ ಕಾಡಿಗೆ ಬಿಟ್ಟು ಬಂದರೆ, ಅಲ್ಲೂ ಸಲ್ಲದ ಅವುಗಳನ್ನು ಕಾಡಿನ ಕೋತಿಗಳು ಓಡಿಸಿದವು… ಎನ್ನುವ ‘ಕೋತಿಯಾಟ ‘ದ ಕಥೆ ಇಂದಿನ ಅತಂತ್ರ ಬದುಕಿಗೆ ಹಿಡಿದ ಕನ್ನಡಿಯಂತಿದೆ.
- ಅಗ್ಗಿಷ್ಟಿಕೆ
ಪ್ರಾಮಾಣಿಕ ಪತ್ರಿಕಾ ಸಂಪಾದಕನೊಬ್ಬ ಹೆಸರಿದ್ದರೂ ಹೆಚ್ಚು ಆದಾಯವಿಲ್ಲದ ತನ್ನ ‘ಅಗ್ಗಿಷ್ಟಿಕೆ’ ಎಂಬ ದಿನಪತ್ರಿಕೆಯನ್ನು ಮುಚ್ಚುವ ಬಗ್ಗೆ ಯೋಚಿಸುವುದನ್ನು ಲೇಖಕಿ ಅವನ ವೃತ್ತಿ ಮತ್ತು ಕುಟುಂಬದ ಜೊತೆಯಲ್ಲಿ ಸಮೀಕರಿಸಿದ್ದು ಅದ್ಭುತವಾಗಿದೆ. ಕಡೆಗೂ ಸೋದರನ ಮಗನ ಮದುವೆಯಲ್ಲಿ ನಂಬಲಾರದ ಸತ್ಯ ಘಟಿಸಿ ಸುಖಾಂತ್ಯ ಕಾಣುತ್ತದೆ.
•ನೆರಳಿನೊಳಗಿನ ಬೆಳಕಿನಾಟ’ ಈ ಕಥೆಯಲ್ಲಿ ವಿಕ್ರಮ್ ಸೇತು ಎಂಬ ಕೊಡಗಿನ ಶ್ರೀಮಂತ ಕಾಫಿ ಪ್ಲಾಂಟರ್ ಅನೇಕ ಸುಂದರಿಯರ ಜೊತೆ ಮೋಜಿನ ಜೀವನ ನಡೆಸುತ್ತಿದ್ದ. ಅವನ ಹೆಂಡತಿ ನೀತಾ ಮಾತ್ರ ಗಂಡನಿಂದ ಸದಾ ಅಂತರ ಕಾಪಾಡಿ ಕೊಂಡು ಸಮಾಜ ಮುಖಿ ಕೆಲಸಗಳಿಂದ ಎತ್ತರಕ್ಕೇರಿದ್ದರು. ಕಾಲ ಕಳೆದು ಬೆಳೆದ ಮಗ ‘ಆರ್ಯ’ ಅಪಘಾತ ಗೊಂಡಾಗ ಅವನಿಗೆ ಹೃದಯದ ಕಸಿ ಮಾಡಬೇಕೆಂದು ಡಾಕ್ಟರ್ ಹೇಳುತ್ತಾರೆ. ಆದರೆ ‘ಅಂಗಾಂಗ ದಾನ’ದ ಈ ಪ್ರಕ್ರಿಯೆಯ ಫಲಿತಾಂಶವೇನು?
- ನೆರೆ
ತನ್ನ ಮಗಳು ಗಾಯತ್ರಿ ‘ನರ್ಸ್’ ಆಗುತ್ತೇನೆ ಎಂದಾಗ ಚಂದ್ರಣ್ಣ ವಿರೋಧಿಸಿದ್ದರು. ಆದರೆ ಹಠ ಹಿಡಿದು ಮಗಳು ಮನೆ ಬಿಟ್ಟು ಹೋಗಿದ್ದಳು. ಮುಂದೆ ಮಳೆಯ ಪ್ರವಾಹದಿಂದ ಊರು ನೆರೆಯಲ್ಲಿ ಮುಳುಗಿದಾಗ ಆ ಸಂತ್ರಸ್ತ ಜನರಲ್ಲಿ ಚಂದ್ರಣ್ಣನೂ ಒಬ್ಬನಾಗಿದ್ದ. ಆಗ ಮಗಳು ಗಾಯತ್ರಿಯನ್ನು ನೆನಪಿಸಿ ಕೊಳ್ಳುವ ಚಂದ್ರಣ್ಣನಿಗೆ ಜ್ಞಾನೋದಯವಾಗಿದ್ದು ಹೇಗೆ?…
ಎನ್ನುವದನ್ನು ಮನೋಜ್ಞವಾಗಿ ಲೇಖಕಿ ಚಿತ್ರಿಸಿದ್ದಾರೆ.
• ವೃದ್ಧ ಸದಾನಂದರು ಹೆಂಡತಿ ಸುನಂದಾ ತೀರಿದ ಮೇಲೆ ಒಂಟಿಯಾಗಿ ಇಲ್ಲಿದ್ದರೆ, ಮಕ್ಕಳು ಕೆಲಸದ ಪ್ರಯುಕ್ತ ದೂರದೂರು, ವಿದೇಶದಲ್ಲಿ ನೆಲೆಸಿದ್ದರು. ಎಲ್ಲರಿಗೂ ಅವರವರದೇ ಸಂಸಾರದ ಭಾರ. ಇನ್ನು ಇವರ ಹೊರೆ ಯಾರಿಗೆ ಬೇಕು?.. ಹೀಗಿರುವಾಗ ಅವರ ಜೀವನದಲ್ಲೂ ಒಂದು ಆಕಸ್ಮಿಕ ಜರುಗಿತ್ತು! ಇದೇ ‘ಯೂ ಟರ್ನ್’ ಕಥೆಯ ಹೂರಣವಾಗಿದೆ.
- ನೆರಳಿನಲ್ಲಿ ಕಂಡ ಮುಖ.
ಅಮ್ಮ ತೀರಿದ ಮೇಲೆ ಹೀಗೆ..ದಿನವೂ ಹೆಂಡತಿ ರಾಧಿಕಾ ಮತ್ತು ಅಪ್ಪನ ಜಗಳದ ಮೂಲ ಕಾರಣವನ್ನು ಹುಡುಕುವುದರಲ್ಲಿ ಸುಸ್ತಾಗಿ ಬಿಡುತ್ತಿದ್ದ ಕರಣ್. ಈ ಮಾವ ಸೊಸೆ ಸರಿಯಾಗುವುದು ಎಂದು?… ತಾನು ಅವರ ಸ್ವಂತ ಮಗನಲ್ಲ ಎಂಬ ಸತ್ಯದ ಅನ್ವೇಷಣೆಯಿಂದ ಕರಣ್ ಗೆ ತಾನು ಅನಾಥಾಶ್ರಮದಿಂದ ಬಂದವನೆಂದು ತಿಳಿದಿತ್ತು. !!ಅಪ್ಪನಿಗೆ ಬುದ್ಧಿ ಕಲಿಸಲು ಹೆಂಡತಿಯೊಂದಿಗೆ ಹಳ್ಳಿಗೆ ಹೋಗಿ ನೆಲೆಸಿದ ಕರಣ್ ತಿರುಗಿ ಬಂದಾಗ ಕಂಡಿದ್ದೇನು?…
- ಶಶಿಯ ಶರ ಪಂಜರ
ಎಂಜಿನಿಯರಿಂಗ್ ವಿದ್ಯಾರ್ಥಿ ಶಶಿಧರ ಕುಡಿದ ಮತ್ತಲ್ಲಿ ಅಪ್ರಾಪ್ತ ಬಾಲಕಿಯ ಬಲಾತ್ಕಾರ ಮಾಡಿ ಸಾವಿಗೆ ಕಾರಣನಾದನೆಂದು ಸೆರೆಮನೆಯ ಶಿಕ್ಷೆ ವಿಧಿಸಲಾಗಿತ್ತು. ಆದರೆ ನಿಜವಾಗಿ ಅಲ್ಲಿ ನಡೆದಿದ್ದೇನು? ಎಂಬ ಕಾರಣ ನೀವೇ ಓದಿ ತಿಳಿಯಿರಿ.
- ತಲ್ಲಣಿಸದಿರು ಮನವೇ.
ಪಲ್ಲವಿ ದೇವಸ್ಥಾನವೆಂದು ಹೊರಗೆ ಹೋಗಿದ್ದಾಗ ಮನೆಯಲ್ಲಿ ಕಳ್ಳತನವಾಗಿತ್ತು. ಹೆಚ್ಚು ಏನೂ ಅಂತಹ ನಷ್ಟವಾಗದಿದ್ದರೂ, ಗಂಡ ಮಕ್ಕಳ ಮಾತಿನಿಂದ ಅವಳು ಘಾಸಿ ಗೊಂಡಿದ್ದಳು. ‘ ನಮ್ಮನೆ ಅಡುಗೆ’ ಎನ್ನುವ ಯೂಟ್ಯೂಬ್ ಚಾನಲ್ ಪ್ರಾರಂಭಿಸಿ ಜನಪ್ರಿಯತೆ ಗಳಿಸಿದ ಪಲ್ಲವಿಯ ಸಾಧನೆಗಳು ಮದ್ಯಮ ವರ್ಗದ ಗೃಹಿಣಿಯರಿಗೆ ಪ್ರೋತ್ಸಾಹ ನೀಡುವಂತಿದೆ.
ಅವಳ ಮನೋವಿಕಾಸ ಸಹಿಸದ ಗಂಡನ ವಿಕ್ಷಿಪ್ತ ಮನಸ್ಥಿತಿಯನ್ನು ಕೂಡ ಲೇಖಕಿ ಅಷ್ಟೇ ನೈಜವಾಗಿ ಕಟ್ಟಿ ಕೊಟ್ಟಿದ್ದಾರೆ. ಕಡೆಗೂ ಮಾನಸಿಕ ತಜ್ಞರ ಬಳಿ ಗಂಡನನ್ನು ಕರೆದೊಯ್ಯಲು ಪಲ್ಲವಿ ಮಾಡಿದ್ದೇನು… ?

* ಇಲ್ಲಿನ ಕಥೆಗಳಲ್ಲಿ ಬಳಸಿದ {ದಡಲ್ಲನೆ, ಕಪ್ಪು ಹೊಗೆಯುಗುಳುವ ಹಳ್ಳಿ ಹೈಕಳ ಬೈಕುಗಳು, ಅಬ್ಬಲಿಗೆ ಹೂವಿನ ದಂಡೆ, ನಗದವರೂ ಕ್ಯಾಮರಾ ಮುಂದೆ ನಕ್ಕರು. ಯಾರೂ ಹೇಳಿದ್ದನ್ನು ಕೇಳದ ಸಮಯ } ಇಂತಹ ಸರಳ ಪದಗಳು ಮತ್ತು ಕೆಲವು ಕಡೆ ಕುಂದಾಪುರ ಕನ್ನಡ ಭಾಷಾ ಪ್ರಯೋಗಗಳು ಬಹಳ ಇಷ್ಟವಾದವು.
* ಈ ಕಥಾ ಸಂಕಲನವನ್ನು ವಿಶ್ವಾಸದಿಂದ ನನಗೆ ಕಳಿಸಿ ಕೊಟ್ಟ ಲೇಖಕಿ ಗೀತಾ ಕುಂದಾಪುರ ಮೇಡಂ ಅವರಿಗೆ ನನ್ನ ವಂದನೆಗಳು.
ಇಲ್ಲಿನ ಎಲ್ಲಾ ಕಥೆಗಳೂ ಚೇತೋಹಾರಿಯಾಗಿವೆ. ಸಮಾಜದಲ್ಲಿ ನಡೆಯುವ ಘಟನೆಗಳ ಸುತ್ತಲಿನ ಸುದ್ದಿಗಳು ಇವರ ಲೇಖನಿಯಲ್ಲಿ ಕಥೆಯಾಗಿ ರೂಪುಗೊಂಡಿರುವ ರೀತಿಯೇ ರಮಣೀಯವಾಗಿದೆ ಎನ್ನಬಹುದು. ಕೆಲವು ಕಥೆಯ ಅಂತ್ಯ ಊಹೆಗೂ ಮೀರಿದ ಮುಕ್ತಾಯ ಕಂಡಿದ್ದು ಸೋಜಿಗವೆನ್ನಿಸಿತು.
‘ಕಥೆ ಬರೆಯುವುದೊಂದು ಚೆಂದದ ಕೆಲಸ ‘ ಎನ್ನುವ ಅವರಿಂದ ಇನ್ನಷ್ಟು ಕತೆಗಳನ್ನು ನಾವು ನಿರೀಕ್ಷಿಸ ಬಹುದಾಗಿದೆ. ಹೀಗೇ ವೈವಿಧ್ಯಮಯ ಚೆಂದ ಚೆಂದದ ಮತ್ತಷ್ಟು ಕತೆಗಳು ಇವರಿಂದ ರಚನೆಯಾಗಿ, ಕನ್ನಡದ ಸಾಹಿತ್ಯಲೋಕವನ್ನು ಅಲಂಕರಿಸಲಿ ಎಂಬ ಆಶಯಗಳು ನನ್ನದು.
- ಮಾಲತಿ ರಾಮಕೃಷ್ಣ ಭಟ್
