‘ಎಚ್ಚರವಿರಬೇಕು ಹೆಣ್ಣು ಎಚ್ಚರವಿರಬೇಕು… ಕೆಸರಿನ ಕೆಂದಾವರೆಯಂತೆ ನಿನ್ನಯ ಬದುಕು… ಸುತ್ತಲು ನಾರುತಿದೆ ವಿಕೃತ ಮನಗಳ ಹುಳುಕು…ಕವಿ ರವಿನಾಗ್ ತಾಳ್ಯ ಅವರ ಲೇಖನಿಯಲ್ಲಿ ಹೆಣ್ಣಿನ ಜಾಗೃತಿ ಕುರಿತು ಬರೆದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಎಚ್ಚರವಿರಬೇಕು ಹೆಣ್ಣು ಎಚ್ಚರವಿರಬೇಕು
ಸಡಿಲದ ಕಚ್ಚೆಯ ಕೊಚ್ಚೆಯ ಮನದ ಲುಚ್ಚರು
ಇಹರು ಬೂದಿಯು ಮುಚ್ಚಿದ ಕೆಂಡದ ಹಾಗೆ
ಎಚ್ಚರವಿರಬೇಕು ಎಲ್ಲೆಡೆ ಎಚ್ಚರವಿರಬೇಕು
ಹಸುಳೆಯೊ ತರುಣಿಯೊ ಮೂಕ ಪ್ರಾಣಿಯೊ
ವೃದ್ಧೆಯೊ ವೈದ್ಯೆಯೊ ರೋಗಿಯೊ ಯೋಗಿನಿಯೊ
ಕ್ಷಣಿಕದ ಸುಖಕ್ಕೆ ಯಾರನು ಬಿಡರು ರಕ್ಕಸರು
ಮೃಗಗಳ ಹಾಗೆ ಜೀವ ಮಾನವ ಸೆಳೆವರು
ಎಲ್ಲಿದೆ ನಾರಿಗೆ ನಿರ್ಭಯ ಸ್ವಾತಂತ್ರ್ಯ
ಜೀವವು ಮಾನವು ಎಂದಿಗೂ ಅತಂತ್ರ
ಹೂಮನ ಹೊಸಕಲು ನಿಲ್ಲದ ಕುತಂತ್ರ
ಮೊಳಗುತ್ತಲೇ ಇದೆ ಸ್ತ್ರೀ ರಕ್ಷಣೆಯ ಮಂತ್ರ
ಅಬಲೆಯಲ್ಲದವಳು ಕಾಮುಕರ ಬಲೆಯೊಳಗೆ
ಬಲೆಯ ಬೀಸಿದವರು ಸುರಕ್ಷಿತ ಬೋನೊಳಗೆ
ಉಂಡು ಮಲಗಿದರು ಹೆಣ್ಣಿನ ಚಿರ ನಿದ್ರೆಯೊಳಗೆ
ಭದ್ರತೆಯೆಲ್ಲಿ ಹೆಣ್ಣನು ಪೂಜಿಪ ಸಭ್ಯತೆಯೊಳಗೆ
ಮಾತುಗಳು ಕೃತಿಗಳಾಗದೆ ಕಳೆದುಹೋಗುತ್ತಿವೆ
ಹೆಣ್ಮನಸುಗಳು ಕ್ಷಣ ಕ್ಷಣಕೂ ಹೆಣಗಳಾಗುತ್ತಿವೆ
ಬಿಲದ ಹೆಗ್ಗಣಗಳಿಗೆ ಬೇಲಿಗಳು ನೆಪವಾಗುತ್ತಿವೆ
ಜೀವಕೂ ಮಾನಕೂ ನಿರ್ಭೀತ ಹೆಜ್ಜೆಗಳು ಕನಸಾಗಿವೆ
ಎಚ್ಚರವಿರಬೇಕು ಹೆಣ್ಣು ಎಚ್ಚರವಿರಬೇಕು
ಕೆಸರಿನ ಕೆಂದಾವರೆಯಂತೆ ನಿನ್ನಯ ಬದುಕು
ಸುತ್ತಲು ನಾರುತಿದೆ ವಿಕೃತ ಮನಗಳ ಹುಳುಕು
ಕೆಸರಿನ ನಡುವೆ ಸಾಗಲಿ ಎಚ್ಚರಿಕೆಯ ಬದುಕು
- ರವಿನಾಗ್ ತಾಳ್ಯ
