ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ ಸರ್ವಜ್ಞ. ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನ ಕುರಿತು ಡಾ.ಯಲ್ಲಮ್ಮ.ಕೆ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಸರ್ವಜ್ಞನ ಕಿರು ಪರಿಚಯ :
ಸರ್ವಜ್ಞ (ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎನ್ನಲಾಗಿದೆ). ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲದ ಕುರಿತು ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.
ಜನನ ಮತ್ತು ಬಾಲ್ಯ :
ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಅಬಲೂರ. ಇದು ಈಗ ಸರ್ವಜ್ಞನ ಅಬಲೂರ ಎಂದೇ ಪ್ರಸಿದ್ಧಿ ಪಡೆದಿದೆ. ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು – ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ.
‘ಕಾಲಂಗಳೊಳಗೆ ಮಳೆ | ಗಾಲ ಲೋಕಕೆ ಪ್ರಾಣ ಕಾಲವಾಱಱಲಿ ಕಡು ಚೆಲುವು – ಬೇಸಗೆಯ ಕಾಲವತಿಸುಖವು ಸರ್ವಜ್ಞ’. 48*
ಪ್ರಾಕೃತಿಕ ಜಗತ್ತನ್ನು ಹಿಂದೂ ಪಂಚಾಂಗದಂತೆ : ೬ ಋತುಗಳು ಮತ್ತು ೧೨ ಮಾಸಗಳು :
೧. ವಸಂತ ಋತು (ಚೈತ್ರ ‘March’ – ವೈಶಾಖ ‘April’ )
೨. ಗ್ರೀಷ್ಮಋತು – (ಜ್ಯೇಷ್ಠ ‘May’ – ಆಷಾಢ ‘June’)
೩. ವರ್ಷಋತು –(ಶ್ರಾವಣ ‘July’– ಭಾದ್ರಪದ ‘August’ )
೪. ಶರದೃತು (ಆಶ್ವಯುಜ ‘September ‘ – ಕಾರ್ತೀಕ ‘October’)
೫. ಹೇಮಂತ ಋತು (ಮಾರ್ಗಶಿರ ‘November’ – ಪುಷ್ಯ ‘December’ )
೬. ಶಿಶಿರ ಋತು (ಮಾಘ ‘January’ – ಫಾಲ್ಗುಣ ‘February’ ) ಎಂದು ವಿಂಗಡಿಸಿದ್ದನ್ನು ನೋಡಬಹುದು.
ಈ ಆರು ಋತುಗಳಲ್ಲಿ ಮಳೆಗಾಲವು ಲೋಕಕ್ಕೆ ಪ್ರಾಣವಾಗಿರುವುದು, ಕಾಲವಾರರಲಿ ಬೇಸಗೆ ಅಂದರೆ ‘ವಸಂತ’ಕಾಲ, ‘ವಸಂತಕಾಲವೇ ಸುಗ್ಗಿ ಸಂಭ್ರಮದ ಕಾಲ ವಾಗಿರುವುದರಿಂದ’ – ಅತಿಸುಖವು ಎಂದಿದ್ದಾನೆ ಕವಿ ಸರ್ವಜ್ಞ.
ಕಾಲಂಗಳೊಳಗೆ ಮಳೆ | ಗಾಲ ಕರ ಹೊಲ್ಲ
ಕಾಲವಾೞೆಸೆೞೊಳಗೆಲ್ಲ – ಬೇಸಗೆ
ಕಾಲ ಲೇಸೆಂದ ಸರ್ವಜ್ಞ. 49*
ಕಾಲಂಗಳಲ್ಲಿ ಮಳೆಗಾಲದಿ ನೀಲಾಗಸದಲ್ಲಿ ದಟ್ಟವಾದ ಕಪ್ಪಮೋಡಗಳು ಆವರಿಸಿರುವುದರಿಂದ ಸೂರ್ಯನ ಕಾಂತಿಯು ಸ್ವಲ್ಪಮಟ್ಟಿಗೆ ಮಂದವಾಗಿರುತ್ತದೆ. ಹಾಗಾಗಿ ಕಾಲವಾರರಲ್ಲಿ ಬೇಸಗಯೇ ಕಾಲವೇ ಲೇಸೆಂದಿದ್ದಾನೆ.
ಕಾಲದೊಳು ಮಳೆಗಾಲ, ಮಾಲೆಯೊಳು ಮಲ್ಲಿಗೆಯು,
ಕಾಲವಾರರಲಿ ಕಡು ಚೆಲುವ ಬೇಸಗೆಯ
ಕಾಲವೇ ಲೇಸು ಸರ್ವಜ್ಞ – 399*
ಹೂವಿನ ಮಾಲೆಗಳಲ್ಲಿ – ಮಲ್ಲಿಗೆ ಮಾಲೆಯು ಚೆಲುವು, ಕಾಲವಾರರಲಿ ಬೇಸಗೆಯೇ ಕಡುಚೆಲುವು ಎಂದಿದ್ದಾನೆ.
ಸಾಮಾನ್ಯವಾಗಿ ಮಾನವನ ಬದುಕಿನ ಕಾಲಘಟ್ಟವನ್ನು – ಪೂರ್ವ ಬಾಲ್ಯ, ಬಾಲ್ಯ, ಪ್ರೌಢ, ವೃದ್ಧಾಪ್ಯ ಎಂದು ವಿಂಗಡಿಸಬಹುದಾಗಿದೆ. ಬಾಲ್ಯಕ್ಕೆ ಜಾರುವ ಮನಸ್ಸು ಎಲ್ಲರದ್ದೂ. ಬಾಳಿನ ಬುತ್ತಿಯಲ್ಲಿ ಬಾಲ್ಯದ ನೆನಪುಗಳು ಯಾವತ್ತು ಸವಿಬೆಲ್ಲವ ಮೆದ್ದಂತೆ ಸವಿಯೋ ಸವಿ.
ಅಡಿ ಟಿಪ್ಪಣಿ :
48* ಮತ್ತು 49*ಸರ್ವಜ್ಞನ ವಚನಗಳು – ಸಂ: ಡಾ.ಎಲ್.ಬಸವರಾಜು ; ಗೀತಾ ಬುಕ್ ಹೌಸ್, ಮೈಸೂರು -2012 ; ಪು.ಸಂ : 104
399* ಸರ್ವಜ್ಞನ ವಚನಗಳು – ಸಂ: ಡಾ.ಎಚ್.ತಿಪ್ಪೇರುದ್ರಸ್ವಾಮಿ ; ಡಿ.ವಿ.ಕೆ.ಮೂರ್ತಿ, ಮೈಸೂರು –1998,;ಪೈಕಿ.ಸಂ: , 80
- ಡಾ.ಯಲ್ಲಮ್ಮ.ಕೆ – ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ ಜಿ.ವಿ.ಪಿ.ಪಿ.ಸ.ಪ್ರ.ದ.ಕಾಲೇಜು, ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲಾ.
