ನನ್ನ ಸ್ನೇಹಿತರಾದ ಮತ್ತು ನಾಟಕಕಾರರಾದ ಶ್ರೀಯುತ ಹೂಲಿ ಶೇಖರ್ ಇವರ ಪುತ್ರಿ ಶಾಲಿನಿ ಪ್ರದೀಪ್ ಅವರು ಬರೆದಿರುವ ಮೊದಲ ಪುಸ್ತಕ “ಪದ್ದಣ ಮನೋರಮೆ” ಇತ್ತೀಚೆಗಷ್ಟೇ ಬಿಡುಗಡೆಗೊಂಡಿತು, ಪದ್ದಣ ಮನೋರಮೆ ಈಗ ನನ್ನ ಕೈ ಸೇರಿದೆ. ದೇವರಾಜ ಚಾರ್ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪದ್ದಣ ಮನೋರಮೆ
ಲೇಖಕರು: ಶಾಲಿನಿ ಹೂಲಿ ಪ್ರದೀಪ್
ಪ್ರಕಾಶಕರು : ಆಕೃತಿ ಕನ್ನಡ ಪ್ರಕಾಶನ ಬೆಂಗಳೂರು
ಮೊದಲ ಮುದ್ರಣ : 2025
ಪುಟಗಳು : 88
ಬೆಲೆ : 150
ಖರೀದಿಗಾಗಿ : 9880424461
ಶಾಲಿನಿ ಪ್ರದೀಪ್ ರವರು “ಆಕೃತಿ ಕನ್ನಡ”ದ ಸಂಪಾದಕಿ ಮತ್ತು ಜಾಲತಾಣದಲ್ಲಿ ತನ್ನದೇ ಆದ ವೈಶಿಷ್ಠತೆಯನ್ನು ಮೈಗೂಡಿಸಿಕೊಂಡು ಬರಹಗಾರರಿಗೆ ವೇದಿಕೆಯನ್ನು ಸೃಷ್ಠಿಸಿದ್ದಾರೆ. ಎಷ್ಟೋ ಬರಹಗಾರರು ತಮ್ಮ ಕವನ, ವೈಚಾರಿಕ ಲೇಖನ, ಪುಸ್ತಕ ಪರಿಚಯ, ಸಾಹಿತಿಗಳ ಪರಿಚಯ ಇತ್ಯಾದಿ ಬರಹಗಳಿಗೆ ವಿಶೇಷವಾದ ಸ್ಥಾನ ಕೊಟ್ಟು ತನ್ನದೇ ಆದ ವಿಶಿಷ್ಟತೆಯನ್ನು ಒಳಗೊಂಡಿದೆ ಈ ಆಕೃತಿ ಕನ್ನಡ.

ಶಾಲಿನಿಯವರು ಈ ಜಾಲತಾಣದಿಂದ ಸಾಕಷ್ಟು ಬರಹಗಾರರನ್ನು, ಕವಿ, ಕವಿಯತ್ರಿಯರನ್ನು, ಕಥೆಗಾರರನ್ನು ಪರಿಚಯಿಸುತ್ತಾ ತಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಂಡಿರುವುದು ಮತ್ತು ಅವರ ಸ್ನೇಹವನ್ನು ಪಡೆದುಕೊಂಡಿರುವುದು ಎದ್ದು ಕಾಣುತ್ತದೆ. ಶಾಲಿನಿಯವರು ನನ್ನ ಕೆಲವು ಲೇಖನಗಳನ್ನು ಸಹ ಪ್ರಕಟಿಸಿರುತ್ತಾರೆ.ಆಕೃತಿ ಕನ್ನಡವೆಂಬ ಜಾಲತಾಣ ಇರುವುದು ನನ್ನಂತಹ ಹೊಸಬರಿಗೆ ಪ್ರೋತ್ಸಾಹ ಕೊಟ್ಟಿರುವುದು ಸಂತೋಷದಾಯಕ ವಿಚಾರ.
ಇವರ ಮೊದಲ ಕೃತಿ ” ಪದ್ದಣ ಮನೋರಮೆ”ಯ ಬಗ್ಗೆ ಹೇಳುವುದಾದರೆ ಮೇರು ಕೃತಿ “ಮುದ್ದಣ ಮನೋರಮೆ” ಸಹಜವಾಗಿ ನಮ್ಮ ಮನಸ್ಸಿನಲ್ಲಿ ಬಂದು ಹೋಗುತ್ತದೆ. “ಮುದ್ದಣ ಮನೋರಮೆ” ಕೃತಿಯಲ್ಲಿ ಬರುವ ಪಾತ್ರಗಳು ಸಹ ದಂಪತಿ ಗಳಾಗಿರುತ್ತಾರೆ. ಈ ಕೃತಿಯಲ್ಲೂ ಸಹ ಪತಿ ಪತ್ನಿಯರ ಸರಸ ಸಲ್ಲಾಪದ ಸನ್ನಿವೇಶಗಳು ಬಂದು ಹೋಗುತ್ತವೆ.
“ಪದ್ದಣ ಮನೋರಮೆ”ಯೂ ಸಹ ಪತಿಪತ್ನಿಯರಲ್ಲಿ ಬಂದು ಹೋಗುವ ಸರಸ ಸಲ್ಲಾಪ, ಮುನಿಸು, ದಂಪತಿಗಳಲ್ಲಿ ಬರುವ ಔದಾರ್ಯ ಇತ್ಯಾದಿ ಬರಹ ರೂಪಗಳಲ್ಲಿ ಬಂದು ಹೋಗಿದೆ. ಇಲ್ಲಿ ಲೇಖಕಿ ಅವರು ಮನೋರಮೆಯಾಗಿ, ಅವರ ಪತಿ ಪ್ರದೀಪ ರವರು ಪದ್ದಣನಾಗಿ ಇಲ್ಲಿನ ಕಥೆಗಳ ಪಾತ್ರವಾಗಿ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬರುವ ರೀಲ್ಸ್ ಗಳಲ್ಲಿ ಮುಳಗಿ ಹೋಗಿದ್ದೇವೆ. ಇಂತಹ ದಿನಗಳಲ್ಲಿ ತಮ್ಮಲ್ಲಿ ಬಂದು ಹೋದ ಹಾಸ್ಯಮಯವಾದ ಸಂಗತಿಗಳನ್ನು, ಸರಸದ ಸನ್ನಿವೇಶವನ್ನು, ಸಿಟ್ಟಿನ ಸನ್ನಿವೇಶವನ್ನು ಬರಹ ರೂಪದಲ್ಲಿ ಹಲವಾರು ಪರಸಂಗ, ಲಹರಿಗಳಲ್ಲಿ ಶಾಲಿನಿಯವರು ತಮ್ಮ ಪ್ರಥಮ ಪುಸ್ತಕ “ಪದ್ದಣ ಮನೋರಮೆ’ ಯಲ್ಲಿ ಮೂಡಿಸಿರುವುದು ಓದುಗರಿಗೆ ನಗು ಬರಿಸುವುದು ಗ್ಯಾರಂಟಿ.
ಪುಸ್ತಕ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಯಾವುದೇ ಪುಸ್ತಕ ಸರಾಗವಾಗಿ ಓದಿಸಿಕೊಂಡರೆ ಲೇಖಕರು ಗೆದ್ದಂತೆ.ಇನ್ನು ಮುಂದೆ ಲೇಖಕಿಯವರು ತಮ್ಮಲ್ಲಿನ ಸಾಹಿತಿಕ ಅನುಭವಗಳನ್ನು ಯಾವುದೇ ಅನುಮಾನವಿಲ್ಲದೆ ಬರಹ ರೂಪದಲ್ಲಿ ತರಲೆಂದು ಹಾರೈಸುತ್ತೇನೆ.
‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :
- ದೇವರಾಜ ಚಾರ್ – ನಿವೃತ್ತ ಕೆಪಿಸಿಎಲ್ ಇಂಜೀನಿಯರ್, ಮೈಸೂರು.
