ಹಡಪದ ಅಪ್ಪಣ್ಣ ಜಯಂತಿ : ಶಾರದಾ ಶ್ರಾವಣಸಿಂಗ್

ಲೌಕಿಕವಾಗಿ ಮಾತ್ರವಲ್ಲದೆ ಪಾರಮಾರ್ಥದಲ್ಲಿಯೂ ಬಸವಣ್ಣನವರಿಗೆ ಆಪ್ತರಾಗಿದ್ದವರು ಹಡಪದ ಅಪ್ಪಣ್ಣನವರು. 12ನೇ ಶತಮಾನದ ಶರಣ ಪರಂಪರೆಯಲ್ಲಿ ಬಹುದೊಡ್ಡ ಹೆಸರು ಪಡೆದ ಹಡಪದ ಅಪ್ಪಣ್ಣ ಮತ್ತು ಅವರ ಧರ್ಮಪತ್ನಿ ಶರಣೆ ಲಿಂಗಮ್ಮ ಕ್ಷೌರಿಕ ವೃತ್ತಿಯ ಕಾಯಕದಲ್ಲಿದ್ದು, ಅದರಲ್ಲೇ ಕೈಲಾಸ ಕಂಡವರು. ಹಡಪದ ಅಪ್ಪಣ್ಣ ಅವರ ಜಯಂತಿ ಪ್ರಯುಕ್ತ ಲೇಖಕಿ ಶಾರದಾ ಶ್ರಾವಣಸಿಂಗ್ ರಜಪೂತ ಅವರ ಒಂದು ವಿಶೇಷ ಲೇಖನವನ್ನು ತಪ್ಪದೆ ಓದಿ…

ಅಪ್ಪಣ್ಣ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದ್ದರು. ಕ್ಷೌರಿಕ ವೃತ್ತಿಯನ್ನು ಕನಿಷ್ಠ ವೆಂದು ಭಾವಿಸಿದ್ದ ಸಮುದಾಯದ ಬಾಯಿಮುಚ್ಚುವಂತೆ ಬಸವಣ್ಣನವರು ಹಡಪದ ಅಪ್ಪಣ್ಣರನ್ನು ಅನುಭವ ಮಂಟಪದ ಸಂಸತ್ತಿನಲ್ಲಿ ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿದರು. ಯಾರಿಗೂ ಮುಜುಗರವಾಗದಂತೆ ಸಮರ್ಥ ರೀತಿಯಲ್ಲಿ ಹಡಪದ ಅಪ್ಪಣ್ಣ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದು. ಬಸವಣ್ಣನವರು ಅನುಭವ ಮಂಟಪಕ್ಕೆ ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವಿತ್ತು ಎಂಬ ಪ್ರತೀತಿ ಇದೆ.

ಮತ್ತೊಂದು ಐತಿಹ್ಯದ ಪ್ರಕಾರ ಅಪ್ಪಣ್ಣನವರದು ತಾಂಬೂಲ ಕರಂಡ ಕಾಯಕವನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅಲ್ಲಿ ಬಂದಂತ ಶರಣರಿಗೆ ತಾಂಬೂಲ ಹಂಚುತ್ತಿದ್ದರು.’ ಹಡಪ’ ಎಂದರೆ ತಾಂಬೂಲದ ಚೀಲ. ಇನ್ನೊಂದು ಅರ್ಥದಲ್ಲಿ ಕ್ಷೌರ ಮಾಡುವ ಕಾಯಕ ಚೀಲ. ವಿಜಯಪುರ ಜಿಲ್ಲೆಯ ತಂಗಡಿಗೆಯವರು ಬನವಾಸಿಯ ಮಧುಕೇಶ್ವರ ದೇವಾಲಯದ ಶಿಲಾಮಂಟಪದ ಗಗ್ಗರಿ ಕಲ್ಲಿನಲ್ಲಿ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹ ಮತ್ತು ಹೆಸರೂ ಕೂಡ ಬರೆಯಲಾಗಿದೆ.

ಫೋಟೋ ಕೃಪೆ : ಅಂತರ್ಜಾಲ

‘ಬಸವ ಪ್ರಿಯ ಕೂಡಲ ಚನ್ನಬಸವಣ್ಣ’ ಅಂಕಿತದಲ್ಲಿ ಹಡಪದ ಅಪ್ಪಣ್ಣನವರು ಸುಮಾರು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ವಿಶೇಷವೆಂದರೆ ಇವರ ಹಲವು ವಚನಗಳಲ್ಲಿ ಕೆಲವು ಬೆಡಗಿನ ವಚನಗಳಾಗಿವೆ. ಕೆಲವು ಕಥನ ಶೈಲಿಯನ್ನು ಹೊಂದಿದ್ದು ತತ್ವ ನಿರೂಪಣೆಗೆ ಹೆಚ್ಚು ಒತ್ತು ನೀಡಿದ್ದಾರೆ ಎನ್ನಬಹುದು. ಇವರ ವಚನಗಳನ್ನು ನೋಡಿದರೆ ಗ್ರಹಿಸಲು ಸುಲಭವಾಗಿದ್ದು ಸಮಾಜಕ್ಕೆ ಮೌಖಿಕ ಸಂದೇಶಗಳನ್ನು ಬಿತ್ತುತ್ತವೆ. ಅಲ್ಲದೆ ಇವರಿಗೆ ಸಂಸ್ಕೃತ ಜ್ಞಾನ ಅಪಾರವಾಗಿತ್ತು ಎಂಬುದಕ್ಕೆ ಇವರ ವಚನಗಳು ಸಾಕ್ಷಿಯಾಗುತ್ತವೆ. ನುಡಿಯಂತೆ ನಡೆ, ವಿಚಾರದಂತೆ ಆಚಾರ, ಕಾಯಕ ನಿಷ್ಠೆ, ದಾಸೋಹ ನಿಷ್ಠೆಯ ಮಹಿಮೆಯನ್ನು ಸಾರುವಂತಿರುವ ಇವರ ವಚನಗಳು ವೈಚಾರಿಕತೆಯ ನೆಲೆಯಲ್ಲಿವೆ.

ಅಂದು ಎಲ್ಲಾ ಶರಣರು “ಕಾಯಕವೇ ಕೈಲಾಸ” ದ ಭಾವದಿಂದ ಬಾಳುತ್ತಿದ್ದರಿಂದ ಅದೇ ಕಾಯಕನಿಷ್ಠೆಯನ್ನು ಅಪ್ಪಣ್ಣನ ವಚನಗಳಲ್ಲಿ ಕಾಣುತ್ತೇವೆ.

ಅನ್ನ ಉದಕವ ಕೊಂಡೆಹೆವೆಂದಡೆ ಭೂಮಿಯ ಹಂಗು
ಹೊನ್ನ ಹಿಡಿದಿಹನೆಂದಡೆ ಲಕ್ಷ್ಮಿಯ ಹಂಗು
ಹಾಲ ಕೊಂಡಿಹೆನೆಂದರಡೆ ಹಸುವಿನ ಹಂಗು… 

ಇದನರಿದು ಇವೆಲ್ಲವನ್ನು ಕಳೆದು ವಿಶ್ವ ಬ್ರಹ್ಮನಕೆ ನಡೆ-ನುಡಿ ಚೈತನ್ಯವಾದ ಜಂಗಮಲಿಂಗದ ಪಾದವಿಡಿದು ಅವರು ಬಿಟ್ಟ ಪ್ರಸಾದವ, ಉಟ್ಟ ಮೈಲಿಗೆಯ, ಉಗುಳಿದ ತಾಂಬೂಲವ, ಈ ತ್ರಿವಿಧವಕೊಂಡೆನ್ನ ಭವಂ ನಾಸ್ತಿಯಾಯಿತ್ತು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ!

ಅನ್ನ, ಹಣ್ಣು ಹೆಣ್ಣು ಹಾಲು ಹೂ ಹಣ್ಣು ಗಿಡಮರಗಳು ಇವುಗಳಲ್ಲಿ ಯಾವುದನ್ನು ನೇರವಾಗಿ ತೆಗೆದುಕೊಂಡರು ಅದು ಇನ್ನೊಂದರ ಹಂಗಾಗಿರುತ್ತದೆ ಹಾಗಾಗಿ ತನ್ನ ತಾಂಬೂಲದ ಕೆಲಸ ಮಾಡಿ ಲಿಂಗ ಜಂಗಮರು ನೀಡಿದ ಪ್ರಸಾದವನ್ನು ತಿಂದರೆ ನನ್ನ ಹುಟ್ಟು ಸಾರ್ಥಕವಾಗಿ ಮುಕ್ತಿ ಸಿಗುತ್ತದೆ ಎಂಬ ಮುಕ್ತ ಭಾವನೆಯನ್ನು ಇಲ್ಲಿ ವ್ಯಕ್ತ ಪಡಿಸಿದ್ದಾರೆ.

ತನುವ ಕೊಟ್ಟು ಭಕ್ತರಾದೆವೆಂಬರು
ಮನವ ಕೊಟ್ಟು ಭಕ್ತಾರಾದೆವೆಂಬರು
ಧನವ ಕೊಟ್ಟು ಭಕ್ತರಾದೆವೆಂಬರು
ತನುಮನಧನವೆಂತು ಕೊಟ್ಟಿರಿ ಹೇಳಿರಣ್ಣ.

ಎಲ್ಲವೂ ನಿಮ್ಮಲ್ಲೇ ಇದೆ. ನಿಜವಾದ ಅರ್ಪಣೆ ಎಂದರೆ ಆ ತನುವಿನ ಅಭಿಮಾನ ಅವರಲ್ಲಿ ಅಳಿದಿರಬೇಕು. ಮನವ ಅರ್ಪಿಸಿದನೆಂದು ಆ ಮನದ ಆತಂಕ ಅಳಿದಿರಬೇಕು. ಧನವ ಕೊಟ್ಟೆನೆಂದರೆ ಆ ಧನದ ಆಸೆ ಅಳಿದಿರಬೇಕು. ಅಲ್ಲಿ ಕೊಟ್ಟು ಪಡೆವೆ, ಕೊಟ್ಟು ಕುದಿಯುವ ಭಾವಕ್ಕೆ ಅವಕಾಶವಿರದೆ ನಾಳಿನ ಸಂದೇಹಗಳಿಗೆ ಮನದ ಜಾಗ ನೀಡದಿದ್ದಾಗ ಮಾತ್ರ ಗುರುವಿನ ಗದ್ದುಗೆ ಏರುತ್ತದೆ, ಮನವು ಲಿಂಗದ ಸ್ವರೂಪವಾಗುತ್ತದೆ, ಎಂದು ಹೇಳುವ ಮಾತುಗಳು ತನು, ಮನ, ಧನವನ್ನು ದಾನ ಮಾಡಿದೆನೆಂದು ಬೀಗುವವರಿಗೆ ಚಾಟಿ ಏಟಿನಂತಿದೆ!
“ಎನ್ನ ಆಚಾರ ವಿಚಾರ ಬಸವಣ್ಣಂಗರ್ಪಿತವಾದವು” ಎಂದು ಭಕ್ತಿ ಭಂಡಾರಿಯ ಸನ್ನಿಧಿಯ ಅವಕಾಶ ದೊರೆತುದುದು ತನ್ನ ಪೂರ್ವ ಪುಣ್ಯದ ಪರಿಪಾಕವೆಂದು ಅಪ್ಪಣ್ಣ ಹೇಳುವನು.
ಹೀಗೆ ಅರಿವಿನ ಆಳಕ್ಕೆ ಇಳಿದು ತಿಳಿವಿನ ತಳವನ್ನು ಮುಟ್ಟಿದವರು ಅಂದಿನ ಶರಣರು.ಅನೇಕ ಶರಣರು ವಚನಗಳ ಮೂಲಕ ಸಮಾಜಕ್ಕೆ ಸಂದೇಶ ಮತ್ತು ವಿಚಾರಗಳನ್ನು ಉಣ ಬಡಿಸಿದ್ದಾರೆ. ಆ ವಚನಗಳು ಇಂದಿಗೂ ಪ್ರಸ್ತುತವಾಗಿವೆ.ಅಂತಹ ಶರಣರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣನವರ ವಚನಗಳನ್ನು ಅವರ ಜಯಂತಿಯಂದು ಸ್ಮರಣೆಯಲ್ಲಿ ತರುವುದಲ್ಲದೇ ಇಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಮಾಡಬೇಕಾಗಿದೆ.


  • ಶಾರದಾ ಶ್ರಾವಣಸಿಂಗ್ ರಜಪೂತ  – ಕೊಪ್ಪಳ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW