ಆಕೃತಿ ಕನ್ನಡ ಪತ್ರಿಕೆಯ ಸಂಪಾದಕಿ, ಲೇಖಕಿ ಶಾಲಿನಿ ಪ್ರದೀಪ್ ರವರ ಲೇಖನಿಯಿಂದ ಮೂಡಿದ ಚೊಚ್ಚಲ ಕೃತಿ “ಪದ್ದಣ ಮನೋರಮೆ” ಪುಸ್ತಕ ಇತ್ತೀಚೆಗೆ ಲೋಕಾರ್ಪಣೆಗೊಂಡಿತು. ಎಲ್ಲರಂತೆ ನಾನೂ ಕುತೂಹಲದಿಂದ ಪುಸ್ತಕ ಖರೀದಿಸಿ ತಂದು ಓದಿದೆ. ಲೇಖಕರಾದ ಹೆಚ್. ಪಿ. ಕೃಷ್ಣಮೂರ್ತಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಪದ್ದಣ ಮನೋರಮೆ
ಲೇಖಕರು: ಶಾಲಿನಿ ಹೂಲಿ ಪ್ರದೀಪ್
ಪ್ರಕಾಶಕರು : ಆಕೃತಿ ಕನ್ನಡ ಪ್ರಕಾಶನ ಬೆಂಗಳೂರು
ಮೊದಲ ಮುದ್ರಣ : 2025
ಪುಟಗಳು : 88
ಬೆಲೆ : 150
ಈ ಪುಸ್ತಕ ಒಂದು ವಿನೂತನ ವಾದುದು. ಲೇಖಕಿಯು ತಮ್ಮ ನಿತ್ಯ ಜೀವನದಲ್ಲಿ ಅನುಭವಿಸಿದ ಅನೇಕ ಘಟನೆಗಳನ್ನೇ ಲಘು ಪ್ರಸಂಗದ ಕತೆಗಳನ್ನಾಗಿ ಕಟ್ಟಿಕೊಟ್ಟಿದ್ದಾರೆ. ನಡೆದ ಅತೀ ಸಣ್ಣ ಸಣ್ಣ ಘಟನೆಗಳನ್ನೂ ಲೇಖಕಿ ಸೂಕ್ಶ್ಮ ವಾಗಿ ಗಮನಿಸಿ, ಅನುಭವಿಸಿರುವುದು ಅವರ ಸೂಕ್ಷ್ಮತೆಯನ್ನು ತೋರುತ್ತದೆ.

ಎಲ್ಲ ಪ್ರಸಂಗದ ಕತೆಗಳಲ್ಲಿ ದುಗುಡ, ದುಃಖ, ತೊಳಲಾಟ, ಗಂಭೀರದಲ್ಲೂ ಹಾಸ್ಯದ ವೈವಿಧ್ಯತೆಗಳಿಂದ ಕೂಡಿದ ಬರಹಗಳು ಮತ್ತು ಓದುಗನಿಗೆ ಎಲ್ಲೂ ದೀರ್ಘ ಎನಿಸದೆ ಒಂದೆರಡು ಪುಟಗಳಲ್ಲೇ ಹೇಳಿ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ಓದುಗ ದೊರೆಗೆ ಎಲ್ಲೂ ಬೇಸರವಾಗುವುದಿಲ್ಲ .
ಹೇಳಲೇ ಬೇಕಾದ್ದು ಅಂದ್ರೆ ಲೇಖಕಿ ತನ್ನ ಗಂಡ ಅಂದ್ರೆ ಪದ್ದಣನನ್ನ ಕಾಲೆಳೆಯುವುದು ಒಂದು ಅದ್ಭುತ. ‘ಹಾರ್ಟ್ ಬಾಯಿಗೆ ಬಂದಾಗ ‘ ಪ್ರಸಂಗದಲ್ಲಿ ಲೇಖಕಿ ತನ್ನ ಗೆಳತಿಗೆ ಸ್ಟ್ರೆಸ್ ನಿಂದಾಗಿ ಹಾರ್ಟ್ ಅಟ್ಯಾಕ್ ಆಗಿ, ಹೆಣ್ಣು ಸಂಸಾರದ ಕಣ್ಣು ಅವಳೇ ಕಣ್ಣು ಮುಚ್ಚಿದರೆ ಮುಂದೆ ಗಂಡನ ಪರಿಸ್ಥಿತಿ ಏನು!? ಎಂದು ಪದ್ದಣನಿಗೆ ಭಯ ಹುಟ್ಟಿಸುತ್ತಾಳೆ. ಭಯಗೊಂಡ ಪದ್ದಣ ‘ ಲೇ, ಇನ್ ಮುಂದೆ ನೀನೂ ಅಷ್ಟೇ ಹೆಚ್ಚಿಗೆ ಸ್ಟ್ರೆಸ್ ತಗೋಳೋದು ಬೇಡ, ಇಬ್ಬರೂ ಮನೆಗೆಲಸ ಹಂಚಿಕೊಂಡು ಮಾಡೋಣ ‘ ಅನ್ನುವ ತೀರ್ಮಾನಕ್ಕೆ ತಂದು ನಿಲ್ಲಿಸುವ ಲೇಖಕಿಯ ಚಾಣಾಕ್ಷತೆಯನ್ನು ಮೆಚ್ಚಲೇ ಬೇಕು. ನಿಜವೆಂದು ನಂಬಿ ಮೋಸ ಹೋಗುವ ಪದ್ದಣನ ಬಗ್ಗೆ ಅಯ್ಯೋ… ಅನಿಸದೆ ಇರಲಾರದು.

ಇಲ್ಲಿನ ಪ್ರಸಂಗ ಕತೆಗಳಲ್ಲಿ ಎಲ್ಲವೂ ಸೊಗಸಾಗಿದ್ದು ಅವುಗಳಲ್ಲಿ ನನ್ನನ್ನು ಹೆಚ್ಚಾಗಿ ಕಾಡಿದಂತವು ಅಂದರೆ ಗೆಳೆಯನ ಹೆಂಡತಿ, ಹಾರ್ಟ್ ಢಮ0 ಅಂದ್ರೆ, ಲಿಲ್ಲಿ ಗಂಡನ ಕಥೆ, ಗೋವಾದಲ್ಲಿ ಕಂಡ ಶ್ರೀರಾಮಚಂದ್ರ, ಕಂಡವರ ಮನೆ ಕಥೆ, ಹಾರ್ಟ್ ಬಾಯಿಗೆ ಬಂದಾಗ… ಹೀಗೆ ಪದ್ದಣ ಹೆಂಡತಿಗೆ ಹೆದರಿಸುವುದು, ಹೆಂಡತಿ ಪದ್ದಣನಿಗೆ ಕಿಚಾಯಿಸಿ ಹಾಸ್ಯದಲೇ ತುಂಬಿ ನಮ್ಮನ್ನ ಸೆಳೆಯುತ್ತವೆ.
ಇವು ಒಂದಲ್ಲ ಒಂದು ರೀತಿ ಕಾಡಿಸಿ ಓದುಗನ ಮನ ಮುಟ್ಟಿಸಿಕೊಳ್ಳುತ್ತವೆ ಇಲ್ಲಿನ ಪ್ರಸಂಗ ಕತೆಗಳು. ಒಟ್ಟಿನಲ್ಲಿ ಈ ಪುಸ್ತಕ ಒಂದು ಸ್ವೀಟ್ ಅಂಡ್ ಸ್ಮಾರ್ಟ್ ಆಗಿರುವ ಕೃತಿ ಅನ್ನುವುದಂತೂ ಸತ್ಯ.
‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :
- ಹೆಚ್. ಪಿ. ಕೃಷ್ಣಮೂರ್ತಿ
