ಪ್ರಶಸ್ತಿಗಾಗಿ ಎಲ್ಲೆಂದರಲ್ಲಿ ಹಾರುವ ಸಂಸ್ಕೃತಿ ನಮ್ಮಲ್ಲಿ ಬದಲಾಗಬೇಕು. ಮತ್ತು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸರಿಯಾದ ಮಾನದಂಡವನ್ನು ಆಯ್ಕೆ ಸಮಿತಿಗಳು ಪಾಲಿಸಬೇಕು.ನಮ್ಮ ಕಲಾವಿದರನ್ನು ನಾವೇ ಪೋಷಿಸದೆ ಹೋದರೆ ಮುಂದೊಂದು ದಿನ ಕನ್ನಡದ ಕಲಾವಿದರ ಜೊತೆಗೆ ಕನ್ನಡ ಭಾಷೆಯನ್ನು ಉಳಿಸುಯುವುದು ಕಷ್ಟ, ಎಚ್ಚರವಿರಲಿ…
ಫೋಟೋ ಕೃಪೆ : You Tube
‘ಮುಕ್ಕಬಲಾ…ಮುಕ್ಕಬಲಾ…ಓ… ಲೈಲಾ…’ ಹಾಡಿಗೆ ಪ್ರಭುದೇವ ಅವರು ಹೆಜ್ಜೆ ಹಾಕಿದ್ದೆ ಹಾಕಿದ್ದು, ಅವರ ನೃತ್ಯಕ್ಕೆ ಫೀದಾ ಆಗದ ಕಣ್ಮಣಿಗಳಿರಲಿಲ್ಲ. ಅಂದಿನ ದಿನಗಳಲ್ಲಿ ನೃತ್ಯ ಎಂದರೆ ಹೀಗೂ ಉಂಟೆ ? ಎಂದು ಅಚ್ಚರಿ ಪಟ್ಟು,ಬಾಯಿ ತೆರೆದು ನೋಡಿದ ದಿನಗಳು ಅವು. ಅವರ ಡಾನ್ಸ್ ಮಹಿಮೆಯೇ ಹಾಗಿತ್ತು. ಯಾವ ಭಾಗ ಎಲ್ಲಿದೆಯೋ, ಹೇಗೆ ಕುಣಿಸುತ್ತಾರೋ ಯಾವುದು ತಿಳಿಯುವುದೇ ಇಲ್ಲ. ಆದರೆ ಅವರ ನೃತ್ಯ ನೋಡುಗರಿಗಂತೂ ದಿಲ್ ಖುಷ್ ಆಗುತ್ತದೆ. ಜೊತೆಗೆ ಅವರಂತೆ ಬಳಕಬೇಕು ಎಂದು ಎಷ್ಟೋ ನೃತ್ಯ ಕಲಾವಿದರು ಅವರನ್ನೇ ಆರಾಧ್ಯ ದೈವನಾಗಿಸಿಕೊಂಡು, ಸಾಕಷ್ಟು ಕಷ್ಟ ಪಟ್ಟು ನೃತ್ಯ ಕಲಿಯುತ್ತಿದ್ದಾರೆ. ಆದರೆ ಅವರಿಗೆ ಅದು ದೈವದತ್ತವಾಗಿ ಬಂದ ಪ್ರತಿಭೆ. ಪ್ರಪಂಚಕ್ಕೆ ಒಬ್ಬನೇ ಒಬ್ಬ ಮೈಕಲ್ ಜಾಕ್ಸನ್ ನಿದ್ದರೆ, ನಮ್ಮ ದೇಶಕ್ಕೆ ಪ್ರಭುದೇವ ಒಬ್ಬರೇ ಒಬ್ಬ ಮೈಕಲ್ ಜಾಕ್ಸನ್. ಹಾಗಾಗಿ ಅವರನ್ನು ‘ಭಾರತದ ಮೈಕಲ್ ಜಾಕ್ಸನ್’ಎಂದೇ ಕರೆಯುತ್ತಾರೆ. ಅಂತಹ ಮಹಾನ್ ಕಲಾವಿದ ಹುಟ್ಟಿದ್ದು, ನಮ್ಮ ಕರ್ನಾಟಕದ ಅರಮನಿ ನಗರಿ ಮೈಸೂರನಲ್ಲಿ ಎನ್ನುವುದು ನಮ್ಮ ಹೆಮ್ಮೆ.
ಫೋಟೋ ಕೃಪೆ : WikiBio
ಪ್ರಭುದೇವ ಅವರು ಏಪ್ರಿಲ್ ೩, ೧೯೭೩ ಜನಿಸಿದರು. ಮೂಗೂರ್ ಸುಂದರ್ ಮತ್ತು ಮಹಾದೇವಮ್ಮ ಸುಂದರ್ ದಂಪತಿಯ ಪುತ್ರ. ಅವರ ತಂದೆ ಮೂಗೂರ್ ಸುಂದರ್ ಕೂಡ ಖ್ಯಾತ ನೃತ್ಯ ಸಂಯೋಜಕರು. ನೃತ್ಯ ಅವರ ರಕ್ತದಲ್ಲೇ ಮೈಗೂಡಿಸಿಕೊಂಡವರು. ಪ್ರಭುದೇವ ಮೊದ ಮೊದಲ ದಿನಗಳಲ್ಲಿಅಂದರೆ ೧೯೮೮ರಲ್ಲಿ ತಮಿಳಿನ ‘ಅಗ್ನಿ ನಾಟ್ಚ್ಯಾತಿರಮ್’ ಚಿತ್ರದ ಹಿನ್ನೆಲೆ ನೃತ್ಯ ಕಲಾವಿದರಾಗಿ ವೃತ್ತಿಯನ್ನು ಆರಂಭಿಸಿದರು. ೧೯೮೬ ರಲ್ಲಿ ತಮಿಳಿನ ‘ಮೌನ ರಾಗಂ’ ಚಿತ್ರದಲ್ಲಿನ ‘ಪಾಣಿವಿಜ್ಹಂ ಇರವು’ ಹಾಡಿನಲ್ಲಿನ ಮೂಲಕ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ೧೯೮೯ ರಲ್ಲಿ ‘ವೇಟ್ರಿ ವಿಜ್ಹಾ’ದಲ್ಲಿ ಸ್ವತಂತ್ರ ನೃತ್ಯ ನಿರ್ದೇಶಕರಾದರು.೧೯೯೯ ರಲ್ಲಿ ನಾಯಕ ನಟನಾಗಿ ತೆರೆಯ ಮೇಲೆ ಮಿಂಚಿದರು. ಹೀಗೆ ಸುಮಾರು ೧೦೦ ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ತಮ್ಮ ಸಿನಿ ವೃತ್ತಿಯಲ್ಲಿ ೩೨ ವರ್ಷಗಳ ಕಾಲ ಭಾರತೀಯ ನೃತ್ಯ ಸಂಯೋಜಕ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ನಟನಾಗಿ ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸಿಂಗಾಪುರದಲ್ಲಿ ಪ್ರಭುದೇವ ಅವರ ನೃತ್ಯ ಅಕಾಡೆಮಿಯಿದ್ದು, ಅದರ ಅಧ್ಯಕ್ಷರು ಮತ್ತು ನಿರ್ದೇಶಕರಾಗಿದ್ದಾರೆ.
ಫೋಟೋ ಕೃಪೆ : Delhi Wire
ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಅವರ ಮೂಡಿ ಸೇರಿವೆ. ಮತ್ತು ಅವರ ಕಲಾ ಸೇವೆಗೆ ೨೦೧೯ ರಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ ಪ್ರಭುದೇವ ಅವರನ್ನು ಕರ್ನಾಟಕದಿಂದ ಆಯ್ಕೆ ಮಾಡಲಾಗಿತ್ತು. ಈಗ ಪ್ರಭುದೇವ ಅವರು ಪದ್ಮಶ್ರೀ ಪುರಸ್ಕೃತರು. ಇದು ಪ್ರಭುದೇವ ಅವರ ಸಾಧನೆಯ ಒಂದು ನೋಟವಾಯಿತು.
ಪ್ರಭುದೇವ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಕರ್ನಾಟದಿಂದ ಎಂದಾಗ ಕೆಲವು ಪ್ರಶ್ನೆಗಳು, ಅನಿಸಿಕೆಗಳಿವೆ. ಪ್ರಶಸ್ತಿಯನ್ನು ಅವರ ಸಾಧನೆಯನ್ನು ಪರಿಗಣಿಸಿ ನೀಡಿದ್ದೆಯಾಗಿದ್ದಾರೆ, ನಿಜಕ್ಕೂ ಅವರು ಅರ್ಹರು. ಆದರೆ ಅವರ ಸಾಧನೆಯನ್ನು ಕರ್ನಾಟಕದಲ್ಲಿ ಗುರುತಿಸಿ ಪ್ರಶಸ್ತಿ ನೀಡಿದ್ದೆಯಾದರೆ ಅದು ಎಷ್ಟರ ಮಟ್ಟಿಗೆ ಸರಿ? ಇದು ಒಂದು ಪ್ರಶ್ನೆ. ಕರ್ನಾಟಕದಲ್ಲಿ ಪ್ರದ್ಮಶ್ರಿ ಪ್ರಶಸ್ತಿಗೆ ಬೇರೆ ಯಾರು ಅರ್ಹರು ಇರಲಿಲ್ಲವೇ? ಎನ್ನುವುದು ಇನ್ನೊಂದು ಪ್ರಶ್ನೆ.
ಫೋಟೋ ಕೃಪೆ : Deccan Herald
ಅವರಿಗೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಎಲ್ಲ ಅರ್ಹತೆಗಳಿವೆ. ಅವರ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಅವರಿಗೆ ಕರ್ನಾಟಕದಿಂದ ಈ ಪ್ರಶಸ್ತಿಗೆ ಆಯ್ಕೆ ಮಾಡುವ ಬದಲು ಅವರ ವೃತ್ತಿ ಭೂಮಿಯಾದ ತಮಿಳುನಾಡು ಅಥವಾ ಮಹಾರಾಷ್ಟ್ರದಿಂದ ಆಯ್ಕೆ ಮಾಡಿದ್ದರೆ, ನಮ್ಮ ನಾಡಿನ ಪ್ರತಿಭೆಗೆ ಅವಕಾಶ ಸಿಗುತ್ತಿತ್ತು. ಮತ್ತು ಆ ಪ್ರಶಸ್ತಿಗೆ ಇನ್ನಷ್ಟು ಪ್ರಾಶಸ್ತ್ಯ ಸಿಗುತ್ತಿತ್ತು.
ಪ್ರಭುದೇವ ಅವರು ಕರ್ನಾಟಕದಲ್ಲಿ ಹುಟ್ಟಿದ್ದರು ಕೂಡ ಇಲ್ಲಿಯವರೆಗೂ ಕನ್ನಡದಲ್ಲಿ ಸಿನಿಮಾವನ್ನು ನಿರ್ದೇಶಿಸಿಲ್ಲ ಅಥವಾ ನಿರ್ಮಾಣ ಮಾಡಿಲ್ಲ. ಹಾಗೆ ಮಾಡಿದ್ದೆಯಾದರೆ ಅದು ಬೆರಳೆಣಿಕೆಯಷ್ಟೇ ಸೇವೆಗಳು. ಆದರೆ ನಮ್ಮಲ್ಲಿ ಲೆಕ್ಕಕ್ಕೆ ಸಿಗದೇ ಕನ್ನಡಾಂಬೆ ಸೇವೆ ಮಾಡುತ್ತಿರುವ ಹಲವಾರು ಕಲಾವಿದರು ನಮ್ಮಲ್ಲಿ ಇನ್ನು ಬದುಕಿದ್ದಾರೆ. ಕನ್ನಡವೇ ಉಸಿರನ್ನಾಗಿಸಿಕೊಂಡು ಸುಮಾರು ೫೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಟರು, ನಿರ್ದೇಶಕರು, ಕಲಾ ಪೋಷಕರಿದ್ದಾರೆ. ಅವರಲ್ಲಿಯೊಬ್ಬರನ್ನು ಹುಡುಕಿ ಪದ್ಮಶ್ರೀ ನೀಡಬಹುದಿತ್ತು. ಅಂಥವರಲ್ಲಿ ಅನಂತನಾಗ್, ಹಂಸಲೇಖ ಅವರನ್ನು ಸೇರಿಸಿಕೊಳ್ಳಬಹುದು.
ಫೋಟೋ ಕೃಪೆ : infoclick.com
ಅನಂತ ನಾಗ್ ಅವರು ಕನ್ನಡದ ‘ಎವರ್ ಗ್ರೀನ್ ಹೀರೋ’ . ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ೫೦ ವರ್ಷಗಳಾಗಿವೆ. ಸುಮಾರು ೨೭೦ ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅವರ ವಯಸ್ಸು ೭೨ ದಾಟಿದ್ದರೂ ಎಲ್ಲ ಪಾತ್ರಗಳಿಗೆ ಜೀವ ತುಂಬುವ ಚೈತನ್ಯ ಇನ್ನೂ ಅವರಲ್ಲಿದೆ. ಹೀಗಿದ್ದರೂ ಅವರಿಗಿಂತ ಕಿರಿಯರಿಗೆ ಡಾಕ್ಟರೇಟ್, ಪದ್ಮಶ್ರೀ, ಪದ್ಮಭೂಷಣ ಗೌರವಗಳು ನೀಡಲಾಗಿದೆ. ಅನಂತ ನಾಗ್ ಅವರಲ್ಲಿ ಈ ಎಲ್ಲ ಗೌರವಗಳನ್ನು ಸ್ವೀಕರಿಸುವ ಅರ್ಹತೆಗಳಿದ್ದು, ಅವರನ್ನು ಇಲ್ಲಿಯವರೆಗೆ ಆಯ್ಕೆ ಮಾಡಿಲ್ಲದೆ ಇರುವುದೇ ವಿಪರ್ಯಾಸ.
ಇನ್ನು ನಮ್ಮ ‘ನಾದ ಬ್ರಹ್ಮ’ ಹಂಸಲೇಖ ಬಗ್ಗೆ ಹೇಳುವುದಾರೆ ಕನ್ನಡ ಚಿತ್ರರಂಗದಲ್ಲಿ ೫೦೦ ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಅವರ ಸಾಹಿತ್ಯದಲ್ಲಿ ಒಂದು ಬಾಂಧವ್ಯವಿದೆ, ಒಡನಾಟವಿದೆ ಅವರ ಸಂಗೀತವನ್ನು ಕೇಳುವುದೇ ಒಂದು ಸೊಗಸು. ಹಂಸಲೇಖ ಅವರೆಂದರೆ ಕನ್ನಡದ ಕೊಡು. ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ನೀಡಿ ಗೌರವವಿಸಿದ್ದು ಸಂತೋಷದ ವಿಷಯ. ಕನ್ನಡ ನಾಡಿನ ಮನೆ ಮನಗಳಲ್ಲಿ ಗಟ್ಟಿಯಾಗಿ ಬೇರಿರುವ ಮಹಾನ್ ವ್ಯಕ್ತಿಗಳಲ್ಲಿ ನಮ್ಮ ಹಂಸಲೇಖ ಅವರು ಕೂಡ ಒಬ್ಬರು. ಅವರ ಸಾಧನೆಗೆ ಕರ್ನಾಟಕದಿಂದ ಪದ್ಮಶ್ರೀ ಪುರಸ್ಕಾರ ನೀಡ ಬಹುದಾಗಿತ್ತು.
ಈ ಹಿರಿಯ ಕಲಾವಿದರು ಈಗಾಗಲೇ ೭೦ ವರ್ಷದಾಟಿದ್ದಾರೆ ಎನ್ನುವುದಕ್ಕಿಂತ ಚಿತ್ರರಂಗದಲ್ಲಿ ಅವರ ಅನುಭವ ದೊಡ್ಡದಿದೆ. ಅವರು ಯುವ ಕಲಾವಿದರಿಗೆ ಮಾರ್ಗದರ್ಶಕರು, ಮಹಾನ್ ಗುರುಗಳು. ಇಂದಿಗೂ ಕನ್ನಡಾಂಬೆ ಸೇವೆ ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಪದ್ಮಶ್ರೀ ಪ್ರಶಸ್ತಿಗೆ ಇವರು ಕೂಡ ಅರ್ಹರಿದ್ದರು ಮತ್ತು ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎನ್ನುವುದಕ್ಕೆ ಈ ಇಬ್ಬರು ಉದಾರಹೆಯಷ್ಟೇ.
ಫೋಟೋ ಕೃಪೆ : Rediff.com
ಇನ್ನಿತರ ಪ್ರಶಸ್ತಿಗಳ ವಿಚಾರಕ್ಕೆ ಬಂದರೆ ವೈಜನಾಥ ಬಿರಾದಾರ್ ನಂತಹ ಪ್ರತಿಭಾವಂತ ಕಲಾವಿದರು ಕಣ್ಣಿಗೆ ಬೀಳುತ್ತಾರೆ. ಅವರ ಪ್ರತಿಭೆಗೆ ಕೈಗನ್ನಡಿಯಂತೆ ‘ಕನಸ್ಸೆಂಬೋ ಕುದುರೆಯನ್ನೇರಿ’ ಚಿತ್ರದಲ್ಲಿನ ಮನೋಘ ಅಭಿನಯಕ್ಕಾಗಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಸ್ಪೇನ್ ಪ್ರಶಸ್ತಿ ಬಂದಿದೆ. ಬಿರಾದಾರ್ ಅವರು ಕನ್ನಡ ಚಿತ್ರರಂಗದಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಇಲ್ಲಿಯವರೆಗೂ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಾಗಲಿ, ಅಕಾಡೆಮಿ ಪ್ರಶಸ್ತಿಯಾಗಲಿ ಸಂದಿಲ್ಲ. ಪ್ರಶಸ್ತಿಗಳು ಅರ್ಹರನ್ನು ತಲುಪುವಲ್ಲಿ ವಿಫಲವಾಗಿರುವುದು ಬೇಸರದ ವಿಷಯ.
ಪಕ್ಕದ ರಾಜ್ಯದ ಪ್ರತಿಭೆಗಳನ್ನು ಹುಡುಕಿ ಗೌರವಿಸುತ್ತಿದ್ದೇವೆ. ಇದಕ್ಕೆ ವ್ಯಯಿಸಿದ ಸಮಯ, ಹಣವನ್ನು ನಮ್ಮಲ್ಲಿನ ಪ್ರತಿಭೆಗಳಿಗೆ ಮಾಡಿದರೆ ಕನ್ನಡ ಇನ್ನಷ್ಟು ಸಮೃದ್ಧಿಯಾಗಿ ಬೆಳೆಯುತ್ತದೆ. ಕನ್ನಡ ನಾಡಿನಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಪ್ರಶಸ್ತಿಯು ತಮ್ಮ ರಾಜ್ಯದಲ್ಲಿ ಸಿಗದಿದ್ದಾಗ ಪಕ್ಕದ ರಾಜ್ಯಕ್ಕೆ ಹೋಗಿ ತಗೆದುಕೊಳ್ಳುವುದು ನಿಲ್ಲಬೇಕು. ಇಲ್ಲದಿದ್ದರೆ ಇದು ಅಲ್ಲಿನ ಸ್ಥಳೀಯ ಕಲಾವಿದರಿಗೆ ಮಾರಕವಾಗುತ್ತದೆ.
ಇನ್ನು ಕೆಲವೆಡೆ ಸಿನಿಮಾದಲ್ಲಿ ಸ್ಪರ್ಧೆ ಹೆಚ್ಚಾದಾಗ, ರಂಗಭೂಮಿ ಹೆಸರಿನಿಂದ ಪ್ರಶಸ್ತಿಗಳನ್ನು ಪಡೆದ ಕಲಾವಿದರನ್ನು ನೋಡಿದ್ದೇನೆ. ಹೀಗೆ ಮಾಡುವುದರಿಂದ ರಂಗಭೂಮಿ ಕಲಾವಿದರಿಗೆ ಮಾರಕವಾಗುವುದು. ಪ್ರಶಸ್ತಿಗಾಗಿ ಎಲ್ಲೆಂದರಲ್ಲಿ ಹಾರುವ ಸಂಸ್ಕೃತಿ ನಮ್ಮಲ್ಲಿ ಬದಲಾಗಬೇಕು. ಮತ್ತು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸರಿಯಾದ ಮಾನದಂಡವನ್ನು ಆಯ್ಕೆ ಸಮಿತಿಗಳು ಪಾಲಿಸಬೇಕು.
ನಮ್ಮ ಕಲಾವಿದರನ್ನು ನಾವೇ ಪೋಷಿಸದೆ ಹೋದರೆ ಮುಂದೊಂದು ದಿನ ಕನ್ನಡದ ಕಲಾವಿದರ ಜೊತೆಗೆ ಕನ್ನಡ ಭಾಷೆಯನ್ನು ಉಳಿಯುವುದು ಕಷ್ಟವಾಗುವುದು. ಎಚ್ಚರವಿರಲಿ…
- ಶಾಲಿನಿ ಹೂಲಿ ಪ್ರದೀಪ್