ಆರ್.ಎನ್.ಜಯಗೋಪಾಲ್ ಅವರ ಆತ್ಮಕತೆ ‘ಪಲ್ಲವಿ ಅನು ಪಲ್ಲವಿ’

ಎನ್.ಎಸ್.ಶ್ರೀಧರ ಮೂರ್ತಿ ಅವರ ನಿರೂಪಣೆಯ  ಆರ್.ಎನ್.ಜಯಗೋಪಾಲ್ ಅವರ ಆತ್ಮಕತೆ ‘ಪಲ್ಲವಿ ಅನು ಪಲ್ಲವಿ’ ಪರಿಷ್ಕರಣಗೊಂಡು ಮರುಮುದ್ರಿತವಾಗಿದೆ. ಮೊದಲ ಮುದ್ರಣ ಮಾಡಿದ್ದ ರೂಪಾ ಪ್ರಕಾಶನದ ಮಿತ್ರ ಮಹೇಶ್ ಇದನ್ನು ಸಾಧ್ಯವಾಗಿಸಿದ್ದಾರೆ. ಪುಸ್ತಕದ ಕುರಿತು ತಪ್ಪದೆ ಮುಂದೆ ಓದಿ…

ಪುಸ್ತಕ : ‘ಪಲ್ಲವಿ ಅನು ಪಲ್ಲವಿ’
ಲೇಖಕರು : ಎನ್.ಎಸ್.ಶ್ರೀಧರ ಮೂರ್ತಿ
ಪ್ರಕಾಶನ : ರೂಪಾ ಪ್ರಕಾಶನ
ಖರೀದಿಗಾಗಿ : ಯು.ಎಸ್.ಮಹೇಶ್ – 9342274331 

ಚಿ.ಉದಯಶಂಕರ್ ಮತ್ತು ವಿಜಯನಾರಸಿಂಹ ಅವರ ಆತ್ಮಕತೆಗಳನ್ನು ನಾನು ಬರೆದು ಕೊಳ್ಳಲು ಆರಂಭಿಸಿದ್ದರೂ ಅದು ಪೂರ್ಣವಾಗಿರಲಿಲ್ಲ. ಹೀಗಾಗಿ ಆರ್.ಎನ್.ಜಯಗೋಪಾಲ್ ಅವರ ಆತ್ಮಕತೆಯನ್ನು ನಾನು ಪೂರ್ಣಗೊಳಿಸಲೇ ಬೇಕು ಎಂದು ಕನಸು ಕಟ್ಟಿದೆ. ಜಯಗೋಪಾಲ್ ತಾವು ಯಾವ ಸಂದರ್ಭ, ಯಾರ ಕುರಿತು ಬರೆಯ ಬೇಕು ಎಂದು ಹೇಳುತ್ತಿದ್ದರು, ಅದಕ್ಕೆ ಪೂರಕವಾದ ಮಾಹಿತಿಗಳನ್ನು ನಾನು ಮೊದಲೇ ಕಳುಹಿಸುತ್ತಿದ್ದೆ. ಅವರು ಬೆಂಗಳೂರಿಗೆ ಬಂದಾಗ ಹೋಟಲ್ ಜನಾರ್ದನದಲ್ಲಿ ಕುಳಿತು ನೆನಪುಗಳನ್ನು ಡಿಕ್ಟೇಟ್ ಮಾಡುತ್ತಿದ್ದರು. ನಾನು ಅದಕ್ಕೆ ಒಂದು ರೂಪ ನೀಡಿ ಅವರಿಗೆ ಕಳುಹಿಸಿದರೆ ತಿದ್ದಿ ಸರಿ ಪಡಿಸುತ್ತಿದ್ದರು. ಈ ಕಾರ್ಯ ನಿರಂತರವಾಗಿ ಐದು ವರ್ಷ ನಡೆಯಿತು. ಸುಮಾರು 800 ಪುಟಗಳ ಡಿಕ್ಟೇಷನ್ ನಾನು ತೆಗೆದು ಕೊಂಡಿದ್ದೇನೆ. ಅದು ನಿಜಕ್ಕೂ ನನ್ನ ಬದುಕಿನ ಸಾರ್ಥಕ ಘಟ್ಟ. ಜಯಗೋಪಾಲ್ ಅವರ ಜ್ಞಾಪಕ ಶಕ್ತಿ ಅಗಾಧವಾದದ್ದು ಒಂದು ಎಳೆ ಸಿಕ್ಕರೂ ಸಾಕು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರು. ಅವರ ವಿವರಣೆ ಹಿಡಿಯಲು ಎಷ್ಟೊ ಸಲ ಭಾಷೆ ಸೋಲುತ್ತಿತ್ತು. ಅವರ ಮಾತುಗಳಲ್ಲಿ ಆತ್ಮ ಪ್ರತ್ಯಯವಾಗಲಿ, ಉತ್ಪ್ರೇಕ್ಷೆಯಾಗಲಿ ಎಂದಿಗೂ ಇರುತ್ತಿರಲಿಲ್ಲ. ಅದು ಅವರ ಆತ್ಮಕತೆ ಎನ್ನುವುದಕ್ಕಿಂತ ಕನ್ನಡ ಚಿತ್ರರಂಗದ ಇತಿಹಾಸವೇ ಆಗಿತ್ತು. ಪ್ರತಿ ವ್ಯಕ್ತಿಯ ಸಾಧನೆಯ ಹಿನ್ನೆಲೆ, ಚಿತ್ರ-ಚಿತ್ರಗೀತೆ ರೂಪುಗೊಂಡ ಹಿನ್ನೆಲೆ ಎಲ್ಲವನ್ನೂ ಅವರು ವಿವರಿಸುತ್ತಿದ್ದರು. ಜಯಗೋಪಾಲ್ ಸೌಂಡ್ ಇಂಜಿನಿಯರ್ ಕೂಡ ಆಗಿದ್ದರಿಂದ ಕನ್ನಡ ಚಿತ್ರರಂಗ ಕಂಡ ತಾಂತ್ರಿಕ ಪ್ರಗತಿಯನ್ನು ವಿಷದವಾಗಿ ವಿವರಿಸುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿಯೇ ಮೊಟ್ಟ ಮೊದಲ ಸಲ ಚಿತ್ರಗೀತೆಗಳ ಯಶಸ್ಸಿಗೆ ಕಾರಣರಾದ ಸೌಂಡ್ ಇಂಜಿನಿಯರ್ಗಳ ವಿವರ ಈ ಕೃತಿಯಲ್ಲಿದೆ. ಗ್ರಾಮಾಪೋನ್ ಪ್ಲೇಟ್, ಕ್ಯಾಸೆಟ್, ಎಲ್.ಪಿ, ಸಿಡಿ ಇಂತಹ ಬೆಳವಣಿಗೆಯ ವಿವರವೂ ಇಲ್ಲಿದೆ.

ಈ ನೆನಪುಗಳನ್ನು ನಾನು ಮಲ್ಲಿಗೆ ಮಾಸ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಿಸಿದೆ. ಆಗಸ್ಟ್ 2006ರ ಸಂಚಿಕೆಯಿಂದ ಇದರ ಪ್ರಕಟಣೆ ಆರಂಭವಾಯಿತು. ಇದಕ್ಕೆ ಬಂದ ಉತ್ಸಾಹಕರ ಪ್ರತಿಕ್ರಿಯೆಗಳು ಜಯಗೋಪಾಲ್ ಅವರನ್ನು ಸಂತೋಷಗೊಳಿಸಿ ಕಾರ್ಯ ವೇಗವಾಗಿ ಸಾಗಲು ಕಾರಣವಾಯಿತು. ಆದರೆ ಅವರು ‘ರಾಮಾಯಣ’ ಧಾರವಾಹಿ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಸಿ ಕೊಂಡರು. ಇದು ಬರವಣಿಗೆಯ ವೇಗ ಕುಂಠಿತವಾಗಲು ಕಾರಣವಾಯಿತು. ಮುಂದೆ ಅನೇಕ ಘಟನೆಗಳು ನಡೆದು 2008ರ ಮೇ 19ರಂದು ಅವರು ‘ಉಳಿಸಿ ಕಣ್ಣ ನೀರ ನಮ್ಮ ಪಾಲಿಗೆ’ ಹೊರಟೇ ಹೋದರು.

ಆಗ ಆತ್ಮಕತೆಯ 24 ಅಧ್ಯಾ ಯಗಳು ಪೂರ್ತಿಯಾಗಿದ್ದವು. ಮುಂದೇನು ಎಂದು ದಾರಿ ತೋಚದಾಗ ಜಯಗೋಪಾಲ್ ಅವರ ಮಡದಿ ಡಾ.ಲಲಿತಾ ಜಯಗೋಪಾಲ್ ‘ಇದನ್ನು ನೀವು ಪೂರ್ತಿಗೊಳಿಸಿ’ ಎಂದು ಬೆಂಬಲವಾಗಿ ನಿಂತರು. ಆಗ ಆಗಿದ್ದ ಬರವಣಿಗೆಗೆ ಒಂದು ರೂಪ ನೀಡಿ.. 25 ಅಧ್ಯಾಯವನ್ನು ಬಿಟ್ಟು ಹೋದ ನೆನಪುಗಳ ಹಿನ್ನೆಲೆಯಲ್ಲಿ ನಾನೇ ಬರೆದೆ. ಇದನ್ನು ಲಲಿತಾ ಮೇಡಂ ಪೂರ್ಣವಾಗಿ ಓದಿ ಒಪ್ಪಿಗೆ ಕೊಟ್ಟರು. ಆದರೆ ಪುಸ್ತಕ ರೂಪದಲ್ಲಿ ಬರುವ ಮೊದಲೇ 2010ರ ಜೂನ್ 12ರಂದು ಅವರೂ ನಮ್ಮನ್ನು ಅಗಲಿದರು. ಅಲ್ಲಿಂದ ಮುಂದೆ ಜಯಗೋಪಾಲ್ ಮಗ ರವಿಪ್ರಶಾಂತ್ ಮತ್ತು ಸೊಸೆ ವೀಣಾ ಈ ಕೆಲಸಕ್ಕೆ ಬೆಂಬಲವಾದರು. ನನ್ನ ಬಳಿ ಇದ್ದ 800 ಪುಟಗಳಲ್ಲಿ ಆಯ್ಕೆ ಮಾಡಿ 272 ಪುಟಗಳ ಕೃತಿ 2010ರಲ್ಲಿ ಮೊದಲ ಮುದ್ರಣ ಕಂಡಿತು. ಇದನ್ನು ಪರಿಷ್ಕರಿಸಿ ಇನ್ನಷ್ಟು ಒಪ್ಪವಾಗುವ ಆಯ್ಕೆ ಇದ್ದೇ ಇತ್ತು. ಈಗ ಅದು ಸಾಧ್ಯವಾಗಿದೆ.

ಪ್ರತಿಗಳು ಬೇಕಾದವರುದ  ಅವರನ್ನು ನಲ್ಲಿ ಸಂಪರ್ಕಿಸ ಬಹುದು.


  • ಎನ್.ಎಸ್.ಶ್ರೀಧರ ಮೂರ್ತಿ – ಸಿನಿಮಾ ವಿಮರ್ಶಕರು, ಪತ್ರಕರ್ತರು, ಲೇಖಕರು 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading