ಗಿರಿಜಾ ಶಾಸ್ತ್ರಿ ಹಾಗೂ ರಘುನಾಥ್ ಕೃಷ್ಣಮಾಚಾರ್ ಅವರ ಪುತ್ರ ನಿಶಾಂತ್ ಆಗಲಿ ಮೇ ೨೩,೨೦೨೩ ಕ್ಕೆ ಒಂದು ವರ್ಷವಾಯಿತು. ಮಗನ ನೆನಪಲ್ಲಿ ತಾಯಿ ಕಣ್ಣೀರು ಹರಿಸಿದ್ದು ಆಯ್ತು, ಈಗ ಮಗನ ನೆನಪಿನಲ್ಲಿ ಒಂದು ಪುಸ್ತಕವು ಕೂಡಾ ಬರುತಿದೆ….
“ನಾನು ಬರ್ತೀನಿ ಮಾಜೀ, ನಬ್ಬೆ ಪರ್ಸೆಂಟ್ ಬಂದೇ ಬರ್ತೀನಿ. ಆದ್ರೆ ಯಾವುದಾದರೂ ಹೆಣ ಬಿದ್ರೆ ಮಾತ್ರ ಕೂಡಲೇ ಹೊರಡಬೇಕಾಗುತ್ತೆ” ಹೀಗೆ ಹೇಳಿ ಅಯೂಬ ಫೋನ್ ಇಟ್ಟ.
ಮಾರನೆಯ ದಿನ ೨೮ ನೆಯ ತಾರೀಖು. ನನ್ನ ಹಿರಿಯ ಮಗ ನಿಶಾಂತ ಕಾಲವಾದ ದಿನವದು. ವರ್ಷದ ಹಿಂದೆಯಷ್ಟೇ ಧಗಧಗನೆ ನನ್ನ ಕಣ್ಣ ಮುಂದೆಯೇ ಉರಿದು ಹೋದವನು. ಅವನ ನೆನಪಿನಲ್ಲಿ ಅನಾಥ ಮಕ್ಕಳಿಗೆ ಒಂದು ಊಟ ಹಾಕಬೇಕೆನಿಸಿತು. ಮೈಸೂರಿನಲ್ಲಿ , ಏನಾದರೂ ಅನಾಥಾಶ್ರಮ, ವೃದ್ಧಾಶ್ರಮ, ಹುಚ್ಚರ ಆಶ್ರಮ, ಸಾಮಾಜ ಸೇವಾ ಸೇನಾನಿಗಳು, the so called “ಅರ್ಬನ್ ನಕ್ಸಲೈಟ್ ಗಳು” ಹೀಗೆ ಹಲವೆಂಟು ಸಂಸ್ಥೆಗಳ ಜೊತೆ ಸಂಪರ್ಕ ಇರುವುದೆಂದರೆ ನನ್ನ ಅಣ್ಣ ಸೀತಾರಾಮನಿಗೇ.
ಸರಿ , ಬೆಳಿಗ್ಗೆ ಹೊರಟೆವು ಮೇಟಗಳ್ಳಿಯಲ್ಲಿರುವ ಆಶಾದಾಯಕ ಸಂಸ್ಥೆಗೆ. ನಮ್ಮ ಜೊತೆ ನನ್ನ ಸೋದರ ಸಂಬಂಧಿ, ಸಾಮಾಜಿಕ ಸೇವೆಗಳಿಗೆ ತನ್ನನ್ನು ತಾನು ತೆತ್ತುಕೊಂಡ, ವನಿತಾ ಸೇವಾ ಸದನದ ಕಾರ್ಯದರ್ಶಿಯೂ ಆದ ಯಶಸ್ವಿನಿಯೂ ಜೊತೆಗೆ ಸೇರಿಕೊಂಡಳು.
ಯಾವುದೇ ಆರ್ಥಿಕ ಬಲವಿಲ್ಲದ ಸಣ್ಣ ಸಂಸ್ಥೆಯದು. ( ಇದರ ಬಗ್ಗೆ ವಿವರವಾಗಿ ಸೀತಾರಾಮ್ ಬರೆದಿದ್ದಾರೆ. ಅದನ್ನು ರಘುನಾಥ್ ಅವರ ಗೋಡೆಯ ಮೇಲೆನೋಡ ಬಹುದು).
ನನ್ನೂರು ಸಾಲಿಗ್ರಾಮ ಮೂಲದ ಸುರೇಶ್ ಹಾಗೂ ಪಾರ್ವತಿ ದಂಪತಿ ನಡೆಸುತ್ತಿರುವ ಈ ಆಶಾದಾಯಕ ಸಂಸ್ಥೆಯಲ್ಲಿ ಇಪ್ಪತ್ತೈದು ಮಕ್ಕಳಿದ್ದಾರೆ. ಎರಡನೇ ತರಗತಿಯಿಂದ ಹಿಡಿದು ಪಿ.ಯು.ಸಿಯವರೆಗೆ ಓದುವ ಹೆಣ್ಣು ಗಂಡು ಮಕ್ಕಳು. ಈ ಮಕ್ಕಳು ನಾವು ಹೋದ ತಕ್ಷಣ ಕೈಮುಗಿದು ಒಳಬರ ಮಾಡಿಕೊಂಡು ಕುರ್ಚಿಯಲ್ಲಿ ಕುಳ್ಳಿರಿಸಿದರು. ಸುರೇಶ್ ಅವರು ಇನ್ನೂ ಬಂದಿರಲಿಲ್ಲ. ನಾನು ನೇರ ಅಡುಗೆ ಮನೆಗೇ ನಡೆದೆ. ಒಲೆಯ ಮೇಲೆ ಏನೋ ಕೆದಕುತ್ತಿದ್ದರು ಪಾರ್ವತಮ್ಮ . “ಇನ್ನೇನು ಬಂದು ಬಿಡ್ತಾರೆ ಕೂತ್ಕೊಳ್ಳಿ” ಎಂದರು. “ಅಡುಗೆ ತಯಾರಾಗಿದೆ ಇನ್ನೊಂದು ಹತ್ತು ನಿಮಿಷ ಪರವಾಗಿಲ್ವೇ” ಕಕ್ಕುಲಾತಿ ತೋರಿಸಿದರು.

ಅಷ್ಟುಹೊತ್ತಿಗೆ ಸುರೇಶ್ ಅವರೂ ಬಂದರು. ಅಯೂಬನೂ ತನ್ನ “ಇನ್ಸಾನಿಯತ್ ಟ್ರಸ್ಟ್” ಎಂಬ ಒಮಿನಿ ರಥವೇರಿ ಬಂದ. ಹೆಣಗಳನ್ನು ಸಾಗಿಸಲೂ ಅದೇ , ನಾನಾ ಕಡೆಗಳಲ್ಲಿ ಬಡವರ ಭೋಜನ ತಯಾರಿಸುವ ಅಕ್ಕಿ ಬೇಳೆ ರಾಷನ್ ಸಾಗಿಸಲೂ ಅದೇ! ಒಂದೇ ರಥ! ಅದೇ ಇನ್ಸಾನಿಯತ್ ಗಾಡಿ.
ನಾವು ಕೆಲ ಮಹಿಳೆಯರು ಬಡಿಸಲು ನೆರವಾದೆವು. ಕೇವಲ ಅನ್ನ ಸಾಂಬಾರ್ ಮಾಡಿರಬಹುದು, ಮಜ್ಜಿಗೆ ಕೂಡ ಇರುತ್ತದೆಯೋ ಇಲ್ಲವೋ ಎಂದು ಆತಂಕ ಪಟ್ಟುಕೊಂಡಿದ್ದವಳಿಗೆ (ನಮಗೆ ಮೊಸರು ,ಮಜ್ಜಿಗೆ ಇಲ್ಲದಿದ್ದರೆ ಜೀವವೇ ಹೋಗುವುದಲ್ಲ!! ) ಪುಳಿಯೋಗರೆ, ಚಿತ್ರಾನ್ನ, ಕೋಸಂಬರಿ, ಪಲ್ಯ, ಬೋಂಡ , ಮೈಸೂರು ಪಾಕ್, ಕೊತ್ತಂಬರಿ ಸೊಪ್ಪು, ದಾಳಿಂಬೆ ಕಾಳುಗಳಿಂದ ಅಲಂಕೃತಗೊಂಡ ಮೊಸರನ್ನ… ಹೀಗೆ ಭಾರಿ ಭೋಜನವೇ !ಕ್ಷಮಿಸಿ ಭೂರಿ ಭೋಜನವಲ್ಲ! ತಯಾರಾಗಿತ್ತು.

ಎಲ್ಲವೂ ಪಾರ್ವತಮ್ಮನವರ ನೇತೃತ್ವದಿಂದಲೇ ತಯಾರಾದವು. ‘ಭೂರಿ’ಯಲ್ಲ ಯಾಕೆಂದರೆ ಅಲ್ಲಿದ್ದವನು ಅಯೂಬ, ಮತ್ತು ದಲಿತ ಜಾತಿಗೆ ಸೇರಿದ ಸುರೇಶ್ ದಂಪತಿ, ಮಕ್ಕಳು ಯಾರೋ ಸ್ವತಃ ಅವರಿಗೂ ಗೊತ್ತಿಲ್ಲ. ದಾಖಲೆಯಲ್ಲಿ ಹಿಂದುಗಳು ಅಷ್ಟೇ. ಆದರೆ ಊಟ ಮಾತ್ರ ‘ಭೂರಿ’ಗಿಂತಲೂ ರುಚಿ, ಶುಚಿ, ನಂಚಿಕೊಳ್ಳಲು ಭರಪೂರ ಪ್ರೀತಿ ಕಣ್ಣು ತುಂಬಿ ಬಂದಿತು.
ಪಕ್ಕದಲ್ಲೇ ಇದ್ದ ಅಯೂಬ “ರೋ ಮತ್ , ಮೇ ಹ್ಞೂನಾ ತುಮಾರಾ ಬೇಟಾ! ಜಹಾಂ ಭೀ ಹೈ ತುಮ್ಹಾರ ಓ ಬೇಟಾ ಅಚ್ಛೀ ಜಗಾ ಪೇ ಹೀ ರಹೇಗಾ, ಸುಕೂನ್ ಸೆ ರಹೇಗಾ, ರೋನಾ ನಹೀಂ” ಭುಜ ಹಿಡಿದುಕೊಂಡ. ಸತ್ತ ಆ ಮಗನೇ ಹೀಗೆ ಹೇಳುತ್ತಿದ್ದನೋ ಇಲ್ಲವೋ ! ಈ ಮೂಬೋಲಿ ಬೇಟಾ ( ಮಾನಸ ಪುತ್ರ) ಹೇಳಿದ.
ಮೇಲಿಂದ ಮೇಲೆ ಬರುತ್ತಿದ್ದ ಕರೆಗಳನ್ನು ಕಟ್ ಮಾಡುತ್ತಿದ್ದ. ಊಟಕ್ಕೆ ಮುಂಚೆ ಅನ್ನಪೂರ್ಣೇಶ್ವರಿಯ ಪ್ರಾರ್ಥನೆಯನ್ನು ಮಕ್ಕಳು ಮಾಡುವಾಗ ಕಣ್ಣು ಮುಚ್ಚಿ ಮೌನವಾಗಿ ಕುಳಿತಿದ್ದ. ಈ ಅಪ್ಪ ಅಮ್ಮಂದಿರಿಗೆ ಸುಕೂನ್ ( ನೆಮ್ಮದಿ)ಸಿಗಲಿ ಎಂದು ಪ್ರಾರ್ಥಿಸಿ ಎಂದು ಮಕ್ಕಳನ್ನು ಕೇಳಿಕೊಂಡ. ಹಾಗೇ ತಾನೂ ಪ್ರಾರ್ಥಿಸಿದ. ಅತಿಥಿಗಳಿಗೆಂದು ಊಟದ ಟೇಬಲ್ ಸಿದ್ಧ ಪಡಿಸಿದ್ದರು. ತಾನು ಮಕ್ಕಳ ಜೊತೆಯಲ್ಲೇ ನೆಲದ ಮೇಲೆ ಕೂರುವುನೆಂದು ಹೋಗಿ ಕುಳಿತ ಸೀತಾರಾಮನ ಪಕ್ಕದಲ್ಲೇ ಹೋಗಿ ಅವನೂ ಕುಳಿತ. ಕೊನೆಗೆ ಅವನು ಹೊರಡುವಾಗ ನಾವು ಕೊಟ್ಟ ಕಿಂಚಿತ್ ಹಣದಲ್ಲಿ “ನಿಮ್ಮ ಮಗನ ನೆನಪಾಗಿ ಹೆಣಗಳ ಕಫನ್ ಖರೀದಿಸುವೆ ಇದರಲ್ಲಿ” ಎಂದು ಹೇಳಿದ. ಕಣ್ಣುಗಳಲ್ಲಿ ಕರುರಣೆಯ ಸಾಗರ ಧುಮುಕುತ್ತಿತ್ತು.

ನಾವು ಬಡಿಸುವಾಗ ಪ್ರತಿಯೊಂದು ಮಗುವೂ ಥ್ಯಾಂಕ್ಸ್ ಎಂದು ಹೇಳುತ್ತಿತ್ತು. ಅಲ್ಲೊಂದು ಚಿಲ್ಟಾರಿ, ಎರಡನೆಯ ತರಗತಿಯ ರಿಹಾನ್ ಅಂತೆ! ಪಟಪಟನೆ ಕನ್ನಡ ಪದ್ಯಗಳನ್ನು ಹೇಳಿತು. ಇಷ್ಟು ಚೂಟಿಯಾದ, ಚೆಂದದ ಮುದ್ದು ಮಗುವನ್ನು ಅದಾವ ತಾಯಿ ಬೀದಿಗೆ ಎಸೆದಿದ್ದಳೋ?! ಮಗುವನ್ನು ಕಳೆದುಕೊಂಡ ನಾನು, ತಾಯಿಯನ್ನು ಕಳೆದುಕೊಂಡ ಆ ಕೂಸು, ಇಬ್ಬರೂ ಒಂದೇ ಜಾಗದಲ್ಲಿ ನಿಂತಿದ್ದೇವೆ ಎನಿಸಿತು. ಇಬ್ಬರೂ, ತಬ್ಬಿಕೊಳ್ಳುವರು ಇಲ್ಲದ ತಬ್ಬಲಿಗಳು. ಒಂದು ಕ್ಷಣಕ್ಕೆ “ಇವನನ್ನು ನನಗೆ ಕೊಟ್ಟು ಬಿಡಿ ಸುರೇಶ್ ಅವರೇ” ಎನ್ನುವ ಮಾತು ನಾಲಗೆಯ ತುದಿಯವರೆಗೂ ಬಂದದ್ದು ಅಲ್ಲೇ ಉಳಿದು ಬಿಟ್ಟಿತು.
ಅಲ್ಲೊಂದು ಪುಟ್ಟ ಹುಡುಗಿ ಊಟಮಾಡಿದ ತಟ್ಟೆಯನ್ನು ತೊಳೆಯಲು ನಾನು ನಲ್ಲಿಕಟ್ಟೆಯ ಬಳಿಗೆ ಹೋದಾಗ ” ಬೇಡ, ಇಲ್ಲಿ ಕೊಡಿ” ಎಂದು ತಟ್ಟೆಯನ್ನು ಕಿತ್ತುಕೊಂಡು ಕೈತೊಳೆದುಕೊಳ್ಳಲು ಅನುವು ಮಾಡಿಕೊಡ್ಟಿತು. ಅವಳ ಐದುಕಾಲಿನ ಸುಂದರವಾದ ಜಡೆಯ ಕಡೆಗೆ ಕಣ್ಣು ಹೋಯಿತು. “ಯಾರು ಹಾಕಿದ್ದು ಇಷ್ಟು ಚೆನ್ನಾಗಿ?” ಎಂದು ನಾನು ಕೇಳಿದ್ದಕ್ಕೆ “ಅಮ್ಮ” ಎಂದಿತು. ತಬ್ಬಿಬ್ಬಾದ ನಾನು ಅಲ್ಲಿಯೇ ನಿಂತಿದ್ದ ಒಬ್ಬ ದೊಡ್ಡ ಹುಡುಗಿಯನ್ನು ಕೇಳಿದೆ “ಇವಳಿಗೆ ಅಮ್ಮ ಇದ್ದಾರಾ?”
“ಇಲ್ಲ ಮೇಡಂ ನಾವು ಎಲ್ಲಾರೂ ಪಾರ್ವತಿ ಮೇಡಂ ಅವರನ್ನು ಕರೆಯುವುದು ಅಮ್ಮಾ ಎಂದೇ, ಸುರೇಶ್ ಅವರು ಫಾದರ್ ” ಎಂದಳು.
ಹಾಲು ಕುಡಿಯಲು,ಊಟ ಮಾಡಲು ಎಷ್ಟು ರಂಪ ಮಾಡುತ್ತವೆ ಮಕ್ಕಳು. ಇಡೀ ದುನಿಯಾ ತೋರಿಸಬೇಕು, ಪುಸಲಾಯಿಸಬೇಕು, ಗಮನ ತಪ್ಪಿಸಬೇಕು, ಬಾಯಿ ಆ ಎನ್ನುವ ಗಳಿಗೆಗೆ ಕಾಯುತ್ತಾ , ಹಾಗೆಂದ ಕೂಡಲೇ ತುತ್ತು ತುರುಕಿ ಬಿಡಬೇಕು. ಇಲ್ಲ ಸಲ್ಲದ ಕಥೆಗಳನ್ನು ಸೃಷ್ಟಿಸಿಕೊಂಡು ಹೇಳಬೇಕು, ತರಾವರಿ ಮುದ್ದು, ಆಮಿಷ …..ತಟ್ಟೆಯಲ್ಲಿ ಕಲಸಿದ್ದೆಲ್ಲಾ ಪೂರ್ತಿ ಖಾಲಿಯಾದರೆ ಅದೆಷ್ಟು ಖುಷಿ. ಯುದ್ಧ ಗೆದ್ದ ಹೆಮ್ಮೆ!!! ಇಬ್ಬರು ಮಕ್ಕಳಿದ್ದರಂತೂ ಜಗಳ ಪೈಪೋಟಿ ತೀರಿಸುವುದರಲ್ಲೇ ಸುಸ್ತು.

ಒಂದೆರೆಡು ಮಕ್ಕಳಿಗೇ ಹೈರಾಣಾಗುವ ನಾವು, ಇಪ್ಪತೈದು ಮಕ್ಕಳನ್ನು ಒಂದೇ ಕುಟುಂಬದಂತೆ ಸಾಕುತ್ತಿರುವ ಆ ತಾಯಿ ಮಹಾತಾಯಿ ಪಾರ್ವತಿ ನಿಜವಾದ ಅನ್ನಪೂರ್ಣೆಯೇ ಸರಿ. ಮಕ್ಕಳ ಹೊಟ್ಟೆ ಬಟ್ಟೆ ನೋಡಿಕೊಳ್ಳುವ ಅನಾಥಾಶ್ರಮಗಳು ಬಹಳ ಇರಬಹುದು ಆದರೆ ಅವರಿಗೆ ಶಿಸ್ತು ಮತ್ತು ಒಳ್ಳೆಯ ಸಂಸ್ಕಾರವನ್ನು ಕೊಡುವವರು ಅಪರೂಪ.
ಮಕ್ಕಳನ್ನು ಬೀಳ್ಕೊಟ್ಟು ಎರಡು ಗಂಟೆಯ ವೇಳೆಗೆ ನಾವು ಮನೆಯ ಕಡೆಗೆ ಹೊರಟೆವು. “ನಾಲ್ಕು ಹೆಣಗಳು ಕಾಯ್ತಾ ಇವೆ ದಫನ್ ಮಾಡ್ಬೇಕ್ “ಅಂತ ಅಯೂಬನೂ ಹೊರಟ.
( body miyan ಅಯೂಬನ ಬಗ್ಗೆ ಹಿಂದೆ ಬರೆದಿದ್ದೆ)
ಜನರು ವೈಯಕ್ತಿಕವಾಗಿ ದಾನಮಾಡುವ ಚಿಲ್ಲರೆ ಹಣದಿಂದಲೇ ಈ ಸಂಸ್ಥೆ ನಡೆಯಬೇಕಾಗಿದೆ. ಸರ್ಕಾರದ ನೆರವು ಇಲ್ಲವೆಂತಲ್ಲ. ಆದರೆ ಸರ್ಕಾರದಿಂದ ಇಂತಹ ಸಂಸ್ಥೆಗಳಿಗೆಂದೇ ಮಂಜೂರಾಗುವ ಲಕ್ಷ ಕೋಟಿ ರೂಗಳು ಮಧ್ಯವರ್ತಿಗಳ ಲಾಲಸೆಯಿಂದಾಗಿ, ಅಧಿಕಾರಿಗಳ ಆಮಿಷದಿಂದಾಗಿ, ತಲಪುವವರಿಗೆ ತಲಪದೇ ವಾಪಸ್ಸಾಗುತ್ತಿವೆ. ಆಸಕ್ತರು ಸಹಾಯ ಮಾಡಬಹುದು.

ಒಂದು ವರುಷದಿಂದ ಮೊಗಹೊತ್ತಿಗೆಗೆ ಮೊಗತಿರುವಿದ ನನ್ನನ್ನು ಪುಟ್ಟ ರಿಹಾನ್ ಮತ್ತೆ ಇಲ್ಲಿಗೆ ಎಳೆದುಕೊಂಡು ಬಂದಿದ್ದಾನೆ. ಒಳಗಿನಿಂದ ಒದ್ದುಕೊಂಡು ಬರುತ್ತಿದೆ, ಬರೆದಿದ್ದೇನೆ.
ನಾನು ನನ್ನ ego boost ಮಾಡಿಕೊಳ್ಳುತ್ತಿದ್ದೇನೆಯೇ? ಅಥವಾ ಇದು “ಸಾವಿನಂಗಳದ ಮುಸ್ಸಂಜೆಯ ಹೊತ್ತಿ”ನ ತಳಮಳವೇ? ಅನಾಥ ಮಕ್ಕಳಿಗೆ ಊಟಕಿಕ್ಕಿದ ಸಾರ್ಥಕ ಸಮಾಧಾನವೇ?, ಆಶಾದಾಯಕ ಟ್ರಸ್ಟ್ ನ ಜಾಹೀರಾತೇ? ದಲಿತ -ಬ್ರಾಹ್ಮಣ, ಹಿಂದು ಮುಸ್ಲಿಮ್ ಸೌಹಾರ್ದದ ಬೊಗಳೆಯೇ? ಗೊತ್ತಿಲ್ಲ. ಗೊಂದಲವಿದೆ. ಬರೆಯುತ್ತಿದ್ದೇನೆ. ಇಲ್ಲದಿದ್ದರೆ ಸತ್ತೇಹೋಗಿಬಿಡಬಹುದು ಎನ್ನುವ ಭಯಕ್ಕೆ.

ಓದುಗರು ಹೇಗೆ ಗ್ರಹಿಸಿದರೂ ನಾನು ಘಾಸಿಗೊಳ್ಳುವುದಿಲ್ಲ. ಮೊದಲೇ ಬೆಂಕಿಕೊಂಡದಲ್ಲಿ ಬಿದ್ದಿರುವವಳಿಗೆ ಇನ್ನೆಂತಹ ಘಾಸಿ?
- ಗಿರಿಜಾ ಶಾಸ್ತ್ರೀ
