ಜೆ.ಎಸ್.ಎಸ್. ದಂತ ವಿಜ್ಞಾನ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕಿ ಡಾ. ಉಷಾ ಹೆಗಡೆಯವರು ಮೌಂಟ್ ಎವರೆಸ್ಟ್ ಏರಿದ ಕರ್ನಾಟಕದ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ವಿಜ್ಞಾನಿ, ಲೇಖಕರು, ಪ್ರಾಧ್ಯಾಪಕರಾದ ಡಾ.ಪ್ರಸನ್ನ ಸಂತೇಕಡೂರು ಅವರು ಡಾ. ಉಷಾ ಹೆಗಡೆ ಅವರ ಸಾಧನೆಯ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ನಮ್ಮ ಸಂತೇಕಡೂರಿನಲ್ಲಿ ಎಸ್.ಕೆ. ಸುರೇಶ್ ಮತ್ತು ಎಸ್.ಕೆ. ಮಂಜುನಾಥ್ ಎಂಬ ಇಬ್ಬರು ಯುವಕರು ಮತ್ತೂರಿನ ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೆಗೂ ಓದಿ ನಮ್ಮ ಊರಿನಲ್ಲಿ ಪಾಠದ ಮನೆಗಳನ್ನು ನೆಡೆಸುತ್ತಿದ್ದರು. ನನ್ನ ಆರಂಭಿಕ ವಿದ್ಯಾಭ್ಯಾಸದ ದಿನಗಳಲ್ಲಿ ನಾನು ಆ ಪಾಠದ ಮನೆಗಳಿಗೆ ಹೋಗುತ್ತಿದ್ದೆ. ಅಲ್ಲಿ ಆಗಾಗ ನಮಗೆಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಬಹಳ ಕೇಳುತ್ತಿದ್ದರು. ಆ ಪ್ರಶ್ನೆಗಳಲ್ಲಿ ಎರಡು ಪ್ರಶ್ನೆಗಳು ಸಾಮಾನ್ಯವಾಗಿ ಇರುತ್ತಿದ್ದವು.

ಅದರಲ್ಲಿ ಒಂದು ಮೌಂಟ್ ಎವರೆಸ್ಟ್ ಶಿಖರವೇರಿದ ಮೊದಲ ವ್ಯಕ್ತಿ ಯಾರು? ಎಂದು. ಇನ್ನೊಂದು ಮೌಂಟ್ ಎವರೆಸ್ಟ್ ಶಿಖರವೇರಿದ ಮೊದಲ ಮಹಿಳೆ ಯಾರು? ಎಂಬುದು.
ನಾವು ತೇನ್ ಸಿಂಗ್( ತೇನ್ಸಿಂಗ್) ನೋರ್ಗೆ ಮತ್ತು ಎಡ್ಮಂಡ್ ಹಿಲರಿ ಎಂದು ಹೇಳುತ್ತಿದೆವು. ಮಹಿಳೆ ಹೆಸರು ಹೇಳುವಾಗ ತುಂಬಾ ಕಷ್ಟಪಡುತ್ತಿದ್ದೆವು. ಆ ಜಪಾನಿ ಮಹಿಳೆ ಜುಂಕೋ ತಾಬಿ ಎಂಬ ಹೆಸರು ಇಂದಿಗೂ ಅಷ್ಟೇ ಅಪರೂಪವಾಗಿದೆ. ಮೌಂಟ್ ಎವರೆಸ್ಟ್ ಏರಿದ ತೇನ್ಸಿಂಗ್ ನೋರ್ಗೆ ಇಪ್ಪತ್ತನೇ ಶತಮಾನದಲ್ಲಿ ಜಗತ್ತಿನ ನೂರು ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬನಾದ.
ಇತ್ತೀಚೆಗೆ ನಮ್ಮ ಜೆ.ಎಸ್.ಎಸ್. ದಂತ ವಿಜ್ಞಾನ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕಿ ಡಾ. ಉಷಾ ಹೆಗಡೆಯವರು ಮೌಂಟ್ ಎವರೆಸ್ಟ್ ಏರಿದ ಕರ್ನಾಟಕದ ನಾಲ್ಕನೇ ವ್ಯಕ್ತಿಯಾಗಿ, ಮೈಸೂರಿನಿಂದ ಮೊದಲನೇ ವ್ಯಕ್ತಿಯಾಗಿ ಈ ಸಾಧನೆ ಮಾಡಿದ್ದಾರೆ. ಇವರು Ironman Triathlon ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. ಮೌಂಟ್ ಎವರೆಸ್ಟ್ ಶಿಖರವನ್ನ ಬೇಕಾದರೂ ಏರಬಹುದು, ಆದರೆ ಈ ಟ್ರೈಯಥ್ಲಾನ್ ಸ್ಪರ್ಧೆಯಲ್ಲಿ ೨.೪ ಮೈಲು ನೀರಿನಲ್ಲಿ ಈಜಬೇಕು, ೧೧೨ ಮೈಲುಗಳು ಸೈಕಲ್ ಹೊಡೆಯಬೇಕು ಮತ್ತು ೨೬. ೨೨ ಮೈಲುಗಳು ಓಡಬೇಕು. ಈ ಮೂರು ಸ್ಪರ್ಧೆಗಳನ್ನು ಒಂದರ ನಂತರ ಒಂದನ್ನ ಒಂದೇ ದಿನದಲ್ಲಿ ಮಾಡಿ ಮುಗಿಸಬೇಕು. ಉಷಾ ಹೆಗಡೆಯವರು ಇದನ್ನ ಆಸ್ಟ್ರೇಲಿಯ ದೇಶದಲ್ಲಿ ಕೇವಲ ಹದಿನಾಲ್ಕು ಗಂಟೆಗಳಲ್ಲಿ ಮಾಡಿ ಮುಗಿಸಿ ಭಾರತ ದೇಶಕ್ಕೂ ಕೀರ್ತಿ ತಂದಿದ್ದಾರೆ. ಇವರ ಸಾಧನೆ ಅದೆಷ್ಟೋ ದೊಡ್ಡ ದೊಡ್ಡ ಕ್ರೀಡಾಪಟ್ಟುಗಳ ಸಾಧನೆಗಿಂತ ದೊಡ್ಡದು.

ಬಹಳಷ್ಟು ಜನರು ತಮ್ಮಲ್ಲಿರುವ ಸಂಪೂರ್ಣ ಶಕ್ತಿಯನ್ನ ಸದ್ಬಳಕೆ ಮಾಡಿಕೊಂಡಿರುವುದಿಲ್ಲ. ಅದರಲ್ಲೂ ಮಹಿಳೆಯರು ತಮ್ಮಲ್ಲಿರುವ ಅಪಾರವಾದ ಶಕ್ತಿಯ ಬಗ್ಗೆ ಗಮನವನ್ನೇ ಹರಿಸಿರುವುದಿಲ್ಲ. ಅದರಲ್ಲೂ ಮದುವೆಯಾಗಿ ಸಂಸಾರದ ಸುಳಿಯಲ್ಲಿ ಸಿಕ್ಕಾಗ ಗಂಡ, ಮಕ್ಕಳು ಎಂದು ಸಂಪೂರ್ಣವಾಗಿ ತಮ್ಮ ಶಕ್ತಿಯನ್ನೇ ಮರೆತಿರುತ್ತಾರೆ. ಈ ಎಲ್ಲಾ ಕಾರಣದಿಂದ ಉಷಾ ಅವರ ಸಾಧನೆ ಬರಿ ಸ್ತ್ರೀಯರಿಗೆ ಮಾತ್ರವಲ್ಲ ಪುರುಷರಿಗೂ ಕೂಡ ತಮ್ಮಲ್ಲಿರುವ ಶಕ್ತಿಯನ್ನ ಕಂಡುಕೊಳ್ಳಲು ಮಾದರಿಯಾಗಿದೆ.
ಇವರು ನಮ್ಮ ಸಹೋದ್ಯೋಗಿ ಎಂಬುದೇ ಒಂದು ಹೆಮ್ಮೆ. ಇತ್ತೀಚೆಗೆ ಇವರಿಗೆ ನಮ್ಮ ಜೆ.ಎಸ್.ಎಸ್. ಉನ್ನತ ಶಿಕ್ಷಣ ಸಂಸ್ಥೆಯವತಿಯಿಂದ ಒಂದು ಸನ್ಮಾನ ಏರ್ಪಡಿಸಿದ್ದರು. ಈ ಚಿತ್ರಗಳು ಆ ಸಂದರ್ಭದ್ದು.
- ಪ್ರಸನ್ನ ಸಂತೇಕಡೂರು – (ವಿಜ್ಞಾನಿಯಾಗಿ ಮ್ಯಾಸ್ಸಿ ಕ್ಯಾನ್ಸರ್ ಸೆಂಟರಿನಿಂದ ಎಕ್ಸೆಲೆನ್ಸ್ ಇನ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್ ಪಡೆದಿದ್ದಾರೆ, ಸಾಹಿತಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ 2021ನೇ ಅವ್ವ ಪ್ರಶಸ್ತಿ ಪುರಸ್ಕೃತರು ಆಗಿದ್ದಾರೆ ಮತ್ತು ಜೆಎಸ್ ಎಸ್ ಮೆಡಿಕಲ್ ಕಾಲೇಜ್ ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ)
