ಕವಿ ಪದ್ಮಶ್ರೀ ಗೋವಿಂದರಾಜ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಏನ ಬರೆಯಲೇ ಪಾಂಚಾಲಿ,
ಪಂಚ ಪತಿಯರ ಒಡನಾಟವಿದ್ದರೂ ನೀ ಹತಾಶೆಯ ಕುಲುಮೆಯಲಿ ಬೆಂದದ್ದೇ ಹೆಚ್ಚು.
ಕುಹಕ ಜನರ ಕಣ್ಣಿಗೆ
ದಿನ ನಿತ್ಯದ ನಾಲಿಗೆ ಚಪಲ
ನಿನ್ನ ಕಥೆಗಳು,
ಒಹ್ ಅರ್ಜುನ ಗೆದ್ದನಂತೆ ಇವಳನು
ಅದಕೇ ಅವನೆಂದರೆ ಮೊದಲ ಪ್ರೀತಿ.
ಅಲ್ಲಲ್ಲ ಭೀಮ ಪ್ರತಿ ಸೋಲಿನಲೂ ಇವಳ ಸಂತೈಸಿ ಸಲುಹಿದವ
ಇವನೆಂದರೆ ಬಹು ಬಲವು
ಇವಳಿಗೆ,
ಹೇ ಇಲ್ಲ ಕಣೇ! ಅವರಿಬ್ಬರು ಅವಳಿಗಳು
ಅಹ್ ಆ ಮೋಹಕ ಸುಂದರರು!
ಅವರೇ ಇವಳಿಗೆ ಅಚ್ಚು ಮೆಚ್ಚು.
ಧರ್ಮರಾಯ ನ್ಯಾಯ ನೀತಿ ಪಾಲಿಸುವವ
ನೀತಿ ನಿಯಮ ಮೀರದವ
ಇವಳಿಗೆ ಅವನೆoದರೆ ಗೌರವವಂತೆ
ಅಬಬ್ಬಾ! ಎಷ್ಟು ಪುಣ್ಯಶಾಲಿ ಇವಳು ಅಲ್ಲವೇನೇ?
ಹೆ ಇರೆ,
ಕೊನೆಯಲೊಮ್ನೆ ಅವಳಿಗೆ
ಛೆ! ಕರ್ಣನೂ ಪತಿಯಾಗಬೇಕಿತ್ತು ಅನಿಸಿತ್ತಂತೆ ಕಣೇ
ಎಂತಹ ದುರಾಸೆ ನೋಡೇ?
ಕೇಳಿದೆಯಾ ಪಂಚಾಲಿ??
ನಿನ್ನಂತೆಯೇ ಈ ಹೆಣ್ಣುಗಳು ,
ವಠಾರದ ಗಲ್ಲಿಗಳಲಿ ಕಲ್ಲು ಬೆಂಚಿನ ಮೇಲೆ ಕುಳಿತು
ಬರೆದ ರಂಗೋಲಿಯ ಕಾಲ ಬೆರಳಲಿ ಅಳಿಸುತ ಸಮಯ ಕಳೆಯುವರು
ದೇಹ ಸಖ
ದೇಹ ಸುಖ
ಎಂದೆಣಿಸಿದರಷ್ಟೇ ಈ ಅಧಮರು.
ನಿನ್ನಾoತರ್ಯದ ನಿಗೂಢ ಕಾದಂಬರಿಯ ಒಂದಕ್ಷರವೂ ಅರಿಯದೆ ಸೋತ ಮೂಡರು
ಏನು ತಾನೇ ಬರೆಯಲಿ ನಾ
ನಿನ್ನ ಕಥೆಯಲೇ ನೂರು ಸಂಕಟಗಳಿವೆ…
- ಪದ್ಮಶ್ರೀ ಗೋವಿಂದರಾಜ್
