ಆರೋಗ್ಯವೇ ಆಸ್ತಿ : ಗೀತಾಂಜಲಿ ಎನ್ ಎಮ್

ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವೆಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ದಿನದ ಮುಖ್ಯ ಉದ್ದೇಶವೆಂದರೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಬೇಕು ಎಂಬ ಸಂದೇಶವನ್ನು ಹರಡುವುದು. ಈ ದಿನದ ವಿಶೇಷತೆಯ ಕುರಿತು ಗೀತಾಂಜಲಿ ಎನ್ ಎಮ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಆರೋಗ್ಯ ನಮ್ಮ ಜೀವನದ ಮೂಲಭೂತ ಆಧಾರವಾಗಿದೆ. “ಆರೋಗ್ಯ ಇದ್ದರೆ ಎಲ್ಲವೂ ಇದ್ದಂತೆ” ಎಲ್ಲವನ್ನೂ ಗಳಿಸಬಹುದು. ದೇಹ ಮತ್ತು ಮನಸ್ಸು ಆರೋಗ್ಯಕರವಾಗಿದ್ದಾಗ ಮಾತ್ರ ನಾವು ನಮ್ಮ ಗುರಿಗಳನ್ನು ಸಾಧಿಸಲು, ಸಂತೋಷದಿಂದ ಬದುಕಲು ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಶಕ್ತರಾಗುತ್ತೇವೆ.

ಒಬ್ಬ ವ್ಯಕ್ತಿಗೆ ಎಷ್ಟು ಹಣ, ಸ್ಥಾನಮಾನ ಅಥವಾ ಖ್ಯಾತಿ ಇದ್ದರೂ, ಆರೋಗ್ಯ ಇಲ್ಲದಿದ್ದರೆ ಅವುಗಳೆಲ್ಲವೂ ವ್ಯರ್ಥವಾಗಿ ಅರ್ಥಹೀನವಾಗುತ್ತವೆ. ಆರೋಗ್ಯವೇ ನಮ್ಮ ದೈನಂದಿನ ಕಾರ್ಯಗಳಿಗೆ ಶಕ್ತಿ ನೀಡಿ ನಮ್ಮ ಚಿಂತನೆಗೆ ಸ್ಪಷ್ಟತೆ ನೀಡುತ್ತದೆ ಮತ್ತು ನಮ್ಮ ಬದುಕಿಗೆ ಸಮತೋಲನವನ್ನು ತರಿಸುತ್ತದೆ. ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಕ್ಷೇಮವನ್ನು ಒಳಗೊಂಡಿರುವ ಆರೋಗ್ಯದ ಪರಿಕಲ್ಪನೆ, ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗುತ್ತದೆ.

ಇಂದಿನ ವೇಗದ ಜೀವನಶೈಲಿಯಲ್ಲಿ, ನಾವು ಹಣ, ಸ್ಥಾನಮಾನ, ಸಾಧನೆಗಳ ಹಿಂದೆ ಓಡುತ್ತಾ ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದೇವೆ ಎಂದರೂ ತಪ್ಪಿಲ್ಲ. ಜೀವನ ಕ್ರಮ ಸರಿಯಿಲ್ಲದಿರುವುದು, ಅಸಮರ್ಪಕ ಆಹಾರ ಪದ್ಧತಿಯಿಂದ ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆ ಉಂಟಾಗುತ್ತಿದ್ದು ಈ ಎಲ್ಲಾ ಅಂಶಗಳು ನಮ್ಮ ಆರೋಗ್ಯದ ಮೇಲೆ ಮೌನವಾಗಿ ಪರಿಣಾಮ ಬೀರುತ್ತಿದ್ದು ಇವುಗಳು ಮಧುಮೇಹ ಹೃದಯ ರೋಗ, ರಕ್ತದ ಒತ್ತಡ ಮುಂತಾದ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿವೆ.

ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಏಪ್ರಿಲ್ 7ರಂದು ಆಚರಿಸಲಾಗುವ ವಿಶ್ವ ಆರೋಗ್ಯ ದಿನವು, ಜಾಗತಿಕ ಮಟ್ಟದಲ್ಲಿ ಆರೋಗ್ಯದ ಮಹತ್ವವನ್ನು ಪ್ರತಿಪಾದಿಸುವ ಪ್ರಮುಖ ವೇದಿಕೆಯಾಗಿದೆ.
ಮಾನವನ ಜೀವನದಲ್ಲಿ ಆರೋಗ್ಯದ ಮಹತ್ವವನ್ನು ಅರಿವು ಮೂಡಿಸಲು ಮತ್ತು ಉತ್ತಮ ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ ಈ ಆಚರಣೆ “ಆರೋಗ್ಯವೇ ಆಸ್ತಿ” ಎಂಬ ನುಡಿಗಟ್ಟನ್ನು ಮತ್ತು ನಮ್ಮ ಜೀವನದ ನಿಜವಾದ ಸತ್ಯವನ್ನು ಪ್ರತಿಬಿಂಬಿಸುತ್ತದೆ.

ವಿಶ್ವ ಆರೋಗ್ಯ ದಿನದ ಮುಖ್ಯ ಉದ್ದೇಶವೆಂದರೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಬೇಕು ಎಂಬ ಸಂದೇಶವನ್ನು ಹರಡುವುದು. ಆರೋಗ್ಯವೆಂದರೆ ಕೇವಲ ದೇಹದ ಆರೋಗ್ಯವಲ್ಲ, ಬದಲಿಗೆ ಅದು ಮಾನಸಿಕ ಮತ್ತು ಸಾಮಾಜಿಕ ಕ್ಷೇಮವನ್ನೂ ಒಳಗೊಂಡಿದೆ. ಮನಸ್ಸು ಶಾಂತವಾಗಿದ್ದಾಗ ಮಾತ್ರ ದೇಹವೂ ಚುರುಕಾಗಿರುತ್ತದೆ. ಈ ನಿಟ್ಟಿನಲ್ಲಿ ನಾವು ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ, ಮಾನಸಿಕ ಒತ್ತಡವನ್ನು ನಿಯಂತ್ರಿಸುವುದು, ಸ್ವಚ್ಛತೆಯನ್ನು ಕಾಪಾಡುವುದು ಈ ಎಲ್ಲಾ ಅಬ್ಯಾಸಗಳಿಂದ ಆರೋಗ್ಯವನ್ನು ಸಮಸ್ಥಿತಿಯಲ್ಲಿ ಕಾಪಾಡಿಕೊಂಡಾಗ ಮಾನಸಿಕ ಆರೋಗ್ಯದ ಜೊತೆ ದೈಹಿಕ ಆರೋಗ್ಯವೂ ಸುಧಾರಿಸುತ್ತದೆ.

ಸರ್ಕಾರ ಮತ್ತು ಆರೋಗ್ಯ ಸಂಸ್ಥೆಗಳು ಕೂಡ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಆದರೆ ಆರೋಗ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ವೈಯಕ್ತಿಕ ಜವಾಬ್ದಾರಿಯೂ ಆಗಿದೆ ಎಂಬುದನ್ನು ಅರಿಯಬೇಕು.

ಈ ತಂತ್ರಜ್ಞಾನ ಯುಗದಲ್ಲಿ ಜೀವನ ಶೈಲಿಯ ಬದಲಾವಣೆಗಳಿಂದ ಉಂಟಾಗಿರುವ ಅನಾರೋಗ್ಯಕರ ಅಭ್ಯಾಸಗಳು, ಅನೇಕ ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಕಾರಣವಾಗಿವೆ. ಈ ಪರಿಸ್ಥಿತಿಯಲ್ಲಿ, ಆರೋಗ್ಯದ ಕುರಿತು ಅರಿವು ಮೂಡಿಸುವುದು, ರೋಗಗಳನ್ನು ತಡೆಗಟ್ಟುವ ಕ್ರಮಗಳನ್ನು ಪ್ರೋತ್ಸಾಹಿಸುವುದು ಮತ್ತು ಸಮಗ್ರ ಆರೋಗ್ಯ ಸೇವೆಗಳ ಲಭ್ಯತೆಯನ್ನು ಖಚಿತಪಡಿಸುವುದು ಅತ್ಯಗತ್ಯವಾಗಿದೆ.

ಇಂದಿನ ಆಧುನಿಕತೆಯಿಂದ ಮಾನವ ಜೀವನ ಸುಲಭ ಗೊಂಡಿದ್ದರೂ, ಅತಿಯಾದ ಆಧುನೀಕರಣದ ದುಷ್ಪರಿಣಾಮ, ಮಿತಿಮೀರಿದ ಹಣದ ವ್ಯಾಮೋಹದಿಂದ ಮನುಜ ತಾನೇ ಮಾಡಿಕೊಂಡ ಕೆಲವೊಂದು ಎಡವಟ್ಟುಗಳು, ಸ್ವಾರ್ಥ ಚಿಂತನೆಗಳು ಹಾಗೂ ಕೆಲವು ಬೇಡದ ಆವಿಷ್ಕಾರಗಳಿಂದ ಆರೋಗ್ಯದ ಮೇಲೆ ಹೊಸ ಹೊಸ ಸವಾಲುಗಳು ಉದ್ಭವಿಸುತ್ತಿವೆ.

ಇದೆಲ್ಲದರ ಪರಿಣಾಮ ಆಧುನಿಕತೆಯಿಂದ ಜನ ಜೀವನ ಶೈಲಿ ಮಾತ್ರವೇ ದಿನದಿಂದ ದಿನಕ್ಕೆ ಶ್ರೀಮಂತವಾಗುತ್ತಿದ್ದು, ಅವಶ್ಯಕವಾಗಿ ಇರಬೇಕಾದ ಆರೋಗ್ಯ ದಿನದಿಂದ ದಿನಕ್ಕೆ ಬಡವಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.

ವಿಶೇಷವಾಗಿ ಕಲಬೆಕೆ (ಅಡಲ್ಟರೇಷನ್) ಆಹಾರ ಪದಾರ್ಥಗಳು, ಫುಡ್ ನ ಆಕರ್ಷಣೆಗೆ ಬೆರೆಸುವು ಕೆಮಿಕಲ್ ಯುಕ್ತ ಬಣ್ಣಗಳು, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಹಾಗೂ ಪ್ಲಾಸ್ಟಿಕ್ ಎಂಬ ವಿಷದ ಬಳಕೆಯ ಹೆಚ್ಚಳವು ಮಾನವನ ಆರೋಗ್ಯಕ್ಕೆ ಗಂಭೀರ ಅಪಾಯಗಳನ್ನು ಉಂಟುಮಾಡುತ್ತಿವೆ.

ಫೋಟೋ ಕೃಪೆ : ಅಂತರ್ಜಾಲ

1. ಕಲಬೆಕೆ ಆಹಾರ – ಇದು ಒಂದು ಮೌನದ ವಿಷವೆಂದು ಹೇಳಬಹುದು. ಇಂದಿನ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳು, ರಾಸಾಯನಿಕ ಸಂರಕ್ಷಕಗಳು ಮತ್ತು ನಕಲಿ ಪದಾರ್ಥಗಳನ್ನು ಸೇರಿಸುವ ಪ್ರವೃತ್ತಿ ಹೆಚ್ಚಾಗಿದೆ. ಹಾಲಿನಲ್ಲಿ ಯೂರಿಯಾ ಸೇರಿಸುವುದು, ಕೃತಕ ಬಣ್ಣದ ಬಳಕೆ, ತರಕಾರಿಗಳು ಬೇಗ ಬೆಳೆಯಲು ಮತ್ತು ಹಣ್ಣುಗಳು ತ್ವರಿತವಾಗಿ ಹಣ್ಣಾಗುವಂತೆ ತೋರಿಸಲು ಕ್ಯಾಲ್ಸಿಯಂ ಕಾರ್ಬೈಡ್ ಉಪಯೋಗಿಸುವುದು ಇವು ಸಾಮಾನ್ಯವಾಗಿವೆ ಇಂತಹ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು, ಯಕೃತ್ (ಲಿವರ್) ಹಾನಿ, ಕ್ಯಾನ್ಸರ್ ಮುಂತಾದ ಗಂಭೀರ ಕಾಯಿಲೆಗಳು ಉಂಟಾಗುತ್ತಿವೆ.

2. ರಾಸಾಯನಿಕ ಗೊಬ್ಬರ – ನೆಲದಿಂದ ನರಮಂಡಲದವರೆಗೆ ಪರಿಣಾಮ ಬೀರುವ ಇದು ಮಾನವನ ದೇಹಕ್ಕೆ ಪರೋಕ್ಷವಾಗಿ ಬಹಳ ಹಾನಿಯನ್ನುಂಟುಮಾಡುತ್ತಿದೆ. ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆಗಾಗಿ ಸಾವಯವ ಕೃಷಿಯನ್ನು ಮರೆತ ಜನ ಕೇವಲ ಹೆಚ್ಚಿನ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆ ಹೆಚ್ಚು ಮಾಡುತ್ತಿರುವುದರ ದುಷ್ಪರಿಣಾಮ ಈ ರಾಸಾಯನಿಕಗಳು ಬೆಳೆಗಳಲ್ಲಿ ಉಳಿದು, ನಮ್ಮ ದೇಹಕ್ಕೆ ಪ್ರವೇಶಿಸುತ್ತವೆ. ಇದರ ದುಷ್ಫಲ ಹಾರ್ಮೋನ್ ಅಸಮತೋಲನ, ನರ ವ್ಯವಸ್ಥೆಯ ಸಮಸ್ಯೆಗಳು ಮತ್ತು ದೀರ್ಘಕಾಲಿಕ ಕಾಯಿಲೆಗಳು ಉಂಟಾಗುವುದರ ಜೊತೆಗೆ, ಭೂಮಿಯ ಸಸ್ಯೋತ್ಪಾದಕ ಶಕ್ತಿ ಕುಗ್ಗುವುದರಿಂದ ಪರಿಸರದ ಸಮತೋಲನಕ್ಕೂ ಧಕ್ಕೆಯಾಗಿದೆ.

3. ಪ್ಲಾಸ್ಟಿಕ್ – ನಿಶ್ಶಬ್ದ ಹಂತಕವಾದ ಇದು ಕಟು ವಿಷವಾಗಿದ್ದು ಇದೊಂದು ಮಾನವನ ಕೆಟ್ಟ ಅವಿಷ್ಕಾರವೆಂದೇ ಹೇಳಬಹುದು. ಪ್ಲಾಸ್ಟಿಕ್ ವಸ್ತುಗಳು ಇಂದು ನಮ್ಮ ದಿನನಿತ್ಯದ ಬದುಕಿನ ಭಾಗವಾಗಿವೆ. ಆಹಾರವನ್ನು ಸಂಗ್ರಹಿಸಲು ಮತ್ತು ಹೊತ್ತೊಯ್ಯಲು ಬಳಸುವ ಪ್ಲಾಸ್ಟಿಕ್ ಪಾತ್ರೆಗಳು ತಾಪಮಾನ ಹೆಚ್ಚಾದಾಗ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ವರುಷಗಳವರೆಗೂ ಕರಗದ ಈ ಪ್ಲಾಸ್ಟಿಕ್ ಅದರಲ್ಲೂ ವಿಶೇಷವಾಗಿ ಸಿಂಗಲ್-ಯೂಸ್ ಪ್ಲಾಸ್ಟಿಕ್‌ಗಳು ಪರಿಸರವನ್ನು ಮಾಲಿನ್ಯಗೊಳಿಸುವುದರ ಜೊತೆಗೆ, ಅವುಗಳಲ್ಲಿರುವ ವಿಷಕಾರಿ ಅಂಶಗಳು ಮಾನವನ ದೇಹಕ್ಕೆ ಸೇರಿ ಹಾರ್ಮೋನ್ ಸಮಸ್ಯೆಗಳು, ಕ್ಯಾನ್ಸರ್ ಮತ್ತು ಇತರ ಅನಾರೋಗ್ಯಕರ ಸ್ಥಿತಿಗಳನ್ನು ಉಂಟುಮಾಡುತ್ತಿವೆ.

ಫೋಟೋ ಕೃಪೆ : ಅಂತರ್ಜಾಲ

ಒಟ್ಟಿನಲ್ಲಿ ಸಮಗ್ರ ದೃಷ್ಟಿಕೋನದಿಂದ ನೋಡುವುದಾದರೆ ಕಲಬೆಕೆ ಆಹಾರ, ರಾಸಾಯನಿಕ ಗೊಬ್ಬರ ಮತ್ತು ಪ್ಲಾಸ್ಟಿಕ್ ಈ ಮೂರು ಪ್ರಮುಖ ಅಂಶಗಳು ಮಾನವನ ಆರೋಗ್ಯದ ಮೇಲೆ ನೇರ ಮತ್ತು ಪರೋಕ್ಷವಾಗಿ ಕೆಟ್ಟ ಪರಿಣಾಮ ಬೀರುತ್ತಿವೆ. ಹಗಾಗಿ ಆರೋಗ್ಯವನ್ನು ಕಾಪಾಡಲು ನಾವು ಜಾಗೃತರಾಗಬೇಕು. ಸಸ್ಯೋತ್ಪನ್ನ ಆಹಾರಗಳನ್ನು ಬಳಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಶುದ್ಧ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯವಾಗಿದೆ.

ಇಂದಿನ ವೇಗವಾದ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡಗಳಿಂದ ಕೂಡಿದ ಸಮಾಜದಲ್ಲಿ, “ಆರೋಗ್ಯವೇ ಆಸ್ತಿ” ಎಂಬ ನುಡಿ ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಹಣ, ಸಂಪತ್ತು, ಖ್ಯಾತಿ ಇವುಗಳೆಲ್ಲವೂ ಇದ್ದರೂ ಉತ್ತಮ ಆರೋಗ್ಯವಿಲ್ಲದೆ ಅವುಗಳ ಮಹತ್ವ ಕಳೆದುಹೋಗುತ್ತದೆ. ದೇಹ ಮತ್ತು ಮನಸ್ಸಿನ ಸಮತೋಲನವೇ ನಿಜವಾದ ಸಂಪತ್ತು ಎಂಬ ಅರಿವು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಅನಿವಾರ್ಯವಾಗಿದೆ.

ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಹಾಗೂ ಶಾಂತ ಮನೋಭಾವ ಇವುಗಳು ನಮ್ಮ ಆರೋಗ್ಯವನ್ನು ಕಾಪಾಡುವ ಮೂಲಸ್ತಂಭಗಳಾಗಿವೆ. ಇವುಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಸಂಪೂರ್ಣ ಸುಖಶಾಂತಿಯ ಜೀವನವನ್ನು ಅನುಭವಿಸಬಹುದು. ಆದ್ದರಿಂದ, ಆರೋಗ್ಯವನ್ನು ಕೇವಲ ಒಂದು ಅಗತ್ಯವೆಂದು ನೋಡದೆ, ಜೀವನದ ಅಮೂಲ್ಯ ಆಸ್ತಿಯಾಗಿ ಪರಿಗಣಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಇಂದಿನ ಆಧುನಿಕ ಜೀವನದಲ್ಲಿ ನಾವು ಸಾಧನೆಗಳ ಹಿಂದೆ ಓಡುತ್ತಿರುವಾಗ, ನಮ್ಮ ಆರೋಗ್ಯವನ್ನು ಅನೇಕ ಬಾರಿ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ “ಆರೋಗ್ಯವೇ ಆಸ್ತಿ” ಎಂಬ ನುಡಿ ನಮಗೆ ಸ್ಮರಿಸುತ್ತದೆ, ನಿಜವಾದ ಸಂಪತ್ತು ನಮ್ಮ ದೇಹದ ಮತ್ತು ಮನಸ್ಸಿನ ಸುಸ್ಥಿತಿಯಲ್ಲಿದೆ ಎಂದು. ಆರೋಗ್ಯ ಕಳೆದುಹೋದಾಗ ಮಾತ್ರ ಅದರ ಮೌಲ್ಯ ನಮಗೆ ಸ್ಪಷ್ಟವಾಗುತ್ತದೆ.

ತಿನ್ನುವ ಆಹಾರದಿಂದ ಹಿಡಿದು ನಮ್ಮ ಜೀವನ ಶೈಲಿಯವರೆಗೆ, ಪ್ರತಿಯೊಂದು ಆಯ್ಕೆಯೂ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಸ್ವಲ್ಪ ಜಾಗ್ರತೆ, ನಿಯಮಿತ ಅಭ್ಯಾಸ ಮತ್ತು ಸಕಾರಾತ್ಮಕ ಮನೋಭಾವದಿಂದ ನಮ್ಮ ಜೀವನವನ್ನು ಸುಖಕರವಾಗಿಸಬಹುದು. ಆದ್ದರಿಂದ, ಆರೋಗ್ಯವನ್ನು ಉಳಿಸಿಕೊಳ್ಳುವುದು ಕೇವಲ ವ್ಯಕ್ತಿಗತ ಹೊಣೆಗಾರಿಕೆ ಮಾತ್ರವಲ್ಲ, ಅದು ನಮ್ಮ ಬದುಕಿನ ಗುಣಮಟ್ಟವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.

ಹೀಗಾಗಿ, ಸಂಪತ್ತು ಸಂಗ್ರಹಿಸುವಷ್ಟೇ ಉತ್ಸಾಹವನ್ನು ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕೂ ನೀಡಿದರೆ, ನಿಜವಾದ ಸಂತೃಪ್ತಿಯ ಜೀವನವನ್ನು ನಾವು ನಿರ್ಮಿಸಬಹುದು. “ಆರೋಗ್ಯವೇ ಆಸ್ತಿ” ಎಂಬ ಸತ್ಯವನ್ನು ಅಳವಡಿಸಿಕೊಂಡಾಗಲೇ ನಮ್ಮ ಜೀವನ ಪೂರ್ಣತೆಯನ್ನು ಪಡೆಯುತ್ತದೆ.

“ಆಹಾರವೇ ಔಷಧಿ” ಎಂಬ ಸತ್ಯವನ್ನು ನೆನಪಿನಲ್ಲಿ ಇಟ್ಟುಕೊಂಡು, ನಾವು ಸೇವಿಸುವ ಪ್ರತಿಯೊಂದು ಆಹಾರದ ಬಗ್ಗೆ ಎಚ್ಚರಿಕೆ ವಹಿಸಬೇಕು. ಆರೋಗ್ಯಕರ ಪರಿಸರ ಮತ್ತು ಶುದ್ಧ ಆಹಾರವೇ ಉತ್ತಮ ಜೀವನದ ಮೂಲಾಧಾರವಾಗಿದೆ. ವಿಶ್ವ ಆರೋಗ್ಯ ದಿನವು ಕೇವಲ ಆಚರಣೆಯ ದಿನವಲ್ಲ, ಅದು ನಮ್ಮ ಜೀವನ ಶೈಲಿಯನ್ನು ಪರಿಷ್ಕರಿಸಿಕೊಳ್ಳುವ ಒಂದು ಅವಕಾಶ. ಆರೋಗ್ಯಕರ ಜೀವನವೇ ಸುಖಮಯ ಜೀವನಕ್ಕೆ ದಾರಿ ಎಂಬುದನ್ನು ನಾವು ಮರೆಯಬಾರದು.

ಮನುಷ್ಯರಾದ ನಾವು ಏನೇ ಮಾಡಿದರೂ ನಮ್ಮ ಒಳಿತಿಗಾಗಿ, ಆಯಸ್ಸಿಗಾಗಿ ಆರೋಗ್ಯಕ್ಕಾಗಿ ಹಾಗೂ ನಮ್ಮ ಉತ್ತಮ ಜೀವನಕ್ಕಾಗಿ ಅಲ್ಲವೇ. ಆದರೆ ಅದನ್ನೇ ಅರಿಯದ ನಾವು ಶ್ರೀಮಂತ ಜೀವನ ಶೈಲಿಯ ಆಸೆಗಾಗಿ, ಅತಿಯಾದ ಹಣದ ವ್ಯಾಮೋಹಕ್ಕಾಗಿ ಮಿತಿಮೀರಿ ಮಾಡಿಕೊಂಡ ಅವಿಷ್ಕಾರಗಳಿಂದ ನಮಗೆ ನಾವೇ ಕಂಟಕಪ್ರಾಯವಾಗುತ್ತಿದ್ದು ಅದರ ದುಷ್ಪರಿಣಾಮ “ಅಂದು ಶುದ್ಧ ಆಹಾರ ತಿಂದು ಬದುಕುತ್ತಿದ್ದ ಮನುಷ್ಯ ಇಂದು ಔಷಧಿ ತಿಂದು ಬದುಕುವಂತಾಗಿದೆ’.


  • ಗೀತಾಂಜಲಿ ಎನ್ ಎಮ್ – ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading