‘ಪತ್ತೆದಾರ ಪ್ರಣವ ಕೇಸ್ 2’ ಕೃತಿ ಪರಿಚಯ

ಅನುಪಮಾ ಕೆ ಬೆಣಚಿನಮರ್ಡಿ ಅವರ ‘ಪತ್ತೆದಾರ ಪ್ರಣವ ಕೇಸ್ ೨’ ಮಕ್ಕಳ ಕಥೆ ಬಹಳ ರೋಚಕತೆಯಿಂದ ಕೂಡಿದ್ದು, ಕಥೆಯ ಕೊನೆಯಲ್ಲಿ ಒಂದು ನೀತಿ ಇದೆ. ಈ ಕೃತಿಯ ಕುರಿತು ಲೇಖಕರಾದ ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ: ಪತ್ತೆದಾರ ಪ್ರಣವ ಕೇಸ್ 2
ಲೇಖಕರು: ಅನುಪಮಾ ಕೆ ಬೆಣಚಿನಮರ್ಡಿ
ಚಿತ್ರಗಳು: ಶೈಲಜಾ ಎಸ್
ಪ್ರಕಾಶಕರು: ಅವ್ವಾ ಪುಸ್ತಕಗಳು
ಮುದ್ರಣ : 2026
ಪುಟಗಳು : 72
ಬೆಲೆ : 100

ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಅವರಲ್ಲಿ ತಾರತಮ್ಯ ಮಾಡಿದಾಗ ಅವರ ಮನಸ್ಸು ನಕಾರಾತ್ಮಕವಾಗಿ ಯೋಚಿಸಿ, ಈರ್ಷೆ ಅಥವಾ ಸಣ್ಣಮಟ್ಟಿನ ದ್ವೇಷಕ್ಕೆ ಕಾರಣವಾಗಬಹುದು ಎಂಬ ಸಂದೇಶವನ್ನು ಕಥೆಯಲ್ಲಿ ಗಮನಿಸಬಹುದಾಗಿದೆ. ಈ ಕಥೆಯ ಕೊನೆಯಲ್ಲಿ ಮಾನವೀಯತೆಯ ಸಂದೇಶವನ್ನು ಕೂಡ ಲೇಖಕಿಯು ತಿಳಿಸಿದ್ದಾರೆ.

ಒಂದು ಟಿಫನ್ ಬಾಕ್ಸ್ ನ ಸುತ್ತಾ ಲೇಖಕಿಯು ಕಥೆಯನ್ನು ಹೆಣೆದಿದ್ದು ಸ್ವಾರಸ್ಯಕರವಾಗಿದೆ. ಕಳೆದ ಬಾರಿ ಮನೆಯ “ಸ್ಟೋರ್ ರೂಮ್” ನ ರಹಸ್ಯ ಭೇದಿಸಿದ್ದ ಬುದ್ಧಿವಂತ ತುಂಟ ಪ್ರಣವ, ಈ ಬಾರಿ ಶಾಲೆಯಲ್ಲಿ ಕಳೆದು ಹೋಗಿರುವ “ಟಿಫನ್ ಬಾಕ್ಸ್ ” ನ ರಣರೋಚಕ ರಹಸ್ಯವನ್ನು ಯಶಸ್ವಿಯಾಗಿ ಭೇದಿಸಿ ಶಿಕ್ಷಕರಿಂದ ಶಭಾಷ್ ಪಡೆದಿದ್ದಾನೆ.

ಪ್ರಣವ ಈಗ ಮೂರನೇ ತರಗತಿಯನ್ನು ಓದುತ್ತಿದ್ದಾನೆ. ಸ್ಟೋರ್ ರೂಮ್ ನ ಪ್ರಕರಣ ಭೇದಿಸಿದ ನಂತರ ಇವನು ‘ಪತ್ತೆದಾರ ಪ್ರಣವ’ ಎಂದೇ ಪ್ರಸಿದ್ಧಿಯಾಗಿದ್ದಾನೆ. ಹೀಗಿರುವಾಗ ಶಾಲೆಯ ಅಸೆಂಬ್ಲಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ “ಮುಖ್ಯವಾದ ವಿಷಯವೊಂದನ್ನು ಹೇಳುವುದಿದೆ ಎಲ್ಲರೂ ಇಲ್ಲೇ ಇರಿ” ಎಂದು ಟೀಚರ್ ಹೇಳುತ್ತಾರೆ. ಪ್ರಣವನಿಗೆ ಏನು ವಿಷಯವಿರಬಹುದು ಎಂಬ ಕುತೂಹಲ ಹೆಚ್ಚಾಗುತ್ತದೆ. ಅವನು ಮತ್ತೇನಾದರೂ ಕರೋನ ರೀತಿಯ ಕೆಟ್ಟ ರೋಗ ಬಂದಿದೆಯಾ? ಎಂದು ಯೋಚಿಸುತ್ತಾ ಕರೋನಾ ಸಮಯದಲ್ಲಿ ಕಳೆದ ದಿನಗಳನ್ನು ಒಂದು ಬಾರಿ ನೆನಪಿಸಿಕೊಳ್ಳುತ್ತಾನೆ. ಲಾಕ್ಡೌನ್ ಸಂದರ್ಭದಲ್ಲಿ ಅಜ್ಜ-ಅಜ್ಜಿಯ ಮನೆಯಲ್ಲಿ, ಅವರ ಕೈ ತೋಟದಲ್ಲಿ, ಬಾವಿ, ಹೊಳೆಗಳಲ್ಲಿ ಕಳೆದ ಕ್ಷಣವನ್ನು ಒಮ್ಮೆ ಮೆಲಕು ಹಾಕಿಕೊಳ್ಳುತ್ತಾ ಸಂತೋಷ ಪಡುತ್ತಾನೆ. ಆದರೆ ಆನ್ಲೈನ್ ಕ್ಲಾಸ್ ಅನ್ನು ನೆನಪಿಸಿಕೊಂಡಾಗ ಒಮ್ಮೆ ದಿಗಿಲುಗೊಳ್ಳುತ್ತಾನೆ. ಅಷ್ಟರಲ್ಲಿ ಪ್ರಿನ್ಸಿಪಲ್ ಮೇಡಂ ಬಂದು “ಹತ್ತರಿನರಿಂದ ಒಂದನೇ ತರಗತಿಯವರೆಗೆ ಎಂಟು ಜನರ ‘ಟಿಫನ್ ಬಾಕ್ಸ್’ ಕಳ್ಳತನವಾಗಿದೆ, ಯಾರಾದರೂ ತೆಗೆದುಕೊಂಡರೆ ನನ್ನ ಕ್ಯಾಬಿನ್ ಗೆ ಬಂದು ತಪ್ಪೊಪ್ಪಿಕೊಳ್ಳಿ” ಎಂದು ಎಚ್ಚರಿಕೆ ನೀಡುತ್ತಾರೆ.
ಪ್ರಣವ ಸ್ವಯಂ ಪ್ರೇರಿತನಾಗಿ “ನಾನು ಟಿಫನ್ ಬಾಕ್ಸ್ ಕದ್ದವರನ್ನು ಪತ್ತೆ ಹಚ್ಚುವೆ” ಎಂದು ಟೀಚರ್ ಗೆ ಹೇಳುತ್ತಾನೆ. ಟೀಚರ್ ಕೂಡ ಅದಕ್ಕೆ ಸಮ್ಮತಿಸುತ್ತಾರೆ. ಟಿಫನ್ ಬಾಕ್ಸ್ ಕಳೆದುಕೊಂಡವರಲ್ಲಿ ಏಳು ಜನ ಹುಡುಗರಾಗಿದ್ದು, ಒಬ್ಬಳೇ ಒಬ್ಬಳು ಹುಡುಗಿಯಾಗಿರುತ್ತಾಳೆ. ಹಾಗಾದರೆ ಇದರ ಹಿಂದಿನ ರಹಸ್ಯವೇನು? ಪ್ರಣವ ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಟಿಫನ್ ಬಾಕ್ಸ್ ಕದ್ದವರನ್ನು ಹೇಗೆ ಯಶಸ್ವಿಯಾಗಿ ಪತ್ತೆ ಹಚ್ಚುತ್ತಾನೆ? ಟಿಫನ್ ಬಾಕ್ಸ್ ಕದ್ದವರು ಯಾಕಾಗಿ ಈ ಕೆಲಸ ಮಾಡಿದರು? ಕದಿಯಲು ಕಾರಣವೇನು ಎನ್ನುವುದು ಬಹಳ ಸ್ವಾರಸ್ಯವಾಗಿದೆ.

ಈ ಕಥೆಯ ಪ್ರಾರಂಭದಿಂದಲೂ ಮುಂದೇನಾಗುತ್ತದೆ, ಪ್ರಣವ ಹೇಗೆ ಈ ರಹಸ್ಯವನ್ನು ಭೇದಿಸುತ್ತಾನೆ ಎಂಬ ಕುತೂಹಲವನ್ನು ಮೂಡಿಸುವಲ್ಲಿ ಲೇಖಕಿಯು ಯಶಸ್ವಿಯಾಗಿದ್ದಾರೆ. ದೊಡ್ಡವರಿಗೆ ಮೆಚ್ಚುಗೆಯಾಗುವ ಈ ಕಥೆ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅನುಪಮಾ ರವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂ ಹೆಚ್ಚಿನ ಕೃತಿಗಳು, ಮಕ್ಕಳ ಕಥೆಗಳು ಅರ್ಪಣೆ ಯಾಗಲಿ ಶುಭವಾಗಲಿ ಎಂದು ಆಶಿಸುತ್ತೇನೆ.


  • ಚೇತನ ಭಾರ್ಗವ – ಅರಮನೆ ತೋಟ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading