‘ಪರಿಭ್ರಮಣ’ ಕಥಾ ಸಂಕಲನ

ಋತುಬಂಧದ ಸಮಸ್ಯೆಯಿಂದ ಬಳಲುವ ಹೆಣ್ಣು ಮಗಳೊಬ್ಬಳ ಕಥೆಯೇ ಸುಮಾ ರಮೇಶ್ ಅವರ ಪರಿಭ್ರಮಣ ಕಥಾ ಸಂಕಲನ. ಈ ಕೃತಿಯ ಕುರಿತು  ನಯನ ಬಜಕೂಡ್ಲು ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ …

ಪುಸ್ತಕ : ಪರಿಭ್ರಮಣ (ಕಥಾ ಸಂಕಲನ)
ಲೇಖಕರು : ಸುಮಾ ರಮೇಶ್
ಪ್ರಕಾಶಕರು : ನ್ಯೂ ವೇವ್ ಬುಕ್ಸ್
ಪುಟಗಳು : 124
ಬೆಲೆ : 130/-

ಹೆಣ್ಣು ಎಂತಹುದೇ ಪರಿಸ್ಥಿತಿಯಲ್ಲಿ ಇರಲಿ, ನೋವಲ್ಲಿ ಇರಲಿ ಅದಾವುದನ್ನು ಲೆಕ್ಕಿಸದೆ ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸಬೇಕು, ಅತ್ತೆ ಮಾವನ ಸೇವೆ ಮಾಡಬೇಕು, ಗಂಡ ಮಕ್ಕಳ ಬೇಕು ಬೇಡಗಳನ್ನು ನಿಭಾಯಿಸಬೇಕು. ಆದರೆ ಅವಳಿಗೆ ಏನಾಗುತ್ತಿದೆ ಅನ್ನುವುದನ್ನು ಮಾತ್ರ ಯಾರು ಗಮನಿಸುವುದಿಲ್ಲ. ಅವಳ ಪ್ರತಿ ಕಾಳಜಿ ತೋರಿಸುವುದಿಲ್ಲ. ಯಾಕೆಂದರೆ ಅವಳು ಗೃಹಿಣಿ, ಅವಳಿಗೆ ಬೇರೇನು ಕೆಲಸವಿದೆ?, ಅವಳಿನ್ನೇನು ಮಾಡುತ್ತಾಳೆ?, ಯಾವಾಗಲೂ ಮನೆಯಲ್ಲಿ ಆರಾಮಾಗಿ ಇರುತ್ತಾಳೆ ಅನ್ನುವ ಅಪವಾದ, ಅಸಡ್ಡೆ. ಅವಳ ಸಮಸ್ಯೆಗಳು, ಮಾನಸಿಕ ತೊಳಲಾಟ, ಮುಟ್ಟನಿಲ್ಲುವ ಹಂತದಲ್ಲಿ ಕಾಡುವ ಕಿರಿಕಿರಿ, ನೋವು, ಬದಲಾವಣೆಗಳು ಇದು ಯಾವುದನ್ನು ಯಾರೂ ಇವತ್ತಿಗೂ ಅರ್ಥಮಾಡಿಕೊಳ್ಳದೆ ಅವಳನ್ನು ಕೇವಲವಾಗಿ ನೋಡುತ್ತಿರುವುದು ವಿಪರ್ಯಾಸವೇ ಸರಿ. ಗೃಹಿಣಿ ಅನ್ನುವ ಪಟ್ಟ ಸಮಾಜದ ಎಲ್ಲಾ ಸ್ಥಾನಮಾನಗಳಿಗಿಂತಲೂ ಹಿರಿದಾದದ್ದು ಅನ್ನುವ ಸತ್ಯ, ಹೆಣ್ಣು ಮಕ್ಕಳು ಋತುಬಂಧದ ಸಮಯದಲ್ಲಿ ಅನುಭವಿಸುವ ತಲ್ಲಣಗಳನ್ನು ಅನಾವರಣಗೊಳಿಸುವ ಕಥೆ- ಋತುಬಂಧ. ಇದು ಬರಿ ಕಾಲ್ಪನಿಕ ಅಲ್ಲ ಸಮಾಜದ ವಾಸ್ತವ.

ಹಣ, ಸಂಪತ್ತಿನಿಂದ ತಲೆಗೇರುವ ಅಹಂಕಾರ ಆ ಹೊತ್ತಿಗೆ ಸುಂದರವಾಗಿ ಕಂಡರೂ ಕ್ರಮೇಣ ಎಲ್ಲರಿಂದಲೂ ವ್ಯಕ್ತಿಯನ್ನು ದೂರವಾಗಿಸಿ ಬದುಕನ್ನು ಮೂರಾಬಟ್ಟೆಗೊಳಿಸುತ್ತದೆ. ಶ್ರೀಮಂತಿಕೆ ಯಾವಾಗ ಬೇಕಾದರೂ ಬರಬಹುದು ಆದರೆ ಸಂಬಂಧಗಳು ಹಾಗಲ್ಲ. ಅದನ್ನು ನಮ್ಮ ಒಳ್ಳೆಯ ಗುಣದಿಂದಲೇ ನಾವು ಸಂಪಾದಿಸಬೇಕೆ ಹೊರತು ಹಣದ ಆಟ ಸಂಬಂಧಗಳ ಮೇಲೆ ನಡೆಯದು. ಶ್ರೀಮಂತಿಕೆ, ಪ್ರತಿಷ್ಠೆ ಬಂದಾಗ ಸುತ್ತಲೂ ಜನರಿರುತ್ತಾರೆ ಆದರೆ ಅವರ್ಯಾರು ನಮ್ಮ ಕಷ್ಟಕ್ಕಾಗುವವರಲ್ಲ. ನಿಜವಾದ ಸಂಬಂಧಗಳ ಪರೀಕ್ಷೆ ನಡೆಯುವುದೇ ಒಬ್ಬ ವ್ಯಕ್ತಿ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದಾಗ ಅಥವಾ ಅನಾರೋಗ್ಯದಲ್ಲಿ ಜೀವ ಕಳೆದುಕೊಳ್ಳುವ ಹಂತಕ್ಕೆ ಬಂದಾಗ. ಶ್ರೀಮಂತಿಕೆಯ ಮದದಲ್ಲಿ ಸಂಬಂಧಗಳನ್ನು ಕಾಲಲ್ಲಿ ಒದ್ದಾಗ ಏನೂ ಅನ್ನಿಸುವುದಿಲ್ಲ ಆದರೆ ಕಷ್ಟವೆಂಬ ಶನಿ ಹೆಗಲೇರಿದಾಗ ಒಂಟಿತನದ ಪರಿಚಯವಾಗುತ್ತದೆ. ಜಗತ್ತಿನಲ್ಲಿ ನಡೆಯುವ ಸತ್ಯವನ್ನು ತೆರೆದಿಡುವ ಕಥೆ- ಬೂಮರಾಂಗ್.

ಅವರವರ ಬದುಕಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಒಂದು ಹಂತದಲ್ಲಿ ನೀಡದ ಸ್ವಾತಂತ್ರ್ಯ, ಹೆಣ್ಣು/ಗಂಡು ತಮಗೆ ಹೇಗೆ ಬೇಕೋ ಹಾಗೆ ಇರಲಾಗದೆ ಪಾಲಕರು, ಸಮಾಜದ ಕಟ್ಟುಪಾಡುಗಳಿಗೆ ಒಳಗಾಗುವ ರೀತಿಗಳು ಇನ್ನೊಬ್ಬರ ಬದುಕಿನ ಸಂತೋಷ, ಕಷ್ಟ ಎರಡಕ್ಕೂ ನೇರ ಕಾರಣವಾಗುತ್ತವೆ. ಸಂಸಾರ, ಕುಟುಂಬ ಸರಿಯಾಗಿ ಸಾಗುತ್ತಿದ್ದರೆ ಪರವಾಗಿಲ್ಲ ಆದರೆ ಸರಿ ಹೊಂದದೆ ಬೀದಿಗೆ ಬಿದ್ದಾಗ ಮಾತ್ರ ಒತ್ತಾಯ ಮಾಡಿ ಜೋಡಿ ಮಾಡಿದವರು, ಸಮಾಜ ಯಾರೂ ಜೊತೆ ಬರುವುದಿಲ್ಲ. ಗಂಡ ನೆನೆಸಿಕೊಂಡವನು ನಡುನೀರಿನಲ್ಲಿ ಕೈಬಿಟ್ಟಾಗ ಅಂಜದೆ ಜೀವನ ನಡೆಸುವ ಹೆಣ್ಣೊಬ್ಬಳ ಕಥೆ. ಜೀವಮಾನವಿಡಿ ಒಂಟಿಯಾಗಿ ಕಳೆದು ಗಂಡನೆನಿಸಿಕೊಂಡವ ಪರಲೋಕ ಸೇರಿದಾಗ ಆ ಹೆಣ್ಣು ಮಗಳು ತೆಗೆದುಕೊಳ್ಳುವ ನಿರ್ಧಾರ ಎಂತಹುದು, ಸಮಾಜವನ್ನು ಹೇಗೆ ಎದುರಿಸಿ ಬಾಳುತ್ತಾಳೆ ಅನ್ನುವುದನ್ನು ತೆರೆದಿಡುವ ಸ್ಪೂರ್ತಿದಾಯಕ ಕಥೆ- ತಾಯವ್ವ. ಇಂತಹ ನೂರಾರು ತಾಯವ್ವoದಿರು ಇಂದಿಗೂ ನಮ್ಮ ನಡುವೆ ಇದ್ದಾರೆ. ಇಲ್ಲಿ ತಾಯವ್ವ ಒಂಟಿಯಾಗಿ ಎಲ್ಲವನ್ನೂ ಎದುರಿಸಿ ಬದುಕಿದ ದಿಟ್ಟ ಮಹಿಳೆ.

ಬಡತನದ ಬವಣೆ, ಬದುಕು ಕಟ್ಟಿಕೊಳ್ಳುವ ಕಾಯಕದಲ್ಲಿ ಕೆಲವೊಂದು ಸಂದರ್ಭದಲ್ಲಿ ಗಂಡಿಗಿಂತ ಹೆಣ್ಣು ಯಾವ ರೀತಿಯ ಬೆಲೆ ತೆರಬೇಕಾಗುತ್ತದೆ ಹಾಗೂ ಸಮಾಜವನ್ನು ಎದುರಿಸಬೇಕಾಗುತ್ತದೆ ಅನ್ನೋದನ್ನ ಹೇಳುತ್ತದೆ “ಬಲಿ” ಕತೆ. ಬದುಕಿನ ವಿಪರ್ಯಾಸ ಎಂತಹುದು ಎಂದರೆ ಅದಕ್ಕಾಗಿ ಸರ್ವಸ್ವವನ್ನು ಕಳೆದುಕೊಳ್ಳಬೇಕಾಗುತ್ತದೆ ಕೆಲವೊಂದು ಹೆಣ್ಣು ಮಕ್ಕಳು. ಸಂಸಾರ ಸುಖವಾಗಿ ಸಾಗುತ್ತಿದ್ದರೆ ಆ ಮನೆಯ ಹೆಣ್ಣು ಕತ್ತಲಲ್ಲಿ ಕಣ್ಣೀರ ಕೋಡಿ ಹರಿಸುತ್ತಿರುತ್ತಾಳೆ. ಇಂತಹ ಜನ್ಮ, ಹುಟ್ಟಿಗೇನು ಅರ್ಥ? ಇಂತಹ ಸ್ಥಿತಿಗೆ ಕಾರಣರಾರು? ಹೀಗೆ ಉತ್ತರವಿಲ್ಲದ ಹಲವಾರು ಪ್ರಶ್ನೆಗಳು.

ಜಗತ್ತಿನ ಹೆಚ್ಚಿನ ಕುಟುಂಬಗಳಲ್ಲಿ ನಡೆಯುವ ಆಸ್ತಿ ವಿವಾದ, ಸ್ವಂತ ಮಗ / ಮಗಳಿಗೆ ಹೆತ್ತವರಿಂದ ಆಗುವ ಮೋಸ, ವಂಚನೆಯ ತಿರುಳನ್ನು ಹೊಂದಿದ ಕಥೆ – ಭೂಮಿ ತೂಕದ ಹೆಣ್ಣು. ಈ ಕಥೆಯ ನಾಯಕಿ ಮೋಸ ಆಗಿದ್ದರೂ ಅದನ್ನು ದೊಡ್ಡದಾಗಿಸದೆ ತನ್ನ ಅತ್ತೆಯ ಸೇವೆ ಮಾಡುವ ರೀತಿ ಪ್ರತಿ ಹೆಣ್ಣಿಗೂ ಸಹನೆ ಹಾಗೂ ಸಂಸಾರವನ್ನು ಕಾಪಾಡಿಕೊಳ್ಳುವ ಸಂದೇಶವನ್ನು ನೀಡುತ್ತದೆ. ನಮ್ಮ ನಡುವೆಯೂ ವಸುದಾಳಂತಹ ಹಲವಾರು ಜೀವಂತ ಪಾತ್ರಗಳಿವೆ. ಆದರೆ ಹಲವಾರು ಬಾರಿ ಆ ಪಾತ್ರಗಳು ಪ್ರಾಮುಖ್ಯತೆಯನ್ನೇ ಪಡೆಯದಿರುವುದು ದುರಂತ. ಬಹಳ ಸುಂದರವಾದ ಕಥೆ.

ಎಲ್ಲಾ ಸಂಬಂಧಗಳ ನಡುವಿನ ಬಿರುಕು, ಹಳಸುವಿಕೆಗೆ ಇರುವ ಒಂದೇ ಒಂದು ಕಾರಣ ಯಾರೊಬ್ಬರೂ ಬಿಡಲೊಪ್ಪದ, ತೊರೆಯಲೊಪ್ಪದ ಅಹಂ.ಈ ಅಹಂ ತಂದೊಡ್ಡುವ ಹಾನಿ ಒಂದೆರಡಲ್ಲ. ಬದುಕು ಪಕ್ವತೆಯನ್ನು ಕಾಣಲು ತೊಡಗುವ ಹೊತ್ತಿಗೆ ಕಳೆದುಕೊಂಡಿರುವುದು ಹಲವು. ಈ ಸತ್ಯ ಅರ್ಥವಾಗುವ ಹೊತ್ತಿಗೆ ಮುಕ್ಕಾಲು ಪಾಲು ಬದುಕೇ ಕಳೆದು ಹೋಗಿರುತ್ತದೆ. ಬದುಕಿನ ವಾಸ್ತವದ ಚಿತ್ರಣ ತೆರೆದಿಡುವ ಕಥೆ- ಪರಿಭ್ರಮಣ.

ಒಳ್ಳೆಯದಕೆಂದು ಮಾಡಿದ ಕಾನೂನಿನಿಂದಲೇ ಇವತ್ತು ಎಲ್ಲಾ ಅನರ್ಥಗಳು, ಕೆಡುಕು ಸಂಭವಿಸುತ್ತಿರುವುದು ದುರಂತ. ಹಿಂದೊಂದು ಕಾಲವಿತ್ತು ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ಏಟುಗಳನ್ನು ನೀಡಿ ತಿದ್ದಿ ಬುದ್ದಿ ಹೇಳುತ್ತಿದ್ದರು. ಇವತ್ತು ಶಿಕ್ಷಕರು ಮಕ್ಕಳ ಪರ ಬಂದಿರುವ ಹೊಸ ಕಾನೂನಿನಿಂದ ಈ ಹಕ್ಕನ್ನು ಕಳೆದುಕೊಂಡಿದ್ದಾರೆ. ಪರಿಣಾಮ ತಾವು ಏನೇ ಮಾಡಿದರೂ ಸರಿ, ತಮ್ಮನ್ನು ಕೇಳುವವರಿಲ್ಲ ಎಂಬ ಅಹಂಕಾರವನ್ನು ತಲೆಗೇರಿಸಿಕೊಂಡು ದಾರಿ ತಪ್ಪುತ್ತಿರುವ ಯುವ ಜನತೆ. ಶಿಕ್ಷಕರು ಬುದ್ಧಿ ಮಾತು ಹೇಳಲು ಬಂದರೆ ಕಾನೂನಿನ ಭಯ ತೋರಿಸಿ ಬೆದರಿಸುವ ಮಕ್ಕಳು. ಶಿಕ್ಷಕರು ಕಾನೂನಿನ ಭಯದಿಂದ ತಪ್ಪನ್ನು ಕಂಡರೂ ಏನೂ ಗೊತ್ತಿಲ್ಲದಂತೆ ಇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇಂಥಹುದೆ ಹಿನ್ನೆಲೆಯನ್ನು ಹೊಂದಿದ ಕಥೆ, ಮಕ್ಕಳನ್ನು ಹೇಗೆ ದಾರಿ ತಪ್ಪಿಸುತ್ತಿದೆ ಅವರ ಒಳಿತಿಗಾಗಿ ಮಾಡಿದ ಕಾನೂನು ಅನ್ನುವುದರ ಮೇಲೆ ಬೆಳಕು ಚೆಲ್ಲುವ ಕಥೆ – ಬ್ಲಾಕ್ ಮೇಲ್.

ಯಾವುದೇ ಕ್ಷೇತ್ರವಿರಲಿ ಅಲ್ಲಿ ತಾವು ಮಾಡಿದ ಸಾಧನೆಯನ್ನು ಎಲ್ಲರೂ ಗುರುತಿಸಿ ಪುರಸ್ಕರಿಸಬೇಕು ಅನ್ನುವುದು ಈ ಸಮಾಜದಲ್ಲಿ ಹೆಚ್ಚಿನವರ ಆಸೆ. ಇದರ ಹೊರತಾಗಿಯೂ ಯಾವ ಪ್ರಶಸ್ತಿ, ಸನ್ಮಾನದ ಆಸೆ, ನಿರೀಕ್ಷೆಗಳನ್ನು ಹೊಂದದೆ ಕೇವಲ ತಮ್ಮ ಖುಷಿಗಾಗಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕಲಿಯುವ ತೃಷೆ ಹೊಂದಿ ಸಾಗುವವರೂ ನಮ್ಮ ನಡುವೆ ಇದ್ದಾರೆ. ಇಂತಹುದೇ ಹಂಬಲ ಹೊಂದಿರುವ ಹುಡುಗಿಯೊಬ್ಬಳ ಕಥೆ – ಹಾಡು ಹಕ್ಕಿಗೆ ಬೇಕೆ….

ಒಟ್ಟು 16 ಕಥೆಗಳನ್ನು ಒಳಗೊಂಡ ಕಥಸಂಕಲನ ಪರಿಭ್ರಮಣ. ಇಲ್ಲಿರುವ ಎಲ್ಲಾ ಕಥೆಗಳು ಬಹಳ ಸುಂದರವಾಗಿವೆ. ಅವು ಕೇವಲ ಕಥೆಗಳು ಅಂತ ಅನ್ನಿಸುವುದಿಲ್ಲ, ಈ ಸಮಾಜದಲ್ಲಿ ಯಾರಾದರೊಬ್ಬರ ಜೀವನದ ಸತ್ಯ ಆಗಿರಲು ಬಹುದು ಅನ್ನುವಷ್ಟು ಆಪ್ತ. ಮನಸ್ಸನ್ನು ಉಲ್ಲಾಸಿತಗೊಳಿಸುವ ಓದಿನ ಖುಷಿಯನ್ನು ಓದುಗರಿಗೆ ನೀಡುತ್ತದೆ ಸುಮಾ ರಮೇಶ್ ಅವರ ಈ ಕಥಾ ಸಂಕಲನ. ಸುಮಾ ರಮೇಶ್ ಅವರು “ಅಮಟೆ. ಎಸ್ ” ಅನ್ನುವ ಇನ್ನೊಂದು ಹಾಸ್ಯ ಕೃತಿಯೊಂದಿಗೆ ಮತ್ತೆ ಸಾಹಿತ್ಯ ಕ್ಷೇತ್ರದಲ್ಲೊಂದು ಸಾಧನೆಯನ್ನು ಮಾಡಲು ಹೊರಟಿರುವುದು ಸಂತಸದ ವಿಚಾರ. ಇದು ಅವರ ನಾಲ್ಕನೆಯ ಕೃತಿ. ಈ ಹೊಸ ಸಾಹಿತ್ಯ ಎಲ್ಲರ ತುಟಿಯಂಚಲಿ ಮತ್ತೆ ನಗುವರಳಿಸಲಿ.


  •  ನಯನ ಬಜಕೂಡ್ಲು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW