ಪಾರ್ಕನಲ್ಲಿ ಸಿಕ್ಕ ಗೆಳತಿ – ಶಾಲಿನಿ ಹೂಲಿ ಪ್ರದೀಪ್

ಜೀವನದ ತಿರುವಿನಲ್ಲಿ ಪರಿಚಿತರು ಅಪರಿಚಿತರಾಗಬಹುದು, ಅಪರಿಚಿತರು ಪರಿಚಿತರಾಗಬಹುದು…ಹೀಗೆ ಒಂದು ಕತೆಯ ಎಳೆಯನ್ನು ಇಟ್ಟುಕೊಂಡು ಬರೆದಂತಹ ಕತೆಯಿದು. ಒಂದು ಕತೆಯ ಹುಟ್ಟಿಗೆ ಸತ್ಯದ ಒಂದು ಎಳೆಬೇಕು. ಹಾಗಾಗಿ ಕತೆಯಲ್ಲಿ ಅಲ್ಲಲ್ಲಿ ಸತ್ಯಕ್ಕೆ ಹತ್ತಿರವಾದರೂ ಇದು ಯಾರ ವೈಯಕ್ತಿಕ ವಿಷಯಕ್ಕೂ ಸಂಬಂಧಿಸಿದ್ದಲ್ಲ… ಕತೆಯನ್ನು ತಪ್ಪದೆ ಮುಂದೆ ಓದಿ ಮತ್ತು ನಿಮ್ಮ ಅನಿಸಿಕೆಗಳನ್ನು ತಪ್ಪದೆ ಹಂಚಿಕೊಳ್ಳಿ….

ಮಕ್ಕಳ ಕಾಟ ತಡೆಯಲಾರದೆ ಸಾಯಂಕಾಲ ವಾಕ್ ನೆಪದಲ್ಲಿ ನಿತ್ಯ ಪಾರ್ಕ್ ಹೋಗೋಕೆ ಶುರು ಮಾಡಿದೆ. ಪಾರ್ಕಗೆ ಹೋದರೆ, ಊರನವರೆಲ್ಲ ಇಲ್ಲೇ ಇದ್ದಾರೆ ಅನ್ನೋಷ್ಟು ಪಾರ್ಕ್ ತುಂಬಿ ತುಳುಕುತ್ತಿತ್ತು. ನಾನು ಪಾರ್ಕ್ ನ ಒಳಕ್ಕೆ ಹೋಗಿ ಖಾಲಿ ಇದ್ದ ಬೆಂಚ್ ನಲ್ಲಿ ಹೋಗಿ ಕೂತೆ.

ಯಪ್ಪಾ… ಮನೆಯಲ್ಲಿ ಮಕ್ಕಳ ಗದ್ದಲದಿಂದ ತಪ್ಪಿಸಿಕೊಂಡೆ ಅಂತ ಮನಸ್ಸು ನಿರಾಳವಾಗಿತ್ತು.

ಇನ್ನೂ ನನ್ನ ಬಾಯಿಗೆ ವ್ಯಾಯಾಮ ಮಾಡಸೋಕೆ ಯಾರಾದ್ರೂ ಸಿಗ್ತಾರಾ ಅಂತ ಪಾರ್ಕ್ ನಲ್ಲಿ ನೋಡ್ತಾ ಕೂತಿದ್ದೆ. ಅಲ್ಲಿ ಮಾತಾಡಿಸೋದು ದೂರದ ಮಾತು, ಅವರ ವಾಕ್ ನ ವೇಗ ನೋಡಿದ್ರೆ, ಯಾವುದೋ ಕಂಪನಿಯವರು ಅವರಿಗೆ ತಿಂಗಳ ಟಾರ್ಗೆಟ್ ಕೊಟ್ಟಂತೆ ಒಬ್ಬರ ಹಿಂದೆ ಒಬ್ಬರು ನೂರಾರು ಟೆನ್ಶನ್ ಮಾಡ್ಕೊಂಡು ಓಡುತ್ತಿದ್ದರು. ಇವರ ಮಧ್ಯೆ ನನಗೆ ಮಾತಿಗೆ ಯಾರು ಸಿಗ್ತಾರೆ. ಕೊನೆಗೆ ನನ್ನ ಮೊಬೈಲೇ ನನ್ನ ಸಂಗಾತಿ ಅನ್ಕೊಂಡು ಮೊಬೈಲ್ ತೆರೆದೆ. ಟೈಮ್ ಪಾಸ್ ಗೆ ಇದ್ದೆ ಇದ್ದವಲ್ಲ  ರೀಲ್ಸ್ , ಅದನ್ನ ನೋಡ್ತಾ ಕೂತಿದ್ದೆ.

60 ರ ಆಸು ಪಾಸಿನ್ ಮಹಿಳೆಯೊಬ್ಬಳು ‘ಮಂಡಿ ನೋವು ವಿಪರೀತ…. ಈ ವಾಕಿಂಗ್ ಜನರ ಕಾಲಿಗೆ ಸಿಕ್ರೆ, ಯಾರನ್ನು ನೋಡೋಲ್ಲ, ತುಳ್ಕೊಂಡೆ ಹೋಗ್ತಾವೆ”… ಅಂತ ಬೈಯುತ್ತಾ ಬಂದು ನನ್ನ ಪಕ್ಕದಲ್ಲಿ ಕೂತರು.

ನಾನು ಅವರ ನೋಡಿ ಮುಗುಳ್ನಗೆ ಚಲ್ಲಿದೆ. 60 ರ ವಯಸ್ಸಿನ ಹಿರಿಯ ಮಹಿಳೆಗೆ ‘ಆಂಟಿ’… ಅಂತ ಮೆಲ್ಲಗೆ ಕರೆದೆ. ಮಹಿಳೆ ಆಂಟಿ… ಅಂದಾಕ್ಷಣ ಮುಖ ಸಿಂಡರಿಸಿಕೊಳ್ಳಲಿಲ್ಲ. ಬದಲಾಗಿ ನಗುತ್ತಾ
“ನೀನು ಎಲ್ಲಿರೋದಮ್ಮಾ ?”…ಅಂತ ಕೇಳಿದರು.

“ನಾನು ಪಾರ್ಕ್ ನ ಆ ಕಡೆ ನಂದಿನಿ ಬೂತ್ ಹತ್ರ” ಅಂತ ಹೇಳಿದೆ.

” ನಮ್ಮ ಮನೆ ಅಲ್ಲಿದೆ”… ಅಂತ ಆಂಟಿ ಬೆರಳು ಮಾಡಿ ದೂರದಿಂದ ತೋರಿಸಿದರು. ನಾನು ಓಹ್… ಹೌದಾ ಅಂದೆ. ಹಾಗೆ ಶುರು ಆಯ್ತು ನನ್ನ ಬಾಯಿಗೆ ವ್ಯಾಯಾಮ.

ನಮ್ಮ ವಯಸ್ಸಿಗಿಂತ ದೊಡ್ಡವರ ಜೊತೆ ಮಾತನಾಡುವಾಗ ಈ ಹುಡುಗಿಗೆ ನನ್ನಷ್ಟು ಅನುಭವ ಎಲ್ಲಿರುತ್ತೆ?….ನಾನು ನೋಡದ ಕಷ್ಟ – ಸುಖ ಈ ಹುಡುಗಿ ಏನು ನೋಡಿದ್ದಾಳೆ… ಅನ್ನೋ ಆರ್ಭಟ ಇರುತ್ತೆ. ಅದು ಆಂಟಿಯ ಮಾತಿನಲ್ಲಿಯೂ ಇತ್ತು. ನನ್ನ ಮಾತಿಗಿಂತ ಆಂಟಿ ಮಾತೇ ಜೋರಾಗಿತ್ತು. ಅವರ ಮಾತಿಗೆ ಬಲವಂತವಾಗಿ ನಗೋದೇ ನನ್ನ ಕೆಲಸವಾಗಿತ್ತು. ಅವರ  ಅನುಭವದ ಮಾತು, ಸಲಹೆಗಳನ್ನು ಕೇಳುತ್ತಾ ಕೇಳುತ್ತಾ ಎರಡೂವರೆ ಘಂಟೆ ಕಳೆದೆ ಹೋಯಿತು. ಅಷ್ಟರಲ್ಲಿ  ವಾಚ್, ಮೊಬೈಲ್ ನಲ್ಲಿ ಟೈಮ್ ಎಷ್ಟೋ ಬಾರಿ ನೋಡಿದೆ.

ರಾತ್ರಿಗೆ ಅಡುಗೆ ಬೇರೆ ಮಾಡಿಟ್ಟಿರಲಿಲ್ಲ. ಪದ್ದಣ್ಣ, ಮಕ್ಕಳು ಹಸಿದುಕೊಂಡು ಕೂತಿರತ್ತಾರೆ. ಏನ್ ಮಾಡ್ಲಿ, ಆಂಟಿಯಿಂದ ಹೇಗೆ ತಪ್ಪಸ್ಕೊಳ್ಳೋದು . ಈ ಅಂಟಿಗೆ ಬೇರೆ ಕೆಲಸ ಇರೋಲ್ಲ, ವಯಸ್ಸಾಯ್ತು ಅಂತ ಉಪ್ಪ ಕಮ್ಮಿ, ಜಾಸ್ತಿ ಅನ್ಕೊಂಡು ಸೊಸೆ ಅಡುಗೆ ಮಾಡೋಕೆ ಬಿಡೋಲ್ಲ. ವಯಸ್ಸಾದ ಮೇಲೆ ಗಂಡನ ಕಿರಿ ಕಿರಿ ಇರುತ್ತೆ, ಟಿವಿ ನೋಡೋಕೆ ಮೊಮ್ಮಕ್ಕಳು ಬೇರೆ ಬಿಡೋಲ್ಲ. ಎಲ್ಲರಿಂದ ತಪ್ಪಸ್ಕೊಂಡು ನನ್ನ ತರ ಪಾರ್ಕ್ ಗೆ ಬಂದು ಕೂತಿರಬೇಕು. ನನಗೆ ನೋಡಿದ್ರೆ ಮನೆಯಲ್ಲಿ ಕೆಲಸ ಒತ್ತುತ್ತೇ . ಅವರಿಂದ ಹೇಗೆ ತಪ್ಪಿಸಿಕೊಳ್ಳೋದು ಅಂತ ದಾರಿ ಹುಡುಕುತ್ತಿದ್ದೆ. ಅಷ್ಟೋತ್ತಿಗೆ ಸೊಳ್ಳೆ ರಾಯ ಬಂದು ಕಚ್ಚೋಕೆ ಶುರು ಮಾಡಿದ. ಮನಸ್ಸಲ್ಲೇ ಸೊಳ್ಳೆಗೊಂದು  ಧನ್ಯವಾದ  ಹೇಳಿ,

“ಆಂಟಿ, ತುಂಬಾ ಸೊಳ್ಳೆ ಇದೆ. ಈಗ ಬೇರೆ ಡೆಂಗ್ಯೂ ಜಾಸ್ತಿ ಆಗಿದೆ, ಕೂಡೋಕೆ ಬಿಡೋಲ್ಲ.. ಹೊರಡೋಣ”…ಅಂದೆ. “ನೋಡು… ಅಲ್ಲಿ ದೂರದಲ್ಲಿ ಕಾಣ್ತಿದೆ ಯಲಾ… ಹಸಿರು ಬಿಲ್ಡಿಂಗ್, ಅದೇ ನಮ್ಮನೆ… ಅಲ್ಲಿಗೆ ಹೋಗೋಣ ಬಾ”…ಅಂತ ಆಂಟಿ ಮನೆಗೆ ಕರೆಯೋಕೆ ಶುರು ಮಾಡಿದ್ರು. ಇಲ್ಲೇ ಸುಮ್ನೆ ನಕ್ಕು ನಕ್ಕು ಮುಖದ ನರಗಳೆಲ್ಲ ನೋವು ಬಂದಿದ್ದವು. ಇನ್ನೂ ಮನೆಗೆ ಹೋದ್ರೆ ನನ್ನ ಕತೆಮುಗಿತು, ಬೇಡವೇ ಬೇಡಾ ಅಂತ “ಇಲ್ಲಾ ಆಂಟಿ… ಇನ್ನೊಂದು ದಿನ ಬರತೀನಿ. ಈಗ ಲೇಟ್ ಆಗಿದೆ. ಮಕ್ಕ್ಳು ಕಾಯತಿರ್ತಾರೆ”…ಅಂತ ಹೇಳಿ ಸುಮ್ನಾದೆ.
ಆಂಟಿ “ಆಯ್ತು.. ಇನ್ನೊಮ್ಮೆ ಮನೆಗೆ ಬಾ” ಅಂತ ಹೇಳಿ ಹೊರಟರು . “ಹುಷಾರು ಆಂಟಿ”… ಅಂದೆ. “ಆಯ್ತು… ಆಯ್ತು”… ಅಂತ ಕತ್ತಲಲ್ಲಿ ಆಂಟಿ ಕುಂಟುತ್ತ ಹೋದರು.

ಅಬ್ಬಾ… ಆ ಆಂಟಿ ಎಷ್ಟು ಮಾತಾಡುತ್ತೆ…ಬಾಯಿಗೆ ಬ್ರೇಕ್ ಕೊಡೋಲ್ಲ. ಮಕ್ಕಳಿಂದ ತಪ್ಪಸ್ಕೊಂಡು ಬಂದ್ರೆ, ಇಲ್ಲಿ ಇನ್ನೊಂದು ಕಾಟ ಶುರುವಾಯಿತಲ್ಲ. ಪಾಪ ದೇವರಂತ ಗಂಡ, ಒಂದು ದಿನಾನೂ ಜೋರ್ ಮಾಡಿಲ್ಲ. ತುಂಬಾ ಲೇಟ್ ಆಯ್ತು. ಮಕ್ಕಳು ಎಲ್ಲಿ ಮಲ್ಕೊಂಡು ಬಿಟ್ಟಿರತ್ತಾವೋ ಅಂತ ಮನಸ್ಸು ಕಿರಿ ಕಿರಿ ಮಾಡ್ಕೊಂಡು ಎದ್ದು ಬಿದ್ದು ಅಂತ ಮನೆಗೆ ಓಡಿ ಬಂದೆ.

ಮನೆ ಒಳಗೆ ಬಂದ್ರೆ ಅಪ್ಪ ಮಕ್ಕಳು ಪಿಜ್ಜಾ ಆರ್ಡರ್ ಮಾಡ್ಕೊಂಡು ತಿಂದು ಕೂತಿದ್ರು. ನನಗೆ ಬರೋ ಸಿಟ್ಟಲ್ಲಿ ಎಲ್ಲರಿಗೂ ಒಂದೊಂದು ಕುಟ್ಟಬೇಕು ಅನಸ್ತು ಆದರೆ ಏನ್ ಮಾಡೋದು ಸುಮ್ನೆ ಆದೆ.

ಕೈ, ಕಾಲು ಮುಖ ತೊಳಕೊಂಡು ಸೀದಾ ಅಡುಗೆ ಮನೆಗೆ ಹೋದೆ. ಮೂರು ಜನ ರಾತ್ರಿಗೆ ಊಟ ಬೇಡಾ …ಅಂದ್ರು. ಇಷ್ಟು ತಿಂದು, ರಾತ್ರಿ ನಿಮಗೆ ಅಡುಗೆ ಮಾಡ್ತೀನಿ ಅನ್ಕೊಂಡಿದ್ರಾ… ಅಂದೆ. ಮೂರು ಜನಕ್ಕೆ ನಾಚಿಕೆ ಆಯ್ತು. ಕಿಸಿ ಕಿಸಿ ನಕ್ಕವು.

ನನಗೊಬ್ಬಳಿಗೆ ಅಡುಗೆ ಮಾಡ್ಕೊಂಡು ತಿಂದು, ಮಲಗಿದೆ.

***

ಮಾರನೆಯ ದಿನ ಸಾಯಂಕಾಲ ಮತ್ತೆ ಪಾರ್ಕ್ ತ್ತ ಹೋದೆ. ಆ ಆಂಟಿಯ ಜೊತೆ ಮಾತು ಬೇಡವಾಗಿತ್ತು. ವಯಸ್ಸಿನ ಅಂತರ. ಮಾತುಗಳು ಹೊಂದಾಣಿಕೆ ಆಗೋಲ್ಲ. ಕಿರಿ ಕಿರಿ ಆಗುತ್ತೆ ಅಂದುಕೊಂಡು ಆಂಟಿಗೆ ಕಾಣಬಾರದು ಅಂತ ಎಲ್ಲೋ ಮೂಲೆಯಲ್ಲಿದ್ದ ಬೆಂಚ್ ಮೇಲೆ ಹೋಗಿ ಕೂತೆ. ಬೆಂಚ್ ಬೇರೆ ಆದ್ರೂ, ಪಾರ್ಕ್ ಮಾತ್ರ ಒಂದೇ ಅಲ್ವಾ. ಎಷ್ಟೇ ತಪ್ಪಿಸಕೋ ಬೇಕು ಅಂದ್ರು ಆಂಟಿ ಕಣ್ಣಿಗೆ ನಾನು ಬಿದ್ದೆ. ಆಂಟಿ ನನ್ನನ್ನು ನೋಡಿ ‘ಓಹ್… ಇಲ್ಲಿದ್ದೀಯಾ… ನಾನು ಆ ಕಡೆ ಎಲ್ಲ ಹುಡುಕ್ತಿದ್ದೆ’ ಅಂತ ನನ್ನ ಪಕ್ಕದಲ್ಲೇ ಬಂದು ಕೂತ್ರು.

ನನಗೂ ಅವರಿಗೂ ಬಿಡಿಸಲಾರದ ನಂಟು ಯಾವುದೋ ಜನ್ಮದಲ್ಲಿ ಇರಬೇಕು, ಅದಕ್ಕೆ ಅವರು ನನ್ನ ಹಿಂದೆ ಬೇತಾಳ ತರ ಬಿದ್ದಿದ್ದಾರೆ. ಈಗ ಅವರ ಕೈಗೆ ಸಿಕ್ಕಿದ್ದೀನಿ, ಅವರ ಮಾತು ಕೇಳದೆ ಬೇರೆ ದಾರಿಯೇ ಇಲ್ಲಾ ಅಂತ ನನಗೆ ನಾನು all the best ಶಾಲಿನಿ.. ಅಂತ ಹೇಳಿಕೊಂಡು ಗಟ್ಟಿಯಾಗಿ ಅವರ ಮುಂದೆ ಕೂತೆ.

ಆಂಟಿಯ ಮಾತು ಶುರುವಾಯಿತು. ಅವತ್ತು ಆಂಟಿ ಆಯ್ದು ಕೊಂಡ ವಿಷಯ ಅವರ ಮನೆ ಮತ್ತು ಅವರ ಸಂಸಾರವಾಗಿತ್ತು. ” ನನಗೆ ಇಬ್ಬರು ಗಂಡು ಮಕ್ಕಳು. ಒಬ್ಬನು ಅಮೇರಿಕಾದಲ್ಲಿ ಡಾಕ್ಟರ್, ಇನ್ನೊಬ್ಬ ಲಂಡನ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಇಬ್ಬರಿಗೂ ಮಕ್ಳ್ ಮರಿ ಇದ್ದಾರೆ. ಎಲ್ಲ ಅನುಕೂಲವು ಇದೆ..ಎನ್ನುವಾಗ ಅವರ ಮಾತಿನಲ್ಲಿ ಅಳುಕಿತ್ತು.

ಬೇರೆಯವರ ಮನೆ, ಬೇರೆಯವರ ಸಂಸಾರದ ವಿಷಯ ಅಂದಾಗ ಕಿವಿ ನೆಟ್ಟಗೆ ಆಗುತ್ತೆ ನೋಡಿ. ನನಗೂ ಹಾಗೆ ಆಯ್ತು. ನಾನು “ಓಹ್…ಹಾಗಾದರೆ ನೀವು, ಅಂಕಲ್ ಮನೆಗೆ ರಾಜಾ ರಾಣಿನಾ” ಅಂತ ಜೋರಾಗಿ ನಕ್ಕೆ. ಅವರು ಸಪ್ಪೆ ಮೊರೆ ಮಾಡಿ “ಅಂಕಲ್ ಹೋಗಿ ಒಂದು ವರ್ಷ ಆಯ್ತು ಮಾ”… ಅಂದಾಗ ಜೋರಾಗಿ ನಗುತ್ತಿದ್ದ ನನಗೆ ಏನು ಹೇಳಬೇಕು ಅಂತ ತಿಳಿಯದೆ. ಬಾಯನ್ನು ಗಬಕ್ಕನೆ ಮುಚ್ಚಿಕೊಂಡೆ.

“ಅಂಕಲ್, ದುಡ್ಡಿಗೆ ಏನು ಕಮ್ಮಿ ಮಾಡಿಲ್ಲ. ಅವರದು 40,000 ಪೆನ್ಷಶನ್ ಬರುತ್ತೆ. ನನ್ನ ಮೆಡಿಸಿನ್ ಖರ್ಚು ಎಲ್ಲ ಹೋಗಿ ಇನ್ನೂ 20.000 ಮಿಕ್ಕುತ್ತೆ. ಸಾಲದಕ್ಕೆ ಮಕ್ಕಳು ದುಡ್ಡು ಕಳಸ್ತಾರೆ. ಅಷ್ಟೆಲ್ಲಾ ದುಡ್ದಿದ್ರು ನನ್ನವರು ಅಂತ ಹತ್ತಿರಕ್ಕೆ ಯಾರು ಇಲ್ಲಾ. ಹುಷಾರು ತಪ್ಪಿದ್ರೆ ಕೇಳೋಕೂ ಯಾರು ಇಲ್ಲಾ… ಏನೋ ಜೀವನ ನನ್ನ ಕಾಲಿನಂತೆ ಕುಂಟುತ್ತಾ ನಡೆದಿದೆ … ಪಾರ್ಕ್, ದೇವಸ್ಥಾನ ಓಡಾಡ್ತೀನಿ… ಮುಂದೆ ದೇವರೇ ನನ್ನ ಕಾಯಬೇಕು”…ಅಂದಾಗ ಅವರ ಕಣ್ಣಲ್ಲಿ ನೋವಿತ್ತು, ಹತಾಶೆ ಇತ್ತು.

“ಯಾಕೆ ಆಂಟಿ, ಹಾಗೆ ಯೋಚ್ನೆ ಮಾಡ್ತೀರಾ… ಒಮ್ಮೆ ಅಮೇರಿಕಾದಲ್ಲಿರೋ ಮಗನ ಹತ್ರ, ಇನ್ನೊಮ್ಮೆ ಲಂಡನ್ ನಲ್ಲಿರೋ ಮಗನ ಹತ್ರ ಹೋಗಿ ಜುಮ್ …ಅಂತ ಇರೋದು ಬಿಟ್ಟು, ಯಾಕೆ ಕೊರಗತೀರಾ”.. ಅಂದೆ.

“ಮಕ್ಕಳು ವಿದೇಶದಲ್ಲಿ ಇದ್ದಾರೆ ಅಂತ ಕೇಳೋಕೆ, ಹೇಳೋಕೆ  ಚೆನ್ನಾಗಿರುತ್ತೆ. ಆರು ತಿಂಗಳು ಅಲ್ಲಿ, ಆರು ತಿಂಗಳು ಮತ್ತೆ ನಮ್ಮ ದೇಶ, ಹೀಗೆ ಸುತ್ತಾಡೋಕೆ ವಯಸ್ಸು ಇರಬೇಕು, ಆರೋಗ್ಯನೂ ಇರಬೇಕು. ಅದೆರಡು ನಂಗೆ ಇಲ್ಲಾ. ಮಕ್ಕಳಿಗೆ ಬರೋಕೆ ಟೈಮ್ ಸಿಗೋಲ್ಲ. ಬಂದ್ರು ಹದಿನೈದು ದಿನ ಇರತ್ತಾರೆ ಅದು ಟೂರಿಸ್ಟ್ ತರ… ಆಮೇಲೆ ಅವರ ಕೆಲಸ, ಅವರ ಬದುಕು ಅಂತ ಹಾರಿ ಹೋಗ್ತಾರೆ. ಗಂಡ ಇದ್ದಾಗ ಧೈರ್ಯ ಇತ್ತು. ಈಗ ಒಂಟಿ ಬದುಕು, ಪಾರ್ಕ್ ಲ್ಲಿ ನಿಮ್ಮಂತ ಮಕ್ಕಳು ಸಿಗ್ತಾರೆ. ನನ್ನ ಮಕ್ಕಳು ಅನ್ಕೊಂಡು ಸ್ವಲ್ಪ ಹೊತ್ತು ಕೂತು ಮನಸ್ಸು ಹಗುರ ಮಾಡ್ಕೊಂಡು, ಸಮಯ ಕಳೀತೀನಿ”… ಅಂದಾಗ ಅವರ ಕಣ್ಣಲ್ಲಿ ಅಲ್ಲ, ನನ್ನ ಕಣ್ಣಲ್ಲಿ ನೀರಾಡಿತು. ಅವರ ಮುಖದಲ್ಲಿ ಮುಗುಳ್ನಗೆ ಇತ್ತಾದರೂ ಹೃದಯ ಭಾರವಾಗಿತ್ತು. ನಾನು ಅವರ ನೋವನ್ನು ಹೆಚ್ಚು ಕೆದಕುವ ಪ್ರಯತ್ನ ಮಾಡಲಿಲ್ಲ.

ಯಾಕೋ ಅವತ್ತು ಆಂಟಿ ಹೆಚ್ಚು ಹೊತ್ತು ಕೂರಲು ಇಷ್ಟ ಪಡಲಿಲ್ಲ. ನಾನು ಬೇಗ ಮನೆಗೆ ಹೊರಡ್ತೀನಿ ಅಂತ ಹೇಳಿ ಬೇಗನೇ ಮನೆಗೆ ಹೊರಟರು. ನಾನು ಜಾಗೃತೆ…. ಅಂತ ಹೇಳಿ ಕಳುಹಿಸಿದೆ. ಹಳೆಯ ನೋವುಗಳು ಎಷ್ಟೇ ವರ್ಷವಾದರೂ ಮಾಯೋದಿಲ್ಲ ಅದು ಆಂಟಿಯ ಮುಖದಲ್ಲಿ ಅಂದು ನೋಡಿದೆ.

ಮೊದ ಮೊದಲು ಭೇಟಿಯಲ್ಲಿ ಆಂಟಿಯ ಮಾತುಗಳು ತಲೆನೋವಿನಂತೆ ಕಾಡಿದರೂ, ಬರು ಬರುತ್ತಾ ಅವರ ಮಾತಿಗೆ ನಾನು ಹಾತೊರೆಯ ತೊಡಗಿದೆ. ನಿತ್ಯ ಪಾರ್ಕಿನಲ್ಲಿ ಭೇಟಿ ಮಾಡುತ್ತಿದ್ದೆವು , ಒಂದಲ್ಲ ಒಂದು ವಿಷಯಗಳನ್ನು ಹರಟುತ್ತಿದ್ದೆವು . ನಿಧಾನವಾಗಿ ಆಂಟಿಯೊಂದಿಗೆ ಒಂದು ರೀತಿಯ ಆತ್ಮೀಯತೆ ಬೆಳೆಯುತ್ತಾ ಹೋಯಿತು. ನನ್ನನ್ನು ಎಷ್ಟೋ ಬಾರಿ ಮನೆಗೆ  ಕರೆದರೂ ನಾನು ಮುಂದಿನ ಬಾರಿ ಖಂಡಿತಾ ಬರುತ್ತೇನೆ…ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ.

ಆದರೆ ಅವತ್ತು ಮಾತ್ರ ಅವರ ಮನೆಗೆ ನಾನೆ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿತು. ಎರಡು ದಿನದಿಂದ ಆಂಟಿ ಪಾರ್ಕ್ ಗೆ ಬಂದಿರಲಿಲ್ಲ. ಅವರು ಪಾರ್ಕ್ ಗೆ ಬಾರದ ದಿನ ನನಗೆ ಮೊದಲೇ ಹೇಳುತ್ತಿದ್ದರು. ಅಷ್ಟೊಂದು ಪ್ರೀತಿ ವಿಶ್ವಾಸ ನಮ್ಮಿಬ್ಬರ ನಡುವೆ ಬೆಳೆದಿತ್ತು. ಹಾಗಿದ್ದಾಗ ಇದ್ದಕ್ಕಿದ್ದಂತೆ ಆಂಟಿ ಎರಡು ದಿನದಿಂದ ನಾಪತ್ತೆ ಆದಾಗ ನಾನೆ ಅವರ ಮನೆಗೆ ಹುಡುಕಿಕೊಂಡು ಹೊರಟೆ. ಆಂಟಿ ಹೇಳಿದ ಮನೆಗೆ ಸರಿಯಾಗಿಯೇ ಹೋದೆ. ಇನ್ನೇನು ಗೇಟ್ ತಗೆದು ಮನೆಯ ಕಾಲಿಂಗ್ ಬೆಲ್ ಬಟನ್ ಒತ್ತುತ್ತಾ ನಿಂತೇ. ಎಷ್ಟೇ ಬೆಲ್ ಮಾಡಿದ್ರು ಆಂಟಿ ಬಾಗಿಲು ತೆರೆಯಲಿಲ್ಲ. ಕೊನೆಗೆ ಪಕ್ಕದ ಮನೆಯವರು ಹೊರಗೆ ಬಂದು ನನ್ನ ಪರಿಚಯ ಕೇಳಿ, ಆಂಟಿ… ಬಾತ್ ರೂಮ್ ಲ್ಲಿ ಬಿದ್ದಿದ್ದರಿಂದ, ತಲೆಗೆ ತೀವ್ರ ಪೆಟ್ಟಾಗಿ ಅಲ್ಲಿಯೇ ಜೀವ ಬಿಟ್ಟರು ಅಂದಾಗ ಹೃದಯ ಕಂಪಿಸಿತು. ಮಾತುಗಳೇ ಬರಲಿಲ್ಲ.

ನಾನೇನು ರಕ್ತ ಸಂಬಂಧಿಯಾಗದಿದ್ದರೂ ಎಲ್ಲೋ ಇದ್ದ ಜೀವ, ನನ್ನೊಂದಿಗೆ ಬೆಸೆದು ಹೋಗಿತ್ತು. ಅವರನ್ನು ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಕಣ್ಣುಗಳು ಮಂಜಾದವು. ಅಲ್ಲಿಂದ ವಾಪಸ್ಸು ಹೊರಟ್ಟಿದ್ದೆ, ಅಷ್ಟೋತ್ತಿಗೆ ಹಿಂದಿಂದ ವ್ಯಕ್ತಿಯೋರ್ವ

‘ಯಾರು ನೀವು?… ನನ್ನ ಅಮ್ಮನಿಗೆ ಏನಾಗಬೇಕು’.. ಎನ್ನುವ ಪ್ರಶ್ನೆ ಕೇಳಿದ.

ನಾನು ಉತ್ತರಿಸಲು ಹಿಂದೆ ತಿರುಗಿದೆ. ‘ನಾನು ಆಂಟಿಗೆ ಪಾರ್ಕನಲ್ಲಿ ಸಿಕ್ಕ ಗೆಳತಿ’…ಎನ್ನುವಾಗ ಮನಸ್ಸು ತುಂಬಿ ಬಂತು, ದುಃಖದಲ್ಲಿ ಆ ವ್ಯಕ್ತಿಯ ಮುಖವನ್ನು ಸರಿಯಾಗಿ ನೋಡಲಿಲ್ಲ.
ಆ ವ್ಯಕ್ತಿ ‘ಓಹ್…ನೀವು ಶಾಲಿನಿ ಅಲ್ವಾ…ಅಮ್ಮಾ ಫೋನ್ ನಲ್ಲಿ ನಿಮ್ಮ ಬಗ್ಗೆ ಆಗಾಗ ಹೇಳ್ತಿದ್ರು. ನಾನು ಅವರ ದೊಡ್ಡ ಮಗ ಅಮೇರಿಕಾದಲ್ಲಿ ಡಾಕ್ಟರ್ ಆಗಿದ್ದೀನಿ. ಅಮ್ಮಾ ನಮ್ಮ ಬಗ್ಗೆನೂ ಹೇಳಿರಬೇಕು ಅಲ್ವಾ’ ಅಂದ. ನಾನು ಹೌದೆಂದು ಎಂದು ತಲೆ ಆಡಿಸಿದೆ.

‘ಏನು ಮಾಡೋಕೆ ಆಗೋಲ್ಲ…ಎಲ್ಲ ವಿಧಿಯಾಟ, ವಿಧಿ ಮುಂದೆ ಎಲ್ಲರೂ ತಲೆ ಬಾಗಲೇಬೇಕು ಅಲ್ವಾ?…ಅಮ್ಮಾ, ಹೋಗಿದ್ದು ಸುದ್ದಿ ಕೇಳಿ ತಕ್ಷಣ ಅಲ್ಲಿಂದ ಓಡಿ ಬಂದೆ. ನನ್ನ ತಮ್ಮಾ ಲಂಡನ್ ನಿಂದ ನಾಡಿದು ಬರುತ್ತಿದ್ದಾನೆ. ನಾನು, ನನ್ನ ತಮ್ಮಾ ಈ ಮನೆಯನ್ನ ಸೇಲ್ ಮಾಡಬೇಕು ಅನ್ಕೊಂಡಿದ್ದೀವಿ. ನಾವು ಫಾರೆನ್ ನಲ್ಲಿ ಇದ್ದಕೊಂಡು ಈ ಪ್ರಾಪರ್ಟಿಯನ್ನ ನೋಡ್ಕೋಕೆ ಕಷ್ಟವಾಗುತ್ತೆ, ಯಾರಾದ್ರೂ ಬ್ರೋಕರ್ ಅಥವಾ ಮನೆ ತಗೋಳೋರು ಇದ್ರೆ ಹೇಳಿ’… ಎಂದಾಗ ನನಗೆ ದುಃಖ ಉಮ್ಮಳಿಸಿ ಬಂತು, ಏನನ್ನು ಮಾತನಾಡದೆ ಅಲ್ಲಿಂದ ಹೊರಟು ಹೋದೆ. ತಾಯಿ ಸತ್ತು ಒಂದು ವಾರವೂ ಕಳೆದಿಲ್ಲ, ಮಕ್ಕಳು ಅಸ್ತಿ ಲೆಕ್ಕಾಚಾರದಲ್ಲಿ ತೊಡಗಿದ್ದರು. ಮನಸ್ಸು ಭಾರವಾಗಿ ಅಲ್ಲಿಂದ ಹಿಂದೆ ತಿರುಗಿ ನೋಡದೆ ಹೊರಟು ಹೋದೆ.

ಊಟಕ್ಕೆ ಇಲ್ಲದ ಉಪ್ಪಿನಕಾಯಿ… ತರ ಅವಶ್ಯಕತೆ ಇದ್ದಾಗ ಸಂಬಂಧಗಳು ಬಾರದೆ ಹೋದಾಗ, ಆಮೇಲೆ ಬಂದರೆಷ್ಟು  ಹೋದರೆಷ್ಟು… ಈ ಮಾತನ್ನು ಆಂಟಿ ಯಾವಾಗಲು ಮಾತಿನ ಮಧ್ಯೆ ಹೇಳುತ್ತಿದ್ದದ್ದು ನೆನಪಿಗೆ ಬಂತು. ಇಂತ ಸ್ವಾರ್ಥ ಪ್ರಪಂಚದಲ್ಲಿ ಆಂಟಿ ಹೋಗಿದ್ದೆ ಒಳ್ಳೆಯದಾಯಿತು ಎಂದೆನಿಸಿ ನನ್ನ ಕಣ್ಣೀರು ಒರೆಸಿಕೊಂಡೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW