ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 130 ವರ್ಷ

ನಮ್ಮ ನೆಲ ಕಂಡ ಮಹಾನ್‌ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಅಮೆರಿಕದ ಚಿಕಾಗೋ ನಗರದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ ಈಗ 130 ವರ್ಷ, ಈ ಕುರಿತು ಡಾ.ಗುರುಪ್ರಸಾದ್ ರಾವ್ ಹವಲ್ದಾರ್ ಅವರು ಬರೆದಿರುವ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…

ಧರ್ಮ, ಜಾತಿ, ಭಾಷೆ ಇತ್ಯಾದಿಗಳಿಂದ ಬಡಿದಾಡಿಕೊಳ್ಳುತ್ತಿರುವ ಈ ಸಂಕ್ರಮಣ ಕಾಲಘಟ್ಟದಲ್ಲಿ ಸ್ವಾಮೀಜಿ ಅವರ ಸಂದೇಶ ಚಿರಸ್ಮರಣೀಯ. ಜಾಗತಿಕ ಇತಿಹಾಸದಲ್ಲಿ ಈ ದಿನ ಅತ್ಯಂತ ಮಹತ್ವದ್ದು.ಜಗತ್ತಿನ ಯಾರೆಲ್ಲ ಧರ್ಮದವರು ಅಸಡ್ಡೆಯಿಂದ ಪರಿಭಾವಿಸುತ್ತಿದ್ದವರೋ ಅವರೇ ನಮ್ಮ ಧರ್ಮವನ್ನು ಒಪ್ಪಿಕೊಂಡು ಮನ್ನಣೆ ನೀಡಿದರು. ಪೂರ್ವ-ಪಶ್ಚಿಮ ಗೋಳಗಳನ್ನು ಧರ್ಮದ ಪೀಠದಲ್ಲಿ ಸಾಮೀಪ್ಯಕ್ಕೆ ತಂದ ವಿಶ್ವಧರ್ಮ ಸಮ್ಮೇಳನವು ಸ್ವಾಮಿ ವಿವೇಕಾನಂದರ ಮೂಲಕ ಭಾರತದತ್ತ ಬೆಕ್ಕಸ ಬೆರಗಾಗಿ ನೋಡಿತು..

“ಮನುಷ್ಯನಿಗೆ ಶಾಂತಿ, ನೆಮ್ಮದಿ ತರುವುದೇ ಧರ್ಮದ ಉದ್ದೇಶ” ಎಂದಿದ್ದ ವೀರ ಸಂನ್ಯಾಸಿ ವಿವೇಕಾನಂದರು, ಅಮೆರಿಕದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣ ಹತ್ತೊಂಭತ್ತನೇ ಶತಮಾನದಲ್ಲಿ ಜಗತ್ತಿನ ಸನಾತನ ಧರ್ಮದ ಸತ್ಯವನ್ನು ಎತ್ತಿಹಿಡಿಯಲು ಭಾರತದಲ್ಲಿ ಅವತರಿಸಿದ ಮಹಾಪುರುಷರಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದರರಿಬ್ಬರೂ ಅತ್ಯಂತ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಅದರಲ್ಲಿಯೂ ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಸಾವಿರಾರು ಕಿ.ಮೀ. ದೂರದ ಅಮೆರಿಕದ ಚಿಕಾಗೋದಲ್ಲಿ ಮಾಡಿದ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿ ಅಳಿಸಲಾಗದ್ದು. ಇದು ಕೇವಲ ವಿವೇಕಾನಂದರ ವಿಜಯ ಯಾತ್ರೆಯಲ್ಲ, ಭಾರತದ, ಹಿಂದೂ ಧರ್ಮದ ಸಾಹಸ ಯಾತ್ರೆಯೇ ಆಗಿತ್ತು. ವಿಭಿನ್ನ ಜಾತಿ, ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ಅವರು ಮಾಡಿದ ಭಾಷಣ ಭಾರತೀಯರಲ್ಲಿ ಸ್ವಾಭಿಮಾನ, ಧರ್ಮಜಾಗೃತಿಯನ್ನು ಬಡಿದೆಬ್ಬಿಸಿತ್ತು.

ಭಾರತದಿಂದ ವಿವೇಕಾನಂದರಷ್ಟೇ ಅಲ್ಲದೆ, ಬ್ರಹ್ಮ ಸಮಾಜ ಪ್ರತಿನಿಧಿಯಾಗಿ ಪ್ರತಾಪ್ ಚಂದ್ರ ಮಜೂಮ್ದಾರ್ ಸಹ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಜೈನ, ಬೌದ್ಧ ಮತ ಪ್ರತಿನಿಧಿಗಳು ಸಹ ಆಗಮಿಸಿದ್ದರು. ಶ್ರೀಲಂಕಾದಿಂದ ಬೌದ್ಧ ಧರ್ಮ ಪ್ರತಿನಿಧಿ ಧರ್ಮಪಾಲ ಅವರೂ ಹಾಜರಿದ್ದರು.

ಫೋಟೋ ಕೃಪೆ : google

ಮೈಸೂರು ಒಡೆಯರ್ ಅವರ ನೆರವು ವಿಶೇಷವೆಂದರೆ ವಿವೇಕಾನಂದರಿಗೆ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಬೇರೆ ಪ್ರತಿನಿಧಿಗಳಂತೆ ಮುಂಚಿತವಾಗಿ ಆಹ್ವಾನ ಬಂದಿರಲಿಲ್ಲ. ಕಡೆಯ ಎರಡು ದಿನಗಳಿರುವಾಗ ಸಿಕ್ಕಿದ ಅವಕಾಶವನ್ನೇ ಬಳಸಿಕೊಂಡು ಪ್ರತಿನಿಧಿತ್ವ ದೊರಕಿಸಿಕೊಂಡಿದ್ದರು. ಇದಕ್ಕೆ ಮುನ್ನ ಅಮೆರಿಕಕ್ಕೆ ತೆರಳಲು ಸಜ್ಜಾಗುತ್ತಿದ್ದ ವಿವೇಕಾನಂದರ ಬಳಿ ಅಗತ್ಯಕ್ಕೆ ತಕ್ಕಷ್ಟು ಹಣವಿರಲ್ಲಿಲ್ಲ. ವಿಶ್ವಧರ್ಮ ಸಮ್ಮೇಳನದಲ್ಲಿ ವಿಶ್ವಕ್ಕೆ ಭಾರತದ ಜ್ಞಾನ ಸಂಪತ್ತನ್ನು ಪರಿಚಯಿಸಬೇಕೆನ್ನುವ ಹಂಬಲದಿಂದ ಹೊರಟಿದ್ದ ವಿವೇಕಾನಂದರಿಗೆ ಸಹಾಯ ಹಸ್ತ ಚಾಚಿದ್ದು ಮೈಸೂರಿನ 10ನೇ ಚಾಮರಾಜೇಂದ್ರ ಒಡೆಯರ್ ಅವರು.

ಸ್ವಾಮಿ ವಿವೇಕಾನಂದರ ವಿದೇಶ ಪ್ರವಾಸದ ಸಂಪೂರ್ಣ ಪ್ರಾಯೋಜಕರು ಮೈಸೂರಿನ ಒಡೆಯರು. 1868ರಲ್ಲಿ ಸಿಂಹಾಸನವೇರಿದ 10ನೇ ಚಾಮರಾಜೇಂದ್ರ ಒಡೆಯರ್ ಅವರ ಬಳಿಗೆ ಆಗಮಿಸಿದ್ದ ವಿವೇಕಾನಂದರಿಗೆ ತಾವು ಅಮೆರಿಕಗೆ ತೆರಳಿ ಧರ್ಮಸಭೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದರಲ್ಲದೆ, ಅದಕ್ಕೆ ತಗುಲುವ ಅಷ್ಟೂ ಖರ್ಚನ್ನು ತಾವೇ ನೀಡಿ ಉದಾರತೆ ಮೆರೆದಿದ್ದರು.

ಖ್ಯಾತ ಫ್ರೆಂಚ್ ಲೇಖಕ ರೊಮೈನ್ ರೊಲ್ಯಾಂಡ್ ಬರೆದಿರುವ ‘ಲೈಫ್ ಆಫ್ ವಿವೇಕಾನಂದ ಅಂಡ್ ಯುನಿವರ್ಸಲ್ ಗಾಸ್ಪೆಲ್’ ಪುಸ್ತಕದಲ್ಲಿ ಸ್ವಾಮೀಜಿ ಜೀವನದ ಕೆಲವು ಆಸಕ್ತಿಕರ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಸ್ವಾಮಿ ವಿವೇಕಾನಂದರು ಚಿಕಾಗೋ ತೆರಳಲು ಸಹಾಯ ಮಾಡಿದ ಮಹಾರಾಜರ ಹೆಸರನ್ನು ಬರೆದಿದ್ದಾರೆ. ಸರ್ವಧರ್ಮ ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನಿತರಾಗಿದ್ದ ಸ್ವಾಮಿ ವಿವೇಕಾನಂದರಿಗೆ ಅಮೆರಿಕಕ್ಕೆ ತಲುಪಬೇಕಾದಷ್ಟು ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಇದನ್ನರಿತ ರಾಜಸ್ಥಾನದ ಖೆತಡಿಯ ರಾಜ ಅಜಿತ್ ಸಿಂಗ್ ಸ್ವಾಮೀಜಿ ಅವರನ್ನು ತಮ್ಮ ಆಸ್ಥಾನಕ್ಕೆ ಕರೆಸಿಕೊಂಡಿದ್ದರು. ಅಲ್ಲದೆ ಭಾರತದಿಂದ ಚಿಕಾಗೋ ತಲುಪಲು ತಗಲುವ ವೆಚ್ಚವನ್ನು ಭರಿಸಿ, ಹೊಸ ರೇಷ್ಮೆಯ ಉಡುಪುಗಳನ್ನು ನೀಡಿ ಕಳುಹಿಸಿ ಕೊಟ್ಟಿದ್ದರು. ಅಂದು ರಾಜ ಮಾಡಿದ ಧನ ಸಹಾಯ ಇಂದು ಸ್ವಾಮಿ ವಿವೇಕಾನಂದರ ಹೆಸರಿನೊಂದಿಗೆ ರಾಜ ಅಜಿತ್ ಸಿಂಗ್ ಅವರ ಹೆಸರು ಕೂಡ ಇತಿಹಾಸ ಪುಟಗಳಲ್ಲಿ ಉಳಿಯುವಂತೆ ಆಗಿದೆ.

ವಿಶ್ವಧರ್ಮ ಸಮ್ಮೇಳನ 1893ರ ಸೆಪ್ಟೆಂಬರ್ 11ರಿಂದ 27ರವರೆಗೆ ಚಿಕಾಗೋದ “ಕೊಲಂಬಿಯನ್ ಜಾಗತಿಕ ಮೇಳ”ದ ಅಂಗವಾಗಿ ನಡೆದ ವಿಶ್ವಧರ್ಮ ಸಮ್ಮೇಳನ ಪ್ರಪಂಚದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆ. ಹಿಂದೂ ಧರ್ಮದ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಿದ ಸಂದರ್ಭ. ಪ್ರಪಂಚದ ಸಕಲ ಮತಧರ್ಮಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಗಳಾಗಿದ್ದರು. ಇದೊಂದು ಮಾನವತೆಯ ಆದರ್ಶಗಳ ಒಗ್ಗೂಡಿಸುವಿಕೆಯ ಸಮ್ಮೇಳನವಾಗಿತ್ತು.

ಫೋಟೋ ಕೃಪೆ : google

ಜಗತ್ತಿನ ಮಾನವರೆಲ್ಲರಿಗೆ ಸಂಬಂಧಿಸಿದ ಎಲ್ಲಾ ಮುಖ್ಯ ವಿಷಯಗಳ ಮೇಲೆ ಸಮ್ಮೇಳನದಲ್ಲಿ ಚರ್ಚೆಯಾಗಬೇಕು ಎಂದು ಓರ್ವ ವಕೀಲ ಚಾರ್ಲ್ಸ್ ಬಾನಿ ಎಂಬುವವರು ಸಲಹೆ ನೀಡಿದ್ದು ಎಲ್ಲರಿಂದ ಸರ್ವಸಮ್ಮತಿ ದೊರಕಿಸಿಕೊಂಡಿತ್ತು. ಅಲ್ಲದೆ ಈ ಜಾಗತಿಕ ಮಹಾ ಸಮ್ಮೇಳನಕ್ಕೆ ಬಾನಿ ಅವರನ್ನೇ ಮಹಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಾರಂಭದಲ್ಲಿ ಕೆಲ ಕ್ರೈಸ್ತ ಬಿಷಪ್ಪರು “ಸರ್ವಧರ್ಮ ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸಿದರೂ ಕಡೆಗೆ ಅದು ನಡೆಯಲೇಬೇಕು ಎಂದು ತೀರ್ಮಾನವಾಗಿ ಚಿಕಾಗೋದ ಮಿಚಿಗನ್ ಅವೆನ್ಯೂದಲ್ಲಿ ಅದೇ ತಾನೆ ನೂತನವಾಗಿ ನಿರ್ಮಾಣವಾಗಿದ್ದ “ಆರ್ಟ್ ಇನ್ ಸ್ಟಿಟ್ಯೂಟ್” ಎನ್ನುವ ಭವ್ಯ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಯಿತು. ಸಮ್ಮೇಳನದಲ್ಲಿ ಎಲ್ಲಾ ರಂಗದ ಪ್ರಮುಖರು, ಜಾಗತಿಕ ಗಣ್ಯ ವ್ಯಕ್ತಿಗಳು, ಪಾಶ್ಚಾತ್ಯ ತತ್ತ್ವಶಾಸ್ತ್ರ ಪ್ರವೀಣರು, ಕ್ರೈಸ್ತ ಧರ್ಮದ ಉನ್ನತ ಧರ್ಮಾಧಿಕಾರಿಗಳು.. ಎಲ್ಲರೂ ಭಾಗವಹಿಸಿದ್ದರು.

ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು 1893ರ ಸೆಪ್ಟೆಂಬರ್ 11 ಸೋಮವಾರ ಬೆಳಗ್ಗೆ 10ಕ್ಕೆ ಸರಿಯಾಗಿ ಐತಿಹಾಸಿಕ ವಿಶ್ವಧರ್ಮ ಸಮ್ಮೇಳನ ಉದ್ಘಾಟನೆಯಾಗಿತ್ತು. ಸಾವಿರಾರು ಜನರಿಂದ ಕಿಕ್ಕಿರಿದಿದ್ದ ಸಭಾಸದನದ ವೇದಿಕೆಯ ನಟ್ಟ ನಡುವೆ ಅಮೆರಿಕದ ಕ್ಯಾಥೋಲಿಕ್ ಕ್ರೈಸ್ತರ ಅತ್ಯಂತ ಶ್ರೇಷ್ಠ ಧರ್ಮಗುರುಗಳಾದ ಕಾರ್ಡಿನಲ್ ಗಿಬ್ಬನ್ಸ್ ಕುಳಿತಿದ್ದರು. ಅವರ ಎರಡೂ ಬದಿ ವೊವೊದ ಧರ್ಮಗಳ ಪ್ರತಿನಿಧಿಗಳು ಆಸೀನರಾಗಿದ್ದರು. ಅವರೆಲ್ಲರ ನಡುವೆ ಕಿತ್ತಲೆ ಬಣ್ಣದ ನಿಲುವಂಗಿ, ಪೀತ ವರ್ಣದ ಪೇಟ ಧರಿಸಿ ರಾಜ ಗಾಂಭೀರ್ಯದಿಂದ ಕುಳಿತಿದ್ದ ಸ್ವಾಮಿ ವಿವೇಕಾನಂದರು ವಿಶಿಷ್ಟ ಉಡುಪು, ಗಂಭೀರ ವ್ಯಕ್ತಿತ್ವದಿಂದ ಸಭಿಕರ ಗಮನ ಸೆಳೆದಿದ್ದರು.

ಮೊದಲಿಗೆ ಸ್ವಾಗತ ಸಮಿತಿಯ ಅಧಿಕಾರಿಗಳು ಮಾತನಾಡಿದರು. ಬಳಿಕ ಒಬ್ಬೊಬ್ಬ ಪ್ರತಿನಿಧಿಗಳು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಾಗಿದ್ದರು. ಆದರೆ ವಿವೇಕಾನಂದರು ತಾವು ಎಲ್ಲವನ್ನೂ ಗಮನಿಸುತ್ತಾ ಮೌನವಾಗಿದ್ದರು. ಒಂದೆರಡು ಬಾರಿ ಅವರಿಗೆ ಭಾಷಣಕ್ಕಾಗಿ ಕರೆ ಬಂದರೂ “ಮತ್ತೆ ಮಾಡುತ್ತೇನೆ” ಮುಂದೆ ಹಾಕಿಸಿದ್ದರು. ಕಡೆಗೊಮ್ಮೆ ಸಭಾಧ್ಯಕ್ಷರಾದ ಚಾರ್ಲ್ಸ್ ಬಾನಿ ಅವರೇ ಸ್ವಾಮಿ ವಿವೇಕಾನಂದರಿಗೆ ಭಾಷಣ ಮಾಡಬೇಕೆಂದು ಕೇಳಿದರು. ಅದಕ್ಕೆ ವಿವೇಕಾನಂದರ ಪಕ್ಕದಲ್ಲೇ ಕುಳಿತಿದ್ದ ಫ್ರೆಂಚ್ ಪಾದ್ರಿಗಳಾದ ಬಾನೆಟ್ ಮಾರಿ ಸಹ ಪ್ರೋತ್ಸಾಹ ನೀಡಿದರು.

ಸ್ವಾಮಿ ವಿವೇಕಾನಂದರು ಯಾವ ಪೂರ್ವ ತಯಾರಿಗಳಾಗಲಿ, ಭಾಷಣವನ್ನು ಸಿದ್ದಪಡಿಸಿಕೊಂಡಾಗಲಿ ಸಭೆಯ ಎದುರು ನಿಲ್ಲಲಿಲ್ಲ, ಅವರು ಸಭೆ ಎದುರು ನಿಂತು ಕ್ಷಣ ಮಾತ್ರ ಸಮಸ್ತ ಸಭೆಯನ್ನೊಮ್ಮೆ ಅವಲೋಕಿಸಿದರು. ಸರಸ್ವತೀ ದೇವಿಗೆ ವಂದನೆ ಸಲ್ಲಿಸಿದರು. ನಂತರ ಸಣ್ಣ ಭಾಷಣ ಪ್ರಾರಂಭಿಸಿದರು. “ಅಮೆರಿಕದ ಸೋದರಿಯರೇ ಮತ್ತು ಸೋದರರೇ” ಎಂದು ಹೇಳಿದ್ದೇ ತಡ ಕಿವಿ ಕಿವುಡಾಗುವಂತೆ ಕರತಾಡನ ನಡೆಯಿತು. ಪ್ರತಿಯೊಬ್ಬರೂ ಎದ್ದು ನಿಂತು ಜಯಘೋಷ ಮಾಡಿದರು, ತಮ್ಮ ತಮ್ಮ ಕರವಸ್ತ್ರ, ಹ್ಯಾಟುಗಳನ್ನು ಬೀಸಿ ಹರ್ಷ ವ್ಯಕ್ತಪಡಿಸಿದರು!.

ಫೋಟೋ ಕೃಪೆ : google

ಕರತಾಡನ, ಜಯಘೋಷಗಳು ಮುಗಿದ ಮೇಲೆ ಭಾಷಣ ಮುಂದುವರಿಸಿದ ವಿವೇಕಾನಂದರು; “ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

“ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕಾರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ” ಎಂದರು.

ಚಿಕಾಗೋ ವಿಶ್ವಧರ್ಮ ಸಮ್ಮೇಳನ ಉದ್ಘಾಟನಾ ದಿನದ ಸ್ವಾಮಿ ವಿವೇಕಾನಂದರ ಭಾಷಣ ಮರುದಿನ ಎಲ್ಲ ಪತ್ರಿಕೆಗಳಲ್ಲಿ ಅಗ್ರಸುದ್ದ್ದಿಯಾಗಿತ್ತು. ಹೀಗೆ ಭಾರತದಲ್ಲಿ ಸಾಮಾನ್ಯ ಸಂನ್ಯಾಸಿ, ಬೈರಾಗಿಯಾಗಿದ್ದ ಓರ್ವ ವ್ಯಕ್ತಿ ರಾತ್ರಿ ಬೆಳಗಾಗುವಷ್ಟರಲ್ಲಿ ಜಗತ್ತಿನ ಕಣ್ಮಣಿಯಾಗಿ ಬದಲಾಗಿದ್ದರು. ಸ್ವಾಮೀಜಿ ಮಾಡಿದ್ದ ಪುಟ್ಟ ಭಾಷಣ ಅಮರಿಕನ್ನರ ಮೇಲೆ ಗಾಢ ಪರಿಣಾಮ ಬೀರಿತ್ತು. ಅದರಲ್ಲಿಯೂ ಅವರು ಪ್ರಾರಂಭದಲ್ಲಿ ಉದ್ಘರಿಸಿದ ಸಾಲುಗಳು “ಅಮೆರಿಕದ ಸೋದರಿಯರೆ, ಸೋದರರೇ” ಎಂಬ ಯಾವ ನಾಟಕೀಯತೆ ಇಲ್ಲದ ಮೂರು ಸರಳ ಶಬ್ದಗಳಿಗೆ ಇಡೀ ಅಮೆರಿಕವೇ ತಲೆದೂಗಿತ್ತು.

ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಒಟ್ಟು ಆರು ಭಾಷಣಗಳನ್ನು ಮಾಡಿದ್ದರು. “ಹಿಂದೂ ಧರ್ಮ” ಎನ್ನುವ ವಿಚಾರದ ಕುರಿತಂತೆ ಮಾಡಿದ್ದ ಭಾಷಣ ಸಹ ಅಮೋಘವಾದುದಾಗಿತ್ತು. ಸಮ್ಮೇಳನದ ಕಡೆಯ ದಿನ ಸಮಾರೋಪ ಸಮಾರಂಭದಂದು ಸಹ ವಿವೇಕಾನಂದರು ತಮ್ಮ ಚುಟುಕಾದ ಭಾಷಣದ ಮೂಲಕ ಸಮತ್ವದ ಸಾರವನ್ನು ತಿಳಿಸಿದ್ದರು.

“ಯಾರು ಯಾವ ಧರ್ಮವನ್ನು ಮತಾಂತರಗೊಳ್ಳುವದು ಅಗತ್ಯವಿಲ್ಲ. ಆದರೆ ಉಳಿದವರ ಉನ್ನತ ಭಾವನೆಗಳನ್ನು ಮೈಗೂಡಿಸಿಕೊಂಡು ವಿವೇಕವನ್ನು ಕಳೆದುಕೊಳ್ಳದೆ ತಾನೇ ತಾನಾಗಿ ಬೆಳೆಯಬೇಕು. ಪಾವಿತ್ರ್ಯತೆ, ಪರಿಶುದ್ಧತೆ ಹಾಗೂ ಅನುಕಂಪವು ಜಗತ್ತಿನ ಯಾವೊಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ಧರ್ಮದಲ್ಲಿ ಅತ್ಯಂತ ಶೀಲವಂತರಾದ ಸ್ತ್ರೀ ಪುರುಷರು ಆಗಿ ಹೋಗಿದ್ದಾರೆ. ಇಷ್ಟಾಗಿಯೂ ನಮ್ಮ ಧರ್ಮವೇ ಉಳಿಯುತ್ತದೆ ಎನ್ನುವವರ ವಾದ ಕೇಳಿದಾಗ ನನಗೆ ಕನಿಕರ ಮೂಡುತ್ತದೆ” ಎಂದಿದ್ದರು.

ಭಾರತದಿಂದ ಅನೇಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅವರಿಗೆ ಆಮಂತ್ರಣವೂ ಬಂದಿತ್ತು. ಬ್ರಹ್ಮ ಸಮಾಜ, ಜೈನ ಧರ್ಮ, ಥಿಯಾಸೊಫಿಕಲ್‌ ಸೊಸೈಟಿಯ ಪ್ರತಿನಿಧಿಗಳು ಅಲ್ಲಿ ಬಂದಿದ್ದರು. ಶ್ರೀಮತಿ ಅನಿಬೆಸೆಂಟ್‌ ಕೂಡ ಈ ಸಮ್ಮೇಳನದಲ್ಲಿ ಪಾಲುಗೊಂಡಿದ್ದರು. ಇನ್ನು ಹಲವಾರು ಪಂಥದ ಅನುಯಾಯಿಗಳು ಭಾರತದಿಂದ ಲೇಖನಗಳನ್ನು ಕಳಿಸಿದ್ದರು.

ವಿಶೇಷ ಆಮಂತ್ರಣ ಪಡೆಯದ, ಕೊನೆಯ ಗಳಿಗೆಯಲ್ಲಿ ಅವಕಾಶದೊಡನೆ ಪ್ರವೇಶ ಪಡೆದ ವಿವೇಕಾನಂದರು ಮಾತ್ರ ಸನಾತನ ಧರ್ಮದ, ಸರ್ವಧರ್ಮ ಸಮನ್ವಯದ, ಪತಾಕೆಯನ್ನು ಅಲ್ಲಿ ಹಾರಿಸಿದರು, ಅಷ್ಟೇ ಅಲ್ಲ, ಭಾರತದ ಗೌರವದ ಪಾಂಚಜನ್ಯದ ಧ್ವನಿಯನ್ನು ದಶದಿಶೆಗಳಲ್ಲಿ ಮೊಳಗಿಸಿದ ಕೀರ್ತಿಗೆ ಭಾಜನರಾದರು.

ಫೋಟೋ ಕೃಪೆ : google

ಸಭೆ ಪ್ರಾರಂಭಗೊಂಡದ್ದು ಚಿಕಾಗೋದ ‘ಆರ್ಟ್‌ ಪ್ಯಾಲೇಸ್‌’ ಎಂಬ ವಿಶಾಲ ಸಭಾಂಗಣದಲ್ಲಿ. ಆ ಸಭೆ ವಿದ್ಯಾವಂತರಿಂದ, ಬುದ್ಧಿವಂತರಿಂದ, ವಿಚಾರವಾದಿಗಳಿಂದ ತುಂಬಿತ್ತು. ಸಭೆಯಲ್ಲಿ ಹೆಚ್ಚಿನವರು ಕ್ರೈಸ್ತ ಮತೀಯರೇ ಆಗಿದ್ದರು. ಆ ಸಭೆಯಲ್ಲಿ ವಿವೇಕಾನಂದರು ಮಾತನಾಡಿದರು. ಸಭೆಯಲ್ಲಿ ನಡೆದುದೆಲ್ಲವನ್ನೂ ಶಿಷ್ಯ ಅಳಸಿಂಗರಿಗೆ ಸುದೀರ್ಘ ಪತ್ರ ಬರೆದು ಬಣ್ಣಿಸಿದರು. ಅಲ್ಲಿ ನಡೆದದ್ದು ವಿವೇಕಾನಂದರ ಮಾತಿನಲ್ಲಿಯೇ ತಿಳಿಯುವುದು ಕೂಡ ರೋಮಾಂಚಕಾರಿ ಅನುಭವ ನೀಡ ಬಲ್ಲದು. ಅವರು ಅಳಸಿಂಗರಿಗೆ ಬರೆದ ಪತ್ರದಲ್ಲಿ ಹೀಗೆ ಬರೆಯುತ್ತಾರೆ :

‘‘ಹುಟ್ಟಿದಾರಭ್ಯ ಬಹಿರಂಗ ಸಭೆಯಲ್ಲಿ ಮಾತನಾಡದಿದ್ದ ನಾನು, ಆ ವಿದ್ವಾನ್‌ ಮಂಡಳಿಯೆದುರು ಭಾಷಣ ಮಾಡುವುದೆಂದರೇನು? ಸಾಂಪ್ರದಾಯಿಕ ವಿಧಿ ಸಂಗೀತಗಳಿಂದ, ಪರಿಚಯ ಭಾಷಣಗಳಿಂದ ಸಭೆ ಆರಂಭವಾಯಿತು. ವೇದಿಕೆಯ ಮೇಲಿದ್ದವರು ತಮ್ಮ ತಮ್ಮನ್ನು ಸಭೆಗೆ ಪರಿಚಯ ಮಾಡಿಕೊಟ್ಟ ನಂತರ ಮುಂದೆ ಬಂದು ಭಾಷಣ ಮಾಡಿದರು. ನನ್ನ ಎದೆ ಕಂಪಿಸುತ್ತಿತ್ತು. ನಾಲಗೆ ಒಣಗುತ್ತಿತ್ತು. ನನಗೇಕೋ ಅಂಜಿಕೆಯಾಯಿತು. ಬೆಳಗಿನ ಸಭೆಯಲ್ಲಿ ಮಾತನಾಡಲು ಧೈರ್ಯ ಬರಲಿಲ್ಲ. ಬ್ರಹ್ಮ ಸಮಾಜದ ಮುಜುಂದಾರರು ಸುಂದರ ಭಾಷಣ ಮಾಡಿದರು. ಥಿಯಾಸೊಫಿಸ್ಟರಾದ ಚಕ್ರವರ್ತಿಗಳ ಭಾಷಣ ಅದಕ್ಕಿಂತ ಸುಂದರವಾಗಿತ್ತು. ಪ್ರೇಕ್ಷಕರು ಅವುಗಳನ್ನು ಕೊಂಡಾಡಿದರು.

ಅವರೆಲ್ಲರೂ ತಮ್ಮತಮ್ಮ ಭಾಷಣಗಳನ್ನು ಮೊದಲೇ ಸಿದ್ಧಪಡಿಸಿಕೊಂಡು ಬಂದಿದ್ದರು. ನಾನೊಬ್ಬ ಹೆಡ್ಡ! ನನ್ನಲ್ಲಿ ಪೂರ್ವ ಸಿದ್ಧತೆಯೇನೂ ಇರಲಿಲ್ಲ. ಸರಸ್ವತೀ ದೇವಿಗೆ ವಂದನೆ ಸಲ್ಲಿಸಿ ಮುಂದೆ ಬಂದೆನು. ಸಭಾಧ್ಯಕ್ಷರಾದ ಡಾ.ಬ್ಯಾರೋನ್‌ ನನ್ನನ್ನು ಸಭೆಗೆ ಪರಿಚಯ ಮಾಡಿಕೊಟ್ಟರು. ಆ ನಂತರ ನಾನು ನನ್ನ ಸಣ್ಣ ಭಾಷಣವನ್ನು ಆರಂಭಿಸಿದೆ. ‘‘ಅಮೆರಿಕೆಯ ಸೋದರಿಯರೇ ಮತ್ತು ಸೋದರರೇ’’ ಎಂದು ನಾನು ಆರಂಭಿಸಿದಾಕ್ಷಣ ಕಿವಿ ಕಿವುಡಾಗುವಂತೆ ಕರತಾಡನ ನಡೆಯಿತು. ಅದು ನಿಂತ ಮೇಲೆ ನನ್ನ ಭಾಷಣ ಪ್ರಾರಂಭಿಸಿದೆ. ಭಾಷಣ ಮುಗಿದ ಮೇಲೆ ಉದ್ವೇಗದಿಂದ ಸಾಕಾಗಿ ಕುಳಿತುಬಿಟ್ಟೆ. ಮಾರನೆಯ ದಿನ ಪತ್ರಿಕೆಗಳು ಎಲ್ಲ ಉಪನ್ಯಾಸಗಳಿಗಿಂತ ನನ್ನ ಭಾಷಣವೇ ಚೆನ್ನಾಗಿತ್ತೆಂದು ಪ್ರಶಂಸೆ ಮಾಡಿದ್ದವು. ‘ಮೂಕಂ ಕರೋತಿ ವಾಚಾಲಂ’ ಎಂದು ಶ್ರೀಧರನು ತನ್ನ ಗೀತಾಭಾಷ್ಯದಲ್ಲಿ ಹೇಳಿರುವುದು ನಿಜವಾಗಿಯೂ ಸತ್ಯ. ಹೇ ಭಗವಾನ್‌ ನಿನ್ನ ನಾಮಕ್ಕೆ ಜಯವಾಗಲಿ! ಅಂದಿನಿಂದ ನಾನು ಪ್ರಖ್ಯಾತನಾದೆನು.’’

ಹಿಂದೊಮ್ಮೆ ನೊಬೆಲ್ ಪುರಸ್ಕೃತ ರಾಷ್ಟ್ರಕವಿ ರವೀಂದ್ರನಾಥ್‌ ಠಾಗೋರ್‌ ಅವರು, ನೀವು ಭಾರತದ ಬಗ್ಗೆ ತಿಳಿಯ ಬೇಕಿದ್ದರೆ ಸ್ವಾಮಿ ವಿವೇಕಾನಂದರ ಬಗ್ಗೆ ಓದಿಕೊಳ್ಳಿ ಅಂದಿದ್ದರು. ಏಕೆಂದರೆ ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಸಕಾರಾತ್ಮಕ ವಿಷಯಗಳಿರುತ್ತಿತೇ ಹೊರತು ನಕರಾತ್ಮಕ ಅಂಶಗಳಿರುವುದಿಲ್ಲ ಎಂದು ರಾಷ್ಟ್ರಕವಿ ತಿಳಿಸಿದ್ದರು. ಇದು ಸ್ವಾಮೀಜಿಯವರು ಸಣ್ಣ ಪ್ರಾಯದಲ್ಲಿ ಬೀರಿದ ಪ್ರಭಾವವನ್ನು ಸೂಚಿಸುತ್ತದೆ.

ಸರ್ವಧರ್ಮ ಸಮ್ಮೇಳನದ ಮೂಲಕ ಭಾರತದ ಓರ್ವ ಪರಿವ್ರಾಜಕ ಸನ್ಯಾಸಿ ವಿಶ್ವಮಾನ್ಯತೆ ಗಳಿಸಿಕೊಂಡಿದ್ದರು. ಅಮೆರಿಕ ಪ್ರವಾಸ ವಿವೇಕಾನಂದರ ಜೀವನದಲ್ಲಿ ಮಹತ್ವದ ತಿರುವು ದೊರಕಿಸಿಕೊಟ್ಟಿತು. ಇಂತಹ ಚಿಕಾಗೋ ಧರ್ಮಸಮ್ಮೇಳನ ನಡೆದು ಇದೀಗ 130 ವರ್ಷಗಳಾಗಿದ್ದು ನಮ್ಮ ನಡುವೆ ಇಂದಿಗೂ ಕುದಿಯುತ್ತಿರುವ ಧರ್ಮ ವೈಷಮ್ಯ, ಮಾರಣಾಂತಿಕ ಭಯೋತ್ಪಾದನೆ ಕೃತ್ಯಗಳನ್ನು ಕಂಡಾಗ ಮತ್ತೆ ಮತ್ತೆ ವಿವೇಕಾನಂದರ ಸಂದೇಶ ನೆನಪಿಸಿಕೊಳ್ಳಬೇಕು ಎನಿಸುತ್ತದೆ.


  • ಡಾ.ಗುರುಪ್ರಸಾದ್ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು

2 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW