ಪ್ರತಿಭಾ ನಂದಕುಮಾರ್ ಅವರ ಹೆಚ್ಚಿನ ಕವಿತೆಗಳು ಕಾಯ ಕೇಂದ್ರಿತವಾದವು. ಹೆಣ್ಣಿನ ಕಾಯದ ಉರವಣೆಗಳ ಬಗ್ಗೆ ಅವು ಅಪಮೌಲೀಕರಣಕ್ಕೆ ಒಳಗಾದುದರ ಬಗ್ಗೆ ತೀವ್ರವಾಗಿ ಮಾತನಾಡುತ್ತವೆ. ಪ್ರತಿಭಾ ಅವರ ‘ಪ್ರತಿಭಾ ಕಾವ್ಯ’ ಇಲ್ಲಿಯವರೆಗಿನ ಕವಿತೆಗಳು ಕುರಿತು ಗಿರಿಜಾ ಶಾಸ್ತ್ರಿ ಅವರು ಬರೆದಿರುವ ಒಂದು ಕೃತಿ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಪ್ರತಿಭಾ ಕಾವ್ಯ
ಲೇಖಕಿ : ಪ್ರತಿಭಾ ನಂದಕುಮಾರ್
ಪ್ರಕಾಶನ : ಅಂಕಿತಾ ಪ್ರಕಾಶನ
ಬೆಲೆ : ೬೫೦/
ಪುಟಗಳು : ೭೭೬
(“ಪ್ರೇತಗಳೆಂದು ಕರೆಯಲು ಮನಸ್ಸಾಗದು”, “ಕವಿ ಮತ್ತು ಕಲಾವಿದ: ಪದ ಮತ್ತು ಕುಂಚ”, “ಕಾಫಿ ಹೌಸ್” ಕವಿತೆಗಳಿಗೆ ಸಂಬಂಧಿಸಿದಂತೆ)
ಪ್ರತಿಭಾ ನಂದಕುಮಾರ್ ಅವರು ಕಳುಹಿಸಿದ ಅವರ “ಇಲ್ಲಿಯವರೆಗಿನ ಕವಿತೆಗಳು” ಕೃತಿ, ಕೊರೋನಾ ಕೃಪೆಯಿಂದ ನನಗೆ ಸಿಕ್ಕಿತು. ಇಂದಿನ ಸಂಕಷ್ಟದ ಹಿನ್ನೆಲೆಯಲ್ಲಿ ಕವಿತೆಗಳನ್ನು ಓದುವ ಸುಖವೇ ಬೇರೆ. ಸದ್ಯದಿಂದ ನಾವು ಪಾರಾಗಬೇಕಾಗಿದೆಯಲ್ಲಾ?! ಅಮೃತಕ್ಕೆ ಹಾರುವ ಶಕ್ತಿಯನ್ನು ಕವಿತೆಗಳು ಕೊಡುತ್ತವೆ ಎಂದು ಬೇಂದ್ರೆ ಎಂದೋ ಹೇಳಿಬಿಟ್ಟಿದ್ದಾರಲ್ಲ?
ಪ್ರತಿಭಾ ಅವರು ಇಲ್ಲಿಯವರೆಗೆ ಬರೆದ ಕವಿತೆಗಳು ಇಲ್ಲಿವೆ. ೭೭೬ ಪುಟಗಳ ಉದ್ಗ್ರಂಥವಿದು. ಇವುಗಳನ್ನು ಅಖಂಡವಾಗಿ ಗ್ರಹಿಸುವುದು, ಗ್ರಹಿಸಿ ಪ್ರತಿಕ್ರಿಯಿಸುವುದು ಸುಖದ ಕೆಲಸವಾದರೂ ಕಷ್ಟದ ಕೆಲಸ. ಹೀಗಾಗಿ ಇವುಗಳನ್ನು ಬಿಡಿ ಭಾಗಗಳಾಗಿಯೇ ಓದಬೇಕು. ಪ್ರತಿಭಾ ಅವರ ಇತ್ತೀಚಿನ ಕವಿತೆಗಳನ್ನು ನಾನು ಓದಿರಲಿಲ್ಲ. ಈ ಕೃತಿ ಪ್ರಾರಂಭವಾಗುವುದೇ ಇತ್ತೀಚಿನ ಕವಿತೆಗಳಿಂದ. ಇವು ವರ್ತಮಾನದಿಂದ ಭೂತಕ್ಕೆ ಸಿಂಹಾವಲೋಕನದ ಪರಿಯಲ್ಲಿ ಜೋಡಿಸಲ್ಪಟ್ಟಿವೆ. ಹೀಗೆ ಜೋಡಿಸಿರುವುದಕ್ಕೆ, ಬದುಕಿನ ಬಗೆಗೆ ಒಂದು ರೀತಿಯ ವಸ್ತುನಿಷ್ಠ ದೂರವನ್ನು ಪಡೆದುಕೊಳ್ಳುವುದೂ ಕಾರಣವಾಗಿರಬಹುದು.
ಕವಿತೆಯ ನಿರೂಪಕಿ ಕೇಳುತ್ತಾಳೆ :
“ಜಲಾಲುದ್ದೀನ್ ಇವತ್ತು
ಯಾವ ಗಡಂಗಿನಲ್ಲಿ ನಮ್ಮ ಭೇಟಿ
ನೀತಿ ಅನೀತಿಗಳನ್ನು ತೊರೆದ
ಸರಿ ತಪ್ಪುಗಳು ಇಲ್ಲದ
ಒಂದು ನೆಲೆಯಿದೆ ಅಲ್ಲಿ”
( ಜಲಾಲುದ್ದೀನ್ ಇವತ್ತು ಯಾವ ಗಡಂಗಿನಲ್ಲಿ) ಎನ್ನುವ ರೂಮಿಯ ದರ್ಶನವೇ ಪ್ರತಿಭಾ ಅವರ ಕವಿತೆಗಳ ಗಮನ ಮತ್ತು ಉದ್ದೇಶ ಆಗಿದೆ ಎನಿಸುತ್ತದೆ. ಈ ಉದ್ದೇಶ ಸಾಧನೆಯ ಹಾದಿಯಲ್ಲಿ ಅಡ್ಡ ಬರುವ ಎಲ್ಲಾ ರೀತಿಯ ಸಾಮಾಜಿಕ ಪೊಳ್ಳು ಗೋಡೆಗಳನ್ನು,ನೀತಿ ನಿಷೇಧಗಳನ್ನು ಕೆಡವುತ್ತಾ ಸಾಗುವುದೇ ಅವುಗಳ ಸ್ವರೂಪವಾಗಿದೆ.
ಈ ಯಾನ ಎಂದೋ ಪ್ರಾರಂಭವಾಗಿದೆ. ಇದು ಹೂವಿನ ಹಾದಿಯಲ್ಲ ಮುಳ್ಳು ಕಂಟಿಗಳನ್ನು ಸೀಳಿಕೊಂಡು ಹೋಗಬೇಕಾಗಿದೆ.
“ಯಾರೋ ನನ್ನ ಗುಹ್ಯಗಳಲ್ಲಿ
ನದಿಯನ್ನು ಬಚ್ಚಿಟ್ಟಿದ್ದಾರೆ
ಅದು ಹೊರಗೆ ಹರಿದರೆ
ಕಂಡವರು ಆಡಿಕೊಂಡರೆ
ನಾನದಕ್ಕೆ ಹೊಣೆಯಲ್ಲ” (ನನ್ನ ಬಾಯಿ ಮಾತನಾಡುವುದಿಲ್ಲ)
“ಆಗ ಹೊರಳಿದೆ, ನಾನು ಲಂಗರು ಕಿತ್ತ ಹಡಗು ಜಾರಿದ ಅವನು ಭೂಪಟದ ಮೇಲಿಂದ ಮೈ ಬೆವೆತು (ಯಾನದ ತೀಟೆ ಅವನಿಗಿತ್ತು) ಪ್ರತಿಭಾ ಅವರ ಹೆಚ್ಚಿನ ಕವಿತೆಗಳು ಕಾಯ ಕೇಂದ್ರಿತವಾದವು. ಅವು ಹೆಣ್ಣಿನ ಕಾಯದ ಉರವಣೆಗಳ ಬಗ್ಗೆ ಅವು ಅಪಮೌಲೀಕರಣಕ್ಕೆ ಒಳಗಾದುದರ ಬಗ್ಗೆ ತೀವ್ರವಾಗಿ ಮಾತನಾಡುತ್ತವೆ. ಕಾಯದ ಉರವಣೆಗಳನ್ನು ಹೆಣ್ಣು ಹೇಳಿಕೊಳ್ಳುವುದರ ಬಗ್ಗೆ ಇರುವ ಸಾಮಾಜಿಕ ನಿಷೇಧದ ಬಗ್ಗೆ (ನಾವು ಕಚ ಕುಚಗಳ ಬಗ್ಗೆ ಬರೆಯಬಾರದು) ಮಾತನಾಡುತ್ತದೆ. ನಿಷೇಧವನ್ನು ನಿಷೇಧದಿಂದಲೇ ನಿರ್ವಹಿಸುವಲ್ಲಿ ತೋರುವ ದಿಟ್ಟತನಕ್ಕೆ ಇವು ಸಾಕ್ಷಿಯಾಗಿವೆ. ಕನ್ನಡ ಕಾವ್ಯಕ್ಕೆ ಹೊಸತಾದ ಕಾರಣ ಇವು ಸಭ್ಯತೆಯ ಮೀರೆಯನ್ನು ಮೀರಿದಂತೆ ಕಾಣಿಸಬಹುದು. ಆದರೆ ಕವಿ ಈ ಸಭ್ಯತೆಯ ಪರಿಕಲ್ಪನೆಯನ್ನೇ ಪ್ರಶ್ನಿಸುತ್ತಾರೆ. ಶೀಲ ಅಶ್ಲೀಲಗಳ ಗೋಡೆಯನ್ನೇ ಒಡೆದು ಹಾಕುವ ಉದ್ದೇಶವೂ ಇವಕ್ಕೆ ಇದೆ. ಈ ನಿಟ್ಟಿನಲ್ಲಿ ಹೆಣ್ಣಿನ ಬಗ್ಗೆ ನಿರ್ಣಾಯಕವಾಗಿ ಮಾತನಾಡುವ ಪಿತೃಪ್ರಧಾನ ವ್ಯವಸ್ಥೆಯ ಪೊಳ್ಳುತನದ ಬಗ್ಗೆ ಮಾತ್ರ ಮಾತನಾಡುವುದಿಲ್ಲ, ಇದರ ಮೂಲಕ ಇವು ಒಟ್ಟಾರೆಯಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯ ಪೂರ್ವಗ್ರಹಗಳನ್ನು ಅನಾವರಣಗೊಳಿಸುತ್ತಾರೆ.
ಅಷ್ಟೇ ಅಲ್ಲ, ಪೊರೆಯುವ ಮತ್ತು ಪೋಷಣೆಯ ವಿಷಯಕ್ಕೆ ಬಂದರೆ ಹೆಣ್ಣು ಗಂಡಿಗಿಂತಲೂ ಒಂದು ಕೈ ಮೇಲು. ಗಂಡು ಬೇಕಾದರೆ “ಹೆದ್ದಾರಿಯಲ್ಲಿ ತನ್ನೊಳಗಿನ ಹೆಣ್ಣನ್ನು ಕಳಚಿ ಬಿಸಾಡಬಹುದು” ಆದರೆ ಹೆಣ್ಣು ಹಾಗಲ್ಲ. “ಹೆದ್ದಾರಿಯಲ್ಲಿ ಅವನನ್ನು ಕಂಕುಳಲ್ಲಿ ಹೊತ್ತು ನಡೆ”ಯುತ್ತಾಳೆ. ಹೀಗೆ ಕಂಕುಳಲ್ಲಿ ಹೊರುವುದು ಅವಳು ತನ್ನ ಮಗುವನ್ನು ಮಾತ್ರವಲ್ಲ ಗಂಡನನ್ನೂ. ಕೈಹಿಡಿದ ಗಂಡನೂ ಅವಳ ‘ದೊಡ್ಡಮಗುವೇ’ ಆಗಿರುತ್ತಾನೆ. ಅವಳು “ಕೆತ್ತಿದಷ್ಟೂ ಮೂಡಿ ಕತ್ತರಿದಷ್ಟೂ ಚಿಗುರುವವಳು” (ನನಗೆ ಅರವತ್ತಾಯಿತೆಂದು ನಿರ್ಧರಿಸಬೇಕಾದವಳು)
‘ಕಾಯ’ ಪ್ರತಿಭಾ ಅವರ ಕೇಂದ್ರವಾಗಿರುವುದರಿಂದಲೇ ಅಕ್ಕ ಮಹಾದೇವಿ ಅವರಿಗೆ ಇನ್ನಿಲ್ಲದಂತೆ ಕಾಡಿದ್ದಾಳೆ. ಯಾಕೆಂದರೆ ಕನ್ನಡ ಸಾಹಿತ್ಯದಲ್ಲಿ ಅಕ್ಕನಂತೆ ತೀವ್ರವಾಗಿ ಕಾಯದ ಬಗ್ಗೆ ಮಾತನಾಡಿದವರು ಕಡಿಮೆ.
‘ಕವಿ ಮತ್ತು ಕಲಾವಿದ ಪದ ಮತ್ತು ಕುಂಚ’ ಭಾಗದಲ್ಲಿ ಅಕ್ಕಮಹಾದೇವಿಗೆ ಸಂಬಂಧಿಸಿದ ಕವಿತೆಗಳಿವೆ. ಇಲ್ಲಿ ಕವಿಗೆ ‘ಶರಣ ಸತಿ ಲಿಂಗ ಪತಿ’ ಪರಿಕಲ್ಪನೆ ಒಪ್ಪಿತವಲ್ಲ. “ಒಪ್ಪದಾಯಿತು ಕಾಯ ಸತಿ ಲಿಂಗ ಪತಿಯ ಸಿದ್ಧಾಂತ” ಯಾಕೆಂದರೆ ಅದು ಬೀಜ ತತ್ವದ ಶ್ರೇಷ್ಠತೆಯ ಮೇಲೆ ನಿಂತಿದೆ. ಈ ಕಲ್ಲನೆಯಲ್ಲಿ ಎಲ್ಲಾ ಕೂಡುವುದು ಶಿವನೊಂದಿಗೇ ಹೊರತು ಶಕ್ತಿಯೊಂದಿಗೆ ಅಲ್ಲ. ಈ ಶ್ರೇಷ್ಥತೆಯನ್ನೇ ಕವಿ ಇಲ್ಲಿ ಪ್ರಶ್ನಿಸುತ್ತಾರೆ. ಆದರೆ ನಿಜವಾದ ಕೂಟದ ಪರಿಯೆಂದರೆ ಉಭಯವಳಿಯುವುದು. ‘ಕೇಡಿಲ್ಲದ ಕೂಟ’ ಎನ್ನುವ ಮಾತು ಬರುತ್ತದೆ. ಒಂದು ಕಡೆ ‘ನಿಷೇಧಾತ್ಮಕವಾದ’ ಈ ಕೂಟದಿಂದ ಹೆಣ್ಣಿನ ಕೇಡಾಗಬಾರದು ಎಂಬ ಸಾಮಾಜಿಕ ಅರಿವು ಇದ್ದರೆ, ಇನ್ನೊಂದು ಕಡೆಗೆ ಉಭಯತ್ರ ಅಳಿದರೆ ಮಾತ್ರ, “ಅಳಿಯದೇ ಕೂಡುವ ಯೋಗ ದೊರಕದು. ಪಕ್ವವಲ್ಲದೇ ಪರಿಣಾಮ ತೋರದು” (ಹುಟ್ಟದೇ ಇದ್ದುದ ಮುಟ್ಟಿ ತೋರಿದ) ಹೆಣ್ಣು ಗಂಡು ಎರಡೂ ಸಂಪೂರ್ಣ ಅಳಿದರೆ ಮಾತ್ರ ಪೂರ್ಣಯೋಗ ಸಾಧ್ಯ ಎನ್ನುವ ಅದ್ವೈತದ ನೆಲೆಯೂ ಇದೆ. ಈ ಕವಿತೆಗಳು ಈ ಎರಡೂ ನೆಲೆಯನ್ನು ಸ್ಪರ್ಶಿಸುತ್ತವೆ. ಹೆಣ್ಣಿನ ಈ ಅದ್ವೈತ ಸಾಧನೆಗೆ ಪುರುಷ ಮಾನದಂಡಗಳು ಬೇಕಾಗಿಲ್ಲ ಎಂಬುದೂ ಇವುಗಳ ಗ್ರಹೀತವಾಗಿದೆ.
ಕಲಾವಿದನೊಂದಿಗೆ ಕವಿ ಸಾಧಿಸಬೇಕಾದ ತಾದಾತ್ಮ್ಯವೂ ಇದೇ ಬಗೆಯದು. ಕುಂಚ ಮತ್ತು ಪದ ಬೆರೆತ ಅದ್ವೈತ ಸ್ಥಿತಿ. ರೂಪದರ್ಶಿಯಾಗಿ ಕುಳಿತ ನಗ್ನ ಹೆಣ್ಣನ್ನು ನೋಡಿ ಇಲ್ಲಿ ಕಲಾವಿದ ಚಿತ್ರ ರಚಿಸುವುದಿಲ್ಲ. ಬದಲಾಗಿ ಅವಳ ಮೈಮೇಲೆಯೇ ಚಿತ್ರ ಬಿಡಿಸುತ್ತಾನೆ.
“ಇದೋ ಈಗಿದ್ದ ನನ್ನ ಬೆರಳುಗಳು ಮಾಯವಾಗಿ ಅಲ್ಲಿ ಮಿರುಗುತ್ತಿವೆ ಅಚ್ಚ ಕೆಂಪು ಚೆರ್ರಿ ಹಣ್ಣುಗಳು……ಪ್ರಾಣಿ ನದಿ ಜಲಪಾತ ಭೋರ್ಗರೆವ ಕಣಿವೆ ಎತ್ತರದ ಯಾಣ ನಡುವೆ
ಕಾಡೆಮ್ಮೆಗಳ ಭೀಕರ ಕಾಳಗ ಆನೆ ಹಿಂಡು ದಾಟಿಹೋಗುವ ಗದ್ದಲ ಸರಸರನೆ ಹರಿಯುವ ಸರೀಸೃಪಗಳು ಕಣ್ಣಿಗೂ ಕಾಣಿಸದ ಹುಳ” (ಅವನು ನನ್ನ ಕಾಲುಗಳಿಂದ ಪ್ರಾರಂಬಿಸುತ್ತಾನೆ)
ಹೀಗೆ ಪ್ರಕೃತಿಯೇ ಅವಳ ಮೈಮೇಲೆ ರಾರಾಜಿಸುತ್ತದೆ. ಅವಳೇ ಪ್ರಕೃತಿಯಾಗಿಬಿಡುತ್ತಾಳೆ. ಪ್ರಕೃತಿಯ ಈ ಘನಘೋರ ಚಿತ್ರಗಳು ಕೋಮಲ ಲಲಿತ ವಿಲಾಸಗಳ ವೈರುಧ್ಯಗಳು, “ಸಾವಿರ ಸಂಭ್ರಮ ಗುಟ್ಟುಗಳು” ಎಲ್ಲಾ ಅವಳ ಸೃಷ್ಟಿಯೇ ಆಗಿವೆ. ಈ ವೈರುಧ್ಯಗಳು ಹೆಣ್ಣಿನ ಭಾವಕೋಶಕ್ಕೆ ಹಿಡಿದ ಕನ್ನಡಿ ಕೂಡ. ದೇಹದ ತುಂಬ ಅವನು ಬಿಡಿಸಿದ ಕುರುಹುಗಳನ್ನು ಹೊತ್ತು ಹೊರಗೆ ಬರುವ ನಗ್ನ ಹೆಣ್ಣು ಮಳೆಯಲ್ಲಿ ತೊಯ್ದು ಬಣ್ಣ ಗೆಟ್ಟಿದ್ದಾಳೆ. “ಮಳೆಯಲ್ಲಿ ಅವಳು ತೊಯ್ದು ಹೋಗುವಾಗ ಕಾಡು ಕರಗಿ ಬೆತ್ತಲಾಗುತ್ತಾಳೆ. ಈ ಬೆತ್ತಲು ಅಕ್ಕನ ನಿರ್ವಾಣ ಕೂಡ ಹೌದು. ಇದು ಕೂಟದನಂತರ ಸಾಧಿಸಿದ ಬತ್ತಲು. ‘ಬಣ್ಣ ಗೆಡುವ’ ಬಯಲ ಅನುಭವ ಇದು. ಹೆಣ್ಣಿನ ದೇಹ ಬಚ್ಚಿಟ್ಟುಕೊಂಡಿರುವ ಅನೇಕ ಗೂಢ ಗುಹ್ಯಗಳ ಪ್ರತೀಕವೂ ಆಗಿದೆ
ಈ ‘ಬಣ್ಣ ಗೆಡುವ’ ಬಯಲ ಅನುಭವ “ಹುಟ್ಟದೇ ಇದ್ದುದನ್ನು ಮುಟ್ಟಿ ತೋರುವ, ಹುಟ್ಟುವುದನ್ನು ಮುಟ್ಟದೇ ತೋರುವ” ಬಗೆಯಿದು. ಇದು ಹೆಣ್ಣು ಗಂಡಿನ ಆತ್ಮ ಮತ್ತು ದೇಹ ಸಾಂಗತ್ಯದ ಬಗೆಯನ್ನೂ ತೀವ್ರವಾಗಿ ವ್ಯಕ್ತಪಡಿಸುತ್ತದೆ. ಇದನ್ನು ಮುಟ್ಟಲು ಸಾಧ್ಯವಿಲ್ಲ. ದ್ರವ್ಯವಾಗಿ ಕೈಗೆ ಸಿಕ್ಕುವುದಿಲ್ಲ., ಯೋಗ ಮತ್ತು ಸಂಭೋಗ ಅದೃಶ್ಯವಾದುದನ್ನು ಕಣ್ಣೆದುರಿಗೆ ಇರಿಸಿದರೆ, ದೃಶ್ಯವಾದುದನ್ನು ಕಣ್ಣ ಮರೆಮಾಚುತ್ತದೆ. ಇದು ‘ಬೈಚಿಟ್ಟು ಬಳಸುವ’ ಮಾಯೆ! ಇದನು ಆರೂ ಗೆಲಲಾರರು.
ಈ ಭಾಗದ ಕವಿತೆಗಳು ವಿಭಿನ್ನ ಕಲಾಪ್ರಕಾರಗಳ ನಡುವೆ ಇರಬೇಕಾದ ಗ್ರಹಿಕೆಯ ಸ್ವರೂಪವನ್ನೂ ಬಯಲಾಗಿಸುತ್ತವೆ. ಸಾಹಿತ್ಯ ಚಿತ್ರಕಲೆ, ಸಂಗೀತ ಮುಂತಾದವುಗಳನ್ನು ಇಂಗ್ಲಿಷ್ ನಲ್ಲಿ ‘ಫೈನ್ ಆರ್ಟ್ಸ್’ ಎನ್ನುತ್ತೇವೆ. ಯಾಕೆಂದರೆ ಅಷ್ಟು ಸೂಕ್ಷ್ಮವಾದ ಅಭಿವ್ಯಕ್ತಿ ಇನ್ನೊಂದಿಲ್ಲ. ವಾಸ್ತವದಲ್ಲಿ ಕುರೂಪವಾದದ್ದು, ಅಸಹ್ಯವಾದದ್ದೂ, ಜಿಗುಪ್ಸೆಗೆ ಕಾರಣವಾದದ್ದು, ಕಲೆಯಲ್ಲಿ ಸೌಂದರ್ಯದ ಸಾಕ್ಷಾತ್ಕಾರಕ್ಕೆ ಕಾರಣವಾಗಿ ಬಿಡುತ್ತದೆ. “ಭಾರೀ ಗಾತ್ರದ ಮುಖದ ಸುಕ್ಕುಗಳ…ನೆರೆತ ಆದರೆ ಬಣ್ಣ ಹಚ್ಚಿದ ಕೂದಲ…ಸೋತ ಹತಾಶೆ ಜೋತ ಮೊಲೆಯ” ಮುದುಕಿ (ಸೆಂಟರ್ ಫ್ರೆಶ್’) ಅದ್ಭುತ ಕಲಾಕೃತಿಯಾಗಿಬಿಡುತ್ತಾಳೆ.
ಪ್ರತಿಭಾ ಅವರ ಇತ್ತೀಚಿನ ಕವಿತೆಗಳು ‘ಗಪದ್ಯಗಳ ಹಾಗೆ ಕಾಣಿಸುತ್ತವೆ. ಅವು ಈ ಕಾಲದ ಕಾವ್ಯಸ್ವರೂಪದ ದಿಕ್ಸೂಚಿಯೋ ಅಥವಾ ದಿಕ್ಕು ತಪ್ಪಿದೆಯೋ ಎಂಬ ಅನುಮಾನ ಬರುತ್ತದೆ. ಇದು ಕಾವ್ಯ ಚರಿತ್ರೆಯ ಎಲ್ಲಾ ಘಟ್ಟಗಳಲ್ಲೂ ಮೂಡಿದ ಅನುಮಾನ. ( ಮಾಸ್ತಿಯವರು ಸಣ್ಣ ಕತೆಗಳನ್ನು ಬರೆದ ಹೊಸತರಲ್ಲಿ ಅವುಗಳನ್ನು ಜನ ‘ ಸಣ್ಣಕತ್ತೆಗಳು’ ಎಂದು ಹಾಸ್ಯ ಮಾಡುತ್ತಿದ್ದರಂತೆ)
ಆಯಾ ಕಾಲದ ಕಾವ್ಯವನ್ನು ಆಯಾ ಕಾಲದ ಮಾನದಂಡಗಳೇ ಮೌಲ್ಯಮಾಪನ ಮಾಡಬೇಕು. ಅವು ಕಾಲಾತೀತವಾಗಿ ಸಾರ್ವತ್ರಿಕವಾಗಿ ಸಲ್ಲುವುದು ಬೇರೆ.
ಈಗಿನ ಕವಿತೆಗಳು ಕೂಡ ನವೋದಯಕ್ಕೆ ಹತ್ತಿರವಾಗುತ್ತಿರುವಂತೆ ಕಾಣುತ್ತಿವೆ. ನವ್ಯದ ನಿಗೂಢ ಅಮೂರ್ತ ರೂಪದಿಂದ ಕಳಚಿಕೊಳ್ಳುತ್ತಿದೆ ಎನಿಸುತ್ತಿದೆ. ನವ್ಯದ ಕಲಾಭಿವ್ಯಕ್ತಿ, ನವೋದಯದ ರಮ್ಯ ಧೋರಣೆಯನ್ನು ಹೊತ್ತು ಹೊರಳು ದಾರಿಯಲ್ಲಿದೆ ಕನ್ನಡ ಕಾವ್ಯ ಎನಿಸುತ್ತದೆ. ಇದಕ್ಕೆ ತಮ್ಮದೇ ‘ಪಂಚ್ ಲೈನು’ ಗಳಿಂದ ಕೂಡಿದ ಝೆನ್ ಕತೆಗಳಂತೆ ಕಾಣುವ ಕವಿತೆಗಳೇ ಸಾಕ್ಷಿ. (ಕಾಫಿ ಹೌಸ್ ಕವಿತೆಗಳು) ಈ ಹೊಸ ಬಗೆಯ ಬಗ್ಗೆ ಮಾತನಾಡಲು ಇನ್ನೂ ಸಾಕಷ್ಟು ದೂರ ಸಿದ್ಧವಾಗಿಲ್ಲ ಎಂದೇ ಎನಿಸುತ್ತದೆ. ಕವಿತೆಯೆಂದರೆ ಕೊನೆಗೂ ಜಯಂತ್ ಕಾಯ್ಕಿಣಿಯವರು ಹೇಳುವ ಹಾಗೆ ಕವಿತೆಯ ಕಾಯದ ಹಿಂದಿರುವ ಅದೃಶ್ಯ ರೂಪ, ಅದು ಓದುಗರ ಅವ್ಯಕ್ತವನ್ನು ಉದ್ದೀಪಿಸುವಲ್ಲಿ ಕಾರಣವಾಗಬೇಕು. ಅಂತಹ ಅನೇಕ ಅವ್ಯಕ್ತ ರೂಪಗಳು ಹೊರಹೊಮ್ಮಲು ಪ್ರತಿಭಾ ಕಾವ್ಯ ಕಾರಣವಾಗಲಿ ಎಂದು ಆಶಿಸುತ್ತೇನೆ.
- ಗಿರಿಜಾ ಶಾಸ್ತ್ರೀ