ಕವಿ ಲಕ್ಷ್ಮಣ್ ಕೌಂಟೆ ಅವರು ಬರೆದ ಕವನವನ್ನು ಓದಿದಾಗ ವಸಂತ ಗಣೇಶ್ ಅವರ ಮನಸ್ಸಿನಲ್ಲಿ ಮೂಡಿದ ಭಾವ ಕೆಳಗಿದೆ, ತಪ್ಪದೆ ಮುಂದೆ ಓದಿ…
- ಇರಲಿ ಬರಲಿ
ಹಾರವೂ ಇರಲಿ ತುರಾಯಿಯೂ ಇರಲಿ
ಪದವಿ ಪ್ರಶಸ್ತಿಗಳೂ ಬರಲಿ
ಹಾಡಿ ಹೊಗಳದಿದ್ದರೂ ಗುರುತಿಸುವವರಿರಲಿ
ಉತ್ಸವ ಮೆರವಣಿಗೆ
ವಾಹಿನಿಯ ವಾರ್ತೆಗಳಲಿ ಉತ್ಸವಮೂರ್ತಿ
ಆಗದಿದ್ದರೂ ಸಾಧಿಸಿದ ಸಾಧನೆಗೆ
ಅಭಿನಂದಿಸುವ ಮನಗಳಿರಲಿ
ಯಾರಿಗೂ ಬಕೆಟ್ ಹಿಡಿಯದೆ
ಯಾರ ಬಾಲಂಗೋಚಿಯೂ ಆಗದೇ
ಪರಿಶ್ರಮ ಸ್ವಪ್ರಯತ್ನದಿಂದ
ಮಿನುಗುತ್ತಲೇ ಉಳಿಯಲಿ
ಮಣ್ಣೊಳಗಿದ್ದರೂ ಬೆಲೆಯಿರುವ ವಜ್ರದಂತೆ
ಆರೋಗ್ಯ ಬೇಕೇ ಬೇಕು
ಅದಕ್ಕಾಗಿ ಪ್ರಯತ್ನವಂತೂ ಇದ್ದೇ ಇರುತ್ತದೆ
ಅಕಸ್ಮಾತ್ ಅನಾರೋಗ್ಯ ಬಂದಲ್ಲಿ
ಆಯಸ್ಸು ಇರುವವರೆಗೂ
ಪರಾವಲಂಬಿಯಾಗದಂತೆ
ಎದುರಿಸುವ ಧೈರ್ಯ ಶಕ್ತಿ
ಆವಶ್ಯಕತೆ ಇರುವಷ್ಟು ಮಾತ್ರ ಹಣವೂ ಇರಲಿ.
ಆಸೆ ಆಮಿಷಗಳೊಡ್ಡಿ ಯಾರನೂ
ಉಳಿಸಿಕೊಳ್ಳುವುದು ತರವಲ್ಲ
ನಮ್ಮವರಲ್ಲದವರೆಲ್ಲ ಬಿಟ್ಟು ಹೋಗುತಲಿರಲಿ
ನಮ್ಮನರಿತವರು ಒಬ್ಬರಿದ್ದರೂ
ಸಾಕು ಅವರೇ ಬೆನ್ನೆಲುಬು.
ಬದುಕಿರುವುದು ಮೂರೇ ದಿನ
ಹಿಂದೆ ಇಂದು ಮುಂದೆ
ಹಿಂದಿನದು ಇತಿಹಾಸ ಇಂದು ವಾಸ್ತವ
ಮುಂದಿನದು ತಿಳಿದಿಲ್ಲ
ಬಾಳ ಮುಸ್ಸಂಜೆಯೆಂದರೆ
ಮರಳಿ ಅರಳುವ ಸಮಯ
ತುಂಬಿ ಬಿಡಲಿ ರಂಗು ರಂಗಿನ ಚಿತ್ತಾರ
ಕಾಲನ ಕರೆ ಬರುವವರೆಗೂ.
ಬರುವಾಗ ಹೋಗುವಾಗ ಒಬ್ಬರೇ
ಆದರೆ ಸಯಾಮಿ ಅವಳಿಗಳು ಉಂಟು.
ನಡುವಿನ ಜೀವನ ಯಾತ್ರೆಯಲಿ
ಆತ್ಮ ಸಂಗಾತಿಗಳು ದೊರೆಯಬಹುದು.
ಹೋಗುವಾಗ ಕೂಡ ಜೊತೆಯಾದವರು
ಹಲವರುಂಟು, ಬಿಡಿಸಲಾಗದ ಬಂಧಗಳು
ಹೊರಟಾಗ ಕಳುಹ ಬಂದವರು
ಎರಡು ಹನಿ ಕಣ್ಣೀರಿಟ್ಟು ಮಣ್ಣಿಗಿಟ್ಟರೂ
ಸಾಕು ಬದುಕು ಸಾರ್ಥಕ
ದೇಹ ತೊರೆದ ಆತ್ಮವೂ ಸಂತೃಪ್ತ
ಕರ್ತವ್ಯಗಳ ಪೂರೈಸಿದ ಬಳಿಕ
ಉಳಿದು ಮಾಡುವುದೇನಿದೆ
ಮುಂದೆ ಬರುವವರಿಗೆ ದಾರಿ ಬಿಟ್ಟು
ನಡೆದರಾಯಿತು ಅದೇ ಕಾಲನ ಧರ್ಮ.
- ವಸಂತ ಗಣೇಶ್

- ಬೇಡ-ಬೇಕು
ಹಾರ ಬೇಡ ತುರಾಯಿಯೂ ಬೇಡ
ಪದವಿ ಪ್ರಶಸ್ತಿಗಳೂ ಬೇಡ
ಹಾಡಿ ಹೊಗಳುವುದೂ ಬೇಡ
ಉತ್ಸವ ಮೆರವಣಿಗೆಗಳೂ ಬೇಡ..
ವಾಹಿನಿ ವಾರ್ತೆಯೂ ಬೇಡ..
ಏನೇನೂ ಬೇಡ..
ಸಂದಿಗೊಂದಿಗಳಲ್ಲಿ
ಅನಾಮಿಕನಾಗಿ ಉಳಿಯುವುದಾದರೂ ಸರಿಯೇ
ಹೀಗೆಯೇ ಇರುವೆ ಈಗಿರುವಂತೆಯೇ..
ಆರೋಗ್ಯವಂತೂ ಬೇಕೇ ಬೇಕು ಜೀವ ಇರುವವರೆಗೆ
ಅಂತೆಯೇ ನೂರೆಂಟು ಕಸರತ್ತು..
ಜೊತೆಗೆ ನೆಮ್ಮದಿಯೂ ಬೇಕು
ಉಳಿದ ಆಯುಷ್ಯ ಕಳೆಯುವುದಕ್ಕೆ
ಈಗಿರುವಷ್ಟೇ ಕಾಸು ಸಾಕು ಸಾಕು!!
ಜೊತೆ ಇರುವವರೆಲ್ಲ ಬಿಟ್ಟು ನಡೆದಾದರೂ ನಡೆಯಲಿ
ಬಂಧು ಬಾಂಧವರೆಲ್ಲ ದೂರ ಹೋದರೂ ಹೋಗಲಿ
ಮುಸುರೆಗೆ ಆಸರೆಗೆ ನಿಂತ
ಸ್ವಾರ್ಥ ಸಾಧಕರೆಲ್ಲ ಚದುರಿ ಹೋದರೂ ಹೋಗಲಿ
ಸ್ವಾರ್ಥಿಗಳು ಇರುವುದೇ ಬೇಡ ಸನಿಹ
ಒಂಟಿಯಾಗಿಯೇ ಇರುವೆ ಜೀವ ಇರುವವರೆಗೆ..
ಬದುಕು ಇರುವುದು ಮೂರೇ ಮಾನ
ಕಳೆದದ್ದು-ಈಗಿರುವುದು-ಮುಂದೆ ಉಳಿದಿರುವುದು..
ಬಂದಾಯಿತು ಬಹುದೂರ ಬದುಕಿನ ದಾರಿಯಲ್ಲಿ
ಉದಯ ಮುಗಿದು ಹರೆಯ ಏರಿ
ಮುಸ್ಸಂಜೆಯಲ್ಲಿ ನಿಂತ ಬದುಕು
ಮತ್ತೆ ಯಾತ್ರೆ ತೆವಳುತ್ತ ನಡೆದಿದೆ
ದಿನಮಣಿ ಆರಿ ಕತ್ತಲೆ ಆವರಿಸುವವರೆಗೆ..
ಯಾರಿಗೆ ಯಾರೂ ಇಲ್ಲ
ಬರುವಾಗ ಒಬ್ಬನೇ
ಮಧ್ಯದ ಸಂತೆ-ಜಾತ್ರೆಯಲ್ಲಿ ಜನಜಂಗುಳಿ
ಇರುವಾಗ ನೆಂಟರು ಬಂಟರು ಇಷ್ಟರು
ಹೋಗುವಾಗ ಒಂಟಿ ಯಾತ್ರೆ
ಸಂಗತಕೆ ಸಂಗಾತಿಯೂ ಇಲ್ಲ..
ಹೊರಡುವಾಗ ಕಳುಹುವವರೂ ಇದ್ದಾರು ಜನರೆಲ್ಲ
ಮಣ್ಣಿಗಿಟ್ಟು ಮನೆಗೆ ಮರಳುವಾಗ
ನೀನೊಬ್ಬನೇ ಅಲ್ಲಿ ತಣ್ಣನೆಯ ಗೂಡೊಳಗೆ..
ಹೊರಟರಾಯಿತು ಬಿಡು
ಅಳುತ್ತ ಕೂಡುವುದಕೆ ಉಳಿದಿರುವುದೇನಿದೆ ಇಲ್ಲಿ..!!
- ಡಾ. ಲಕ್ಷ್ಮಣ ಕೌಂಟೆ
