ಬೀದಿ ಬದಿ ವ್ಯಾಪಾರ ಮಾಡುವವರ ಲೋಕದ್ದೇ ಒಂದು ಸೊಗಸು. ಈ ವ್ಯಾಪಾರದ ಭಾಷೆಯನ್ನು ಅದ್ಯಾವ ಶಾಲೆ ಅವರಿಗೆ ಕಲಿಸಿಕೊಡುತ್ತದೋ ಎಂಬ ಅಚ್ಚರಿ ನನಗೆ. ಹುಬ್ಬಳ್ಳಿಯ ಕಾಯಿಪಲ್ಯ ಮಾರುಕಟ್ಟೆಯಲ್ಲಿ ಸೊಪ್ಪು ಮಾರುತ್ತಿದ್ದ ಅಜ್ಜಿಯನ್ನೊಮ್ಮೆ ಮಾತಾಡಿಸಿದ್ದೆ. ಮಾತು ಶುರು ಮಾಡಲೆಂದು ‘ಅಜ್ಜಿ ಇದ್ಯಾವ ಸೊಪ್ಪು?’ ಎಂದಿದ್ದೆ ತಡ…ಮುಂದೇನಾಯಿತು ತಪ್ಪದೆ ಓದಿ, ಡಾ.ಎಚ್.ಎಸ್. ಸತ್ಯನಾರಾಯಣ ಅವರ ಪ್ರಬಂಧ ಲೇಖನ …
‘ಮಾರಾಟ’ ಎಂಬುದನ್ನು ಮನುಷ್ಯ ಕಲಿತಂದಿನಿಂದಲೂ ಅವನ ವ್ಯವಹಾರಲೋಕ ಮತ್ತು ಮಾರುಕಟ್ಟೆಗಳು ಬದುಕಿನ ಮುಖ್ಯ ಅಂಗವಾಗಿ ಹೋದವು. ಬಹುಬಗೆಯ ವ್ಯಾಪಾರ ಕೇಂದ್ರಗಳ ಚರ್ಚೆಯನ್ನು ಬದಿಗಿಟ್ಟು ನೋಡಿದರೂ ಬೀದಿ ಬದಿ ವ್ಯಾಪಾರ ಮಾಡುವವರ ಲೋಕದ್ದೇ ಒಂದು ಸೊಗಸು. ನನಗೆ ಸದಾ ಚಿಕ್ಕ ಪುಟ್ಟ ವ್ಯಾಪಾರಿಗಳತ್ತ ಗಮನ ಜಾಸ್ತಿ. ಕುತೂಹಲದಿಂದ ಮತ್ತು ಆಸಕ್ತಿಯಿಂದ ಅವರ ವ್ಯಾಪಾರದ ಬಗೆಯನ್ನು ಗಮನಿಸುತ್ತಿರುತ್ತೇನೆ. ಅದು ನಮ್ಮ ಊರಿನಲ್ಲಿರಬಹುದು ಅಥವಾ ಬೇರೆ ಊರಿಗೆ ಹೋದಾಗಲಿರಬಹುದು ಹೂ ಮಾರುವವರನ್ನು, ತರಕಾರಿ ಮಾರುವವರನ್ನು, ಹಣ್ಣು ಮಾರುವವರನ್ನು ಮಾತಾಡಿಸುತ್ತಲೇ ಇರುತ್ತೇನೆ. ಕೆಲವರು ವ್ಯಾಪಾರದ ನಡುವೆ ಹೆಚ್ಚು ಮಾತಾಡಲು ಬಯಸುವುದಿಲ್ಲ . ಕೇಳಿದ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿ ಸುಮ್ಮನಾದರೆ ಮತ್ತೆ ಕೆಲವರು ವಿವರವಾಗಿ ಮಾತಾಡುತ್ತಾರೆ. ಮಾತನ್ನು ಪ್ರೀತಿಸುವ ಜೀವಿಗಳಂತೆ ಕಾಣುವ ಆ ಮುಗ್ಧ ಸ್ನಿಗ್ಧ ಜೀವಗಳು ಮನಸ್ಸಿನಲ್ಲಿರುವುದನ್ನು ಹೊರಹಾಕಿ ಹಗುರಾಗಲು ಕಾತರಿಸುತ್ತಿರುವಂತೆ ಭಾಸವಾಗುತ್ತದೆ.
ಹುಬ್ಬಳ್ಳಿಯ ಕಾಯಿಪಲ್ಯ ಮಾರುಕಟ್ಟೆಯಲ್ಲಿ ಸೊಪ್ಪು ಮಾರುತ್ತಿದ್ದ ಅಜ್ಜಿಯನ್ನೊಮ್ಮೆ ಮಾತಾಡಿಸಿದ್ದೆ. ಮಾತು ಶುರು ಮಾಡಲೆಂದು ‘ಅಜ್ಜಿ ಇದ್ಯಾವ ಸೊಪ್ಪು?’ ಎಂದಿದ್ದೆ ತಡ “ಸ್ವಾಮೇರ್ದು ಯಾವೂರ್ ರೀ..” ಎಂದು ಮಾತಿಗೆ ಶುರುವಿಟ್ಟವಳು ತಾನು ಮಾರುತ್ತಿದ್ದ ಸೊಪ್ಪಿನ ವಿಧಗಳನ್ನು ಕುರಿತು, ಅವುಗಳ ಬೆಲೆಯನ್ನು ಕುರಿತು, ಅವುಗಳಿಂದ ಪದಾರ್ಥ ಸಿದ್ಧಪಡಿಸುವ ಕುರಿತು, ಆ ಸೊಪ್ಪು ಜೋಳದ ರಾಗಿಯ ರೊಟ್ಟಿಗಳಿಗೆ ಅನುರೂಪವಾಗಿ ಹೊಂದುವ ಕುರಿತು ಸುದೀರ್ಘವಾದ ಉಪನ್ಯಾಸವನ್ನೇ ನೀಡಿದಳು. ಅವಳ ಮಾತಿನಲ್ಲಿ ಎಲ್ಲಿಯೂ ವ್ಯಾಪಾರದ ಪರಿಭಾಷೆಯಾಗಲಿ, ಲಾಭದ ಕೈಚಳಕವಾಗಲಿ, ಲೋಭವಾಗಲಿ ನುಸುಳಲಿಲ್ಲ. “ಅಜ್ಜಿ ನಿಮ್ಮ ವಯಸ್ಸೆಷ್ಟು?” ಎಂದಿದ್ದಕ್ಕೆ ಬಾಯಿತುಂಬಾ ನಕ್ಕಳು. ಆಮೇಲೆ ಹೇಳಿದಳು “ನಾನು ಸಣ್ಣಾಕಿಯಿದ್ದಾಗಿಂದ್ಲು ಈ ವ್ಯಾಪಾರ ಮಾಡೇನ್ರಿ…ಇದರ ಜೊತ್ಗೇ ಜೀವಾ ಸವೆಸ್ಕೋತಾ ಅದೆಷ್ಟು ಸೀಗೀಹುಣ್ಣೀಮಿ ಕಂಡಿನೋ ಗೊತ್ತಿಲ್ರಿ.”

ಫೋಟೋಕೃಪೆ : google
ನೋಡಲು ಎಪ್ಪತ್ತೈದರ ವೃದ್ಧೆಯಂತಿದ್ದ ಆಕೆ ಸರಿಸುಮಾರು ಆರು ದಶಕಗಳ ಕಾಲ ಸೊಪ್ಪು ಮಾರುತ್ತ ಜೀವನ ಸವೆಸಿದ್ದಾಳೆ. ಗಂಡ, ಮಕ್ಕಳು ಯಾರೂ ದಿಕ್ಕಿಲ್ಲದ ಆಕೆಗೆ ಈ ವ್ಯಾಪಾರ ಜೀವನದ ನಿರ್ವಹಣೆಯ ಅನಿವಾರ್ಯತೆಯ ಜೊತೆಗೆ ಚಟವೂ ಆಗಿಹೋಗಿದೆ. ಬೆಳಗೆದ್ದು ಸಗಟು ಮಾರುಕಟ್ಟೆಯಿಂದ ಬಗೆಬಗೆಯ ಸೊಪ್ಪು ಖರೀದಿಸುವುದು, ಆಟೋದಲ್ಲಿ ತುಂಬಿಕೊಂಡು ವರ್ತನೆಯ ಹೋಟೆಲುಗಳಿಗೆ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಕರಿಬೇವಿನ ಸೊಪ್ಪುಗಳ ಖಾಯಂ ವಿತರಣೆಯ ಜೊತೆಗೆ ಅವರು ಕೇಳಿದ ಮತ್ರಿತರ ಸೊಪ್ಪುಗಳನ್ನು ವಿತರಿಸಿ, ಹೋಟೆಲಿನವರು ಚಾ ಕೊಟ್ಟರೆ ಅಲ್ಲೇ ಹೀರಿ, ತನ್ನ ಜೋಪಡಿಗೆ ಹಿಂದಿರುಗುವುದು. ಮತ್ತೆ ಸಂಜೆ ನಾಲ್ಕರ ಹೊತ್ತಿಗೆ ಉಳಿದ ಸೊಪ್ಪುಗಳನ್ನು ಹಸನು ಮಾಡಿಕೊಂಡು ಕುಕ್ಕೆಯಲ್ಲಿ ಹೊತ್ತು ತಂದು ಕಾಯಿಪಲ್ಯೆ ಮಾರುಕಟ್ಟೆಯಲ್ಲಿ ಕೂರುವುದು. ಇದೇ ಆಕೆಯ ನಿತ್ಯದ, ತಪ್ಪದ ದಿನಚರಿ. “ಒಂದಿನಾದ್ರೂ ಜಡ್ಡು ಜ್ವರಾ ಬಂದು ಮಲಗಿಲ್ರಿ” ಅಂತ ತುಸು ಹೆಮ್ಮೆಯಿಂದಕೇ ನುಡಿದ ಆ ಅಜ್ಜಿಯ ನಗುಮುಖ ಬಹಳ ವರ್ಷಗಳ ನಂತರವೂ ನನ್ನ ನೆನಪಿಂದ ಮಾಸಿಲ್ಲ. ಸಂಜೆ ಹೊತ್ತು ವ್ಯಾಪಾರಕ್ಕಿಂತಲೂ ಹೊತ್ತುಕಳೆಯಲೆಂದೇ ಮಾರುಕಟ್ಟೆಗೆ ಬಂದು ಕೂತು, ಧ್ಯಾನಸ್ಥ ಸ್ಥಿತಿಯಲ್ಲಿ ಲೋಕದ ವ್ಯಾಪಾರವನ್ನು ಸಂಜೆಗಣ್ಣಿನ ಬೆರಗಿನಿಂದ ನೋಡುತ್ತ ಕೂತ ಆ ಅಜ್ಜಿ ಅದೇಕೋ ಮನದಲ್ಲಿ ಉಳಿದುಬಿಟ್ಟಿದ್ದಾಳೆ.
ನಮ್ಮ ಸುತ್ತಮುತ್ತ ಹುಡುಕಿದರೆ ಇಂಥ ಅನೇಕ ಜೀವಗಳ ದಂಡೇ ಸಿಗುತ್ತದೆ. ಯಾವ ಯಾವುದೋ ಕಾರಣಕ್ಕೆ ಒಬ್ಬಂಟಿ ಜೀವನವನ್ನು ಧೈರ್ಯದಿಂದ ಸಾಗಿಸುತ್ತಿರುವ ಈ ಜೀವಗಳು ಚಿಕ್ಕಪುಟ್ಟ ವ್ಯಾಪಾರ ಮಾಡಿ ಬದುಕನ್ನು ನಿರ್ವಹಿಸುವುದನ್ನು ನೋಡಿದರೆ ಅವರ ಸ್ವಾವಲಂಬಿ ಬದುಕಿನ ಬಗ್ಗೆ ಗೌರವ ಮೂಡುತ್ತದೆ. ಭಿಕ್ಷೆ ಬೇಡುವುದಕ್ಕಿಂತ ಹೀಗೆ ವ್ಯಾಪಾರ ಮಾಡಿ ಬದುಕುವುದು ಶ್ರೇಷ್ಠ ಬದುಕೆಂಬುದನ್ನು ಅನುಸರಿಸುತ್ತಿರುವ ಅನೇಕರನ್ನು ನಾನು ಕಂಡಿರುವೆ. ಮನೆ ಮನೆಗೆ ಹೂವನ್ನೋ, ಸೊಪ್ಪನ್ನೋ, ಮತ್ತಾವುದೋ ತರಕಾರಿಯನ್ನೋ, ಹಾಲು-ಮೊಸರುಗಳನ್ನೋ ಹೊತ್ತು ಮಾರುವ ಇಂತಹ ಅನೇಕ ಜೀವಗಳನ್ನು ನೀವು ಮಾತನಾಡಿಸಿ ನೋಡಿರಬಹುದು. ನಮ್ಮ ಮಾಸ್ತಿಯವರ ‘ಮೊಸರಿನ ಮಂಗಮ್ಮ’ ಹೀಗೆ ಎದುರಾದ ಜೀವವೇ! ಬಡತನದ ಕಾರಣಕ್ಕೆ ಮಾಸಲು ಬಟ್ಟೆಯಲ್ಲಿ ಕಾಣಿಸಿಕೊಳ್ಳುವ ಇಂಥವರ ಬಗ್ಗೆ ತುಂಬ ಜನರಿಗೆ ಅಸಹ್ಯ! ಒಂದು ವೇಳೆ ಅವರ ಬಳಿ ವ್ಯಾಪಾರ ಮಾಡಿದರೂ ಚೌಕಾಸಿಯ ಜಗಳ. ವ್ಯಾಪಾರದಲ್ಲಿ ಚೌಕಾಸಿ ಸಹಜವೆನಿಸಿದರೂ ವಯೋವೃದ್ಧ ಬಡವ್ಯಾಪಾರಿಗಳ ಜೊತೆ ಆ ಬಗೆಯ ವರ್ತನೆ ಕ್ರೌರ್ಯವೆಂದೇ ನನ್ನ ಯೋಚನೆ. ನಾನು ತರಕಾರಿಕೊಳ್ಳಲು ಹೋದಾಗ ಮೊದಲು ಹೋಗುವುದು ಈ ಹಿರಿಯರ ಬಳಿಗೇ.

ಫೋಟೋಕೃಪೆ : google
ಕೆಲವರು ನೋಡಲು ಜಗಳ ಗಂಟರಂತೆಯೇ ಕಾಣುತ್ತಾರೆ. ಕೂತೂ ಕೂತು ಸಾಕಾಗಿರುವ, ತಮ್ಮ ಸರಕು ಬಿಕರಿಯಾಗದೆ ಕಂಗೆಟ್ಟಿರುವ, ಆ ದಿನ ಯಾರಿಗೋ ಕೊಡಬೇಕಾಗಿರುವ ಹಣಕಾಸಿನ ವಿಚಾರದಲ್ಲಿ ಹೈರಾಣಾಗಿರುವ ಎಷ್ಟೋ ಜನ ಸಿಟ್ಟಿನಲ್ಲಿರುವಂತೆ ಕಾಣುತ್ತಾರೆ, ಚೌಕಾಸಿಯ ಮಾತೆತ್ತಿದರೆ ಮೈಮೇಲೆ ಬಂದವರಂತೆ ಆಡುತ್ತಾರೆ. ಅವರ ಮನಸ್ಸು, ಬದುಕು ಎಲ್ಲವೂ ಹಸಗೆಟ್ಟು ಹೋಗಿರುವ ಕಾರಣಕ್ಕೆ ಕೆಲವರು ಹಾಗಾಡುತ್ತಾರೆ. ನಾವು ಚಿಕ್ಕವರಿರುವಾಗ ಹೂ ಮಾರುವ ಅಜ್ಜಿಯೊಬ್ಬಳು ಮನೆ ಬಳಿ ಬರುತ್ತಿದ್ದಳು. ನಮ್ಮ ಓಣಿಯ ಎಲ್ಲರೂ ತಪ್ಪದೆ ಸೋಮವಾರ, ಶುಕ್ರವಾರಗಳಂದು ಬರುವ ಆ ಅಜ್ಜಿಗಾಗಿ ಕಾದು ಅವಳಿಂದ ಹೂ ಕೊಳ್ಳುತ್ತಿದ್ದೆವು. ಹೂವಿನಜ್ಜಿ ಬಂದ್ರೆ ಹೂವಿಸ್ಕ ಅಂತ ಹೂವಿನ ದುಡ್ಡನ್ನು ಎತ್ತಿಟ್ಟ ಹಿರಿಯರು ಆ ಕೆಲಸವನ್ನು ನಮ್ಮ ಸುಪರ್ದಿಗೊಪ್ಪಿಸಿರುತ್ತಿದ್ದರು. “ಹೂವೋಯ್ ಹೂವು…” ಅಂತ ಅಜ್ಜಿ ಕೂಗುವುದು ಆಕೆ ಪಕ್ಕದ ಬೀದಿಯಲ್ಲಿರುವಾಗಲೇ ನಮ್ಮ ಮನೆಗೆ ಕೇಳುತ್ತಿತ್ತು. ಆಕೆ ಹೇಳಿದ್ದೇ ರೇಟು, ಕಮ್ಮಿಗೆ ಕೇಳಿದರೋ ಅಥವಾ ಯಾಕಿಷ್ಟು ರೇಟು? ಎಂದರೋ ಮುಗೀತು ಕತೆ. ಕೇಳಿದವರ ಜನ್ಮಜಾಲಾಡಿ ಬಿಡುತ್ತಿದ್ದಳು. ನನ್ನಷ್ಟು ಕಮ್ಮಿ ರೇಟಿಗೆ ಇಷ್ಟು ಒಳ್ಳೆಯ ಹೂವನ್ನು ಜಗತ್ತಿನಲ್ಲೇ ಯಾರು ಮಾರಲ್ಲ ಎಂದು ಕೇಳಿದವರ ಬಾಯಿಮುಚ್ಚಿಸುವ ಚಾಲಾಕಿ ಮುದುಕಿ ಆಕೆ. ಆದರೂ ಆಕೆ ಓಣಿಯಲ್ಲಿ ವ್ಯಾಪಾರ ಮಾಡುತ್ತಿದ್ದಷ್ಟು ಸಮಯವೂ ನಮ್ಮ ಓಣಿತುಂಬಾ ಏನೋ ಒಂದು ಜೀವಂತಿಕೆ ತುಂಬಿ ತುಳುಕುತ್ತಿತ್ತು. ಆಕೆಯ ಮಾತು, ಬೈಗುಳ, ಮಾತುಮಾತಿಗೆ ಬಳಸುತ್ತಿದ್ದ ಗಾದೆಗಳಿಗೆ ವಿಚಿತ್ರ ಮಾಂತ್ರಿಕ ಶಕ್ತಿಯಿತ್ತು. ಬಿದ್ದು ಕಾಲುಮುರಿದುಕೊಂಡ ಮೇಲೆ ಆಕೆ ಸ್ವಲ್ಪ ದೂರದಲ್ಲೇ ಒಂದು ಗೂಡಂಗಡಿಯನ್ನಿಟ್ಟುಕೊಂಡು ಹೂ ವ್ಯಾಪಾರ ಮಾಡುತ್ತಿದ್ದಳು. ನಿಧಾನಕ್ಕೆ ಹೂವಿನ ಜೊತೆಗೆ ತರಕಾರಿಗಳನ್ನೂ ಮಾರಲಾರಂಭಿಸಿದಳು. ಆ ಅಂಗಡಿಯೇ ಅವಳ ಮನೆಯೂ ಆಗಿತ್ತು. ಈ ಹೂ ಅಜ್ಜಿಗೊಂದು ಕಣ್ಣುಕಾಣದ, ಕಿವಿ ಕೇಳದ ಹಣ್ಣುಹಣ್ಣಾದ ಮುದಿ ತಾಯಿ ಬೇರೆ. ಹೂ ಅಜ್ಜಿ ಬೀದಿ ತುಂಬಾ ಕಿರುಚಾಡಿಕೊಂಡು ವ್ಯಾಪರ ಮಾಡುತ್ತಿದ್ದಳಾದರೂ ಆಕೆಯ ಅಂತಃಕರಣ ಗೋಚರವಾಗುತ್ತಿದುದು ತನ್ನ ಮುದಿ ತಾಯಿಯನ್ನು ಮಗುವಿನಂತೆ ಜೋಪಾನ ಮಾಡುವಾಗ ಮಾತ್ರ. ಒಂದು ಪುಟ್ಟ ಗೂಡಂಗಡಿ, ಅಲ್ಲಿ ಹೂ ಮಾಲೆಗಳ ರಾಶಿ, ಪಕ್ಕದಲ್ಲೇ ಮಲಗಿರುವ ಮುದಿ ತಾಯಿ- ಈ ಎಲ್ಲವನ್ನೂ ಜತನದಿಂದ ಕಾಯುತ್ತ ಬದುಕಿನ ಬಂಡಿಯನ್ನೆಳೆಯುತ್ತಿದ್ದ ಹೂವಜ್ಜಿ ಪುಷ್ಪಕ ವಿಮಾನದಲ್ಲಿ ಕುಳಿತ ಸಾರಥಿಯಂತೆ ನನ್ನ ಎಳೆಯ ಕಣ್ಣುಗಳಲ್ಲಿ ತುಂಬಿಕೊಂಡಿದ್ದಳು.
ಮನೆಯ ಮುಂದೆ ಬರುವ ವ್ಯಾಪಾರಿಗಳು ಸೃಜಿಸುವ ಕ್ಷಣಗಳದ್ದೇ ಒಂದು ಸೊಗಸು. ಆಚೆ ಮನೆಯಲ್ಲಿ ವ್ಯಾಪಾರ ಮಾಡುವಾಗ ಅವರಾಡಿದ ಮಾತುಗಳು ಮತ್ತೊಂದು ಮನೆಯಲ್ಲಿ ವ್ಯಾಪಾರ ಮಾಡುವಾಗ ಪುನರಾವರ್ತನೆಯಾಗುವುದಿಲ್ಲ. ಈ ವ್ಯಾಪಾರದ ಭಾಷೆಯನ್ನು ಅದ್ಯಾವ ಶಾಲೆ ಅವರಿಗೆ ಕಲಿಸಿಕೊಡುತ್ತದೋ ಎಂಬ ಅಚ್ಚರಿ ನನಗೆ. ಅವನ್ನೆಲ್ಲಾ ಕಲೆ ಹಾಕಿದ್ದಿದ್ದರೆ ಒಂದು ವ್ಯಾಪಾರಿ ಪಾರಿಭಾಷಿಕ ಪದಕೋಶವನ್ನೇ ಸಂಪಾದಿಸಬಹುದಿತ್ತು. ಆಗ ಅದರ ಮಹತ್ತ್ವ ತಿಳಿಯಲಿಲ್ಲ. ನಾಟಕದಲ್ಲಿ ಬಂದು ಹೋಗುವ ಪಾತ್ರಧಾರಿಗಳಂತೆ ಮನೆಮುಂದೆ ಬರುವ ವ್ಯಾಪಾರಿಗಳು ಕಾಣಿಸಿಕೊಂಡು ಕಣ್ಮರೆಯಾಗುತ್ತಿದ್ದರು. ನಾವು ಮನೆಯಿಂದ ಹೊರಬಂದು ಅವರೊಂದಿಗೆ ವ್ಯಾಪಾರ ಮಾಡಲೇಬೇಕೆಂದಿರಲಿಲ್ಲ. ನಮ್ಮ ಪಾಡಿಗೆ ಮನೆಯೊಳಗಿದ್ದರೂ ಅವರು ಬಂದಿದ್ದು ಅವರವರು ಕೂಗೂವ ಶಬ್ದಗಳಿಂದಲೇ ವೇದ್ಯವಾಗುತ್ತಿತ್ತು. ದಶಕಗಳು ಕಳೆದಿವೆ, ಈಗಲೂ ಅವರು
“ಸೊಪ್ಪೂ…ಹೂವೋಯ್…ಹಾಲಬೇಕೆನ್ರಮ್ಮಾ ಹಾಲು…..” ಎಂದು ಕೂಗಿಕೊಳ್ಳುತ್ತಿದ್ದುದು ಕಿವಿಯಲ್ಲಿ ಅನುರಣಿಸುತ್ತಿದೆ. ಕೋಳಿ ವ್ಯಾಪಾರಿಯೊಬ್ಬ ನಾಟಿ ಕೋಳಿಗಳನ್ನು ತಲೆಕೆಳಗು ಮಾಡಿಕೊಂಡು ಸೈಕಲ್ಲಿಗೆ ನೇತು ಹಾಕಿಕೊಂಡು ಬಂದು “ಕೋ…….ಳೀ” ಅಂತ ಕೂಗುತ್ತಿದ್ದುದು ತಮಾಷೆಯಾಗಿತ್ತು. ‘ಕೋ’ ಮತ್ತು ‘ಳಿ’ಗಳ ನಡುವೆ ಆತ ಅರ್ಧ ನಿಮಿಷದಷ್ಟು ಕಾಲ ಸ್ವರಾಲಾಪ ಮಾಡುತ್ತಿದ್ದುದು ಮಜವಾಗಿತ್ತು. ನಾವೆಲ್ಲ ಆತ ಬಂದರೆ ಸಾಕು ಅವನ ದನಿಯನ್ನೇ ಅನುಕರಿಸುತ್ತಾ ಪಕ್ಕವಾದ್ಯದವರಂತೆ ಅವನ ಹಿಂದೆ ಹೋಗುತ್ತಿದ್ದೆವು. ಕೋಳಿಗಳ ಗಲೀಜು ವಾಸನೆಯನ್ನೂ ನಮ್ಮ ಮೂಗು ಸಹಿಸಿಕೊಳ್ಳುತ್ತಿತ್ತು. ಮೂಗಿಗಿಂತಲೂ ಕಿವಿಗೆ ಅವನ ಕೂಗಿನ ರಸಾಸ್ವಾದದ ಭರ ಜೋರಾಗಿ ಕೋಳಿಗಳ ಗಬ್ಬು ವಾಸನೆಯನ್ನು ದೂರಮಾಡುತ್ತಿತ್ತು.

ಫೋಟೋಕೃಪೆ : google
ಮನೆಯ ಬಾಗಿಲಿಗೆ ಬಂದು ಕಲಾಯಿ ಹಾಕಿಕೊಡುತ್ತಿದ್ದ ಸಾಬರುಗಳು ಒಂದೀಡಿ ದಿನ ಮನೆಯ ಮುಂದೆ ಬಿಡಾರ ಹೂಡುತ್ತಿದ್ದರು. ಸಾಮಾನ್ಯವಾಗಿ ಮೂರ್ನಾಲ್ಕು ತಿಂಗಳಿಗೊಮ್ಮೆ ಭಾನುವಾರಗಳಂದು ಕಾಣಿಸಿಕೊಳ್ಳುತ್ತಿದ್ದ ಕಲಾಯಿ ಸಾಬರಿಗಾಗಿ ನಮ್ಮ ಮನೆಗಳಲ್ಲಿ ತೂತಾದ ಹಿತ್ತಾಳೆಯ, ತಾಮ್ರದ ಪಾತ್ರೆಗಳು ಅಟ್ಟದ ತುದಿಯಲ್ಲಿ ಕಾದಿರುತ್ತಿದ್ದವು. ಪಕ್ಕದ ಬೀದಿಯಲ್ಲಿ ಕಲಾಯಿ ಹಾಕುತ್ತಿದ್ದ ಅವರನ್ನು “ಕೆಲಸ ಮುಗಿದ ಮೇಲೆ ನಮ್ನನೆ ಹತ್ರ ಬರ್ಬೇಕಂತೆ” ಅಂತ ಹೇಳಿ ಬರುವ ಕೆಲಸ ಚಿಕ್ಕ ಮಕ್ಕಳ ಪಾಲಿಗೆ. ಅವರು ಬಂದೊಡನೆ ಸ್ನಾನದ ಹಂಡೆಯಿರುವ ಒಲೆಯಿಂದ ನಿಗಿನಿಗಿ ಕೆಂಡ ತೆಗೆದು ಕೊಡಬೇಕಿತ್ತು. ಅವರು ಬಾಣಲೆಯನ್ನೋ ಹಂಡೆಯನ್ನೋ ಕುಟ್ಟಲು ಶುರು ಮಾಡಿದ್ದೇ ತಡ ಅಕ್ಕಪಕ್ಕದ ಮನೆಗಳಿಂದ ಹಳೆಯ ಪಾತ್ಎ ಪಗಡಿಗಳೆಲ್ಲಾ ಹೊರಗೆ ಇಣುಕುತ್ತಿದ್ದವು! “ಇದು ನನ್ನ ಮದುವೆಯಲ್ಲಿ ನಮ್ಮಮ್ಮ ಕೊಟ್ಟಿದ್ದು, ಇದು ದೊಡ್ಡವನು ಹುಟ್ಟಿದಾಗ ತಗಂಡಿದ್ದು, ಇದು ನಮ್ಮ ಅಜ್ಜಿಯ ನೆನಪಿಗೆ ಇಟ್ಟುಕೊಂಡಿರುವೆ, ಯಾಕೆಂದ್ರೆ ಅಜ್ಜಿ ಇದರ ನೀರು ಕುಡಿದೇ ಪ್ರಾಣಬಿಟ್ಟಿದ್ದು” ಎಂದೆಲ್ಲಾ ಹರಟುತ್ತಾ ನೆನಪುಗಳನ್ನು ಬಿಚ್ಚಿಕೊಳ್ಳುತ್ತಿದ್ದ ಹೆಂಗೆಳೆಯರ ಮಾತುಗಳಲ್ಲಿ ಅವರವ ಮನೆತನದ ಪುರಾಣವೇ ಬಿಚ್ಚಿಕೊಳ್ಳುತ್ತಿತ್ತು. ಇದರತ್ತ ಕ್ಚಚಿತ್ತಾದ ಗಮನಹರಿಸುತ್ತಲೇ ಕಲಾಯಿ ಸಾಬರು ತಮ್ಮ ಕೆಲಸ ಮಾಡುತ್ತಿದ್ದರು. “ಹೋದ ಸಲ ಬಂದಾಗ ಹಾಕಿದ ಕಲಾಯಿ ಬಿಟ್ಟುಕೊಂಡು ತೂತಾಗಿ ಹೋಗಿದೆ” ಎಂದು ದೂರುವವರೂ ಇಲ್ಲದಿರುತ್ತಿರಲಿಲ್ಲ. ಈಗ ಕಾಲ ಬದಲಾಗಿ ಕಲಾಯಿ ಸಾಬರ ಕೌಶಲ್ಯ ಕಣ್ಮರೆಯಾದ ಬಗ್ಗೆ ತೇಜಸ್ವಿಯವರು ತಮ್ಮ ‘ಅಣ್ಣನ ನೆನಪು’ ಕೃತಿಯಲ್ಲಿ ಬರೆದಿರುವುದನ್ನು ನೆನಪು ಮಾಡಿಕೊಳ್ಳಿ.

ಫೋಟೋಕೃಪೆ : google
ಅಪರೂಪಕ್ಕೊಮ್ಮೆ ರಾತ್ರಿ ಏಳರ ನಂತರ ಕಡಲೆಕಾಯಿ ಮಾರುವ ಅಜ್ಜಿಯೊಂದು ಬರುತ್ತಿತ್ತು. ಅದೂ ಚಿಕ್ಕಮಗಳೂರಿನ ಚಳಿಗಾಲವೆಂದರೆ ಕೇಳಬೇಕೇ? ಮೂಳೆ ಕೊರೆಯುವ ಚಳಿಗಾಲ. ಆಗ ಅಜ್ಜಿಯ ಕಡಲೆಕಾಯಿಯ ಸವಾರಿ ಬಂತೆದರೆ ಖುಷಿಯೋ ಖುಷಿ. ಆ ಅಜ್ಜಿ ಒಳ್ಳೊಳ್ಳೆ ಕಡಲೆಕಾಯಿಗಳನ್ನಾಯ್ದು, ಹದವಾಗಿ ಹುರಿದು ತಂದಿರುತ್ತಿದ್ದಳು. ಆಕೆ ಅದೆಷ್ಟು ಅಚ್ಚುಕಟ್ಟಾಗಿರುತ್ತಿದ್ದಳೆಂದರೆ ಯಾರಿಗೂ ಅವಳ ಬಳಿ ಚೌಕಾಸಿಗೆ ಮನಸ್ಸೇ ಬರುತ್ತಿರಲಿಲ್ಲ. ಅದಕ್ಕೆ ಅವಕಾಶವನ್ನೇ ಕೊಡದಂತೆ, ಯಾರೂ ತನ್ನ ಬುಟ್ಟಿಗೆ ಕೈ ಹಾಕದಂತೆ ಅತ್ಯಂತ ಎಚ್ಚರದ ವ್ಯಾಪಾರ ಆಕೆಯದು. ಚೌಕಾಸಿ ಮಾಡಲು ಆಕೆ ಮೂಟೆಗಟ್ಟಲೆ ಕಡಲೇಕಾಯಿ ತರುತ್ತಿರಲಿಲ್ಲ ಮತ್ತು ಸೇರುಗಟ್ಟಲೆ ಕೊಳ್ಳಲು ನಮ್ಮಲ್ಲಿ ದುಡ್ಡೂ ಇರುತ್ತಿರಲಿಲ್ಲ. ನಾಲ್ಕಾಣೆ, ಹೆಚ್ಚೆಂದರೆ ಎಂಟಾಣೆಯ ವ್ಯಾಪಾರ ನಮ್ಮಗಳದ್ದು. ಅದನ್ನು ಬಲ್ಲ ಆಕೆಯೂ ಅಷ್ಟು ಹಣಕ್ಕೆ ತಕ್ಕಂತೆ ಪೊಟ್ಟಣ ಕಟ್ಟುವ ನ್ಯೂಸ್ ಪೇಪರುಗಳನ್ನು ಹರಿದು ತಂದಿರುತ್ತಿದ್ದಳು. ಆಕೆಯ ಕೂಗು ಕೇಳಿದ್ದೇ ತಡ ನಾವೆಲ್ಲ ಚಡಪಡಿಕೆಯಿಂದ ನಮ್ಮ ನಮ್ಮ ಬಳಿಯಿರುತ್ತಿದ್ದ ಪುಡಿಗಾಸನ್ನು ಒಟ್ಟುಗೂಡಿಸುತ್ತಿದ್ದೆವು. ದೊಡ್ಡಕ್ಕನ ಬಳಿ ಹತ್ತು ಪೈಸೆ, ಚಿಕ್ಕಕ್ಕನ ಬಳಿ ಹತ್ತು ಪೈಸೆ, ನನ್ನದು ಐದು
ಪೈಸೆ! ಮನೆಯ ಹಿರಿಯರಿಗೆ ಇದು ಗೊತ್ತಾಗುತ್ತಿರಲಿಲ್ಲ. ಅಜ್ಜಿಯಿಂದ ಕಡಲೆಕಾಯಿ ಪಡೆದ ಮೇಲೆ ಅವರವರ ಬಂಡವಾಳಕ್ಕೆ ತಕ್ಕಂತೆ ಕಡಲೆಕಾಯಿ ಪಾಲು ಮಾಡಬೇಕು. ಹಾಗೂ ಹೀಗೂ ನಮ್ಮ ಪಾಲಿಗೆ ಬಂದ ಕಡಲೆಕಾಯಿ ತಿಂದರೆ ಅದು ಯಾವ ಮೂಲೆಗೂ ಸಾಲುತ್ತಿರಲಿಲ್ಲ! ನಾಲಗೆಯ ರುಚಿಯನ್ನು ಕೆರಳಿಸಿ ಹೋದ ಕಡಲೆಕಾಯಿ ಅಜ್ಜಿಯ ಕೂಗು ಮಾತ್ರ ತನ್ನ ನೆನಪನ್ನು ಗಾಢವಾಗಿ ಉಳಿಸಿ ಹೋಗುತ್ತಿತ್ತು. ನಾವು ಮಾತ್ರ ಮತ್ತೆ ಯಾವಾಗ ಕಡ್ಲೇಕಾಯಜ್ಜಿ ಬರ್ತಾಳೋ ಅಂತ ಕಾದು ಕೂತಿರುತ್ತಿದ್ದೆವು.
ಈಗ ಮಾರಾಟದ ಅರ್ಥವೇ ಬದಲಾಗಿ ಹೋಗಿದೆ. ಮನೆ ಮುಂದೆ ಏನೆಲ್ಲವನ್ನೂ ಮಾರಿಕೊಂಡು ಬರುತ್ತಿದ್ದಾರೆ. ಆಗೆಲ್ಲ ಬಟ್ಟೆಗಳನ್ನು ವರ್ಷಕ್ಕೊಮ್ಮೆ ಅಂಗಡಿಗೆ ಹೋಗಿ ಕೊಳ್ಳುವುದು ತ್ರಾಸದಾಯಕವಾಗಿತ್ತು. ಈಗ ಬಟ್ಟೆಗಳು ಬೀದಿ ಬದಿಗೆ ಬಂದು ಬಿದ್ದಿವೆ. ಬಟ್ಟೆ ಮಾತ್ರವಲ್ಲ ಮನುಷ್ಯನ ಎಲ್ಲ ಅಗತ್ಯ ವಸ್ತುಗಳೂ ಎಲ್ಲೆಂದರಲ್ಲಿ ಕೈ ಕಾಲಿಗೆ ತೊಡರಿಕೊಳ್ಳುತ್ತಿವೆ. ಕಳೆದ ಮೂವತ್ತು ವರ್ಷಗಳಲ್ಲಿ ಭಾರತದ ಉದಾರೀಕರಣದ ಪ್ರಭಾವದಿಂದಾಗಿ ‘ವ್ಯಾಪಾರ’ ದ ದಿಕ್ಕು ದೆಸೆಗಳು ಬದಲಾಗಿ ಹೋಗಿವೆ. ಜಾಗತೀಕರಣದ ಹೊಡೆತಕ್ಕೆ ಸಿಕ್ಕಿ ನಲುಗಿರುವ ಬೀದಿ ವ್ಯಾಪಾರಿಗಳನ್ನು ನಾವೀಗ ‘ಬೆಲೆ ಜಾಸ್ತಿ ಹೇಳ್ತಾರೆ’ ಎಂಬ ಅನುಮಾನದಿಂದ ಮನೆಯ ಹತ್ತಿರ ಬಿಟ್ಟುಕೊಳ್ಳದ ಸ್ಥಿತಿಗೆ ತಲುಪಿದ್ದೇವೆ. ತರಕಾರಿ ಮಾರುವವರು, ಹೂ ಹಣ್ಣು ಮಾರುವವರು, ಗೊಂಬೆ ಮಾರುವವರು, ಮೊಳಕೆಕಾಳು ಮಾರುವವರು, ಕಬ್ಬು ಮಾರುವವರು, ತೆಂಗಿನಕಾಯಿ ಮಾರುವವರು-ಆಹಾ ಅವರೆಲ್ಲ ಎಲ್ಲಿ ಹೋದರು? ಅವರ ಕೂಗು ನಮಗೆ ಮತ್ತೆ ಕೇಳದೆ?
“ಕಾಲದ ಕಡಲಲಿ ಉಸುರಿನ ಹಡಗು,
ತೇಲುತ ನಡೆದಿದೆ ಹಗಲೂ ಇರುಳು…..
ನೀರಲಿ ತೆರೆದಿದೆ ನಿಲ್ಲದ ದಾರಿ,
ಎಲ್ಲಿಂದೆಲ್ಲಿಗೋ ಇದರ ಸವಾರಿ”
ಎಂಬ ಕೆ.ಎಸ್. ನ. ಅವರ ರಚನೆಯನ್ನು ನೆನಪಿಸುವಂತೆ ಈಗಲೂ ವ್ಯಾಪಾರ ಮಾಡು ಬದುಕಿನ ರಥವನ್ನೆಳೆದುಕೊಳ್ಳುವವರು ಎದುರಾಗುತ್ತಿರುತ್ತಾರೆ.
- ಡಾ.ಎಚ್.ಎಸ್. ಸತ್ಯನಾರಾಯಣ (ಉಪನ್ಯಾಸಕರು, ಲೇಖಕರು, ಕತೆಗಾರರು) ಚಿಕ್ಕಮಂಗಳೂರು
