ತನ್ನ ತಾನು ಸುಟ್ಟುಕೊಂಡು ಸಂತನಾಗುವುದು ಸುಲಭವಲ್ಲ!

ಪ್ರಭುತ್ವದ ಎದುರಾಳಿ, ವಿಚಾರ ಸ್ವಾತಂತ್ರ‍್ಯದ ಪ್ರತಿಪಾದಕ ಲೆವ್‌ ಟಾಲ್‌ಸ್ಟಾಯ್‌ ಎಂಬ ಆರ್ಷೇಯ ವೃದ್ಧ ಹುಟ್ಟಿದ ದಿನ. ಖ್ಯಾತ ಚಿಂತಕ, ಅನುವಾದಕ ಕೇಶವ ಮಳಗಿ ಅವರು ಲೆವ್‌ ಟಾಲ್‌ಸ್ಟಾಯ್‌ ಕುರಿತು ಬರೆದ ಲೇಖನವನ್ನು ತಪ್ಪದೆ ಓದಿ…

ನನ್ನದೇ ಹೆಸರಿನ ಪಾಸ್‌ಪೋರ್ಟ್‌ ಆಗಲಿ, ರೊಕ್ಕದ ಇಡುಗಂಟಾಗಲಿ ಈವರೆಗೆ ಹೊಂದಿರದ ನಾನು, ಬದುಕಿರುವಾಗ ಭೇಟಿ ನೀಡಲೇ ಬೇಕಾದ ಮೂರುನಾಲ್ಕು ಸ್ಥಳಗಳ ಪಟ್ಟಿಯನ್ನು ಮಾಡಿಕೊಂಡಿರುವೆ. ಆ ಯಾದಿಯಲ್ಲಿರುವ ಮೊದಲ ಹೆಸರು: ’ಯಸ್ನಯಾ ಪೊಲ್ಯಾನ’.

ಫೋಟೋ ಕೃಪೆ: wikipedia

ಜನವಿದೂರವಾದ ಆ ’ಬೆಳಗು ಹುಲ್ಲುಗಾವಲು’ ತೋಪಿನಲ್ಲಿ ಜಟೆ ಬೆಳೆಸಿಕೊಂಡ ಪುರಾತನ ಆಲದ ಮರವೊಂದು ನೆಲದಾಳದಲ್ಲಿ ಬೇರು ಬಿಟ್ಟು, ಆಕಾಶಕ್ಕೆ ನಿರುಮ್ಮಳವಾಗಿ ಮುಖ ಮಾಡಿ ನಿಂತಿರುವಂತೆ, ಹೊಸ ಯುಗದ ಪ್ರವಾದಿ ಪ್ರಜ್ಞೆಯ ಸಂತನೊಬ್ಬ ಶತಮಾನದಿಂದ ಮಲಗಿ ನಿದ್ರಿಸುತ್ತಿದ್ದಾನೆ. “ಲೋಕದಲ್ಲಿನ ದುಃಖ, ರೋಗರುಜಿನ, ನೋವುಗಳನ್ನೆಲ್ಲ ಶಮನಗೊಳಿಸುವ ಹಸಿರು ಕಡ್ಡಿಯೊಂದನು ಈ ತೋಪಿನಲ್ಲಿ ನೆಟ್ಟಿರುವೆ, ಇನ್ನು ಮುಂದೆ ಈ ಜಗ ಸಾವು ನೋವುಗಳಿಂದ ಮುಕ್ತವಾಗಿ ನೆಮ್ಮದಿಯಿಂದಿರುವುದು”, ಎಂದು ಬಾಲ್ಯದಲ್ಲಿ ಆತನ ಹಿರಿಯ ಸೋದರ ನಿಕೊಲಸ್‌ ಹೇಳಿದ್ದ ಮಾತಿನ ನಂಬಿಕೆಗೆ ಅನುಸಾರವಾಗಿ ’ಇಲ್ಲಿಯೇ ನನ್ನನ್ನು ಮಣ್ಣು ಮಾಡಿ’, ಎಂಬುದು ಆ ಋಷಿಯ ಕೊನೆಯಾಸೆಯಾಗಿತ್ತು. ಹೀಗಾಗಿ, ಆತನನ್ನು ಇಲ್ಲಿ ಕುಣಿ ತೋಡಿ ಮಲಗಿಸಲಾಗಿದೆ.

ಬಾಲ್ಯದಲ್ಲಿ, ಆತನ ಎಳೆಯ ಪಾದಗಳು ನಡೆದಾಡಿ ’ಯಸ್ನಯಾ ಪೊಲ್ಯಾನ’ದ ಮಣ್ಣು ಮೃದುವಾಗಿ ಹದಗೊಂಡಿದೆ. ಉದ್ವಗ್ನತೆ ತುಂಬಿದ್ದ ತಾರುಣ್ಯದ ಪ್ರೇಮಕಾಮಗಳ ಸಂಘರ್ಷಗಳ ಸೂಸುವ ಆತನ ಬಿಸಿಯುಸಿರಿನಿಂದ ಈ ತೋಪು ಹೆಪ್ಪುಗಟ್ಟುವ ಚಳಿಗಾಲದಲ್ಲಿಯೂ ಹೊತ್ತಿ ಉರಿದು ಜಗಕೆ ಕಾಮನೆ ಏನೆಂಬುದನು ತೋರಿಸಿಕೊಟ್ಟಿದೆ. ಮಧ್ಯವಯಸ್ಸಿನ ಭಯಾನಕ ದುಸ್ವಪ್ನದಂಥ ವಿಷಮ ದಾಂಪತ್ಯ, ಸಂಬಂಧಗಳ ಅರ್ಥ – ನಿರರ್ಥಗಳ ಬಸಿಯುತ್ತ ಆತ ಕೊತ ಕುದಿದು ಕುಲುಮೆಯಾಗಿದ್ದು ಇಲ್ಲಿನ ಕಲ್ಲು ಬಂಗಲೆಯಲ್ಲಿಯೇ. ಮಕ್ಕಳ ಹುಡುಗಾಟ, ಸಾವುನೋವು ಕಂಡಿದ್ದು ಕೂಡ ಈ ಬಯಲು-ಆಲಯದಲ್ಲಿಯೇ. ಆತನ ಕುದಿತದ ಹಬೆಯೇ ಇಲ್ಲಿ ಮೋಡಗಟ್ಟಿ ಮಳೆ ಸುರಿಸುವುದಂತೆ. ಆ ಮಳೆಯ ನೀರನ್ನು ತೋಪಿನಲ್ಲಿರುವ ಸರೋವರ ಹಿಡಿದಿಟ್ಟು ಬಂದ ಯಾತ್ರಾರ್ಥಿಗಳಿಗೆ ತೀರ್ಥವಾಗಿ ನೀಡುವುದಂತೆ. ತನ್ನ ಕುದುರೆಗಳ ಹೂಡಿ ಸಾಮಾನ್ಯ ರೈತನಂತೆ ಕುಡತಿಯನು ತೊಟ್ಟು ಉತ್ತಿ ಬಿತ್ತುತ್ತಿದ್ದ, ಮರಗೆಲಸ ನಿಪುಣನಾಗಿದ್ದ, ತನ್ನ ಬೂಟುಗಳನ್ನು ತಾನೇ ಹೊಲೆದುಕೊಳ್ಳುತ್ತಿದ್ದ ಈ ಬಡಜನರ ದೊರೆಯ ಬೆವರಿನ ಶ್ರಮದ ತೆನೆಗಳನು ಆ ನೆಲವು ಈಗಲೂ ಬೈಚಿಟ್ಟುಕೊಂಡಿದೆಯಂತೆ. ಆ ಕಾರಣವಾಗಿಯೇ ಅಲ್ಲಿನ ಗಿಡಗಳು ಸರ್ವಋತುವಿನಲೂ ಕ್ರಾಂತಿಯ-ಬದಲಾವಣೆಯ ಹಣ್ಣುಗಳನ್ನು ಬಿಡುವವಂತೆ. ಆತ ಬಳಸಿದ ಮಸಿ ಕುಡಿಕೆ, ಪೆನ್ನು, ಅಂಕುಡೊಂಕಿನ ಅಕ್ಷರಗಳಲಿ ಕೆತ್ತಿದ ಶಿಲಾಶಾಸನಗಳಂಥ ಪುಸ್ತಕದ ಹಸ್ತಪ್ರತಿಗಳಲಿ ಈಗಲೂ ಆತನ ಕೈ ಬೆವರಿನ ವಾಸನೆ, ಮಸಿಯ ಹಸಿ, ಅಲ್ಲಿ ಹೋದವರ ಮೂಗಿನ ಹೊರಳೆಗಳನು ತುಂಬಿ ಮತ್ತೇರಿಸಬಲ್ಲವಂತೆ. ಹಾಗೆ ಮತ್ತೇರಿದ ಜನ ಆತನ ಪುಸ್ತಕಗಳ ವ್ಯಸನಿಗಳಾಗಿ ಬದಲಾಗುವರಂತೆ.

ಫೋಟೋ ಕೃಪೆ: moskovalife.

ತನ್ನ ಎಂಬತ್ತೆರಡನೆಯ ವಯಸ್ಸಿನಲ್ಲಿ, ನಿದ್ರೆ ಸುಳಿಯದ ಒಂದು ಅಪರಾತ್ರಿ ಎಲ್ಲವನ್ನೂ ಬಿಚ್ಚಿ ಬಿಸಾಕದೆ ಬಿಡುಗಡೆ ಸಾಧ್ಯವಿಲ್ಲವೆಂದು ನಿರ್ಧರಿಸಿ, ಜೋಳಿಗೆಯನ್ನು ಹೆಗಲಿಗೇರಿಸಿ ಈ ಮುದುಕ ಕತ್ತಲೆಯಲಿ ಕರಗಿ ಹೋದ. ಒಂದೊಮ್ಮೆ ತನ್ನ ಬದುಕನ್ನು ರೂಪಿಸಿದ್ದ ’ಯಸ್ನಯಾ ಪೊಲ್ಯಾನ’ವನ್ನು ಹಿಂತಿರುಗಿ ನೋಡುತ್ತ, ನೋಡುತ್ತ ಹೋದವನು, ಮತ್ತಿಲ್ಲಿಗೆ ಮರಳಿದ್ದು ಮರಣದ ಮಹಾನವಮಿ ವೃತವನ್ನು ಪೂರ್ಣಗೊಳಿಸಿಯೇ. ಈ ಅಶಾಂತ ಸಂತನ ಬದುಕಿನ ಬೆಳಗು-ಬೈಗು-ಇರುಳುಗಳನ್ನು ಕಂಡ ಈ ತೋಪಿನಲಿ ಉರುಳಾಡಿ, ಸಮಾಧಿಯೊಳಗಿನ ಆತನ ಆತ್ಮದ ಪಿಸುನುಡಿಗಳನ್ನು ಕೇಳಲು, ಇರುಳಿಡೀ ಆತನ ಸಮಾಧಿಯ ಮಣ್ಣಿನ ಪಕ್ಕದಲಿ ಮಲಗಿ ಬದುಕು-ಬರವಣಿಗೆಯ ಮೊದಲ ತಾಲೀಮನ್ನು ಪಡೆಯಲು ಒಮ್ಮೆಯಲ್ಲ ಒಮ್ಮೆ ಅಲ್ಲಿ ಹೋಗಿಯೇ ತೀರುವೆ ಎನ್ನುವುದು ನನ್ನ ಸಂಕಲ್ಪ!

*

ಹೇಯ್‌! ಆತನ ಆತ್ಮದ ಪಿಸುದನಿಯನ್ನು ಅಲ್ಲಿಯೇ ಹೋಗಿ ಕೇಳಬೇಕೆ? ಆಳುವವರ ದಬ್ಬಾಳಿಕೆ, ಹಿಂಸೆ ಮಿತಿ ಮೀರಿದಾಗ, ಸಮಾಜದ ಪಾಪದ ಗಳಿಗೆ ಬಟ್ಟಲು ತುಂಬಿ ತುಳುಕಿದಾಗ, ಬಡಜನರ ಬವಣೆ-ಸಂಕಟಗಳು ಇನ್ನು ಸಹಿಸೆವು ಎಂಬಷ್ಟು ಹೆಚ್ಚಿದಾಗ ಈ ವೃದ್ಧನ ಆತ್ಮ ಸಮಾಧಿಯೊಳಗೆ ಕನಲಿ, ಕಂಗೆಟ್ಟು ಹೊರಳಾಡುತ್ತದೆ. ಅದಾಗ ಜನ ನಿದ್ರೆಯಿಂದ ಎಚ್ಚತ್ತು, ಈವರೆಗೆ ಏನೋ ಮರೆತಿದ್ದೆವು, ಎಂಬಂತೆ ತಪ್ಪು ಮಾಡಿದ ಶಿಶುಗಳ ಅಂಜಿಕೆಯಲ್ಲಿ ಆತನ ಕೃತಿಗಳ ಪಾರಾಯಣದಲ್ಲಿ ತೊಡಗುತ್ತಾರೆ. ಸಮಾಜದಲ್ಲಿ ಅನೈತಿಕತೆ, ಹಿಂಸೆ, ಅಸಮಾನತೆಗಳ ನಗ್ನ ನೃತ್ಯ ತಾರಕಕ್ಕೇರಿದಾಗ ಈ ಮುದುಕ ಮತ್ತಷ್ಟು ಕೋಪದಲಿ ಕುದಿಯುವನು. ಆಗ ಎಲ್ಲ ಯೋಜನ, ಕಾಲ-ದೇಶ-ಭಾಷೆಗಳಲಿ ಹೊಸ ಯುಗದ ಸಂತನ ವಾಣಿಯನ್ನು ಪಸರಿಸುವೆವು ಎಂಬಂತೆ ಹೊಸ ಹೊಸ ಲೇಖಕರು ಹುಟ್ಟುವರು. ಮನುಕುಲದ ಸಾವನೋವಿನ, ಸುಖದುಃಖಗಳ ಕಥೆಗಳನ್ನು ಹೊಸದಾಗಿ ಹೇಳಲು ಆರಂಭಿಸುವರು. ತಮ್ಮ ಕಥನಗಳಿಗೆ ಈ ಮದಿಸಿಂಹದ ಕೃತಿಗಳನು ಬುನಾದಿ ಕಲ್ಲುಗಳಾಗಿ ಬಳಸುವರು.

ಫೋಟೋ ಕೃಪೆ: moskovalife

ತನ್ನ ನೆಲದ ಆಳುವ ದೊರೆ ತ್ಸಾರ್‌ನ ದೂರದ ಸಂಬಂಧಿಯಾಗಿದ್ದ ಈತನ ಹೆಸರು ಕೇಳಿದರೆ ದೊರೆ ಭಯಾನಕ ದುಸ್ವಪ್ನ ಕಂಡವನಂತೆ ನಡುರಾತ್ರಿಯಲಿ ಎದ್ದು ಕೂರುತ್ತಿದ್ದನಂತೆ. ಅನೈತಿಕತೆ, ಶೋಷಣೆಯನ್ನೇ ಬದುಕಾಗಿಸಿಕೊಂಡಿದ್ದ ಕುಲೀನ ಸಮಾಜದ ’ಬರಿಯ ಮರ್ಯಾದಸ್ತರು’ ಹೊದಿಕೆಗಳಲ್ಲಿ ತಮ್ಮ ಮುಖವನ್ನು ಮುಚ್ಚಿಕೊಳ್ಳುತ್ತಿದ್ದರೆ, ಮೀತಿಮೀರಿದ ಅನಾಚಾರಗಳ ಈ ಪಾಪಾತ್ಮನ ಧರ್ಮಭ್ರಷ್ಟ ವಿಚಾರಗಳಿಗೆ ಕೆಂಡಾಮಂಡಲವಾಗಿ ಕಂದಾಚಾರಿ ಕ್ರೈಸ್ತಪೀಠ ಈತನನ್ನು ಧರ್ಮದಿಂದ ಬಹಿಷ್ಕರಿಸಿ ಕೈ ತೊಳೆದುಕೊಂಡಿತಂತೆ! ಅದಕ್ಕೆ ಬೇರೆ ಉಪಾಯವಾದರೂ ಎಲ್ಲಿತ್ತು? ಭೌತಿಕವಾಗಿ ಬಂಡೆದ್ದವರನ್ನು ಸೆರೆವಾಸಕ್ಕೆ ತಳ್ಳಬಹುದು. ಜನರ ಆತ್ಮಗಳನ್ನೇ ಒಕ್ಕಲೆಬ್ಬಿಸಿ ಬಂಡಕೋರರನ್ನಾಗಿಸುತ್ತಿರುವ ಈ ನಿರ್ಲಜ್ಜ ಅಜ್ಜನಿಗೆ ಬಹಿಷ್ಕಾರವೇ ತಕ್ಕ ಶಿಕ್ಷೆಯಾಗಿತ್ತು! ಆತನ ಮರಣದ ನೂರಹತ್ತು ವರ್ಷಗಳ ಬಳಿಕವೂ ಆ ಬಹಿಷ್ಕಾರ ತೆರವುಗೊಂಡಿಲ್ಲದಿರುವುದಕ್ಕೆ, ಈ ವೃದ್ಧ ಈಗಲೂ ತನ್ನ ಕೃತಿಗಳ ಮೂಲಕ ವಿಶ್ವದೆಲ್ಲೆಡೆಯ ಸೂಕ್ಷ್ಮ ಜನರನ್ನು ಮಾನಸಿಕವಾಗಿ ಅಸ್ವಸ್ಥಗೊಳಿಸುತ್ತಿರುವುದೇ ಕಾರಣವಂತೆ! ಇಂಥ ಬಹಿಷ್ಕಾರದ ಭಾಗವಾಗಿಯೇ ಮೊನ್ನೆ ಮೊನ್ನೆ ಅಜ್ಜನೇ ಸೃಷ್ಟಿಸಿದ ನೂರಾರು ಪಾತ್ರಗಳ ನಕಲಿನಂತೆ ಕಾಣುವ ಕರಿಕೋಟಿನ ಕಾರಕೂನನೊಬ್ಬ ಈತನ ಮೇಲೆ ಉಗ್ಗಡಿಸಿರುವುದು ಸಹ ಸತ್ಯವೆ ಅಂತೆ!

*

ಎಲ್ಲ ಎಷ್ಟು ಸುಂದರವೂ, ನೆಮ್ಮದಿಯಿಂದ ಕೂಡಿದ್ದೂ ಆಗಿದೆ ಎಂಬ ಚಿತ್ತ ವಿಭ್ರಮೆಯಲ್ಲಿರುವ ಲೋಕವನ್ನು ತನ್ನ ಕೃತಿಗಳಿಂದ ಅಸ್ತವ್ಯಸ್ತಗೊಳಿಸುತ್ತಿರುವ ನಿರಂತರ ಈ ಅತೃಪ್ತ ಮುದುಕನನ್ನು ಲೆವ್‌ (ಲಿಯೋ) ಟಾಲ್‌ಸ್ಟಾಯ್‌ ಎಂದು ಕರೆಯೋಣ (ಹುಟ್ಟಿದ್ದು: ಸೆಪ್ಟೆಂಬರ್‌ ೯, ೧೮೨೮, ಯಸ್ನಯಾ ಪೊಲ್ಯಾನದಲ್ಲಿ, ಮರಣ: ನವೆಂಬರ್‌ ೨೦, ೧೯೧೦, ಅಸ್ತಪೊವೊ ರೇಲ್ವೆ ನಿಲ್ದಾಣದ ಮಾಸ್ತರನ ಮನೆಯಲ್ಲಿ). ಒಳಗೇ ಸುಟ್ಟು ಹಾಕುವ ಈತನ ಸಹವಾಸಕ್ಕೆ ಯಾವಾಗ, ಯಾಕಾಗಿ ಬಿದ್ದೆನೊ ಎಂಬ ನೆನಪು ಕೂಡ ನನಗಿಲ್ಲ. ಆದರೆ, ಗಾಂಜಾ-ಅಫೀಮು, ಹೆಂಡ ಮತ್ತು ಜ್ವರದಂತೆ ಜೀವ ಹಿಂಡುವ ಕಾಮನೆಗಳ ವ್ಯಸನದಂತೆ ಈತ ದಶಕಗಳಿಂದ ನನಗೆ ಗಂಟು ಬಿದ್ದಿರುವುದಂತೂ ನಿಜ. ಈತನ ಬಾಲ್ಯ, ಹುಡುಗುತನ, ತಾರುಣ್ಯ,ಗಳ ತ್ರಿವಳಿಗಳನ್ನು (ಚೈಲ್ಡ್‌ಹುಡ್‌, ಬಾಯ್‌ಹುಡ್‌, ಯೂತ್‌) ಪಠಣ ಮಾಡದೆ ನನಗೆ ಬಿಡುಗಡೆಯಿಲ್ಲ. ಈತನ ಕಥೆಗಳಿಂದ, ಬದುಕು ರೂಪಿಸುವ ಬರಹಗಳಿಂದ ಬಿಡಿಸಿಕೊಳ್ಳುತ್ತ ಹೋದಂತೆ, ತೇನವಿನಾ ತೇನವಿನಾ ತೃಣಮಪಿ ಚಲತಿ ನಮ್ಮವಿನಾ, ಎಂಬಂತೆ ಅವುಗಳ ಹುದುಲಿನಲಿ ಸಿಲುಕುತ್ತೇನೆ. ಇವಾನ್‌ ಇಲಿಚ್ಯನ ಸಾವು, ಫಾದರ್‌ ಸೆರ್ಗಿಯ ದುರ್ಭರ ಸಂತ ಬದುಕು, ಸಾವಿನಲಷ್ಟೆ ಮುಕ್ತಿ ಪಡೆಯಬಹುದಾದ ಜೀತಗಾರ ತರುಣ ಅಲ್ಯೋಷನ ಮುಗ್ಧತೆ, ಮೂವರು ಮುಗ್ಧ ಸಂತರ ನೀರ ಮೇಲಿನ ನಡಿಗೆಯ ಪವಾಡ, ಸೊನಾಟದಲ್ಲಿ ತೆರೆದುಕೊಳ್ಳುವ ಪ್ರೇಮ-ಕಾಮ-ಮದುವೆಗಳ ಗೋಜಲು, ಆನಾ ಎಂಬ ಹೆಂಗಸಿನ ಹೃದಯ ವಿದ್ರಾವಕ ಒಂಟಿತನ, ಪ್ರೇಮಕಾಮ, ಭಗ್ನತೆಯ ಕಥನಗಳು, ಆತನ ಧಾರ್ಮಿಕ ವಿಚಾರಗಳು, ಶಿಕ್ಷಣ, ಸಮಾಜದ ಕುರಿತು ಮುನ್ನಾಲೋಚನೆಗಳು ನಾನೆಂದೂ ಮರಳಿ ಸ್ವಸ್ಥ ಬದುಕಿನ ದಡವನ್ನು ತಲುಪಿ ಸೂರ್ಯಾಸ್ತ ನೋಡಿ ಸುಖಿಸದಂತೆ ತಮ್ಮ ಬಳ್ಳಿಗಳಿಂದ ಕಟ್ಟಿ ಹಾಕಿವೆ. ಈತನಿಂದ ಪಾರಾಗುವ ಸುಲಭದ ದಾರಿಯೆಂದರೆ, ಆತನ ಕೃತಿಗಳಲ್ಲಿ ಕಳೆದು ಹೋಗುವುದು. ಇಲ್ಲದಿದ್ದರೆ ಈ ಮುದುಕ ನನ್ನನ್ನು ಬ್ರಹ್ಮೇತಿಯಂತೆ ಕಾಡುವನು. ’ನನ್ನನ್ನು ಓದದೆ ತಿಂಗಳಾದರೂ ಆಗಿರಬೇಕು ನೋಡು’, ಎಂದು ಮೆಲುದನಿಯಲಿ ಎಚ್ಚರಿಸುವನು. ನಾನಾದರೂ ತಕ್ಷಣವೇ ಆತನ ಹತ್ತಾರು ಪುಟಗಳನು ತಿರುವಿ ಹಾಕಿ, ಬಿಡುಗಡೆಗೊಂಡವನಂತೆ ನಿಟ್ಟುಸಿರು ಬಿಡುವೆನು.

ಫೋಟೋ ಕೃಪೆ: pinterest

ಹೋಗಲಿ ಎಂದರೆ, ಈತ ಬದುಕಿಡೀ ಅರೆಗಳಿಗೆಯಾದರೂ ಸಮಾಧಾನಿಯಾಗಿ ಬದುಕಿದನೆ? ಲೋಕಕ್ಕೆ ಸಂಕಟವನು ಸೃಷ್ಟಿಸಲೆಂದೇ ಹುಟ್ಟಿದ ಉಪದ್ವ್ಯಾಪಿಯ ಬದುಕು ಹೇಗೆ ತಾನೆ ನೆಟ್ಟಗಿರಲು ಸಾಧ್ಯ? ಎರಡು ವರ್ಷವಿದ್ದಾಗ ತಾಯಿಯನ್ನು, ಒಂಬತ್ತರ ಹಸುಳೆಯಾಗಿದ್ದಾಗ ತಂದೆಯನ್ನು ಕಳೆದುಕೊಂಡು ಅನಾಥನಾಗಿ ಅತ್ತೆಯ ಬಳಿ ಬೆಳೆದ. ಅತ್ತೆಯ ಗಂಡ ತತಾರ್‌ನ ರಾಜಧಾನಿ ಕಸಾ಼ನ್‌ನ ಗರ್ವನರ್‌ ಆಗಿದ್ದರಿಂದ ನೆಮ್ಮದಿಯ ಸಿರಿವಂತ ಬದುಕೇ ಇತ್ತು. ಆದರೆ, ಇವನು ಸರಿಯಿದ್ದರಲ್ಲವೆ? ತನ್ನ ಬದುಕು ಎಷ್ಟು ಉದಾತ್ತತೆಯಿಂದ ಕೂಡಿರಬೇಕು, ಬದುಕಿನ ಗುರಿ ಏನಾಗಿರಬೇಕು?, ಎಂಬೆಲ್ಲ ಆದರ್ಶಮಯ ವಿಚಾರಗಳನ್ನು ದಿನಚರಿಯಲ್ಲಿ ಟಿಪ್ಪಣಿಯನ್ನೇನೋ ಮಾಡಿಕೊಳ್ಳುತ್ತಿದ್ದ, ಕಸಾ಼ನ್‌ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ್ದ ಹುಡುಗ ಮಾತ್ರ ಕೊನೆಗೊಂಡಿದ್ದು ವೇಶ್ಯೆಯರ ಮನೆಗಳಲ್ಲಿ, ಜೂಜಿನ ಅಡ್ಡೆಗಳಲ್ಲಿ. ಆ ಎಳೆಯಕ್ಕೇ ಲೈಂಗಿಕ ರೋಗ ಅಂಟಿಸಿಕೊಂಡು ವೈದ್ಯರಲ್ಲಿಗೆ ಎಡತಾಕುವಷ್ಟು ಈತ ಹದಗೆಟ್ಟಿದ್ದ. ಈತನ ಶೈಕ್ಷಣಿಕ ಅಶಿಸ್ತಿಗೆ ರೋಸಿದ ಆಡಳಿತ ಮಂಡಳಿ, ಒಂದಿಡೀ ಇರುಳು ಕತ್ತಲು ಕೋಣೆಯಲ್ಲಿ ಕೊಳೆಯಿಸಿತು. ಆದರೂ ಸುಧಾರಿಸದಿದ್ದಾಗ ಶಿಕ್ಷಣ ಸಂಸ್ಥೆಯಿಂದ ಹೊರ ಹಾಕಿತು. ಪೋಕಿರಿ ಲೆವ್‌ ಯಾವುದೇ ಪದವಿಯಿಲ್ಲದೆ ಬರಿಗೈಯಲಿ ಮನೆ ಸೇರಿದ. ಸಾಂಸ್ಥಿಕ ಶಿಕ್ಷಣ, ಶಿಸ್ತು, ಉರು ಹಚ್ಚುವುದು, ಪ್ರೊಫೆಸರುಗಳಿಗೆ ಕಾಕಾ ಹೊಡೆಯುವುದು ಮಹಾ ಸ್ವಾಭಿಮಾನಿ, ಸ್ವತಂತ್ರ ಮನೋಭಾವದ ಈತನಿಗೆ ಹೇಗೆ ತಾನೇ ರುಚಿಸಿಯಾವು? ಸಾಲದಕ್ಕೆ ಮೊದಲ ದಿನವೇ ಪ್ರೊಫೆಸರನೊಬ್ಬನ ಹಿಟ್ಟಿನ ಗಿರಣಿಯ ಕೊರೆತ ತಾಳದೆ ಆತನ ೧೮ ಅಣಕಚಿತ್ರಗಳನು ರಚಿಸಿ ತನ್ನ ಕಲಾ ಪ್ರತಿಭೆಗೆ ತಾನೇ ಬೀಗಿದ್ದ ಬೇರೆ!

ಲೆವ್‌ನಿಗೆ ಪದವಿಯನ್ನು ನೀಡದೆ ವಿಶ್ವವಿದ್ಯಾಲಯದಿಂದ ಹೊರ ಹಾಕಿ ಆಡಳಿತ ಮಂಡಳಿ ತಕ್ಕುದನ್ನೇ ಮಾಡಿತು. ಇಲ್ಲದಿದ್ದರೆ, ಅದಾದ ಮೇಲೆ ಸ್ನಾತಕೋತ್ತರ ಪದವಿ ಮಣ್ಣುಮಸಿಯೆಂದು ಬರೆದು-ಕೊರೆದು ಅದೇ ವಿಶ್ವವಿದ್ಯಾಲಯದಲ್ಲಿ ಮಾಸ್ತರನಾಗಿ ಆತ ನಿವೃತ್ತನಾಗಬೇಕಾಗುತ್ತಿತ್ತು. ಆಗ ಯುದ್ಧ ಮತ್ತು ಶಾಂತಿ, ಪುನರುತ್ಥಾನ, ಒಬ್ಬನಿಗೆ ಎಷ್ಟು ಭೂಮಿ ಬೇಕು, ಕಸ್ಸಾಕ್‌ನ ಸೆರೆವಾಸಿಗಳು, ದೇವರ ಸಾಮ್ರಾಜ್ಯವಿರುವುದು ನಿನ್ನೊಳಗೇ, ಸೂರತ್ತಿನ ಕಾಫಿಹೌಸ್‌, ಹಿಂದೂವಿಗೊಂದು ಪತ್ರ. . . ಹೀಗೆ ಸಾವಿರ ಸಾವಿರ ಪುಟಗಳ ಅಕ್ಷರ ಶಾಸನಗಳನ್ನು ಯಾರು ಕೆತ್ತುತ್ತಿದ್ದರು? ಈ ಪುಸ್ತಕಗಳಿಲ್ಲದ ಜಗತ್ತು ಅನಾಥವಾಗುತ್ತಿತ್ತು.

ಫೋಟೋ ಕೃಪೆ: pinterest

ಹತ್ತೊಂಬತ್ತರ ಹರೆಯಕ್ಕೆ ಶಿಕ್ಷಣದ ಕಥೆ ಮುಗಿದಂತಾಗಿದ್ದರಿಂದ ಪಾರಂಪರಿಕ ಆಸ್ತಿಯನ್ನಾದರೂ ನೋಡಿಕೊಳ್ಳೋಣವೆಂದು ಲೆವ್‌, ಯಸ್ನಯಾ ಪೊಲ್ಯಾನಕ್ಕೆ ಮರಳಿದ. ಯೌವ್ವನದ ಸೊಕ್ಕಿನಿಂದ ತೊನೆಯುತ್ತಿದ್ದವನಿಗೆ ಈ ಕುಗ್ರಾಮ ಹೇಗೆ ತಾನೆ ಆಕರ್ಷಕ? ಈ ವಯಸ್ಸು ಇರುವುದು ಹೊರಲೋಕದ ಅನುಭವಗಳನ್ನು ಬಿಗಿದಪ್ಪಲು. ಹೀಗಾಗಿಯೇ, ಹಳ್ಳಿ ಬಂಗಲೆಯಲ್ಲಿ ಕೊಳೆಯುತ್ತಿರುವೆ, ಎಂದು ಖಿನ್ನತೆಗೆ ಒಳಗಾದ. ಕೊನೆಗೆ ಸೇನಾಧಿಕಾರಿಯಾಗಿ ಕಾಕ್ಸಸ್ಸಿನ ಚೆಚನ್ಯದಲ್ಲಿ ಕೆಲಸ ಮಾಡುತ್ತಿದ್ದ ಸೋದರ ನಿಕೊಲಾಯ್‌ನನ್ನು ಕೂಡಿಕೊಳ್ಳಲು ನಡೆದ. ಅಣ್ಣ, ರಶ್ಯನ್‌ ಪಡೆ ಮತ್ತು ಚೆಚನ್ಯ ಸ್ವಾತಂತ್ರ‍್ಯ ಹೋರಾಟಗಾರರ ನಡುವಿನ ಭೀಕರ ಯುದ್ಧದಲ್ಲಿ ತೊಡಗಿಕೊಂಡಿದ್ದ. ಪರ್ವತ ಪ್ರದೇಶದ ಏಕಾಂತ, ಸೃಷ್ಟಿಯ ಸೊಬಗು ಲೆವ್‌ಗೆ ಉಲ್ಲಾಸ, ಕಸುವು ತುಂಬಿದವು. ಇದ್ದಕ್ಕಿದ್ದಂತೆ ಎಂಬಂತೆ ಬರವಣಿಗೆಯಲ್ಲಿ ತೊಡಗಿಕೊಂಡ. ಒಂದೆರಡು ಕಥೆಗಳು, ಬಳಿಕ ತನ್ನ ಮೊದಲ ಪೂರ್ಣ ಪ್ರಮಾಣದ ಕೃತಿ ’ಚೈಲ್ಡ್‌ಹುಡ್‌’ ಬರೆದ. ಅದು ೧೮೫೧ರಲ್ಲಿ ಪ್ರಕಟವಾದದ್ದೇ ಅಪಾರ ಜನಪ್ರಿಯತೆ ಗಳಿಸಿತು. ಎರಡು ವರ್ಷ ಕಾಕ್ಸಸ್‌ನಲ್ಲಿ ಕಾಲ ಕಳೆದವನು ತಾನೂ ಸೈನ್ಯ ಸೇರಿದ. ಕಪ್ಪು ಸಮುದ್ರದ ಅಂಚಿಗೆ ಪೋಸ್ಟಿಂಗ್‌ ದೊರಕಿತು. ಕ್ರೈಮಿಯ ಯುದ್ಧ (ಇಂದಿನ ಯುಕ್ರೈನ್‌) ಅಂಚಿನಲ್ಲಿತ್ತು. ಒಟ್ಟೊಮನ್‌ ಸಾಮ್ರಾಜ್ಯದ ತುರ್ಕಿಗಳನ್ನು ಬಗ್ಗು ಬಡಿಯಲು ರಶ್ಯಾ, ಬ್ರಿಟನ್‌, ಫ್ರಾನ್ಸ್‌ ಟೊಂಕ ಕಟ್ಟಿದ್ದವು. ಇದೇ ಕಾಲದಲ್ಲಿ, ಆತನ ಜೂಜು, ಕುಡಿತಗಳು ಮತ್ತು ಸುರತ ಸುಖಗಳು ಶೃಂಗ ತಲುಪಿದ್ದವು. ತನ್ನ ಪಾಲಿಗೆ ಬಂದ ಬಹುಪಾಲು ಆಸ್ತಿಯನ್ನು, ಯಸ್ನಿಯಾ ಪೊಲ್ಯಾನದ ಮನೆಯನ್ನೂ ಲೆವ್‌, ಲೆತ್ತದ ಪಣದಲಿ ಸೋಲುವಷ್ಟು ವ್ಯಸನಿಯಾಗಿ ಬದಲಾಗಿದ್ದ.

ಇನ್ನೊಂದೆಡೆ, ಸಮರೋತ್ಸಾಹ, ರಶ್ಯನ್‌ ಸೈನಿಕರ ಕೆಚ್ಚೆದೆ ಮತ್ತು ರಾಷ್ಟ್ರಪ್ರೇಮದಲ್ಲಿ ಮುಳುಗಿ ಏಳುತ್ತಿದ್ದ ೨೬ರ ಹರೆಯದ ಲೆವ್‌, ಯುದ್ಧದ ಅನುಭವಗಳನ್ನು ಕಥಿಸುವ ’ಸೆಬಸ್ಟಪೊಲ್‌ ಸ್ಕೆಚಸ್‌’ (೧೮೫೫) ಪ್ರಕಟಿಸಿದ. ದೇಶಪ್ರೇಮಿ ಜನಗಳು ಹುಚ್ಚೆದ್ದು ಓದಿದರು. ತ್ಸಾರ್‌ ದೊರೆ ಕೃತಿಗೆ ಎಷ್ಟೊಂದು ಮಾರು ಹೋದನೆಂದರೆ ಕೃತಿಯ ಫ್ರೆಂಚ್‌ ಅನುವಾದವನ್ನು ನಿಯೋಜಿಸಿದ. ಆದರೆ, ಎರಡನೆಯ ಸಂಪುಟ ಪ್ರಕಟಿಸುವಷ್ಟರಲ್ಲಿ ಲೆವ್‌ನ ಸಮರೋತ್ಸಾಹ ಇಳಿಯತೊಡಗಿತ್ತು. ಲೆವ್‌, ಬದುಕಿನ ಕಠೋರತೆ, ವಸ್ತುನಿಷ್ಠತೆ ಮತ್ತು ವಾಸ್ತವಕ್ಕೆ ಕಣ್ತೆರೆದುಕೊಳ್ಳತೊಡಗಿದ. ಆಧುನಿಕ ಸಾಹಿತ್ಯದಲ್ಲಿ ವಾಸ್ತವಮಾರ್ಗದ ಕಥನವನ್ನು ತೋರಿಸಿಕೊಟ್ಟಿದ್ದೆ ಈತನಲ್ಲವೆ? ’ನಾವು ಕೆಡಕನ್ನು ಗುರುತಿಸಬೇಕು. ಆದರೆ, ಒಳಿತನ್ನು ಅನುಕರಿಸಬೇಕು. ನನ್ನ ಕಥೆಯ ನಾಯಕ ನಾನಾಗಲಿ, ಯುದ್ಧವಾಗಲಿ, ಸೈನಿಕರಾಗಲಿ ಅಲ್ಲ. ಈ ಕಥೆಯಲ್ಲಿ ನಾಯಕನ ಪಾತ್ರ ವಹಿಸುತ್ತಿರುವುದು ’ಸತ್ಯ’ ಮಾತ್ರ’ ಎಂದು ಬರೆದವನಿಗೆ, ಯುದ್ಧ, ಸ್ವಾರ್ಥ-ಲಾಲಸೆ ಮತ್ತು ಪರರನ್ನು ದಮನಿಸುವ ಹುನ್ನಾರಗಳ ಫಲ, ನಾಗರಿಕತೆಯ ನಾಶಕ್ಕೆ ಮೊದಲ ಹೆಜ್ಜೆ ಎಂದು ಅರಿವಾಗತೊಡಗಿತ್ತು.

ಯುದ್ಧ ಮುಗಿದಿದ್ದೇ ನಿರುಮ್ಮುಳ ಮನಸ್ಸಿನಲ್ಲಿ ಬುದ್ಧಿಜೀವಿಗಳ ಸಗ್ಗವೆಂದು ಪ್ರಸಿದ್ಧವಾಗಿದ್ದ ಸೇಂಟ್‌ ಪೀಟರ್ಸ್‌ಬರ್ಗ್‌‌ಗೆ ಪಯಣ ಬೆಳೆಸಿದ. ’ನಾನು ಬರಹಗಾರನಲ್ಲದೆ ಬೇರೇನೂ ಆಗಲಾರೆ’ ಎಂದು ಲೆ‌ವ್‌ ಆ ವೇಳೆಗೆ ನಿರ್ಧರಿಸಿದ್ದ.

ಫೋಟೋ ಕೃಪೆ: open.spotify

ಪೀಟರ್ಸ್‌‌ಬರ್ಗ್‌: ಕ್ರಾಂತಿಕಾರಿ ಲೇಖಕರ, ತೀವ್ರಗಾಮಿ ವಿಚಾರವಾದಿಗಳ, ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಮಹಾನ್‌ ಬರಹಗಾರರನ್ನು ಸೃಷ್ಟಿಸಿದ ಚುಂಬಕ ನಗರ. ಇವಾನ್‌ ತರ್ಗನೇವ್‌ ಆ ಕಾಲದ ಬಹುದೊಡ್ಡ ಲೇಖಕ ಮತ್ತು ಕ್ರಾಂತಿಕಾರಿ. ಲೆವ್‌ನಿಗೆ ಕಾಲೇಜು ದಿನಗಳಿಂದಲೇ ಮೆಚ್ಚಿನ ಲೇಖಕ. ತರುಣ ಬರಹಗಾರ ಲೆವ್‌, ತರ್ಗನೇವ್‌ನ ಅತಿಥಿಯಾದ. ಈ ತರುಣ ಅತಿಥಿ ರಾತ್ರಿಪೂರ ಜೂಜು, ವೇಶ್ಯಾವಾಟಿಕೆ, ಕುಡಿತಗಳಲ್ಲಿ ಕಳೆಯುತ್ತ, ಹಗಲಿಡೀ ನಿದ್ರೆ ಮಾಡುವುದು ತರ್ಗನೇವ್‌ನಿಗೆ ಇರುಸುಮುರುಸೇ. ಆದಾಗ್ಯೂ, ಸುಟ್ಟಲ್ಲದೆ ಏನನ್ನೂ ಮುಟ್ಟೆನೆಂಬ ಲೆವ್‌ನ ಎದೆಗಾರಿಕೆ, ಗೂಳಿಮದ ಆತನಿಗೆ ಮೆಚ್ಚು. ಪೀಟರ್ಸ್‌‌ಬರ್ಗ್‌‌ನಲ್ಲಿ ಆಗ ಬಹು ಚರ್ಚೆಯಲ್ಲಿದ್ದ ವಿಷಯವೆಂದರೆ, ಜೀತಪದ್ಧತಿಯ ನಿರ್ಮೂಲನೆ ಮತ್ತು ಭೂಮಿಕಾಣಿಯ ಸಮಾನ ಹಂಚಿಕೆ. ಲೆವ್‌ನಾದರೂ ಸಾವಿರಾರು ಎಕರೆ ಭೂಮಿಕಾಣಿ, ಮುನ್ನೂರು ಜೀತದಾಳುಗಳನ್ನು ಹೊಂದಿದ್ದ ಸುಖಲೋಲುಪ ಕೌಂಟಿಯಾಗಿದ್ದ! ಆತನ ಜೀವನದಲ್ಲಿ ಎಲ್ಲವೂ ವೈರುಧ್ಯವೇ. ಆದರೆ, ಪೀಟರ್ಸ್‌‌ಬರ್ಗ್‌‌ನ ಚರ್ಚೆಯಲ್ಲಿ ಪ್ರಸ್ತಾಪಗೊಂಡ ವಿಷಯಗಳು ಆತನ ಎದೆಯಾಳಕ್ಕೆ ಇಳಿಯತೊಡಗಿದವು.

*
ಲೆವ್‌ ತನ್ನ ಮೂವತ್ನಾಲ್ಕನೆಯ ವಯಸ್ಸಿನಲ್ಲಿ ಮದುವೆಯಾದುದು ತನಗಿಂತ ಹದಿನಾಲ್ಕು ವರ್ಷ ಚಿಕ್ಕವಳಾದ ಸೋಫಿಯಾಳನ್ನು. ಲೆವ್‌ನ ಕೃತಿಗಳನ್ನು ಓದಿದ್ದ ಸೋಫಿಯಾ ಆತನಷ್ಟು ಬುದ್ಧಿವಂತಳಲ್ಲ. ಸರಳ ಮನೆವಾರ್ತೆಯ ಹೆಣ್ಣು. ಆಕೆಯ ಜಗತ್ತೆಂದರೆ ಗಂಡ, ಆತನಿಂದ ಪಡೆದ ಮಕ್ಕಳು, ತೋಟ, ಕುದುರೆಲಾಯ, ಆಳುಗಳು ಮತ್ತು ಇವೆಲ್ಲವನ್ನೂ ಒಳಗೊಂಡ ಕುಟುಂಬ. ಆ ವರ್ಷಗಳಲ್ಲಿ ಲೆವ್‌ನ ಬರಹಗಳ ಶುದ್ಧ ಪ್ರತಿ ತಯಾರಕಿ, ಸಂಪಾದಕಿ, ಓರಣಗಿತ್ತಿ ಎಲ್ಲವೂ ಸೋಫಿಯಾಳೇ. ಕೃತಿಗಳಲ್ಲಿ ಅತ್ಯಂತ ಸೂಕ್ಷ್ಮಗಳನ್ನು ಸೆರೆ ಹಿಡಿವ ಪತಿ ನಿಜದ ಬದುಕಲ್ಲಿ ಅಸೂಕ್ಷನೂ, ವಿಕ್ಷಿಪ್ತನೂ, ದುಷ್ಚಟಗಳ ದಾಸನೂ, ಬೇಜವಾಬ್ದಾರಿಯವನೂ ಆಗಿ ಆಕೆಗೆ ಕಾಣುತ್ತಿದ್ದ. ಬೇಟೆ, ಬೇಟದ ಹುಚ್ಚಿನ ಯಜಮಾನ ವಾರಗಟ್ಟಲೆ ಮನೆಯೇ ಸೇರುತ್ತಿರಲಿಲ್ಲ.

ಪಾಪದ ಸಂತಾಪದಿಂದ ಸಂತನಾಗುವಲ್ಲಿ ದುರ್ಗಮ ದಾರಿಯನ್ನು ಕ್ರಮಿಸುತ್ತಿದ್ದ ಲೆವ್‌ ಮಾತ್ರ ತನ್ನದೇ ಲೋಕದಲ್ಲಿ ಕಳೆದು ಹೋಗಿರುತ್ತಿದ್ದ. ಕಸಾ಼ನ್‌ನಲ್ಲಿ ಹುಡುಗನಾಗಿದ್ದಾಗ ದಿನಚರಿಯಲ್ಲಿ ಬರೆಯುವುದೊಂದು, ಬದುಕುವುದು ತದ್ವಿರುದ್ಧ ಎಂಬಂತಿದ್ದ. ಅಂಥ ದ್ವಂದ್ವ ಈಗಲೂ ಮುಂದುವರೆದಿತ್ತು. ವೈರುಧ್ಯ, ಮಾನಸಿಕ ಸಂಘರ್ಷಗಳು ಮುಂದುವರೆದು ಸೋಫಿಯಾ-ಲೆವ್‌ರ ದಾಂಪತ್ಯ ವಿಷಮಶೀತ ಜ್ವರದಿಂದ ನರಳುತ್ತಿತ್ತು. ಮದುವೆಯಾದವರು ಕೂಡ ಬ್ರಹ್ಮಚರ್ಯ ಆಚರಿಸಬೇಕು, ಆ ಮೂಲಕ ಮಾನವ ಕುಲ ಅಳಿದರೆ ಅದರಿಂದ ಪೃಥ್ವಿಗೆ ಶಾಂತಿ ಎಂದು ಬರೆಯುತ್ತಿದ್ದ. ಆದರೆ, ತಾನೇ ಹದಿಮೂರು ಮಕ್ಕಳ ತಂದೆಯಾಗಿದ್ದ. ಆತ ಕೊನೆಯ ಮಗುವಿನ ತಂದೆಯಾದಾಗ ಅವನ ವಯಸ್ಸು ಅರವತ್ತು. ಹದಿಮೂರು ಮಕ್ಕಳಲ್ಲಿ ನಾಲ್ಕು ಮಕ್ಕಳ ಸಾವು ಸೋಫಿಯಾಳನ್ನಷ್ಟೇ ಅಲ್ಲ, ಲೆವ್‌ನನ್ನೂ ಒಳಗೇ ಕುಸಿಯುವಂತೆ ಮಾಡಿತ್ತು.

ಫೋಟೋ ಕೃಪೆ: mostlyaboutstories

ವಿರೋಧಾಭ್ಯಾಸದ ಬದುಕು, ಒಳಹೊರಗಿನ ಸಂಘರ್ಷದಲ್ಲಿ ಆತ ಇನ್ನಷ್ಟು, ಮತ್ತಷ್ಟು ನವೆಯುತ್ತ ತನ್ನ ಕೃತಿಗಳನ್ನು ಸೃಷ್ಟಿಸುತ್ತಿದ್ದ. ತನ್ನ ದೇಶದಲ್ಲಿ ತ್ಸಾರ್‌, ಪಾರಂಪರಿಕ ಚರ್ಚಿನ ಹಿರಿಯ ಪಾದ್ರಿಯನ್ನು ಬಿಟ್ಟರೆ ಜನ ದೇವರೆಂದು ಆರಾಧಿಸುತ್ತಿದ್ದುದು ಲೆವ್‌ ಟಾಲ್‌ಸ್ಟಾಯ್‌ ಎಂಬ ಈ ಹೊಸ ಯುಗದ ಪ್ರವಾದಿಯನ್ನು ಮಾತ್ರ. ಆತ ಹೊರಗಡಿಯಿಟ್ಟರೆ ನೂರಾರು ಜನ ಇರುವೆಯಂತೆ ಮುತ್ತಿಕೊಳ್ಳುತ್ತಿದ್ದರು. ತಮ್ಮ ಬದುಕನ್ನು ಬಯಲಾಗಿಸುವಂಥದ್ದು ಇನ್ನೇನು ಬರೆಯುವನೋ ಎಂದು ತ್ಸಾರ್‌, ಕುಲೀನರು, ಕ್ರೈಸ್ತಧರ್ಮ ನಿಯಂತ್ರಕರು ಆತಂಕಗೊಳ್ಳುತ್ತಿದ್ದರು. ಆಳುವವರ್ಗಕ್ಕೆ ಸಿಂಹಸ್ವಪ್ನವಾಗಿದ್ದರೂ, ಜನ ಸಾಮಾನ್ಯರು ಮಾತ್ರ, ತಮ್ಮದೇ ಕಥೆಗಳನ್ನೀತ ಮಹಾಕಾವ್ಯವಾಗಿಸುತ್ತಿದ್ದ ಮಹಾಲೇಖಕ. ಆತ ’ಪ್ರಭುತ್ವದ ಕಡುವೈರಿ, ಜನತೆಯ ಮಿತ್ರ’.

ಲೆವ್‌ ಬದುಕಿಡೀ ಧ್ಯಾನಿಸಿದ್ದು ಮನುಷ್ಯ ಅತ್ಯಂತ ಸತ್ಯಸಂಧನಾಗಿ, ಸರಳವಾಗಿ ಬದುಕಲು ಏನು ಮಾಡಬೇಕು? ಜನಸಾಮಾನ್ಯರ ಜೀವನ ಹಸನು ಮಾಡುವುದು ಹೇಗೆ; ಅವರ ಕಷ್ಟಕ್ಕೆ ಆದುಕೊಳ್ಳುವ ಬಗೆ ಯಾವುದು? ಮನುಷ್ಯ ಬದುಕಿದ್ದಾಗ ಪಡೆದುಕೊಳ್ಳುವುದು ಏನು? ಎಂಬುದರ ಕುರಿತು. ತನ್ನ ನಂಬಿಕೆಗೆ ಅಡ್ಡಬಂದರೆ ಆತ ಕ್ರಿಸ್ತನಾಗಿದ್ದರೂ ಸರಿಯೇ ಆತನ ಜನ್ಮ ಜಾಲಾಡದೆ ಬಿಡುವವನಲ್ಲ. ಆತನ ಕೃತಿಗಳು ಬರುಬರುತ್ತ ಹೆಚ್ಚು ಹೆಚ್ಚು ಅನುಭಾವಿಕವೂ, ಆತ್ಮಶೋಧಕವೂ, ಲೋಕೋತ್ತರ ಚೆಲುವಿನಿಂದಲೂ ಕಂಗೊಳಿಸತೊಡಗಿದವು. ಆತ ಕ್ರಿಶ್ಚಿಯನ್‌ ಧರ್ಮಗ್ರಂಥಗಳಿಂದ (ಗಾಸ್ಪೆಲ್‌) ಎಷ್ಟೊಂದು ಹತಾಶೆಗೊಂಡನೆಂದರೆ ಲಭ್ಯವಿದ್ದ ನಾಲ್ಕೂ ಸತ್ಯಸಂದೇಶಗಳನ್ನು ಒಗ್ಗೂಡಿಸಿ ತನ್ನದೇ ಸತ್ಯಸಂದೇಶವನ್ನು ರಚಿಸಿದ! ಏನೇ ಮಾಡಿದರೂ ಆತನ ಮನಸ್ಸು ಸದಾ ಉದ್ವಿಗ್ನ ಸ್ಥಿತಿಯಲ್ಲಿರುತ್ತಿತ್ತು. ಭವ ಬಂಧನದಿಂದ ಕಳಚಿಕೊಳ್ಳದೆ ಬಿಡುಗಡೆಯಿಲ್ಲ ಎಂದು ಮತ್ತೆ ಮತ್ತೆ ಅನ್ನಿಸುತ್ತಿತ್ತು.

ಫೋಟೋ ಕೃಪೆ: wikipedia

ಸಿದ್ಧಾರ್ಥ, ಬುದ್ಧನಾಗಿ ರೂಪಾಂತರಗೊಂಡ ಮೇಲೆ ಉಪದೇಶ ನೀಡಿದರೆ, ಈ ವೃದ್ಧ ಅವೆರಡೂ ಸ್ಥಿತಿಗಳು ಬೇರೆಯಲ್ಲ, ಬದುಕುತ್ತ, ಬದುಕುತ್ತ ಕಂಡಿದ್ದನ್ನು ಕಂಡಿರಿಸುವೆ ಎಂದು ನಂಬಿದವನು. ಆ ಕಾರಣದಿಂದಲೇ ಆತ ಮನೆಯಿಂದ ನಿರ್ಗಮಿಸಿದ್ದು ಜ್ಞಾನವನ್ನು ಪಡೆಯಲು ಅಲ್ಲ. ಬದುಕಿಡೀ ಆತ ಮಾಡಿದ್ದು ಅದನ್ನೇ. ಹೇಗೆ ಪಡೆದನೋ ಹಾಗೆಯೇ ಜನರಿಗೆ ಹಂಚುತ್ತಲೇ ಹೋಗಿದ್ದ. ಜ್ಞಾನ ಪಡೆದ ಮೇಲೆ ಬಯಲಲ್ಲದೆ ಬೇರೇನೂ ಉಳಿಯದು ಎಂದು ಆತನ ಬದುಕು ತೋರಿಸಿಕೊಟ್ಟಿತ್ತು. ತನ್ನ ಎಂಬತ್ತೆರಡನೆಯ ವಯಸ್ಸಿಗೆ ಚಳಿಗಾಲದ ಅಪರಾತ್ರಿಯಲ್ಲಿ ತನ್ನನ್ನು ಅರ್ಥ ಮಾಡಿಕೊಳ್ಳಬಲ್ಲ ಪ್ರೀತಿಪಾತ್ರ ಮಗಳಾಗಿದ್ದ ಅಲೆಕ್ಸಾಂಡ್ರಾಳ ಕೋಣೆಯ ಬಾಗಿಲು ತಟ್ಟಿದ, ’ಅಲೆಕ್ಸಾಂಡ್ರಾ, ನಾನು ಹೊರಡುತ್ತಿರುವೆ’, ಅಂದ. ’ಎಲ್ಲಿಗೆ?’ ಎಂದು ಮಗಳು ಕೇಳಿದ್ದಕ್ಕೆ, ’ಮತ್ತೆಂದೂ ಮರಳಿ ಬರದಿರುವಲ್ಲಿಗೆ’, ಎಂದು ಉತ್ತರ ನೀಡಿದ್ದ. ಅವು ೧೯೧೦ರ ಅಕ್ಟೋಬರ್‌ನ ಕೊನೆಯ ದಿನಗಳು. ಆಗ ಮನೆ ಬಿಟ್ಟವನು ಎರಡು ಮೂರು ದಿನ ಪಯಣಿಸಿದ. ಆದರೆ, ರೈಲು ಪಯಣ ಮುಂದುವರಿಸದಷ್ಟು ಆರೋಗ್ಯ ಹದಗೆಟ್ಟಿತು. ಕೊನೆಗೆ, ಅಸ್ತೊಪೊವೊ ರೈಲ್ವೆ ಸ್ಟೇಶನ್‌ ಮಾಸ್ಟರನ ಮನೆಯಲ್ಲಿ ಆತನನ್ನು ಇಳಿಸಲಾಯಿತು. ಗಂಟೆಗಂಟೆಗೂ ಆರೋಗ್ಯ ಕ್ಷೀಣಿಸುತ್ತ, ರಕ್ತಹೀನತೆಯಿಂದ ಲೆವ್‌ ಟಾಲ್‌ಸ್ಟಾಯ್ ಅಸುನೀಗಿದ್ದು “ನವೆಂಬರ್‌ ೭ (ಹೊಸ ಕಾಲಮಾನದ ಪ್ರಕಾರ ನವೆಂಬರ್‌ ೨೦), ಬೆಳಗಿನ ಜಾವ ಆರು ಗಂಟೆಗೆ. ಲೆವ್‌ ನಿಕೊಲೊವಿಚ್‌ ತೀರಿಕೊಂಡ.” (ಸೋಫಿಯಾಳ ದಿನಚರಿ).

ಲೆವ್‌ ತನ್ನ ಮಗಳು ಅಲೆಕ್ಸಾಂಡ್ರಾಳಿಗೆ ಒಮ್ಮೆ ಹೇಳಿದ್ದ: “ಬದುಕು ಒಂದು ಕನಸಿನಂತೆ. ಸಾವೊಂದು ಮಹಾ ಅರಿವಿನಂತೆ”.

ನಾನು ಮಹಾ ಅರಿವು ಪಡೆವ ಮೊದಲು, ನಮ್ಮ ತರುಣರು ಅತ್ಯವಶ್ಯಕವಾಗಿ ಓದಲೇಬೇಕಾದ ಈ ವೃದ್ಧನ ಬರಹಗಳ ವಾಚಿಕೆಯೊಂದನ್ನು ಸಿದ್ಧಪಡಿಸಿದಂತೆ ಕನಸುವೆ.


  • ಕೇಶವ ಮಳಗಿ (ಖ್ಯಾತ ಕತೆಗಾರರು,ಅನುವಾದಕರು ,ಲೇಖಕರು, ಕವಿಗಳು), ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW