‘ಪ್ರತ್ಯುಪಕಾರ’ ಸಣ್ಣಕತೆಗಳು

ವಿಜಯನಿಗೆ ತನ್ನ ಅಣ್ಣ ಜಯ್ಕುಮಾರನ ಅಂದರೆ ದೊಡ್ಡಮ್ಮನ ಮಗನ ಮದುವೆಗೆ ಗೊತ್ತಾಗಿದ್ದೇ ತಡ ಖುಷಿಯೋ ಖುಷಿ. ದೊಡ್ಡಮ್ಮನ ಮಗನ ಮದುವೆ ಯಾರಿಗೂ ಅಷ್ಟು ಖುಷಿಯಾಗುವುದಿಲ್ಲ. ಆದರೆ ವಿಜಯನಿಗೆ ತುಂಬಾ ಖುಷಿಯಾಗಿತ್ತು, ಕಾರಣವೇನು?…ಹರಿಹರ ಬಿ ಆರ್ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ… 

ತಂಗಿ ವೀಣಾ ಬಂದು “ಅಣ್ಣಾ ಅವರು ಎಲ್ಲರಿಗೂ ಅಣ್ಣನೇ ನನಗೇನು ಅಷ್ಟು ಖುಷಿಯಿಲ್ಲ. ನಿನಗ್ಯಾಕೆ ಅಷ್ಟೊಂದು ಖುಷಿಯಾಗ್ತಿದೆ?” ಎಂದು ಕೇಳಿದಳು.

” ನಿನಗೆ ಯಾಕೆ ಖುಷಿಯಾಗ್ತಿಲ್ಲವೋ ಗೊತ್ತಿಲ್ಲ. ಅವರ ಕಥೆ ನಿನಗೇನೂ ಗೊತ್ತಿಲ್ಲ. ನಿನಗೆ ಗೊತ್ತಿರೋದು ಬರೀ ಮಿಟಾಯಿಯಣ್ಣ, ಹೇಳ್ತೀನಿ ಕೇಳು’ಜಯಣ್ಣ ನಮ್ಮ ಮನೆಗೆ ಬಂದಾಗೆಲ್ಲ ನನಗೆ ತುಂಬಾ ಖುಷಿ ಆಗ್ತಾ ಇತ್ತು. ನಿನಗೆ ಎರಡು ವರ್ಷ ಇದ್ದಾಗ ಅಪ್ಪ ತೀರ್ಕೊಂಡಿದ್ದು ಗೊತ್ತಿದೆ. ಅಪ್ಪ ಹುಷಾರಿಲ್ದೇ ಆಸ್ಪತ್ರೆಗೆ ಸೇರಿದ್ದರು. ನನಗೂ ನಿನಗೂ ನಾಲ್ಕು ವರ್ಷ ಅಂತರ. ಅಂದರೆ ಆಗ ನನಗೆ ಆರು ವರ್ಷ. ನಾನು ಶಾಲೆಗೆ ಹೋಗ್ತಿದ್ದೆ. ಅಮ್ಮ ಮತ್ತೆ ಮಾವ ಸೇರ್ಕೊಂಡು ಆಸ್ಪತ್ರೆಯಲ್ಲಿದ್ದ ಅಪ್ಪನಿಗೋಸ್ಕರ ಓಡಾಟವಿರುತ್ತಿತ್ತು. ಜಯಣ್ಣ ಬಂದು ಅಮ್ಮನಿಗೆ ಸಹಾಯ ಆಗಲಿ ಅಂತ ಮನೆಯಲ್ಲಿದ್ದ ನಮಗೆಲ್ಲ ದಿನ ತಿಂಡಿ, ಊಟ, ಕಾಫಿ ಎಲ್ಲ ತರ್ತಿದ್ದರು. ಅಮ್ಮನಿಗೂ ಸಂಕೋಚ ಅನ್ನೋದಿತ್ತು. ಇನ್ನೊಬ್ಬರು ಅಂತ ಅವರಾಗೇ ಸಹಾಯ ಮಾಡ್ತಿದ್ದಾಗ ‘ಬೇರೆಯವರಿಗೆ ತೊಂದರೆ ಆಯ್ತಲ್ಲಾ’ ಅಂತ ಎಷ್ಟೋ ಸಾರಿ ಹೇಳ್ತಿದ್ದರು ಮತ್ತು ಬೇಸರಿಸಿಕೊಳ್ಳುತ್ತಿದ್ದರು.

ಹೀಗೆ ಹದಿನೈದು ವರ್ಷಗಳು ಕಳೆದಾಗ , ಅಪ್ಪ ದೇವರ ಹತ್ತಿರ ಸೇರ್ಕೊಂಡು ಬಿಟ್ಟಿದ್ದರು. ಅವರಿಗಿನ್ನು ಚಿಕ್ಕ ವಯಸ್ಸಾಗಿತ್ತು.” ಎಂದು

“ಹೌದು ಆಗಿನ್ನೂ ಅವರು ಯುವಕ” ಎಂದು ಅಮ್ಮ ಅಂಜನಾ ಹೇಳಲು ಮುಂದುವರೆಸಿದರು. “ಆಗ ನಿಮ್ಮ ದೊಡ್ಡಪ್ಪ ಅವರ ಕಾರ್ಯದ ಜವಾಬ್ದಾರಿಯನ್ನ ಮತ್ತೆ ನಿಮ್ಮಗಳ ಜಯಣ್ಣ ಓಡಾಟದ ಕೆಲಸ ವಹಿಸಿಕೊಂಡು ಮೇಲಿರೋ ನಿಮ್ಮಪ್ಪನಿಗೆ ಅಲ್ಲದೇ ನಮಗೆಲ್ಲ ಖುಷಿಯಾಗುವ ಹಾಗೆ ವೈಕುಂಠ ಸಮಾರಾಧನೆವರೆಗೂ ಚೆನ್ನಾಗಿ ನಡೆಸಿಕೊಟ್ಟರು. ಕಾಫಿ, ತಿಂಡಿ, ಊಟಗಳ ವ್ಯವಸ್ಥೆ ಮಾಡುತ್ತ ವೈಕುಂಠ ಸಮಾರಾಧನೆ ಆಗುವ ತನಕ ಅಷ್ಟೂ ದಿನ ಉಪಚಾರ ಮಾಡ್ಕೊಂಡು ಹೋಗಿದಾರೆ. ಒಂದು ನಯಾ ಪೈಸೆ ಕೇಳಲಿಲ್ಲ. ಕೊಡಕ್ಕೆ ಹೋದರೂ ಮುಟ್ಟಿದವರಲ್ಲ. ದೊಡ್ಡಪ್ಪನಾಗಿ ಅವರ ತಮ್ಮನಿಗೋಸ್ಕರ ಅಷ್ಟೆಲ್ಲ ಮಾಡಿರೋದು ನೋಡಿದರೆ ಅವರಿಬ್ಬರ ಪ್ರೀತಿಗಳ ವಿಷಯ ಗೊತ್ತಾಗುತ್ತೆ. ದೊಡ್ಡಪ್ಪನಿಗೆ ತಕ್ಕ ಮಗ ನಿಮ್ಮ ಜಯಣ್ಣ, ನಿನ್ನಣ್ಣ ವಿಜಯ್ ಬೆಳೆದು ದೊಡ್ಡವನಾಗುವ ತನಕ ದಿನ ಅವನಿಗೆ ಶಾಲೆಗೆ ಬಿಟ್ಟು ಬರುತ್ತಿದ್ದ” ಎಂದು ಹೇಳಿದರು.

ಫೋಟೋ ಕೃಪೆ : google

“ಅವನ್ನೇನು ನನ್ನನ್ನೂ ಬಿಡ್ತಿದ್ದ.” ಎಂದು ಹೇಳಿದಾಗ ಅವಳಿಗೂ ಅವನ ಮೇಲೆ ಈಗ ಗೌರವ ಭಾವ ಮೂಡಿತ್ತು.

ಭಾವುಕಗಳಾಗಿದ್ದ ಅವಳನ್ನು ವಿಜಯ್ ಸಮಾಧಾನ ಮಾಡಿ “ನನಗೆ ಅಪ್ಪ ಇರುವ ತನಕ ಕಷ್ಟ ಗೊತ್ತಾಗಿರಲಿಲ್ಲ. ಆಗಲೇ ಕಷ್ಟದ ಪರಿಚಯವಾಗಿದ್ದು. ವೀಣಾ…ಈಗ ಹೇಳು ಜಯಣ್ಣಂಗೆ ಮದುವೆ ಅಂದರೆ ಖುಷಿ ಹೌದೋ ಅಲ್ಲವೋ?” ಎಂದು ಕೇಳಿದ.

“ಕ್ಷಮಿಸಣ್ಣ. ನನಗೆ ಗೊತ್ತಿದ್ದ ಹಾಗೆ ಅವರು ನಮಗಾಗಿ ತಿಂಡಿ ಊಟ ಕೊಡುವುದಕ್ಕೋಸ್ಕರ ಬರ್ತಾರೆ. ಬಾಯ್ತುಂಬಾ ಮಾತಾಡಿಸ್ತಾರೆ ಮತ್ತೆ ಹೋಗ್ತಾರೆ. ಅಷ್ಟೇ ಅಂದುಕೊಂಡಿದ್ದೆ” ಎಂದು ಹೇಳುತ್ತಿದ್ದಳು.

“ಹೌದು ಕಣೇ. ತಪ್ಪೆಲ್ಲ ನನ್ನದೇ. ನಾನು ನಿನಗೆ ಬುದ್ಧಿ ಬಂದ ಮೇಲೆ ಈ ಎಲ್ಲ ವಿಷಯ ಹೇಳಬೇಕಾಗಿತ್ತು. ಸದ್ಯ ಈಗಲಾದರೂ ತಿಳಿಸಿದೆವಲ್ಲ. ವಿಳಂಬವೇನಾಗಿಲ್ಲ ಬಿಡು” ಎಂದ ಅಮ್ಮ ವೀಣಾಳ ತಲೆ ನೇವರಿಸುತ್ತಾ ಹೇಳುತ್ತಿದ್ದರು.

ಮದುವೆಯ ದಿನ ಬಂತು. ಮೂರು ದಿನ ಅಲ್ಲಿಯೇ ಉಳಿಯುವ ವ್ಯವಸ್ಥೆ ಮಾಡಿದ್ದರು. ದೊಡ್ಡ ಛತ್ರವದಾಗಿತ್ತು. ಅವರಿಗಾಗಿ ಒಂದು ಕೋಣೆಯನ್ನು ಕಾದಿರಿಸಿದ್ದರು. ಜಯಣ್ಣನ ಗೆಳೆಯ ಅವರೇ ಎಂದು ಖಾತರಿ ಪಡಿಸಿಕೊಂಡು ಅದರ ಕೀಲಿಯನ್ನು ಕೊಟ್ಟು, ಅವರಿಗಾಗಿ ಮುಂಚೆಯೇ ಸಿದ್ದವಾಗಿದ್ದ ತಿಂಡಿ ಕಾಫಿಯನ್ನು ಕೊಡಿಸಿ ಅಡುಗೆಯವರಿಗೂ ಇವರನ್ನು ಪರಿಚಯಿಸಿದ. ತನ್ನ ಜಂಗಮವಾಣಿ ಸಂಖ್ಯೆಯನ್ನು ಕೊಟ್ಟು “ಏನಾದರೂ ಬೇಕಾದಲ್ಲಿ ಕರೆಮಾಡಿ” ಎಂದವ ನಂತರ ತನ್ನ ಮುಂದಿನ ಕೆಲಸಕ್ಕೆ ಹೊರಟಿದ್ದ.

ಅಲ್ಲಿಗೆ ಮೊದಲು ಬಂದವರೆಂದರೆ ಹುಡುಗಿಯ ಕಡೆಯವರು. ಅವರು ತಾವು ತಂದಿದ್ದ ಎಲ್ಲ ಸಾಮಾನುಗಳ ಪಟ್ಟಿಗೆಯನ್ನು ಇಳಿಸಿಕೊಂಡಿದ್ದರು. ಕೊಠಡಿಗೆ ರವಾನಿಸುತ್ತಿರುವಾಗ ವೀಣಾ ಆಡುತ್ತಿದ್ದವಳು. ಅವಳಿಗೆ ಇದೆಲ್ಲ ಹೊಸದು. ಅಲ್ಲಿ ಏನು ಮಾಡುತ್ತಾರೆಂದು ಅಲ್ಲಿಯೇ ನಿಂತು ನೋಡುತ್ತಿದ್ದಳು. ಆಗ ಅವರು ಕತ್ತರಿಗಾಗಿ ಅವರ ಮಾತುಗಳಿಂದ ಗೊತ್ತಾಯಿತು.

ಹುಡುಗಿಯ ಅಮ್ಮ ಎಂದು ಅವರ ಮಾತುಗಳಿಂದ ಗೊತ್ತಾಗುತ್ತಿತ್ತು. ಗಂಡನ ಬಳಿ ಹೋಗಿ “ರೀ ಕತ್ತರಿಗಳೆಲ್ಲ ಇಟ್ಟಿದ್ದೆವಲ್ಲ. ಆ ಪೆಟ್ಟಿಗೆ ಕಾಣ್ತಿಲ್ಲ.”

“ಓ ಅದಾ ಆ ಪೆಟ್ಟಿಗೆ ಸಮೇತ ಬಾಗಿಲ ಪಕ್ಕದಲ್ಲೇ ಇಟ್ಟಿದ್ದೆನಲ್ಲ”

“ನಿಮ್ಮ ತಲೆ !! ಈಗ ಜ್ಞಾಪಕಕ್ಕೆ ಬಂತು ಬಾಗಿಲು ತೆಗೆದು ಆಚೆಗೆ ಹೋಗುವಾಗ ಬಾಗಿಲ ಹಿಂದೆ ಇರೋದು ಯಾರಿಗೂ ಕಾಣ್ಲಿಲ್ಲ. ಸರಿ ಮನೆಯಲ್ಲಿ ಯಾರಾದರೂ ಇದ್ದರೆ ಅದನ್ನೂ ತಗೊಂಡು ಬರಕ್ಕೆ ಹೇಳಿ” ಎಂದು ಚಿಂತಾಕ್ರಾಂತರಾಗಿ ಹೇಳುತ್ತಿದ್ದಾಗ, ಅವರ ಹುಬ್ಬುಗಳ ಮಧ್ಯೆ ತುಸು ಕೋಪ ತೋರುತ್ತಿತ್ತು.

ಫೋಟೋ ಕೃಪೆ :google

ಜಯಣ್ಣ ಯಾವಾಗಲೋ ಒಮ್ಮೆ ಹೇಳಿದ್ದು “ಯಾರಾದರೂ ಏನಾದರೂ ಬೇಕಾದ್ದನ್ನು ನೀರಾಗಬಹುದು ಅಥವಾ ಚಿಕ್ಕ ಚಿಕ್ಕ ವಸ್ತುಗಳಾಗಬಹುದು. ಅದರ ಬಗ್ಗೆ ಸರಿಯಾಗಿ ಸಂಪೂರ್ಣವಾಗಿ ಕೇಳಿಸಿಕೊಂಡು ನಮ್ಮ ಕೈಲಾದರೆ ಸಹಾಯ ಮಾಡಬೇಕು” ಎಂಬ ಮಾತು ನೆನಪಾಯಿತು. ತಕ್ಷಣ ಎಲ್ಲಿರುವೆನೆಂದು ಮರೆತು ಓಡಲು, ಆಗ ತನ್ನ ಮನೆಯಲ್ಲವೆಂದು ತಿಳಿದು ಸೀದ ಅಮ್ಮನ ಕಡೆ ಓಡಿ, ಅಮ್ಮನಿಗೆ ನಡೆದುದೆಲ್ಲವನ್ನು ಹೇಳಿದಳು. ಇಂತಹ ಅವಶ್ಯವಿರುವ ವಸ್ತುಗಳಿರಲಿ ಎಂದು ತಂದಿದ್ದು ಒಳ್ಳೆಯದಾಯಿತೆಂದು ಅವಳಿಗೆ ಕತ್ತರಿಯನ್ನು ಕೊಟ್ಟು “ಅವರಿಗೆ ಕೊಡು. ನೀನು ಕತ್ತರಿ ಉಪಯೋಗಿಸಬೇಡ. ನಿಧಾನವಾಗಿ ಹೋಗು ಜೋಪಾನ” ಎಂದು ಹೇಳಿ ಕೊಟ್ಟರು.

ಅವಳು ರೇಗಾಡಿಕೊಂಡು “ಆಯ್ತಮ್ಮ” ಎಂದು ಹೇಳುತ್ತಾ, ಅವರಿದ್ದಲ್ಲಿಗೆ ಹೋಗಿ ಕೊಟ್ಟಳು.

“ರೀ ನಾವಿನ್ನೂ ಮಾತಾಡ್ತಿದೀವಿ ಎಷ್ಟು ಬೇಗ ತಂದ್ಕೊಂಟ್ಟಿದಾಳೆ ನೋಡ್ರಿ. ಯಾರಮ್ಮಾ ನೀನು?”

ಅವಳಿಗೇನೂ ತೋಚದೇ ಅವರನ್ನೇ ನೋಡುತ್ತಿರುವಾಗ “ಓ ನೀನು ಅಡುಗೆಯವರ ಮಗಳಾ?” ಎಂದು ಮತ್ತೆ ಕೇಳಿದರು.

“ಅಲ್ಲ”. ಮುಂದೆ ಮಾತನಾಡಲು ತೋಚದೆ ಅಮ್ಮನ ಬಳಿ ಓಡಿಹೋಗಿ ಮತ್ತೆ ಮಾತುಕತೆಗಳ ವಿಷಯ ತಿಳಿಸಿದಳು. ಆಗ ಅಂಜನಾ ಹುಡುಗಿಯ ತಾಯಿಯ ಬಳಿ ಹೋಗಿ, ತನ್ನ ಪರಿಚಯ ಮಾಡಿಕೊಳ್ಳುತ್ತ ಹಾಗೂ ಹುಡುಗನ ಕಡೆಯವರಾದ್ದರಿಂದ ಅಷ್ಟಾಗಿ ಏನು ಕೆಲಸವಿರೋದಿಲ್ಲವೆಂದು ತಿಳಿದು “ನನಗೇನು ಕೆಲಸವಿಲ್ಲ. ಅದೇನು ಬೇಕೋ ಹೇಳಿ. ಮಾಡೋಣ” ಎಂದು ಅವರ ಒಪ್ಪಿಗೆ ಪಡೆದು ಸಹಾಯ ಮಾಡಲು ಮುಂದಾದರು.

ಜಯಣ್ಣ ವರನಾಗಿ ಪ್ರವೇಶಿಸುತ್ತಿರುವಾಗ ಅವರನ್ನು ಪರಿಚಯಿಸ ಹೊರಟಾಗ ಅವರೇ ಅಂಜನಾ ಬಗ್ಗೆ ಹೇಳಿದಾಗ ಅವನು ಆಶ್ಚರ್ಯ ವ್ಯಕ್ತಪಡಿಸಿ ಖುಷಿಯಾಗಿದ್ದ. ಹೀಗೆ ವಧುವಿನ ಅಮ್ಮನಿಗೆ ಪರಿಚಯವಾಗಿ ಅಂಜನಾ ಕೊನೆಯ ದಿನದ ತನಕ ಅವರಿಗಾಗಿ ತನ್ನ ಮಕ್ಕಳೊಂದಿಗೆ ಸಹಾಯ ಹಸ್ತ ಚಾಚಿದ್ದರು.

ಸಮಾರಂಭ ಮುಗಿವ ಸಮಯದಲ್ಲಿ ಅಲ್ಲಿಂದ ಪರಸ್ಪರ ಬೀಳ್ಕೊಡುವಾಗ ಮಾತನಾಡಿದರೆ ಎಲ್ಲರಿಗೂ ಗೊತ್ತಾಗಿ ನಾವು ಸಹಾಯ ಮಾಡಿಲ್ಲವೇ ಎಂದು ಹೇಳಲು ಬರಬಹುದೆಂದು ಭಾವಿಸಿ ಬೆಲೆ ಬಾಳುವ ಉಡುಗೊರೆ ನೀಡುತ್ತ ಮೌನವಾಗಿ ‘ಕಂಗಳಲ್ಲೇ ವಂದನೆ ಹೇಳಿ’ ಕೊಡುತ್ತಿರುವಾಗ ಇಬ್ಬರ ಕಂಗಳಲ್ಲೂ ಆನಂದಬಾಷ್ಪದ ನೀರುಗಳಾಡಿತ್ತು. ಅಂಜನಾ ಅವರೂ ಸಹ ಜಯಣ್ಣನನ್ನು ಕಂಡು ಅದೇ ರೀತಿಯ ಭಾವದಿಂದ ತಮ್ಮ ಕಂಗಳು ವಂದನೆ ಹೇಳುವುದನ್ನು ತಿಳಿಸುತ್ತಿದ್ದವು.


  • ಹರಿಹರ ಬಿ ಆರ್ – ಅಕ್ಷಂತಲ ಬರಹ, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW