ಕುಗ್ರಾಮದ ಯುವತಿ ಹೆಸರಿಗೆ ತಕ್ಕಂತೆ ಪ್ರತಿಮೆ. ಏನಾದರೂ ಸಾಧಿಸಿ ತನ್ನೂರಿನ ಹೆಸರನ್ನು ಇಡೀ ಸಮಾಜಕ್ಕೆ ಕೀರ್ತಿ ಪತಾಕೆ ಹಾರಿಸುವ ಹಂಬಲ. ಇದಕ್ಕಾಗಿ ಆಯ್ದುಕೊಂಡಿದ್ದು ಮೈಕ್ರೋ ದಾಖಲೆ ಹಾದಿ.
ಹೌದು, ಪ್ರತಿಭಾಳ ಸಾಧನೆಯ ಹಾದಿ ವಿಭಿನ್ನ. ಅತಿ ಸಣ್ಣ ಪುಸ್ತಕ ದಲ್ಲಿ ವಿಶ್ವದ ಮಾಹಿತಿಯನ್ನು ರಚಿಸಿದ್ದಾರೆ. ಅಲ್ಲದೆ ಅತಿ ಕಿರಿದಾದ ಹಾಳೆಯಲ್ಲಿ ತ್ರಿವರ್ಣ ಧ್ವಜ ಮಾಡಿದ್ದಾರೆ. ಇದೆಲ್ಲಾ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಯಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಶೃಂಗೇರಿ ಹನುಮನಹಳ್ಳಿ ಗ್ರಾಮದ ಬಿ.ಎಚ್.ರುದ್ರೇಶ್, ಭವಾನಿ ಪಟೇಲ್ ದಂಪತಿಯ ಪುತ್ರಿ ಪ್ರತಿಮಾ. ಕೇವಲ ೧.೫ ಸೆ.ಮೀ ಉದ್ದದ ಪುಸ್ತಕ ರಚನೆ ಮಾಡಿದ್ದಾರೆ. ಈ ಪುಟ್ಟ ಪುಸ್ತಕದಲ್ಲಿ ಕನ್ನಡ ಮಾತ್ರವಲ್ಲ ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಅಸ್ಸಾಂ, ಇಂಡೋನೇಷ್ಯಾ ಸೇರಿದಂತೆ ೨೪ ಭಾಷೆ ಯಲ್ಲಿ ಹಲವು ಮಾಹಿತಿಗಳಿವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆ, ಬಸವಣ್ಣನ ವಚನಗಳು, ಭಗವದ್ಗೀತೆ ಯ ಶ್ಲೋಕ, ರಾಮಾಯಣದ ರಾಮನ ಜೀವನ ಚರಿತ್ರೆ, ಪ್ರಧಾನಿ ನರೇಂದ್ರ ಮೋದಿ ಕುರಿತು ಸೇರಿದಂತೆ ಹಲವು ವಿಚಾರಗಳು ಕಿರಿದಾದ ಪುಸ್ತಕಗಳನ್ನೊಳಗೊಂಡಿವೆ. ಅವರ ಹುಟ್ಟೂರು ಜಿಲ್ಲೆಯ ಮಾಹಿತಿಯು ಇದರಲ್ಲಿ ಲಭ್ಯವಿದೆ.
ಪ್ರತಿ ಪುಸ್ತಕ ೨೦ ಪುಟಗಳಿಂದ ೧೪೦ ಪುಟಗಳವರೆಗೆ ಇದೆ. ಇನ್ನು ಈ ಪುಸ್ತಕ ದ ಮತ್ತೊಂದು ವಿಶೇಷವೆಂದರೆ ಪ್ರತಿಯೊಂದು ಹಾಳೆಯು ವಾರ್ಟ ಪ್ರೂಫ್ ಇದೆ. ಜತೆಗೆ ಉತ್ತಮ ಬೈಡಿಂಗ್ ಸಹ ಇದೆ. ಕಿರು ಪುಸ್ತಕ ಪ್ರಿಂಟ್ ಮಾಡಿದ್ದಲ್ಲ. ಬದಲಾಗಿ ಕೈ ಬರವಣಿಗೆಯಲ್ಲಿಯೇ ಪುಸ್ತಕ ರಚನೆಯಾಗಿದೆ. ಕಂಪ್ಯೂಟರ್ ನಿಂದ ಪ್ರಿಂಟ್ ಆದ ವೇಸ್ಟ್ ಪೇಪರ್ ನಿಂದ ಪುಸ್ತಕ ಮಾಡಲಾಗಿದೆ.
ಪ್ರತಿಭಾಳ ಮತ್ತೊಂದು ಸಾಧನೆ ಎಂದರೆ, ಅತಿಸಣ್ಣದಾದ ಹಾಳೆಯಲ್ಲಿ ಉದ್ದದ ತ್ರಿವರ್ಣ ಧ್ವಜ ರೂಪಿಸಿದ್ದಾರೆ. ೧೫ ಎಂಎಂ ಹಾಳೆಯಲ್ಲಿ ೪೦೦ ಮೀರ್ಟ ಗಿಂತ ಉದ್ದ ರೂಪಿಸಿ ದಾಖಲೆ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಈ ದಾಖಲೆ ಬರೆದ ಪ್ರತಿಭಾ ಅದನ್ನು ದೇಶದ ಯೋಧರಿಗೆ ಅರ್ಪಿಸಿದ್ದಾರೆ.
ಇನ್ನು ಪ್ರತಿಭಾಳ ವೈಯಕ್ತಿಕ ವಿಷಯಕ್ಕೆ ಬರುವುದಾದರೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊನ್ನಕಾಲುವೆಯಲ್ಲಿ ಪ್ರಾಥಮಿಕ ಶಿಕ್ಷಣ, ಚಿಕ್ಕಜಾಜೂರಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಬಳಿಕ ಎಸ್ ಜೆಎಂ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ಮಾಡಿದ್ದಾರೆ. ತದನಂತರ ಬೆಂಗಳೂರಿಗೆ ಉದ್ಯೋಗ ಹರಿಸಿ ಬಂದು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಲೇ ಬಿಎಸ್ಸಿ ಪದವಿ ಪಡೆದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಾಧನೆಯ ಹಾದಿಯಲ್ಲಿರುವ ಪ್ರತಿಭಾಳ ಪ್ರತಿಭೆ ನಾಡಿನಲ್ಲಿ ಮತ್ತಷ್ಟು ಪಸರಿಸಲಿ ಎಂದು ಹಾರೈಸೋಣ.
ಲೇಖನ : ಪ್ರಭುಸ್ವಾಮಿ ನಟೇಕರ್ (ಲೇಖಕರು ಮತ್ತು ಪತ್ರಕರ್ತರು)
(ನಿಮ್ಮಲ್ಲಿಯೂ ಸಾಹಸಿಗರು,ವಿಶೇಷ ವ್ಯಕ್ತಿಗಳಿದ್ದರೇ ಅವರ ಬಗ್ಗೆ ಲೇಖನ ಬರೆದು ಕಳುಹಿಸಿ. ನಾವು ಅದನ್ನು ಪ್ರಕಟಿಸುತ್ತೇವೆ)