ಶತಕ ಪೂರೈಸಿದ ಕನ್ನಡ ಪರಿಷತ್ತು ಪ್ರಥಮ ಬಾರಿಗೆ ಸಾಧಕರೊಡನೆ ಸಂವಾದ ಎಂಬ ನೂತನ ಕಾರ್ಯಕ್ರಮವನ್ನು ೨೦೧೬ ಜೂನ್ ತಿಂಗಳಿಂದ ಆರಂಭಿಸಿದೆ. ಕನ್ನಡ ನಾಡಿನಲ್ಲಿ ಸಾಹಿತ್ಯ, ಸಂಗೀತ, ಕಲೆ,ಕೃಷಿ,ಕನ್ನಡ ಹೋರಾಟ, ಸಂಸ್ಕೃತಿ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಆಹ್ವಾನಿಸಿ ಅವರೊಂದಿಗೆ ಅರ್ಥಪೂರ್ಣ ಸಂವಾದ ನಡೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದ ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ಮಹತ್ವದ ಪಾತ್ರವಹಿಸುತ್ತದೆ.ಪ್ರತಿ ತಿಂಗಳು ನಾಲ್ಕನೇ ಶನಿವಾರ ಸಂಜೆ ಈ ಕಾರ್ಯಕ್ರಮ ಕನ್ನಡ ಸಾಹಿತ್ಯ ಪಾರಿಷತ್ತಿನಲ್ಲಿ ಜರುಗುತ್ತದೆ.
ಶ್ರೀ.ಶ್ರೀನಿವಾಸ ಜಿ.ಕಪ್ಪಣ್ಣಅವರ ಪರಿಚಯದ ಒಂದು ಕಿರು ನೋಟ :
ಶ್ರೀ.ಶ್ರೀನಿವಾಸ ಜಿ.ಕಪ್ಪಣ್ಣ ಕರ್ನಾಟಕ ರಂಗಭೂಮಿ ಕಂಡ ಅಪ್ಪಟ ಅನನ್ಯ ಸಾಂಸ್ಕೃತಿಕ ಪ್ರತಿಭೆ, ೧೯೪೮, ಫೆಬ್ರವರಿ ೧೩ರಂದು ಕಪ್ಪಣ್ಣನವರ ಜನನವಾಯಿತು. ರಾಜ್ಯದೆಲ್ಲೆಡೆ ರಂಗಭೂಮಿಯ ಜನ ಕಪ್ಪಣ್ಣ ಅವರನ್ನು ಒಬ್ಬ ಸಾಂಸ್ಕೃತಿಕ ರಾಯಬಾರಿಯೆಂದೇ ಗುರುತಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೆನಿಸಿದೆ.
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ, ಕಪ್ಪಣ್ಣ ನವರ ರಂಗ ಚಟುವಟಿಕೆಗಳಿಗೆ ಉತ್ತೇಜನ ನೀಡಿದವರು ಪದ್ಮಭೂಷಣ ಡಾ.ಹೆಚ್. ನರಸಿಂಹಯ್ಯ ಮತ್ತು ಮೇಕಪ್ ನಾಣಿಯವರು. ರಂಗದ ಬೆಳಕಿನ ವಿನ್ಯಾಸ, ರಂಗವಿನ್ಯಾಸ, ನಾಟಕಗಳ ಉಸ್ತುವಾರಿಯನ್ನು ನಿರ್ವಹಿಸುತ್ತಾ, ಜಾನಪದ ಹಾಗೂ ಶಾಸ್ತ್ರೀಯ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಾ,ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಪ್ರೊ.ಬಿ. ಚಂದ್ರಶೇಖರ, ಶ್ರೀ.ಬಿ.ವಿ.ಕಾರಂತ, ಶ್ರೀ.ಎಂ.ಎಸ್.ಸತ್ಯು, ಶ್ರೀ. ಸಿ.ಆರ್.ಸಿಂಹ ಮುಂತಾದ ಕನ್ನಡದ ಶ್ರೇಷ್ಠ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವ ಕಪ್ಪಣ್ಣವರಿಗಿದೆ. ನಟರಂಗ ತಂಡದ ಕಾರ್ಯದರ್ಶಿಗಳಾಗಿ ಇವರು ಮಾಡಿದ ಕೆಲಸ ಅನುಪಮವಾದುದು. ಆ ತಂಡ ಪ್ರದರ್ಶಿಸಿದ ನಾಟಕಗಳಿಗೆ ಇವರು ಬೆಳಕು ಸಂಯೋಜನೆ ಮಾಡಿದ್ದು ಸಾವಿರಕ್ಕೂ ಹೆಚ್ಚು ಸಾರಿ.ಜನಪ್ರಿಯ ಟಿ.ವಿ ಧಾರಾವಾಹಿಗಳಾದ ಮಾಲ್ಗುಡಿ ಡೇಸ್, ಮುಕ್ತ-ಮುಕ್ತದಲ್ಲಿ ಅಭಿನಯಯಿಸಿದವರು. ಕನ್ನಡ ರಂಗ ಭೂಮಿಯ ಅನೇಕ ದಿಗ್ಗಜರ ಸಾಕ್ಷ್ಯ ಚಿತ್ರಗಳನ್ನು, ಹಲವಾರು ಪ್ರಖ್ಯಾತ ವ್ಯಕ್ತಿಗಳ ಸಂದರ್ಶಗಳನ್ನು ಕಪ್ಪಣ್ಣ ಮಾಡಿದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರಿಯ ಮಟ್ಟದಲ್ಲಿ ಜರುಗಿದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಂದಾಳತ್ವವನ್ನು ವಹಿಸಿದ್ದಾರೆ.
ಇವರಿಗೆ ಸಂದ ಬಿರುದು ಪ್ರಶಸ್ತಿಗಳು ಹಲವಾರು,ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಪ್ರಶಸ್ತಿ, ಕೆ.ವಿ.ಶಂಕರೇಗೌಡ ಪ್ರತಿಷ್ಠಾನ ಪ್ರಶಸ್ತಿ,ಮುಂಬಯಿ ಕರ್ನಾಟಕ ಸಂಘದ ಸಾಂಸ್ಕೃತಿಕ ರಾಯಬಾರಿ ಬಿರುದು- ಇವೇ ಮುಂತಾದವು.