‘ಜಿಂಕೆಯಂತೆ ಕ್ಷಣದಲ್ಲಿ ಮಟ್ಟಮಾಯ ಆಗುವ ನನ್ನಾಕೆ’… ಡಾ. ಸಿದ್ದು ಸಾವಳಸಂಗ ಅವರ ಕವನದಲ್ಲಿನ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನನ್ನವಳ ಹೆಸರು ಪ್ರೇಮ !
ಮದುವೆಯಾದಾಗಿನಿಂದ
ಊದುತ್ತಿದ್ದಾಳೆ ಬರೀ ಪುರಾಣ !
ಕೇಳಿ ಕೇಳಿ ನಾನಾದೆ ನಿತ್ರಾಣ
ಹಗಲಿರುಳು ದೇವರ ಪೂಜೆ !
ರಾತ್ರಿ ಜೋರಾಗಿ ಗೊರಕೆ ನಿದ್ದೆ
ಮಲಗಿದರೆ ಎಚ್ಚರಾಗದ ಕುಂಬಕರ್ಣೆ
ನನ್ನದು ಮಾತ್ರ ಅವಳ ನೆನಪಲ್ಲೇ ಜಪಯಜ್ಞ !!
ಹಗಲೋ ಅವಳು ಅಡುಗೆ
ಅದು-ಇದು ಎಂದು ಓಡಾಟ !
ನನ್ನದು ನೌಕರಿಯ ಜಂಜಾಟ
ಸರಿಯಾಗಿ ಮಾತನಾಡಿಸಲು ಸಮಯವಿಲ್ಲ !
ಹೋಗಲಿ ಮುತ್ತು ಕೋಡೋಣವೆಂದರೆ
ಜಿಂಕೆಯಂತೆ ಕ್ಷಣದಲ್ಲಿ ಮಟ್ಟಮಾಯ !
ಮತ್ತೆಲ್ಲಿ ಹುಡುಕಲಿ ಈ ಮಾಯಾಂಗನೆಯನ್ನ
ಅವಸರವಾಗಿ ಕಚೇರಿಗೆ ಹೋಗಿಯೇ ಬಿಡುವೆ !!
ತಿಂಗಳಾಯಿತು ಅವಳು ನಾನು ದೂರ ದೂರ
ಒಂದೇ ಹಾಸಿಗೆಯಲ್ಲಿದ್ದರೂ ಅಪರಿಚಿತರಂತೆ ?
ಇವಳೇನು ಹೆಣ್ಣೋ ಅಥವಾ ಹೆಣ್ಣು ವೇಶದ ಗಂಡೋ ?
ಈಗ ಮತ್ತಷ್ಟು ಆತಂಕ !
ಇವಳು ತೃತೀಯ ಲಿಂಗಿಯಾಗಿದ್ದರೆ ?
ನನ್ನ ಪಾಡು ನಾಯಿ ಪಾಡು !
ನಗುವವರ ಮುಂದೆ ನಗ್ಗೇಡಿ
ಅಯ್ಯೋ ದೇವರೇ ಎಂಥವಳೊಂದಿಗೆ ನನ್ನ ಮದುವೆ
ಕಾರು ಉಪ್ಪು ತಿಂದಿರುವ ಗಂಡು ನಾನು
ಮುಂದಿಟ್ಟ ರುಚಿಯಾದ ಹಣ್ಣನ್ನು ತಿನ್ನಲಾಗಲಿಲ್ಲವೆಂದರೆ ಹೇಗೆ !!
ನಾನು ಕೈಲಾಗದ ಅಸಹಾಯಕ ಗಂಡೆ ?
ಒಂದು ರಾತ್ರಿ ಮಲಗುವ ಮೊದಲೇ
ಅವಳ ಹಿಡಿದೆ, ಅವಳೋ ಭಯಂಕರ ಗಾಭರಿ !
ಏನಿದು ಹುಡುಗಾಟ ?
ನಾನು ಇಷ್ಟವಾಗಿಲ್ಲದಿದ್ದರೆ ಮದುವೆಯೇಕಾದೆ ?
ನಾನು ನಿನಗೆ ಆಟದ ಗೊಂಬೆನಾ ?
ಎಂದು ದಬಾಯಿಸಿದೆ !
ಅವಳ ಕಣ್ಣಲ್ಲಿ ಗಳಗಳ ಗಂಗೆ ಹರಿಯಲಾರಂಭಿಸಿತು !!
ನನ್ನನ್ನು ಕ್ಷಮಿಸಿಬಿಡಿ
ನಿಮಗೆ ನಾನು ಬಹಳ ಅನ್ಯಾಯ ಮಾಡಿದೆ !
ಮದುವೆಯ ಮೊದಲು
ಮನೆ ಗುರುಗಳ ಮಾರ್ಗದರ್ಶನದಂತೆ
ವ್ರತವೊಂದನ್ನು ಕೈಗೊಂಡಿದ್ದೆ !
ನಮ್ಮ ಸಂಸಾರ ಸುಖವಾಗಿ ಸಾಗಲೆಂದು
ಬಹಳ ನಿಯಮಬದ್ಧವಾಗಿ ಮಾಡಬೇಕಾಗಿತ್ತು !
ನಾಳೆಯೇ ನನ್ನ ವ್ರತ ಮುಗಿಯುತ್ತದೆ
ನಾನು ನಿಮ್ಮವಳೇ !
ನಾಳೆಯಿಂದ ನಾನು ಸಂಪೂರ್ಣ
ನಿಮಗೇ ಅರ್ಪಿಸಿಕೊಳ್ಳುವೆ !!
ಏನೇನೋ ಕಲ್ಪನೆಯಲ್ಲಿ ಮುಳುಗಿದ್ದ
ನನಗೆ ಸಮಾಧಾನವಾಯಿತು !
ಪತ್ನಿಯ ಮೇಲೆ ಪ್ರೀತಿ ಇಮ್ಮಡಿಸಿತು !!
- ಡಾ. ಸಿದ್ದು ಸಾವಳಸಂಗ, ತಾಜಪುರ – ಹಿರಿಯ ಕನ್ನಡ ಉಪನ್ಯಾಸಕರು, ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರ.
