ಕಥೆಗಾರರಾದ ವಿ.ವಿ. ಗೋಪಾಲ್ ಅವರ ‘ಪ್ರೀತಿ ಮಮತೆಗಳ ನಡುವೆ’ ಕೃತಿಯಲ್ಲಿನ ಕತೆಗಳ ಕುರಿತು ವಿಮರ್ಶಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಪ್ರೀತಿ ಮಮತೆಗಳ ನಡುವೆ
ಲೇಖಕರು : ವಿ.ವಿ. ಗೋಪಾಲ್
ಕಾವ್ಯಕಲಾ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ:೨೦೧೯.
ಪುಟಗಳು : ೧೫೨.
ಬೆಲೆ: ೧೩೦.00
ಲೇಖಕರ ಸಂಪರ್ಕ ಸಂಖ್ಯೆ. 9480317803.
ಲೇಖಕರಾದ ವಿ.ವಿ. ಗೋಪಾಲ್ ಇವರು ಈಗಾಗಲೇ ‘ಜಾಲಿಯ ನೆರಳಿನಿಂದ ಜಾಜಿಯ ತೋಟಕ್ಕೆ’ ಎನ್ನುವ ಕಾದಂಬರಿಯೊಂದನ್ನು ಬರೆದಿದ್ದಾರೆ. ಇವರ ೧೫ ವೈವಿಧ್ಯಮಯವಾದ ಕಥೆಗಳ ಸಂಕಲನವಿದು. ಇದೀಗ ಓದಿದ ‘ಪ್ರೀತಿ ಮಮತೆಗಳ ನಡುವೆ’ ಕೃತಿಯಲ್ಲಿನ ಕಥೆಗಳ ಪರಿಚಯ ಹೀಗಿದೆ…

*ಪ್ರೀತಿ ಮಮತೆಗಳ ನಡುವೆ :
ಮೂರ್ತಿ ಎಂಬ ಯುವಕ ತಾನು ಪ್ರೀತಿಸುತ್ತಿದ್ದ ತರುಣಿ ಶೀಲಾಳನ್ನು ಹೆತ್ತವರಿಗೆ ಭೇಟಿ ಮಾಡಿಸಿ ತನ್ನೂರಿನ ರಮಣೀಯಪ್ರಕೃತಿ ಸೌಂದರ್ಯವನ್ನು ತೋರಿಸಲು ಕರೆ ತರುತ್ತಾನೆ. ಅಂದು ಜಲ ಪ್ರಳಯ ಸ್ವರೂಪಿ ಮಳೆ ಸುರಿದು ಪ್ರೇಮಿಗಳು ಸಿಕ್ಕಿ ಹಾಕಿ ಕೊಳ್ಳುತ್ತಾರೆ. ನೆಲದಲ್ಲಿ ಕಾಲಿಟ್ಟರೆ ಹುಗಿದು ಹೋಗುತ್ತಾ, ಭೀಕರ ಪ್ರವಾಹದಿಂದ ರಕ್ಷಿಸಿ ಕೊಳ್ಳಲು ಹೆಣಗಾಡುತ್ತಾರೆ. ಅತ್ತ ಮೂರ್ತಿಯ ಅಪ್ಪ ಅಮ್ಮ ಕೂಡ ಮುಳುಗಡೆ ಪ್ರದೇಶದಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.ಅಪ್ಪ ಅಮ್ಮನ ಮಮತೆ ಹಾಗೂ ಪ್ರೀತಿಸಿದ ಹುಡುಗಿ ಇಬ್ಬರ ನಡುವೆ ಪರದಾಡುವ ಯುವಕನ ಪರಿಸ್ಥಿತಿಯನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಎಲ್ಲವನ್ನೂ ಕಳೆದುಕೊಂಡ ಅವರೆಲ್ಲಾ ಜೀವಂತವಾಗಿ ಉಳಿದರೆ?.. ಹಾಗಾದರೆ ಅವರು ಇದ್ದುದೆಲ್ಲಿ?….
* ಅವರವರ ಸಂಸ್ಕಾರ :
ಕ್ಷುದ್ರ ಗ್ರಹವೊಂದು ಭೂಮಿಗೆ ಅಪ್ಪಳಿಸುವುದೆಂದು ತಿಳಿದಾಗ ಜನರು ರಕ್ಷಣೆಯ ದಾರಿ ಹುಡುಕುತ್ತಾ ದೇವರ ಮೊರೆ ಹೋಗುತ್ತಾರೆ. ಆದರೆ ರಾಜಕಾರಣಿಗಳು ತಾವೂ ತಮ್ಮವರೂ ಉಳಿಯಲು ಲೆಕ್ಕ ಹಾಕುವುದು, ಅಲ್ಲೂ ಜನರನ್ನು ಜಾತಿಯಾಧಾರಿತವಾಗಿ ಆರಿಸ ಬೇಕೆಂದು ಬಯಸುತ್ತಾರೆ. ಕೊನೆಯಲ್ಲಿ ಕ್ಷುದ್ರಗ್ರಹ ಪತನ ಗೊಳ್ಳುತ್ತದೆ. ಆದರೆ ಇಲ್ಲಿ ಮನುಷ್ಯತ್ವದ ಪತನವಾಗುವುದನ್ನು ಸಮೀಕರಿಸಿ ಹೇಳಿದ ರೀತಿ ಚೆನ್ನಾಗಿದೆ.
* ಸಾವಿನ ಗುಹೆ :
ಬೃಹದಾಕಾರದ ಆ ಗುಹೆಯಲ್ಲಿ ಸಾಹಸಿಗಳು ಒಳ ಹೊಕ್ಕು ಏನೇನೋ ಶೋಧಿಸಿ ಹೊರ ಬರುವ ರೋಮಾಂಚಕಾರಿ ಸಾಹಸದ ಕಥೆ. ಹಾಗಾದರೆ ಆ ಗುಹೆಯಲ್ಲಿ ಏನಿತ್ತು?
* ಆಯ್ಕೆ :
ಬಾಳಿನ ಇಳಿ ವಯಸ್ಸಲ್ಲಿ ಹೆಂಡತಿಯನ್ನು ಕಳೆದು ಕೊಂಡ ವ್ಯಕ್ತಿಯೊಬ್ಬ ಮುಂದೇನು ಮಾಡಬೇಕೆಂದು ಯೋಚಿಸುವ ರೀತಿಯನ್ನು ಬಹಳ ಮಾರ್ಮಿಕವಾಗಿ ಇಲ್ಲಿ ವಿವರಿಸಿದ್ದಾರೆ.
ತನ್ನ ಮನೆಯಲ್ಲಿ ಬಂದಿರು ಎಂದು ಕರೆಯುವ ಮಗ ಹಾಗೂ ಮಗಳು ಇಬ್ಬರ ಪ್ರೀತಿಗೆ ಮಣಿದರೂ, ಕೊನೆಗೆ ಅವರ ಆಯ್ಕೆ ಯಾವುದು?…
* ಮುಳ್ಳರಳಿ ಹೂವಾಗಿ :
ದೀಪಕ್ ಅಂದಗಾರ ಯುವಕ. ಗಳಿಕೆಯ ದಾರಿ ನ್ಯಾಯವೋ, ಅನ್ಯಾಯವೋ ಅದವನಿಗೆ ಬೇಕಿಲ್ಲ.ಆದರೆ ನಡೆಸುವ ಜೀವನ ಮಾತ್ರ ಐಷಾರಾಮಿಯದೇ ಆಗಿತ್ತು. ಶ್ರೀಮಂತ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡು ಅವರ ಹಣವನ್ನೇ ಖರ್ಚು ಮಾಡಿ, ಅವರೊಂದಿಗೆ ಸುಖಿಸುತ್ತಿದ್ದ ಚಾಣಾಕ್ಷ.! ಹೀಗೆ ತೀರಾ ಸಭ್ಯನಂತೆ ಚಿನ್ನದ ಗಣಿಯಂತ ಸ್ಮಿತಾಳನ್ನು ಮರುಳು ಮಾಡಿ ಮದುವೆಯಾಗಿದ್ದ. ಅವರಿಬ್ಬರ ದಾಂಪತ್ಯ ಅನ್ಯೋನ್ಯವಾಗಿತ್ತು. ಆದರೆ ಅವಳ ಒಳ್ಳೇತನಕ್ಕೆ ದ್ರೋಹವೆಸಗಿ ಬಾಳಲು ಸಾಧ್ಯವಾಗದ ದೀಪಕ್ ಬದಲಾಗಿದ್ದು ಹೇಗೆ?..

* ಹದ್ದು ಮೀರಿದಾಗ :
ತುಂಬಿ ಹರಿಯುತ್ತಿರುವ ನದಿಯ ಬಳಿಯಲ್ಲಿರುವ ದ್ವೀಪಕ್ಕೆ ಚಲನಚಿತ್ರದ ಚಿತ್ರೀಕರಣಕ್ಕೆಂದು ಹೋದಾಗ ಅಳತೆ ಮೀರಿ ಬೆಳೆದ ಹದ್ದಿನಂತಹ ಪಕ್ಷಿಯೊಂದು ಆ ತಂಡವನ್ನು ಕಾಡ ತೊಡಗಿತ್ತು.ಅಂದು ಅವರು ಬದುಕಿ ಬಂದಿದ್ದೇ ಒಂದು ಸಾಹಸ. ಅವರೆಲ್ಲಾ ಅಲ್ಲಿಂದ ಹೇಗೆ ಪಾರಾದರು?
ಈ ಪವಾಡವನ್ನು ಲೇಖಕರು ಕುತೂಹಲಕಾರಿಯಾಗಿ ಬರೆದಿದ್ದಾರೆ.
*ನಾಗಮಣಿ :
ನಾಗಮಣಿಯನ್ನು ಪಡೆದು ಶ್ರೀಮಂತನಾಗ ಬೇಕೆನ್ನುವ ಆಸೆಯಲ್ಲಿ ಕಾಡು ಬೆಟ್ಟಗಳಲ್ಲಿ ಅಲೆಯುವ ಮತ್ತು ಜ್ಯೋತಿಷಿಗಳನ್ನು ನಂಬುವ ಜನರ ಮೂಢತೆಯನ್ನು ಹೇಳುವ ವಿಶೇಷ ಕಥೆ.

* ಆದರ್ಶ ದಂಪತಿ :
ಸಮಾಜದಲ್ಲಿ ತಾವು ‘ಆದರ್ಶ ದಂಪತಿ’ಗಳೆಂದು ಮುಖವಾಡ ತೊಟ್ಟು, ಅನಾಚಾರ ಮಾಡುವ ದಂಪತಿಗಳ ಕೆಟ್ಟ ಬುದ್ಧಿಯನ್ನು ಅನಾವರಣ ಮಾಡುವ ಕಥೆ. ಇದೇ ರೀತಿ ‘ಪರಸ್ಪರ’ ಧೂಳಿನ ತೆರೆ, ಮೋಹ ಬೀಜ ಮುಂತಾದ ಎಲ್ಲಾ ಕಾಲಕ್ಕೂ ಅನ್ವಯವಾಗುವ ತತ್ವಗಳನ್ನು ಹೊಂದಿದ ಕೌಟುಂಬಿಕ ಕಥೆಗಳು ಇಲ್ಲಿವೆ. ಸರಳತೆ ಹಾಗೂ ಸಂಕೀರ್ಣತೆ ಎರಡನ್ನೂ ಹೊಂದಿದ ಈ ಲೇಖಕರ ಕಥೆಗಳು ಬೇಸರವಿಲ್ಲದ ಓದಿಗೆ ಸಹಕರಿಸುತ್ತವೆ ಎನ್ನ ಬಹುದಾಗಿದೆ.
- ಮಾಲತಿ ರಾಮಕೃಷ್ಣ ಭಟ್
