ವಿಜಯಶ್ರೀಯವರ ಖಾಸಗಿ ಸಂರಕ್ಷಿತ ಅರಣ್ಯ

ಸಾಹಿತಿ ವಿಜಯಶ್ರೀ ಹಾಲಾಡಿ ಮತ್ತು ಕುಶಾಲ ದಂಪತಿಗಳ ಒಂದೆಕ್ರೆ ಖಾಸಗಿ ವನದ ಕುರಿತು ಹದಿನೈದು ಎಕರೆ ಅರಣ್ಯ ಸಂರಕ್ಷಿಸುತ್ತಿರುವ ಅಶೋಕವರ್ಧನ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ… 

ನೆಮ್ಮದಿ ವನ

(‘ಕಾಡು’ವವರ ಬೆನ್ನತ್ತಿ ೧)

“ನಾಡಿನ ಹುಸಿ ಹೂಡಿಕೆ (ಮನೆ ನಿವೇಶನ, ಸಮೂಹ ವಸತಿಯಲ್ಲಿ ತುಣುಕು) ಬಿಟ್ಟು ವನ್ಯಕ್ಕೆ ಮನ ಮಾಡಿ” ಎಂಬ ನನ್ನ ಹುಯ್ಯಲಿನಲ್ಲಿ ಹುರುಪು ಕಡಿಮೆಯಾಗುತ್ತಿದ್ದಂತೆ ಬಂದಿತ್ತೊಂದು ಸಂಪರ್ಕ. ಅದು ಬೆಳೆದು “ನಮ್ಮ ಜೀವಮಾನದ ಗಳಿಕೆಯ ಬಹ್ವಂಶ ಹಾಕಿ ಒಂದೆಕ್ರೆ ಕಾಡು ಕೊಂಡಿದ್ದೇವೆ ಸಾರ್. ನಗರದಲ್ಲಿ ಬೇಸತ್ತಾಗೆಲ್ಲ ಅಲ್ಲಿ ಕೇವಲ ಒಂದು ಕೋಣೆ ಕಟ್ಟಿಸಿ, ಸುಮ್ಮನೆ ಕೂರಬೇಕೆಂದು ಯೋಚಿಸಿದ್ದೇವೆ. ನೋಡ ಬನ್ನಿ…” ಮೂಡಬಿದ್ರೆಯ ವಿಜಯಶ್ರೀ ಹಾಲಾಡಿ ಕೋರಿಕೆ. ತುಮಕೂರು ಮೂಲದ ಕಪ್ಪೇಭಿಮಾನಿ ಅಭಿ “ನಮ್ಮ ಮಾಳದ ಮೂಲೆಗೆ ನೀವು ಬರಲೇ ಇಲ್ಲಾ…” ಎಂದು ಕೊರಗಿದ್ದು ನೆನಪಿತ್ತು. ಕೊರೋನಾ ಬಿಸಿಯಲ್ಲಿ ವಿದೇಶಭ್ರಷ್ಟರಾಗಿ, ಮರಳಿಮಣ್ಣಿಗೆ ಜಪಿಸಿದ ಅರುಣ್ ಶೆಣೈಯವರು ಕಾಂತಾವರದಲ್ಲಿ ಕಟ್ಟಿಕೊಂಡ ಪುಟ್ಟ ನೆಲದ ದೊಡ್ಡ ವನ್ಯ ಪರಿಸರವನ್ನು ಕಾಣುವ ಬಯಕೆ ನನಗೆ ಮೊದಲೇ ಇತ್ತು. ಮಿತ್ರ ಬಳಗದಲ್ಲಿ ಹೀಗೇ ಹಂಚಿಕೊಂಡು, ನಾವಿಬ್ಬರಾದರೂ (ದೇವಕೀ ಸಹಿತ) ಸರಿ ಎಂದು ಬೈಕ್ ಹೊರಡಿಸುವ ಯೋಚನೆಯಲ್ಲಿದ್ದೆ. “ಶನಿವಾರವಾದರೆ ನಾನಿದ್ದೇನೆ” ಎಂದು ಜೋಡಿಕೊಂಡವ, ಜೋಡುಮಾರ್ಗದ ‘ಆ ಜನ್ಮ’ ಎಳೆ-ಗೆಳೆಯ ಅನಿಲ್ ನೆಲ್ಯಡ್ಕ. ಆತ ಅಷ್ಟಕ್ಕೆ ಬಿಡದೆ, ನಿಗದಿತ ವೇಳೆಗೇ (ಬೆಳಿಗ್ಗೆ ಆರೂವರೆ ಗಂಟೆ) ಬಂದು ನಮ್ಮನ್ನು ಆತನ ಕಾರಿಗೇ ನಿರ್ಬಂಧಿಸಿ ಒಯ್ದ.

ಮಂಗಳೂರು – ಕಾರ್ಕಳ ಚತುಷ್ಪಥೀಕರಣದ ಕಾಮಗಾರಿ ಭರದಿಂದ ನಡೆದಿದೆ. ಹೊಸ ರಚನೆಯ ಒಮ್ಮುಖ, ಇಮ್ಮುಖ ಚಲನೆಗಳನ್ನು ಅದಲಿ ಬದಲಿ ಮಾಡುತ್ತ, ಜೋಡಣೆಗಳ ಹಂತದಲ್ಲಿ ನಯವಾಗಿ ವಾಲುತ್ತ, ಅನಿವಾರ್ಯವಿದ್ದಲ್ಲಿ ಹಳೆಮಾರ್ಗಗಳ ಬಳಸಾಟ ದಡಬಡಕ್ಕೆ ಹೊಂದುತ್ತ, ಸೇತುವೆ – ಮೇಲ್ಸೇತುವೆಗಳನ್ನು ಗಮನಿಸುತ್ತ ತಿಂಡಿಗೆ ಮೂಡಬಿದ್ರೆಯಲ್ಲಿ ವಿರಮಿಸಿದೆವು. ಪಲಿಮಾರ್ ಹೋಟೆಲಿನ ಪೂರಿ ಬಾಜಿ ಹಾಗೂ ದೋಸೆ ವಿಶೇಷಗಳನ್ನು ಧ್ವಂಸ ಮಾಡಿ, ಕಾಫಿಯ ತರ್ಪಣ ಬಿಡುತ್ತಿದ್ದಂತೆ ವಿಜಯಶ್ರೀ-ಕುಶಾಲಪ್ಪ ದಂಪತಿ ಅವರ ಕಾರೇರಿ ಬಂದರು. ಮುಂದೆ ಅವರ ಬೆಂಬತ್ತಿ ಕಾರ್ಕಳ, ಮತ್ತೆ ತೆಳ್ಳಾರು ದಾರಿಯ ಉಪೋಪ ದಾರಿಗಳ ಜಿಡುಕಿನಲ್ಲಿ ಕಳೆದುಹೋಗದೇ ಸುಮಾರು ಐದಾರು ಕಿಮೀಯಲ್ಲಿ, ನಮ್ಮ ಲೆಕ್ಕಕ್ಕೆ ‘ಎಲ್ಲೂ ಅಲ್ಲ’ದಲ್ಲಿ, ದಂಪತಿ ಕಂಡುಕೊಳ್ಳಲಿರುವ ನೆಮ್ಮದಿ ವನದ ಅಂಚಿನಲ್ಲಿ ಕಾರಿಳಿದೆವು.

ಅದು ಗುಡ್ಡದ ಓರೆಯಲ್ಲಿ ಸಾಗಿರುವ ಪುಟ್ಟ ಕಾಂಕ್ರೀಟ್ ದಾರಿಯೇ ಸ್ವಲ್ಪ ಗಡಿರೇಖೆಯಾಗಿರುವ ದಟ್ಟ ಕಾಡು. ಇವರದು ರಸ್ತೆಯ ಬಲ ಮಗ್ಗುಲು, ಅಂದರೆ ಗುಡ್ಡೆಯ ಏರುಮೈಯ ತುಣುಕು. ಕೆಲ ಕಾಲದ ಹಿಂದೆ ಅಲ್ಲಿನ ಮಹಾಮರಗಳು ಬೋಳಿಸಿ ಹೋಗಿದ್ದರೂ, ಮುಳ್ಳು ಪೊದರು ಬಳ್ಳಿಗಳ ಜಟಿಲತೆಯಲ್ಲಿ ಮುಂದಿನ ತಲೆಮಾರಿನ ಹಲವು ಮರಜಾತಿಯ ವೈವಿಧ್ಯಮಯ ಸಸಿಗಳು ಸಹಜ ವಿಕಸನದ ಹಾದಿಯಲ್ಲಿವೆ. ಮಳೆನೀರ ಓಣಿಗಳಿದ್ದರೂ ಸ್ಪಷ್ಟ ನೀರಮೂಲಗಳೇನೂ ಇಲ್ಲ. ಸುತ್ತುವರಿದಂತೆ ಬಹ್ವಂಶ ಕಾಯ್ದಿಟ್ಟ ಅರಣ್ಯ, ಉಳಿದಂತೆ ಖಾಸಗಿಯವರ ಉಪೇಕ್ಷಿತ ಸೊಪ್ಪಿನಗುಡ್ಡವೇ ಇದೆ. ಇವರ ನೆಲದಲ್ಲಿ ವಿರಳವಾಗಿ ಸೊಪ್ಪು, ಸೌದೆ, ಕಿರು ವನೋತ್ಪತ್ತಿಗಳನ್ನು ಸಂಗ್ರಹಿಸುವವರ ಓಡಾಟದ ತೆಳು ಸವಕಲು ಜಾಡು ಬಿಟ್ಟು ಏನೂ ಇಲ್ಲ. ಇವರೇ ವಹಿಸಿದ್ದ ಕಂತ್ರಾಟಿನಂತೆ ದುರುದುಂಡಿಯೊಂದು ರಸ್ತೆಯಿಂದ ನಿವೇಶನಕ್ಕೆ ಹಾಯಲೊಂದು ಕೊಳವೆ ಹಾಕಿದ ಮೋರಿ ಹಾಗೂ ಕೋಣೆ ಕಟ್ಟಿಸಲು ಪುಟ್ಟ ನೆಲ ಸಿದ್ಧಪಡಿಸುತ್ತಿತ್ತು.

 

ದೇಶದ ಕಾನೂನಿನಂತೆ ಕಾಡೆಲ್ಲ ಸರಕಾರದ್ದೇ. ವೈಯಕ್ತಿಕವಾಗಿ ವನ್ಯ ಬಯಸುವ ಮಂದಿ, ಕೃಷಿ ಸಂಬಂಧೀ ನೆಲಗಳನ್ನು ಕೊಂಡು, ಇಚ್ಛೆಯ ಸಸ್ಯ ವೈವಿಧ್ಯಕ್ಕೆ ಮನ ಮಾಡಬೇಕಾಗುತ್ತದೆ. ನನ್ನ ಅಭಯಾರಣ್ಯವಾದರೋ ಗೇರು ಗುಡ್ಡೆ, ಅಶೋಕ ವನ ಏಲಕ್ಕಿ ಮಲೆ. ಈ ಪಟ್ಟಿಗೆ ಈಚಿನ ಉದಾಹರಣೆ, ಕಳೆದ ವಾರವಷ್ಟೇ ನಾನು ಕಂಡ ವೈದ್ಯ ಮನೋಹರ ಉಪಾಧ್ಯರ ವನಸುಮ ಮತ್ತು ಮಾವಿನ ಮಂಟಪ. ಗರಿಕೆಗೆ ಗರಿಕೆ ಕೂಡಿ ಬೊಂತೆ ಬೆಳೆದಂತೆ, ಹನಿಗೆ ಹನಿಗೂಡಿ ಹಳ್ಳ ಹರಿದಂತೆ, ನೆಲ ಒಂದೆಕ್ರೆ ಆದರೂ ವನ್ಯ ಉಳಿಸುವ, ಸಹಜ ವಿಕಾಸಕ್ಕವಕಾಶ ಮಾಡಿಕೊಡುವ ಘನ ಉದ್ದೇಶದ ವಿಜಯಶ್ರೀ ಕುಶಾಲಪ್ಪ ದಂಪತಿಗೆ ಶುಭಾಶಯವನ್ನು ಕೋರಿ, ವಿದಾಯ ಹೇಳಿದೆವು.

  • ಅಶೋಕವರ್ಧನ  

****

ಖಾಸಗಿ ಸಂರಕ್ಷಿತ ಅರಣ್ಯ

ಮರಳಿ ಕಾಡಿನ ಮಡಿಲಿಗೆ. ( ಆರಂಭದಲ್ಲಿ ನನ್ನದೊಂದು ಟಿಪ್ಪಣಿ – ಮುಂದೆ ಜಿ ಎನ್ ಅಶೋಕವರ್ಧನ ಸರ್ ಅವರ ಬರೆಹವಿದೆ. ಪರಿಸರವನ್ನು ಪ್ರೀತಿಸುವವರಿಗೆ ಇಷ್ಟವಾದೀತು..ಗಮನಿಸಿ) ಹದಿನೈದಿಪ್ಪತ್ತು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ಖಾಸಗಿ ಸಂರಕ್ಷಿತ ಅರಣ್ಯ’ದ ಕುರಿತು ಓದಿದಾಗ ಬಹಳ ಖುಷಿಯಾಗಿತ್ತು.

ಅದು ಮಂಗಳೂರು ಮತ್ತು ಬಿಸಲೆ ಘಾಟಿಯಲ್ಲಿ ಜಿ ಎನ್ ಅಶೋಕವರ್ಧನ ಸರ್ ಅವರು ಕಾಡುಗಳನ್ನು ಕೊಂಡು ಸಂರಕ್ಷಿಸುತ್ತಿರುವುದರ ಕುರಿತಾದ ಬರಹವಾಗಿತ್ತು. ನಾವೂ ಹಾಗೆ ಮಾಡಬೇಕೆಂದು ಅನಿಸಿದ್ದರೂ ಅದು ಕನಸು ಅನಿಸಿತ್ತು. ಏಕೆಂದರೆ ಆರ್ಥಿಕವಾಗಿ ಮೈನಸ್ ಚಿಹ್ನೆಯಿಂದ ಆರಂಭಿಸಿದವರು ನಾವು. ಆದರೆ ಇಷ್ಟು ವರ್ಷಗಳ ನಂತರ ನಮ್ಮ ಆಸೆ ಕೈಗೂಡಿದೆ. (ನಮ್ಮಿಬ್ಬರ ಬದುಕಿನ ಐದನೇ ದಶಕದಲ್ಲಿ). ನಮ್ಮ ಜೀವಮಾನದ ದುಡಿಮೆಯ ಬಹುಭಾಗವನ್ನು ಹಾಕಿ ಒಂದು ಎಕ್ರೆ ಕಾಡನ್ನು ಕೊಂಡಿದ್ದೇವೆ. ಹುಟ್ಟಿ ಬೆಳೆದದ್ದು ಕಾಡುಗಳಿಂದ ಸುತ್ತುವರಿದ ಒಂದು ಹಳ್ಳಿಯಲ್ಲಿ. ಈಗ ಮರಳಿ ಕಾಡಿನ ಮಡಿಲಿಗೆ ಸೇರಿದಂತಾಗಿದೆ. ಹೌದು, ಕಾಡೆಂದರೆ ಮಡಿಲು.

ಆರು ತಿಂಗಳ ಹಿಂದೆ ಸಂರಕ್ಷಿಸಬೇಕೆಂಬ ಆಸೆಯಿಂದ ಈ ಕಾಡನ್ನು ತೆಗೆದುಕೊಂಡಿದ್ದರೂ ಯಾರಲ್ಲೂ ಹೇಳಿರಲಿಲ್ಲ. ಮೊನ್ನೆ ಕೆಲವೊಬ್ಬರು ಆತ್ಮೀಯರಿಗೆ ತಿಳಿಸುವ ಹೊತ್ತಲ್ಲೇ ಅಶೋಕವರ್ಧನ ಸರ್ ಅವರಿಗೂ ತಿಳಿಸಿದೆ. ‘ಫೇಸ್ಬುಕ್ ಲ್ಲಿ ಟಿಪ್ಪಣಿ ಹಾಕಿ’ ಅವರೆಂದಾಗ ‘ಪ್ರಚಾರ ಬೇಡವೆಂದು ಹಾಕಿರಲಿಲ್ಲ’ ಎಂದೆ. ‘ಬೇರೆಯವರಿಗೆ ಪ್ರೇರಣೆಯಾದೀತು’ ಎಂದಾಗ ಸರಿ ಅನ್ನಿಸಿತು. ಸ್ವತಃ ಅವರು ಮಾಡಿದ ಇಂತಹ ಕೆಲಸಗಳೇ ನನಗೆ, ನನ್ನಂತಹ ಎಷ್ಟೋ ಮಂದಿಗೆ ಪ್ರೇರಣೆಯಾಗಿದೆಯಲ್ಲ. ಕಾಡೆಂದರೆ ನೆಮ್ಮದಿ. ನನ್ನ ಮೆದುಳಿನ ಕೋಶಗಳಲ್ಲಿ ನಮ್ಮೂರಿನ ಕಾಡೇ ಈ ಕ್ಷಣಕ್ಕೂ ತುಂಬಿಕೊಂಡಿದೆ.

ನಮ್ಮ ಈ ಕಾಡಿಗೆ ಇಷ್ಟು ದಿನ ಪ್ರವೇಶಿಸಲು ಆಗುತ್ತಿರಲಿಲ್ಲ. ಈಗ ನೀರು ಹೋಗಲು ಸಣ್ಣ ಕೊಳವೆ ಹಾಕಿ ಒಂದು ಪ್ರವೇಶ ಕೊಟ್ಟಿದ್ದೇವೆ. ಇನ್ನು ಮುಂದೆ ಮಾನವ ಶ್ರಮದ ಮೂಲಕ ಚೂರೇ ಚೂರು ಜಾಗದ ಹಳ್ಕಟ್ಟು ಬಿಡಿಸಿ ಸಣ್ಣ ಮಾಡೊಂದನ್ನು ಕಟ್ಟುವುದು ಅಷ್ಟೇ. ಉಳಿದಂತೆ ಕಾಡು ಅದರ ಪಾಡಿಗೆ, ನಾವು ನಮ್ಮ ಪಾಡಿಗೆ. ಹೊರಗಿನಿಂದ ನೋಡಿ ಕಣ್ತುಂಬಿಕೊಳ್ಳುವುದು ಬಿಟ್ಟರೆ ಕಾಡಿನ ಆಗುಹೋಗುಗಳಲ್ಲಿ ನಾವು ಖಂಡಿತಾ ತಲೆ ಹಾಕುವುದಿಲ್ಲ. ಆದರೆ ನಾವು ಆಗೀಗ ಅಲ್ಲಿ ಹೋಗಿ ಉಳಿಯಬೇಕಾಗುತ್ತದೆ. ಇಲ್ಲವಾದರೆ ಕಾಡನ್ನು ಸುತ್ತಲಿನ ಜನರು ಉಳಿಸುವುದಿಲ್ಲ.

ನಮ್ಮಿಂದಾದ ಸಣ್ಣ ಕೆಲಸ ಮಾಡಿದ ತೃಪ್ತಿಯಿದೆ. ಒಂದೊಂದು ಪೊದೆ, ಗಿಡ, ಎಲೆ, ಕಾಯಿ, ಹೂವು, ಹಕ್ಕಿ, ಹುಳ, ಮರವನ್ನು ನೋಡುವಾಗಲೂ ನೆಮ್ಮದಿ. ನನ್ನ ಈ ಆಸೆ, ವಿನಂತಿಯನ್ನು ಒಪ್ಪಿಕೊಂಡ ಮಗ ವಿನ್ಯಾಸ್ ಮತ್ತು ಪತಿ ಕುಶಾಲ್ ಅವರ ಸಹಕಾರ ದೊಡ್ಡದು. ಯಾಕೆಂದರೆ ಬದುಕಿಡೀ ಶ್ರಮವಹಿಸಿ ಸಂಪಾದಿಸಿದ ಮೊತ್ತವನ್ನು ಇಂತಹ ನಯಾಪೈಸೆ ಆರ್ಥಿಕ ಲಾಭವೂ ಇಲ್ಲದ ಕನಸಿಗೆ ಹಾಕಲು ಮನೆಯವರು ಒಪ್ಪುವುದು ಕಷ್ಟವೇ. ಅವರಿಬ್ಬರಿಗೂ ವಂದನೆ.

ನಮ್ಮ ( ಮುಖ್ಯವಾಗಿ ಅಶೋಕವರ್ಧನ ಸರ್ ಮತ್ತು ದೇವಕಿ ಮೇಡಂ ಬಿಸಲೆಯಲ್ಲಿ ಹದಿನೈದು ಎಕರೆ ಅರಣ್ಯ ಸಂರಕ್ಷಿಸುತ್ತಿದ್ದಾರೆ! ಹಾಗೇ ನಿನ್ನೆ ನಮ್ಮಲ್ಲಿಗೆ ಬಂದು ಕಾಡು ನೋಡಿ ಕೆಲವು ಸಲಹೆಗಳನ್ನು ನೀಡಿದ ಅವರಿಗೆ ಕೃತಜ್ಞತೆ) ಈ ಕೆಲಸ ಯಾರಿಗಾದರೂ ಇಷ್ಟವಾಗಿ, ಪ್ರೇರಣೆಯೆನಿಸಿ ಈ ಹಾದಿಯಲ್ಲಿ ಮುನ್ನಡೆದರೆ ಅದಕ್ಕಿಂತ ಖುಷಿ ಬೇರೊಂದಿಲ್ಲ. ಹಾಗೇ ಎಂದಿನಂತೆ ನಿಮ್ಮೆಲ್ಲರ ಪ್ರೀತಿ, ಹಾರೈಕೆ ಇರಲಿ.

  • ವಿಜಯಶ್ರೀ ಹಾಲಾಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW