ವರ್ಜೀನಿಯಾದ ಕಾಕ್ಸ್ ಫಾರಂ ನಲ್ಲಿ ಈ ವರ್ಷದ ಫಾಲ್ ಸಂಭ್ರಮ, ಅದರ ಬೆನ್ನಲ್ಲೇ ‘ ಕುಂಬಳ ಹಬ್ಬ’. ಸುಂದರವಾದ ಸ್ವಾಗತ ಕಮಾನು ಬೋರ್ಡುಗಳು, ಕುಂಬಳಗಳ ಥೇರು, ಮೆರವಣಿಗೆ. ಇದೊಂದು ಕೃಷಿ ಹಬ್ಬ. ಡಾ ಮಂಗಳಾ ಪ್ರಿಯದರ್ಶಿನಿ ಅವರು ‘ ಕುಂಬಳ ಹಬ್ಬ’ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಅಮೇರಿಕನ್ನರಿಗೆ ಹೂವು ಅರಳಿದರೆ ಸಂಭ್ರಮ, ಹಣ್ಣು ಬಿರಿದರೆ ಸಂಭ್ರಮ, ಹಬ್ಬ. ಪ್ರಕೃತಿಯನ್ನು ಅವರಲ್ಲಿರುವ ವರ್ಷದ ನಾಲ್ಕು ಕಾಲಗಳಲ್ಲಿ ಆರಾಧಿಸುತ್ತಾರೆ. ‘ ಪ್ರಕೃತಿಯಾರಾಧನೆಯೆ ಪರಮನಾರಾಧನೆ’ ಎಂಬ ತತ್ತ್ವ ನಂಬಿದವರು. ಇದಕ್ಕೆಲ್ಲ ವಿಶೇಷ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ. ಇದರ ನೆಪದಲ್ಲೇ ಕೃಷಿ ಮೇಳಗಳ ಆಯೋಜನೆ ವ್ಯಾಪಾರ. ಇಲ್ಲಿ ಯಾವುದೂ ಮುಫತ್ತಲ್ಲ. ಎಲ್ಲಕ್ಕೂ ದುಡ್ಡು ತೆತ್ತು ಟಿಕೇಟು ಪಡೆಯಬೇಕು. ಎಲ್ಲವೂ ದುಬಾರಿಯೇ. ಮನರಂಜನೆಯಂತೂ ಮಹಾ ದುಬಾರಿ.

ಜಾಣ ಕೃಷಿಕರು ತಮ್ಮ ತೋಟ, ಜಮೀನುಗಳಲ್ಲಿ ಈ ಹಬ್ಬಗಳ ಆಯೋಜನೆ ಮಾಡುತ್ತಾರೆ. ನಾನು ಹಿಂದೆ ಟ್ಯುಲಿಪ್, ಚೆರಿ, ಆಪಲ್, ಲ್ಯಾವೆಂಡರ್ ಹಬ್ಬಗಳನ್ನು ಕಂಡಿದ್ದೆನಾದರೂ, ಕುಂಬಳ ಹಬ್ಬವನ್ನು ಕಂಡಿರಲಿಲ್ಲ. ಏಕೆಂದರೆ ಪೂರ್ಣ ಪ್ರಮಾಣದ ಫಾಲ್ ನ್ನು ಕಂಡಿದ್ದು ಕಡಿಮೆ. ಇವರ ಸಮ್ಮರ್, ವಿಂಟರ್, ಫಾಲ್, ಸ್ಪ್ರಿಂಗ್ ಕಾಲಗಳಲ್ಲಿ ಪ್ರಕೃತಿ ಮಾತೆ ವರ್ಣರಂಜಿತವಾಗಿ ಅಲಂಕಾರ ಮಾಡಿಕೊಳ್ಳುವುದು ಈ ಕಾಲದಲ್ಲಿಯೆ. ಮರ ಮರದ ಪರ್ಣವೆಲ್ಲ ವರ್ಣಮಯ. ಮರವೆಂದರೆ ಹಸಿರೆ ? ಅಲ್ಲ ಬಣ್ಣದಂಗಡಿ. ಹಸಿರು, ಕೆಂಪು, ಕಿತ್ತಳೆ, ನೇರಳೆ, ಹಳದಿ … ವರ್ಣ ಸಮಾಗಮ. ತನ್ನೆಲ್ಲ ಎಲೆಗಳನ್ನು ಉದುರಿಸಿಕೊಂಡು, ಎಲ್ಲ ಸಂಭ್ರಮವನ್ನೂ ತೆತ್ತುಕೊಂಡು ಹುಚ್ಚಿ ತಲೆಗೆದರಿ ನಿಂತುಕೊಂಡಂತಾಗುವ ಮುನ್ನ ನಿಂತ ವೈಖರಿ ಇದು.

ಎಲೆಯುದುರಿ ಬೋಳಾಗುವ ಮುನ್ನ, ತುಂಬಿದ ಬಸುರಿ – ಅವಳಿಗೊಂದು ಹರ್ಷದಾರುತಿ. ಕಾಕ್ಸ್ ಫಾರಮ್ಮಿನ ಕುಂಬಳದ ಹಬ್ಬಕ್ಕೆ ಹೊರಟಿದ್ದೆವು. ಇಲ್ಲಿ ಕೃಷಿ ಮಾರುಕಟ್ಟೆ ಬಜಾರುಗಳು ಬರುವ ಪ್ರೇಕ್ಷಕರನ್ನು ಕೈ ಮಾಡಿ ಕರೆಯುತ್ತವೆ.
ಸುಂದರವಾದ ಸ್ವಾಗತ ಕಮಾನು ಬೋರ್ಡುಗಳು, ಕುಂಬಳಗಳ ಥೇರು, ಮೆರವಣಿಗೆ. ಇದೊಂದು ಕೃಷಿ ಹಬ್ಬ. ವಿಶೇಷ ಜಾತಿಯ ಕುಂಬಳಗಳು ಲಭ್ಯವಾಗುವುದರಿಂದ, ವರ್ಷವಿಡೀ ಸಂಗ್ರಹಿಸಬಹುದಾದ ಖಾದ್ಯಗಳ ತಯಾರಿಕೆಗೆ ಕುಂಬಳಗಳನ್ನು ಕೊಳ್ಳುವ ಅಮೇರಿಕನ್ನರ ಸಂಖ್ಯೆಯೇ ಹೆಚ್ಚು. ಈ ಮೇಳದಲ್ಲಿ ಕುಂಬಳದ ಅನೇಕ ಖಾದ್ಯಗಳ ಮಾರಾಟ ಭರದಿಂದ ಸಾಗಿತ್ತು. ರೈತ ಬಜಾರುಗಳು ತುಂಬಿ ತುಳುಕಿದ್ದವು. ಮಕ್ಕಳಿಗಂತೂ ಭರಪೂರ ಮನರಂಜನೆ. ಹೇ ರೈಡ್ ನ್ನು ಮಕ್ಕಳು ಸಂತೋಷಿಸುತ್ತಿದ್ದು, ಕೃಷಿ ವಾಹನಗಳಲ್ಲಿ ಒಣ ಹುಲ್ಲಿನ ಚಾಪೆಗಳ ಮೇಲೆ ಕುಳಿತು ಮನೆಮಂದಿಯೆಲ್ಲ ತೋಟದ ಸುತ್ತ ಸುತ್ತಾಡುವ ಖುಷಿ. ದಾರಿಯಲ್ಲಿ ಏಲಿಯನ್ನುಗಳು, ಹಾಲೋವೀನುಗಳು, ಬ್ಯಾಟ್ ಮ್ಯಾನ್ , ಸೂಪರ್ಮ್ಯಾನ್, ಸ್ಪೈಡರ್ಮ್ಯಾನ್ಗಳ ಕೈ ಕುಲುಕಾಟ , ಮಕ್ಕಳ ಕೈಗಳಲ್ಲಿ ಚಾಕಲೇಟುಗಳನ್ನು ತುರುಕುವಾಟ , ದಾರಿ ದಾರಿಗಳಲ್ಲಿ ಕಂಡು ನಗುವ , ಕೈ ಮಾಡಿ ಕರೆಯುವ ಡಿಸ್ನಿ ರಾಜಕುಮಾರಿಯರು , ಸ್ಲೈಡುಗಳು , ಮೇಜ್ಗಳು , ಉಯ್ಯಾಲೆಗಳು , ತಿಂಡಿ – ತೀರ್ಥಗಳು , ಕಾಟನ್ ಕ್ಯಾಂಡಿ , ಐಸ್ ಕ್ರೀಮು , ಪಾಪ್ ಕಾರ್ನ್ಗಳು …. ಮಕ್ಕಳನ್ನು ಕರೆದೊಯ್ಯುವ ಕಿನ್ನರ ಲೋಕ.

ಸಂಜೆ ನಾಲ್ಕು ಘಂಟೆಗೆ ಸರಿಯಾಗಿ ಫಾರಮ್ಮಿನಲ್ಲಿ ಬೆಳೆದ 750 ಪೌಂಡುಗಳ ಕುಂಬಳ ವನ್ನು ಅರವತ್ತ್ತು ಅಡಿಗಳಿಂದ ಬೀಳಿಸುವ ‘ ಪಂಪ್ಕಿನ್ ಡ್ರಾಪ್ ‘ – ಆ ದಿನದ ವಿಶೇಷ . ಚಪ್ಪಾಳೆಯಿಕ್ಕಿ ಆನಂದಿಸುವ ಪ್ರೇಕ್ಷಕ ಮಹನೀಯರು.

ಟಿಕೇಟು ಪಡೆದು ಬ್ಯಾಂಡು ಕೈಗೆ ಕಟ್ಟಿಕೊಂಡಿದ್ದ ಪ್ಪ್ರತಿಯೊಬ್ಬರಿಗೂ ತಮ್ಮಿಷ್ಟದ , ತಮ್ಮ ಆಯ್ಕೆಯ ಕುಂಬಳವನ್ನು ಹೊತ್ತೊಯ್ಯುವ ಭಾಗ್ಯ . ಸೂರ್ಯಸ್ವಾಮಿ ಕರಗಿ ಮಾಯವಾಗುವ ಮುನ್ನವೇ ಮನಸ್ಸು ಕುಂಬಳವಾಗಿ ಮನೆ ಸೇರಿದ್ದೆವು .
- ಡಾ ಮಂಗಳಾ ಪ್ರಿಯದರ್ಶಿನಿ
