‘ರಾಗಿ’ ಎಂಬ ಧರಣಿಯ ಭಾಗ್ಯ

ರಾಗಿ ಬಡವರ ಪಾಲಿನ ಅನ್ನಪೂರ್ಣೆ. ಅದು ದುಡಿಯುವವರ ರಟ್ಟೆಯ ಶಕ್ತಿ. ಕನ್ನಡಿಗರಾಗಿ ಲಕ್ಷ್ಮಣಯ್ಯನವರು 14 ಬಗೆಯ ರಾಗಿ ತಳಿಗಳನ್ನು ಸಂಶೋಧಿಸಿದರು. ಅವರ ಈ ಶೋಧಕ್ಕೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ರಾಗಿಯ ಮಹತ್ವದ ಕುರಿತು ಕನ್ನಡದ ಕಟ್ಟಾಳು ಕೆ. ರಾಜಕುಮಾರ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…

ಮುದ್ದೆ ಎಂಬ ಅನ್ನಬ್ರಹ್ಮ!

ಕನಕದಾಸರು ಪ್ರತಿಪಾದಿಸಿದಂತೆ ರಾಗಿ ರಾಮಧಾನ್ಯ. ಅವರು ರಾಗಿಯು ರಾಮನಿಗೆ ಪ್ರಿಯವಾದ ಧಾನ್ಯ ಎನ್ನುವ ಮೂಲಕ ಬತ್ತದ ಪಾರಮ್ಯವನ್ನು ಕಡಿಮೆ ಮಾಡಿದರು. ಬತ್ತ ಬಳಸುವವರು ಹೊಂದಿದ್ದ ಅಕ್ಕಿ ಮಾತ್ರ ಶ್ರೇಷ್ಠ ಎಂಬ ಅಹಂಭಾವಕ್ಕೆ ಕನಕದಾಸರು ನೀಡಿದ ಸಾತ್ತ್ವಿಕ, ಸಾರಸ್ವತ ಪೆಟ್ಟದು!

ಕನಕದಾಸರು ತಮ್ಮ ರಾಮಧಾನ್ಯ ಚರಿತೆ (ರಾಮಧ್ಯಾನ ಚರಿತೆ ಅಲ್ಲ) ಎಂಬ ಕೃತಿಯಲ್ಲಿ ಬತ್ತಕ್ಕೂ, ರಾಗಿಗೂ ತಾನೇ ಶ್ರೇಷ್ಠ ಎಂಬ ಭಾವನೆ ಮೂಡಿ, ನ್ಯಾಯಕ್ಕಾಗಿ ಶ್ರೀರಾಮನಲ್ಲಿ ಮೊರೆಯಿಡುತ್ತವೆ. ರಾಮನು ಆರು ತಿಂಗಳ ಅನಂತರ ಬರಲು ಹೇಳುತ್ತಾನೆ. ಆ ವೇಳೆಗೆ ಬತ್ತಕ್ಕೆ ಹುಳುಬಿದ್ದಿರುತ್ತದೆ; ಮುಗ್ಗಿ ಹೋಗಿರುತ್ತದೆ. ರಾಗಿ ಚಕ್ಕ ಚದುರದಂತೆ ಇರುತ್ತದೆ.

ಆಗ ಜಗದಭಿರಾಮನು ರಾಗಿಯ ಶ್ರೇಷ್ಠತೆಯನ್ನು ಸಮಾಜಕ್ಕೆ ಸಾರುತ್ತಾನೆ. ಇದನ್ನು ಕನಕರು ಸಾರವತ್ತಾಗಿ ಚಿತ್ರಿಸಿದ್ದಾರೆ. ಈ ಪ್ರಸಂಗದ ಮೂಲಕ ಅವರು ಜನಪರವಾದ ನಿಲುವು ತಳೆದಿದ್ದಾರೆ. ಬಡವರ ಆಹಾರವಾದ ರಾಗಿಯ ಪರ ವಹಿಸಿ ಕೆಳವರ್ಗದವರಲ್ಲಿ ಆತ್ಮವಿಶ್ವಾಸದ ಹಣತೆ ಹಚ್ಚುತ್ತಾರೆ.

ರಾಗಿ ಬಡವರ ಪಾಲಿನ ಅನ್ನಪೂರ್ಣೆ. ಅದು ದುಡಿಯುವವರ ರಟ್ಟೆಯ ಶಕ್ತಿ. “ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ” ಎಂಬ ಗಾದೆಯಿದೆ. ಇದು ರಾಗಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಶ್ರಮ, ಶ್ರಮಿಕ ಮತ್ತು ಬೆವರಿನ ಜೊತೆ ಸಮೀಕರಿಸಬಹುದಾದ ಏಕಮಾತ್ರ ಧಾನ್ಯ. ಅದು ಸಿರಿವಂತರ ಪಾಲಿನ ಆರೋಗ್ಯದಾತೆ. ರಾಗಿ ತಿಂದವ ನಿರೋಗಿ ಎಂಬುದು ಕನ್ನಡದ ಒಂದು ಜನಪ್ರಿಯ ಗಾದೆ. ಅದು ವಾಸ್ತವವೂ ಹೌದು. ಅದು ಒಳ್ಳೆಯ ಕೊಲೆಸ್ಟರಾಲ್ ಇರುವ ಸಿರಿಧಾನ್ಯ. ಕೆಟ್ಟ ಕೊಲೆಸ್ಟರಾಲ್ ಇಲ್ಲದ ಧಾನ್ಯ ಎಂಬ ಹೆಮ್ಮೆ ಅದರದು.

ಅದರ ಜೈವಿಕ ಮೌಲ್ಯ 85%. ಮಾಂಸದ್ದು 100%. ಏನಿದು ಜೈವಿಕ ಮೌಲ್ಯ ಎಂದಿರಾ? ಒಂದು ಪದಾರ್ಥದಲ್ಲಿ ಇರುವ ಒಟ್ಟು ಪ್ರೊಟೀನುಗಳಲ್ಲಿ ಮಾನವದೇಹ ಶೇಕಡಾವಾರು ಎಷ್ಟು ಪ್ರಮಾಣದಲ್ಲಿ ಅದನ್ನು ಜೀರ್ಣಿಸಿಕೊಳ್ಳುತ್ತದೆ ಎಂಬ ಅಂಕಿ-ಅಂಶ. ಇದರ ಪ್ರಕಾರ ರಾಗಿಯಲ್ಲಿನ 85%ರಷ್ಟು ಪ್ರೊಟೀನುಗಳನ್ನು ದೇಹ ಹೀರಿಕೊಳ್ಳಬಲ್ಲದು. ಇದು ಅತಿ ದೊಡ್ಡ ಪ್ರಮಾಣ. ರಾಗಿ ದುಷ್ಟ ಅಥವಾ ಕೆಟ್ಟ ಕೊಲೆಸ್ಟರಾಲ್ ಮುಕ್ತವೂ ಹೌದು. ಅದರಲ್ಲಿ ಶಿಷ್ಟ ಅಥವಾ ಒಳ್ಳೆಯ ಕೊಲೆಸ್ಟರಾಲ್ ಪ್ರಮಾಣ ಹೆಚ್ಚು. ಅದು ಆರೋಗ್ಯಕರವೂ ಹೌದು. ಮಾಂಸ ಅದಕ್ಕೆ ವ್ಯತಿರಿಕ್ತ. ಅದರ ಬೆಲೆ ರಾಗಿಗಿಂತ ಸುಮಾರು 20 ಪಟ್ಟು ಅಧಿಕ. ರಾಗಿ ಕೆಜಿಗೆ ರೂ. 30/-ಕ್ಕೆ ಲಭ್ಯವಾದರೆ, ಕುರಿ ಮಾಂಸ ಕೆಜಿಗೆ ರೂ. ಸುಮಾರು 600/-. ರಾಗಿಯಲ್ಲಿ ನಾರಿನ ಅಂಶ ಹೆಚ್ಚು. ಪಚನಕ್ರಿಯೆಗೆ ಸಹಕಾರಿ. ಅದರಲ್ಲಿ ಸಕ್ಕರೆ ಅಂಶ ಕಡಿಮೆ. ಮಧುಮೇಹವೆಂಬ ಸಕ್ಕರೆ ಕಾಯಿಲೆಗೂ ರಾಗಿ ರಾಮಬಾಣ. ರಾಗಿ ಜೀವಸತ್ತ್ವ, ಖನಿಜ ಮತ್ತು ಪ್ರೊಟೀನುಗಳ ಅಕ್ಷಯ ಭಂಡಾರ. ಕೊಟ್ಟ ಕಾಸು ಕಾಸಿಗೂ ಪೈಸಾ ವಸೂಲ್! ಮಾನವನ ಪಾಲಿಗೆ ರಾಗಿ ಎಂಬುದು ಕ್ಯಾಲ್ಸಿಯಂ ಮತ್ತು ಕಬ್ಬಿಣದ ಗಣಿ! ಜೀವಸತ್ತ್ವ ಮತ್ತು ಪ್ರೊಟೀನುಗಳ ತವನಿಧಿ.

ರಾಗಿ SR ಮಾತ್ರೆಯಂತೆ. ಅದರಲ್ಲಿನ ಶಕ್ತಿ ಒಮ್ಮೆಲೇ ಬಿಡುಗಡೆ ಆಗದು. ಹಂತಹಂತವಾಗಿ ಆಗುತ್ತದೆ. ತಿಂದ ಮೇಲೆ ಬೇಗನೆ ಹಸಿವಾಗದು. ಹಾಗಾಗಿ ಅದು ಪಥ್ಯಕ್ಕೆ ಸಹಕಾರಿ. ರಾಗಿಯಲ್ಲಿನ ಅಮೈನೋ ಆಮ್ಲಗಳ ಸಂರಚನೆಗೂ, ಮಾಂಸದಲ್ಲಿನ ಅಮೈನೋ ಆಮ್ಲಗಳ ಸಂರಚನೆಗೂ 100%ರಷ್ಟು ಹೋಲಿಕೆ ಉಂಟು. ಮಾನವ ದೇಹದಲ್ಲಿನ ಅಮೈನೋ ಆಮ್ಲಗಳ ಸಂರಚನೆಗೂ, ರಾಗಿಯಲ್ಲಿನ ಅಮೈನೋ ಆಮ್ಲಗಳ ಸಂರಚನೆಗೂ ಬಹುತೇಕ ಸಾಮ್ಯತೆ ಉಂಟು.

ಫೋಟೋ ಕೃಪೆ : google

ರಾಗಿ ಎಂಬುದು ಈ ಧರಣಿಯ ಭಾಗ್ಯ. ಪುರಂದರದಾಸರು ಶ್ಲೇಷಾರ್ಥದಲ್ಲಿ ಹಾಡಿದ್ದು: ರಾಗಿ ತಂದೀರ್ಯ, ಭಿಕ್ಷಕೆ ರಾಗಿ ತಂದೀರ್ಯ, ಯೋಗ್ಯರಾಗಿ, ಭೋಗ್ಯರಾಗಿ ಎಂದು. ರಾಗಿಯನ್ನು ಉತ್ತೇಜಿಸುವುದು ಎಂದರೆ, ಮಾನವಕುಲವನ್ನು ಉತ್ತೇಜಿಸಿದಂತೆ. ರಾಗಿಯ ಬಗೆಗೆ ಯಾವುದೂ ಉತ್ಪ್ರೇಕ್ಷೆಯಲ್ಲ; ಯಾವುದೂ ವೈಭವೀಕರಣವಲ್ಲ.

ರಾಗಿ ನಮ್ಮ ದಿನನಿತ್ಯದ ಆಹಾರಕ್ರಮದ ಭಾಗವಾಗಬೇಕು. ಅದು ‘ಅಯ್ಯೋಪಾಪ’ದ ಬೆಳೆ. ಹೆಚ್ಚು ನೀರು ಸಹ ಅದಕ್ಕೆ ಬೇಕಿಲ್ಲ. ಹೊಂದಿಕೊಂಡು ಬಾಳಲರಿತ, ಬೆಳೆಯಲರಿತ ಬೆಳೆಯದು. ಎಲ್ಲೋ ಜಿನುಗಿದ ನಾಲ್ಕು ಹನಿ ಹರಿದು ಬಂದರೆ ಸಾಕು ನಳನಳಿಸುವ ಪಚ್ಚನೆಯ ಪೈರದು. ಅದು ಬೆಳೆಗಾರರಿಗೆ ‘ಮಿನಿಮಂ ಗ್ಯಾರಂಟಿ.’

ರಾಗಿ ಅಭಿವೃದ್ಧಿ ಮತ್ತು ಸಂಶೋಧನಾ ನಿಗಮವನ್ನು ಪ್ರಾರಂಭಿಸಬೇಕು. ಅಕ್ಕಿಯ ಪಾರಮ್ಯವನ್ನು ಕಡಿಮೆ ಮಾಡಬೇಕು. ನಮ್ಮ ಪಠ್ಯಕ್ರಮ ರಾಗಿ ಕುರಿತ ಪಾಠಗಳನ್ನು ಒಳಗೊಳ್ಳಬೇಕು. ರಾಗಿ ಎಂಬುದು ದೈವದತ್ತ ವರ. ಅದರ ಕುರಿತು ಅವಜ್ಞೆ ಕೂಡದು.

ಮಿಸ್ಟರ್ ಬೀನ್.ನಂತಹ ಆಂಗ್ಲ ಟಿವಿ ಸರಣಿಗಳಲ್ಲಿ ರಾಗಿ ಮುದ್ದೆಯನ್ನು ತುಂಬಾ ಕೀಳಾಗಿ ಚಿತ್ರಿಸಲಾಗಿದೆ. ಅಂತಹ ಟಿವಿ ಸರಣಿಗಳನ್ನು ಭಾರತ ದೇಶದಲ್ಲಿ ನಿಷೇಧಿಸಬೇಕು. ಸಂಬಂಧಪಟ್ಟ ದೇಶಕ್ಕೆ ಈ ಕುರಿತು ಖಂಡನೆಯನ್ನು ನಮ್ಮ ವಿದೇಶಾಂಗ ಇಲಾಖೆ ವ್ಯಕ್ತಪಡಿಸಬೇಕು. ರಾಗಿ ನಮ್ಮ ಆಹಾರ ಪದ್ಧತಿಯ ಭಾಗ. ಅದು ಆರೋಗ್ಯವನ್ನು ವರ್ಧಿಸುತ್ತದೆ; ಕಾಪಾಡುತ್ತದೆ.

ರಾಗಿ ಲಕ್ಷ್ಮಣಯ್ಯ

ಕನ್ನಡಿಗರಾಗಿ ಲಕ್ಷ್ಮಣಯ್ಯನವರು 14 ಬಗೆಯ ರಾಗಿ ತಳಿಗಳನ್ನು ಸಂಶೋಧಿಸಿದರು. ಅವರ ಈ ಶೋಧಕ್ಕೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅಂತಹವರ ಸಂತತಿ ಹೆಚ್ಚಬೇಕು.

ರಾಗಿ ಕುರಿತ ಗಾದೆ, ಒಗಟು, ನುಡಿಗಟ್ಟು, ಲಾವಣಿ, ಹಾಡು, ಆಹಾರ ಭಕ್ಷ್ಯಗಳನ್ನು ಒಳಗೊಂಡ ಕೃತಿಗಳು ಪ್ರಕಟವಾಗಬೇಕು. ರಾಗಿ ಎಂಬುದು ಹಿತ್ತಲ ಗಿಡದಂತೆ. ಆದರೆ ಅದು ಸಹಜ ಮದ್ದು ಸಹ ಹೌದು. ಅದರ ಕುರಿತು ಇರುವ ಕೀಳರಿಮೆಯನ್ನು ಕಿತ್ತೊಗೆಯಬೇಕು. ರಾಗಿ ಎಂಬುದು ನಮ್ಮ ವ್ಯಕ್ತಿತ್ವದಲ್ಲಿನ ಆತ್ಮಾಭಿಮಾನದ ಭಾಗವಾಗಬೇಕು.

ಫೋಟೋ ಕೃಪೆ : google

ಅನುಬಂಧ:

ಈ ಲೇಖನದ ಜೊತೆಗೆ ಮೇಲೆ ಕೊಟ್ಟಿರುವ ಪಟದಲ್ಲಿ ತುಸು ಕೊರತೆ ಇದೆ. ಗೂಗಲಿಸಿದ ಚಿತ್ರವಿದು. ಗೂಗಲ್ ಆಗಾಗ ತುಸು ಮಂದವಾಗುತ್ತದೆ.

ಸಣ್ಣ ಈರುಳ್ಳಿ ನಾಲ್ಕು ಮುದ್ದೆಗೆ ನಾಲ್ಕೇ ನಾಲ್ಕು ಸಾಕೆ? ನಂಜಿಕೊಳ್ಳಲು ಜೊತೆಗೆ ಸೌತೆಕಾಯಿ, ಮೂಲಂಗಿ, ಕ್ಯಾರೆಟ್, ಉಳ್ಳಿಹೂವು ಬೇಡವೇ? ಹಪ್ಪಳ, ಸಂಡಿಗೆ, ಬಾಳಕ ಎಂಬ ಪಕ್ಕವಾದ್ಯಗಳಿದ್ದರೆ ಬಾಯಲ್ಲಿ ಜೊಲ್ಲರೆ ಅಲ್ಲವೆ?

ಮೊದಲ ಪಟದಲ್ಲಿ ಮುದ್ದೆ ಒಣಗಿದಂತೆ ಕಾಣುತ್ತಿದೆ. ಸ್ವಲ್ಪ ತುಪ್ಪ ಕಾಣಿಸಬಾರದೇ? ಮಜ್ಜಿಗೆ ಬರಗೆಟ್ಟಂತೆ ಕಾಣಬಾರದು. ಅದರ ಮೇಲೆ ಈರುಳ್ಳಿ, ಕ್ಯಾರೆಟ್ ತುರಿ, ಕೊತ್ತಂಬರಿ ಚಿಮುಕಿಸಿರಬೇಕು. ಕೇಸರಿ, ಬಿಳಿ, ಹಸಿರು ಹೀಗೆ ತ್ರಿವರ್ಣಗಳ ಸಾಕ್ಷಾತ್ಕಾರವಾಗಬೇಕು. ರುಚಿಗೆ ತಕ್ಕಷ್ಟು ಉಪ್ಪು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ? ಅದಕ್ಕೆ ಇಂಗು ಹಾಕಿದ ಒಗ್ಗರಣೆಯನ್ನು ಧಾರೆ ಎರೆಯಬೇಕು.

ಫೋಟೋ ಕೃಪೆ : google

ಮುದ್ದೆ ಉಣ್ಣುವಾಗ ನಡುನಡುವೆ ಅಥವಾ ಕಡೆಗೆ ಮಜ್ಜಿಗೆಯನ್ನು ಮೆಲ್ಲಮೆಲ್ಲನೆ ಆಸ್ವಾದಿಸುತ್ತ ಹೀರಬೇಕು. ಕೂಡಲೇ ಮಲಗಬಾರದು. ಒಂದಷ್ಟು ಹೆಜ್ಜೆ ಹಾಕಬೇಕು. ತುಸು ಹೊತ್ತು ಆದಮೇಲೆ “ನಿದಿರಾದೇವಿ ಬಾ ಮೆಲ್ಲಗೆ, ತಾರೆಯಿಂದ ಈ ಭೂಮಿಗೆ” ಎಂಬ ಹಾಡನ್ನು ಗುನುಗುತ್ತಾ ಮಲಗಬೇಕು.

ಸೊಂಪಾಗಿ ಮಲಗಿ ಎದ್ದಮೇಲೆ ಏನು ಬದಲಾವಣೆ ಅಂತೀರಿ! ಅಕ್ಕಪಕ್ಕದಲ್ಲಿದ್ದ ಬೆಟ್ಟ, ಗುಡ್ಡಗಳನ್ನೆಲ್ಲ ಕಿತ್ತು ಎಸೆಯುವಷ್ಟು ಶಕ್ತಿ ತೋಳಲ್ಲಿ. ಹನುಮನುದಿಸಿದ ನಾಡಿನವರು ನಾವು ಎಂಬುದಕ್ಕೆ ಪುರಾವೆ. ಆದರೆ ಅಕ್ಕಪಕ್ಕ ಗಿರಿ, ಶಿಖರಗಳಿಲ್ಲ; ಬೆಟ್ಟ, ಗುಡ್ಡಗಳಿಲ್ಲ. ಸದ್ಯ, ಅವುಗಳ “ಬಾಲ್ ಬಾಲ್ ಬಚಗಯಾ!

ಮುದ್ದೆ ಇದ್ದರೆ ಚಿಂತೆ ಇರದು. ಮಲಗಲು ನಿದ್ರಾಜನಕ ಮಾತ್ರೆ ಬೇಕಿಲ್ಲ. ಮನಸ್ಸು ನಿರಾಳ. ದೇಹ ಪ್ರಫುಲ್ಲ. ಮುದ್ದೆ ಶಾಂತಿಕಾರಕವೂ ಹೌದು. ಮುದ್ದೆ ಎಂಬುದು ಸಂತಸದಾಯಕ. ಮುದ್ದೆ ಎಂಬುದು ಅನ್ನಬ್ರಹ್ಮ! ಅನ್ನದೇವರ ಮುಂದೆ ಇನ್ನು ದೇವರು ಉಂಟೆ?


  • ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ -91 90353 13490

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW